ಅಭಿವೃದ್ಧಿಯ ಹೆಸರಿನಲ್ಲಿ ಮತ್ತೆ ಮೊಳಗಿತು ಪ್ರತ್ಯೇಕ ರಾಜ್ಯ ಹೋರಾಟದ ಕೂಗು!

ಮತ್ತೆ ಪ್ರತ್ಯೇಕ ರಾಜ್ಯ ಹೋರಾಟದ ದನಿ ಮೊಳಗತೊಡಗಿದ್ದು, ‘ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯ’ ಎಂಬ ಘೋಷಣೆಯ ಹಂತದಿಂದ ಈಗ ‘ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯ’ ಎಂಬ ಘೋಷಣೆಗೆ ಮುಂಬಡ್ತಿ ಪಡೆದಿದೆ. ಆಡಳಿತ ವ್ಯವಸ್ಥೆ ಈ ಕೂಗನ್ನು ಹೇಗೆ ನಿಭಾಯಿಸಲಿದೆ ಎಂದು ಕಾದುನೋಡಬೇಕಿದೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಕೂಗು ಕೆಲ ದಿನಗಳ ಮೌನದ ಬಳಿಕ ಮತ್ತೊಮ್ಮೆ ಮೊಳಗಿದೆ. ಭಾನುವಾರ ಬಾಗಲಕೋಟೆಯಲ್ಲಿ ನಡೆದ ಹೋರಾಟ ಸಮಿತಿಯ ವಿಶೇಷ ಸಭೆಯಲ್ಲಿ ತೆಲಂಗಾಣ ಮಾದರಿಯಲ್ಲಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಆ ಮೂಲಕ, ಕೆಲ ದಿನಗಳ ಮಟ್ಟಿಗೆ ತಣ್ಣಗಾಗಿದ್ದ ಪ್ರತ್ಯೇಕ ರಾಜ್ಯದ ಕೂಗು ಇನ್ನಷ್ಟು ಗಟ್ಟಿಯಾಗುವ ಸೂಚನೆ ರವಾನಿಸಲಾಗಿದೆ.

ಬಾಗಲಕೋಟೆ ಭಾಗದ ಕೆಲವು ಮಠಾಧೀಶರು ಮತ್ತು ಹದಿಮೂರು ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಸ್ವೀಕರಿಸಲಾಗಿದೆ. ಪ್ರಮುಖವಾಗಿ ಸಭೆಯಲ್ಲಿದ್ದವರಿಗೆ ಉತ್ತರಕನ್ನಡ ಮತ್ತು ಮಧ್ಯ ಕರ್ನಾಟಕದ ೧೫ ಜಿಲ್ಲೆಗಳ ಪಟ್ಟಿ ನೀಡಿ ಉತ್ತರಕರ್ನಾಟಕದ ರಾಜ್ಯಕ್ಕೆ ಸೇರಿಸಬೇಕಾದ ಜಿಲ್ಲೆಗಳನ್ನು ಆಯ್ಕೆಮಾಡಲು ಜನಮತ ಸಂಗ್ರಹಿಸಲಾಯಿತು. ಆದರೆ, ಸಭೆಯಲ್ಲಿದ್ದ ಶೇ.೮೯ಮಂದಿ ಶಿವಮೊಗ್ಗ ಮತ್ತು ದಾವಣಗೆರೆ ಹೊರತುಪಡಿಸಿ ಉಳಿದ ೧೩ ಜಿಲ್ಲೆಗಳನ್ನು ಹೊಸ ರಾಜ್ಯದಲ್ಲಿ ಸೇರಿಸಿಕೊಳ್ಳಲು ಸಹಮತ ವ್ಯಕ್ತಪಡಿಸಿದ್ದಾರೆ. ಹೊಸ ರಾಜ್ಯಕ್ಕೆ ಉತ್ತರಕರ್ನಾಟಕ ಎಂದೇ ಹೆಸರಿಡಲು ಮತ್ತು ಹೊಸ ರಾಜ್ಯದ ರಾಜಧಾನಿಯಾಗಿ ಬೆಳಗಾವಿ ಮತ್ತು ಬಾಗಲಕೋಟೆಗಳಲ್ಲಿ ಯಾವುದು ಸೂಕ್ತ ಎಂಬ ಪ್ರಶ್ನೆ ಬಂದಾಗ ಶೇ.೭೧ರಷ್ಟು ಮಂದಿ ಬಾಗಲಕೋಟೆಗೆ ಸಮ್ಮತಿ ಸೂಚಿಸಿದ್ದಾರೆ. ಅಲ್ಲದೆ, ಧ್ವಜವನ್ನು ಕೂಡ ಸಭೆಯಲ್ಲಿ ಬಹುಮತದೊಂದಿಗೆ ಅಂತಿಮಗೊಳಿಸಲಾಗಿದೆ. ಪ್ರತಿವರ್ಷದ ಹೊಸ ವರ್ಷದ ದಿನವೇ ಉತ್ತರಕರ್ನಾಟಕ ರಾಜ್ಯೋತ್ಸವಕ್ಕೂ ಶೇ.೫೯ರಷ್ಟು ಮಂದಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದೂ ಸಮಿತಿ ಅಧ್ಯಕ್ಷ ಭೀಮಣ್ಣ ಗಡಾದ ಹೇಳಿರುವುದಾಗಿ ವರದಿಯಾಗಿದೆ.

