ಚಾಣಕ್ಯಪುರಿ | ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನಿರೀಕ್ಷೆಯಲ್ಲಿ ಸಿಎಂ ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಸಂಪುಟ ಸ್ಥಾನಮಾನ ನೀಡುವ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅವರಿಗೆ ಪ್ರತ್ಯೇಕ ಕೊಠಡಿ ನೀಡಲಾಗಿದೆ. ಈಗ ಸಂಪುಟ ದರ್ಜೆ ಸ್ಥಾನಮಾನ ನೀಡುವ ಕುರಿತಾಗಿ ಸಿದ್ದರಾಮಯ್ಯ ಕರೆಗೆ  ಕುಮಾರಸ್ವಾಮಿ ಕಾದಿದ್ದಾರಂತೆ

ಸಿದ್ದರಾಮಯ್ಯ ಫೋನ್ ಮಾಡಿ ಕೇಳಲಿ, ಆಮೇಲೆ ಸಮನ್ವಯ ಸಮಿತಿ‌ ಅಧ್ಯಕ್ಷರಾಗಿರುವ ಅವರಿಗೆ ಸಂಪುಟದ ಸ್ಥಾನಮಾನ ನೀಡೋಣ ಅಂತಾ ಸಿಎಂ ಕುಮಾರಸ್ವಾಮಿ ಕಾಯುತ್ತಿದ್ದಾರಂತೆ. ಆದರೆ, ಸಿದ್ದರಾಮಯ್ಯ ಅವರು ಸಂಪುಟ ಸ್ಥಾನಮಾನ ಪಡೆಯುವ ವಿಷಯವಿರಲಿ, ಬೇರೆ ಕಾರಣಗಳಿಗೂ ಕೂಡ ಕುಮಾರಸ್ವಾಮಿಗೆ ಫೋನ್ ಮಾಡಿಲ್ಲವಂತೆ. ಅಗತ್ಯ ಬಿದ್ದಾಗ ಒಂದೆರಡು ಭಾರಿ‌ ಕುಮಾರಸ್ವಾಮಿ ಅವರೇ ಸಿದ್ದರಾಮಯ್ಯ ಅವರಿಗೆ ಕಾಲ್ ಮಾಡಿದ್ದಾರಂತೆ. ಆಗಲೂ ಎಷ್ಟುಬೇಕೋ ಅಷ್ಟೇ ಚರ್ಚೆಯಾಗಿದೆಯಂತೆ.

ಕಾಂಗ್ರೆಸ್ಸಿನ ಕೆಲ ಮಂತ್ರಿಗಳು, ಮಾಜಿ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು ಮತ್ತು ಆಪ್ತರು ಸಿದ್ದರಾಮಯ್ಯ ಬಳಿ ಬಂದು ‘ಸಾರ್, ಸಿಎಂ ಕುಮಾರಸ್ವಾಮಿ ಅವರಿಗೆ ನೀವು ಒಂದು ಕಾಲ್ ಮಾಡಿ‌ ಹೇಳಿ. ಅಥವಾ ಒಂದು ಲೆಟರ್ ಕೊಡಿ, ಕೆಲಸ ಆಗುತ್ತೆ. ನೀವು ಹೇಳಿದ್ರೆ ಮಾತ್ರ ಕೆಲಸ ಆಗುತ್ತೆ. ಇಲ್ಲದಿದ್ರೆ ಈ ಸರ್ಕಾರದಲ್ಲಿ ಏನೂ ಆಗುವುದಿಲ್ಲ’ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಮಾತ್ರ ‘ನಾನು ಯಾರಿಗೂ ಫೋನ್ ಮಾಡೋಲ್ಲ’ ಎನ್ನುತ್ತಿದ್ದಾರಂತೆ. ಸಿದ್ದರಾಮಯ್ಯ ಅವರ ಸ್ವಾಭಿಮಾನ ಕೆಲವರಿಗೆ ಸಿಟ್ಟು ಬರಿಸಿದೆಯಂತೆ.

