ಕರ್ನಾಟಕ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗಿ ರಾಜ್ಯಕ್ಕಾದ ಲಾಭವೇನು?

ರಫೇಲ್ ಒಪ್ಪಂದದ ವಿಚಾರವಾಗಿ ರಾಜ್ಯದ ಮತ್ತು ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುವುದು ನಿರ್ಮಲಾ ಸೀತಾರಾಮನ್ ಅವರ ಕರ್ತವ್ಯವಾಗಿತ್ತು. ಆದರೆ, ಅವರು ಅವಕಾಶವಾದಿ ರಾಜಕಾರಣ ಮಾಡಲು ಮುಂದಾಗಿ ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಸರಣಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ

ಕಳೆದ ಕೆಲವು ತಿಂಗಳಿಂದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ರಫೇಲ್ ಒಪ್ಪಂದ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ರಫೇಲ್ ಒಪ್ಪಂದದ ಬಗ್ಗೆ ಪ್ರಶ್ನೆ ಎತ್ತುತ್ತಿರುವ ಬೆರಳೆಣಿಕೆಯ ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ಪ್ರಮುಖವಾಗಿ ಎರಡು ಪ್ರಶ್ನೆಗಳನ್ನು ಮುಂದಿಟ್ಟಿವೆ. ಮೊದಲನೆಯ ಪ್ರಶ್ನೆ, ರಫೇಲ್ ಒಪ್ಪಂದದ ಒಟ್ಟು ಮೊತ್ತವೇನು? ಎರಡನೆಯ ಪ್ರಶ್ನೆ, ರಾಷ್ಟ್ರದ ರಕ್ಷಣಾ ಉತ್ಪನ್ನಗಳ ನಿರ್ಮಾಣದಲ್ಲಿ ದೊಡ್ಡ ಹೆಸರು ಮಾಡಿದ ಎಚ್‌ಎಎಲ್ ಬದಲಾಗಿ ಈಗಷ್ಟೇ ಸ್ಥಾಪಿಸಲಾಗಿರುವ ಅನಿಲ್ ಅಂಬಾನಿಯ ಕಂಪನಿ ಜೊತೆ ಏಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಕೇಂದ್ರ ಸರ್ಕಾರದ ಬಳಿ ಈ ಎರಡೂ ಪ್ರಶ್ನೆಗಳಿಗೆ ಉತ್ತರವಿಲ್ಲ.

ಬಿಜೆಪಿ ಸರ್ಕಾರ ಮುಖ್ಯ ಪ್ರಶ್ನೆಗಳಿಗೆ ಉತ್ತರಿಸದೆ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿದೆ. ರಾಹುಲ್ ಗಾಂಧಿಯವರು ರಫೇಲ್ ಒಪ್ಪಂದವನ್ನು ದೂಷಿಸುವಾಗ ದಿನಕ್ಕೊಂದು ಬೆಲೆಯನ್ನು ಮುಂದಿಡುತ್ತಿದ್ದಾರೆ ಎನ್ನುವುದು ಬಿಜೆಪಿಯ ಸಮರ್ಥನೆ. ಅನಿಲ್ ಅಂಬಾನಿಯವರ ಕಂಪನಿಗೆ ಒಪ್ಪಂದವನ್ನು ನೀಡಿರುವುದರಲ್ಲಿ ಯಾವುದೇ ಅಕ್ರಮವಾಗಿಲ್ಲ ಎಂದೂ ಬಿಜೆಪಿ ಹೇಳುತ್ತಿದೆ. ಆದರೆ, ಎಚ್‌ಎಎಲ್ ಬದಲಾಗಿ ಅನಿಲ್ ಅಂಬಾನಿ ಕಂಪನಿಗೆ ಏಕೆ ಒಪ್ಪಂದವನ್ನು ಕೊಡಲಾಗಿದೆ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಕೇಂದ್ರದ ಬಳಿ ಇಲ್ಲ.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಫೇಲ್ ಒಪ್ಪಂದದ ಸಮರ್ಥನೆಯಲ್ಲಿ ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನೇ ನೀಡುತ್ತ ಬಂದಿದ್ದಾರೆ. ರಫೇಲ್ ಒಪ್ಪಂದವನ್ನು ಸಮರ್ಥಿಸಿಕೊಳ್ಳಲು ಹಿಂದಿನ ಯುಪಿಎ ಸರ್ಕಾರದ ಮೇಲೆ ಆರೋಪ ಹೊರಿಸಲು ಹಲವು ಪತ್ರಿಕಾಗೋಷ್ಠಿಗಳನ್ನು ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ. ಸೆಪ್ಟೆಂಬರ್ ೧೪ರಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ, “ಹಿಂದಿನ ರಕ್ಷಣಾ ಸಚಿವ ಎ ಕೆ ಆಂಟನಿ ಅವರು ರಫೇಲ್ ಒಪ್ಪಂದದಲ್ಲಿ ಮಧ್ಯಪ್ರವೇಶಿಸಿ ಅದನ್ನು ತಡಮಾಡಿದರು. ಆದರೆ, ಈ ಬಾರಿ ಇದು ಕೇವಲ ಎರಡು ಸರ್ಕಾರಗಳ ಒಪ್ಪಂದವಾಗಿದೆಯೇ ವಿನಾ ಯಾರೂ ಮಧ್ಯಪ್ರವೇಶಿಸಿಲ್ಲ,” ಎಂದು ಸಮರ್ಥಿಸಿಕೊಂಡರು.

