ಸಮ್ಮಿಶ್ರ ಸರ್ಕಾರ ಕೆಡವಲೆಂದೇ ಕೃತಕ ಬಿಕ್ಕಟ್ಟು ಸೃಷ್ಟಿಯಲ್ಲಿ ಮುಳುಗಿದ ಮಾಧ್ಯಮಗಳು

ಜೆಡಿಎಸ್-ಕಾಂಗ್ರೆಸ್ ನಾಯಕರ ನಡುವಿನ ಸಣ್ಣಪುಟ್ಟ ಅಸಮಾಧಾನಗಳನ್ನು ಸಹ ಸರ್ಕಾರ ಬಿದ್ದುಹೋಗುವಂಥ ಬಿಕ್ಕಟ್ಟು ಎಂದು ಮಾಧ್ಯಮಗಳು ಬೊಬ್ಬೆ ಹಾಕಿವೆ. ಕೆಲ ಮಾಧ್ಯಮಗಳಂತೂ ಸರ್ಕಾರವನ್ನು ಕೆಡವಲು ಬಿಜೆಪಿಗಿಂತ ಹೆಚ್ಚು ಆಸ್ಥೆ ತೋರುತ್ತಿವೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ

"ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ನೀಡಿದರೆ ಸುಮ್ಮನಿರುವುದಿಲ್ಲ. ಬಿಜೆಪಿ ವಿರುದ್ಧ ದಂಗೆ ಹೇಳುವಂತೆ ಜನರಿಗೆ ಕರೆ ಕೊಡುತ್ತೇನೆ,” ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚನ್ನರಾಯಪಟ್ಟಣದಲ್ಲಿ ಆಡಿದ ಮಾತುಗಳನ್ನು ಎಂದಿನಂತೆ ಕೆಲವು ಮಾಧ್ಯಮಗಳು ಅತಿ ಎನಿಸುವಷ್ಟು ವಿಸ್ತರಿಸುವ ಕೆಲಸಕ್ಕೆ ಕೈಹಾಕಿವೆ. ಮುಖ್ಯಮಂತ್ರಿಯವರ ಹೇಳಿಕೆಯನ್ನು ಮುಂದುಮಾಡಿ ಬಿಜೆಪಿಯು, ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ದೂರು ನೀಡಿದೆ. ವಿವಾದಕ್ಕೆ ಕಾರಣವಾಗಿರುವ ಕುಮಾರಸ್ವಾಮಿ ಅವರ ಹೊಸ ಹೇಳಿಕೆಯು ಹಿಂದಿನ ಕೆಲವು ಘಟನೆಗಳನ್ನು ಮೆಲುಕು ಹಾಕುವಂತೆ ಮಾಡಿದೆ. ಸಮ್ಮಿಶ್ರ ಸರ್ಕಾರ ರಚನೆ ಆದಾಗಿನಿಂದಲೂ ಕಾಂಗ್ರೆಸ್-ಜೆಡಿಎಸ್‌ ನಾಯಕರನ್ನು ಸುದ್ದಿಮಾಧ್ಯಮಗಳು ಹಲವು ವಿಚಾರಗಳಲ್ಲಿ ಕಟೆಕಟೆಯಲ್ಲಿ ನಿಲ್ಲಿಸಿ, ತೀರ್ಪು ನೀಡುತ್ತಲೇ ಬಂದಿವೆ. ಕೆಲವರು ಬಿಜೆಪಿ ನಾಯಕರು ಹಾಗೂ ಜೋತಿಷಿಗಳ ಮೂಲಕ ಸಮ್ಮಿಶ್ರ ಸರ್ಕಾರದ ಅಂತ್ಯದ ಮುಹೂರ್ತವನ್ನು ಪದೇಪದೇ ನಿಗದಿ ಮಾಡಿದ್ದಾರೆ. ಸಣ್ಣಪುಟ್ಟ ಅಸಮಾಧಾನಗಳನ್ನು ಸಹ ಸರ್ಕಾರ ಬಿದ್ದುಹೋಗುವಂತಹ ಬಿಕ್ಕಟ್ಟು ಎಂದು ಬೊಬ್ಬೆ ಹಾಕಿವೆ. ಕೆಲ ಮಾಧ್ಯಮಗಳಂತೂ ಸರ್ಕಾರವನ್ನು ಕೆಡವಲು ಬಿಜೆಪಿಗಿಂತ ಹೆಚ್ಚು ಆಸ್ಥೆ ತೋರುತ್ತಿವೆ ಎನ್ನುವ ಮಾತು ಸಾರ್ವಜನಿಕವಾಗಿ, ರಾಜಕೀಯ ಅಂಗಳದಲ್ಲಿ ಚಾಲ್ತಿಯಲ್ಲಿದೆ. ಮಾಧ್ಯಮಗಳು ಸೃಷ್ಟಿಸಿದ ಬಿಕ್ಕಟ್ಟಿನ ಭವಿಷ್ಯ ಈವರೆಗೆ ನಿಜವಾಗಿಲ್ಲ ಎಂಬುದು ಸಮ್ಮಿಶ್ರ ಸರ್ಕಾರಕ್ಕೆ ಸಮಾಧಾನದ ಸಂಗತಿ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ ಕಾಂಗ್ರೆಸ್‌-ಜೆಡಿಎಸ್‌ ನಾಯಕರು.

