ನಮ್ಮ ಶಾಸಕರ ಶ್ರೀಮಂತಿಕೆ ಬಿಂಬಿಸುತ್ತಿರುವ ಪ್ರತಿಷ್ಠೆ, ಅಹಂಕಾರ, ಆತಂಕಗಳೇನು?

ಎಡಿಆರ್‌ ಪ್ರಕಟಿಸಿದ ದೇಶದ ಶಾಸಕರ ಶ್ರೀಮಂತಿಕೆಯ ಚಿತ್ರಣದಲ್ಲಿ ರಾಜ್ಯದ ಹಿರಿಮೆ ಇದೆ ಎನ್ನುವುದಕ್ಕಿಂತ ಹೆಚ್ಚೆಚ್ಚು ಅಪಾಯದೆಡೆಗೆ ಸಾಗುತ್ತಿದೆಯೇನೋ ಎನ್ನುವ ಆತಂಕವೇ ಎದ್ದುಕಾಣುತ್ತದೆ. ಹಣಬಲದ ಶ್ರೀಮಂತ ಶಾಸಕರು ಹೆಚ್ಚಿದಷ್ಟೂ ಗುಣಬಲದ ಜನಪ್ರತಿನಿಧಿಗಳ ಕೊರತೆ ಕಾಡುತ್ತದೆ

ಕಳೆದ ಒಂದೆರಡು ವಾರ ಕರ್ನಾಟಕ ರಾಜಕಾರಣದಲ್ಲಿ ನಡೆದ ವ್ಯಕ್ತಿ ಪ್ರತಿಷ್ಠೆಯ ಕಾಳಗ ಮತ್ತು ಅದು ಬೇರೆ ರೀತಿಯಲ್ಲಿ ಕಿಡಿ ಎಬ್ಬಿಸುತ್ತಿರುವ ಹೊತ್ತಿಗೆ ಎಡಿಆರ್‌ ಪ್ರಕಟಿಸಿರುವ ರಾಜ್ಯದ ಶಾಸಕರ ಸಿರಿವಂತಿಕೆಯ ವಿವರಗಳು ಏನನ್ನು ಸಾರುತ್ತಿವೆ? ಎರಡೂ ವಿದ್ಯಮಾನಗಳನ್ನು ತುಲನೆ ಮಾಡಿದರೆ ಪ್ರಶ್ನೆಗೆ ಉತ್ತರ ಸಿಕ್ಕಬಹುದು.

ವ್ಯಕ್ತಿ ಪ್ರತಿಷ್ಠೆಯ ಹಣಾಹಣಿ, ಅಘೋಷಿತ ಪಾಳೆಪಟ್ಟುಗಳ ಮೇಲೆ ಹಿಡಿತ ಕಾಯ್ದುಕೊಳ್ಳುವ ಮೇಲಾಟ ಮತ್ತು ಈ ರಾಜಕೀಯ ಗರ್ವ ಪ್ರದರ್ಶನದ ಕೇಂದ್ರವಾಗಿದ್ದವರು ಸಚಿವ ಡಿ ಕೆ ಶಿವಕುಮಾರ್‌ ಮತ್ತು ಜಾರಕಿಹೊಳಿ (ಸತೀಶ‌, ರಮೇಶ) ಸಹೋದರರು. ಕನಕಪುರ ಸಾಮ್ರಾಟರಾದ ಶಿವಕುಮಾರ್ ಅವರು‌ ತಮ್ಮ ‘ಜಹಗೀರ’ದಲ್ಲಿರುವ ಬೆಳಗಾವಿ ಮತ್ತು ನೆರೆಯ ಬಳ್ಳಾರಿ ಗಣಿ ‘ಸಾಮ್ರಾಜ್ಯ’ಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವುದು ಜಾರಕಿಹೊಳಿ ಸಹೋದರರ ಕೋಪಕ್ಕೆ ಕಾರಣವಾಗಿತ್ತು ಮತ್ತು ಹೀಗೇ ಮುಂದುವರಿದರೆ ನಮ್ಮ ದಾರಿ ನೋಡಿಕೊಳ್ಳುತ್ತೇವೆಂದು ಕಾಂಗ್ರೆಸ್ ಹೈಕಮಾಂಡಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಈ ಮಧ್ಯೆ, ಅಧಿಕಾರಕ್ಕಾಗಿ ಹಸಿದು ಕುಳಿತಿರುವ ಬಿಜೆಪಿ ಒಂದಷ್ಟು ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿತು. ಈ ಬಾಬ್ತಿನಲ್ಲಿ ಹಲವು ಕೋಟಿಗಳ ವಿಷಯ ಹರಿದಾಡಿತು. ಹಾಲಿ ಸಂಪುಟದಲ್ಲಿ ಮಂತ್ರಿಗಿರಿ ಸಿಗದವರು, ಬೇರೆ-ಬೇರೆ ಕಾರಣಕ್ಕೆ ಅಸಮಾಧಾನ ಹೊಂದಿರುವವರು ಬೇಲಿ ಮೇಲೆ ಕುಳಿತು ಎತ್ತ ಹಾರಿದರೆ ಲಾಭ, ಮುಂದಿನ ಪರಿಣಾಮಗಳೇನು ಎನ್ನುವ ಚಿಂತೆಗೆ ಬಿದ್ದಂತಿದ್ದಾರೆ.

ಹೀಗೆ, ಕೋಟಿ ಕೋಟಿಗಳ ರಾಜಕೀಯ ವ್ಯವಹಾರ ಚರ್ಚೆಯ ಕೇಂದ್ರದಲ್ಲಿದ್ದಾಗಲೇ, ನಮ್ಮ ಕರ್ನಾಟಕದ ಶಾಸಕರು ಸರಾಸರಿ ವಾರ್ಷಿಕ ವರಮಾನದಲ್ಲಿ ದೇಶದಲ್ಲೇ ಅತ್ಯಂತ ಶ್ರೀಮಂತರು ಎನ್ನುವುದನ್ನು ಸಾರಿತು ಎಡಿಆರ್‌ ( ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್ ) ಮತ್ತು ನ್ಯಾಷನಲ್‌ ಎಲೆಕ್ಷನ್‌ ವೆಲ್ತ್‌ (ಎನ್‌ಇಡಬ್ಲ್ಯು) ಸಂಸ್ಥೆಗಳ ವರದಿ. ಚುನಾವಣಾ ಆಯೋಗಕ್ಕೆ ದೇಶದ ಎಲ್ಲೆಡೆಯ ಶಾಸಕರು ಸಲ್ಲಿಸಿರುವ ಆದಾಯ ವಿವರಗಳನ್ನು ತುಲನೆ ಮಾಡಿ ಸಿದ್ಧಪಡಿಸಿರುವ ವರದಿಯ ಪ್ರಮುಖಾಂಶಗಳಿವು:

  • ಎಡಿಆರ್‌ ಪ್ರಕಾರ, ದೇಶದ ಉಳಿದೆಲ್ಲ ರಾಜ್ಯಗಳ ಶಾಸಕರ ವಾರ್ಷಿಕ ಸರಾಸರಿ ಆದಾಯಕ್ಕೆ ಹೋಲಿಸಿದರೆ ಕರ್ನಾಟಕದ ಶಾಸಕರು ಹೆಚ್ಚು ಶ್ರೀಮಂತರು. ನೆರೆಯ ಮಹಾರಾಷ್ಟ್ರ ( ಸರಾಸರಿ ಆದಾಯ ೪೩.೪ ಲಕ್ಷ ರು.), ಆಂಧ್ರಪ್ರದೇಶ (೩೮.೬ ಲಕ್ಷ), ಪಂಜಾಬ್‌ (೩೧.೯ ಲಕ್ಷ )ಮತ್ತು ತೆಲಂಗಾಣ (೨೭.೯ ಲಕ್ಷ) ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಶಾಸಕರ ವಾರ್ಷಿಕ ಸರಾಸರಿ ಆದಾಯ ( ಸರಾಸರಿ ೧.೧೧ ಕೋಟಿ ರು.) ಮೂರ್ನಾಲ್ಕು ಪಟ್ಟು ಹೆಚ್ಚಿದೆ.
