ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ

ಡಿ ವಿ ಸದಾನಂದ ಗೌಡರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಅದು ಬಿಜೆಪಿಯ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಜಯಪ್ರಕಾಶ್ ಹೆಗ್ಡೆ ಅವರ ಸ್ಪರ್ಧೆಗೆ ತಡೆ ಒಡ್ಡಬಹುದು ಎಂಬ ಮಾತುಗಳ ನಡುವೆ ಅವರ ಕಾಂಗ್ರೆಸ್ ಸೇರ್ಪಡೆ ವಿಚಾರ ಕರಾವಳಿ ರಾಜಕೀಯದಲ್ಲಿ ಭಿನ್ನ ರೀತಿಯ ಚರ್ಚೆಗಳಿಗೆ ನಾಂದಿ ಹಾಡಿದೆ

ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರಿಗೆ ಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ದೊರೆಯದೇ ಹೋದರೆ, ಕರಾವಳಿ ಬಿಜೆಪಿ ರಾಜಕಾರಣದಲ್ಲಿ ಕೆಲವು ಪಲ್ಲಟಗಳಾಗಲಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿಗೆ ನಿರ್ಧರಿಸಿದರೆ ಅದು ನೇರವಾಗಿ ರಾಜಧಾನಿಯಲ್ಲಿ ಸದಾನಂದ ಗೌಡರ ಸ್ಪರ್ಧೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ ಅವರನ್ನು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸೂಚಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಸದಾನಂದ ಗೌಡರು ಅದಕ್ಕೆ ಒಪ್ಪಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದರೆ ಈ ಬಾರಿಯ ಟಿಕೆಟ್ ಆಕಾಂಕ್ಷಿಯಾಗಿರುವ ಹಿರಿಯ ರಾಜಕಾರಣಿ ಕೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಬಿಜೆಪಿ ಯಾವ ಸ್ಥಾನ ದೊರಕಿಸಿಕೊಡಲಿದೆ ಎಂಬ ಪ್ರಶ್ನೆ ಎದುರಾಗಿದೆ.

ಇದೆಲ್ಲದರ ನಡುವೆ ಕಾಂಗ್ರೆಸ್ ನ ಒಂದು ಬಣ ಹೆಗ್ಡೆ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಯತ್ನಿಸುತ್ತಿದೆ ಎಂಬ ವದಂತಿ ಹರಿದಾಡುತ್ತಿದೆ. ಹಿಂದೊಮ್ಮೆ ಹೆಗ್ಡೆ ಅವರನ್ನು ರಾಜಕೀಯವಾಗಿ ಉಪೇಕ್ಷಿಸಿದ್ದ ಆಸ್ಕರ್ ಫರ್ನಾಂಡಿಸ್ ಅವರೇ ಹೆಗ್ಡೆಯವರನ್ನು ಪಕ್ಷಕ್ಕೆ ಕರೆತರಲು ಉತ್ಸಾಹ ತೋರಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರನ್ನು ಬೆಂಬಲಿಸಲು ಸಾಧ್ಯವಾಗದಿರುವುದಕ್ಕೆ ವಿಷಾದ ಸೂಚಿಸಿರುವ ಆಸ್ಕರ್, ಲೋಕಸಭೆ ಚುನಾವಣೆ ವೇಳೆಗೆ ಅವರತ್ತ ಒಲವು ತೋರಿರುವುದು ಪಕ್ಷದೊಳಗೆ ಒಂದು ಬಗೆಯ ಸಂಚಲನವನ್ನು ಸೃಷ್ಟಿಸಿದೆ. ಆದರೆ ಇದಕ್ಕೆ ಪಕ್ಷದ ಎಲ್ಲರೂ ಸಮ್ಮತಿ ಸೂಚಿಸುತ್ತಾರೆ ಎಂದಲ್ಲ. ಕಾಂಗ್ರೆಸ್ಸಿನ ಮತ್ತೊಬ್ಬ ಟಿಕೆಟ್ ಆಕಾಂಕ್ಷೆಯಾಗಿರುವ ವಿನಯ ಕುಮಾರ್ ಸೊರಕೆ ಹೇಗೆ ಇದಕ್ಕೆ ಪ್ರತಿಕ್ರಿಯಿಸಲಿದ್ದಾರೆ? ಉಳಿದ ನಾಯಕರ ನಿಲುವುಗಳೇನು ಎಂಬುದು ಸದ್ಯಕ್ಕ ಉತ್ತರ ದೊರೆಯದ ಪ್ರಶ್ನೆ.

