ಯಡಿಯೂರಪ್ಪನವರ ಇತ್ತೀಚಿನ ಸಾಹಸಗಳಿಗೆ ನಿಜವಾದ ಕಾರಣವೇನು?

ಸಾಲು-ಸಾಲು ಚುನಾವಣೆಗಳಿಗೆ ತಂತ್ರ ಹೆಣೆಯುವಲ್ಲಿ ನಿರತವಾಗಿರುವ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಕರ್ನಾಟಕ ರಾಜಕೀಯದ ಮೇಲೆ ಗಮನ ಹರಿಸಲು ಸಮಯವಿಲ್ಲ. ಆದರೆ, ಅಧಿಕಾರ ಹಿಡಿದೇ ತೀರುವ ಹಠಕ್ಕೆ ಬಿದ್ದಿರುವ ಬಿ ಎಸ್ ಯಡಿಯೂರಪ್ಪನವರು ತಮ್ಮ ಸಾಹಸಗಳನ್ನು ನಿಲ್ಲಿಸುತ್ತಿಲ್ಲ ಎನ್ನಲಾಗಿದೆ

ರಾಜ್ಯ ವಿಧಾನಸಭಾ ಚುನಾವಣೆ ನಂತರ ಸಂಖ್ಯಾಬಲದ ಕೊರತೆಯ ನಡುವೆಯೂ ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾದ ಪ್ರತಿಪಕ್ಷ ನಾಯಕ ಬಿ ಎಸ್‌ ಯಡಿಯೂರಪ್ಪ ಅನಿವಾರ್ಯವಾಗಿ ಅಧಿಕಾರ ತ್ಯಜಿಸಿದ್ದರು. ‘ಮೂರು ದಿನಗಳ ಮುಖ್ಯಮಂತ್ರಿ’ ಎಂಬ ಕೊಂಕು, ಕುಹಕ, ಅವಮಾನಗಳನ್ನು ಅಂತರಂಗದಲ್ಲಿಟ್ಟುಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕಳೆದ ನಾಲ್ಕು ತಿಂಗಳಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯಲು ಹರಸಾಹಸ ಮಾಡುತ್ತಿರುವುದು ಗುಟ್ಟಗಿಯೇನೂ ಉಳಿದಿಲ್ಲ. ಲೋಕಸಭಾ ಚುನಾವಣೆ ನಂತರ ನಾನಾ ಕಾರಣಗಳಿಂದ ತಮ್ಮ ರಾಜಕೀಯ ಭವಿಷ್ಯ ಕಮರಲಿದೆ ಎಂಬುದನ್ನು ಸ್ಪಷ್ಟವಾಗಿ ಅರಿತಂತಿರುವ ಯಡಿಯೂರಪ್ಪ, ಅದಕ್ಕೂ ಮುನ್ನವೇ ಅಧಿಕಾರ ಹಿಡಿಯುವ ಮಹದಾಸೆಯಿಂದ ತಮ್ಮ ಸಾಹಸಗಳನ್ನು ಮುಂದುವರಿಸಿದ್ದಾರೆ ಎನ್ನುವ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿ ಬಂದಿವೆ.

೧೦೪ ಸದಸ್ಯರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರ ಕೃಪಾಕಟಾಕ್ಷದಿಂದ ವಿಶ್ವಾಸಮತ ಸಾಬೀತುಪಡಿಸಲು ೧೫ ದಿನಗಳ ಕಾಲಾವಕಾಶ ಲಭಿಸಿತ್ತು. ಆದರೆ, ರಾಜ್ಯಪಾಲರ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಬಲವಾಗಿ ವಿರೋಧಿಸಿದ್ದ ಕಾಂಗ್ರೆಸ್-ಜೆಡಿಎಸ್‌ ಮೈತ್ರಿಕೂಟಕ್ಕೆ ಯಶಸ್ಸು ದೊರೆತು, ಬಿಎಸ್‌ವೈ ವಿಶ್ವಾಸಮತ ಸಾಬೀತುಪಡಿಸಲು ಕೇವಲ ಮೂರು ದಿನ ಕಾಲಮಿತಿ ನಿಗದಿಯಾಗಿತ್ತು. ಆ ವೇಳೆಗಾಗಲೇ, ತಮ್ಮ ಬೆಂಬಲಿಗರ ನೆರವಿನಿಂದ ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ಸೆಳೆಯಲು ಯಡಿಯೂರಪ್ಪ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಅವರ ಪ್ರಯತ್ನ ಕೈಗೂಡಲಿಲ್ಲ. ಆನಂತರ, ಯಡಿಯೂರಪ್ಪ ನಿರಂತರವಾಗಿ ತಮ್ಮ ಬೆಂಬಲಿಗರ ನೆರವಿನಿಂದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ವಿವಿಧ ಶಕ್ತಿ ಮತ್ತು ಯುಕ್ತಿಯ ಮೊರೆ ಹೋಗುತ್ತಿದ್ದಾರೆ.