  • ದೇಶದ ಎಲ್ಲ ಶಾಸಕರ ಸರಾಸರಿ ವಾರ್ಷಿಕ ಆದಾಯ ೨೪.೫೯ ಲಕ್ಷ ರು. ಈ ಸರಾಸರಿಯಲ್ಲಿ ಅತಿ ಹೆಚ್ಚು ಶ್ರೀಮಂತ ಶಾಸಕ ಬೆಂಗಳೂರು ಗ್ರಾಮಾಂತರದ ಎನ್ ನಾಗರಾಜ್‌ (ಎಂಟಿಬಿ ನಾಗರಾಜ್). ಇವರ ಘೋಷಿತ ವಾರ್ಷಿಕ ಆದಾಯ ೧೫೭.೦೪ ಕೋಟಿ ರು. ಅಂತೆಯೇ, ಅತ್ಯಂತ ಬಡ ಶಾಸಕಿ ಆಂಧ್ರಪ್ರದೇಶದ ಬಿ ಯಾಮಿನಿ ಬಾಲಾ. ಇವರ ವಾರ್ಷಿಕ ಆದಾಯ ಕೇವಲ ೧,೦೩೧ ರು.
  • ಪೂರ್ವ ರಾಜ್ಯಗಳ ೬೧೪ ಶಾಸಕರ ಸರಾಸರಿ ವಾರ್ಷಿಕ ಆದಾಯ ೮.೫ ಲಕ್ಷ ರು. ಎಡಿಆರ್‌ ಲೆಕ್ಕಾಚಾರದ ಪ್ರಕಾರ, ಅತ್ಯಂತ ಕಡಿಮೆ ವರಮಾನ ಹೊಂದಿದ ಶಾಸಕರನ್ನು ಹೊಂದಿರುವ ರಾಜ್ಯ ಚತ್ತೀಸ್‌ಗಢ. ಇಲ್ಲಿನ ೬೩ ಶಾಸಕರ ಸರಾಸರಿ ವರಮಾನ ೫.೪ ಲಕ್ಷ ರು. ದಕ್ಷಿಣ ರಾಜ್ಯಗಳ ೭೧೧ ಶಾಸಕರು ವಾರ್ಷಿಕ ೫೧.೯೯ ಲಕ್ಷ ರು.ವರಮಾನ ಹೊಂದಿದ್ದು, ಅತಿ ಹೆಚ್ಚು ಶ್ರೀಮಂತರೆನಿಸಿಕೊಂಡಿದ್ದಾರೆ. ಈ ಪೈಕಿ ಕರ್ನಾಟಕದ ಶಾಸಕರ ವರಮಾನವೇ ಅತ್ಯಂತ ಹೆಚ್ಚೆನ್ನುವುದು ಗಮನಾರ್ಹ.

ಮೇಲೆ ಪ್ರಸ್ತಾಪಿಸಿದಂತೆ ಇದೆಲ್ಲ ಆಯಾ ಶಾಸಕರೇ ಘೋಷಿಸಿಕೊಂಡ ಆಸ್ತಿ, ವರಮಾನವನ್ನು ಆಧರಿಸಿದ ಲೆಕ್ಕಾಚಾರವಷ್ಟೆ. ಚುನಾವಣಾ ಆಯೋಗದೆದುರು ಘೋಷಿಸಿಕೊಂಡ ಸಂಪತ್ತಿನ ಪ್ರಮಾಣಕ್ಕಿಂತ ಹಲವು ಪಟ್ಟು ಹೆಚ್ಚು ಬೇನಾಮಿ ಆಸ್ತಿಪಾಸ್ತಿ ಹೊಂದಿದವರಿಗೇನೂ ನಮ್ಮಲ್ಲಿ ಕಡಿಮೆ ಇಲ್ಲ. ಆಗರ್ಭ ಶ್ರೀಮಂತಿಕೆಯಲ್ಲಿ ಎಂಟಿಬಿ ನಾಗರಾಜ್‌ ಅವರಿಗಿಂತ ಹಲವು ಪಟ್ಟು ಹೆಚ್ಚು ಆಸ್ತಿ ಹೊಂದಿದ ಶಾಸಕ ‘ಕುಳ’ಗಳೂ ಇಲ್ಲದೆ ಇಲ್ಲ. ಆದರೆ, ಆಂಧ್ರದ ಯಾಮಿನಿ ಅವರಿಗಿಂತ ಕಡಿಮೆ ವರಮಾನದವರೂ ನಮ್ಮಲ್ಲಿ ಇರುವುದು ಎಡಿಆರ್‌ ಕಣ್ಣಿಗೆ ಬಿದ್ದಿಲ್ಲ.