ಆದರೆ, ಎಚ್‌ಎಎಲ್‌ ಮಾಜಿ ಅಧ್ಯಕ್ಷರಾದ ಟಿ ಸುವರ್ಣ ರಾಜು ಅವರು, “ಎಚ್‌ಎಎಲ್‌ಗೆ ರಫೇಲ್ ಯುದ್ಧ ವಿಮಾನಗಳನ್ನು ಮಾಡುವ ಕ್ಷಮತೆ ಇದ್ದರೂ ಕೇಂದ್ರ ಸರ್ಕಾರ ಅವಕಾಶ ಕೊಡಲಿಲ್ಲ,” ಎಂದು ಹೇಳಿದ ನಂತರ ನಿರ್ಮಲಾ ಸೀತಾರಾಮನ್ ಅವರ ವರಸೆ ಬದಲಾಗಿದೆ. ಈಗ ಅವರು, “ಕಾಂಗ್ರೆಸ್ ಸರ್ಕಾರವೇ ಎಚ್‌ಎಎಲ್‌ಗೆ ರಫೇಲ್ ಒಪ್ಪಂದವನ್ನು ಕೊಡಲು ಸಿದ್ಧವಿರಲಿಲ್ಲ,” ಎಂದು ಹೇಳುತ್ತಿದ್ದಾರೆ!

ವಾಸ್ತವದಲ್ಲಿ ಯುಪಿಎ ಸರ್ಕಾರ ರಫೇಲ್ ಒಪ್ಪಂದವನ್ನು ಎಚ್‌ಎಎಲ್‌ಗೆ ನಿರಾಕರಿಸಿದೆಯೇ ಅಥವಾ ಬಿಜೆಪಿ ಸರ್ಕಾರವೇ ಎನ್ನುವುದಕ್ಕಿಂತ ಮುಖ್ಯವಾಗಿ, ನಿರ್ಮಲಾ ಸೀತಾರಾಮನ್ ಅವಧಿಯಲ್ಲಿ ಎಚ್‌ಎಎಲ್‌ ಪ್ರಮುಖ ರಕ್ಷಣಾ ಒಪ್ಪಂದವನ್ನು ಕಳೆದುಕೊಂಡಿದೆ ಎನ್ನುವುದು ಅತೀ ಮುಖ್ಯ ವಿಚಾರ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಂದ ಕರ್ನಾಟಕ ಮೂಲದ ರಕ್ಷಣಾ ಉತ್ಪನ್ನಗಳ ತಯಾರಕ ಸಂಸ್ಥೆಯಾದ ಎಚ್ಎಎಲ್‌ಗೆ ಬಹಳ ನಿರೀಕ್ಷೆ ಇತ್ತು. ಆದರೆ, ರಾಜ್ಯದ ಅಥವಾ ರಾಷ್ಟ್ರದ ಹಿತಾಸಕ್ತಿಗಿಂತ ನಿರ್ಮಲಾ ಸೀತಾರಾಮನ್ ಅವರಿಗೆ ಪಕ್ಷದ ಹಿತಾಸಕ್ತಿಯೇ ಮುಖ್ಯವಾದಂತಿದೆ. ತಾವು ಪ್ರತಿನಿಧಿಸುವ ರಾಜ್ಯದಲ್ಲಿ ನೆಲೆ ನಿಂತಿರುವ ಸಾರ್ವಜನಿಕ ಉದ್ಯಮವಾದ ಎಚ್‌ಎಎಲ್‌ ಹಿತಾಸಕ್ತಿಯನ್ನು ಕಡೆಗಣಿಸಿ, ತಮ್ಮ ಪಕ್ಷಕ್ಕೆ ಹತ್ತಿರವಾಗಿರುವ, ತಮ್ಮ ಪಕ್ಷದ ಹಿತಾಸಕ್ತಿ ಕಾಪಾಡಲು ನೆರವಾಗಲು ಅವರು ಮುಂದಾದರು.

