ಬಿಜೆಪಿ ಮಣಿಸಲು ಶಿವಭಕ್ತ ರಾಹುಲ್ ಬ್ರಾಂಡ್ ಮೊರೆಹೋದ ಕಾಂಗ್ರೆಸ್

ಗುಜರಾತ್ ಮತ್ತು ಕರ್ನಾಟಕದ ಪ್ರಯೋಗದ ಬಳಿಕ ಮಧ್ಯಪ್ರದೇಶದಲ್ಲೂ ಹಿಂದುತ್ವವಾದಿ ರಾಜಕಾರಣವನ್ನು  ಕಾಂಗ್ರೆಸ್ ಮುಂದುವರಿಸಿದೆ. ಪಕ್ಷದ ಚುನಾವಣಾ ಪ್ರಚಾರಾಂದೋಲನ ಚಾಲನೆಯ ಭೋಪಾಲ್ ಕಾರ್ಯಕ್ರಮದ ಪೋಸ್ಟರ್‌ಗಳಲ್ಲಿ ‘ಶಿವ ಭಕ್ತ’ ರಾಹುಲ್ ರಾರಾಜಿಸುತ್ತಿದ್ದಾರೆ

ಭೋಪಾಲ್‌ನಲ್ಲಿ ಸೋಮವಾರ ರೋಡ್‌ ಶೋ ಮತ್ತು ಬಹಿರಂಗ ಸಭೆಯ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದ್ದಾರೆ. ಮಧ್ಯಪ್ರದೇಶದ ನಿರುದ್ಯೋಗ, ಕೃಷಿ ಬಿಕ್ಕಟ್ಟು, ಭ್ರಷ್ಟಾಚಾರ ಸೇರಿದಂತೆ ರಾಜ್ಯದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಲೋಪಗಳನ್ನು ಪ್ರಸ್ತಾಪಿಸುತ್ತಲೇ, ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಏನೇನು ಮಾಡಲಿದೆ ಎಂಬ ಬಗ್ಗೆಯೂ ರಾಹುಲ್ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ಮಾನವ ಅಭಿವೃದ್ಧಿ ಸೂಚ್ಯಂಕ, ಅಪೌಷ್ಟಿಕತೆ, ಹಸಿವು, ತಲಾ ಆದಾಯ ಮತ್ತು ಜಿಡಿಪಿ ಸೇರಿದಂತೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಮಾನದಂಡಗಳಲ್ಲಿ ಅತ್ಯಂತ ನಿಕೃಷ್ಟ ಹಂತದಲ್ಲಿರುವ ಮತ್ತು ಅಪೌಷ್ಟಿಕತೆಯ ವಿಷಯದಲ್ಲಂತೂ ಇಥಿಯೋಪಿಯಾದೊಂದಿಗೆ ಪೈಪೋಟಿಗಿಳಿಯುವ ಮಟ್ಟಿಗಿನ ಹೀನಾಯ ಸ್ಥಿತಿ ಇರುವ ಮಧ್ಯಪ್ರದೇಶದಂತಹ ರಾಜ್ಯದ ಬದುಕನ್ನು ಕನಿಷ್ಟ ಸಹನೀಯಗೊಳಿಸುವ ಭರವಸೆ ಹುಟ್ಟಿಸುವುದು ಎಲ್ಲಾ ಪಕ್ಷಗಳ ಚುನಾವಣಾ ಭರವಸೆಗಳ ತಿರುಳಾಗಬೇಕಿತ್ತು. ಆದರೆ, ಪರಸ್ಪರ ಕೆಸರೆರಚಾಟದ ಕೆಲವು ಮಾತುಗಳನ್ನು ಹೊರತುಪಡಿಸಿದರೆ, ದೇಶದಲ್ಲೇ ಅತ್ಯಂತ ಹೀನಾಯ ಬಡತನ ಮತ್ತು ಹಸಿವು ಹೊಂದಿರುವ, ಆದಿವಾಸಿ ಮತ್ತು ಬುಡಕಟ್ಟು ಸಮುದಾಯದ ಬಾಹುಳ್ಯದ ರಾಜ್ಯದ ಬದುಕನ್ನು ಆಮೂಲಾಗ್ರವಾಗಿ ಸುಧಾರಿಸುವ ಕಾಳಜಿಯ ಮಾತುಗಳು ಕಾಣುತ್ತಿಲ್ಲ.