ಅದೇನಿದ್ದರೂ, ಸರಾಸರಿ ವರಮಾನದಲ್ಲಿ ಕರ್ನಾಟಕದ ಶಾಸಕರು ಅತ್ಯಂತ ಹೆಚ್ಚು ಶ್ರೀಮಂತರೆನಿಸಿಕೊಳ್ಳಲು ಕಾರಣವೇನು? ಪ್ರಶ್ನೆಯಂತೆಯೇ ಉತ್ತರವೂ ಎದ್ದುಕಾಣುವಂತಿದೆ. ಒಂದು ಮಾಹಿತಿಯ ಪ್ರಕಾರ, ರಾಜ್ಯದ ಹಾಲಿ ೨೨೨ ಶಾಸಕರ ಪೈಕಿ ೬೫ ಮಂದಿ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಸಿಕೊಂಡವರು. ೩೦ ಮಂದಿ ಗಣಿ, ಗ್ರಾನೈಟ್‌ ಉದ್ಯಮದಿಂದ ವರಮಾನ ಪಡೆಯುತ್ತಿದ್ದಾರೆ. ೨೫ಕ್ಕೂ ಹೆಚ್ಚು ಮಂದಿ ಬೃಹತ್‌ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರು ಅಥವಾ ಶಿಕ್ಷಣೋದ್ಯಮಿಗಳು. ಸಕ್ಕರೆ ಕಾರ್ಖಾನೆ ಮಾಲೀಕರು, ಮದ್ಯದ ಕುಳಗಳು ಈ ಪಟ್ಟಿಯಲ್ಲಿದ್ದಾರೆ. ಈ ಪೈಕಿ, ಕೆಲವರು ಒಂದಕ್ಕಿಂತ ಹೆಚ್ಚು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಯಿಂದ ಬರುವ ವರಮಾನವನ್ನು ತೋರಿಸಿದವರೂ ಇದ್ದಾರೆ.

ಕಳೆದ ಚುನಾವಣೆಯಲ್ಲಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಯ ಗೆಲುವಿನ ಸಾಮರ್ಥ್ಯವನ್ನು ಹಣ ಮತ್ತು ಜಾತಿಬಲದಿಂದ ಅಳೆದದ್ದು, ಆಯಾ ಪ್ರದೇಶದಲ್ಲಿ ತಮ್ಮದೇ ‘ಶಕ್ತಿ ಸಾಮ್ರಾಜ್ಯ’ ಕಟ್ಟಿಕೊಂಡವರಿಗೆ ಹೆಚ್ಚಿನ ಮನ್ನಣೆ ನೀಡಿದ್ದು ‘ಅತಿ ಶ್ರೀಮಂತರು’ ನಮ್ಮ ಶಾಸಕರಾಗಲು ಕಾರಣ ಎನ್ನಬಹುದು ಕೂಡ. ಮೇಲ್ಕಂಡ ವಿವಿಧ ‘ಉದ್ಯಮ’ಗಳಲ್ಲಿ ಕೋಟಿಗಟ್ಟಲೆ ಸಂಪತ್ತು ಗಳಿಸಿ, ಅದರಲ್ಲಿ ಒಂದಷ್ಟನ್ನು ಚುನಾವಣೆಯಲ್ಲಿ ಹೂಡಿಕೆ ಮಾಡಿ, ಅಕ್ಷರಶಃ ಮತದಾರರನ್ನು ಖರೀದಿಸಿ ಗೆದ್ದವರಲ್ಲಿ, ದೊರಕಿದ ಅವಕಾಶ ಅಥವಾ ಅಧಿಕಾರವನ್ನು ಮತ್ತಷ್ಟು ಸಂಪತ್ತು ವೃದ್ಧಿಗೆ ಬಳಸಿಕೊಳ್ಳುವವರೇ ಹೆಚ್ಚು. “ಜನ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಗೆದ್ದ ಜನಪ್ರತಿನಿಧಿಗಳು ಜನಸೇವಕರಾಗಿ, ಜನಹಿತ ಕೆಲಸ ಮಾಡುತ್ತಾರೆ,’’ ಎನ್ನುವ ಜನತಂತ್ರದ ಆಶಯವನ್ನು ವರ್ತಮಾನದಲ್ಲಿ ನಿಜ ಮಾಡುವವರ ಸಂಖ್ಯೆ ತೀರಾ ಕಡಿಮೆ, ಬೆರಳೆಣಿಕೆಯಷ್ಟು ಎಂದರೂ ಆದೀತು.

