ಬಿಬಿಎಂಪಿ ಮೇಯರ್‌ ಚುನಾವಣೆಗೂ ವಿಸ್ತರಿಸಲಿದೆಯೇ ಬಿಜೆಪಿ ವೈಫಲ್ಯದ ಕೊಂಡಿ?

ರಾಜ್ಯದ ಚುಕ್ಕಾಣಿ ಹಿಡಿಯಲು ಬಿಜೆಪಿ ರೂಪಿಸಿದ ಬಹುತೇಕ ಕಾರ್ಯತಂತ್ರ ವಿಫಲವಾಗಿವೆ. ಇದರಿಂದ ರಾಜ್ಯ ನಾಯಕತ್ವವೂ ಕಂಗಾಲಾಗಿದ್ದು, ಕಾರ್ಯಕರ್ತರೂ ಬೇಸರಗೊಂಡಿದ್ದಾರೆ. ಈಗ ಮತ್ತೊಮ್ಮೆ ಬಿಜೆಪಿ, ಬಿಬಿಎಂಪಿ ಮೇಯರ್‌ ಚುನಾವಣೆಯ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ

ವಿಧಾನಸಭೆಯಿಂದ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೇ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಮುಖಭಂಗಕ್ಕೀಡಾಗಿರುವ ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್‌ ಮತ್ತು ಉಪಮೇಯರ್‌ ಆಯ್ಕೆ ಚುನಾವಣೆ ಶುಕ್ರವಾರ ನಿಗದಿಯಾಗಿದ್ದು, ಬಿಜೆಪಿಯು ಅಧಿಕಾರ ಹಿಡಿಯಲು ರೂಪಿಸಿರುವ ಕಾರ್ಯತಂತ್ರದಲ್ಲಿ ಯಶಸ್ಸು ಕಾಣಲಿದೆಯೇ ಎನ್ನುವ ಚರ್ಚೆ ಕುತೂಹಲ ಹುಟ್ಟಿಸಿದೆ.

ಪರಿಷತ್ ಚುನಾವಣೆಯಲ್ಲಿ ನಡೆದುಕೊಂಡಂತೆ ಮೈತ್ರಿಕೂಟದ ಎದುರು ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಬಿಜೆಪಿಯು ಸುಲಭವಾಗಿ ಮಂಡಿಯೂರಲಿದೆಯೇ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಾಣುವ ಮೂಲಕ ತನ್ನ ಸಾಲು-ಸಾಲು ಹಿನ್ನೆಡೆಗಳ ಪಟ್ಟಿಗೆ ಮತ್ತೊಂದು ಸೋಲನ್ನು ಸೇರಿಸಿಕೊಳ್ಳಲಿದೆಯೇ ಎಂಬ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ವ್ಯಾಪಕವಾಗಿವೆ. ಈ ಮಧ್ಯೆ, ಬಿಬಿಎಂಪಿ ಚುನಾವಣಾ ಫಲಿತಾಂಶವು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರು ವ್ಯಾಪ್ತಿಯ ರಾಜಕಾರಣಿಗಳ ಬಲಾಬಲ ಪರಿಚಯಿಸಲಿದ್ದು, ಫಲಿತಾಂಶವು ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಬಿಬಿಎಂಪಿಯಲ್ಲಿ ಒಟ್ಟು ೧೯೮ ಕಾರ್ಪೊರೇಟರ್‌ಗಳಿದ್ದಾರೆ. ಇವರ ಜೊತೆ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಒಟ್ಟು ೨೫೯ ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಬಹುಮತಕ್ಕೆ ೧೩೦ ಮತ ಅಗತ್ಯವಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟವು ೧೨೬ ಮತ ಹೊಂದಿದೆ. ಬಿಜೆಪಿ ೧೨೨ ಮತ ಹೊಂದಿದ್ದು, ೮ ಮಂದಿ ಪಕ್ಷೇತರರು ಮೈತ್ರಿಕೂಟ ಹಾಗೂ ಬಿಜೆಪಿಯ ರಾಜಕೀಯ ಮೇಲಾಟಗಳನ್ನು ನಿರ್ಧರಿಸಲಿದ್ದಾರೆ. ಪಕ್ಷೇತರರ ಪೈಕಿ ಬಹುತೇಕರು ಮೈತ್ರಿಕೂಟದ ಪರವಾಗಿದ್ದಾರೆ ಎಂಬ ಮಾಹಿತಿ ಇದ್ದು, ಈ ಪೈಕಿ ಇಬ್ಬರನ್ನು ಬಿಜೆಪಿ ಸೆಳೆದಿದೆ ಎನ್ನಲಾಗಿದೆ. ಇಷ್ಟಾದರೂ ಗೆಲುವಿನ ನಗೆ ಬೀರುವುದು ಬಿಜೆಪಿಗೆ ಸುಲಭಸಾಧ್ಯವಲ್ಲ ಎನ್ನಲಾಗುತ್ತಿದೆ. ಈ ಅಸಾಧ್ಯವನ್ನು ಮೀರಿ ನಿಲ್ಲುವ ಮೂಲಕ ಮೈತ್ರಿ ಸರ್ಕಾರದ ಜಂಘಾಬಲ ಕುಂದಿಸಿ, ಪ್ರತೀಕಾರ ತೀರಿಸಿಕೊಳ್ಳುವ ವಿಶ್ವಾಸವನ್ನು ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ಹೊಂದಿದ್ದಾರೆ.

