ದೇವೇಗೌಡರ ಕುಟುಂಬದಲ್ಲಿ ಹೊಸ ಶಕ್ತಿಕೇಂದ್ರವಾಗಿ ಉದಯಿಸಿದರೇ ಶೈಲಜಾ?

ಹಿರಿಯ ನಾಯಕರನ್ನು ಕಡೆಗಣಿಸಿ ವಿಧಾನ ಪರಿಷತ್‌ ಉಪಚುನಾವಣೆಗೆ ಜೆಡಿಎಸ್ ರಮೇಶ್‌ ಗೌಡರನ್ನು ಅಭ್ಯರ್ಥಿ ಆಗಿಸಿರುವುದಕ್ಕೆ ಪಕ್ಷದ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಆದರೆ, ರಮೇಶ್‌ ಗೌಡ ಆಯ್ಕೆಯಲ್ಲಿ ದೇವೇಗೌಡರ ಕಿರಿಯ ಪುತ್ರಿ ಶೈಲಜಾ ಪ್ರಭಾವ ಢಾಳಾಗಿದೆ ಎನ್ನಲಾಗಿದೆ

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ದೊರೆತಿದ್ದ ಒಂದು ಸ್ಥಾನಕ್ಕೆ ಪಕ್ಷದ ಯುವ ಘಟಕದ ಅಧ್ಯಕ್ಷ ಎಚ್‌ ಎಂ ರಮೇಶ್‌ ಗೌಡರ ಆಯ್ಕೆಯೊಂದಿಗೆ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ಕುಟುಂಬದಲ್ಲಿ ಮತ್ತೊಂದು ಶಕ್ತಿಕೇಂದ್ರದ ಕುರಿತು ಬಹಿರಂಗ ಚರ್ಚೆ ಆರಂಭವಾಗಿದೆ. ದೇವೇಗೌಡರ ಕುಟುಂಬ ಸದಸ್ಯರೆಲ್ಲರೂ ಶಕ್ತಿಕೇಂದ್ರಗಳೇ ಎನ್ನುವ ಮಾತುಗಳಿದ್ದರೂ ದೇವೇಗೌಡರು, ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್‌ ಡಿ ರೇವಣ್ಣ ಬಹಿರಂಗದಲ್ಲಿ ಪವರ್ ಹೌಸ್‌ಗಳಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಆಂತರಿಕವಾಗಿ ಪಕ್ಷದ ನೀತಿ, ನಿರ್ಣಯಗಳ ಮೇಲೆ ಗಾಢ ಪ್ರಭಾವ ಹೊಂದಿರುವ, ದೇವೇಗೌಡರ ಆರು ಮಕ್ಕಳ ಪೈಕಿ ಕಿರಿಯರಾದ ಎಚ್‌ ಡಿ ಶೈಲಜಾ ಅವರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಈಗ ರಮೇಶ್‌ ಗೌಡರ ಆಯ್ಕೆಯೊಂದಿಗೆ ಶೈಲಜಾ ಹೊಸ ಶಕ್ತಿಕೇಂದ್ರವಾಗಿ ಪರಿಚಯಗೊಂಡಿದ್ದಾರೆ.

ಕಿರಿಯ ಪುತ್ರಿಯಾದ್ದರಿಂದ ಭಾವನಾತ್ಮಕವಾಗಿ ದೇವೇಗೌಡರಿಗೆ ಶೈಲಜಾ ಅವರ ಮೇಲೆ ಅಪಾರ ಪ್ರೀತಿ. ಆದ್ದರಿಂದ ದೇವೇಗೌಡರು ಹಾಗೂ ಪತ್ನಿ ಚನ್ನಮ್ಮ ಶೈಲಜಾ ಅವರ ಮಾತುಗಳನ್ನು ಅಲ್ಲಗಳೆಯುವುದು ತೀರಾ ಕಡಿಮೆ ಎಂದು ತಿಳಿದುಬಂದಿದೆ. ದೇವೇಗೌಡರು ಹಾಗೂ ಜೆಡಿಎಸ್‌ನ ಎಲ್ಲ ಪ್ರಮುಖ ನಿರ್ಧಾರಗಳ ಹಿಂದೆ ಶೈಲಜಾ ಇರುತ್ತಾರೆ ಎಂಬುದನ್ನು ಪಕ್ಷದ ಹಿರಿಯ ನಾಯಕರು ಮರುಮಾತನಾಡದೆ ಒಪ್ಪುತ್ತಾರೆ. ತಮ್ಮ ಮಾತಿಗೆ ತಂದೆ ಅಥವಾ ಸಹೋದರರು ಪಕ್ಷದಲ್ಲಿ ಬೆಲೆ ನೀಡದಿದ್ದರೆ ತಾಯಿ ಚನ್ನಮ್ಮ ಅವರ ನೆರವಿನಿಂದ ಶೈಲಜಾ ಅವರು ಒತ್ತಡ ಹೇರುವ ಮೂಲಕ ಕಾರ್ಯ ಸಾಧಿಸಿಕೊಳ್ಳುತ್ತಾರೆ ಎನ್ನಲಾಗಿದೆ.