ಸಭೆಯ ಕುರಿತು ‘ದಿ ಸ್ಟೇಟ್‌’‌ನೊಂದಿಗೆ ಮಾತನಾಡಿದ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ, “ಉತ್ತರ ಕರ್ನಾಟಕದ ಬಂದ್ ಹೋರಾಟದ ಬಳಿಕ, ಕೆಲವು ದಿನಗಳ ಕಾಲ ಸಂಘಟನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಸಮಿತಿ, ಇದೀಗ ಬಾಗಲಕೋಟೆ ಸಭೆಯ ಮೂಲಕ ಕೆಲವು ಪ್ರತ್ಯೇಕ ರಾಜ್ಯದ ಹೆಸರು, ರಾಜಧಾನಿ, ಧ್ವಜ, ಜಿಲ್ಲೆಗಳು ಮತ್ತು ರಾಜ್ಯೋತ್ಸವ ದಿನದ ವಿಷಯದಲ್ಲಿ ಒಂದು ಸ್ಪಷ್ಟತೆ ಕಂಡುಕೊಂಡಿದೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಆದರೆ, ತೆಲಂಗಾಣ ಮಾದರಿ ಎಂದಾಕ್ಷಣ ಹಿಂಸಾತ್ಮಕ ಹೋರಾಟವೆಂದು ಅರ್ಥವಲ್ಲ. ಬದ್ಧತೆ ಮತ್ತು ನಿರಂತರ ಹೋರಾಟದ ವಿಷಯದಲ್ಲಿ ಮತ್ತು ಭವಿಷ್ಯದ ಅಭಿವೃದ್ಧಿ ದೃಷ್ಟಿಯಲ್ಲಿ ತೆಲಂಗಾಣ ಮಾದರಿ ಎಂದು ಕರೆದಿದ್ದೇವೆ. ಜಾರ್ಖಂಡ್ ಮಾದರಿಯಲ್ಲಿ ನಮ್ಮ ರಾಜ್ಯ ರಚನೆಯಾಗಬೇಕು ಎಂಬುದು ನಮ್ಮ ಆಶಯ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ವಿಫಲ; ಅಖಂಡ ಕರ್ನಾಟಕಕ್ಕೆ ಬಲ

ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಉತ್ತರಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂಬ ಹಿನ್ನೆಲೆಯಲ್ಲಿ ದಿಢೀರ್ ಭುಗಿಲೆದ್ದಿದ್ದ ಹೋರಾಟ, ಆ ಭಾಗದ ಅಭಿವೃದ್ಧಿ ನಿರ್ಲಕ್ಷ್ಯದ ಐತಿಹಾಸಿಕ ಸಂಗತಿಯ ಹೊರತಾಗಿಯೂ ರಾಜಕೀಯ ಕುಮ್ಮಕ್ಕು ಮತ್ತು ಹಿತಾಸಕ್ತಿಗಳಿಗೆ ಈಡಾಗಿರುವ ಸಂಶಯಕ್ಕೂ ಕಾರಣವಾಗಿತ್ತು. ಅದರಲ್ಲೂ ಬಿಜೆಪಿಯ ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಹೋರಾಟದ ನೇತೃತ್ವ ವಹಿಸುವ, ಪ್ರತ್ಯೇಕ ರಾಜ್ಯ ಕಟ್ಟುವ ಕುರಿತು ವೀರಾವೇಷದ ಹೇಳಿಕೆಗಳನ್ನು ನೀಡಿದ ಬಳಿಕ, ಇಡೀ ಹೋರಾಟಕ್ಕೇ ರಾಜಕೀಯ ಆಯಾಮ ಸಿಕ್ಕಿತ್ತು.

ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಜೆಡಿಎಸ್‌ ಅಧಿಕಾರಕ್ಕೆ ಬಂದ ಬಳಿಕ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಜೆಟ್‌ನಲ್ಲಿ ಆ ಒಕ್ಕಲಿಗ ಪ್ರಾಬಲ್ಯದ ಆ ಭಾಗಕ್ಕೇ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದಾರೆ. ಉತ್ತರ ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ತಳೆದಿದ್ದಾರೆ ಎಂಬ ಮಾತುಗಳು ಬಿಜೆಪಿಯಷ್ಟೇ ಅಲ್ಲದೆ, ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್ಸಿನ ಕೆಲವು ನಾಯಕರಿಂದಲೂ ಕೇಳಿಬಂದಿದ್ದವು. ಹಾಗಾಗಿ, ಸಹಜವಾಗೇ ಪ್ರತ್ಯೇಕ ರಾಜ್ಯ ಹೋರಾಟ ಪ್ರಾದೇಶಿಕ ಅಸಮಾನತೆ, ಅಭಿವೃದ್ಧಿ ನಿರ್ಲಕ್ಷ್ಯದ ಜೊತೆಗೆ, ಲಿಂಗಾಯಿತ ಸಮುದಾಯದ ಪ್ರಾಬಲ್ಯದ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಬಿಜೆಪಿಯ ರಾಜಕೀಯ ಅಸಹನೆಯ ಅಸ್ತ್ರವಾಗಿ ಬಳಕೆಯಾಗುತ್ತಿದೆಯೇ ಎಂಬ ಸಂಶಯಕ್ಕೂ ಕಾರಣವಾಗಿತ್ತು.

ಇದೀಗ, ಕೇಂದ್ರ ಸರ್ಕಾರದ ವಿರುದ್ಧದ ರಫೇಲ್ ಹಗರಣ, ಇಂಧನ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಮುಂತಾದ ಸಾಲುಸಾಲು ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ವಿಷಯಗಳಿಂದ, ಜನರ ಗಮನವನ್ನು ಬೇರೆಡೆ ಹರಿಸುವ ತಂತ್ರಗಾರಿಕೆಯಾಗಿ ಬಿಜೆಪಿ ಈ ಹೋರಾಟಕ್ಕೆ ಮತ್ತೆ ಕುಮ್ಮಕ್ಕು ನೀಡಿದೆ ಎಂಬ ಮಾತುಗಳು ಭಾನುವಾರದ ಸಭೆಯ ಹಿನ್ನೆಲೆಯಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು.

