ತಂತ್ರಗಾರಿಕೆಯಲ್ಲಿ ಬಿಜೆಪಿಗೆ ಮತ್ತೆ ಸೋಲು; ಮೈತ್ರಿಗೆ ಬಿಬಿಎಂಪಿ ಚುಕ್ಕಾಣಿ

ಬಿಬಿಎಂಪಿ ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಗಂಗಾಂಬಿಕೆ, ಉಪ ಮೇಯರ್ ಆಗಿ ಜೆಡಿಎಸ್‌ನ ರಮೀಳಾ ಆಯ್ಕೆಯಾಗಿದ್ದಾರೆ. ಮಹಿಳೆಯರೇ ಬಿಬಿಎಂಪಿ ಚುಕ್ಕಾಣಿ ಹಿಡಿದಿರುವುದು ಈ ಬಾರಿಯ ವಿಶೇಷ. ಕಾರ್ಯತಂತ್ರ ರೂಪಿಸುವಲ್ಲಿ ವಿಫಲವಾದ ಬಿಜೆಪಿ ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ

ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್‌ ಮತ್ತು ಉಪಮೇಯರ್‌ ಸ್ಥಾನಗಳನ್ನು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ನಿರೀಕ್ಷೆಯಂತೆ ಗೆದ್ದುಕೊಂಡಿದೆ. ಜನರ ದೃಷ್ಟಿ ಕದಲಿಸಿಲು ಬಿಬಿಎಂಪಿ ಸಭಾಂಗಣದಲ್ಲಿ ಹೈಡ್ರಾಮಾ ಸೃಷ್ಟಿಸಿದ ಬಿಜೆಪಿ, ಸೋಲಿಂದ ಪಾರಾಗಲು ನಡೆಸಿದ ಎಲ್ಲ ತಂತ್ರಗಳು ವಿಫಲವಾಗಿವೆ. ಕೆಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಚುನಾವಣೆಯಲ್ಲಿ ಮೇಯರ್, ಉಪ ಮೇಯರ್‌ ಈ ಎರಡೂ ಸ್ಥಾನಗಳು ಮಹಿಳಾ ಕಾರ್ಪೊರೇಟರ್‌ಗಳಿಗೆ ಒಲಿಯುವ ಮೂಲಕ ಅಪರೂಪದ ಬೆಳವಣಿಗೆಗೆ ಸಾಕ್ಷಿಯಾಯಿತು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಯನಗರ ವಾರ್ಡಿನ‌ (ವಾರ್ಡ್ ಸಂಖ್ಯೆ ೧೫೩) ಕಾಂಗ್ರೆಸ್ ಸದಸ್ಯೆ ಗಂಗಾಂಬಿಕಾ ಮಲ್ಲಿಕಾರ್ಜುನ್‌ ೫೩ನೇ ಮೇಯರ್‌, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಕಾವೇರಿಪುರ ವಾರ್ಡಿನ (೧೦೩) ಜೆಡಿಎಸ್ ಸದಸ್ಯೆ ರಮೀಳಾ ಉಮಾಶಂಕರ್ ಉಪಮೇಯರ್‌ ಆಗಿ ಚುನಾಯಿತರಾಗಿದ್ದಾರೆ.

