ಪರಿಷತ್‌ ಉಪ ಚುನಾವಣೆ ಕಾಂಗ್ರೆಸ್‌ನಿಂದ ನಜೀರ್‌ ಅಹ್ಮದ್‌, ವೇಣುಗೋಪಾಲ್‌ ಸ್ಪರ್ಧೆ

ಪರಿಷತ್‌ ಉಪ ಚುನಾವಣೆಯ ೩ ಸ್ಥಾನಗಳಿಗೆ ಅ.೪ರಂದು ಮತ ನಡೆಯಲಿದ್ದು, ಸೋಮವಾರ ನಾಮಪತ್ರ ಸಲ್ಲಿಸಲು ಕೊನೇ ದಿನ. ಕಾಂಗ್ರೆಸ್‌ ೨, ಜೆಡಿಎಸ್‌ ೧ ಸ್ಥಾನ ಹಂಚಿಕೊಂಡಿವೆ. ಸಂಖ್ಯಾಬಲ ಹೊಂದಿರುವ ಸಮ್ಮಿಶ್ರ ಸರ್ಕಾರ ಮೂರೂ ಸ್ಥಾನ ಗೆಲ್ಲುವ ಸಾಧ್ಯತೆ ಇದ್ದು, ಬಿಜೆಪಿ ಪವಾಡ ನಿರೀಕ್ಷೆಯಲ್ಲಿದೆ

ವಿಧಾನಸಭೆಯಿಂದ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಡೆಯುವ ಉಪಚುನಾವಣೆಗೆ ಕಾಂಗ್ರೆಸ್‌ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದೆ. ಕೋಲಾರ ಮೂಲದ ನಜೀರ್ ಅಹ್ಮದ್‌ ಹಾಗೂ ಬೆಂಗಳೂರಿನ ಎಂ ಸಿ ವೇಣುಗೋಪಾಲ್‌ ಕಾಂಗ್ರೆಸ್‌ ಅಭ್ಯರ್ಥಿಗಳಾಗಿದ್ದಾರೆ. ಜೆಡಿಎಸ್‌ಗೆ ಹಂಚಿಕೆಯಾಗಿರುವ ಒಂದು ಸ್ಥಾನಕ್ಕೆ ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಗೂ ಜೆಡಿಎಸ್‌ ವಕ್ತಾರ ರಮೇಶ್ ಬಾಬು ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಮಾಜಿ ಶಾಸಕರಾದ ವೈಎಸ್‌ವಿ ದತ್ತಾ, ಮಧು ಬಂಗಾರಪ್ಪ ಹಾಗೂ ಎನ್‌ ಎಚ್‌ ಕೋನರೆಡ್ಡಿ, ಜೆಡಿಎಸ್ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್‌ ಪ್ರಕಾಶ್‌ ಅವರ ಹೆಸರುಗಳೂ ಚಾಲ್ತಿಯಲ್ಲಿವೆ. ಮೈತ್ರಿಯ ನಿಯಮದಿಂದ ಕಾಂಗ್ರೆಸ್‌ಗೆ ಎರಡು ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ಹಂಚಿಕೊಂಡಿವೆ. ಬಿಜೆಪಿಯಿಂದ ಮಾಜಿ ಸಚಿವರಾದ ಬಿ ಜೆ ಪುಟ್ಟಸ್ವಾಮಿ, ಸಿ ಪಿ ಯೋಗೀಶ್ವರ್‌, ಪರಿಷತ್‌ ಮಾಜಿ ಸದಸ್ಯ ಡಿ ಎಸ್ ವೀರಯ್ಯ ಹೆಸರು ಚಾಲ್ತಿಯಲ್ಲಿದ್ದು, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಹಾಗೂ ರಾಜ್ಯ ಖಜಾಂಚಿ ಸುಬ್ಬ ನರಸಿಂಹ ಅವರ ಹೆಸರು ಪ್ರಸ್ತಾಪವಾಗಿವೆ.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಕಾಂಗ್ರೆಸ್‌ನ ಜಿ ಪರಮೇಶ್ವರ್ ಹಾಗೂ ಬಿಜೆಪಿಯ ಕೆ ಎಸ್‌ ಈಶ್ವರಪ್ಪ ಹಾಗೂ ವಿ ಸೋಮಣ್ಣ ಅವರು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಸೋಮವಾರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಪ್ರತಿ ಸ್ಥಾನಕ್ಕೂ ಪ್ರತ್ಯೇಕ ಚುನಾವಣೆ ನಡೆಯಲಿದ್ದು, ಗೆಲುವಿಗೆ ೧೧೨ ಮತಗಳ ಅಗತ್ಯವಿದೆ. ೧೧೮ ಶಾಸಕ ಬಲ ಹೊಂದಿರುವ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವು ಮೂರು ಸ್ಥಾನಗಳನ್ನು ಅನಾಯಾಸವಾಗಿ ಗೆಲ್ಲುವ ಸಂಖ್ಯಾಬಲ ಹೊಂದಿದೆ. ಮೈತ್ರಿ ಸರ್ಕಾರದಲ್ಲಿನ ಭಿನ್ನಮತದ ಲಾಭ ಪಡೆಯಲು ಹವಣಿಸುತ್ತಿರುವ ೧೦೪ ಶಾಸಕರ ಬಲ ಹೊಂದಿರುವ ಬಿಜೆಪಿಯು ಪವಾಡದ ನಿರೀಕ್ಷೆಯಲ್ಲಿದೆ. ಸಮ್ಮಿಶ್ರ ಸರ್ಕಾರದ ೧೫ ಕ್ಕೂ ಹೆಚ್ಚು ಸದಸ್ಯರು ಅಡ್ಡಮತದಾನ ಮಾಡಿದರೆ ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ.