ಸಮ್ಮಿಶ್ರ ಸರ್ಕಾರದ ಅಸ್ತಿತ್ವದ ಕುರಿತಾಗಿ ಮಾಧ್ಯಮಗಳು ಈವರೆಗೆ ಬಿಂಬಿಸಿರುವ ಬಹುತೇಕ ವಿಚಾರಗಳು ದೃಢಪಟ್ಟಿಲ್ಲ. ಈ ಮಧ್ಯೆ, ಸರ್ಕಾರದ ವಿರುದ್ಧ ಸುದ್ದಿ ಪ್ರಸಾರ ಮಾಡುವುದರ ಹಿಂದಿನ ಉದ್ದೇಶ ಬಿಜೆಪಿ ಕಾರ್ಯಸೂಚಿಯನ್ನು ಜಾರಿಗೆ ತರುವುದಾಗಿದೆ ಎಂದು ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಆರೋಪಿಸಿದ್ದಾರೆ. ಇನ್ನು, ಕೆಲವು ಮಾಧ್ಯಮಗಳು ಬಿಜೆಪಿಯ ಹೆಸರಲ್ಲಿ ತಾವೇ ಕಾರ್ಯತಂತ್ರ ರೂಪಿಸಿ, ಕಮಲ ಪಕ್ಷದ ನಾಯಕರ ಬಾಯಿಗೆ ತುರುಕುವ ಪ್ರಯತ್ನಕ್ಕೆ ಬಿಜೆಪಿ ನಾಯಕರೇ ಗಲಿಬಿಲಿಗೊಂಡಿದ್ದೂ ಇದೆ!

