ಬಿಜೆಪಿ ಹೈಕಮಾಂಡ್‌ ನಿಕಟವರ್ತಿ ಲೆಹರ್‌ ಸಿಂಗ್‌ರಿಂದ ಬಿಎಸ್‌ವೈಗೆ ಬುದ್ಧಿವಾದ

ರಾಜ್ಯದ ಚುಕ್ಕಾಣಿ ಹಿಡಿಯಲು ಸತತ ಪ್ರಯತ್ನಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ನಡೆಗೆ ಹೈಕಮಾಂಡ್‌ ನಿಕಟವರ್ತಿ, ಎಂಎಲ್‌ಸಿ ಲೆಹರ್‌ ಸಿಂಗ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧಿಕಾರಕ್ಕಾಗಿ ಕೃತಕ ಬಿಕ್ಕಟ್ಟು ಸೃಷ್ಟಿಸಲಾಗುತ್ತಿದ್ದು, ಇದರಿಂದ ಪಕ್ಷಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂದು ಅವರು ಹರಿಹಾಯ್ದಿದ್ದಾರೆ

“ರಾಜ್ಯ ರಾಜಕೀಯದಲ್ಲಿ ಸೃಷ್ಟಿಸಲಾಗುತ್ತಿರುವ ಕೃತಕ ಬಿಕ್ಕಟ್ಟಿನಿಂದ ಕೇಂದ್ರ ನಾಯಕತ್ವ ವಿಚಲಿತವಾಗುವಂತೆ ಮಾಡಬಾರದು. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಕ್ಷುಲ್ಲಕ ಆಸೆಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಘನತೆಗೆ ಕುಂದು ತರುವಂಥ, ಕೇಂದ್ರ ಸರ್ಕಾರ ದ್ವಂದ್ವದಲ್ಲಿ ಸಿಲುಕುವಂತೆ ಮಾಡುವಂಥ ಸಾಹಸಕ್ಕೆ ಕೈಹಾಕಬಾರದು,” ಎಂದು ಬಿಜೆಪಿ ಹೈಕಮಾಂಡ್ ಜೊತೆ ನಿಕಟ ಸಂಬಂಧ ಹೊಂದಿರುವ ಕರ್ನಾಟಕ ವಿಧಾನ ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಅವರು ಮಾಧ್ಯಮ ಪ್ರಕಟಣೆಯಲ್ಲಿ ಸ್ವಪಕ್ಷೀಯರನ್ನು ಎಚ್ಚರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕೇಂದ್ರ ನಾಯಕರು ಯಡಿಯೂರಪ್ಪ ಅವರಿಗೆ ಬುದ್ಧಿವಾದ ಹೇಳುವ ಸಲುವಾಗಿ ಲೆಹರ್ ಸಿಂಗ್‌ ಮೂಲಕ ಮೂರು ಅಂಶಗಳನ್ನು ಒಳಗೊಂಡ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿಬಂದಿವೆ.

ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ, ಅದನ್ನು ಉರುಳಿಸಿ ರಾಜ್ಯದ ಚುಕ್ಕಾಣಿ ಹಿಡಿಯಲು ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರ ಜೊತೆ ಸೇರಿಕೊಂಡು ಮಾಧ್ಯಮಗಳ ಮೂಲಕ ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ದಟ್ಟವಾಗಿ ಹರಡಿರುವ ನಡುವೆಯೇ ಲೆಹರ್‌ ಸಿಂಗ್‌ ಪ್ರಕಟಣೆ ಹೊರಬಿದ್ದಿದೆ. ರಾಜ್ಯದ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳು ಕೇಂದ್ರ ನಾಯಕರ ಗಮನಕ್ಕಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇರುವುದರಿಂದ ಅಧಿಕಾರ ಹಿಡಿಯುವ ಯಡಿಯೂರಪ್ಪ ಅವರ ಪ್ರಯತ್ನ ಕೇಂದ್ರ ನಾಯಕರಿಗೆ ಹಿಡಿಸುತ್ತಿಲ್ಲ ಎನ್ನಲಾಗಿದೆ. ಇದನ್ನು ಸೂಚ್ಯವಾಗಿ ರಾಜ್ಯ ಬಿಜೆಪಿ ನಾಯಕರಿಗೆ, ವಿಶೇಷವಾಗಿ ಯಡಿಯೂರಪ್ಪ ಅವರಿಗೆ ರವಾನಿಸುವ ಉದ್ದೇಶದಿಂದ ಲೆಹರ್‌ ಸಿಂಗ್‌ ಮೂಲಕ ಬಿಜೆಪಿ ಹೈಕಮಾಂಡ್‌ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿಸಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಲೆಹರ್‌ ಸಿಂಗ್‌ ಅವರ ಮಾಧ್ಯಮ ಪ್ರಕಟಣೆ ಪ್ರತಿ