ಆದರೆ, ಧರ್ಮದ ಆಧಾರದ ಮೇಲೆ ಮತ ಬಾಚುವ ನಿಟ್ಟಿನಲ್ಲಿ ಹಿಂದುತ್ವದ ಪೈಪೋಟಿ ಮಾತ್ರ ಚುನಾವಣಾ ವೇಳಾಪಟ್ಟಿ ಘೋಷಣೆಗೆ ಮುನ್ನವೇ ಢಾಳಾಗಿ ರಾಚತೊಡಗಿದೆ. ೨೦೦೩ರಿಂದ ಸತತ ಒಂದೂವರೆ ದಶಕ ಕಾಲ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್, ಈ ಬಾರಿ ಅಧಿಕಾರ ಹಿಡಿಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಹಿಂದೂಗಳ ಬಾಹುಳ್ಯದ ಮತ್ತು ಹಿಂದುತ್ವದ ಅಲೆಯ ರಾಜ್ಯದಲ್ಲಿ ಮೂರು ವಿಧಾನಸಭಾ ಅವಧಿಗೆ ಗಮನಾರ್ಹ ಅಭಿವೃದ್ಧಿ ಅಥವಾ ಸ್ವಚ್ಛ ಆಡಳಿತ ಹೆಗ್ಗಳಿಕೆ ಇಲ್ಲದೆಯೂ ಹಿಂದುತ್ವದ ಬಲದ ಮೇಲೆಯೇ ಅಧಿಕಾರಕ್ಕೆ ಅಂಟಿಕೊಂಡಿರುವ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ಸಿಗೆ ಅದೇ ಹಿಂದುತ್ವದ ಹೊರತು ಬೇರೆ ಅಸ್ತ್ರಗಳು ಹೊಳೆದಿಲ್ಲ ಎಂಬುದು ಸೋಮವಾರದ ರಾಹುಲ್ ಪ್ರಚಾರ ಸಭೆಗಳಲ್ಲಿ ಎದ್ದು ಕಾಣುತ್ತಿತ್ತು.

ಹಾಗೆ ನೋಡಿದರೆ, ರಾಹುಲ್ ಮತ್ತು ಅವರ ಕಾಂಗ್ರೆಸ್ಸಿನ ಮಧ್ಯಪ್ರದೇಶ ಚುನಾವಣಾ ತಯಾರಿ ಇತ್ತೀಚಿನ ಅವರ ಮಾನಸಸರೋವರ ಯಾತ್ರೆಯ ಮೂಲಕವೇ ಆರಂಭಗೊಂಡಿದೆ. ಹಿಂದುತ್ವದ ಅಲೆಯ ರಾಜ್ಯದ ಚುನಾವಣೆಯನ್ನು ಅದೇ ಹಿಂದುತ್ವದ ಮೇಲೆಯೇ ಎದುರಿಸುವುದು ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆಯಾಗಿದೆ. ಹಾಗಾಗಿಯೇ ರಾಹುಲ್ ಹಿಂದೂಗಳ ಪವಿತ್ರ ಶೈವಕ್ಷೇತ್ರ ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡುವ ಮೂಲಕ ಹಿಂದೂ ಮತದಾರರ ಮನಸ್ಸಿನಲ್ಲಿ ಜಾಗ ಪಡೆಯುವ ಪ್ರಯತ್ನ ಆರಂಭಿಸಿದ್ದಾರೆ ಎಂಬ ವಿಶ್ಲೇಷಣೆಗಳೂ ಕೇಳಬಂದಿವೆ.

