ಆರ್‌ಎಸ್‌ಎಸ್ ನಾಯಕ ಭಾಗವತ್‌ ಅವರ ‘ಉದಾರವಾದಿ’ ಮಾತುಗಳ ಸಂದೇಶವೇನು?

ವಾಸ್ತವವಾಗಿ ಪದ ಮತ್ತು ನುಡಿಗಟ್ಟು ಬದಲಾದ ಮಾತ್ರಕ್ಕೆ ಸಂಘ ಮತ್ತು ಅದರ ಪರಿವಾರದ ಮೂಲ ಸತ್ವ ಬದಲಾಗುವುದೆ? ಅಥವಾ ಅಂತಹ ಬದಲಾವಣೆಯ ಯಾವುದಾದರೂ ಕುರುಹುಗಳು ಅವರ ನಡವಳಿಕೆಯಲ್ಲಿ ಕಂಡಿವೆಯೇ? ಎಂಬ ನಿಜವಾದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಭಾಗವತ್‌  ಅವರ ಈ ಮಾತುಗಳನ್ನು ಗಮನಿಸಿದರೆ, ಕಾಣುವ ವಾಸ್ತವ ಬೇರೆಯದ್ದೇ!

ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂರು ದಿನಗಳ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ, ಅದರ ಮುಖ್ಯಸ್ಥರಾದ ಮೋಹನ್ ಭಾಗವತ್ ಸಾಮಾನ್ಯವಾಗಿ ಕಟ್ಟಾ ಹಿಂದುತ್ವದ ಆ ಸಂಘಟನೆಯ ವರಸೆಗೆ ಭಿನ್ನವಾದ ಭಾಷೆಯಲ್ಲಿ ಮಾತನಾಡಿದ್ದಾರೆ. ಹಾಗಾಗಿ, ಸಹಜವಾಗೇ ಆ ಮಾತುಗಳು ದೇಶದ ಮಾಧ್ಯಮ ಮತ್ತು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿವೆ.

ಮುಸ್ಲಿಮರನ್ನೂ ಒಳಗೊಂಡ ಹಿಂದುತ್ವ, ವೈವಿಧ್ಯತೆಯ ಭಾರತೀಯತೆ, ಸಂವಿಧಾನಕ್ಕೆ ಬದ್ಧತೆ, ಪ್ರಜಾಪ್ರಭುತ್ವದ ಶ್ಲಾಘನೆ, ಸಮತಾ ನೆಲೆಯ ಶೋಷಣೆಮುಕ್ತ ಸಮಾಜ, ಭ್ರಾತೃತ್ವ ಮುಂತಾದ ವಿಷಯಗಳ ಕುರಿತ ಸಂಘದ ಮುಖ್ಯಸ್ಥರ ಮಾತುಗಳು ಅವರ ಮತ್ತು ಸಂಘಪರಿವಾರದ ಮಟ್ಟಿಗೆ ಹೊಸ ನುಡಿಗಟ್ಟು ಎಂಬುದೇ ಆ ಮಟ್ಟಿಗಿನ ಚರ್ಚೆಗೆ ಕಾರಣ. ದೇಶಕ್ಕೆ ಕಾಂಗ್ರೆಸ್ ಕೊಡುಗೆ ಕುರಿತ ಅವರ ಶ್ಲಾಘನೆ ಹಾಗೂ ಯಾವುದೇ ರಾಜಕೀಯ ಪಕ್ಷದ ಪರ ಸಂಘ ಕೆಲಸ ಮಾಡುವುದಿಲ್ಲ ಎಂಬ ಮೋಹನ್ ಭಾಗವತ್ ಅವರ ಮಾತುಗಳು ಕೂಡ ಸಾಕಷ್ಟು ಕುತೂಹಲ ಹುಟ್ಟಿಸಿವೆ.

