ಕೆಸಿಆರ್‌ಗೆ ತಿರುಗುಬಾಣ ಆಗಲಿದಿಯೇ ವಿಧಾನಸಭೆ ವಿಸರ್ಜನೆಯ ನಿರ್ಧಾರ?

ಪರ್ಯಾಯ ರಾಜಕಾರಣದ ಪ್ರಯತ್ನದಲ್ಲಿ ವಿಫಲವಾಗಿರುವ ಕೆಸಿಆರ್‌ ಕಾಂಗ್ರೆಸ್‌, ಟಿಡಿಪಿ ಹಾಗೂ ಬಿಜೆಪಿ ವಿರೋಧವನ್ನು ಎದುರಿಸುತ್ತಿರುವುದು ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಒಂದು ವೇಳೆ ಟಿಡಿಪಿ ಕಾಂಗ್ರೆಸ್‌ ಜೊತೆ ಸಖ್ಯ ಬೆಳಸಿದರೆ ತೆಲಂಗಾಣದಲ್ಲಿ ಟಿಆರ್‌ಎಸ್‌ಗೆ ವ್ಯಾಪಕ ಹಿನ್ನೆಡೆ ಉಂಟಾಗಲಿದೆ

ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಿ, ಚುನಾವಣೆಗೆ ಹೋಗುವ ನಿರ್ಧಾರ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರಿಗೆ ತಿರುಗುಬಾಣವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ವಿಧಾನಸಭೆ ಚುನಾವಣೆಗೂ ಕನಿಷ್ಟ ಒಂಬತ್ತು ತಿಂಗಳು ಬಾಕಿ ಇರುವಾಗಲೇ ವಿಧಾನಸಭೆ ವಿಸರ್ಜನೆ ತೀರ್ಮಾನ ಕೈಗೊಂಡ ಕೆಸಿಆರ್‌ ಅವರನ್ನು ಕಾಂಗ್ರೆಸ್‌, ಬಿಜೆಪಿ, ಟಿಡಿಪಿ ಹಾಗೂ ಸಿಪಿಎಂ ಪಕ್ಷಗಳು ತೀವ್ರ ತರಾಟೆ ತೆಗೆದುಕೊಂಡಿದ್ದವು. ಚುನಾವಣಾ ಆಯೋಗದೊಂದಿಗೆ ಮಾತನಾಡಿಯೇ ವಿಧಾನಸಭೆ ವಿಸರ್ಜನೆ ನಿರ್ಧಾರ ತೆಗೆದುಕೊಂಡಿದ್ದಾಗಿ ಕೆಸಿಆರ್‌ ನೀಡಿದ ಹೇಳಿಕೆಯನ್ನು ತಳ್ಳಿಹಾಕಿದ್ದ ಚುನಾವಣೆ ಆಯೋಗ ಚುನಾವಣಾ ದಿನಾಂಕ ನಿರ್ಧರಿಸುವ ಹಕ್ಕು ತನಗಲ್ಲದೆ ಬೇರೆ ಯಾರಿಗೂ ಇಲ್ಲವೆಂದು ಹೇಳಿತ್ತು.

