ಚಾಣಕ್ಯಪುರಿ | ಸೋಲಿನ ಆತ್ಮಾವಲೋಕನ ಮರೆತು ಅಲ್ಪತೃಪ್ತರಾದ ರಾಜ್ಯ ಕಾಂಗ್ರೆಸಿಗರು

ಗೆಲ್ಲುವ ಸಾಧ್ಯತೆಗಳ ನಡುವೆಯೂ ಕಳೆದ ವಿಧಾಸನಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್‌, ಇದುವರೆಗೂ ಸೋಲಿಗೆ ಕಾರಣ ಹುಡುಕುವ ಕೆಲಸವನ್ನೇ ಮಾಡಿಲ್ಲ. ಸಭೆ ನಡೆದರೆ ಟೀಕೆ-ಟಿಪ್ಪಣಿಗೆ ಗುರಿ ಆಗಬೇಕಾಗುತ್ತದೆ ಎಂದು ಹಿರಿಯ ನಾಯಕರೇ ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ

ರಾಜ್ಯ ಕಾಂಗ್ರೆಸ್ ಸದ್ದಿಲ್ಲದೆ ಲೋಕಸಭಾ ಚುನಾವಣೆಗೆ ಸನ್ನದ್ಧವಾಗುತ್ತಿದೆ. ಹುರಿಯಾಳುಗಳ ಹುಡುಕಾಟವನ್ನೂ ಆರಂಭಿಸಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದೂ ಖರೆಯಾಗಿದೆ. ಆದರೆ, ಗೆಲ್ಲಲೇಬಹುದಾಗಿದ್ದ ವಿಧಾನಸಭಾ ಚುನಾವಣೆಯನ್ನು ಕೈಯಾರೆ ಕಳೆದುಕೊಂಡ ಬಗ್ಗೆ ಮಾತ್ರ ಇನ್ನೂ ಆತ್ಮಾವಲೋಕನ ಮಾಡಿಕೊಂಡಿಲ್ಲ. ಈ ಬಗ್ಗೆ ನೊಂದುಕೊಂಡ ನಿಷ್ಠಾವಂತ ಕಾಂಗ್ರೆಸ್ ನಾಯಕರೊಬ್ಬರು, “ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ. ಅದೇ ರೀತಿ ಸೋಲಿಗೂ ಗೆಲುವಿಗೂ ಕಾರಣ ಹುಡುಕಿಕೊಳ್ಳಬೇಕಿರುವುದು ಕರ್ತವ್ಯ. ರಾಜ್ಯ ಕಾಂಗ್ರೆಸ್ ನಾಯಕರು ಕರ್ತವ್ಯವನ್ನು ಮರೆತಿದ್ದಾರೆ. ಆತ್ಮಾವಲೋಕನ ಯಾರಿಗೂ ಬೇಡವಾಗಿದೆ. ಸಭೆ ಕರೆದರೆ ಯಾರ ವಿರುದ್ಧ ಯಾರು ಏನು ಆರೋಪ ಮಾಡಿಬಿಡುವರೋ ಎಂಬ ಭಯ. ನಾಯಕ‌ರಾದವರಿಗೆ ಮುಖಭಂಗ ಆಗಿಬಿಡಬಹುದು ಎಂಬ ಆತಂಕ. ಕೆಲವರಿಗೆ ಜೆಡಿಎಸ್ ಜೊತೆ ಸಿಕ್ಕಿರುವ ಅಧಿಕಾರವೇ ಸಾಕೆಂಬ ಅಲ್ಪತೃಪ್ತಿ; ಇದೇ ನಿಜವಾದ ಅಧಿಕಾರವೆಂಬ ಭ್ರಮೆ. ಒಟ್ಟಿನಲ್ಲಿ, ಆದ ಯಡವಟ್ಟಿನ ಬಗ್ಗೆ ಎದೆಮುಟ್ಟಿಕೊಂಡು ಮಾತನಾಡಲು ಯಾರೂ ಸಿದ್ದರಿಲ್ಲ,” ಎಂದು ಬೇಸರ ಮಾಡಿಕೊಂಡರು.