ಬಿಜೆಪಿ ಕೂಡ ರಾಹುಲ್ ಯಾತ್ರೆಯನ್ನೇ ಮುಂದಿಟ್ಟುಕೊಂಡು ಮೃದು ಹಿಂದುತ್ವ ಮತ್ತು ಕಟ್ಟಾ ಹಿಂದುತ್ವದ ಹೋಲಿಕೆಯ ಟೀಕೆಗಳನ್ನೂ ಮಾಡಿದೆ. ಸ್ವತಃ ಸಚಿವ ಅರುಣ್ ಜೇಟ್ಲಿ ಅವರೇ, “ಕಾಂಗ್ರೆಸ್ ಮೃದು ಹಿಂದುತ್ವದ ವರಸೆಗೆ ಮೊರೆಹೋಗಿದೆ. ಆದರೆ, ಬಿಜೆಪಿ ಕಟ್ಟಾ ಹಿಂದುತ್ವವನ್ನೇ ತನ್ನ ರಾಜಕೀಯ ನೆಲೆಯಾಗಿಸಿಕೊಂಡಿದೆ. ಒರಿಜಿನಲ್ಲೇ ಜನರಿಗೆ ಲಭ್ಯವಿರುವಾಗ, ಕ್ಲೋನ್ ಆಯ್ಕೆಮಾಡಿಕೊಳ್ಳುವರೇ?” ಎನ್ನುವ ಮೂಲಕ ಕಾಂಗ್ರೆಸ್ಸನ್ನು ಲೇವಡಿ ಮಾಡಿದ್ದಾರೆ.

ಆದರೆ, ವ್ಯಾಪಮ್‌ನಂತಹ ಭಾರೀ ಭ್ರಷ್ಟಾಚಾರ, ವ್ಯಾಪಕ ದುರಾಡಳಿತ ಮತ್ತು ಸ್ವಜನಪಕ್ಷಪಾತದ ಆರೋಪಗಳ ಹೊರತಾಗಿಯೂ ಕಾಂಗ್ರೆಸ್, ಆ ವಿಷಯಗಳನ್ನೆಲ್ಲಾ ಬದಿಗೆ ತಳ್ಳಿ, ಹಿಂದುತ್ವದ ರಾಜಕಾರಣಕ್ಕೇ ಜೋತುಬಿದ್ದು, ತಾನು ಯಾವ ಪಕ್ಷದ ವಿರುದ್ಧ ಸೆಣೆಸುತ್ತಿವುದೋ ಅದೇ ಪಕ್ಷದ ದಾರಿಯನ್ನೇ ತುಳಿಯುತ್ತಿರುವುದು ಯಾಕೆ? ಧರ್ಮಕಾರಣವನ್ನು ಹೊರತುಪಡಿಸಿ ಜನಪರ ವಿಷಯಗಳ ಮೇಲೆ ಚುನಾವಣೆಗಳನ್ನು ಗೆಲ್ಲುವ ವಿಶ್ವಾಸ ಸಂಪೂರ್ಣ ಕಾಂಗ್ರೆಸ್‌ ಪಾಲಿಗೆ ಇಲ್ಲವಾಗಿದೆಯೇ? ಅಥವಾ ಒಟ್ಟಾರೆ ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ಧರ್ಮವೇ ಅಂತಿಮವಾಗಿ ಎಲ್ಲವನ್ನೂ ನಿರ್ಧರಿಸುವ ಮಟ್ಟಕ್ಕೆ ರಾಜಕಾರಣ ಬಂದು ತಲುಪಿದೆಯೇ? ಎಂಬ ಪ್ರಶ್ನೆಗಳು ಸಹಜವಾಗೇ ಎದುರಾಗಿವೆ.

ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಸೇರಿದಂತೆ ದುರ್ಬಲ ವರ್ಗಗಳ ಹಿತ ಕಾಯುವ ಜಾತ್ಯತೀತ ಮೌಲ್ಯದ ಸೈದ್ಧಾಂತಿಕ ನೆಲೆಯ ಪಕ್ಷ ಎಂಬ ತನ್ನ ಹಣೆಪಟ್ಟಿಯನ್ನು ಕಾಂಗ್ರೆಸ್ ನಿಧಾನವಾಗಿ ಕಳೆದುಕೊಳ್ಳುವ ಹಾದಿಯಲ್ಲಿದೆಯೇ? ಚುನಾವಣೆ ಗೆಲುವು, ಅಧಿಕಾರದ ಅನಿವಾರ್ಯತೆ ಮತ್ತು ಅಂತಿಮವಾಗಿ ಪಕ್ಷದ ಅಸ್ತಿತ್ವ ಕಾಯ್ದುಕೊಳ್ಳುವ ಇಕ್ಕಟ್ಟಿಗೆ ಸಿಲುಕಿರುವ ರಾಹುಲ್, ಹಿಂದುತ್ವ ರಾಜಕಾರಣದ ವರಸೆಯ ಮೊರೆಹೋದರೆ? ಎಂಬ ಪ್ರಶ್ನೆಗಳೂ ಇವೆ.