ಆ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ, ನಾಗೇಶ ಗೋಲಶೆಟ್ಟಿ, “ಯಾವುದೇ ರಾಜಕೀಯ ಪಕ್ಷದ ಚಿತಾವಣೆಗೆ ಅಥವಾ ಹಿತಾಸಕ್ತಿಗೆ ಹೋರಾಟ ಬಳಕೆಯಾಗಿಲ್ಲ ಮತ್ತು ಆಗುವುದೂ ಇಲ್ಲ. ಇದು ಇಂದು ನಿನ್ನೆಯ ಹೋರಾಟವೇನೂ ಅಲ್ಲ. ಬದಲಾಗಿ ಕಳೆದ ೭-೮ ವರ್ಷಗಳಿಂದ ನಿರಂತರ ಜನಾಭಿಪ್ರಾಯ, ಸಂಘಟನೆಯ ಮೂಲಕ ರೂಪುಗೊಂಡ ಚಳವಳಿ. ಈವರೆಗೆ ೬೮ ಲಕ್ಷ ಜನರ ವೈಯಕ್ತಿಕ ಅಭಿಪ್ರಾಯ ಸಂಗ್ರಹ ಮಾಡಿ ಜನಮತ ಪಡೆಯಲಾಗಿದೆ. ಉಮೇಶ್ ಕತ್ತಿ, ನಡಹಳ್ಳಿ ಅಂತಹ ನಾಯಕರು ಪ್ರತ್ಯೇಕ ರಾಜ್ಯದ ವಿಷಯದಲ್ಲಿ ಮಾತನಾಡಿದ್ದರೂ, ಒಂದಷ್ಟು ಪ್ರೇರಣೆ ನೀಡಿದ್ದರೂ, ಹಿರಿಯರಾದ ಪಾಟೀಲ ಪುಟ್ಟಪ್ಪ, ಕೊಪ್ಪಳ- ಬಾಗಲಕೋಟೆಯ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಹೋರಾಟ ತನ್ನದೇ ಆದ ಗೊತ್ತುಗುರಿ ರೂಪಿಸಿಕೊಂಡಿದೆ. ೧೯೯೬ರಷ್ಟು ಹಿಂದೆಯೇ ಬಾಗಲಕೋಟೆ ನಗರಸಭೆ ಪ್ರತ್ಯೇಕ ರಾಜ್ಯದ ಪರ ನಿರ್ಣಯ ಅಂಗೀಕರಿಸಿತ್ತು ಎಂಬುದನ್ನು ರಾಜಕೀಯ ಕುಮ್ಮಕ್ಕಿನ ಆರೋಪ ಮಾಡುವವರು ಮರೆಯಬಾರದು” ಎಂದರು.

ಅದೇ ಹೊತ್ತಿಗೆ, ಶಿವಮೊಗ್ಗ ಮತ್ತು ದಾವಣಗೆರೆ ಸೇರಿದಂತೆ ಒಟ್ಟು ಹದಿನೈದು ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯ ರಚಿಸುವ ಕುರಿತು ಸಮಿತಿ ಚಿಂತನೆ ನಡೆಸಿತ್ತು. ಆ ಹಿನ್ನೆಲೆಯಲ್ಲಿಯೇ, ಹೋರಾಟ ಸಮಿತಿಯೊಂದಿಗೆ ಗುರುತಿಸಿಕೊಂಡಿದ್ದ ಈ ಜಿಲ್ಲೆಗಳ ಸುಮಾರು ೩೮೦ ಮಂದಿಗೆ ಪತ್ರ ಬರೆದು ಬಾಗಲಕೋಟೆಯ ಸಭೆಗೆ ಆಹ್ವಾನಿಸಲಾಗಿತ್ತು. ಆ ಪೈಕಿ ಸಾಹಿತಿಗಳೂ, ಮಠಾಧೀಶರು, ವಿವಿಧ ಸಂಘಟನೆ ಮತ್ತು ಸಂಸ್ಥೆಗಳ ಮುಖಂಡರೂ ಇದ್ದರು. ಆದರೆ, ಸಭೆಗೆ ೧೨ ಜಿಲ್ಲೆಗಳ ಆಹ್ವಾನಿತರು ಮಾತ್ರ ಆಗಮಿಸಿದ್ದರು. ಹಾಗಾಗಿ, ಹೊಸ ರಾಜ್ಯದ ಜಿಲ್ಲೆಗಳ ಆಯ್ಕೆಯ ವೇಳೆ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು ಕೈಬಿಡಲಾಯಿತು. ಆದರೆ, ಉತ್ತರಕನ್ನಡ ಜಿಲ್ಲೆಯ ಪ್ರತಿನಿಧಿಗಳು ಬರದೇ ಇದ್ದರೂ, ಅವರು ಹೊಸ ರಾಜ್ಯಕ್ಕೆ ಸಮ್ಮತಿ ಸೂಚಿಸಿದ್ದರಿಂದ ಆ ಜಿಲ್ಲೆಯನ್ನೂ ಸೇರಿ ೧೩ ಜಿಲ್ಲೆಗಳ ಹೊಸ ರಾಜ್ಯ ರಚನೆಗೆ ನಿರ್ಣಯ ಕೈಗೊಳ್ಳಲಾಯಿತು ಎಂದೂ ಅವರು ಸ್ಪಷ್ಟಪಡಿಸಿದರು.

