ಪರಿಷತ್ ಉಪಚುನಾವಣೆ: ಕೃತಕ ಬಿಕ್ಕಟ್ಟು ಸೃಷ್ಟಿಸಿದ್ದನ್ನು ಒಪ್ಪಿತೇ ಬಿಜೆಪಿ?

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ, ಪರಿಷತ್‌ ಉಪಚುನಾವಣೆಯಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದೆ. ಈ ಮೂಲಕ ಬಿಜೆಪಿ, ಮೈತ್ರಿಕೂಟಕ್ಕೆ ಮುಜುಗರ ಉಂಟುಮಾಡಲು ದೊರೆತಿದ್ದ ಅಮೂಲ್ಯ ಅವಕಾಶ ಕೈಚೆಲ್ಲಿದ್ದು, ಕೃತಕ ಬಿಕ್ಕಟ್ಟು ಸೃಷ್ಟಿಸಲು ಮುಂದಾಗಿದ್ದು ಸಾಬೀತಾಗಿದೆ

ವಿಧಾನಸಭೆಯಿಂದ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಅ.೪ರಂದು ನಿಗದಿಯಾಗಿರುವ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರದಿಂದ ಬಿಜೆಪಿ ಹಿಂದೆ ಸರಿದಿದೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಲಿದೆ ಎಂಬ ಚರ್ಚೆಗಳು ತಲೆಕೆಳಗಾಗಿವೆ. ಸಂಖ್ಯಾಬಲ ಹೊಂದಿಲ್ಲದ ಬಿಜೆಪಿಯು ಚುನಾವಣೆಯಿಂದ ಹಿಂದೆ ಸರಿಯುವ ಮೂಲಕ, ತಾಂತ್ರಿಕವಾಗಿ ಸರಿಯಾದ ನಿರ್ಧಾರ ಕೈಗೊಂಡಿದೆ. ಆದರೆ, ಕಳೆದ ಕೆಲವು ದಿನಗಳಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು, “ಸಮ್ಮಿಶ್ರ ಸರ್ಕಾರದ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದೆ. ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ಬಿಜೆಪಿ ಬೆಂಬಲಿಸಲಿದ್ದಾರೆ,” ಎಂಬ ಹೇಳಿಕೆಗಳನ್ನು ನೀಡುತ್ತಿದ್ದರಿಂದ, “ಮೈತ್ರಿ ಸರ್ಕಾರವು ಅಲ್ಪಮತಕ್ಕೆ ಕುಸಿಯಲಿದ್ದು, ಬಿಜೆಪಿಗೆ ವರದಾನವಾಗಲಿದೆ. ಪರಿಷತ್‌ನ ಮೂರೂ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸಿದೆ,” ಎಂದು ಹೇಳಲಾಗಿತ್ತು.

ಆದರೆ, ಬಿಜೆಪಿಯು ಚುನಾವಣೆಯಿಂದ ಹಿಂದೆ ಸರಿಯುವ ಮೂಲಕ, ಸರ್ಕಾರ ಪತನವಾಗುವ ಕುರಿತು ಪಕ್ಷದ ಕೆಲವು ನಾಯಕರು ಪ್ರತಿಪಾದಿಸಿಕೊಂಡು ಬಂದ ಸುದ್ದಿಗಳು ಮಿಥ್ಯೆಯಿಂದ ಕೂಡಿದ್ದವು ಎಂಬುದನ್ನು ಸಾಬೀತುಪಡಿಸಿದಂತಾಗಿದೆ. ಇದೇ ವಿಚಾರವಾಗಿ ಮಾಧ್ಯಮಗಳಿಗೆ ಇತ್ತೀಚೆಗೆ ಹೇಳಿಕೆ ಬಿಡುಗಡೆ ಮಾಡಿದ್ದ ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ಹೈಕಮಾಂಡ್‌ ನಿಕಟವರ್ತಿ ಲೆಹರ್‌ ಸಿಂಗ್‌, “ಕೃತಕ ಬಿಕ್ಕಟ್ಟು ಸೃಷ್ಟಿಸುವುದರಿಂದ ಬಿಜೆಪಿಗೆ ಹೆಚ್ಚು ಹಾನಿ,” ಎಂದು ಯಡಿಯೂರಪ್ಪ ಅವರನ್ನು ಎಚ್ಚರಿಸಿದ್ದನ್ನು ಇಲ್ಲಿ ನೆನೆಯಬಹುದು. ಕೇಂದ್ರ ನಾಯಕರ ಸೂಚನೆಯ ಮೇರೆಗೆ ಲೆಹರ್‌ ಸಿಂಗ್‌ ಹೇಳಿಕೆ ಬಿಡುಗಡೆ ಮಾಡಿದ್ದರು ಎನ್ನಲಾಗಿದೆ. ಮತ್ತೊಂದು ಕಡೆ, ವಾಸ್ತವ ಮರೆಮಾಚಿ ವಿವೇಚನಾರಹಿತವಾಗಿ ವರ್ತಿಸಿದ ಮಾಧ್ಯಮಗಳೂ ರಾಜಕೀಯ ಮತ್ತು ಸಾಮಾಜಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಿವೆ.