ಬಿಬಿಎಂಪಿ ಅಧಿಕಾರ ಹಿಡಿಯುವ ಹೊಣೆಯನ್ನು ಎಂದಿನಂತೆ ಬಿಜೆಪಿಯಲ್ಲಿ ಆರ್‌ ಅಶೋಕ್‌ ಅವರಿಗೆ ವಹಿಸಲಾಗಿದೆ. ಬೆಂಗಳೂರು ರಾಜಕೀಯದಲ್ಲಿ ತನ್ನದೇ ಆದ ಬೆಂಬಲಿಗರನ್ನು ಹೊಂದಿರುವ ಗೋವಿಂದರಾಜ ನಗರ ಶಾಸಕ ವಿ ಸೋಮಣ್ಣ ಅವರಿಗೂ ವರಿಷ್ಠರು ಅಧಿಕಾರ ಹಿಡಿಯುವಲ್ಲಿ ಶ್ರಮಿಸುವಂತೆ ಸೂಚಿಸಿದ್ದಾರೆ. ಬಿಬಿಎಂಪಿ ರಾಜಕೀಯವನ್ನು ಸಮೀಪದಿಂದ ಕಂಡಿರುವ ಸೋಮಣ್ಣ, “ಪಕ್ಷದ ಮುಖಂಡರು ಹಾಗೂ ಕೆಲವು ಕಾರ್ಪೊರೇಟರ್‌ಗಳು ಗುಪ್ತವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ,” ಎಂದು ಪಕ್ಷದ ವೇದಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. “ಪಕ್ಷದಲ್ಲಿ ಬೆಂಗಳೂರಿನ ವಿಚಾರಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಅಶೋಕ್‌ ಅವರಿಗೆ ಬಿಬಿಎಂಪಿ ಚುನಾವಣೆಯ ರೂಪದಲ್ಲಿ ಕೊನೆಯ ಅವಕಾಶ ದೊರೆತಿದೆ. ಈ ಬಾರಿಯೂ ಅವರು ವಿಫಲರಾದರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಅವರ ಪ್ರಾಬಲ್ಯ ಮತ್ತಷ್ಟು ಕ್ಷೀಣಿಸಲಿದೆ. ಇದಕ್ಕಾಗಿ ಅಶೋಕ್‌, ಮೇಯರ್‌ ಆಯ್ಕೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ,” ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಬೆಂಗಳೂರಿನ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ‌ ಶಾಸಕ ರಾಮಲಿಂಗಾ ರೆಡ್ಡಿ ಪಕ್ಷದ ಹೋರಾಟ ಮುನ್ನಡೆಸಲು ಒಪ್ಪಿದ್ದು, ಹಲವು ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿರುವ ರೆಡ್ಡಿ, ತಾವು ಸೂಚಿಸಿದ ಅಭ್ಯರ್ಥಿಯನ್ನು ಮೇಯರ್‌ ಆಗಿಸಲು ಒಪ್ಪಿದರೆ ಮಾತ್ರ ಕಾರ್ಯಪ್ರವೃತ್ತರಾಗುವುದಾಗಿ ಪಟ್ಟು ಹಿಡಿದಿದ್ದಾರೆ. ಮೇಯರ್‌ ಅಭ್ಯರ್ಥಿ ಜೊತೆಗೆ ಲೋಕಸಭಾ ಚುನಾವಣೆಯಲ್ಲೂ ಬೆಂಗಳೂರಿನ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತಮ್ಮ ಮಾತಿಗೆ ಪ್ರಾಮುಖ್ಯತೆ ದೊರೆಯುವಂತಾಗಬೇಕು ಎಂಬ ಬೇಡಿಕೆಯನ್ನೂ ಅವರು ಇಟ್ಟಿದ್ದಾರೆ. ಇದರ ಜೊತೆಗೆ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವುದನ್ನು ಅವರು ಖಾತ್ರಿಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಮಿಷನ್ ಬಿಬಿಎಂಪಿಗಾಗಿ ಅಶೋಕ್‌ ಬದಲಿಗೆ ಸೋಮಣ್ಣ ಬೆನ್ನು ಹತ್ತಿತೇ ಬಿಜೆಪಿ?