ಹಿಂದಿ ಭಾಷಿಕರಾದ ಲೆಹರ್‌ ಸಿಂಗ್‌ ಅವರು ದಶಕಗಳಿಂದಲೂ ನರೇಂದ್ರ ಮೋದಿಯವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ ಅವರು ಸ್ವಹಿತಾಸಕ್ತಿಯ ಉದ್ದೇಶದಿಂದ ಭ್ರಷ್ಟಾಚಾರದ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ೨೦೧೩ರಲ್ಲಿ ಬಹಿರಂಗ ಪತ್ರ ಬರೆಯುವ ಮೂಲಕ ಲೆಹರ್ ಸಿಂಗ್‌‌ ಭಾರಿ ಚರ್ಚೆ ಹುಟ್ಟುಹಾಕಿದ್ದರು. ಇದರಿಂದಾಗಿ ಬಿಜೆಪಿಯಿಂದ ಅಮಾನತುಗೊಂಡಿದ್ದರು. ಅಡ್ವಾಣಿ ಅವರ ವಿರುದ್ಧ ಲೆಹರ್‌ ಸಿಂಗ್‌ ನಡೆಸಿದ ಮಾತಿನ ದಾಳಿಯು, ೨೦೧೪ರಲ್ಲಿ ನರೇಂದ್ರ ಮೋದಿಯವರು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎನ್ನಲಾಗಿದೆ. ಇದಕ್ಕೂ ಮುನ್ನ, ೨೦೧೦ರಲ್ಲಿ ಸುಷ್ಮಾ ಸ್ವರಾಜ್‌ ಅವರು ನರೇಂದ್ರ ಮೋದಿಯವರ ಪ್ರಭಾವ ಗುಜರಾತ್‌ಗೆ ಸೀಮಿತ ಎಂಬರ್ಥದ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಷ್ಟ್ರೀಯ ದೈನಿಕಗಳಿಗೆ ನರೇಂದ್ರ ಮೋದಿಯವರ ಪರವಾಗಿ ಜಾಹೀರಾತು ನೀಡುವ ಮೂಲಕ ಲೆಹರ್‌ ಸಿಂಗ್ ಸುಷ್ಮಾ ಸ್ವರಾಜ್‌ ಅವರಿಗೆ ಟಾಂಗ್‌ ನೀಡುವ ಯತ್ನ ಮಾಡಿದ್ದನ್ನು ನೆನೆಯಬಹುದಾಗಿದೆ.

ಇದನ್ನೂ ಓದಿ : ಯಡಿಯೂರಪ್ಪನವರ ಇತ್ತೀಚಿನ ಸಾಹಸಗಳಿಗೆ ನಿಜವಾದ ಕಾರಣವೇನು?

ಲೆಹರ್‌ ಸಿಂಗ್‌ ಮಾಧ್ಯಮ ಹೇಳಿಕೆಯ ಮೂರು ಪ್ರಮುಖ ಅಂಶಗಳಿವು

  1. ಪ್ರಧಾನಿ ನರೇಂದ್ರ ಮೋದಿಯವರು ಸತತ ಎರಡನೇ ಬಾರಿಗೆ ಪ್ರಧಾನಿ ಆಗುವಂತೆ ಮಾಡಬೇಕಿದೆ. ಅದಕ್ಕಾಗಿ ಬಹುಮತ ಪಡೆಯಲು ಹಾಗೂ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಪಡೆದಿದ್ದಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ಎಲ್ಲರೂ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಪ್ರತಿ ಲೋಕಸಭಾ ಸ್ಥಾನ ಪ್ರಮುಖವಾಗಿದ್ದು, ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಪ್ರಯತ್ನ ನಡೆಸಬೇಕು.
  2. ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸಗಢ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಕೇಂದ್ರ ನಾಯಕರು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಮಧ್ಯೆ, ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಆರೋಗ್ಯ ಸ್ಥಿತಿ ಹದಗೆಟ್ಟಿರುವುದು ಪಕ್ಷದ ನಾಯಕರನ್ನು ಚಿಂತೆಗೆ ಈಡುಮಾಡಿದೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಸೃಷ್ಟಿಯಾಗಿರುವ ಕೃತಕ ಬಿಕ್ಕಟ್ಟಿನಿಂದ ಕೇಂದ್ರ ನಾಯಕರು ವಿಚಲಿತರಾಗದಂತೆ ಎಚ್ಚರ ವಹಿಸಬೇಕಿದೆ.
  3. ಕರ್ನಾಟಕದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿದ್ದು, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ಹೆಸರು ಎಳೆದು ತರುವುದನ್ನು ನಿಲ್ಲಿಸಬೇಕಿದೆ. ನಮ್ಮ ಕ್ಷುಲ್ಲಕ ಆಸೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಪ್ರಧಾನಿ ಮೋದಿಯವರನ್ನು ಕುಬ್ಜರನ್ನಾಗಿಸಬಾರದು, ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಾರದು. ಪ್ರಧಾನಿ ಅಥವಾ ಕೇಂದ್ರ ತನಿಖಾ ಸಂಸ್ಥೆಗಳ ಹೆಸರನ್ನು ಬಳಸಿಕೊಳ್ಳುವ ಮೂಲಕ ಎದುರಾಳಿಗಳಿಗೆ ಬೆದರಿಕೆಯೊಡ್ಡಲು ಯಾರಿಗೂ ಕೇಂದ್ರ ನಾಯಕರು ಅನುಮತಿ ನೀಡಿಲ್ಲ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡವರು ಅದಕ್ಕೆ ಕಾನೂನಿನ ಅಡಿಯಲ್ಲಿಯೇ ತಕ್ಕ ಪ್ರತಿಫಲ ಉಣ್ಣಲಿದ್ದಾರೆಯೇ ಹೊರತು ವ್ಯಕ್ತಿಯೊಬ್ಬರ ಆಸೆ, ನಂಬಿಕೆಗಳಿಗೆ ಪೂರಕವಾಗಿ ಶಿಕ್ಷೆಗೆ ಗುರಿಯಾಗಲಾರರು.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More