ಇದನ್ನೂ ಓದಿ : ‘ತ್ರಿಕೂಟ’ ಒಡೆಯುವುದು ಜಾರಕಿಹೊಳಿ ಸಹೋದರರ ಆಂತರ್ಯವೇ?

ಎರಡು ದಶಕದ ಹಿಂದೆ ಮದ್ಯದ ಲಾಬಿ ಕರ್ನಾಟಕದ ರಾಜಕೀಯವನ್ನು, ಚುನಾವಣೆಗಳನ್ನು ನಿಯಂತ್ರಿಸುತ್ತಿತ್ತು. ಅಧಿಕಾರಕ್ಕೆ ಬಂದವರು ಮದ್ಯದ ಕುಳಗಳ ಹಿತರಕ್ಷಣೆಗೆ ಹೆಚ್ಚಿನ ಗಮನ ವಹಿಸುತ್ತಾರೆ ಎನ್ನುವ ಆಪಾದನೆಯೂ ಇತ್ತು. ನಂತರದ ವರ್ಷಗಳಲ್ಲಿ ಬಳ್ಳಾರಿ ಗಣಿಯ ಧೂಳು ಮತ್ತು ಬೆಂಗಳೂರು, ಮೈಸೂರು ಮುಂತಾದ ನಗರಗಳ ರಿಯಲ್‌ ಎಸ್ಟೇಟ್ ದಂಧೆ ಸೃಷ್ಟಿಸಿದ ಹಣಮಾಯೆ ರಾಜಕೀಯವನ್ನು ಆವರಿಸಿತು. ನಿಸರ್ಗ ಸಂಪತ್ತನ್ನು, ಕೃಷಿಭೂಮಿಯನ್ನು ಲೂಟಿಗೈದು ಆಯಾ ಪ್ರದೇಶದ ಜನರನ್ನು, ರೈತರನ್ನು, ಮಣ್ಣಿನ ಮಕ್ಕಳನ್ನು ಬೀದಿಗೆ ತಂದವರು ಈಗ ರಾಜಕೀಯವಾಗಿ ಪ್ರಬಲರಾಗಿದ್ದಾರೆ. ಹಿಂದೆಲ್ಲ ರಾಜಕಾರಣ ಮತ್ತು ಆಡಳಿತದಲ್ಲಿ ಕೆಲವು ವಿಷಯಗಳನ್ನು ‘ಅಧಿಕಾರ-ದಲ್ಲಾಳಿ’ಗಳು ನಿಭಾಯಿಸುತ್ತಿದ್ದುದು ಇದೆ. ಈಗ ಜನಪ್ರತಿನಿಧಿಗಳು ತಾವೇ ಆ ‘ಹೊಣೆ’ ನಿರ್ವಹಿಸುತ್ತಾರೆ ಅಥವಾ ದಲ್ಲಾಳಿಗಳಾಗಿದ್ದವರೇ ಜನಪ್ರತಿನಿಧಿಯ ವೇಷ ತೊಟ್ಟಿದ್ದಾರೆ. “ಇದು ನನ್ನ ಜಹಗೀರು. ಅಪ್ಪಣೆ ಇಲ್ಲದೆ ಅನ್ಯರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ,’’ ಎಂದು ಗೆರೆ ಎಳೆಯುತ್ತಾರೆ. ಶಾಸಕ, ಸಚಿವನಾಗಿ ಅದಕ್ಕಿಂತ ಮುಖ್ಯವಾಗಿ ಜನಪ್ರತಿನಿಧಿಯಾಗಿ ಮಾತನಾಡುವ ರೀತಿ, ನೀತಿ ಮತ್ತು ಮಾಡುವ ಕೆಲಸಕ್ಕಿಂತ, ‘ಪಾಳೆಪಟ್ಟು’ಗಳ ಒಡೆಯರ ರೀತಿ ಹೂಂಕರಿಸುತ್ತಾರೆ.