ಆದರೆ, ವಾಸ್ತವವಾಗಿ ಪದ ಮತ್ತು ನುಡಿಗಟ್ಟು ಬದಲಾದ ಮಾತ್ರಕ್ಕೆ ಸಂಘ ಮತ್ತು ಅದರ ಪರಿವಾರದ ಮೂಲ ಸತ್ವ ಬದಲಾಗುವುದೆ? ಅಥವಾ ಅಂತಹ ಬದಲಾವಣೆಯ ಯಾವುದಾದರೂ ಕುರುಹುಗಳು ಅವರ ನಡವಳಿಕೆಯಲ್ಲಿ ಕಂಡಿವೆಯೇ? ಎಂಬ ನಿಜವಾದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಭಾಗವತ್‌ರ ಈ ಮಾತುಗಳನ್ನು ಗಮನಿಸಿದರೆ, ಕಾಣುವ ವಾಸ್ತವ ಬೇರೆಯದ್ದೇ!

ಅದರಲ್ಲೂ ಮುಖ್ಯವಾಗಿ ರಾಜಕೀಯೇತರ ಸಂಘಟನೆ ತಮ್ಮದು ಎಂಬ ಭಾಗವತ್ ಅವರ ಮಾತುಗಳು ಎಷ್ಟು ಪ್ರಾಮಾಣಿಕ ಎಂಬುದು ಆ ಸಂಘಟನೆಯ ಹುಟ್ಟಿನಿಂದ ಅದು ಪ್ರತಿ ಚುನಾವಣಾ ಸಂದರ್ಭದಲ್ಲಿ ವಹಿಸುವ ಪಾತ್ರದ ಅರಿವಿರುವ ಎಲ್ಲರಿಗೂ ಗೊತ್ತಿರುವುದೇ. ಯಾವ ರಾಜಕೀಯ ಪಕ್ಷವನ್ನೂ ಬೆಂಬಲಿಸುವಂತೆ ಸಂಘ ಯಾವ ಕಾರ್ಯಕರ್ತರಿಗೂ ಸೂಚನೆ ನೀಡುವುದಿಲ್ಲ ಎಂಬುದು ಸರಸಂಘಚಾಲಕರ ಮಾತು. ಆದರೆ, ವಾಸ್ತವವಾಗಿ ಪ್ರತಿ ಚುನಾವಣೆಯಲ್ಲಿಯೂ, ಚುನಾವಣೆಗೆ ವರ್ಷ, ಆರು ತಿಂಗಳ ಮುಂಚೆಯಿಂದಲೇ ಸಂಘ ಮತ್ತು ಸಂಘದ ಹಲವು ಅಂಗಗಳ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ನಡೆಸುವ ಪ್ರಚಾರ ಮತ್ತು ರಹಸ್ಯ ಸಭೆಗಳು ಯಾವ ಪಕ್ಷದ ಚುನಾವಣಾ ಕಾರ್ಯತಂತ್ರದ ಭಾಗ ಎಂಬುದನ್ನು ಅವರು ಸ್ಪಷ್ಟಪಡಿಸಬಲ್ಲರೆ?