ಯೂರೋಪ್ ಪ್ರವಾಸದ ಅನುಭವ ಹಂಚಿಕೊಂಡ‌ ಸಿದ್ದರಾಮಯ್ಯ

ಇತ್ತೀಚೆಗೆ ದೆಹಲಿ ಪತ್ರಕರ್ತರ ಬಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೂರೋಪ್ ಪ್ರವಾಸದ ಅನುಭವ ಹಂಚಿಕೊಂಡರು.‌ ಯೂರೋಪ್ ರಾಷ್ಟ್ರಗಳು ನಮಗಿಂತ ಬಹಳ ಅಭಿವೃದ್ಧಿಯಾಗಿವೆ. ಅದಕ್ಕೆ ಅಲ್ಲಿ ಬಹಳ ಹಿಂದೆಯೇ ಸಾಮಾಜಿಕ ಮತ್ತು ರಾಜಕೀಯ ಕ್ರಾಂತಿಗಳಾಗಿರುವುದು ಮೊದಲ ಕಾರಣ. ಆ ದೇಶಗಳು ಭೌಗೋಳಿಕವಾಗಿ ದೊಡ್ಡದಾಗಿದ್ದು, ಕಡಿಮೆ ಜನಸಂಖ್ಯೆ ಇರುವುದು ಇನ್ನೊಂದು ಕಾರಣ. ಅಲ್ಲಿ ಜಾತಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಕೆಳಹಂತದಲ್ಲಿ ಭ್ರಷ್ಟಾಚಾರ ಇಲ್ಲದಿರುವುದು ನಂತರದ ಕಾರಣಗಳು ಎಂದು ಪ್ರಮುಖ ಕಾರಣಗಳ ಪಟ್ಟಿ‌ ಮಾಡಿದರು. ಅಲ್ಲಿನ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ನೀಡುತ್ತವೆ. ಇದರಿಂದ ಸಹಜವಾಗಿ ಜನಸಾಮಾನ್ಯರ ಜೀವನಮಟ್ಟ ಸುಧಾರಿಸುತ್ತದೆ. ಎಲ್ಲಾ ‌ಕಡೆ ಹಾಗೇ ಇರಬೇಕು.‌ ಆದರೆ, ನಮ‌್ಮ ದೇಶದಲ್ಲಿ ಈ ಎರಡೂ ಕ್ಷೇತ್ರಗಳ ಮೇಲೆ ಸರ್ಕಾರ ಹಿಡಿತ ಸಾಧಿಸುವುದು ಸುಲಭ ಸಾಧ್ಯವಲ್ಲ ಎಂದು ಅಭಿಪ್ರಾಯಪಟ್ಟರು.

ಹೀಗೆ ಮಾತನಾಡುತ್ತಿದ್ದಾಗ ಹಿರಿಯ ನಾಯಕ ಜಾಫರ್ ಷರೀಫ್ ಆಗಮಿಸಿದರು. ಅವರು “ಮಾಸ್ಕೋದಲ್ಲಿ ಲೆನಿನ್ ಸಮಾಧಿಗೆ ಹೋಗಿದ್ರಾ?” ಅಂತಾ ಕೇಳಿದರು. “ಹೋಗಿದ್ದೆ, ಅದೇತಾನೇ ಅಲ್ಲಿ ನೋಡಬೇಕಾದ ಜಾಗ” ಎಂದರು ಸಿದ್ದರಾಮಯ್ಯ. ನಂತರ ಚಳಿ ಕುರಿತಾದ ಚರ್ಚೆ. “ಅಲ್ಲಿ ಸಿಕ್ಕಾಪಟ್ಟೆ ಚಳಿ ಎಂದುಕೊಂಡು ಅದಕ್ಕೆ ಬೇಕಾದ ಬಟ್ಟೆ ತೆಗೆದುಕೊಂಡು ಹೋಗಿದ್ದೆ. ಆದರೆ ಅಲ್ಲಿನ ವಾತಾವರಣ ನಮ್ಮ ದೇಶದಂತೆಯೇ ಇತ್ತು. ಚಳಿಗೆಂದು ತೆಗೆದುಕೊಂಡು ಹೋಗಿದ್ದ ಬಟ್ಟೆಗಳನ್ನು ಹೊರಗೆ ತೆಗೆಯಲೇ ಇಲ್ಲ” ಎಂದು ನಕ್ಕರು ಸಿದ್ದರಾಮಯ್ಯ. ಅದಾದ ಮೇಲೆ ಬಕಿಂಗ್ ಹ್ಯಾಮ್ ಅರಮನೆ ಎದುರಿನ ಗ್ರೀನ್ ಪಾರ್ಕ್ ನಲ್ಲಿ ವಾಕ್ ಮಾಡಿದ್ದನ್ನು ನೆನಪಿಸಿಕೊಂಡು ಪುಳಕಿತರಾದರು.

