ಟ್ವಿಟರ್ ಸ್ಟೇಟ್ | ರಾಜತಾಂತ್ರಿಕ ಭಾಷೆಯ ಮೌಲ್ಯ ತಗ್ಗಿಸಿದ ಭಾರತ-ಪಾಕ್ ಬಗ್ಗೆ ಆಕ್ರೋಶ

ಪ್ರಧಾನಿ ಮೋದಿಯವರನ್ನು ‘ಉನ್ನತ ಸ್ಥಾನಗಳಲ್ಲಿನ ಸಣ್ಣ ಜನ’ ಎಂದು ಟೀಕಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಎರಡೂ ದೇಶಗಳ ಟ್ವೀಟಿಗರು ಟೀಕಿಸಿದ್ದಾರೆ. ಅದೇ ಸಂದರ್ಭದಲ್ಲಿ, ವಿದೇಶಾಂಗ ವ್ಯವಹಾರಗಳ ಮೌಲ್ಯ ಕುಸಿಯಲು ಕಾರಣವಾದ ಭಾರತದ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶಾಂತಿ ಮಾತುಕತೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಟ್ವಿಟರ್ ಮೂಲಕ ಆಕ್ರೋಶ ಹೊರಗೆಡವಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಬಗ್ಗೆ ಟ್ವಿಟರ್‌ನಲ್ಲಿ ತೀವ್ರ ಚರ್ಚೆ ನಡೆದಿದೆ. ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಇಮ್ರಾನ್ ಖಾನ್, “ಉನ್ನತ ಸ್ಥಾನಗಳಲ್ಲಿ ಸಣ್ಣ ಜನರು,” ಎನ್ನುವ ಪದ ಬಳಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಇಮ್ರಾನ್ ಖಾನ್ ಗಂಭೀರವಾದ ರಾಜತಾಂತ್ರಿಕ ಮಾತುಕತೆಗಳನ್ನು ಟ್ವಿಟರ್‌ ಹೇಳಿಕೆಗೆ ಸೀಮಿತಗೊಳಿಸಿರುವ ಬಗ್ಗೆ ಭಾರತ ಮತ್ತು ಪಾಕಿಸ್ತಾನ ಎರಡೂ ಕಡೆಗಳಿಂದಲೂ ಟೀಕೆಗಳು ಕೇಳಿಬಂದಿವೆ. ಇದೇ ಸಂದರ್ಭದಲ್ಲಿ, ಕೆಲವು ರಾಜಕಾರಣಿಗಳು ಈ ವಿಚಾರದಲ್ಲಿಯೂ ತಮ್ಮ ರಾಜಕೀಯ ಸ್ವಾರ್ಥವನ್ನು ಹುಡುಕುವುದೂ ನಡೆದಿದೆ.

ಇಮ್ರಾನ್ ಖಾನ್ ಟ್ವಿಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿವಯರನ್ನು ಕಟುವಾಗಿ ನಿಂದಿಸಿರುವುದನ್ನು ಭಾರತ ಖಂಡಿಸಿದೆ. ಭಾರತದ ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಅವರು ನೀಡಿದ ಹೇಳಿಕೆಯಲ್ಲಿ, “ಪಾಕಿಸ್ತಾನ ಸಂಬಂಧ ವೃದ್ಧಿಗಾಗಿ ಮಾತುಕತೆ ನಡೆಸುವ ಪ್ರಸ್ತಾಪ ಮುಂದಿಟ್ಟಿರುವ ಹಿನ್ನೆಲೆಯಲ್ಲಿ ಕೆಟ್ಟ ಉದ್ದೇಶವಿದೆ ಎನ್ನುವುದು ಸ್ಪಷ್ಟವಾಗಿದೆ. ಪಾಕಿಸ್ತಾನದ ಪ್ರಧಾನಿಯವರ ನಿಜವಾದ ಮುಖ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಬೆಳಕಿಗೆ ಬಂದಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದಲ್ಲಿಯೂ ಇಮ್ರಾನ್ ಹೇಳಿಕೆಗೆ ಟೀಕೆ ಕೇಳಿಬಂದಿದೆ, ಆದರೆ, ಭಾರತದ ಕಠಿಣ ಉತ್ತರವನ್ನೂ ಪಾಕಿಸ್ತಾನದ ರಾಜಕಾರಣಿಗಳು ಟೀಕಿಸಿದ್ದಾರೆ.

