ರಾಜಸ್ಥಾನ | ಪಕ್ಷ ತೊರೆದ ಮಾನ್ವೇಂದ್ರ ಸಿಂಗ್‌; ಚುನಾವಣೆಗೆ ಮೊದಲೇ ಬಿಜೆಪಿಗೆ ಹಿನ್ನಡೆ

“ಬಿಜೆಪಿ ಸೇರಿ ದೊಡ್ಡ ತಪ್ಪು ಮಾಡಿದೆ,” ಎಂದು ಮಾನ್ವೇಂದ್ರ ಸಿಂಗ್ ಸ್ವಾಭಿಮಾನ ಯಾತ್ರೆಯಲ್ಲಿ ಅಬ್ಬರಿಸಿದ್ದಾರೆ. ವರ್ಷಾಂತ್ಯದಲ್ಲಿ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ರಜಪೂತ ಸಮುದಾಯದ ನಾಯಕನ ಈ ನಿರ್ಧಾರ ಬಿಜೆಪಿಗೆ ಹೊಡೆತ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಜಸ್ವಂತ್‌ ಸಿಂಗ್‌ ಅವರ ಪುತ್ರ, ರಾಜಸ್ಥಾನದ ಶಿಯೊ ಶಾಸಕ ಮಾನ್ವೇಂದ್ರ ಸಿಂಗ್ ಶನಿವಾರ ಬಿಜೆಪಿ ತೊರೆದಿದ್ದಾರೆ. ಬಹಿರಂಗ ಸಭೆಯಲ್ಲಿ ಮಾತನಾಡಿರುವ ಅವರು, “ಬಿಜೆಪಿ ಸೇರಿ ದೊಡ್ಡ ತಪ್ಪು ಮಾಡಿದೆ,” ಎಂದು ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವರ್ಷಾಂತ್ಯದಲ್ಲಿ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮಾನ್ವೇಂದ್ರ ಸಿಂಗ್ ರಾಜಿನಾಮೆಯಿಂದ ಬಿಜೆಪಿಗೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. “ರಾಜ್ಯ ಬಿಜೆಪಿ ನಾಯಕರು ನನ್ನ ಬೆಂಬಲಿಗರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರ ನಾಯಕರಿಗೆ ಮನವಿ ಮಾಡಿದ್ದೆ. ಆದರೆ, ಸಮಸ್ಯೆ ಬಗೆಹರಿಸುವ ಕೆಲಸವನ್ನು ಕೇಂದ್ರ ನಾಯಕರು ಮಾಡಲಿಲ್ಲ. ಇದರಿಂದ ಬೇಸತ್ತು, ಆತ್ಮಗೌರವಕ್ಕಾಗಿ ಬಿಜೆಪಿ ತೊರೆದಿದ್ದೇನೆ,” ಎಂದು ಮಾನ್ವೇಂದ್ರ ಅವರು ಸ್ವಾಭಿಮಾನ ಯಾತ್ರೆಯಲ್ಲಿ ಹೇಳಿದ್ದಾರೆ.

“ಪಕ್ಷದಲ್ಲಿನ ಸಮಸ್ಯೆಯನ್ನು ಎಂದಿಗೂ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ. ಆಂತರಿಕ ಸಮಸ್ಯೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಗಮನಕ್ಕೆ ತರಲಾಗಿತ್ತು. ಆದರೆ, ಅವರಾರೂ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಲಿಲ್ಲ. ಬದಲಿಗೆ, ಅಂತರ ಕಾಯ್ದುಕೊಳ್ಳಲು ಮುಂದಾದರು. ಎಲ್ಲದಕ್ಕೂ ಒಂದು ಮಿತಿ ಎಂಬುದು ಇರುತ್ತದೆ, ಇಂದು ಅದು ಅಂತ್ಯಗೊಂಡಿದೆ,” ಎಂದು ಅವರು ನುಡಿದಿದ್ದಾರೆ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಾರ್ಮೇರ್‌-ಜೈಸಲ್ಮೇರ್‌ನಿಂದ ಸ್ಪರ್ಧಿಸಲು ಜಸ್ವಂತ್‌ ಸಿಂಗ್‌ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತಂದೆ ಜಸ್ವಂತ್‌ ಪರವಾಗಿ ಮಾನ್ವೇಂದ್ರ ಪ್ರಚಾರ ಕೈಗೊಂಡಿದ್ದರು. ಇದರಿಂದ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಆನಂತರ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಜಸ್ವಂತ್‌ ಸಿಂಗ್‌ ಕುಟುಂಬದ ನಡುವಿನ ಸಂಬಂಧ ಹದಗೆಟ್ಟಿತ್ತು.

ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ರಜಪೂತ ಸಮುದಾಯವನ್ನು ಒಲಿಸಿಕೊಳ್ಳುವ ಯತ್ನ ನಡೆಸುತ್ತಿರುವ ನಡುವೆ ಮಾನ್ವೇಂದ್ರ ಸಿಂಗ್‌ ಕಾರ್ಯಪ್ರವೃತ್ತರಾಗಿರುವುದು ಮಹತ್ವ ಪಡೆದುಕೊಂಡಿದೆ. ರಜಪೂತ ಸಮುದಾಯದ ಅತ್ಯುನ್ನತ ನಾಯಕರಾದ ಜಸ್ವಿಂತ್‌ ಸಿಂಗ್‌ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಂಡಿಲ್ಲ ಎಂಬ ಬೇಸರ ಸಮುದಾಯದೊಳಗಿದ್ದು, ಇದು ಬಿಜೆಪಿಗೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಬಿಜೆಪಿ ಹಿರಿಯ ನಾಯಕ ಜೋಷಿಯವರು ಹೇಳುತ್ತಿರುವ ‘ರಾಜಧರ್ಮ’ದ ಕಿವಿಮಾತು

“ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಂದೆ ಜಸ್ವಂತ್‌ ಸಿಂಗ್‌ ಅವರನ್ನು ವಸುಂಧರಾ ರಾಜೇ ದೂರವಿಟ್ಟಿದ್ದರು ಎಂಬ ವಿಷಯವನ್ನು ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿ ತಿಳಿಸಿದ್ದರು. ‘ಬಾರ್ಮೇರ್ ಲೋಕಸಭಾ ಟಿಕೆಟ್‌ ಅನ್ನು ಜಸ್ವಂತ್‌ ಅವರಿಗೆ ತಪ್ಪಿಸಬಾರದಿತ್ತು. ಇದರಲ್ಲಿ ತಮ್ಮ ಕೈವಾಡವಿರಲಿಲ್ಲ; ದೆಹಲಿಯ ಇಬ್ಬರು ಹಾಗೂ ಜೈಪುರ ವ್ಯಕ್ತಿಯೊಬ್ಬರು ಪಿತೂರಿ ನಡೆಸಿದ್ದರು’ ಎಂದೂ ಮೋದಿ ತಿಳಿಸಿದ್ದರು. ಆದರೆ, ಯಾರು ಪಿತೂರಿ ನಡೆಸಿದ್ದರು ಎಂಬುದನ್ನು ಬಹಿರಂಗಪಡಿಸುವ ಅಗತ್ಯವಿಲ್ಲ. ಇಷ್ಟೆಲ್ಲದರ ನಡುವೆ, ಮೋದಿಯವರು ತಾಳ್ಮೆ ವಹಿಸುವಂತೆ ಹೇಳಿದ್ದರು. ಆದರೆ, ಸಮಸ್ಯೆ ಬಗೆಹರಿಸಲಿಲ್ಲ,” ಎಂದು ಮಾನ್ವೇಂದ್ರ ಸಿಂಗ್‌ ಹೇಳಿದ್ದಾರೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಜಸ್ವಂತ್‌ ಸಿಂಗ್‌ ಅವರು ಬಿಜೆಪಿಯಿಂದ ಐದು ಬಾರಿ ಲೋಕಸಭೆಗೆ ಹಾಗೂ ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ೮೦ ವರ್ಷದ ಜಸ್ವಂತ್‌ ಸಿಂಗ್‌ ವಿದೇಶಾಂಗ, ರಕ್ಷಣೆ ಹಾಗೂ ಹಣಕಾಸು ಸೇರಿದಂತೆ ಹಲವು ಮಹತ್ವದ ಖಾತೆಗಳನ್ನು ನಿಭಾಯಿಸಿದ್ದಾರೆ. ೧೯೮೦-೨೦೧೪ರವರೆಗೆ ೩೪ ವರ್ಷಗಳ ಸಾರ್ವಜನಿಕ ಬದುಕಿನಲ್ಲಿದ್ದ ಜಸ್ವಂತ್‌ ಸಿಂಗ್‌, ೨೦೧೨ರಲ್ಲಿ ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಯುಪಿಎ ಅಭ್ಯರ್ಥಿಯಾಗಿದ್ದ ಹಮೀದ್ ಅನ್ಸಾರಿ ಅವರ ವಿರುದ್ಧ ಪರಾಭವಗೊಂಡಿದ್ದರು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಾರ್ಮೇರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲನುಭವಿಸಿದ್ದರು. ಮೋದಿ ಹಾಗೂ ಬಿಜೆಪಿ ನಾಯಕತ್ವದ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದ ಜಸ್ವಂತ್‌, ಆನಂತರ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಬಿಜೆಪಿಯು ಜಸ್ವಂತ್‌ ಸಿಂಗ್‌ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More