ಅನಿಲ್ ಅಂಬಾನಿಯವರ ಇನ್ನೂ ಕಣ್ಣು ಬಿಡದ ಸಂಸ್ಥೆಗೆ ರಫೇಲ್ ಒಪ್ಪಂದವನ್ನು ನೀಡುವ ನಿರ್ಧಾರವನ್ನು ಬಿಜೆಪಿಯ ಸಚಿವ ಸಂಪುಟ ಕೈಗೊಂಡಾಗ ಮೊದಲಿಗೆ ನಿರ್ಮಲಾ ಸೀತಾರಾಮನ್ ಅವರು ವಿರೋಧ ವ್ಯಕ್ತಪಡಿಸಬೇಕಾಗಿತ್ತು. ತಮ್ಮ ರಾಜ್ಯದ ಮತ್ತು ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುವುದು ಅವರ ಕರ್ತವ್ಯವಾಗಿತ್ತು. ಆದರೆ, ನಿರ್ಮಲಾ ಸೀತಾರಾಮನ್ ಅವರು ಅವಕಾಶವಾದಿ ರಾಜಕಾರಣ ಮಾಡಲು ಮುಂದಾದರು. ತಮ್ಮ ಪಕ್ಷದ ನಿರ್ಧಾರವನ್ನು ಪ್ರಶ್ನಿಸುವುದು ಬಿಡಿ, ಸಮರ್ಥಿಸಿಕೊಳ್ಳಲು ಅವರು ಮುಂದಾಗಿದ್ದಾರೆ.