ಹಾಗೆ ನೋಡಿದರೆ, ಹಿಂದುತ್ವದ ಅಥವಾ ಮೃದು ಹಿಂದುತ್ವದ ಈ ವರಸೆ ರಾಹುಲ್ ಅವರಿಗೆ ಇದೇ ಮೊದಲೇನಲ್ಲ. ಕಳೆದ ವರ್ಷದ ಗುಜರಾತ್ ವಿಧಾನಸಭಾ ಚುನಾವಣೆಯ ಹೊತ್ತಿಗೇ ಅವರು ಹಿಂದುತ್ವ ಜಪದ ಪ್ರಯೋಗ ಆರಂಭಿಸಿದ್ದರು. ಚುಣಾವಣಾ ಪ್ರಚಾರ ಸಭೆಗಳ ಭಾಗವಾಗಿ ಅಲ್ಲಿನ ಹಿಂದೂ ದೇವಾಲಯಗಳಿಗೆ, ಅದರಲ್ಲೂ ಪ್ರಮುಖವಾಗಿ ಶೈವ ಮಂದಿರಗಳಿಗೆ ಸರಣಿ ಭೇಟಿ ನೀಡಿದ್ದ ಅವರು, ತಾವು ಮತ್ತು ತಮ್ಮ ಗಾಂಧಿ ಕುಟುಂಬ ಶಿವಭಕ್ತರು ಮತ್ತು ರುದ್ರಾಕ್ಷಿ ಮಾಲೆಧಾರಿಗಳು ಎಂಬುದನ್ನೂ ಉಲ್ಲೇಖಿಸಿದ್ದರು. ಜೊತೆಗೆ, ಪಕ್ಷದ ನಾಯಕರು, ಅವರನ್ನು ಜನಿವಾರಧಾರಿ ಶಿವಭಕ್ತ ಎಂದು ಕರೆಯುವ ಮೂಲಕ ಇನ್ನಷ್ಟು ನಿರ್ದಿಷ್ಟವಾಗಿ ಧರ್ಮ ಮತ್ತು ಜಾತಿಯ ಸ್ಪಷ್ಟತೆ ಮೂಡಿಸುವ ಮೂಲಕ ಬಹುಸಂಖ್ಯಾತ ಮತಗಳನ್ನು ಪ್ರಭಾವಿಸುವ ಪ್ರಯತ್ನ ಮಾಡಿದ್ದರು. ರಾಹುಲ್ ಮತ್ತು ಕಾಂಗ್ರೆಸ್ ನಾಯಕರ ಆ ತಂತ್ರಗಾರಿಕೆ ಕೆಲಮಟ್ಟಿಗೆ ಫಲ ಕೊಟ್ಟಿತ್ತು ಕೂಡ.

ಆ ಬಳಿಕ ಕೆಲವು ತಿಂಗಳ ಹಿಂದಿನ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ನಾಯಕ ಅದೇ ಹಿಂದೂ ದೇವಾಲಯ ಮತ್ತು ಧರ್ಮಗುರುಗಳ ಮೊರೆಹೋಗಿದ್ದರು. ರಾಜ್ಯದ ಪ್ರಮುಖ ದೇವಾಲಯ, ಮಠ-ಮಾನ್ಯಗಳನ್ನು ಬಿಡದೆ ಸುತ್ತಿದ್ದ ರಾಹುಲ್, ತಿಲಕಧಾರಿಯಾಗಿ ಕಾಣಿಸಿಕೊಂಡಿದ್ದರು. ಅವರ ಆ ಹಿಂದುತ್ವವಾದಿ ನಡೆ ಕಾಂಗ್ರೆಸ್ಸಿನ ಅಧಿಕಾರ ಉಳಿಸಿಕೊಳ್ಳುವಲ್ಲಿ ಸಫಲವಾಗಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಪೂರ್ಣಾವಧಿಯ ಕಾಂಗ್ರೆಸ್ ಸರ್ಕಾರದ ಬಹುತೇಕ ಜನಪರ ಆಡಳಿತ ಮತ್ತು ಜನಕಲ್ಯಾಣ ಕಾರ್ಯಕ್ರಮಗಳ ಹೊರತಾಗಿಯೂ ಪಕ್ಷ ಸ್ವಂತ ಬಲದ ಮೇಲೆ ಮರಳಿ ಅಧಿಕಾರ ಹಿಡಿಯಲಾಗಲಿಲ್ಲ. ಆದರೆ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಆ ಯಶಸ್ಸಿನಲ್ಲಿ ರಾಹುಲ್ ಅವರ ಹಿಂದುತ್ವದ ತಂತ್ರಗಾರಿಕೆಯ ಪಾಲು ಎಷ್ಟು, ಸಿದ್ದರಾಮಯ್ಯ ಅವರ ಆಡಳಿತದ ಪಾಲೆಷ್ಟು ಎಂಬುದನ್ನು ಮಾತ್ರ ನಿಖರವಾಗಿ ಹೇಳಲಾಗದು.