ಫ್ರಾನ್ಸ್ ಪ್ರವಾಸ ರದ್ದುಗೊಳಿಸಿದ ನಿರ್ಮಲಾ ಸೀತಾರಾಮನ್

ರಫೇಲ್ ಯುದ್ಧ ವಿಮಾನಗಳ‌ ಖರೀದಿ ವಿಚಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಿದ್ದೆಗೆಡಿಸಿದೆ. ‘ರಫೇಲ್ ಡೀಲ್’ಗೆ ಪ್ರಧಾನಿ ಮೋದಿಯವರೇ ಹೊಣೆ ಎನ್ನುವುದು ಕಾಂಗ್ರೆಸ್ ನಾಯಕರ ನೇರ ಆರೋಪ.‌ ಜೊತೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯದಲ್ಲಿ ‘ಪೊಪೆಡ್’ ಎನ್ನುವುದು ಅವರ ಮೂದಲಿಕೆ. ಕಾಂಗ್ರೆಸ್ ನಾಯಕರ ಈ ವರಸೆಗೆ ಮೋದಿ ಮತ್ತು ಅಮಿತ್ ಶಾ ಕಂಗಾಲಾಗಿದ್ದಾರೆ. ‘ಕಾಂಗ್ರೆಸ್ ನಿಮ್ಮನ್ನು ನಗಣ್ಯ ಎಂದು ಬಿಂಬಿಸಿದರೂ ಸರಿ, ನೀವೇ ಹೋಗಿ ರಫೇಲ್ ಡೀಲ್ ಅನ್ನು ಸಮರ್ಥಿಸಿಕೊಳ್ಳಿ’ ಎಂದು ಬಿಜೆಪಿ ನಿರ್ಮಲಾ ಸೀತಾರಾಮನ್ ಅವರನ್ನೇ ಮುಂದು ಕಳುಹಿಸಿದೆ. ನಿರ್ಮಲಾ ಸೀತಾರಾಮನ್ ಕಷ್ಟಪಟ್ಟು ಸಮರ್ಥಿಸಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ, ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂದ್‌ ‘ರಫೇಲ್ ಡೀಲ್ ನಲ್ಲಿ ಭಾರತ ನಮಗೆ ರಿಲಯನ್ಸ್ ಕಂಪನಿ ಬಿಟ್ಟರೆ ಬೇರೆ ಆಯ್ಕೆಯನ್ನೇ ನೀಡಿರಲಿಲ್ಲ ಎಂದು ಹೇಳಿ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದರ ಪರಿಣಾಮವಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಫ್ರಾನ್ಸ್ ಪ್ರವಾಸ ರದ್ದು ಮಾಡಿದ್ದಾರೆ. ಇಲ್ಲದಿದ್ದರೆ ಭಾರತ ಮತ್ತು ಈಜಿಪ್ಟ್ ನಡುವೆ ರಕ್ಷಣಾ ಒಪ್ಪಂದ ಮಾಡಿಕೊಳ್ಳಲು ಕೈರೋಗೆ ತೆರಳಿದ್ದ ನಿರ್ಮಲಾ ಸೀತಾರಮನ್, ನಂತರ ಫ್ರಾನ್ಸ್ ದೇಶವನ್ನೂ ಸುತ್ತಾಡಿ ಬರಬೇಕಿತ್ತು. ಇದಲ್ಲದೆ ಈಗ ಸಾಮಾಜಿಕ ಜಾಲತಾಣದಲ್ಲಿ ರಫೇಲ್ ಡೀಲ್ ಬಗ್ಗೆ 'ಮೇಡಂ‌‌ ನಹಿ ಮಾಡ್ತಾ, ಪಿಎಂ ಮಾಡ್ತಾ' ಎಂಬ ಕುಹಕಗಳು ಕೇಳಿಬರುತ್ತಿವೆ.