“ಬೆಂಗಳೂರಿನ ಸಂಜಯ್‌ ಗಾಂಧಿ ಟ್ರಾಮಾ ಮತ್ತು ಆರ್ಥೋಪೆಡಿಕ್ ಸಂಸ್ಥೆಯ ನಿರ್ದೇಶಕರಾದ ಡಾ.ಎಚ್‌ ಎಸ್‌ ಚಂದ್ರಶೇಖರ್ ಅವರ ಪತ್ನಿಯಾದ ಶೈಲಜಾ, ದಶಕಗಳಿಂದಲೂ ಪಕ್ಷದಲ್ಲಿ ನಿರ್ಣಾಯಕ ಸ್ಥಾನ ಹೊಂದಿದ್ದಾರೆ. ಆದರೆ, ಅವರೆಂದೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ, ಪಕ್ಷದ ವೇದಿಕೆಯಲ್ಲಿ ಕೆಲವೊಮ್ಮೆ ಕುಮಾರಸ್ವಾಮಿ ಹಾಗೂ ರೇವಣ್ಣ ಮಾತುಗಳಿಗಳಷ್ಟೇ ಶೈಲಜಾ ಅವರ ಮಾತುಗಳಿಗೂ ಪ್ರಾಶಸ್ತ್ಯ ದೊರೆತ ಉದಾಹರಣೆಗಳಿವೆ. ಶೈಲಜಾ ಅವರ ಒತ್ತಡದಿಂದಾಗಿಯೇ ೨೦೧೪ರಲ್ಲಿ ಆಭರಣ ಉದ್ಯಮಿ ಟಿ ಎ ಶರವಣ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದನ್ನು ನೆನೆಪಿಸಿಕೊಳ್ಳಬಹುದು,” ಎನ್ನುತ್ತಾರೆ ಜೆಡಿಎಸ್‌ ಮುಖಂಡರೊಬ್ಬರು.