ಈಚೆಗೆ ಸುದ್ದಿಮಾಧ್ಯಮವೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ವಕ್ತಾರ ಮಧುಸೂದನ್‌ ಅವರು, “ಸುದ್ದಿವಾಹಿನಿಗಳೇ ೨೦ ಶಾಸಕರು ಕಾಂಗ್ರೆಸ್‌-ಜೆಡಿಎಸ್‌ ತೊರೆಯುತ್ತಾರೆ ಎಂದು ತೋರಿಸಿವೆ. ಇದರಲ್ಲಿ ಬಿಜೆಪಿ ಪಾತ್ರವಿರಲಿಲ್ಲ. ಮಾಧ್ಯಮಗಳಿಂದಲೇ ನಮಗೆ ಸುದ್ದಿ ತಿಳಿಯಿತು,” ಎನ್ನುವ ಮೂಲಕ ನಿರೂಪಕರು ಪೇಚಾಡುವಂತೆ ಮಾಡಿದ್ದರು. ಇದಕ್ಕೆ ಪೂರಕ ಎಂಬಂತೆ ಮಾತನಾಡಿದ್ದ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌, “ಕೆಲವು ವಿದ್ಯುನ್ಮಾನ ಮಾಧ್ಯಮಗಳು ಬಿಜೆಪಿಯ ವಕ್ತಾರರಂತೆ ನಡೆದುಕೊಳ್ಳುವ ಮೂಲಕ ಮತ್ತೊಂದು ಪಕ್ಷದ ತೇಜೋವಧೆಗೆ ಇಳಿದಿವೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ದಿನೇಶ್‌ ಗುಂಡೂ ರಾವ್ ಅವರ ಮಾತುಗಳನ್ನು ವಿಸ್ತರಿಸಿರುವ ಜೆಡಿಎಸ್‌ ವಕ್ತಾರ ರಮೇಶ್‌ ಬಾಬು, “ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ಗೊಂದಲಗಳಿರುತ್ತವೆ. ಹೊಂದಾಣಿಕೆಯಾಗಲು ಸಮಯಾವಕಾಶದ ಅಗತ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ವಿಷಯಾಧಾರಿತವಾಗಿ ಒಗ್ಗೂಡಿರುವ ಪಕ್ಷಗಳು. ಇದನ್ನು ಅರ್ಥ ಮಾಡಿಕೊಳ್ಳದೆ ಕೆಲವು ವಿದ್ಯುನ್ಮಾನ ಮಾಧ್ಯಮಗಳು ಪದೇಪದೇ ತಾವೇ ಸೃಷ್ಟಿಸುವ ಷರತ್ತುಗಳನ್ನು ವಿಧಿಸುವ ಕೆಲಸ ಮಾಡುತ್ತಿವೆ. ಇದು ಸರಿಯಾದ ಕ್ರಮವಲ್ಲ. ಮಾಧ್ಯಮಗಳು ತಮ್ಮ ವಿಶ್ವಾಸ ಕಳೆದುಕೊಳ್ಳುವ ಮಟ್ಟಕ್ಕೆ ಇಳಿಯಬಾರದು,” ಎಂದು ಎಚ್ಚರಿಸಿದ್ದಾರೆ.

ಸಮಕಾಲೀನ ರಾಜಕೀಯ ಬೆಳವಣಿಗೆಗಳು ಹಾಗೂ ಮಾಧ್ಯಮಗಳ ಪಾತ್ರದ ಬಗ್ಗೆ ಮಾರ್ಮಿಕವಾಗಿ ಮಾತನಾಡಿರುವ ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ವಿ ಎಸ್‌ ಉಗ್ರಪ್ಪ, “ಕದಡಿದ ನೀರಲ್ಲಿ ಮೀನು ಹಿಡಿಯಲು ಮಾಧ್ಯಮಗಳು ಸೇರಿದಂತೆ ಕೆಲವು ವ್ಯಕ್ತಿಗಳು ಮತ್ತು ಶಕ್ತಿಗಳು ಪ್ರಯತ್ನ ನಡೆಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಜನರ ದೃಷ್ಟಿಯಲ್ಲಿ ನಗಪಾಟಲಿಗೆ ಈಡಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಪೂರ್ಣವಾಗಿ ಉಳಿಯಬೇಕೆಂದರೆ ಕದಡಿದ ನೀರಲ್ಲಿ ಮೀನು ಹಿಡಿಯುವುದನ್ನು ಬಿಟ್ಟು ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸವನ್ನು ರಾಜಕಾರಣಿಗಳು ಹಾಗೂ ಮಾಧ್ಯಮಗಳು ಮಾಡಬೇಕು. ಆದರೆ, ಮಾಧ್ಯಮಗಳು ವೈಭವೀಕರಣದಲ್ಲಿ ತೊಡಗಿವೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಚರ್ಚೆಯ ಜೊತೆಜೊತೆಗೆ ಇತ್ತೀಚೆಗೆ ವಿವಾದವಾಗಿ ಮಾರ್ಪಾಡಾದ ಪ್ರಮುಖ ಬೆಳವಣಿಗೆಗಳು ಇಂತಿವೆ:

ಶಾಂತಿವನದಲ್ಲಿ ಸಿದ್ದರಾಮಯ್ಯ ಗುಡುಗು

ಪ್ರಕೃತಿ ಚಿಕಿತ್ಸೆಗಾಗಿ ಉಜಿರೆಯ ಶಾಂತಿವನಕ್ಕೆ ತೆರಳಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ಮುಖಂಡರು ಹಾಗೂ ಶಾಸಕರ ಜೊತೆಗೆ ಲೋಕಾಭಿರಾಮವಾಗಿ ಆಡಿದ ಮಾತುಗಳ ವಿಡಿಯೋ ತುಣುಕುಗಳನ್ನು ಇಟ್ಟುಕೊಂಡು ಮಾಧ್ಯಮಗಳು ಭಾರಿ ವಿವಾದ ಸೃಷ್ಟಿಸಿದ್ದವು. ವಾಸ್ತವದಲ್ಲಿ ಕುಮಾರಸ್ವಾಮಿ ಅವರು ಬಜೆಟ್‌ ಮಂಡಿಸುವುದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಉಲ್ಲೇಖಿಸಿ, ಸಿದ್ದರಾಮಯ್ಯ ಸರ್ಕಾರ ಉರುಳಿಸುವ ಯತ್ನ ನಡೆಸುತ್ತಿದ್ದಾರೆ ಎಂಬರ್ಥದಲ್ಲಿ ವರದಿಗಳನ್ನು ಬಿತ್ತರಿಸಲಾಯಿತು. ಬಜೆಟ್ ಮಂಡನೆಗೂ ಮುನ್ನವೇ ಸರ್ಕಾರ ಬಿದ್ದುಹೋಗಲಿದೆ ಎಂದು ವಿಪರೀತಾರ್ಥ ಕಲ್ಪಿಸಲಾಯಿತು. ಇದು ನಾನಾ ರೂಪಗಳನ್ನು ಪಡೆದು ಕಡೆಗೆ ಬಜೆಟ್ ಮಂಡನೆ ಸಾಂಗವಾಗಿ ನಡೆಯಿತು.

ಸಚಿವ ಸ್ಥಾನ ವಂಚಿತ ಎಂ ಬಿ ಪಾಟೀಲ್‌ ಬೆಂಕಿ

ರಾಜ್ಯ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಬಬಲೇಶ್ವರ ಶಾಸಕ ಎಂ ಬಿ ಪಾಟೀಲ್, ಗದಗ ಶಾಸಕ ಎಚ್‌ ಕೆ ಪಾಟೀಲ್‌‌ ಅವರು ತಮಗೆ ಸಚಿವ ಸ್ಥಾನ ದೊರೆಯಲಿಲ್ಲ ಎಂದು ಅಸಮಾಧಾನಗೊಂಡಿದ್ದರು. ಈ ವಿಚಾರವನ್ನು ಇಟ್ಟುಕೊಂಡು ಎಂ ಬಿ ಪಾಟೀಲ್‌ ಅವರು ಪಕ್ಷ ತೊರೆಯುತ್ತಾರೆ ಎನ್ನುವ ಕಲ್ಪಿತ ವರದಿಗಳನ್ನು ಪ್ರಕಟಿಸಲಾಯಿತು. ಅಸಮಾಧಾನಿತ ನಾಯಕರ ಚಲನವಲನಗಳ ಮೇಲೆ ಕಣ್ಣಿಟ್ಟು, ಕ್ಷಣಕ್ಷಣಕ್ಕೂ ಇಲ್ಲಸಲ್ಲದ ಮಾಹಿತಿಗಳನ್ನು ಬಿತ್ತರಿಸುವ ಮೂಲಕ ಸರ್ಕಾರವೇ ಉರುಳಿಹೋಯ್ತು ಎನ್ನುವ ಭಾವನೆ ಮೂಡಿಸಲಾಗಿತ್ತು. ಅಂತೆಕಂತೆಗಳನ್ನೇ ಪ್ರಮುಖವಾಗಿ ಇಟ್ಟುಕೊಂಡು ಸಾಕಷ್ಟು ವರದಿಗಳು ಪ್ರಕಟವಾದವು. ಎಂದಿನಂತೆ ಅಸಮಾಧಾನಿತರು ಪಕ್ಷದ ದೆಹಲಿ ನಾಯಕರೊಂದಿಗೆ ಚರ್ಚಿಸಿದ ನಂತರ ತೆಪ್ಪಗಾದರು. ಮಾಧ್ಯಮಗಳ ರೋಚಕ ವರದಿಗಳು ಮಾತ್ರ ನಿಲ್ಲಲಿಲ್ಲ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿವಾದ

ಬಿಜೆಪಿ ನಾಯಕ ಶ್ರೀರಾಮುಲು ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆನ್ನುವ ವಿಚಾರವಾಗಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುವಾಗ ಕುಮಾರಸ್ವಾಮಿ ಅವರ ಮಾತುಗಳನ್ನು ಒಟ್ಟಾಗಿ ಗ್ರಹಿಸದ ಮಾಧ್ಯಮಗಳು ಆಯ್ದ ಮಾತುಗಳನ್ನು ಬಿತ್ತರಿಸುವ ಮೂಲಕ ವಿವಾದ ಎಬ್ಬಿಸಿದವು. ಕುಮಾರಸ್ವಾಮಿ ಅವರ ಮಾತುಗಳು ಪ್ರತ್ಯೇಕ ರಾಜ್ಯದ ಪರವಾಗಿರಲಿಲ್ಲ. ಶ್ರೀರಾಮುಲು ರಾಜಕೀಯ ಹೇಳಿಕೆಗೆ ಸಮರ್ಥವಾಗಿ ಕುಮಾರಸ್ವಾಮಿ ಅವರು ಉತ್ತರಿಸಿದ್ದರು. ಆದರೆ, ಎಂದಿನಂತೆ ಕುಮಾರಸ್ವಾಮಿ ಅವರ ಭಾಷಣದ ಆಯ್ದ ಭಾಗವನ್ನಷ್ಟೇ ಪ್ರಕಟಿಸುವ ಮೂಲಕ, ಕುಮಾರಸ್ವಾಮಿ ಉತ್ತರ ಕರ್ನಾಟಕದ ಬಗ್ಗೆ ಕೀಳಾಗಿ ಮಾತಾಡಿದ್ದಾರೆ ಎಂದು ವಿವಾದ ಸೃಷ್ಟಿಸಲಾಯಿತು. ಇದು ಸರ್ಕಾರವನ್ನು ಬಲಿ ತೆಗೆದುಕೊಳ್ಳಲಿದೆ ಎಂದು ಬಿಂಬಿಸಲಾಯಿತು. ಈ ವಿಚಾರವು ಹಲವು ದಿನಗಳ ಕಾಲ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತೇ ವಿನಾ ಫಲಕಾರಿಯಾಗಲಿಲ್ಲ.

ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಇಂಗಿತ, ಬಿದ್ದೇಹೋಯ್ತು ಸರ್ಕಾರ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನ ಜಿಲ್ಲೆಯ ಹೊಳನರಸೀಪುರ ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ಮಾತನಾಡುತ್ತ, “ನಿಮ್ಮೆಲ್ಲರ ಆಶೀರ್ವಾದವಿದ್ದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವೆ,” ಎಂದು ಹೇಳಿದ್ದರು. ಇದನ್ನು ಉಲ್ಲೇಖಿಸಿ, ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿಯಾಗುವ ಆಸೆ ಹೊಂದಿದ್ದಾರೆ ಎಂಬರ್ಥದಲ್ಲಿ ಕೆಲ ಮಾಧ್ಯಮಗಳು ಕತೆ ಹೊಸೆಯಲಾರಂಭಿಸಿದವು. ಇದು ಹಲವು ರೀತಿಯ ವ್ಯಾಖ್ಯಾನಕ್ಕೆ ಎಡೆಮಾಡಿಕೊಟ್ಟಿತ್ತಲ್ಲದೆ, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತು. ಕಡೆಗೆ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿ, ವಿವಾದ ಬಗೆಹರಿಸುವಂತಾಯಿತು.