ಕರ್ನಾಟಕವೂ ಸೇರಿದಂತೆ ಭಾರತೀಯ ಜನತಾ ಪಕ್ಷದ ಸರ್ಕಾರಗಳು ನಾಯಕರ ಆಂತರಿಕ ಕಚ್ಚಾಟದಿಂದ, ಗಂಭೀರ ಆರೋಪಗಳ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದಾಗ ಬಿಜೆಪಿ ನಾಯಕರ ನಡುವೆ ಸಂಧಾನ ನಡೆಸುವ, ಸರ್ಕಾರದ ಪರ ನಿಂತು ಸಮರ್ಥಿಸಿಕೊಳ್ಳುವ ಆರ್‌ಎಸ್‌ಎಸ್‌ ನಾಯಕರ ವರಸೆ ಯಾವ ಬಗೆಯದ್ದು? ಅದು ರಾಜಕೀಯದ ಭಾಗವಲ್ಲವೆ? ಬಿಜೆಪಿ ನಾಯಕರು ಆರ್‌ಎಸ್‌ಎಸ್‌ ತಮ್ಮ ಮಾತೃಸಂಘಟನೆ ಎಂದು ಸಾರ್ವಜನಿಕವಾಗಿಯೇ ಹೆಮ್ಮೆಯಿಂದ ಹೇಳಿಕೊಳ್ಳುವುದರ ಅರ್ಥವೇನು? ಮುಂತಾದ ಪ್ರಶ್ನೆಗಳು ಭಾಗವತ್‌ ಅವರ ಸಂಘ ರಾಜಕೀಯೇತರ ಸಂಘಟನೆ ಎಂಬ ಮಾತುಗಳಲ್ಲಿ ಖಂಡಿತವಾಗಿಯೂ ನಂಬಿಕೆ ಹುಟ್ಟಿಸಲಾರವು.

ಹಾಗೇ ಭ್ರಾತೃತ್ವ ಮತ್ತು ಭಾರತೀಯ ಸಂಸ್ಕೃತಿಯ ಕುರಿತ ಅವರ ಮಾತುಗಳ ಆಶಯ ನಿಜಕ್ಕೂ ಸ್ವಾಗತಾರ್ಹ. ಆದರೆ, ವಾಸ್ತವದಲ್ಲಿ ಮೋಹನ್ ಭಾಗವತ್ ಅವರು ಪ್ರತಿನಿಧಿಸುತ್ತಿರುವ ಸಂಘಪರಿವಾರ ಮತ್ತು ಅದರೊಂದಿಗೆ ಒಂದಿಲ್ಲಾ ಒಂದು ಬಗೆಯಲ್ಲಿ ಆಪ್ತ ನಂಟು ಹೊಂದಿರುವ ಹಿಂದೂ ಸಂಘಟನೆಗಳು ದೇಶದಲ್ಲಿ ನಡೆಸುತ್ತಿರುವ ಚಟುವಟಿಕೆಗಳು, ಅಂತಹ ಭ್ರಾತೃತ್ವ ಮತ್ತು ಸಹಬಾಳ್ವೆಯನ್ನು ಹೇಗೆ ಪೊರೆಯುತ್ತಿವೆ? ಎಂಬ ಪ್ರಶ್ನೆ ಕಾಡದೇ ಇರದು. ಅಂತಹ ಪ್ರಶ್ನೆಯ ಹಿನ್ನೆಲೆಯಲ್ಲಿ ಸದ್ಯದ ದೇಶದ ಸ್ಥಿತಿಯನ್ನು ನೋಡಿದರೆ; ಕಾಣುವ ವಾಸ್ತವತೆ ಬೇರೆಯದ್ದೇ.