ಇತ್ತೀಚೆಗೆ ಬೆಳಗಾವಿ ರಾಜಕಾರಣದ ವಿಚಾರದಲ್ಲಿ ಸಿಡಿದೆದ್ದಿದ್ದ ಜಾರಕಿಹೊಳಿ ಸಹೋದರರನ್ನು ಮುಂದಿಟ್ಟುಕೊಂಡು ಸರ್ಕಾರ ಪತನಗೊಳಿಸುವ ತಂತ್ರವನ್ನು ಬಿಎಸ್‌ವೈ ಹೂಡಿದ್ದರು ಎನ್ನಲಾಗಿದೆ. ಇದರ ಭಾಗವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌‌ ಶಾಸಕರನ್ನು ಸೆಳೆಯಲು ಮಲ್ಲೇಶ್ವರ ಶಾಸಕ ಸಿ ಎನ್‌ ಅಶ್ವಥ್‌ ನಾರಾಯಣ, ಚನ್ನಪಟ್ಟಣ ಮಾಜಿ ಶಾಸಕ ಸಿ ಪಿ ಯೋಗೇಶ್ವರ್, ಶಾಸಕ ಸತೀಶ್‌ ರೆಡ್ಡಿ, ಪುತ್ರ ವಿಜಯೇಂದ್ರ ಹಾಗೂ ಭೂಗತಲೋಕದ ಜೊತೆ ನಂಟು ಹೊಂದಿರುವ ಕೆಲವರನ್ನು ತೊಡಗಿಸಿದ್ದರು ಎಂಬ ಸುದ್ದಿಗಳು ಹರಿದಾಡಿವೆ. ಈ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, “ಸರ್ಕಾರ ಉರುಳಿಸಲು ಬಿಜೆಪಿ ನಾಯಕರು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಮಿನಲ್‌ಗಳ ಮೊರೆಹೋಗಿದ್ದಾರೆ,” ಎಂದು ಗಂಭೀರ ಆರೋಪ ಮಾಡಿದ್ದರು. ಇದನ್ನು ಅಲ್ಲಗಳೆಯುತ್ತಲೇ ಬಂದಿರುವ ಬಿಜೆಪಿ ನಾಯಕರು ಎಂದಿನಿಂತೆ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.

ಅಷ್ಟಕ್ಕೂ, ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿಯೇ ತೀರುವ ಹಂಬಲ ಹೊಂದಿರುವ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್‌ ಬೆಂಬಲವಿದೆಯೇ ಎಂಬುದಕ್ಕೆ ನಕಾರಾತ್ಮಕ ಉತ್ತರ ಲಭ್ಯವಾಗಿದೆ. ಸಾಲು-ಸಾಲು ಚುನಾವಣೆಗಳು ಹಾಗೂ ದೇಶದ ಅರ್ಥ ವ್ಯವಸ್ಥೆಯು ಬಿಜೆಪಿಯ ರಾಷ್ಟ್ರೀಯ ನಾಯಕರನ್ನು ಚಿಂತಾಕ್ರಾಂತವಾಗಿಸಿವೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ರಾಜಸ್ಥಾನ, ಚತ್ತೀಸಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅವಧಿ ಪೂರ್ಣವಾಗಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್ ಅನಾರೋಗ್ಯದಿಂದ ಅಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಬಿಜೆಪಿ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ. ಇದೆಲ್ಲದರ ಮಧ್ಯೆ, ಪೆಟ್ರೋಲ್‌, ಡೀಸೆಲ್‌ ದರ ಗಗನಮುಖಿ ಆಗುತ್ತಿದ್ದು, ರುಪಾಯಿ ಸಾರ್ವಕಾಲಿಕ ಪತನ ಕಂಡಿದೆ. ಬ್ಯಾಂಕಿಂಗ್‌ ವಲಯದಲ್ಲಿನ ಸಮಸ್ಯೆಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೈರಾಣಾಗಿದ್ದಾರೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿರುವ ಕೇಂದ್ರ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಉತ್ಸಾಹ ಹೊಂದಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ : ತುರ್ತಾಗಿ ಮುಖ್ಯಮಂತ್ರಿ ಆಗಿಬಿಡಬೇಕೆಂಬ ಯಡಿಯೂರಪ್ಪ ಕನಸು ನನಸಾಗಬಹುದೇ?

