ಎಚ್‌ಎಎಲ್‌ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಹೇಳಿಕೆಗಳು ಏನನ್ನು ಸೂಚಿಸುತ್ತವೆ?

ಎಚ್‌ಎಎಲ್‌ ಸಾಮರ್ಥ್ಯದ ಬಗ್ಗೆ ಮಾತನಾಡಿ ಆಕ್ರೋಶಕ್ಕೆ ಗುರಿಯಾಗಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈಗ ತಮ್ಮ ಮಾತಿನ ವರಸೆ ಬದಲಿಸಿದ್ದಾರೆ ಎನ್ನಲಾಗುತ್ತಿದೆ. ಎಚ್‌ಎಎಲ್‌ಗೆ ತಮ್ಮ ಸರ್ಕಾರ ಯುಪಿಎಗಿಂತ ಹೆಚ್ಚು ಸಹಾಯ ಮಾಡಿದೆ ಎನ್ನುವ ಮೂಲಕ ಚರ್ಚೆಗೆ ಕಾರಣರಾಗಿದ್ದಾರೆ

“ದೇಶದ ಪ್ರತಿಷ್ಠಿತ ವೈಮಾನಿಕ ಸಂಸ್ಥೆ ಹಿಂದೂಸ್ತಾನ್‌ ಎರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಅನ್ನು ಯುಪಿಎ ಸರ್ಕಾರ ಕಡೆಗಣಿಸಿತ್ತು. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಚ್ಎಎಲ್‌ ಸುಧಾರಣೆಗೆ ಒತ್ತು ಕೊಟ್ಟಿದೆ,” ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಆ ಮೂಲಕ “ರಫೇಲ್‌ ಡೀಲ್‌ ಸಿಗದಿದ್ದಕ್ಕೆ ಎಚ್‌ಎಎಲ್‌ ಸಾಮರ್ಥ್ಯ ಕೊರತೆ ಕಾರಣ,” ಎಂದು ಈ ಹಿಂದೆ ನೀಡಿದ್ದ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರಿಂದ ತಮ್ಮ ಮಾತಿನ ವರಸೆ ಬದಲಿಸಿದ್ದಾರೆ.

ಕೇಂದ್ರ ಸರ್ಕಾರ ರಫೇಲ್‌ ಯುದ್ದ ವಿಮಾನ ಒಪ್ಪಂದವನ್ನು ಎಚ್‌ಎಎಲ್‌ ಸಂಸ್ಥೆಗೆ ನೀಡುವ ಬದಲು ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಡಿಫೆನ್ಸ್‌ಗೆ ನೀಡಿದ್ದನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಶ್ನಿಸಿದ್ದರು. ರಾಹುಲ್‌ ಗಾಂಧಿ ಅವರಿಗೆ ಪ್ರತ್ಯುತ್ತರ ನೀಡುವ ಭರದಲ್ಲಿ ಎಚ್‌ಎಎಲ್‌ ಸಾಮರ್ಥ್ಯ ಕೊರತೆಯ ಬಗ್ಗೆ ನಿರ್ಮಲಾ ಸೀತಾರಾಮನ್‌ ಮಾತನಾಡಿದ್ದರು. ಎಪ್ಪತ್ತು ವರ್ಷಗಳ ಇತಿಹಾಸ ಹೊಂದಿರುವ ದೇಶದ ಪ್ರತಿಷ್ಠಿತ ಸಂಸ್ಥೆಯೊಂದರ ಸಾಮರ್ಥ್ಯ ಕುರಿತ ನಿರ್ಮಲಾ ಸೀತಾರಾಮನ್‌ ಹೇಳಿಕೆಗಳಿಗೆ ಎಚ್ಎಎಲ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ವರ್ಗದಿಂದ ಈ ಹಿಂದೆ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರ ಎಚ್‌ಎಎಲ್‌ ಸಂಸ್ಥೆಗೆ ನಿರ್ಮಲಾ ಸೀತಾರಾಮನ್‌ ಅವರು ಎಚ್‌ಎಎಲ್‌ ನಂತಹ ಗೌರವಾನ್ವಿತ ಕಂಪನಿಯ ಶಕ್ತಿ-ಸಾಮರ್ಥ್ಯಗಳ ಬಗ್ಗೆ ಮಾತನಾಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು.

ಆ ಹಿನ್ನೆಲೆಯಲ್ಲಿ ರವಿವಾರ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಎಚ್ಎಎಲ್‌ ಬಗ್ಗೆ ಮತ್ತೆ ಹೇಳಿಕೆ ನೀಡಿರುವ ನಿರ್ಮಲಾ ಸೀತಾರಾಮನ್‌ ಅವರು, “ಯುದ್ದ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಅದು ಕಾಂಗ್ರೆಸ್‌ನ ಹತಾಶ ಸ್ಥಿತಿಯನ್ನು ಎತ್ತಿತೋರಿಸುತ್ತದೆ. ಯುಪಿಎ ಅಧಿಕಾರದಲ್ಲಿದ್ದಾಗ ಎಚ್‌ಎಎಲ್‌ ಕಂಪನಿಯ ಬಗ್ಗೆ ಕಾಳಜಿ ತೋರಿಸದವರು, ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಎಚ್‌ಎಎಲ್‌ ಅಭಿವೃದ್ಧಿಗಾಗಿ ಎನ್‌ಡಿಎ ಕೆಲಸ ಮಾಡುತ್ತಿದೆ. ಎಚ್‌ಎಎಲ್‌ ಕಂಪನಿಯ ವಿಮಾನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ 20 ಸಾವಿರ ಕೋಟಿ ಅನುದಾನ ನೀಡಿದೆ,” ಎಂದು ತಿಳಿಸಿದ್ದಾರೆ.