ಗೋರಕ್ಷಣೆ, ಹಿಂದುತ್ವ, ಸಂಸ್ಕೃತಿ ದ ರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರು, ದಲಿತರು, ವಿಚಾರವಾದಿಗಳು, ಪತ್ರಕರ್ತರ ಮೇಲೆ ನಡೆಯುತ್ತಿರುವ ಪ್ರತ್ಯಕ್ಷ ಮತ್ತು ಪರೋಕ್ಷ ದಾಳಿಗಳು, ಕೊಲೆ, ದೌರ್ಜನ್ಯಗಳು ಯಾವ ಭ್ರಾತೃತ್ವವನ್ನು ಪ್ರತಿಪಾದಿಸುತ್ತಿವೆ? ಹಿಂದೂ ಮತ್ತು ಹಿಂದುತ್ವದ ಹೆಸರಿನಲ್ಲಿಯೇ ನಡೆಯುತ್ತಿರುವ ಈ ಅಟ್ಟಹಾಸ ಮತ್ತು ಕಾನೂನುಬಾಹಿರ ಕೃತ್ಯಗಳ ವಿಷಯದಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರದ ಮೌನ ಮತ್ತು ಕೆಲವೊಮ್ಮೆ ಮೌನಸಮ್ಮತಿಯ ವಿಷಯದಲ್ಲಿ ಭಾಗವತರು ಹೇಳಿದಂತೆ, “ಸಹೋದರತೆಯೇ ದೇಶದ ಬಲ, ವೈವಿಧ್ಯತೆಯಲ್ಲಿ ಏಕತೆ ತರಲು ಭ್ರಾತೃತ್ವವೇ ಆಧಾರ” ಎನ್ನುವ ಮತ್ತು ‘ವಿಶ್ವ ಭ್ರಾತೃತ್ವ’ದಲ್ಲಿ ನಂಬಿಕೆ ಇಟ್ಟಿರುವ ಆರ್‌ಎಸ್‌ಎಸ್‌ ಈವರೆಗೆ ಕುರುಡಾಗಿದ್ದು ಏಕೆ? ಅದರ ಆ ಜಾಣ ಮೌನದ ಅರ್ಥವೇನು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬಹುದೆ?

ಹಾಗೇ, ಕವಿ ರವೀಂದ್ರನಾಥ ಠಾಗೋರರ ಗೀತೆಯೊಂದನ್ನು ಉಲ್ಲೇಖಿಸುತ್ತಾ, ಭಯಮುಕ್ತ, ನಿರ್ಭೀತಿಯ ಸಮಾಜ, ಸಚ್ಛಾರಿತ್ರ್ಯದ ಸ್ವತಂತ್ರ ವ್ಯಕ್ತಿತ್ವ ಕಟ್ಟುವ ಸಂಘದ ಉದ್ದೇಶದ ಬಗ್ಗೆಯೂ ಹೇಳಿದ್ದಾರೆ. ಆದರೆ, ಸದ್ಯ ದೇಶದ ಅಲ್ಪಸಂಖ್ಯಾತರು, ದಲಿತರು, ಉದಾರವಾದಿ ಚಿಂತಕರು, ಜಾತ್ಯತೀತ ಸಂವಿಧಾನದ ಆಶಯಕ್ಕೆ ಬದ್ಧರಾದವರು ಎದುರಿಸುತ್ತಿರುವ ಪರಿಸ್ಥಿತಿ ಭಯಮುಕ್ತವಾಗಿದೆಯೇ? ದಾಳಿಯ, ಹಲ್ಲೆಯ, ಕೊಲೆಯ ಭೀತಿಯಿಂದ ಮುಕ್ತರಾಗಿ ಮಾತನಾಡುವ, ಅಭಿಪ್ರಾಯ ಮಂಡಿಸುವ, ಸರ್ಕಾರ ಮತ್ತು ಆಳುವ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಪರಿಸ್ಥಿತಿ ಇದೆಯೇ? ಎಂಬ ಪ್ರಶ್ನೆ ಹುಟ್ಟುವುದು ಸಹಜ ಮತ್ತು ಅಂತಹ ಪ್ರಶ್ನೆಗಳಿಗೆ ಸಂಘದ ಸರಸಂಘಚಾಲಕರು ಯಾವ ಉತ್ತರ ಕೊಡಬಲ್ಲರು ಎಂಬುದೂ ಅಷ್ಟೇ ಕುತೂಹಲಕಾರಿ. ಅಚ್ಚರಿಯ ವಿಷಯವೆಂದರೆ, ಸದ್ಯದ ಭಾರತೀಯ ಪ್ರಜಾಪ್ರಭುತ್ವ ಮತ್ತು ಸಮಾಜ ಎದುರಿಸುತ್ತಿರುವ ಈ ಯಾವ ಜ್ವಲಂತ ವಿಷಯಗಳೂ ಸಂಘದ ಮುಖ್ಯಸ್ಥರ ಮಾತುಗಳಲ್ಲಿ ನುಸುಳಲೇ ಇಲ್ಲ!