ಹಾಲಿ ಅಭ್ಯರ್ಥಿ ರಮೇಶ್‌ ಗೌಡರಿಗೆ ಮೇಲ್ಮನೆಯ ಬಾಗಿಲು ತೆರೆಯುವಂತೆ ಮಾಡುವ ಮೂಲಕ ಶೈಲಜಾ ಮತ್ತೊಮ್ಮೆ ಪಕ್ಷದಲ್ಲಿ ತಮ್ಮ ಪ್ರಾಬಲ್ಯ ನಿರೂಪಿಸಿದ್ದಾರೆ. ಶಿಕ್ಷಣ ಸಂಸ್ಥೆ ಹೊಂದಿರುವ ರಮೇಶ್ ಗೌಡರು, ದೇವೇಗೌಡರ ಕುಟುಂಬದ ಜೊತೆಗೆ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಗುರುತಿಸಿಕೊಂಡಿದ್ದಾರೆ. ಪಕ್ಷ ಸಂಘಟನೆಗಿಂತಲೂ ದೇವೇಗೌಡರ ಕುಟುಂಬಕ್ಕೆ ನಿಷ್ಠರಾಗಿರುವುದು ರಮೇಶ್‌ ಗೌಡಗೆ ಅವಕಾಶದ ಬಾಗಿಲು ತೆರೆಯುವಂತೆ ಮಾಡಿದೆ ಎನ್ನಲಾಗಿದೆ. ದೇವೇಗೌಡರ ಆತ್ಮಕತೆ ‘ಅಗ್ನಿ ದಿವ್ಯ’ದಲ್ಲಿ ರಾಜಕೀಯ ವಿಚಾರಗಳನ್ನು ಮಾಜಿ ಶಾಸಕ ಹಾಗೂ ಜೆಡಿಎಸ್‌ ಮುಖಂಡ ವೈ ಎಸ್‌ ವಿ ದತ್ತಾ ಹಾಗೂ ತಂದೆಯ ಬಾಲ್ಯ, ಕುಟುಂಬ, ಸಾಂಸಾರಿಕ ಬದುಕಿನ ಕುರಿತ ವಿಚಾರಗಳನ್ನು ಶೈಲಜಾ ದಾಖಲಿಸಿದ್ದಾರೆ ಎಂಬುದನ್ನು ಇಲ್ಲಿ ನೆನೆಯಬಹುದಾಗಿದೆ.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿ ಎನ್ ಮಂಜುನಾಥ್‌ ಅವರ ಪತ್ನಿ ಅನಸೂಯಾ ಅವರು ಶೈಲಜಾ ಅವರ ಅಕ್ಕ. ದೇವೇಗೌಡರ ಇಬ್ಬರು ಪುತ್ರಿಯರ ಪೈಕಿ ಶೈಲಜಾ ಅವರಿಗೆ ರಾಜಕೀಯದಲ್ಲಿ ಅಪಾರ ಆಸಕ್ತಿ ಇದೆ ಎನ್ನಲಾಗಿದೆ. ಹಲವು ಸಂದರ್ಭಗಳಲ್ಲಿ ಶೈಲಜಾ ಅವರು ತಮ್ಮ ಮನದಾಳವನ್ನು ದೇವೇಗೌಡರರ ಬಳಿ ಹಂಚಿಕೊಂಡಿದ್ದಾರೆ. ಇದೇ ಮಾತುಗಳನ್ನು ಪುತ್ರ ಎಚ್‌ ಡಿ ರಮೇಶ್‌ ಸಹ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಮಾವ, ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರು ರಾಜಕಾರಣದಲ್ಲಿರುವುದು ರಮೇಶ್‌ ರಾಜಕೀಯ ಪ್ರವೇಶಕ್ಕೆ ಅಡ್ಡಿಯಾಗಿದೆ. ಕುಮಾರಸ್ವಾಮಿ, ರೇವಣ್ಣ ಹಾಗೂ ಅವರ ಪತ್ನಿಯರಾದ ಅನಿತಾ ಮತ್ತು ಭವಾನಿ ಸಕ್ರಿಯ ರಾಜಕಾರಣದಲ್ಲಿ ಇರುವುದರಿಂದ ಶೈಲಜಾ ಅವರನ್ನೂ ಕಣಕ್ಕಿಳಿಸಿದರೆ ಸಾರ್ವಜನಿಕವಾಗಿ ಟೀಕೆ ಎದುರಿಸಬೇಕಾಗುತ್ತದೆ ಎಂದು ದೇವೇಗೌಡರು ಶೈಲಜಾ ಅವರ ಆಸೆ ಕೈಬಿಡುವಂತೆ ಮನವೊಲಿಸಿದ್ದರು ಎನ್ನಲಾಗಿದೆ. ಆದರೆ, ಕಳೆದ ಚುನಾವಣೆಯಲ್ಲಿ ಶೈಲಜಾ ಅವರ ಒತ್ತಡಕ್ಕೆ ಮಣಿದಿದ್ದ ದೇವೇಗೌಡರು, ಮಂಡ್ಯ ಜಿಲ್ಲೆಯ ಕೆ ಆರ್‌ ಪೇಟೆ ವಿಧಾನಸಭಾ ಕ್ಷೇತ್ರದಿಂದ ಶೈಲಜಾ ಅವರನ್ನು ಕಣಕ್ಕಿಳಿಸಲು ಎಲ್ಲ ತಯಾರಿ ಮಾಡಿಸಿದ್ದರು. ಹಾಲಿ ಶಾಸಕ ಕೆ ಸಿ ನಾರಾಯಣ ಗೌಡ ಅವರಿಗೆ ಬಿ ಫಾರಂ ನಿರಾಕರಿಸಲಾಗಿತ್ತು. ಇದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಇಂಥ ಸಂದರ್ಭದಲ್ಲಿ ಶೈಲಜಾ ಅವರನ್ನು ಕಣಕ್ಕಿಳಿಸಿದರೆ ತಪ್ಪು ಸಂದೇಶ ರವಾನೆಯಾಗುವುದಲ್ಲದೆ, ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂದು ನಾರಾಯಣ ಗೌಡರಿಗೆ ಟಿಕೆಟ್‌ ನೀಡಲಾಗಿತ್ತು. ಇದರ ಜೊತೆಗೆ, ರಾಮನಗರ ಅಥವಾ ಚನ್ನಪಟ್ಟಣ ಕ್ಷೇತ್ರದಲ್ಲಿ ಶೈಲಜಾ ಅವರನ್ನು ಕಣಕ್ಕಿಳಿಸಲು ದೇವೇಗೌಡರು ಚಿಂತನೆ ನಡೆಸಿದ್ದರು ಎನ್ನಲಾಗಿದೆ. ಆದರೆ, ಯಾವುದೂ ಕಾರ್ಯಸಾಧುವಾಗಲಿಲ್ಲ.