ಇನ್ನು, ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಉಪಮುಖ್ಯಮಂತ್ರಿ ಜಿ ಪರಮೇಶ್ವರಗೆ ಬಿಬಿಎಂಪಿ ಅಧಿಕಾರ ಉಳಿಸಿಕೊಳ್ಳುವುದು ಅವರ ನಾಯಕತ್ವದ ದೃಷ್ಟಿಯಿಂದ ಅತ್ಯಂತ ಅವಶ್ಯ. ಒಂದೊಮ್ಮೆ ಅಚಾತುರ್ಯ ಉಂಟಾದರೆ ಗೃಹ ಸಚಿವರ ಅಸಮರ್ಥತೆಯ ಆರೋಪದ ಪಟ್ಟಿಗೆ ಮತ್ತೊಂದು ವಿಚಾರ ಸೇರ್ಪಡೆ ಆಗಲಿದೆ. ಇದರಿಂದ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿರುವ ಅವರು, ರಾಮಲಿಂಗಾ ರೆಡ್ಡಿ ಅವರನ್ನು ಬಹುವಾಗಿ ನೆಚ್ಚಿಕೊಂಡಿದ್ದು, ಅವರು ಪ್ರಸ್ತಾಪಿಸಿರುವ ಎಲ್ಲ ವಿಚಾರಗಳಿಗೂ ಸಮ್ಮತಿಸಿದ್ದಾರೆ ಎನ್ನಲಾಗುತ್ತಿದೆ.

ಬಿಬಿಎಂಪಿ ಮೇಯರ್ ಸ್ಥಾನವು ಈ ಬಾರಿ ಸಾಮಾನ್ಯ ವರ್ಗಕ್ಕೆ (ಮಹಿಳೆ) ಮೀಸಲಾಗಿದ್ದು, ರಾಜ್ಯದ ಎರಡು ಪ್ರಮುಖ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಅಭ್ಯರ್ಥಿಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸುವ ಮೂಲಕ ಹೋರಾಟದ ಕಾವು ಹೆಚ್ಚಿಸಿದ್ದಾರೆ. ನಾಲ್ಕು ದಶಕಗಳಿಂದ ವೀರಶೈವ-ಲಿಂಗಾಯತ ಸಮುದಾಯಕ್ಕೆ ಬೆಂಗಳೂರು ಮೇಯರ್‌ ಸ್ಥಾನ ದಕ್ಕಿಲ್ಲ ಎಂಬ ವಿಚಾರವನ್ನು ಸಮುದಾಯದ ನಾಯಕರು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕ ಬಿ ಎಸ್‌ ಯಡಿಯೂರಪ್ಪ ಸೇರಿದಂತೆ ಬಿಜೆಪಿಯು ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಸೇರಿದಂತೆ ಸಂಪುಟದಲ್ಲಿ ಒಕ್ಕಲಿಗ ಸಮುದಾಯದ ನಾಯಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತೂ ಚರ್ಚೆಯಾಗುತ್ತಿದೆ. ಪ್ರಭಾವಿ ಮಠಾಧೀಶರು ತಮ್ಮ ಸಮುದಾಯದ ಅಭ್ಯರ್ಥಿಗಳ ಪರವಾಗಿ ಲಾಬಿ ನಡೆಸುತ್ತಿದ್ದು, ಇಕ್ಕಟ್ಟಿನ ಸ್ಥಿತಿ ನಿರ್ಮಾಣ ಮಾಡಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More