ಪ್ರಾಂತ್ಯ, ಪ್ರದೇಶಗಳ ಮೇಲೆ ಪರಮಾಧಿಕಾರದ ರೇಖೆ ಎಳೆದುಕೊಳ್ಳುವ ಇಂಥ ಅತಿರೇಕಗಳು ಕರ್ನಾಟಕದ ಸಂದರ್ಭದಲ್ಲಿ ಹೊಸ ವಿದ್ಯಮಾನವೇನಲ್ಲ. ಗಣಿ ರೆಡ್ಡಿಗಳ ಕಾಲದಲ್ಲಿ ‘ಬಳ್ಳಾರಿ ರಿಪಬ್ಲಿಕ್‌’ ಆಗಿದ್ದಂತೆ, ‘ಡಿಕೆ’ ಸಹೋದರರ ಪಾಳೆಪಟ್ಟು ‘ಕನಕಪುರ ರಿಪಬ್ಲಿಕ್‌’ ಎನ್ನಿಸಿಕೊಂಡಿದ್ದಿದೆ. ಅದೇ ರೀತಿ, ಹಾಸನದ ರಾಜಕಾರಣದ ಮೇಲೆ ದೇವೇಗೌಡರು ಮತ್ತವರ ಮಕ್ಕಳು, ಮೊಮ್ಮಕ್ಕಳು ‘ಅಧಿಪತ್ಯ’ ಸ್ಥಾಪಿಸಿದ್ದಾರೆ. ಈ ಯಾದಿಯಲ್ಲಿ ಹೊಸದಾಗಿ ಕಾಣಿಸಿಕೊಂಡಿರುವುದು ಜಾರಕಿಹೊಳಿ ಸಹೋದರರ ‘ಬೆಳಗಾವಿ ಜಹಗೀರು‌.’ ಸಣ್ಣದೊಂದು ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಮೂಲಕ ಜಾರಕಿಹೊಳಿ ಸಹೋದರರ ರಾಜಕೀಯ ಶಕ್ತಿ ನಿಯಂತ್ರಿಸಲು ಡಿ ಕೆ ಶಿವಕುಮಾರ್‌ ಮುಂದಾಗಿದ್ದರೆನ್ನುವುದು, ಅದನ್ನು ಪ್ರಶ್ನಿಸಿ ಬಂಡೆದ್ದ ಜಾರಕಿಹೊಳಿ ಸಹೋದರರು ರಾಜ್ಯ ಸರ್ಕಾರಕ್ಕೇ ಕಂಟಕ ತಂದೊಡ್ಡುವ ಮಟ್ಟಿಗಿನ ಬೆದರಿಕೆ ಹಾಕಿ ‘ಶಿವಕುಮಾರ ಪಡೆ’ಯನ್ನು ಹಿಮ್ಮೆಟ್ಟಿಸಿದ್ದು, ಈ ಮಧ್ಯೆ ನಡೆದ ರಾಜಕೀಯ ಹರಾಕಿರಿ, ಸಂಧಾನ ಸೂತ್ರ, ಮನವೊಲಿಕೆ ತಂತ್ರ ಇತ್ಯಾದಿಗಳನ್ನು ನೋಡಿದರೆ, ಇದೇನು ಪ್ರಜಾತಂತ್ರವೋ, ‘ಪ್ರಭುತ್ವ’ ಕಾಲದ ಸರಹದ್ದು ಸಮರವೋ ಎನ್ನುವ ಗೊಂದಲ ಮೂಡದೆ ಇರದು.