ಭಾರತದ ಜೊತೆಗೆ ಶಾಂತಿ ಮಾತುಕತೆ ಮುರಿದುಬೀಳಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಾರಣ ಎಂದು ಅಲ್ಲಿನ ವಿರೋಧ ಪಕ್ಷಗಳೂ ಟೀಕಿಸಿವೆ. ಇಮ್ರಾನ್ ಖಾನ್ ಮತ್ತು ಅವರ ಸರ್ಕಾರ ಪರಿಸ್ಥಿತಿಯನ್ನು ಸರಿಯಾಗಿ ವಿಶ್ಲೇಷಣೆ ಮಾಡದೆ ಭಾರತದ ಜೊತೆಗೆ ಸಂಬಂಧ ವೃದ್ಧಿಗೆ ಪ್ರಯತ್ನ ನಡೆಸಿರುವುದು ಈಗಿನ ವೈಫಲ್ಯಕ್ಕೆ ಕಾರಣ ಎಂದು ಪಾಕಿಸ್ತಾನದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಲ್ಲದೆ, ಇಮ್ರಾನ್ ಖಾನ್ ಸಂಬಂಧ ವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವಲ್ಲಿ ಆತುರ ತೋರಿಸಿದ್ದಾರೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.

ಈ ನಡುವೆ, ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷ ಪಿಎಂಎಲ್‌ ಭಾರತದ ಉತ್ತರವನ್ನೂ ಟೀಕಿಸಿದೆ. “ಪಾಕಿಸ್ತಾನವು ಸಹೃದಯತೆಯಿಂದ ಶಾಂತಿ ಮಾತುಕತೆಗೆ ಮುಂದಾದಾಗ, ನಮ್ಮ ದೌರ್ಬಲ್ಯ ಎಂದುಕೊಂಡು ಭಾರತ ಬೆದರಿಕೆಯ ತಂತ್ರ ಬಳಸುವುದು ಸರಿಯಲ್ಲ,” ಎಂದು ಪಾಕಿಸ್ತಾನದ ವಿರೋಧ ಪಕ್ಷ ಪಿಎಂಎಲ್‌ ಎನ್‌ ನಾಯಕ ಶಹನ್ಬಾಜ್ ಷರೀಫ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ವಿದೇಶಾಂಗ ವ್ಯವಹಾರಗಳ ವಿಶ್ಲೇಷಕರಾಗಿರುವ ಮೊಹಮದ್ ಝೀಶನ್ ಅವರು, ಟ್ವಿಟರ್ ಮೂಲಕ ರಾಜತಾಂತ್ರಿಕ ಮಾತುಗಳು ಹರಿದಾಡುತ್ತಿರುವುದನ್ನು ಟೀಕಿಸಿದ್ದಾರೆ. “ಟ್ವಿಟರ್ ಮತ್ತು ಸಾಮಾಜಿಕ ಜಾಲತಾಣಗಳು ಜಾಗತಿಕವಾಗಿ ರಾಜತಾಂತ್ರಿಕ ಭಾಷೆಯನ್ನು ಬದಲಿಸಿರುವುದು ಕುತೂಹಲಕರ. ಟ್ವಿಟರ್‌ಗೆ ಮೊದಲು ‘ರಾಕೆಟ್ ಮ್ಯಾನ್‌’ ಮತ್ತು ‘ಉನ್ನತ ಸ್ಥಾನಗಳಲ್ಲಿ ಸಣ್ಣಜನ’, ‘ಕೆಟ್ಟ ಉದ್ದೇಶ’, ‘ನಿಜ ಮುಖ ಬಹಿರಂಗವಾಗಿದೆ’ ಮೊದಲಾದ ಶಬ್ದಗಳು ಅಧಿಕೃತ ಸರ್ಕಾರಿ ವ್ಯವಹಾರಗಳಲ್ಲಿ ಬಳಕೆಯಾಗುತ್ತಿರಲಿಲ್ಲ,” ಎಂದು ಮೊಹಮದ್ ಝೀಶನ್ ಅಭಿಪ್ರಾಯಪಟ್ಟಿದ್ದಾರೆ.