ಇದನ್ನೂ ಓದಿ : ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ‌ಮನೆ‌ ಮಾಡಿದ್ದೇಕೆ?

ಇತ್ತೀಚೆಗೆ ಶಚಿವ ಡಿ ಕೆ ಶಿವಕುಮಾರ್ ದೆಹಲಿ ಮನೆಯಲ್ಲಿ ದುಡ್ಡು ಸಿಕ್ಕಿದ ಬಗ್ಗೆ ದಂಡಿ ದಂಡಿ ಸುದ್ದಿಯಾಗಿತ್ತು. ಇದರ ಬಗ್ಗೆ ಮಾತನಾಡುತ್ತಿದ್ದ ಡಿ ಕೆ ಶಿವಕುಮಾರ್, ತಾವು ದೆಹಲಿಯಲ್ಲಿ ಮನೆ ಮಾಡಿದ್ದು ಏಕೆ ಎಂಬ ಗುಟ್ಟು ಬಿಚ್ಚಿಟ್ಟರು. ಆಗಷ್ಟೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದ ಜೆ ಎಚ್ ಪಟೇಲ್ ಮಾಜಿಯಾಗಿ ದೆಹಲಿಯ ಕರ್ನಾಟಕ ಭವನಕ್ಕೆ ಬಂದಾಗ ಅಲ್ಲಿನ‌ ಸಿಬ್ಬಂದಿ ತುಂಬಾ ನಿರ್ಲಕ್ಷ್ಯ ಮಾಡಿದ್ದರಂತೆ. ಮುಖ್ಯಮಂತ್ರಿ ಆಗಿದ್ದಾಗ ಕೈಗೊಬ್ಬ ಕಾಲಿಗೊಬ್ಬರಂತಿದ್ದ ಸಹಾಯಕರು, ಮಾಜಿಯಾಗಿ ಬಂದಾಗ ಕಡೆಪಕ್ಷ ಅವರ ಸೂಟ್ ಕೇಸ್ ಅನ್ನೂ ಹಿಡಿದುಕೊಳ್ಳಲಿಲ್ಲವಂತೆ. ಪಟೇಲರೇ ಸೂಟ್ ಕೇಸ್ ತೆಗೆದುಕೊಂಡು ಹೋಗಬೇಕಾಯಿತಂತೆ. ಇದನ್ನು ಕಂಡ ಡಿ ಕೆ ಶಿವಕುಮಾರ್, ಅವತ್ತೇ “ಅಧಿಕಾರ ಹೋದ ಮೇಲೆ ಕರ್ನಾಟಕ ಭವನಕ್ಕೆ ಬರಬಾರದು” ಎಂದು ನಿರ್ಧಾರಿಸಿದರಂತೆ. ಅದಕ್ಕಾಗಿ ದೆಹಲಿಯಲ್ಲಿ ಒಂದು ಫ್ಲಾಟ್ ತೆಗೆದುಕೊಂಡರಂತೆ. ಸ್ವಲ್ಪ ಬಿಡುವು ಬೇಕಿನಿಸಿದಾಗ, ಸ್ನೇಹಿತರ ಜೊತೆ 'ಹರಟೆ' ಹೊಡೆಯಬೇಕಿನಿಸಿದಾಗ ಅದೇ ಮನೆಯಲ್ಲಿ ಇರುತ್ತಿದ್ದರಂತೆ. ಆಮೇಲೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಹೋದರ ಡಿ ಕೆ ಸುರೇಶ್ ಸಂಸದರಾಗಿ ದೆಹಲಿಗೆ ಬಂದರು. ಅವರಿಗೆ ಕೇಂದ್ರ ಸರ್ಕಾರ ಮನೆ ಕೊಟ್ಟಿದೆ.‌ ಈಗ ಹೆಚ್ಚಾಗಿ ಸುರೇಶ್ ಮನೆಯಲ್ಲೇ ಉಳಿದುಕೊಳ್ಳುತ್ತಾರಂತೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More