“ಡಸಾಲ್ಟ್ ಜೊತೆಗಿನ ಮೊದಲಿನ ಮಾತುಕತೆಯನ್ನು ಮುಗಿಸಿ ಫ್ರೆಂಚ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಲ್ಲಿ, ಎಚ್‌ಎಎಲ್‌ಗೆ ರಫೇಲ್ ಯುದ್ಧವಿಮಾನಗಳನ್ನು ನಿರ್ಮಿಸುವ ಶಕ್ತಿ ಇತ್ತು. ಎಚ್‌ಎಎಲ್ ಬಳಿ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಮಾಡುವ ಕ್ಷಮತೆ ಇದೆ," ಎಂದು ಸುವರ್ಣ ರಾಜು ಹೇಳಿದ್ದಾರೆ. ಕೇಂದ್ರ ಸರ್ಕಾರ ರಫೇಲ್ ಒಪ್ಪಂದದ ಕುರಿತ ವಿವರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಹಂಚಿಕೊಳ್ಳಲು ಏಕೆ ಹಿಂಜರಿಯುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದೂ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ, ಸುವರ್ಣ ರಾಜು ಅವರ ಅಭಿಪ್ರಾಯ ಬಹಿರಂಗವಾಗುತ್ತಿದ್ದಂತೆಯೇ ನಿರ್ಮಲಾ ಸೀತಾರಾಮನ್ ಯುಪಿಎ ಸರ್ಕಾರದ ಮೇಲೆಯೇ ಹೊಣೆ ಹೊರಿಸಲು ಮುಂದಾದರು. “ಉತ್ಪಾದನಾ ನಿಯಮಗಳ ವಿಚಾರವಾಗಿ ಎಚ್‌ಎಎಲ್ ಸಂಸ್ಥೆಯು ಡಸಾಲ್ಟ್ ಸಂಸ್ಥೆಯ ಜೊತೆಗೆ ವ್ಯವಹಾರವನ್ನು ಒಪ್ಪದೆ ಇದ್ದ ಕಾರಣ ಯುಪಿಎ ಸರ್ಕಾರದ ಸಂದರ್ಭದಲ್ಲಿಯೇ ರಫೇಲ್ ಒಪ್ಪಂದದಿಂದ ಎಚ್‌ಎಎಲ್‌ ಸಂಸ್ಥೆಯನ್ನು ಪಕ್ಕಕ್ಕೆ ಇರಿಸಲಾಗಿತ್ತು," ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಆದರೆ, ಮೇಕ್‌ ಇನ್ ಇಂಡಿಯಾದ ಬಗ್ಗೆ ಮಾತನಾಡುವ ಪಕ್ಷವೊಂದು ಪ್ರಮುಖ ಒಪ್ಪಂದವೊಂದನ್ನು ಭಾರತದ ಸಾರ್ವಜನಿಕ ಉದ್ಯಮಕ್ಕೆ ಕೊಡಲು ಮುಂದಾಗದಿರುವುದು ಅಚ್ಚರಿ ಅಲ್ಲವೇ? ಎಚ್‌ಎಎಲ್ ಸಂಸ್ಥೆ ನೆಲೆ ನಿಂತಿರುವ ರಾಜ್ಯದಿಂದಲೇ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿರುವ ರಕ್ಷಣಾ ಸಚಿವರು, ತಮ್ಮ ರಾಜ್ಯದ ಸಂಸ್ಥೆಗೆ ಅತ್ಯಾಧುನಿಕ ಯುದ್ಧವಿಮಾನಗಳನ್ನು ನಿರ್ಮಿಸುವ ಕ್ಷಮತೆ ಇಲ್ಲ ಎಂದು ಹೇಳುತ್ತಾರೆ. ಇದು ಬಿಜೆಪಿಯ ಸಚಿವರ ಬದ್ಧತೆ ಎಲ್ಲಿದೆ ಎನ್ನುವುದಕ್ಕೆ ಸಾಕ್ಷಿ. ಸಚಿವರಿಗೆ ರಾಜ್ಯ ಅಥವಾ ರಾಷ್ಟ್ರದ ಬಗೆಗೆ ಇರುವುದಕ್ಕಿಂತ ಹೆಚ್ಚಿನ ಬದ್ಧತೆ ತಮ್ಮ ಪಕ್ಷದ ಕಡೆಗೆ ಮತ್ತು ಪಕ್ಷದ ನಿರ್ಧಾರಗಳ ಕಡೆಗಿದೆ ಎನ್ನುವುದು ಸ್ಪಷ್ಟ. ಇಲ್ಲದೆ ಇದ್ದರೆ ರಫೇಲ್ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಲು ರಕ್ಷಣಾ ಸಚಿವರು ಹಿಂಜರಿಯುತ್ತಿರುವುದೇಕೆ?