“ಪ್ರತಿ ಚುನಾವಣೆ ಮುಗಿದ ಬಳಿಕ ಪ್ರತಿ ಕ್ಷೇತ್ರ, ಪ್ರತಿ ಜಿಲ್ಲೆ, ಪ್ರಾಂತ್ಯ ಮತ್ತು ರಾಜ್ಯದ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜವಾಬ್ದಾರಿಗಳ ಸಮರ್ಥ ನಿರ್ವಹಣೆ ಆಗಿದೆಯೇ ಎಂದು ಪರಾಮರ್ಶಿಸಬೇಕು. ವಿಫಲರಾದವರ ಬಗ್ಗೆ ಕ್ರಮ ಜರುಗಿಸಬೇಕು. ಉತ್ತರದಾಯಿತ್ವ ಇಲ್ಲದ ನಾಯಕತ್ವ ಇರಬಾರದು. ಹಿಂದಿನ ತಪ್ಪುಗಳನ್ನು ತಿಳಿದುಕೊಳ್ಳದೆ, ತಿದ್ದಿಕೊಳ್ಳದೆ ಭವಿಷ್ಯಕ್ಕೆ ತಂತ್ರಗಾರಿಕೆ ಮಾಡಬಾರದು. ಕಡೇಪಕ್ಷ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಾದರೂ ಹಿಂದಿನದನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಬೇಕು,” ಎನ್ನುವುದು ದೂರು ನೀಡಲು ದೆಹಲಿಗೆ ಬಂದಿದ್ದ ಆ ಕಾಂಗ್ರೆಸ್ ನಾಯಕರ ಕಾಳಜಿ.

ಮೌನವಾಗಿರುವುದೇ ಪರಮೇಶ್ವರ್ ಅವರ ತಂತ್ರಗಾರಿಕೆಯಂತೆ

ಉಪಮುಖ್ಯಮಂತ್ರಿ ಜಿ ‌ಪರಮೇಶ್ವರ್ ಅವರು ಹೊರಗಿರಲಿ, ಸಚಿವ ಸಂಪುಟದ ಸಭೆಗಳಲ್ಲೂ ತುಟಿ ಪಿಟಿಕ್ ಎನ್ನುವುದಿಲ್ಲವಂತೆ. ಇತ್ತೀಚೆಗೆ ಬಡ್ತಿ ಮೀಸಲಾತಿ ವಿಷಯದ ಬಗ್ಗೆ ಕಿರಿಯ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಆಗಿ ಮಾತನಾಡಿದಾಗಲೂ ಪರಮೇಶ್ವರ್ ಮಾತ್ರ ಸುಮ್ಮನೇ ಇದ್ದರಂತೆ. ಇತರ ವಿಷಯಗಳಲ್ಲೂ ಇದೇ ಕತೆಯಂತೆ. ಮಾತನಾಡಿದರೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯ ನಿಷ್ಠುರ ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕೆ ಬಾಯಿಗೆ ಬೀಗ ಹಾಕಿಕೊಂಡು ಇರುತ್ತಾರಂತೆ.