ಇದೀಗ ಮಧ್ಯಪ್ರದೇಶದ ಚುಣಾವಣೆಗೂ ಕಾಂಗ್ರೆಸ್ ಹಿಂದುತ್ವವಾದಿ ರಾಜಕಾರಣದ ಬಿಜೆಪಿ ಅನುಕರಣೆಯ ತನ್ನ ವರಸೆಯನ್ನು ಇನ್ನಷ್ಟು ನಿಚ್ಛಳವಾಗಿ ಮತ್ತು ವ್ಯಾಪಕವಾಗಿ ಮುಂದುವರಿಸಿದೆ. ಪಕ್ಷದ ಚುನಾವಣಾ ಪ್ರಚಾರಾಂದೋಲನಕ್ಕೆ ಚಾಲನೆ ನೀಡುವ ರಾಹುಲ್ ಅವರ ಭೋಪಾಲ್ ರ್ಯಾಲಿಗಾಗಿ ನಗರದಾದ್ಯಂತ ಹಾಕಿರುವ ಪೋಸ್ಟರುಗಳಲ್ಲಿ ರಾಹುಲ್ ಅವರನ್ನು ‘ಶಿವ ಭಕ್ತ’ ರಾಹುಲ್ ಎಂದೇ ಹೆಸರಿಸಲಾಗಿದೆ. ಅಲ್ಲದೆ, ಶಿವಲಿಂಗಕ್ಕೆ ಪೂಜೆ ಮಾಡುತ್ತಿರುವ ರಾಹುಲ್ ಫೋಟೋಗಳು ಪ್ರಮುಖವಾಗಿ ಆ ಪೋಸ್ಟರುಗಳಲ್ಲಿ ಕಾಣಿಸಿಕೊಂಡಿವೆ. ಆ ಮೂಲಕ ಶಿವಭಕ್ತ ರಾಹುಲ್ ಬ್ರಾಂಡ್ ಮಾಡುವ ಪ್ರಯತ್ನವನ್ನು ಮಧ್ಯಪ್ರದೇಶ ಕಾಂಗ್ರೆಸ್ ಮಾಡಿದೆ.

ಇದನ್ನೂ ಓದಿ : ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆ ಕುರಿತ ಬಿಜೆಪಿ ಮುಖಂಡನ ಟ್ವೀಟ್ ರಹಸ್ಯ

ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಈ ‘ಶಿವಭಕ್ತ’ ಅವತರಣಿಕೆಗೆ ಹತ್ತು ದಿನಗಳ ಮುನ್ನವೇ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಕಮಲ್ ನಾಥ್‌ ಅವರು, ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ, ರಾಜ್ಯದ ಎಲ್ಲಾ ೨೩ ಸಾವಿರ ಪಂಚಾಯ್ತಿಗಳಲ್ಲೂ ಗೋಶಾಲೆ ತೆರೆಯುವುದಾಗಿ ಘೋಷಿಸಿದ್ದರು. ಆ ಬಳಿಕ, ಹಿಂದುತ್ವವಾದಿ ವರಸೆಯನ್ನು ಮುಂದುವರಿಸಿದ್ದ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್, ಶ್ರೀರಾಮ ವನವಾಸದಲ್ಲಿ ಓಡಾಡಿದ್ದ ಎಂಬ ಐತಿಹ್ಯದ ತಾಣಗಳನ್ನು ಸಂಪರ್ಕಿಸುವ ರಾಮಪಥ ನಿರ್ಮಾಣದ ಭರವಸೆ ನೀಡಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರ ಬಿಜೆಪಿ ಸರ್ಕಾರದ ಕಳೆದ ಚುನಾವಣೆಯ ಭರವಸೆಯಾಗಿದ್ದ ರಾಮಾಯಣ ಸರ್ಕ್ಯೂಟ್ ಪ್ರಾಜೆಕ್ಟ್ ಭಾಗವಾಗಿ ಈ ರಾಮಪಥ ನಿರ್ಮಾಣವಾಗಬೇಕಿತ್ತು. ಆದರೆ, ಸರ್ಕಾರದ ಅವಧಿ ಪೂರ್ಣಗೊಂಡರೂ ಆ ಯೋಜನೆ ಜಾರಿಗೆ ಬಂದಿಲ್ಲ. ಇದೀಗ, ರಾಮಭಕ್ತ ಹಿಂದೂಗಳ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಬಿಜೆಪಿಯ ಆ ಭರವಸೆಯನ್ನೇ ತನ್ನದು ಮಾಡಿಕೊಂಡಿದ್ದು, ರಾಮಪಥ ನಿರ್ಮಾಣದ ಭರವಸೆ ನೀಡಿದೆ.

ಈ ನಡುವೆ, ಸೋಮವಾರದ ತಮ್ಮ ಮೊದಲ ಪ್ರಚಾರಾಂದೋಲನದ ದಿನವೇ ರಾಹುಲ್ ೧೧ಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಗುರುಗಳು ಮತ್ತು ಅರ್ಚಕರನ್ನು ಭೇಟಿಯಾಗಿದ್ದಾರೆ.

ಒಟ್ಟಾರೆ, ಕಾಂಗ್ರೆಸ್ ಮತ್ತು ಅದರ ನಾಯಕರ ಹಿಂದುತ್ವವಾದಿ ವರಸೆಯ ಮಧ್ಯಪ್ರದೇಶದಂತಹ ಅಲ್ಪಸಂಖ್ಯಾತ ಮತಗಳು ತೀರಾ ಕಡಿಮೆ(ಶೇ.೬.೯) ಇರುವ ಕಡೆ ಪಕ್ಷಕ್ಕೆ ಯಾವ ಮಟ್ಟಿಗಿನ ಲಾಭ ತಂದುಕೊಡಬಹುದು ಎಂಬ ಕುತೂಹಲ ಒಂದೆಡೆಯಾದರೆ, ಆದಿವಾಸಿ ಮತ್ತು ದಲಿತ ಸಮುದಾಯಗಳು ನಿರ್ಣಾಯಕ ಪ್ರಮಾಣದಲ್ಲಿರುವ ಹಿನ್ನೆಲೆಯಲ್ಲಿ ಈ ನಡೆ ಎಂತಹ ಪ್ರತಿಕ್ರಿಯೆ ಹುಟ್ಟಿಸಬಲ್ಲದು ಎಂಬುದನ್ನೂ ಕಾದುನೋಡಬೇಕಿದೆ. ಹಾಗೇ, ೨೦೧೯ರ ಲೋಕಸಭಾ ಚುನಾವಣೆಯ ತಾಲೀಮು ಎಂದೇ ಭಾವಿಸಲಾಗಿರುವ ಮಧ್ಯಪ್ರದೇಶದ ಚುನಾವಣೆಯ ಫಲಿತಾಂಶ, ಕಾಂಗ್ರೆಸ್ಸಿನ ಈ ಮೃದು ಹಿಂದುತ್ವದ ಭವಿಷ್ಯವನ್ನೂ ಬರೆಯಲಿದೆಯೇ ಎಂಬ ಕುತೂಹಲ ಕೂಡ ಇದೆ. ಆ ಕುತೂಹಲಕ್ಕೆ ದಕ್ಕುವ ಉತ್ತರವೇ, ಜಾತ್ಯತೀತವಾದಿ ಹೆಗ್ಗಳಿಕೆಯ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತುಳಿಯಲಿರುವ ಹಾದಿಯನ್ನೂ ನಿರ್ಧರಿಸಲಿದೆ ಎಂಬುದು ಗುಟ್ಟೇನಲ್ಲ!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More