ಬಿಜೆಪಿ ಸದಸ್ಯರ ಅನುಪಸ್ಥಿತಿಯಲ್ಲಿ ಶುಕ್ರವಾರ ನಡೆದ ಮೇಯರ್ ಮತ್ತು ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಪದ್ಮನಾಭನಗರ ವಾರ್ಡಿನ (೧೮೨) ಬಿಜೆಪಿ ಸದಸ್ಯೆ ಎಲ್‌ ಶೋಭಾ ಆಂಜನಪ್ಪ ವಿರುದ್ಧ ಗಂಗಾಂಬಿಕಾ ೧೩೦ ಮತಗಳಿಂದ ಜಯ ಗಳಿಸಿದರು. ಉಪಮೇಯರ್‌ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡಿನ (೧೧೯) ಬಿಜೆಪಿ ಸದಸ್ಯೆ ಪ್ರತಿಭಾ ಧನರಾಜ್‌ ವಿರುದ್ಧ ರಮೀಳಾ ೧೨೯ ಮತಗಳಿಂದ ಜಯ ಸಾಧಿಸಿದ್ದಾರೆ. ಆರು ಸದಸ್ಯರು ಗೈರಾಗಿದ್ದರಿಂದ ಬಿಬಿಎಂಪಿ ಒಟ್ಟು ಮತಗಳ ಸಂಖ್ಯೆ ೨೫೩ಕ್ಕೆ ಕುಸಿದಿತ್ತು. ಅತ್ಯಂತ ದೊಡ್ಡ ಪಕ್ಷವಾದರೂ ಅಧಿಕಾರ ಪರಿಧಿಯಿಂದ ಹೊರಗುಳಿದಿರುವ ಬಿಜೆಪಿಯು ಪಕ್ಷೇತರರನ್ನು ಒಲಿಸಿಕೊಳ್ಳುವಲ್ಲಿ ಸಫಲವಾಗಲಿಲ್ಲ. ಇದರಿಂದ ಅಧಿಕಾರ ಹಿಡಿಯುವ ಬಿಜೆಪಿಯ ತಂತ್ರವೂ ಸತತ ನಾಲ್ಕನೇ ಬಾರಿಗೆ ವಿಫಲವಾಯಿತು.

ಚುನಾವಣೆಗೂ ಮುನ್ನ, ಪದ್ಮನಾಭನಗರ ಶಾಸಕ ಆರ್‌ ಅಶೋಕ್‌ ನೇತೃತ್ವದ ಬಿಜೆಪಿ ಸದಸ್ಯರು ಕಾಂಗ್ರೆಸ್‌ನಲ್ಲಿನ ಭಿನ್ನಮತೀಯ ಸದಸ್ಯರನ್ನು ತಮ್ಮತ್ತ ಸೆಳೆಯಲು ಮುಂದಾದಾಗ ಬಿಬಿಎಂಪಿ ಕಚೇರಿಯಲ್ಲಿ ಗದ್ದಲದ ವಾತಾರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ಕೈಮೀರಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ತಳ್ಳಾಟ-ನೂಕಾಟವೂ ನಡೆದುಹೋಯಿತು. ಆನಂತರ ಸೋಲು ಖಾತರಿ ಎಂಬುದನ್ನು ಅರಿತ ಬಿಜೆಪಿ ನಾಯಕರು, “ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್‌, ವಿಧಾನ ಪರಿಷತ್ ಸದಸ್ಯರಾದ ವಿ ಎಸ್‌ ಉಗ್ರಪ್ಪ, ಸಿ ಆರ್ ಮನೋಹರ್‌ ಹಾಗೂ ರಘು ಆಚಾರ್‌ ಅವರಿಗೆ ಮತದಾನದ ಹಕ್ಕು ಕಲ್ಪಿಸಿರುವುದು ಕಾನೂನುಬಾಹಿರ. ಮೇಲೆ ಸೂಚಿಸಿದ ಸದಸ್ಯರು ಬೆಂಗಳೂರಿನಲ್ಲಿ ಮತದಾನದ ಹಕ್ಕು ಹೊಂದಿಲ್ಲ. ಇಂಥ ಸಂದರ್ಭದಲ್ಲಿ ಅವರು ಮತದಾನ ಮಾಡಲು ಅವಕಾಶ ನೀಡಬಾರದು,” ಎಂದು ಪಟ್ಟುಹಿಡಿದರು. ಇದನ್ನು ನಿರಾಕರಿಸಿದ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ, “ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ನೀಡಿರುವ ಮತದಾನದ ಪಟ್ಟಿಯಲ್ಲಿ ಜೈರಾಮ್‌ ರಮೇಶ್‌, ಉಗ್ರಪ್ಪ, ರಘು ಆಚಾರ್‌ ಮತ್ತು ಸಿ ಆರ್‌ ಮನೋಹರ್ ಹೆಸರಿದೆ. ಇದರಿಂದ ಬಿಜೆಪಿಯ ಆರೋಪದಲ್ಲಿ ಹುರುಳಿಲ್ಲ,” ಎಂದು ತಳ್ಳಿಹಾಕಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ನಾಯಕರು ಹಾಗೂ ಕಾರ್ಪೊರೇಟರ್‌ಗಳು ಚುನಾವಣಾ ಪ್ರಕ್ರಿಯಿಂದ ಹೊರನಡೆದರು. ವಿರೋಧ ಪಕ್ಷದ ಸದಸ್ಯರ ಅನುಪಸ್ಥಿತಿಯಲ್ಲಿಯೇ ನೂತನ ಮೇಯರ್‌ ಮತ್ತು ಉಪಮೇಯರ್‌ಗಳ ಆಯ್ಕೆ ನಡೆಯಿತು.