ಒಟ್ಟಾರೆ, ಕೆಲವು ದಿನಗಳ ಬಿಡುವಿನ ಬಳಿಕ ಮತ್ತೆ ಪ್ರತ್ಯೇಕ ರಾಜ್ಯ ಹೋರಾಟದ ದನಿ ಮೊಳಗತೊಡಗಿದ್ದು, ಆಡಳಿತ ವ್ಯವಸ್ಥೆ ಈ ಕೂಗನ್ನು ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. ಏಕೆಂದರೆ, ‘ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯ’ ಎಂಬ ಘೋಷಣೆಯ ಹಂತದಿಂದ ಈಗ ಈ ಹೋರಾಟ, ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯ ಎಂಬ ಘೋಷಣೆಗೆ ಮುಂಬಡ್ತಿ ಪಡೆದಿದೆ. ಈ ಹಂತದಲ್ಲಿ ಅತೃಪ್ತ ಜನಸಮುದಾಯವನ್ನು ವಿಶ್ವಾಸಕ್ಕೆ ಪಡೆದು, ಅವರಲ್ಲಿ ತಾರತಮ್ಯರಹಿತ ಅಭಿವೃದ್ಧಿ ಮತ್ತು ಸಮಾನತೆಯ ನಂಬಿಕೆ ಹುಟ್ಟಿಸುವ ಸವಾಲು ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಮುಂದಿದೆ.

ಹಾಗೇ, ಪ್ರತ್ಯೇಕ ರಾಜ್ಯದಿಂದ ರಾಜಕೀಯ ಲಾಭ ಮಾಡಿಕೊಳ್ಳುವ ದೂರದ ಲೆಕ್ಕಾಚಾರ ಹೊಂದಿರುವ ರಾಜಕೀಯ ಪಕ್ಷಗಳು ರಾಜ್ಯದ ಸಮಗ್ರತೆಯ ವಿಷಯದಲ್ಲಾದರೂ ಕನಿಷ್ಠ ಸ್ವಾರ್ಥ ಬಿಟ್ಟು ನಡೆದುಕೊಳ್ಳಲಿವೆಯೇ ಎಂಬುದನ್ನೂ ಕಾದುನೋಡಬೇಕಿದೆ. ಬಹುಶಃ ಮುಂದಿನ ದಿನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಅಸಲೀತನವನ್ನು ಈ ಹೋರಾಟ ಮತ್ತೊಂದು ಸುತ್ತಿಗೆ ಒರೆಗೆ ಹಚ್ಚುವ ಸಾಧ್ಯತೆ ಇದ್ದೇ ಇದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More