ನಿಸ್ವಾರ್ಥ ಮತ್ತು ಪ್ರಾಮಾಣಿಕತೆಯಿಂದ ದೇಶದ ಕೆಲಸ ಮಾಡುವ ಎಲ್ಲರೊಂದಿಗೂ ನಾವು ಕೈಜೋಡಿಸುತ್ತೇವೆ ಎಂದಿದ್ದಾರೆ ಆರ್‌ಎಸ್‌ಎಸ್ ನಾಯಕರು. ಆದರೆ, ಸಂಘ ಮತ್ತು ಅದರ ಪರಿವಾರಗಳು ಯಾರೊಂದಿಗೆ ಕೈಜೋಡಿಸುತ್ತವೆ ಮತ್ತು ರಾಜಕೀಯವಾಗಿ ಯಾರು ಅವರ ಅಜ್ಞಾನುವರ್ತಿಗಳು ಎಂಬುದು ದೇಶದ ಜನರಿಗೆ ತಿಳಿಯದ ಸಂಗತಿಯೇನಲ್ಲ. ಭಾರತೀಯ ಜನತಾ ಪಕ್ಷದೊಂದಿಗಿನ ಸಂಘದ ನಂಟನ್ನು ರಾಜಕೀಯವಾಗಿ ಅಲ್ಲದೆ ಬೇರೆ ಯಾವ ರೀತಿಯಲ್ಲಿ ಅರ್ಥೈಸುವುದು ಸಾಧ್ಯ? ಹಾಗಾದರೆ, ಭಾರತೀಯ ಜನತಾ ಪಕ್ಷದವರು ಮಾತ್ರ ದೇಶದ ಏಳಿಗೆಗಾಗಿ ನಿಸ್ವಾರ್ಥ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ, ಉಳಿದ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಸ್ಥೆಗಳು, ಮುಂತಾದ ಸಾರ್ವಜನಿಕ ರಂಗದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳು ದೇಶಕ್ಕಾಗಿ ನಿಸ್ವಾರ್ಥ ಮತ್ತು ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ ಎಂಬ ತೀರ್ಮಾನ ಸಂಘದ್ದೇ?

ಇದನ್ನೂ ಓದಿ : ಕ್ರೈಸ್ತರ ವಿರುದ್ಧ ಸುಳ್ಳುಸುದ್ದಿ ಹಬ್ಬಿಸಿದ ಆರ್‌ಎಸ್‌ಎಸ್‌ ಹಿನ್ನೆಲೆಯ ರತನ್‌ ಶಾರದಾ

ಆ ಹಿನ್ನೆಲೆಯಲ್ಲಿ; ಹಿಂದೂ ಸಂಘಟನೆಯ ಮುಖ್ಯಸ್ಥರ ಈ ಮಾತುಗಳು ಪ್ರತಿ ಬಾರಿಯ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷಕ್ಕೆ ಪೂರಕ ವಾತಾವರಣ ನಿರ್ಮಿಸಿಕೊಡುವ, ಅದರ ಸಿದ್ಧಾಂತ ಮತ್ತು ತತ್ವಕ್ಕೆ ಬಹುಸಂಖ್ಯಾತರ ಬೆಂಬಲವನ್ನು ಇನ್ನಷ್ಟು ವಿಸ್ತರಿಸುವ ರಾಷ್ಟ್ರೀಯ ಸ್ವಯಂ ಸೇವಕಸಂಘದ ಸಂಪ್ರದಾಯದ ಮುಂದುವರಿಕೆ ವಿನಃ ಮತ್ತೇನಲ್ಲ ಎನಿಸದೇ ಇರದು.