“ಪಾಕಿಸ್ತಾನದ ಕೆಟ್ಟ ಉದ್ದೇಶ ಮತ್ತು ನಿಜವಾದ ಮುಖ ಬಹಿರಂಗವಾಗಿದೆ' ಎಂದು ಕಠಿಣ ಮಾತುಗಳಲ್ಲಿ ಭಾರತ ಉತ್ತರಿಸಿರುವುದು ವಿದೇಶಾಂಗ ಸಚಿವಾಲಯದ ಕಟು ನಿಲುವನ್ನು ಸೂಚಿಸುತ್ತದೆ. ವಿದೇಶಾಂಗ ಸಚಿವಾಲಯ ಈ ಶೈಲಿಯಲ್ಲಿ ಹೇಗೆ ಮಾತನಾಡಿದೆ ಎನ್ನುವುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಇದು ಒಂದು ರೀತಿಯಲ್ಲಿ ಟ್ರಂಪ್‌ ಶೈಲಿ ಅಥವಾ ಉತ್ತರ ಕೊರಿಯಾ ಮಾದರಿಯ ಭಾಷಾಶೈಲಿ ಎಂದು ಹೇಳಬಹುದು,” ಎಂದು ದಕ್ಷಿಣ ಏಷ್ಯಾದ ವ್ಯವಹಾರಗಳ ವಿಶ್ಲೇಷಕರಾದ ಮೈಖಲ್ ಕುಗ್ಲ್‌ಮನ್‌ ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತರಾದ ಹರೀಂದರ್ ಬವೇಜಾ ಅವರೂ ಭಾರತದ ಉತ್ತರದಿಂದ ಸಂತುಷ್ಟರಾಗಿಲ್ಲ. “ನಾವು ಇನ್ನಷ್ಟು ಕೆಟ್ಟದಾಗಿ ವ್ಯವಹರಿಸಿದ್ದೇವೆ. 'ಇಮ್ರಾನ್ ಖಾನ್ ಅವರ ನಿಜಮುಖ ಬಹಿರಂಗವಾಗಿದೆ' ಎನ್ನುವುದು ಕಠಿಣ ಮಾತು. ಅದು ರಾಜತಾಂತ್ರಿಕ ಭಾಷೆಯಲ್ಲ,” ಎಂದು ಹರೀಂದರ್ ಟ್ವೀಟ್ ಮಾಡಿದ್ದಾರೆ. ಭಾರತದ ಇನ್ನೂ ಹಲವು ಟ್ವೀಟಿಗರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ‘ರಾಜತಾಂತ್ರಿಕ ಭಾಷೆ’ಯ ಗೌರವವನ್ನು ಉಳಿಸಿಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಭಾರತ-ಪಾಕ್ ಬಾಂಧವ್ಯ ಗಟ್ಟಿಗೊಳಿಸಲಿದೆ ಇಮ್ರಾನ್ ಖಾನ್ ಸಹಾಯಹಸ್ತ

ಪಾಕಿಸ್ತಾನದ ಟ್ವೀಟಿಗರೂ ಇಮ್ರಾನ್ ಖಾನ್ ಅವರ ಟ್ವೀಟ್ ಭಾಷೆಯ ಬಗ್ಗೆ ತೀವ್ರ ಟೀಕೆಯನ್ನು ಮಾಡಿದ್ದಾರೆ. ಪಾಕಿಸ್ತಾನದ ಆಡಳಿತ ವ್ಯವಹಾರಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿ ಎಡಪಂಥೀಯ ಅಧಿಕಾರಿ ಫರ್ಹಾತುಲ್ಲಾ ಬಬ್ಬರ್ ಟ್ವೀಟ್ ಮಾಡಿ, “ಇಮ್ರಾನ್ ಖಾನ್ ಅವರು ಪ್ರಧಾನಿ ಮೋದಿಯವರನ್ನು ‘ಉನ್ನತ ಸ್ಥಾನಗಳಲ್ಲಿನ ಸಣ್ಣ ಜನ’ ಎಂದು ಟೀಕಿಸಿದ ತಕ್ಷಣ ಭಾರತೀಯ ವಿದೇಶಾಂಗ ಇಲಾಖೆ ಇಮ್ರಾನ್ ಖಾನ್ ಅವರ ಕುರಿತು, 'ನಿಜವಾದ ಮುಖ ಬಹಿರಂಗ' ಎಂದು ಹೇಳಿದೆ. ನಾಗರಿಕ ಜಗತ್ತಿನಲ್ಲಿ ರಾಜತಾಂತ್ರಿಕ ವ್ಯವಹಾರಗಳ ಮೌಲ್ಯವು ಈ ಮಟ್ಟಕ್ಕೆ ಇಳಿದಿರುವುದು ಅಸಹ್ಯಕರ. ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿ ಮಾತುಕತೆಗೆ ಎರಡು ದಿನ ಹಿಂದೆ ಭಾರತೀಯ ಗಡಿ ಭದ್ರತಾ ಪಡೆಯ ಸೈನಿಕರ ಮರಣ ಹೇಗೆ ಒಟ್ಟಾರೆ ಪರಿಸ್ಥಿತಿಯನ್ನು ಬದಲಿಸಿತು ಎನ್ನುವುದನ್ನು ಭಾರತ ವಿವರಿಸಿಲ್ಲ. ಪಾಕಿಸ್ತಾನ ಕೂಡ ತನ್ನ ಕಡೆಯಿಂದ ಜುಲೈ ೨೪ರಂದು ಬುರ್ಹಾನ್ ವಾನಿ ಹೆಸರಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ. ಇದೊಂದು ರೀತಿ ಹತಾಶ ಸ್ಥಿತಿ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದ ಮಾನವ ಹಕ್ಕು ಆಯೋಗದ ಸದಸ್ಯರಾಗಿರುವ ಮಾರ್ವಿ ಸಿರ್ಮದ್ ಅವರೂ ಇಮ್ರಾನ್ ಖಾನ್ ಅವರು ಬಹಳ ಬಾಲಿಶವಾಗಿ ವರ್ತಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಭಾರತೀಯ ಪತ್ರಕರ್ತರು ಅನೇಕರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಯನ್ನು ‘ಟ್ವಿಟರ್ ರಾಜತಾಂತ್ರಿಕತೆ’ ಎಂದು ಮೂದಲಿಸಿದ್ದಾರೆ. ಪತ್ರಕರ್ತರಾದ ಶೇಖರ್ ಗುಪ್ತಾ, ನಿಧಿ ರಾಜ್‌ದಾನ್, ತಾರೇಕ್ ಫತಾ, ನಟಿ ಕೊಯ್ನಾ ಮಿತ್ರಾ ಮೊದಲಾದವರು ಟ್ವೀಟ್ ಮೂಲಕ ಇಮ್ರಾನ್ ಖಾನ್ ಹೇಳಿಕೆಯನ್ನು ಟೀಕಿಸಿದ್ದಾರೆ. ಸ್ವರಾಜ್ ಸಂಘಟನೆಯ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರೂ ದೇಶದ ಆಡಳಿತ ಮುಖ್ಯಸ್ಥರು ಈ ಶೈಲಿಯಲ್ಲಿ ಹೇಳಿಕೆ ನೀಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಮ್ರಾನ್ ಖಾನ್ ಹೇಳಿಕೆಯನ್ನು ಬಳಸಿಕೊಂಡು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ. ರಫೇಲ್ ಒಪ್ಪಂದ ವಿಚಾರವಾಗಿ ಪದೇಪದೇ ಪತ್ರಿಕಾ ಗೋಷ್ಠಿ ಮತ್ತು ಟ್ವೀಟ್‌ಗಳ ಮೂಲಕ ಬಿಜೆಪಿಗೆ ಮುಜುಗರ ತರುತ್ತಿರುವ ರಾಹುಲ್ ಗಾಂಧಿ ಅವರು ಪಾಕಿಸ್ತಾನದ ಜೊತೆಗೂಡಿ ಕಾರ್ಯಯೋಜನೆ ರೂಪಿಸುತ್ತಿದ್ದಾರೆ ಎನ್ನುವ ಸಂಶಯ ಮೂಡುವಂತೆ ಒಟ್ಟಾರೆ ಪ್ರಕರಣವನ್ನು ತಿರುಚಲು ಅಮಿತ್ ಶಾ ಪ್ರಯತ್ನಿಸಿದ್ದಾರೆ.