“ಪರಮೇಶ್ವರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ಈಗ ಉಪ ಮುಖ್ಯಮಂತ್ರಿ ಆಗಿ ಸರ್ಕಾರದಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿರುವ ಮೊದಲಿಗರು. ಹಾಗಾಗಿ, ಪಕ್ಷದ ನೀತಿ ನಿಲುವಿಗೆ ಧಕ್ಕೆ ಆಗುವಂತಹ ಸಂದರ್ಭದಲ್ಲಿ ಅವರೇ ಮೊದಲು ಧ್ವನಿ ಏರಿಸಬೇಕು. ಅದೇ ರೀತಿ, ಹಿಂದೆ ನಮ್ಮ ಪಕ್ಷದ ಸರ್ಕಾರ ಕೊಟ್ಟಿದ್ದ ಯೋಜನೆಗಳ ವಿಷಯದಲ್ಲಿ, ನಿಲುವುಗಳ ವಿಷಯದಲ್ಲಿ ವ್ಯತಿರಿಕ್ತ ಬೆಳವಣಿಗೆಯಾದಾಗಲೂ ಪಕ್ಷದ ಪ್ರತಿನಿಧಿಯಾಗಿ ಪ್ರತಿಭಟನೆ ದಾಖಲಿಸಬೇಕು.‌ ಆದರೆ, ಪರಮೇಶ್ವರ್ ಮೌನಕ್ಕೆ ಮೊರೆಹೋಗಿಬಿಡುತ್ತಾರೆ. ಮೌನವಾಗಿರುವುದೇ ತಂತ್ರಗಾರಿಕೆ ಎಂದುಕೊಂಡುಬಿಟ್ಟಿದ್ದಾರೆ,” ಎನ್ನುವುದು ಅವರ ಸಹೋದ್ಯೋಗಿಯೊಬ್ಬರ ಆರೋಪ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ತ ಯೂರೋಪ್ ಪ್ರವಾಸದಲ್ಲಿದ್ದಾಗ ಇತ್ತ ರಾಜ್ಯ ಕಾಂಗ್ರೆಸಿನಲ್ಲಿ ಭಿನ್ನಮತ ಭುಗಿಲೆದ್ದಿತ್ತು. ನಿಜಕ್ಕೂ ಪರಮೇಶ್ವರ್ ನೈಜ ನಾಯಕರಾಗಿದ್ದರೆ ಪರಿಸ್ಥಿತಿಯನ್ನು ನಿಭಾಯಿಸಬಹುದಿತ್ತು. ಜೊತೆಗೆ, ಪಕ್ಷದ ಅಧ್ಯಕ್ಷ ಗಾದಿ ಕೈತಪ್ಪಿದ ನಂತರವೂ ಕೈಪಾಳೆಯದ ಮೇಲೆ ಹಿಡಿತ ಸಾಧಿಸಬಹುದಿತ್ತು. ಆದರೆ, ಪರಮೇಶ್ವರ್ ಪಲಾಯನವಾದಿ ಆಗಿಬಿಟ್ಟರಂತೆ.

ರಿಜ್ವಾನ್ ಅರ್ಷದ್ ಸಂಸದರಾಗಿಯೇ ದೆಹಲಿಗೆ ಬರುತ್ತಾರಂತೆ!

ವಿಧಾನ‌ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಮೊದಲು ಸಿಕ್ಕಾಪಟ್ಟೆ ದೆಹಲಿಗೆ ಬರುತ್ತಿದ್ದರು. ಅಖಿಲ ಭಾರತ ಯುವ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿದ್ದರು. ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಲು ಇನ್ನಿಲ್ಲದ ಲಾಬಿ ಮಾಡಿದರು. ಆದರೀಗ ದೆಹಲಿಗೆ ಬರುವುದು ಅಪರೂಪವಾಗಿದೆ. ಬಂದರೂ ಸಚಿವ ಕೃಷ್ಣ ಬೈರೇ ಗೌಡರ ಜೊತೆ ಬಂದು ಅವರ ಜೊತೆಯೇ ಬೆಂಗಳೂರಿನ ವಿಮಾನ ಏರಿಬಿಡುತ್ತಾರೆ. ಇವರ ಬಗ್ಗೆ ಈಗ ಮತ್ತೊಂದು ವಿಷಯ ಗೊತ್ತಾಗಿದೆ. ರಿಜ್ವಾನ್ ಅರ್ಷದ್ ಸಂಸದರಾಗಿಯೇ ದೆಹಲಿಗೆ ಬರಬೇಕು‌ ಅಂತ ಪಣ ತೊಟ್ಟಿದ್ದಾರಂತೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದಲೇ ಸಂಸದರಾಗಬೇಕಂತೆ. ಟಿಕೆಟ್ ಸಿಗುವುದು ಶೇ.೧೦೦ರಷ್ಟು ಗ್ಯಾರಂಟಿಯಂತೆ. ಗೆಲ್ಲುವುದೂ ಶೇ.೧೦೦ರಷ್ಟು ಗ್ಯಾರಂಟಿಯಂತೆ. ಅಂದಹಾಗೆ, ರಿಜ್ವಾನ್ ಅರ್ಷದ್‌ಗೆ ಟಿಕೆಟ್ ಕೊಡಿಸಲು ಕೃಷ್ಣ ಬೈರೇ ಗೌಡ ಈಗಿನಿಂದಲೇ ಲಾಬಿ‌ ಮಾಡುತ್ತಿದ್ದಾರಂತೆ.