ನೂರು ನಂಬಿಕೆ, ನೂರು ಶ್ರದ್ಧೆಯ ವೈವಿಧ್ಯಮಯ ಭಾರತೀಯ ಸಂಸ್ಕೃತಿಯಲ್ಲಿ ಧರ್ಮ, ಜಾತಿ, ಪಂಥಗಳ ಮೀರಿದ ಸಹಬಾಳ್ವೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಂತಹ ಉದಾತ್ತ ಮತ್ತು ಉದಾರವಾದಿ ಪರಂಪರೆಗೆ ತದ್ವಿರುದ್ಧವಾದ ಏಕ ರಾಷ್ಟ್ರ(ಹಿಂದೂರಾಷ್ಟ್ರ), ಏಕ ಧರ್ಮ, ಏಕ ಸಂಸ್ಕೃತಿಯ ಎರಕದ ಪಾಶ್ಚಿಮಾತ್ಯ ಕಲ್ಪನೆಯನ್ನು ಎರವಲು ಪಡೆದಿರುವ ಸಂಘ, ಪ್ರತಿಪಾದಿಸಿದ ಮತ್ತು ಪ್ರತಿಪಾದಿಸುತ್ತಿರುವ ತತ್ವಗಳು ದೇಶದ ಸಾಮಾಜಿಕ ಮತ್ತು ರಾಜಕೀಯ ಬದುಕನ್ನು ಹೇಗೆ ಬದಲಿಸಿವೆ ಎಂಬುದು ಕಣ್ನೆದುರಿನ ಸತ್ಯ. ಅದಕ್ಕೆ ಕನ್ನಡಿ ಬೇಕಿಲ್ಲ.

ಹಾಗಾಗಿ, ಸಂಘದ ರಾಜಕೀಯ ವೇದಿಕೆ ಎಂದೇ ಹೇಳಲಾಗುವ ಬಿಜೆಪಿ ನೇತೃತ್ವದ ಸರ್ಕಾರ ನಾಲ್ಕೂವರೆ ವರ್ಷದ ಆಡಳಿತ ಪೂರ್ಣಗೊಳಿಸಿ, ಮತ್ತೊಂದು ಚುನಾವಣೆ ಎದುರಿಸಲು ಸಜ್ಜಾಗಿರುವ ಹೊತ್ತಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರ ಈ ‘ಉದಾರವಾದಿ’ ನಿಲುವಿನ ಹೊಸ ‘ವಿಷನ್’ ಮಂಡನೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಲವು ಸಂದೇಶಗಳನ್ನು ರವಾನಿಸುತ್ತಿದೆ ಎಂಬುದು ಗಮನಾರ್ಹ.

ಒಂದು ಕಡೆ ಬಿಜೆಪಿ ನೇತೃತ್ವದ ಸರ್ಕಾರ ಕಳೆದ ಚುಣಾವಣೆಯ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಬಹುತೇಕ ಸಾಲುಸಾಲು ವೈಫಲ್ಯ ಕಂಡಿದೆ. ಪ್ರಧಾನಿ ಮೋದಿಯವರು ಆ ಹೊತ್ತಿಗೆ ದೇಶದ ಬಹುಸಂಖ್ಯಾತ ಹಿಂದೂಗಳಲ್ಲಿ ಹುಟ್ಟಿಸಿದ್ದ ರಾಮರಾಜ್ಯದ ಕನಸು, ಬಹುತೇಕ ಸರ್ಕಾರದ ಅವಧಿ ಪೂರ್ಣಗೊಂಡರೂ ಕನಸಾಗಿಯೇ ಉಳಿದಿದೆ. ಬೆಲೆ ಏರಿಕೆ, ಹಣದುಬ್ಬರ, ಕಪ್ಪುಹಣ, ನಿರುದ್ಯೋಗ, ಕೃಷಿ ಬಿಕ್ಕಟ್ಟು ಸೇರಿದಂತೆ ಜನಸಾಮಾನ್ಯರನ್ನು ಕಾಡುತ್ತಿರುವ ಸಮಸ್ಯೆಗಳನ್ನು ದೂರಮಾಡುವ ಅವರ ಭರವಸೆಯ ಮಾತುಗಳಿಗೆ ಬದಲಾಗಿ, ವಾಸ್ತವದಲ್ಲಿ ಆ ಎಲ್ಲಾ ಸಮಸ್ಯೆಗಳು ಇನ್ನಷ್ಟು ಭೀಕರ ಸ್ವರೂಪ ಪಡೆದಿವೆ. ಸರ್ಕಾರದ ಇನ್ನಿಲ್ಲದ ಯತ್ನಗಳ ಹೊರತಾಗಿಯೂ ರೂಪಾಯಿ ಮೌಲ್ಯ ಪಾತಾಳಮುಖಿಯಾಗಿದ್ದರೆ, ಇಂಧನ ಬೆಲೆ ಗಗನಮುಖಿಯಾಗಿದೆ. ಪರಿಣಾಮವಾಗಿ ಮೋದಿ ಮತ್ತು ಹಿಂದುತ್ವದ ಕಟ್ಟಾ ಭಕ್ತರು ಕೂಡ ನುಂಗಲೂ ಆಗದೆ, ಉಗುಳಲೂ ಆಗದ ಸಂದಿಗ್ಧ ಸ್ಥಿತಿಯಲ್ಲಿ ಬೇಯುತ್ತಿದ್ದಾರೆ.