ಇದನ್ನೂ ಓದಿ : ಫ್ರೆಂಚ್ ಮಾಧ್ಯಮಗಳಲ್ಲೂ ಸದ್ದು ಮಾಡಿದ ರಫೇಲ್ ಡೀಲ್ ಒಪ್ಪಂದದ ಸುದ್ದಿ

ಸಂದರ್ಶನವೊಂದರಲ್ಲಿ ಮಾತನಾಡುತ್ತ ನಿರ್ಮಲಾ ಸೀತಾರಾಮನ್ ಅವರು, “ಕಾಂಗ್ರೆಸ್ ಪಕ್ಷ ಎಚ್‌ಎಎಲ್‌ ಅನ್ನು ಪ್ರೀತಿಸುತ್ತಿದ್ದರೆ, ಯುಪಿಎ ಸರ್ಕಾರದ ಅವಧಿಯಲ್ಲಿ ಏಕೆ ರಫೇಲ್ ಒಪ್ಪಂದಕ್ಕೆ ಸಹಿ ಹಾಕಿಲ್ಲ?” ಎಂದು ಪ್ರಶ್ನಿಸಿದ್ದಾರೆ. “ಎಚ್‌ಎಎಲ್‌ ಅನ್ನು ಅಲಕ್ಷಿಸಿದೆ ಎಂದು ಕೂಗುವ ಕಾಂಗ್ರೆಸ್, ತನ್ನ ಅಧಿಕಾರಾವಧಿಯಲ್ಲಿ ಫ್ರೆಂಚ್ ಸಂಸ್ಥೆಯ ಜೊತೆಗೆ ಒಪ್ಪಂದಕ್ಕೆ ಏಕೆ ಸಹಿ ಹಾಕಿಲ್ಲ? ಎಚ್‌ಎಎಲ್ ಸಂಸ್ಥೆಯ ಉತ್ಪಾದನೆಯೂ ಯುಪಿಎ ಅಧಿಕಾರಾವಧಿಯಲ್ಲಿ ಕುಂಠಿತವಾಗಿದೆ. ಎಚ್‌ಎಎಲ್ ಸಾಮರ್ಥ್ಯವನ್ನು ವೃದ್ಧಿಸಲು ಕಾಂಗ್ರೆಸ್ ಪ್ರಯತ್ನಿಸಿಲ್ಲ,” ಮೊದಲಾಗಿ ಆರೋಪಗಳನ್ನು ಹೊರಿಸುತ್ತಾರೆ. ಆದರೆ, ಮೋದಿ ಸರ್ಕಾರ ಅಥವಾ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲಿ ಎಚ್‌ಎಎಲ್‌ ಅಭಿವೃದ್ಧಿಗೆ ಏನು ಕೊಡುಗೆಗಳನ್ನು ನೀಡಲಾಗಿದೆ ಎಂದು ಅವರು ಸ್ಪಷ್ಟವಾಗಿ ತಿಳಿಸಿಲ್ಲ.

ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಎಚ್‌ಎಎಲ್ ಸಂಸ್ಥೆಗೆ ರಫೇಲ್ ಒಪ್ಪಂದ ನೀಡದ ಹೊರತಾಗಿ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ರಾಜ್ಯ ಅಥವಾ ದೇಶದ ಜನ, ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ದೇಶದಲ್ಲಿ ಏನು ಅಭಿವೃದ್ಧಿಯಾಗಿದೆ ಎನ್ನುವ ಬಗ್ಗೆ ಈಗ ಆಸಕ್ತಿ ಹೊಂದಿಲ್ಲ. ಕಾಂಗ್ರೆಸ್ ಸರ್ಕಾರವನ್ನು ದೇಶ ೨೦೧೪ರಲ್ಲಿಯೇ ಅಧಿಕಾರದಿಂದ ಕೆಳಗಿಳಿಸಿದೆ. ಆದರೆ, ಮೇಕ್ ಇನ್ ಇಂಡಿಯಾ ಮತ್ತು ಸ್ವದೇಶಿ ಉತ್ಪಾದನೆಯನ್ನು ಹೆಚ್ಚಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಏನು ಬದಲಾವಣೆಗಳನ್ನು ತಂದಿದೆ ಎನ್ನುವುದನ್ನು ತಿಳಿಯಲು ಜನರು ಬಯಸಿದ್ದಾರೆ. ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎನ್ನುವುದನ್ನು ತಿಳಿಯಲು ಕನ್ನಡಿಗರು ಬಯಸಿದ್ದಾರೆ. ಎ ಕೆ ಆಂಟನಿ ಅವರು ಎಚ್‌ಎಎಲ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರೇ ಇಲ್ಲವೇ ಎನ್ನುವ ಇತಿಹಾಸದಿಂದ ಕನ್ನಡಿಗರಿಗೆ ಅಥವಾ ದೇಶಕ್ಕೆ ಉಪಯೋಗವಿಲ್ಲ. ಸದ್ಯ ಅಧಿಕಾರದಲ್ಲಿರುವ ನಿರ್ಮಲಾ ಸೀತಾರಾಮನ್ ಅವರು ಏನು ಮಾಡುತ್ತಿದ್ದಾರೆ ಮತ್ತು ಯಾರ ಹಿತಾಸಕ್ತಿಯನ್ನು ಕಾಪಾಡುತ್ತಿದ್ದಾರೆ ಎನ್ನುವುದು ಮುಖ್ಯ. ಸಂವಿಧಾನಕ್ಕೆ ಬದಲಾಗಿ ಪಕ್ಷಕ್ಕೆ ಬದ್ಧತೆ ತೋರಿಸುವ ಸಚಿವರು ನಮಗೆ ಬೇಕೇ ಎನ್ನುವ ಪ್ರಶ್ನೆಯೂ ಈಗ ಸೀತಾರಾಮನ್ ಅವರ ಬೆನ್ನು ಹತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More