ರಾಜಕೀಯ ತಂತ್ರಗಾರಿಕೆ ರೂಪಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಕಮಲ ಪಾಳೆಯವು ತನ್ನ ಸಾಲು-ಸಾಲು ಹಿನ್ನಡೆಗಳ ಪಟ್ಟಿಗೆ ಮತ್ತೊಂದು ಸೋಲು ಸೇರಿಸಿಕೊಂಡಿದೆ. ಪಕ್ಷೇತರರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟವು ಬಿಬಿಎಂಪಿ ಚುಕ್ಕಾಣಿಯನ್ನು ತಮ್ಮಲ್ಲೇ ಉಳಿಸಿಕೊಂಡು ಬಿಜೆಪಿಯ ಆತ್ಮವಿಶ್ವಾಸ ಕುಂದಿಸಿವೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪದೇಪದೇ ಪ್ರಯತ್ನಿಸುತ್ತಿರುವ ಆರೋಪಕ್ಕೆ ಗುರಿಯಾಗಿದ್ದ ಬಿಜೆಪಿಗೆ ಒಂದು ವಾರದ ಅಂತರದಲ್ಲಿ ಎರಡು ಸೋಲುಣಿಸುವ ಮೂಲಕ ಕಾಂಗ್ರೆಸ್-ಜೆಡಿಎಸ್‌ ಬಿ ಎಸ್ ಯಡಿಯೂರಪ್ಪ ನೇತೃತ್ವದ ಪಡೆಯನ್ನು ನಿತ್ರಾಣಗೊಳಿಸಿದೆ. ಐದು ದಿನಗಳ ಹಿಂದೆ ವಿಧಾನಸಭೆಯಿಂದ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸದೆ ಬಿಜೆಪಿ ಮುಖಭಂಗಕ್ಕೀಡಾಗಿತ್ತು.

ತಮ್ಮ ಬೆಂಬಲಿಗರಾದ ಗಂಗಾಂಬಿಕೆ ಅವರನ್ನು ಮೇಯರ್ ಆಗಿಸುವಲ್ಲಿ ಸಫಲರಾದ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಾಮಲಿಂಗಾ ರೆಡ್ಡಿ, ಅಧಿಕಾರ ಇಲ್ಲದಿದ್ದರೂ ತಾನು ಬೆಂಗಳೂರಿನ ರಾಜಕಾರಣದಲ್ಲಿ ಪ್ರಬಲ ನಾಯಕ ಎನ್ನುವುದನ್ನು ನಿರೂಪಿಸಿದ್ದಾರೆ. ಗಂಗಾಂಬಿಕೆ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಅವರ ಪರವಾಗಿ ಲಿಂಗಾಯತ ಸಮುದಾಯದ ನಾಯಕರು ಹಾಗೂ ಮಠಾಧೀಶರು ಲಾಬಿ ನಡೆಸಿದ್ದರು. ವಿರೋಧ ಪಕ್ಷವಾದ ಬಿಜೆಪಿಯೂ ಪರೋಕ್ಷವಾಗಿ ಗಂಗಾಂಬಿಕೆ ಅವರಿಗೆ ಬೆಂಬಲ ವ್ಯಕ್ತಪಡಿಸಿದೆ ಎನ್ನುವ ಆರೋಪವಿದೆ. ಇದರ ನಡುವೆ, ಹಿಂದಿನ ಹಿನ್ನಡೆಗಳನ್ನು ಬಿಜೆಪಿಯ ನಾಯಕರು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಫಲಿತಾಂಶದಿಂದ ಸಾಬೀತಾಗಿದೆ.