ಕೆಸಿಆರ್‌ ತೀರ್ಮಾನದಿಂದ ಕುಪಿತಗೊಂಡಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಮುಖಂಡರು ಟಿಆರ್‌ಎಸ್‌‌ ವಿರುದ್ಧ ಸಮರವನ್ನೇ ಸಾರಿದ್ದಾರೆ. ತೆಲಂಗಾಣದಲ್ಲಿ ಉತ್ತಮ ನೆಲೆಹೊಂದಿರುವ ಕಾಂಗ್ರೆಸ್‌ ಪಕ್ಷವು, ಕೆಸಿಆರ್‌ ಅವರನ್ನು ಸಮಯಸಾಧಕರೆಂದು ಜರಿದಿದೆ. ಆ ವಿಚಾರವಾಗಿ ಮಾತನಾಡಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ನಾಯಕ ಉತ್ತಮ ಕುಮಾರ್‌ ರೆಡ್ಡಿ ಅವರು, “ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಿರುವ ಕೆಸಿಆರ್‌ ಅವರು ಹಲವು ದುರುದ್ದೇಶಗಳನ್ನು ಹೊಂದಿದ್ದಾರೆ. ಮುಂಬರುವ ತೆಲಂಗಾಣ ಚುನಾವಣೆಯು ಧರ್ಮಯುದ್ಧವಾಗಿದೆ. ನಾಗರಿಕ ಸಮುದಾಯ ಮತ್ತು ಜನರ ಒಳಿತಿಗಾಗಿ ಹೋರಾಡುತ್ತಿರುವ ಹಲವು ಸಂಘಟನೆಗಳೊಂದಿಗೆ ಸೇರಿಕೊಂಡು ಕೆಸಿಆರ್‌ ಹಾಗೂ ಅವರ ಕುಟುಂಬವನ್ನು ಸೋಲಿಸುವ ಮೂಲಕ ತೆಲಂಗಾಣದಲ್ಲಿ ಸರ್ವಾಧಿಕಾರದ ಆಡಳಿತವನ್ನು ಕೊನೆಗೊಳಿಸಲಾಗುವುದು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯು “ಕಾಂಗ್ರೆಸ್‌ ಮತ್ತು ಟಿಆರ್‌ಎಸ್”‌ ಮಧ್ಯೆ ನಡೆಯದೇ “ಕೆಸಿಆರ್‌ ಕುಟುಂಬ ಮತ್ತು ತೆಲಂಗಾಣ ಜನರ” ನಡುವೆ ನಡೆಯಲಿದೆ ಎಂದು ತಿಳಿಸಿರುವ ರೆಡ್ಡಿ ಅವರು, “ಕೆಸಿಆರ್‌ ಕುಟುಂಬ ರಾಜಕಾರಣವನ್ನು ಸೋಲಿಸಲು ಟಿಡಿಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು, ನಾಗರಿಕ ಸಮುದಾಯ, ನೌಕರರ ಒಕ್ಕೂಟಗಳು, ಮಹಿಳಾ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಗಳು ಒಂದಾಗಬೇಕು,” ಎಂದು ಕರೆ ನೀಡಿದ್ದಾರೆ. ಆ ಮೂಲಕ ಚಂದ್ರಬಾಬು ನೇತೃತ್ವದ ಟಿಡಿಪಿಗೆ ಕಾಂಗ್ರೆಸ್‌ ಜೊತೆ ಕೈಜೋಡಿಸಲು ಪರೋಕ್ಷ ಆಹ್ವಾನ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಪರ್ಯಾಯ ರಾಜಕಾರಣ ಕಟ್ಟಲು ಈ ಹಿಂದೆ ಕೆಸಿಆರ್‌ ಪ್ರಯತ್ನಿಸಿದ್ದರು. ಆ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ಭೇಟಿಯಾಗಿ ಪರ್ಯಾಯ ರಾಜಕಾರಣದ ಬಗ್ಗೆ ಕೆಸಿಆರ್‌ ಚರ್ಚಿಸಿದ್ದರು. ಪ್ರಾದೇಶಿಕ ನಾಯಕರಿಂದ ಸ್ಪಷ್ಟ ಅಭಿಪ್ರಾಯಗಳು ಹೊರಹೊಮ್ಮದ ಕಾರಣ ಪರ್ಯಾಯ ರಾಜಕಾರಣದ ಬಗೆಗಿನ ಪ್ರಯತ್ನವನ್ನು ಕೆಸಿಆರ್‌ ಕೈಬಿಟ್ಟರು ಎನ್ನಲಾಗಿದೆ.

ಇದನ್ನೂ ಓದಿ : ತೆಲಂಗಾಣ ಸಿಎಂ ಕೆಸಿಆರ್‌ಗೆ ದುಬಾರಿಯಾದ ಚುನಾವಣಾ ಅತ್ಯುತ್ಸಾಹ, ಹಗುರ ಮಾತು!