ಇದನ್ನೂ ಓದಿ : ಚಾಣಕ್ಯಪುರಿ | ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನಿರೀಕ್ಷೆಯಲ್ಲಿ ಸಿಎಂ ಕುಮಾರಸ್ವಾಮಿ

ಅಶೋಕ್ ವಿರುದ್ಧ ಹೈಕಮಾಂಡಿಗೆ ಯಡಿಯೂರಪ್ಪ ದೂರು

ಬಿಬಿಎಂಪಿಯಲ್ಲಿ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲಾಗದ ಆರ್ ಅಶೋಕ್ ಮೇಲೆ ಹೈಕಮಾಂಡಿನಲ್ಲಿ ದೂರು ದಾಖಲಾಗಿದೆ. ಖುದ್ದು ಯಡಿಯೂರಪ್ಪ ಅವರೇ ದೂರು ನೀಡಿದ್ದಾರೆ ಎನ್ನುವುದು ಖರೇ ಮಾಹಿತಿ. “ಅಶೋಕ್ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಆಪರೇಷನ್ ಕಮಲಕ್ಕೆ ಕಲ್ಲು ಹಾಕಿದರು,” ಎನ್ನುವ ಕಾರಣಕ್ಕೆ ಯಡಿಯೂರಪ್ಪ ಇಷ್ಟು ಬೇಗ ದೂರು ಕೊಟ್ಟಿದ್ದಾರೆ ಎನ್ನುವುದು ಅಸಲಿ ಸಂಗತಿ.

ಕಿಂಗ್‌ಪಿನ್‌ಗಳ ಮೂಲಕ ಮಾಡುತ್ತಿದ್ದ ಆಪರೇಷನ್ ಕಮಲ ಸಕ್ಸಸ್ ಆಗಿಬಿಡುತ್ತಿತ್ತಂತೆ. ಆದರೆ, ಅಶೋಕ್ ಮಾಹಿತಿ ಸೋರಿಕೆ ಮಾಡಿದ್ದರಿಂದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎಚ್ಚೆತ್ತುಕೊಂಡುಬಿಟ್ಟರು. ಆಪರೇಷನ್ ಕಮಲಕ್ಕೆ ಒಳಗಾಗಬೇಕಿದ್ದ ಶಾಸಕರನ್ನು ಸಂಪರ್ಕಿಸಿ, ಸಮಾಧಾನಪಡಿಸಿದರು. ನಾವು ವಿಫಲವಾಗಬೇಕಾಯಿತು ಎನ್ನುವುದು ಅಶೋಕ್ ಬಗ್ಗೆ ಯಡಿಯೂರಪ್ಪಗಿರುವ ಅಸಮಾಧಾನ. ಆಗಲೇ ಯಡಿಯೂರಪ್ಪ ಈ ವಿಷಯವನ್ನು ಹೈಕಮಾಂಡಿಗೆ ಮುಟ್ಟಿಸಿದ್ದರು. ಆದರೆ, ಹೈಕಮಾಂಡ್ ಅಶೋಕ್ ಅವರಿಗೆ ಬಿಸಿ ಮುಟ್ಟಿಸಿರಲಿಲ್ಲ. ಹಾಗಾಗಿ, ಯಡಿಯೂರಪ್ಪ ಅವರಿಗೆ ಸಮಾಧಾನ ಆಗಿರಲಿಲ್ಲ. ಈಗ ಬಿಬಿಎಂಪಿಯಲ್ಲಾದ ಅವಘಡ ಮತ್ತು ಅವಮಾನದ ಬಗ್ಗೆ ದೂರು ನೀಡಿದ್ದಾರೆ. ಯಡಿಯೂರಪ್ಪ ಸೀರಿಯಸ್ಸಾಗಿ ತಮ್ಮ ಕೇಸನ್ನು ಬಿಲ್ಡ್ ಮಾಡುತ್ತಿರುವುದರಿಂದ ಅಶೋಕ್ ಆತಂಕಕ್ಕೀಡಾಗಿದ್ದಾರಂತೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More