ಸರ್ಕಾರದ ಸಾಲು-ಸಾಲು ವೈಫಲ್ಯಗಳ ನಡುವೆ, ಹಿಂದುತ್ವ, ಗೋರಕ್ಷಣೆ, ಮರ್ಯಾದಾಹತ್ಯೆ, ದಲಿತ ವಿರೋಧಿ ಮನಸ್ಥಿತಿಗಳ ಪರಿಣಾಮವಾಗಿ ಭಾರತೀಯ ಸಮಾಜದ ದಲಿತರು, ಹಿಂದುಳಿದವರು ಮತ್ತು ಮುಖ್ಯವಾಗಿ ಅಲ್ಪಸಂಖ್ಯಾತರು ಭೀತಿಯಲ್ಲಿ ಬದುಕುವಂತಾಗಿದೆ. ವಿಚಾರವಾದಿಗಳ ಸರಣಿ ಕೊಲೆಗಳು ಹಿಂದೂ ಭಯೋತ್ಪಾದನೆಯ ಭೀಕರ ಸ್ವರೂಪವನ್ನು ಬಯಲುಮಾಡಿವೆ. ಏಕ ರಾಷ್ಟ್ರ, ಏಕ ಧರ್ಮದ ಘೋಷಣೆಗಳಿಂದ ಪ್ರೇರಣೆಗೊಂಡಿರುವ ಇಂತಹ ಅಸಹನೆ, ಹಿಂಸೆ ಮತ್ತು ಭೀತಿ ಸೃಷ್ಟಿಯ ಪ್ರಯತ್ನಗಳು ಅಂತಿಮವಾಗಿ ಮುಂಚೂಣಿ ಹಿಂದೂ ಸಂಘಟನೆ‌ ಮತ್ತು ಅದರ ಅಂಗಸಂಸ್ಥೆಗಳು ಹಾಗೂ ಆ ವ್ಯವಸ್ಥೆಗೆ ಬೆಂಗಾವಲಾಗಿರುವ ಆಡಳಿತ ವ್ಯವಸ್ಥೆಗೆ ಎಡೆಗೆ ಬೆಟ್ಟುಮಾಡುತ್ತಿವೆ.