ಇದನ್ನೂ ಓದಿ : ಬಿಬಿಎಂಪಿ ಮೇಯರ್‌ ಚುನಾವಣೆಗೂ ವಿಸ್ತರಿಸಲಿದೆಯೇ ಬಿಜೆಪಿ ವೈಫಲ್ಯದ ಕೊಂಡಿ?

ಭಿನ್ನಮತದಿಂದ ಕುದಿಯುತ್ತಿರುವ ಬಿಜೆಪಿ ನಾಯಕರು ಸಂಘಟಿತರಾಗಿ ಕೆಲಸ ಮಾಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನಿಂದ ಆಯ್ಕೆಯಾಗಿರುವ ಡಿ ವಿ ಸದಾನಂದ ಗೌಡ, ಅನಂತ ಕುಮಾರ್‌ ಹಾಗೂ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಘಟಾನುಘಟಿ ನಾಯಕರು ಹಾಗೂ ಸಂಪನ್ಮೂಲ ಇದ್ದರೂ, ರಾಜ್ಯ ರಾಜಧಾನಿಯಲ್ಲಿ ಅಧಿಕಾರ ಹಿಡಿಯಲು ಸ್ಪಷ್ಟ ಕಾರ್ಯತಂತ್ರ ರೂಪಿಸದೆ ಉಳಿದ ಬಗ್ಗೆ ಪಕ್ಷದ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಅನಾರೋಗ್ಯದಿಂದ ಅನಂತ ಕುಮಾರ್‌ ಚುನಾವಣಾ ಪ್ರಕ್ರಿಯೆಯಿಂದಲೇ ಹೊರ ಉಳಿದಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ೨೮ ಕ್ಷೇತ್ರಗಳ ಪೈಕಿ ಕೇವಲ ೧೧ ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಬೆಂಗಳೂರಿನ ಮೇಲಿನ ಹಿಡಿತ ಕಳೆದುಕೊಂಡಿದೆ. ಕಾಂಗ್ರೆಸ್‌ ೧೫ ಸ್ಥಾನ ಗೆದ್ದು, ತನ್ನ ಬಲ ಕಾಯ್ದುಕೊಂಡಿತ್ತು. ಅಧಿಕಾರ ಹಿಡಿಯುವಲ್ಲಿ ಪದೇಪದೇ ಎಡವುತ್ತಿರುವ ಬಿಜೆಪಿ ಮೈತ್ರಿ ಸರ್ಕಾರಕ್ಕೆ ತಡೆಯೊಡ್ಡಲು ಬಿಬಿಎಂಪಿ ಚುನಾವಣೆ ಮೂಲಕ ದೊರೆತಿದ್ದ ಮತ್ತೊಂದು ಅಮೂಲ್ಯ ಅವಕಾಶವನ್ನು ಕೈಚೆಲ್ಲಿದೆ. ಭಿನ್ನಮತ, ನಾಯಕತ್ವದ ಕೊರತೆಯಿಂದ ಬಸವಳಿದಿರುವ ಬಿಜೆಪಿಯು ತಕ್ಷಣದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತ್ತಷ್ಟು ನಷ್ಟ ಅನುಭವಿಸಿದರೆ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಪಕ್ಷದ ವಲಯದಿಂದಲೇ ಕೇಳಿಬರುತ್ತಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More