ಪಕ್ಷದ ಒಳ-ಹೊರಗನ್ನು ಸೂಕ್ಷ್ಮವಾಗಿ ಅರಿತಿರುವ ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆ ತಯಾರಿ ಆರಂಭ ಆಗಿಬಿಟ್ಟರೆ ಸರ್ಕಾರ ಕೆಡವುವ ಯತ್ನಕ್ಕೆ ಕೈಹಾಕಲಾಗದ ಸ್ಥಿತಿ ನಿರ್ಮಾಣ ಆಗಿಬಿಡುತ್ತದೆ. ಲೋಕಸಭಾ ಚುನಾವಣೋತ್ತರವಾಗಿ ಪಕ್ಷವು ಭವಿಷ್ಯದ ದೃಷ್ಟಿಯಿಂದ ಹೊಸ ನಾಯಕತ್ವಕ್ಕೆ ಮಣೆ ಹಾಕುವ ಸಾಧ್ಯತೆ ಇರುವುದರಿಂದ ಯಡಿಯೂರಪ್ಪ ಅಥವಾ ಹಿರಿಯ ನಾಯಕರಾದ ಅನಂತ್‌ ಕುಮಾರ್‌ ಅವರಂಥವರಿಗೆ ಪಕ್ಷದಲ್ಲಿ ಪ್ರಾಶಸ್ತ್ಯ ಕಡಿಮೆಯಾಗಲಿದೆ ಎನ್ನಲಾಗಿದೆ. ಈಗಾಗಲೇ ಪಕ್ಷದಲ್ಲಿ ಬಣ ರಾಜಕೀಯ ವಿಪರೀತವಾಗಿದ್ದು, ನಾಯಕತ್ವ ಬದಲಾವಣೆಯ ಮಾತುಗಳು ಕೇಳಿಬರುತ್ತವೆ. ತನ್ನ ಸಾಂಪ್ರದಾಯಿಕ ಮತಬುಟ್ಟಿಯಾದ ಲಿಂಗಾಯತ ಸಮುದಾಯದಾಚೆಗೆ ಪಕ್ಷ ಬಲವರ್ಧನೆ ಮಾಡಬೇಕಿರುವುದರಿಂದ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಅವರತ್ತ ಚಿತ್ತ ಹರಿಸುವ ಸಾಧ್ಯತೆ ಕ್ಷೀಣ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ರಾಜಕೀಯ ಬದುಕಿನ ಅಂತಿಮ ದಿನಗಳನ್ನು ಎಣಿಸುತ್ತಿರುವ ಯಡಿಯೂರಪ್ಪ ಅವರು ಅಧಿಕಾರ ಹಿಡಿಯಲು ಇದು ಸುಸಂದರ್ಭ ಎಂದು ಬಲವಾಗಿ ನಂಬಿದ್ದು, ದಾಳ ಉರುಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇದರ ಮುಂದುವರಿದ ಭಾಗವಾಗಿಯೇ ಬುಧವಾರ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಹಾಗೂ ಅವರ ಕುಟುಂಬದ ವಿರುದ್ಧ ಭೂಹಗರಣದ ದಾಖಲೆ ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ಗುಡುಗಿದ್ದರು. ಆದರೆ, ಬಿಎಸ್‌ವೈ ಅವರ ಪರವಾಗಿ ಸುದ್ದಿಗೋಷ್ಠಿ ನಡೆಸಿದ ಅವರ ಆಪ್ತ ಬಿ ಜೆ ಪುಟ್ಟಸ್ವಾಮಿ ನೇತೃತ್ವದ ಬಿಜೆಪಿ ನಾಯಕರ ಗುಂಪು ಆರೋಪಕ್ಕೆ ಪೂರಕವಾದ ದಾಖಲೆ ಒದಗಿಸಲುವಲ್ಲಿ ವಿಫಲರಾಗಿದ್ದಾರೆ. ಈ ಮೂಲಕ, ಅಧಿಕಾರ ಹಿಡಿಯುವ ಬಿಎಸ್‌ವೈ ಸಾಹಸಗಳ ಪಟ್ಟಿಗೆ ಮತ್ತೊಂದು ವಿಫಲ ಯತ್ನ ಸೇರ್ಪಡೆಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More