ಒಂದು ವೇಳೆ ಹೆಗ್ಡೆ ಅವರಿಗೆ ಟಿಕೆಟ್ ದೊರಕಿಸಿಕೊಡಲು ಬಿಜೆಪಿಯ ಒಂದು ಬಣ ಪ್ರಯತ್ನ ಪಟ್ಟರೂ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಕುತೂಹಲವೂ ಮನೆಮಾಡಿದೆ. ಸದಾನಂದಗೌಡರ ವಲಯದೊಂದಿಗೆ ಕರಾವಳಿ ಭಾಗದಲ್ಲಿ ಗುರುತಿಸಿಕೊಳ್ಳುವ ಶೋಭಾ ಅವರು ಎಂತಹ ನಿರ್ಧಾರ ಕೈಗೊಳ್ಳಬಹುದು ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತವೆ ಕೆಲ ಮೂಲಗಳು.

ಹೆಗ್ಡೆ ಅವರ ವರ್ಚಸ್ಸನ್ನು ಸರಿಯಾಗಿ ದುಡಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿರುವುದು ಅಲ್ಲದೆ ವಿಧಾನಸಭೆ ಚುನಾವಣೆಯಲ್ಲಿ ಕೂಡ ಅವರನ್ನು ಕಡೆಗಣಿಸಿರುವುದು ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ಸಿಗೆ ಮರಳಬಹುದು ಎಂಬ ಮಾತಿಗೆ ಪುಷ್ಠಿ ಒದಗಿಸುತ್ತಿವೆ. ಒಂದು ವೇಳೆ ಹೆಗ್ಡೆ ಅವರು ಕಾಂಗ್ರೆಸ್ಸಿಗೆ ಮರಳಿದರೆ ಅದು ಪಕ್ಷಕ್ಕೆ ಲಾಭದಾಯಕವಾಗಲಿದೆ. ಬಂಟರು ಬಿಲ್ಲವರನ್ನು ಹೆಚ್ಚಾಗಿ ಹೊಂದಿರುವ ಉಡುಪಿ ಭಾಗದಲ್ಲಿ ಅವರ ತಳಮಟ್ಟದ ಕೆಲಸಗಳು ಕೈಹಿಡಿಯಲಿವೆ ಎನ್ನಲಾಗುತ್ತಿದೆ. ಚುನಾವಣೆ ಹೊತ್ತಿಗೆ ಚಿಕ್ಕಮಗಳೂರಿನಲ್ಲಿಯೂ ಅವರ ಪ್ರಭಾವವನ್ನು ಪಕ್ಷ ಪಸರಿಸಲು ಯಶಸ್ವಿಯಾದರೆ ಗೆಲುವು ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ : ದಕ್ಷಿಣ ಕನ್ನಡ; ಬಿಜೆಪಿಯಲ್ಲಿ ಹೊಸಮುಖಗಳ ಆಯ್ಕೆಯ ಹಿಂದಿನ ಮುಸುಕಿನ ಗುದ್ದಾಟ


ಆದರೆ ‘ದಿ ಸ್ಟೇಟ್’’ನೊಂದಿಗೆ ಮಾತನಾಡಿದ ಹೆಗ್ಡೆ ಅವರು ಪಕ್ಷ ತೊರೆಯುವ ಕುರಿತು ಯಾವುದೇ ಸಂಗತಿಯನ್ನು ಬಿಟ್ಟುಕೊಡಲಿಲ್ಲ. “ಈ ಕುರಿತು ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನಾನೀಗ ಬಿಜೆಪಿಯಲ್ಲಿದ್ದೇನೆ. ಬಿಜೆಪಿಯಲ್ಲಿ ಟಿಕೆಟ್ ನೀಡಿದರೆ ಸ್ಪರ್ಧಿಸುವೆ. ಒಂದು ವೇಳೆ ಬಿಜೆಪಿಯಲ್ಲಿ ಟಿಕೆಟ್ ನೀಡದಿದ್ದರೂ ಪಕ್ಷದೊಂದಿಗೆ ದುಡಿಯುವೆ” ಎಂದರು. ಅಲ್ಲದೆ ಚುನಾವಣೆ ಇನ್ನೂ ದೂರವಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ ಅವರು, “ಇದಕ್ಕೆಲ್ಲಾ ಇನ್ನೂ ಸಾಕಷ್ಟು ಸಮಯ ಇದೆ,” ಎಂದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More