ಇದನ್ನೂ ಓದಿ : ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕತ್ವ ಹೊಣೆ ಹೊರುವವರು ಯಾರು?  

ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಯಲ್ಲಿ ಶಾಸಕಾಂಗ ಪಕ್ಷದ ನಾಯಲ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಜಿ ಪರಮೇಶ್ವರ್‌ ಸಮಬಲ ಸಾಧಿಸಿದ್ದಾರೆ ಎನ್ನಲಾಗುತ್ತಿದೆ. ನಜೀರ್ ಅಹ್ಮದ್‌ ಅವರು ಸಿದ್ದರಾಮಯ್ಯ ಅವರಿಗೆ ಸಮೀಪವರ್ತಿಯಾಗಿದ್ದು, ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ, ಹಿಂದುಳಿದ ವರ್ಗಗಳಿಗೆ ಸೇರಿದವರಾದ ಎಂ ಸಿ ವೇಣುಗೋಪಾಲ್‌ ಅವರು ಪರಮೇಶ್ವರ್‌ಗೆ ಆಪ್ತರು ಎನ್ನಲಾಗಿದೆ. ಮಾಧ್ಯಮಗಳಲ್ಲಿ ಪಕ್ಷದ ನಿಲುವುಗಳನ್ನು ಪ್ರಬಲವಾಗಿ‌ ಸಮರ್ಥಿಸಿಕೊಳ್ಳುವುದರೊಂದಿಗೆ ಪಕ್ಷದ ವಲಯದಲ್ಲಿ ಗುರುತರ ಜವಾಬ್ದಾರಿ ನಿರ್ವಹಿಸುತ್ತಿರುವ ರಮೇಶ್‌ ಬಾಬು ಅವರಿಗೆ ಜೆಡಿಎಸ್‌ ವರಿಷ್ಠರು ಮಣೆ ಹಾಕಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಶನಿವಾರ ರಾತ್ರಿ ಹಾಸನದಲ್ಲಿ ನಡೆದ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ರಮೇಶ್‌ ಬಾಬು ಹೆಸರು ಅಂತಿಮಗೊಂಡಿದೆ ಎನ್ನಲಾಗುತ್ತಿದೆ.

ಅಕ್ಟೋಬರ್‌ ೪ರಂದು ಚುನಾವಣೆ ನಿಗದಿಯಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಮುಂದೂಡಲಾಗಿದೆ. ಸೆಪ್ಟೆಂಬರ್ ೨೫ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಪಕ್ಷದ ಪರ ಮತ ಚಲಾಯಿಸುವಂತೆ ನಿರ್ದೇಶನ ನೀಡುವ ಸಾಧ್ಯತೆ ಇದೆ. ನಾಮನಿರ್ದೇಶನ ಮೂರು ಸ್ಥಾನಗಳಿಗೆ ಕಾಂಗ್ರೆಸ್‌ ಮುಖ್ಯಮಂತ್ರಿ ಚಂದ್ರು ಹಾಗೂ ಬರಗೂರು ರಾಮಚಂದ್ರಪ್ಪ ಅವರ ಹೆಸರು ಸೂಚಿಸಲು ನಿರ್ಧರಿಸಿದೆ ಎನ್ನಲಾಗಿದೆ. ಜೆಡಿಎಸ್‌ಗೆ ಒಂದು ಸ್ಥಾನ ಬಿಟ್ಟುಕೊಡಲಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More