ಒಂದು ವೇಳೆ, ಬಿಜೆಪಿಯ ಬಳಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಶಾಸಕರ ಬೆಂಬಲವಿದ್ದಿದ್ದರೆ ಅದು ವಿಧಾನ ಪರಿಷತ್‌ನ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹೂಡಿ ಅವರ ಗೆಲುವಿಗೆ ಶ್ರಮಿಸಬೇಕಿತ್ತು. ಆನಂತರ ಇದನ್ನೇ ಮುಂದು ಮಾಡಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಸರ್ಕಾರದ ಮೇಲೆ ಶಾಸಕರು ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಹೇಳಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ಹುಯಿಲೆಬ್ಬಿಸಬಹುದಿತ್ತು. ಆದರೆ, ಚುನಾವಣಾ ಕಣಕ್ಕಿಳಿದು ಹಿನ್ನಡೆಯಾದರೆ ಮುಖಭಂಗ ಎದುರಿಸಬೇಕಾಗುತ್ತದೆ ಎಂದು ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಾಲ್ಕು ತಿಂಗಳ ಹಿಂದಷ್ಟೇ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾಗಿ, ‘ಮೂರು ದಿನದ ಮುಖ್ಯಮಂತ್ರಿ’ ಎಂಬ ಚಾರಿತ್ರಿಕ ಮುಜುಗರಕ್ಕೆ ಯಡಿಯೂರಪ್ಪ ಗುರಿಯಾಗಿದ್ದಾರೆ. ಇದಾದ ಬಳಿಕ ನಿರಂತರವಾಗಿ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನದಲ್ಲಿ ತೊಡಗಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದಾರೆ. “ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ ಎಂಬ ವಿಚಾರ ದಿಟವೇ ಆಗಿದ್ದಲ್ಲಿ ಬಿಜೆಪಿಯು ಚುನಾವಣೆಯಲ್ಲಿ ಸ್ಪರ್ಧಿಸಿ, ಮೈತ್ರಿಕೂಟದ ಶಾಸಕರ ಮತ ಪಡೆದು ತನ್ನ ವಾದವನ್ನು ನಿರೂಪಿಸಬೇಕಿತ್ತು,” ಎಂದು ‘ದಿ ಸ್ಟೇಟ್‌’ ಜೊತೆ ಮಾತನಾಡಿದ ಕಾಂಗ್ರೆಸ್ ವಕ್ತಾರ ವಿ ಎಸ್‌ ಉಗ್ರಪ್ಪ ಅವರು ಬಿಜೆಪಿಯ ಮೇಲೆ ಹರಿಹಾಯ್ದರು. “ಬಿಜೆಪಿ ಹಾಗೂ ಯಡಿಯೂರಪ್ಪ ಅವರು ಸರ್ಕಾರ ಉರುಳಿಸುವ ದುಸ್ಸಾಹಸಗಳನ್ನು ನಿಲ್ಲಿಸಿ, ಇನ್ನು ಮುಂದಾದರೂ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡುವುದು ಒಳಿತು,” ಎಂದೂ ಅವರು ಸಲಹೆ ನೀಡಿದರು.