ಇದನ್ನೂ ಓದಿ : ದೇವೇಗೌಡ ಸೀಕ್ರೆಟ್ ಡೈರಿ| ಯಾರ್ರೀ ಅಮಿತ್ ಶಾ? ಅವನಲ್ಲ, ನಿಜವಾದ `ಚಾಣಕ್ಯ’ ನಾನು

ಇದೆಲ್ಲದರ ಮಧ್ಯೆ, ರಮೇಶ್ ಗೌಡರ ಆಯ್ಕೆಯ ಬಗ್ಗೆ ಪಕ್ಷದ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. “ವರಿಷ್ಠರಿಗೆ ಸಾಕಷ್ಟು ಒತ್ತಡ ಮತ್ತು ಲೆಕ್ಕಾಚಾರಗಳಿರುತ್ತವೆ ಎಂಬುದು ಗೊತ್ತಿರುವ ವಿಚಾರ. ಸಂಪನ್ಮೂಲ ಸಂಗ್ರಹ ಹಾಗೂ ಜಾತಿಯೇ ಪ್ರಮುಖ ಮಾನದಂಡವಾದರೆ ಪಕ್ಷ ಕಟ್ಟುವುದು ಹೇಗೆ? ಸಂಸದೀಯ ವ್ಯವಸ್ಥೆಯ ಬಗ್ಗೆ ಲವಲೇಶವೂ ತಿಳಿವಳಿಕೆಯಿಲ್ಲದ ರಮೇಶ್‌ ಗೌಡ ಆಯ್ಕೆ ಸೂಕ್ತ ನಿರ್ಧಾರವಲ್ಲ,” ಎಂದು ಜೆಡಿಎಸ್‌ನ ಹಿರಿಯ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಜೆಡಿಎಸ್‌ ಅಚ್ಚರಿಗೆ ಕಾರಣವಾಗಿರುವುದು ಇದು ಮೊದಲೇನಲ್ಲ. ತಮಿಳುನಾಡು ಮೂಲದ ಉದ್ಯಮಿ ಎಂಎಎಂ ರಾಮಸ್ವಾಮಿ, ಮದ್ಯ ಉದ್ಯಮಿ ವಿಜಯ್‌ ಮಲ್ಯ, ಕುಪೇಂದ್ರ ರೆಡ್ಡಿ ಅವರನ್ನು ಹಿಂದೆ ರಾಜ್ಯಸಭೆಗೆ ಕಳುಹಿಸಿಕೊಡಲಾಗಿದೆ. ಹೆಬ್ಬಾಳದಿಂದ ಕಾಂಗ್ರೆಸ್‌ ಶಾಸಕರಾಗಿರುವ ಬೈರತಿ ಸುರೇಶ್‌ ಅವರೂ ಜೆಡಿಎಸ್‌ನಿಂದ ವಿಧಾನ ಪರಿಷತ್‌ ಪ್ರವೇಶಿಸುವ ಮೂಲಕ ರಾಜಕೀಯ ಬದುಕು ಆರಂಭಿಸಿದ್ದರು. ಮಂಗಳೂರು ಮೂಲದ ಉದ್ಯಮಿ ಬಿ ಎಂ ಫಾರೂಕ್‌ ಅವರನ್ನು ಸಂಖ್ಯಾಬಲದ ಕೊರತೆಯ ನಡುವೆಯೂ ರಾಜ್ಯಸಭೆಗೆ ಕಳುಹಿಸುವ ವಿಫಲ ಯತ್ನ ನಡೆಸಿದ್ದ ಜೆಡಿಎಸ್‌ ನಾಯಕರು, ಅಂತಿಮವಾಗಿ ಈಚೆಗೆ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿಸಿದ್ದಾರೆ. ಈ ಆಯ್ಕೆಗಳ ಹಿಂದೆ ಸಂಪನ್ಮೂಲ ಸಂಗ್ರಹ, ಕುಟುಂಬದ ಹಿತಾಸಕ್ತಿ, ಜಾತಿ ರಾಜಕಾರಣ ಒಂದಿಲ್ಲೊಂದು ರೀತಿಯಲ್ಲಿ ಬೆಸೆದುಕೊಂಡಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More