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಟೀಕಿಸುವ ಮೂಲಕ ಬಿಜೆಪಿಗೆ ಹತ್ತಿರವಾಗಲು ಕೆಸಿಆರ್ ಮತ್ತೊಂದು ಪ್ರಯತ್ನಕ್ಕೆ ಕೈಹಾಕಿದರು. ಪ್ರಧಾನಿ ಮೋದಿ ಅವರ ನೋಟು ಅಮಾನ್ಯ, ಜಿಎಸ್‌ಟಿಗಳಂಥ ತೀರ್ಮಾನಗಳನ್ನು ಸಮರ್ಥಿಸಿಕೊಂಡಿದ್ದ ಕೆಸಿಆರ್‌ ಬಿಜೆಪಿಯೊಂದಿಗೆ ಕೈಜೋಡಿಸುವ ಆಲೋಚನೆಯಲ್ಲಿದ್ದಾರೆ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಆದರೆ, ಕೆಸಿಆರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು, “ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಿರುವ ಕೆಸಿಆರ್‌ ತೀರ್ಮಾನ ದುರುದ್ದೇಶದಿಂದ ಕೂಡಿದೆ. ತೆಲಂಗಾಣ ಚುಣಾವಣೆಯಲ್ಲಿ ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಚುನಾವಣೆ ಆಯೋಗ ಕೆಸಿಆರ್‌ ಹೇಳಿದಂತೆ ಕೇಳುವುದಿಲ್ಲ. ನಿಗದಿತ ಅವಧಿಯಲ್ಲೇ ಚುನಾವಣೆ ನಡೆಯಲಿದೆ. ತೆಲಂಗಾಣದಲ್ಲಿ ನಾವು ಏಕಾಂಗಿ ಹೋರಾಟ ಮಾಡಲಿದ್ದೇವೆ,” ಎಂದು ಹೇಳಿದ್ದಾರೆ. ಆ ಮೂಲಕ ಬಿಜೆಪಿ ಜೊತೆ ಕೈಜೋಡಿಸುವ ಕೆಸಿಆರ್‌ ಕನಸನ್ನು ಅಮಿತ್‌ ಶಾ ಅವರು ಮೊದಲ ಹಂತದಲ್ಲೇ ಭಗ್ನಗೊಳಿಸಿದ್ದಾರೆ. ಓವೈಸಿ ನೇತೃತ್ವದ ಮಂಜಲೀಸ್‌ ಪಕ್ಷಕ್ಕೆ ಕೆಸಿಆರ್‌ ಆಂತರಿಕವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳುವ ಮೂಲಕ ಅಮಿತ್‌ ಶಾ ಅವರು ತೆಲಂಗಾಣದಲ್ಲಿ ಹಿಂದುತ್ವ ರಾಜಕಾರಣಕ್ಕೆ ನಾಂದಿ ಹಾಡುವ ಸುಳಿವು ನೀಡಿದ್ದಾರೆ.

ಪರ್ಯಾಯ ರಾಜಕಾರಣದ ಪ್ರಯತ್ನದಲ್ಲಿ ವಿಫಲವಾಗಿರುವ ಕೆಸಿಆರ್‌ ಕಾಂಗ್ರೆಸ್‌, ಟಿಡಿಪಿ ಹಾಗೂ ಬಿಜೆಪಿ ವಿರೋಧವನ್ನು ಎದುರಿಸುತ್ತಿರುವುದು ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿರುವ ಚಂದ್ರಬಾಬು ನಾಯ್ಡು ಅವರು ತೆಲಂಗಾಣದಲ್ಲಿ ಕಾಂಗ್ರೆಸ್‌ ಜೊತೆ ಕೈಜೋಡಿಸುತ್ತಾರೆಂಬ ಮಾತುಗಳು ಕೇಳಿಬಂದಿವೆ. ಒಂದು ವೇಳೆ ಟಿಡಿಪಿಯು ಕಾಂಗ್ರೆಸ್‌ ಜೊತೆ ಸಖ್ಯ ಬೆಳಸಿಕೊಂಡರೆ ತೆಲಂಗಾಣದಲ್ಲಿ ಟಿಆರ್‌ಎಸ್‌ ಪಕ್ಷಕ್ಕೆ ವ್ಯಾಪಕ ಹಿನ್ನೆಡೆ ಉಂಟಾಗಲಿದೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More