ಮತ್ತೊಂದು ಚುನಾವಣೆ ಗೆದ್ದು ಅಧಿಕಾರ ಹಿಡಿಯುವ ಉಮೇದಿನಲ್ಲಿರುವ ಬಿಜೆಪಿಗೆ ತನ್ನ ಸರ್ಕಾರದ ವೈಫಲ್ಯಗಳು ಮತ್ತು ಯಾವುದೇ ಸ್ವಸ್ಥ ಸಮಾಜ ಒಪ್ಪಿಕೊಳ್ಳಲಾಗದ, ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದ ಈ ಅಹಿತಕರ ಬೆಳವಣಿಗೆಗಳು ಸಹಜವಾಗೇ ಆತಂಕ ಹುಟ್ಟಿಸಿವೆ. ಆ ಹಿನ್ನೆಲೆಯಲ್ಲಿ ದೇಶದ ಜನತೆಯ ಕಣ್ಣಲ್ಲಿ ತನ್ನ ಹಿಂದುತ್ವ ಮತ್ತು ಬಿಜೆಪಿಯ ಕುರಿತು ಇರುವ ಗೊಂದಲ ಮತ್ತು ಅನುಮಾನಗಳನ್ನು ದೂರ ಮಾಡಿಕೊಳ್ಳುವ ಅವಕಾಶವಾಗಿಯೂ ಸಂಘ ಈ ಮೂರು ದಿನಗಳ ವಿಶೇಷ ಕಾರ್ಯಕ್ರಮವನ್ನು ಬಳಸಿಕೊಂಡಿದೆ ಎಂದರೆ ತಪ್ಪಾಗಲಾರದು.

ಇದು ಸದ್ಯದ, ತತಕ್ಷಣದ ಗುರಿಯಾಗಿರಬಹುದು. ಅದೇ ಹೊತ್ತಿಗೆ; ದಶಕಗಳ ಕಾಲ ದೇಶದ ಮುಖ್ಯವಾಹಿನಿಯಿಂದ ದೂರವೇ ಉಳಿದು, ತೆರೆಮರೆಯಲ್ಲಿಯೇ ಉಳಿದಿದ್ದ ಸಂಘಕ್ಕೆ ತನ್ನದೇ ಹಿಂದುತ್ವವಾದಿ ಸರ್ಕಾರ ದೇಶದ ಚುಕ್ಕಾಣಿ ಹಿಡಿದ ಬಳಿಕ ಆಡಳಿತ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸ ಅವಕಾಶಗಳು ಮತ್ತು ಮನ್ನಣೆಯ ಸ್ಥಾನಮಾನಗಳು ತೆರೆದುಕೊಂಡಿವೆ. ಈ ಅವಕಾಶವನ್ನೇ ಬಳಸಿಕೊಂಡು, ತನಗಂಟಿರುವ ಮತ್ತು ಕೆಲವೊಮ್ಮೆ ಆರೋಪಿಸಲಾಗಿರುವ ಕಳಂಕಗಳನ್ನು ಮರೆಮಾಚಿ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತನ್ನ ವರ್ಚಸ್ಸಿನ ನೆಲೆಯನ್ನು ವಿಸ್ತರಿಸಿಕೊಳ್ಳುವುದು, ಜನಮನ್ನಣೆಯ ಮಾನ್ಯತೆ ನೆಲೆಯನ್ನು ಹಿಗ್ಗಿಸುವುದು ಮತ್ತು ಆ ಮೂಲಕ ಮುಖ್ಯವಾಹಿನಿಯಲ್ಲಿ ಇನ್ನಷ್ಟು ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು ಈ ವಿಶೇಷ ಕಾರ್ಯಕ್ರಮದ ಉದ್ದೇಶ ಎಂಬುದನ್ನು ಭಾಗವತ್ ಅವರ ಮಾತುಗಳೇ ಸ್ಪಷ್ಟಪಡಿಸುತ್ತಿವೆ. ಆ ಹಿನ್ನೆಲೆಯಲ್ಲಿ ಇದು ಪಕ್ಕಾ ರಾಜಕೀಯ ತಂತ್ರಗಾರಿಕೆಯ ನಡೆ ಎಂಬುದರಲ್ಲಿ ಅನುಮಾನವಿಲ್ಲ.

--

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More