“ರಾಹುಲ್ ಗಾಂಧಿ ಅವರು ‘ಮೋದಿ ಹಟಾವೋ’ (ಮೋದಿಯನ್ನು ತೊಲಗಿಸಿ) ಎಂದು ಹೇಳಿದಂತೆ, ಪಾಕಿಸ್ತಾನವೂ ‘ಮೋದಿ ಹಟಾವೋ’ ಎನ್ನುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ರಾಹುಲ್ ಗಾಂಧಿ ಅವರ ಆರೋಪಗಳನ್ನು ಪಾಕಿಸ್ತಾನವೂ ಬೆಂಬಲಿಸುತ್ತಿದೆ. ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಾಮೈತ್ರಿಯನ್ನು ರೂಪಿಸುತ್ತಿದ್ದಾರೆಯಯೇ?” ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಆದರೆ, ಪಾಕಿಸ್ತಾನದ ಸಚಿವರಾದ ಫಾವದ್ ಹುಸೇನ್ ಅವರು, “ರಫೇಲ್ ಒಪ್ಪಂದವನ್ನು ಜನರಿಂದ ಮರೆಸಲು ಪಾಕಿಸ್ತಾನವನ್ನು ತುಳಿಯುವ ದ್ವೇಷದ ಪ್ರಯತ್ನವನ್ನು ಬಿಜೆಪಿ ಸರ್ಕಾರ ನಡೆಸುತ್ತಿದೆ,” ಎಂದು ತಮ್ಮ ಕಡೆಯಿಂದ ಆರೋಪ ಹೊರಿಸಿದ್ದಾರೆ. ಈ ನಡುವೆ, ಇಮ್ರಾನ್ ಖಾನ್ ಹೇಳಿಕೆ ಸಂಬಂಧ ಟ್ವಿಟರ್‌ನಲ್ಲಿ ಬಹಳಷ್ಟು ತಮಾಷೆಯ ಮಾತುಗಳೂ ಹರಿದಾಡುತ್ತಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More