ಇದನ್ನೂ ಓದಿ : ಪರಿಷತ್‌ ಉಪ ಚುನಾವಣೆ ಕಾಂಗ್ರೆಸ್‌ನಿಂದ ನಜೀರ್‌ ಅಹ್ಮದ್‌, ವೇಣುಗೋಪಾಲ್‌ ಸ್ಪರ್ಧೆ

ಪರಿಷತ್‌ನ ಮೂರು ಸ್ಥಾನಗಳಿಗೂ ಪ್ರತ್ಯೇಕ ಚುನಾವಣೆ ನಿಗದಿಯಾಗಿದ್ದು, ಅಭ್ಯರ್ಥಿಯ ಗೆಲುವಿಗೆ ೧೧೨ ಪ್ರಾಶಸ್ತ್ಯದ ಮತಗಳು ಅಗತ್ಯ. ಇಬ್ಬರು ಪಕ್ಷೇತರರ ಬೆಂಬಲವೂ ಸೇರಿದಂತೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟವು ೧೧೮ ಸದಸ್ಯರ ಬೆಂಬಲ ಹೊಂದಿದೆ. ಬಿಜೆಪಿ ೧೦೪ ಸದಸ್ಯರನ್ನು ಹೊಂದಿರುವುದರಿಂದ ಒಂದು ಸ್ಥಾನ ಗೆಲ್ಲುವುದೂ ದುರ್ಲಭ. ಈಗಾಗಲೇ ಹಲವು ಹಿನ್ನಡೆಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಯಡಿಯೂರಪ್ಪ ಅವರ ಪಟ್ಟಿಗೆ ಪರಿಷತ್‌ ಚುನಾವಣೆಯ ರೂಪದಲ್ಲಿ ಮತ್ತೊಂದು ವಿಫಲ ಯತ್ನ ಸೇರ್ಪಡೆಯಾಗಿದೆ ಎಂದು ಅವರ ರಾಜಕೀಯ ಎದುರಾಳಿಗಳು ಕುಹಕವಾಡುತ್ತಿದ್ದಾರೆ. ಆದರೆ, ಇದನ್ನು ಅಲ್ಲಗಳೆದಿರುವ ವಿಧಾನ ಪರಿಷತ್‌ ಸದಸ್ಯೆ ಹಾಗೂ ಬಿಜೆಪಿ ವಕ್ತಾರೆ ತೇಜಸ್ವಿನಿ, “ಸಂಖ್ಯಾಬಲ ಇಲ್ಲದಿರುವಾಗ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಹೇಗೆ? ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳು ಮಾಧ್ಯಮಗಳ ಸೃಷ್ಟಿ,” ಎಂದು ‘ದಿ ಸ್ಟೇಟ್’ಗೆ ತಿಳಿಸಿದ್ದಾರೆ.

ಇದೆಲ್ಲದರ ನಡುವೆ, ಕಾಂಗ್ರೆಸ್‌ನಿಂದ ಎಂ ಸಿ ವೇಣುಗೋಪಾಲ್‌ ಹಾಗೂ ನಜೀರ್‌ ಅಹ್ಮದ್‌, ಜೆಡಿಎಸ್‌ನಿಂದ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರಿಗೆ ಸಮೀಪವರ್ತಿಯಾದ ರಮೇಶ್‌ ಗೌಡ ನಾಮಪತ್ರ ಸಲ್ಲಿಸಿದ್ದಾರೆ. ಇಬ್ಬರು ಪಕ್ಷೇತರರು ಕಣಕ್ಕಿಳಿದಿದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಇರುವುದರಿಂದ ಆಡಳಿತ ಪಕ್ಷಗಳ ಅಭ್ಯರ್ಥಿಗಳು ಆಯ್ಕೆ ಖಚಿತವಾಗಿದ್ದು, ಔಪಚಾರಿಕ ಘೋಷಣೆಯಷ್ಟೇ ಬಾಕಿ ಇದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More