ಅನಂತಕುಮಾರ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ವದಂತಿ ತಳ್ಳಿಹಾಕುತ್ತಿದೆಯೇ ಈ ಫೋಟೊ?

ಕೇಂದ್ರ ಸಚಿವ ಅನಂತಕುಮಾರ್ ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಛಾಯಾಚಿತ್ರಗಳು ಬಿಡುಗಡೆಯಾಗಿವೆ. ಈ ಚಿತ್ರಗಳು ಕೆಲವು ಊಹಾಪೋಹಗಳನ್ನು ಸುಳ್ಳು ಮಾಡುವಂತಿದ್ದು, ಈ ಕುರಿತು ‘ಬೆಂಗಳೂರು ಮಿರರ್’ ಪ್ರಕಟಿಸಿರುವ ವರದಿಯ ಭಾವಾನುವಾದ ಇಲ್ಲಿದೆ

ಕೇಂದ್ರ ಸಚಿವ ಅನಂತಕುಮಾರ್ ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ಕಳೆದ ವಾರ ತಮ್ಮ 60ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಪತ್ನಿ ತೇಜಸ್ವಿನಿ, ಸಹೋದರ ಎಚ್ ಎನ್ ನಂದಕುಮಾರ್ ಸೇರಿದಂತೆ ಕೆಲವರ ಉಪಸ್ಥಿತಿಯಲ್ಲಿ ಅವರು ಕೇಕ್ ಕತ್ತರಿಸಿದರು. ಸೆಪ್ಟೆಂಬರ್ ಆರಂಭದಲ್ಲಿ ತೀವ್ರ ಕೆಮ್ಮು ಕಾಣಿಸಿಕೊಂಡ ಪರಿಣಾಮ ಲಂಡನ್ನಿಗೆ ತೆರಳಿದ್ದರು. ಅಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಚಿವರು ಒಂದು ವಾರದ ಬಳಿಕ ಮರಳಲಿದ್ದಾರೆ ಎಂದು ಅವರ ಕಚೇರಿ ಮಾಹಿತಿ ನೀಡಿತ್ತು. ಅಧಿಕೃತ ದಾಖಲಾತಿಗಳ ಪ್ರಕಾರ, ಜುಲೈ 22ರಂದು ಅವರ ಹುಟ್ಟುಹಬ್ಬ. ಆದರೆ, ಅವರ ನಿಜವಾದ ಹುಟ್ಟುಹಬ್ಬ ಸೆಪ್ಟೆಂಬರ್ 22ರಂದು.

ಕೈಗೆ ಹಾಕಿದ್ದ ಬ್ಯಾಂಡೇಜ್ ಹೊರತುಪಡಿಸಿದರೆ ಅನಂತಕುಮಾರ್ ತಮ್ಮ ಎಂದಿನ ವಿಶಾಲ ನಗುವನ್ನು ಹೊತ್ತ ಮುಖಭಾವದೊಂದಿಗೆ ಗೆಲುವಾಗಿ ಇರುವುದು ಛಾಯಾಚಿತ್ರಗಳ ಮೂಲಕ ತಿಳಿದುಬಂದಿದೆ. ಪಂಚೆ ಮತ್ತು ಮೆರೂನ್ ಬಣ್ಣದ ಟೀಷರ್ಟ್‌ನೊಂದಿಗೆ ಅವರು ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ಅವರ ಪತ್ನಿ ತೇಜಸ್ವಿನಿ ಹೂಗುಚ್ಛ ನೀಡಿ ಶುಭ ಹಾರೈಸುತ್ತಿರುವುದು ಕಂಡುಬರುತ್ತಿದೆ.

ಆರು ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಅನಂತಕುಮಾರ್ ಜೂನ್ 11ರಂದು ನಡೆದ ಜಯನಗರ ವಿಧಾನಸಭಾ ಕ್ಷೇತ್ರ ಚುನಾವಣೆ ಬಳಿಕ ಹೆಚ್ಚು ಕ್ರಿಯಾಶೀಲರಾಗಿ ಕಾಣಿಸಿಕೊಂಡಿರಲಿಲ್ಲ. ಅವರು ಕಚೇರಿಗೂ ಬರುತ್ತಿಲ್ಲ, ಕಡತಗಳಿಗೂ ಸಹಿ ಹಾಕುತ್ತಿಲ್ಲ ಎಂಬ ವದಂತಿಯೊಂದು ನಂತರ ಹಬ್ಬಿತ್ತು. ಮೇ 15ರ ವಿಧಾನಸಭಾ ಚುನಾವಣೆಗೂ ಮುನ್ನವೇ ಅವರು ಕೆಮ್ಮಿನ ತೊಂದರೆಯಿಂದ ಬಳಲುತ್ತಿದ್ದರು. ಸೆಪ್ಟೆಂಬರ್ ಆರಂಭದಲ್ಲಿ ಲಂಡನ್‌ನಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಹಾಗೂ ಚಿಕಿತ್ಸೆ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರ ಅನುಮತಿ ಪಡೆದಿದ್ದರು.

ಇದನ್ನೂ ಓದಿ : ಮುಂದಿನ ಲೋಕಸಭಾ ಚುನಾವಣೆ; ಬಿಜೆಪಿಗೆ ಹಾದಿ ಸುಗಮವಲ್ಲ ಎಂದ ಸಮೀಕ್ಷೆಗಳು

ಅವರ ಅನಾರೋಗ್ಯ ಕುರಿತಂತೆ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಸಚಿವರ ಆಪ್ತರೊಬ್ಬರು ಹೇಳುವ ಪ್ರಕಾರ, “ಗಂಭೀರವಾದದ್ದೇನೂ ಆಗಿಲ್ಲ, ಹದಿನೈದು ದಿನದೊಳಗೆ ಅವರು ಮರಳಬಹುದು.” ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಅಮೆರಿಕದ ನ್ಯೂಯಾರ್ಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಮೂಲದ ಪ್ರಕಾರ, “ಅವರು ಗೋವಾ ಮುಖ್ಯಮಂತ್ರಿ ಇತ್ತೀಚೆಗೆ ಚಿಕಿತ್ಸೆ ಪಡೆದ ಆಸ್ಪತ್ರೆಗೆ ದಾಖಲಾಗಿದ್ದಾರೆ.” ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಬಳಿಕ ಅನಾರೋಗ್ಯದ ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿರುವ ಮೂರನೇ ಕೇಂದ್ರ ಸಚಿವರು ಅನಂತಕುಮಾರ್.

ಅನಾರೋಗ್ಯದಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದು ಅನುಮಾನ ಎಂಬ ವದಂತಿಗಳು ಹರಿದಾಡುತ್ತಿದ್ದವು. ಅವರ ಬದಲು ಪತ್ನಿ ತೇಜಸ್ವಿನಿ ಅವರೇ ಸ್ಪರ್ಧಿಸುತ್ತಾರೆ ಎಂಬ ಗುಸುಗುಸು ಕೇಳಿಬಂದಿತ್ತು. ಅದಮ್ಯ ಚೇತನ ಎಂಬ ಸ್ವಯಂಸೇವಾ ಸಂಸ್ಥೆಯನ್ನು ನಡೆಸುತ್ತಿರುವ ತೇಜಸ್ವಿನಿ, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಕೆ, ನೇತ್ರ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ ನಡೆಸುವ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More