ಜನತಂತ್ರ ಮತ್ತು ಜನ-ರಾಜಕಾರಣ ಎನ್ನುವುದು ಈ ಮಟ್ಟಿಗೆ ಸೊಕ್ಕಿನ ಶಕ್ತಿಗಳ ಕೈವಶವಾಗಲು ರಿಯಲ್‌ ಎಸ್ಟೇಟ್‌, ಗಣಿ ಮಣ್ಣು, ಸಕ್ಕರೆ-ಮದ್ಯದ ಉದ್ಯಮ ಮತ್ತು ಶಿಕ್ಷಣೋದ್ಯಮ ಸಹಿತ ವಿವಿಧ ಉದ್ಯಮಗಳಿಂದ ಬಂದ ಕೋಟಿಗಟ್ಟಲೆ ವರಮಾನದ ಅಮಲೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಪರಿಯ ಹಣ ಮತ್ತು ಸಿರಿವಂತಿಕೆಯ ಸೊಕ್ಕು ರಾಜಕೀಯ ನಾಯಕರಿಗಷ್ಟೇ ಸೀಮಿತವಾಗಿಲ್ಲ; ಅವರ ಕಾಲು, ಬಾಲ, ಚೇಲಗಳು ಅಷ್ಟೇ ಯಾಕೆ, ರಾಜಕೀಯ ನಾಯಕರ ಮನೆಗಳಲ್ಲಿ ಅಡುಗೆ ಮಾಡುವವರು, ಮಾತ್ರೆ ನೀಡುವವರು, ಕಾಲೊತ್ತುವವರು, ಕಾರು ಚಾಲಕರು, ‘ಇತ್ಯಾದಿ’ ಸೇವೆಗಳನ್ನು ಮಾಡುವವರು ಎಲ್ಲರೂ ಕೋಟಿಗಳಲ್ಲಿ ಮಾತನಾಡುತ್ತಾರೆ ಮತ್ತು ತಾವೇ ತುಂಡು ಪಾಳೇಗಾರರಂತೆ ವರ್ತಿಸುತ್ತಾರೆ. ಹಿರಿಯ ರಾಜಕಾಣಿಯೊಬ್ಬರ ‘ಮಾತ್ರೆ ಸೇವಕ’ನೊಬ್ಬ ನೋಡನೋಡುತ್ತಿದ್ದಂತೆ ಅಚ್ಚರಿಯ ರೀತಿಯಲ್ಲಿ ಬೆಳೆದು ಕೋಟ್ಯಾಧಿಪತಿ ಎನ್ನಿಸಿಕೊಂಡು, ಮತ್ತೊಬ್ಬ ಹಿರಿಯ ರಾಜಕಾರಣಿಯ ವಿರುದ್ಧ ಚುನಾವಣೆಯಲ್ಲಿ ತೊಡೆ ತಟ್ಟಿದ ವಿದ್ಯಮಾನಕ್ಕೂ ಕರ್ನಾಟಕ ಸಾಕ್ಷಿಯಾಗಿದೆ.