ಜಾರಕಿಹೊಳಿ ಸಹೋದರರ ಬಿಕ್ಕಟ್ಟು

ರಾಜಕೀಯ ಪ್ರಭಾವ ಉಳಿಸಿಕೊಳ್ಳಲು ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದಿದ್ದ ಜಾರಕಿಹೊಳಿ ಸಹೋದರರ ಬಿಕ್ಕಟ್ಟನ್ನು ಮುಂದು ಮಾಡಿ ಸಮ್ಮಿಶ್ರ ಸರ್ಕಾರ ಈ ಬಾರಿ ಬಿದ್ದು ಹೋಗಲಿದೆ ಎಂದು ಮಾಧ್ಯಮಗಳು ಪುಂಖಾನುಪುಂಖವಾಗಿ ವರದಿ ಮಾಡಿದ್ದವು. ೧೮-೨೦ ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳನ್ನು ಪ್ರಕಟಿಸಲಾಯಿತು. ಮಹಾರಾಷ್ಟ್ರದ ಬಿಜೆಪಿ ನಾಯಕರು ಕಾಂಗ್ರೆಸ್‌-ಜೆಡಿಎಸ್‌ನ ನಾಯಕರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಿದ್ದಾರೆ. ಕೆಲವೇ ಕ್ಷಣದಲ್ಲಿ ಮುಂಬೈಗೆ ವಿಮಾನದಲ್ಲಿ ತೆರಳಲಿದ್ದಾರೆ ಎನ್ನುವ ಸುದ್ದಿಗಳು ಪ್ರಕಟವಾದವು. ಆದರೆ, ಮಾಧ್ಯಮಗಳು ಬಿಂಬಿಸಿದಂತೆ ಯಾವುದೇ ಶಾಸಕ ರಾಜ್ಯ ಬಿಟ್ಟು ಕದಲಿಲ್ಲ. ಒತ್ತಡ ತಂತ್ರದ ಮೂಲಕ ಜಾರಕಿಹೊಳಿ ಸಹೋದರರು ಸರ್ಕಾರ ಮತ್ತು ಪಕ್ಷದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ : ಮೋದಿ-ಶಾ ಜೋಡಿಯ ಮಾಧ್ಯಮ ಬೇಹುಗಾರಿಕಾ ಯುದ್ಧಕೋಣೆಗಳು ಹೀಗಿವೆ!

ಮೇಲಿನ ಎಲ್ಲ ಘಟನೆಗಳಲ್ಲಿ ಮಾಧ್ಯಮಗಳು, ವಿಶೇಷವಾಗಿ ಕೆಲ ವಿದ್ಯುನ್ಮಾನ ಮಾಧ್ಯಮಗಳ ಅಪ್ರಬುದ್ಧತೆ, ಪಕ್ಷಪಾತ ಧೋರಣೆಗಳು ಬಟಾಬಯಲಾಗಿವೆ. ಅಂದಮಾತ್ರಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಲೋಪದೋಷಗಳು ಇಲ್ಲವೆಂದಲ್ಲ. ಆದರೆ, ವಿಷಯಗಳ ಸತ್ಯಾಸತ್ಯತೆ, ಗಂಭೀರತೆ ಅರಿತು ವರದಿಗಳನ್ನು ಮಾಡಿದಾಗ ಮಾತ್ರ ಮಾಧ್ಯಮಗಳು ತಮ್ಮ ಘನತೆ ಉಳಿಸಿಕೊಳ್ಳಬಲ್ಲವು. ಇಲ್ಲವಾದಲ್ಲಿ ಅವುಗಳ ಉದ್ದೇಶದ ಬಗ್ಗೆಯೇ ಜನತೆ ಸಂಶಯಪಡುವಂತಾಗುತ್ತದೆ, ವಿಶ್ವಾಸಾರ್ಹತೆ ಕುಸಿಯುತ್ತದೆ. ಇದಕ್ಕಾಗಿ ಹಲವು ನಾಯಕರು ಮಾಧ್ಯಮಗಳ ವಂಚಕ ಧೋರಣೆ ಬಗ್ಗೆ ಕಿಡಿಕಾರಿದ್ದಾರೆ. ಆದರೆ, ಈ ವಿಚಾರಗಳ ಬಗ್ಗೆ ಮಾಧ್ಯಮಗಳು ಎಂದಿನಂತೆ ಜಾಣಕಿವುಡು ಪ್ರದರ್ಶನ ಮಾಡುತ್ತಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More