“ರಿಯಲ್‌ ಎಸ್ಟೇಟ್ ಮೂಲಕ ಇಷ್ಟು ಕೋಟಿ ಹೊಡೆದ, ಕೋಟ್ಯಂತರ ಮೌಲ್ಯದ ಸಾಮ್ರಾಜ್ಯ ಕಟ್ಟಿಕೊಂಡ, ಭೂ ವ್ಯವಹಾರದಲ್ಲಿ ಕೋಟಿಗಟ್ಟಲೆ ಕಮಿಷನ್‌ ಹೊಡೆದ, ಆ ಹಣದ ಸೊಕ್ಕಿನಲ್ಲಿ ಜನರ ಕೆಲಸ ಮಾಡುವುದನ್ನು ಮರೆತ,’’ ಎಂದೆಲ್ಲ ತಮ್ಮ ಜನಪ್ರತಿನಿಧಿಯ ಕುರಿತು ಟೀಕಿಸುವ ಜನರೇ, ಚುನಾವಣೆ ಸಂದರ್ಭ ಆತನ ಪುಂಗಿನಾದಕ್ಕೆ, ಕೋಟಿಗಳ ಮಾಯೆಗೆ ಮರುಳಾಗಿ, ಅವನನ್ನೇ ಗೆಲ್ಲಿಸಿ, ಜಯಕಾರ ಹಾಕುತ್ತಾರೆ. ಚುನಾವಣೆಯಲ್ಲಿ ಗೆಲ್ಲುವ, ಗೆಲ್ಲಿಸುವ, ಸೋಲುವ, ಸೋಲಿಸುವ ರಾಜಕೀಯ ಆಟ-ಮೇಲಾಟಗಳಲ್ಲಿ ಬಳಕೆಯಾಗುವ ಹಣ-ಜಾತಿ ಮಾಯೆಗೆ ಮತದಾರರು ಮಣಿದಾಗ ಇಂಥದನ್ನೆಲ್ಲ ಎದುರಿಸಬೇಕಾಗುತ್ತದೆ.

ಈ ಎಲ್ಲ ಅರ್ಥದಲ್ಲಿ ನೋಡಿದರೆ, ಎಡಿಆರ್‌ ಪ್ರಕಟಿಸಿದ ದೇಶದ ಶಾಸಕರ ‘ಶ್ರೀಮಂತಿಕೆ’ ಚಿತ್ರಣದಲ್ಲಿ ರಾಜ್ಯದ ಶಾಸಕರು ಗರಿಷ್ಠ ಇರುವುದು ಹಿರಿಮೆ, ಗರಿಮೆಯ ಸಂಕೇತದಂತೇನೂ ಕಾಣದು. ಬದಲು, ರಾಜಕೀಯ ಮತ್ತು ಸಾಮಾಜಿಕವಾಗಿ ನಾವು ಹೆಚ್ಚೆಚ್ಚು ಅಪಾಯದೆಡೆಗೆ ಸಾಗುತ್ತಿದ್ದೇವೆನ್ನುವುದು ದೃಢವಾಗುತ್ತದೆ. ರಾಜಕೀಯ ನಾಯಕರ ಲೂಟಿ ಮತ್ತು ಬಹುಕೋಟಿಯ ಮಹಿಮೆ ಜನರ ಬಾಯಲ್ಲಿ ಬಹುಪರಾಕಿಗೆ ಒಳಗಾಗುತ್ತಿರುವುದು ದುರಂತವಲ್ಲದೆ ಮತ್ತೇನೂ ಅಲ್ಲ. ‘ಶ್ರೀಮಂತ’ ಶಾಸಕರು ಹೆಚ್ಚಿದಷ್ಟು, ಗುಣಬಲ ಇರುವ ಜನಪ್ರತಿನಿಧಿಗಳ ಕೊರತೆ ಕಾಡುತ್ತದೆ. ಸ್ವಹಿತಾಸಕ್ತ ರಾಜಕಾರಣಿಗಳ ಅಧಿಕಾರ ಸಂಘರ್ಷ, ವ್ಯಕ್ತಿಪ್ರತಿಷ್ಠೆಗಳ ಮೇಲಾಟದಲ್ಲಿ ಜನಹಿತ ಮರೆಯಾಗುತ್ತದೆ. ಕರ್ನಾಟಕದ ಸದ್ಯದ ರಾಜಕಾರಣ ಇಂಥ ದುರಂತವನ್ನೇ ಬಿಂಬಿಸುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More