ರಫೇಲ್‌ ಡೀಲ್‌ ಬಗೆಗಿನ ಆರೋಪಗಳನ್ನು ಮುಚ್ಚಿಹಾಕುವ ಭರದಲ್ಲಿ 70 ವರ್ಷಗಳಷ್ಟು ಹಳೆಯ ಪ್ರತಿಷ್ಠಿತ ಸಂಸ್ಥೆಯೊಂದರ ಬಗ್ಗೆ ನಿರ್ಮಲಾ ಸೀತಾರಾಮನ್‌ ಅವರು ವಿಭಿನ್ನ ಹೇಳಿಕೆ ನೀಡುತ್ತಿರುವುದು ಹತಾಶೆಯ ಸಂಕೇತವೆಂದು ಹೆಸರು ಹೇಳಲು ಇಚ್ಛಿಸದ ಎಚ್‌ಎಎಸ್‌ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ವಿಚಾರವಾಗಿ ‘ದಿ ಸ್ಟೇಟ್‌’ ಜೊತೆ ಮಾತನಾಡಿರುವ ಎಚ್‌ಎಎಲ್‌ ಸಂಸ್ಥೆಯ ಹಿರಿಯ ಅಧಿಕಾರಿ, “ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಇತಿಹಾಸ ಗೊತ್ತಿಲ್ಲ. ಎಚ್ಎಎಲ್‌ ಸಂಸ್ಥೆ ಎಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಹಲವು ದೇಶಗಳಿಗೆ ಯುದ್ಧ ವಿಮಾನ ಸೇರಿದಂತೆ ವಿವಿಧ ಬಗೆಯ ವಿಮಾನಗಳನ್ನು ತಯಾರು ಮಾಡಿದೆ. ಈಗಲೂ ಎಚ್‌ಎಎಲ್ ಸಂಸ್ಥೆ‌ ಹಲವು ವಿದೇಶಿ ಸರ್ಕಾರಗಳೊಂದಿಗೆ ಪ್ರಮುಖ ಒಪ್ಪಂದ ಹೊಂದಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕೇಂದ್ರ ಸರ್ಕಾರ ಅವಮಾನಿಸಿದ ಎಚ್‌ಎಎಲ್‌ಗೆ ಉಂಟು 7 ದಶಕಗಳ ಅಮೋಘ ಇತಿಹಾಸ

“ದೇಶದಲ್ಲಿ ರಫೇಲ್‌ ಒಪ್ಪಂದ, ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಡಿಪೆನ್ಸ್‌ ಸಂಸ್ಥೆ ಮೇಲೆ ಕೇಳಿಬಂದಿರುವ ಆರೋಪಗಳನ್ನು ಮರೆಮಾಚಲು ನಿರ್ಮಲಾ ಸೀತಾರಾಮನ್‌ ಸೇರಿದಂತೆ ಕೇಂದ್ರ ಸರ್ಕಾರದ ಕೆಲ ಸಚಿವರು ಎಚ್‌ಎಎಲ್‌ ಸಾಮರ್ಥ್ಯದ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಿಲಯನ್ಸ್‌ ಡಿಫೆನ್ಸ್‌ ಯಾವಾಗ ಹುಟ್ಟಿಕೊಂಡಿತು ಎಂಬುದರ ಬಗ್ಗೆ ರಕ್ಷಣಾ ಸಚಿವೆ ಸ್ಪಷ್ಟಪಡಿಸಲಿ. ಎಪ್ಪತ್ತು ವರ್ಷಗಳ ಸುದೀರ್ಘ ಇತಿಹಾಸ ಇರುವ ಸಂಸ್ಥೆಯ ಸಾಮರ್ಥ್ಯದ ಬಗ್ಗೆ ಮಾತನಾಡಿ, ದೇಶದ ಪ್ರತಿಷ್ಠೆಯನ್ನೇ ಗಾಳಿಗೆ ತೂರುವ ಕೆಲಸ ಮಾಡಿದ್ದರು. ಅದನ್ನು ಮರೆಮಾಚುವುದಕ್ಕೋಸ್ಕರ ಈಗ ಎಚ್‌ಎಎಲ್‌ ಸಂಸ್ಥೆಗೆ ತಮ್ಮ ಸರ್ಕಾರ ಹೆಚ್ಚು ಸಹಾಯ ಮಾಡಿದೆ ಎಂದು ಹೇಳುತ್ತಿದ್ದಾರೆ,” ಎಂದು ಎಚ್‌ಎಎಲ್‌ ಅಧಿಕಾರಿ ತಿಳಿಸಿದ್ದಾರೆ.

ರಾಜಕೀಯ ಪರ-ವಿರೋಧಗಳು ಏನೇ ಇರಲಿ. ಎಚ್ಎಎಲ್‌ನಂತಹ ಸಂಸ್ಥೆ ದೇಶದ ರಕ್ಷಣಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನಾದರೂ ನಿರ್ಮಲಾ ಸೀತಾರಾಮನ್‌ ಅವರು ನೆನಸಿಕೊಳ್ಳಬೇಕಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ. ಎಚ್‌ಎಎಲ್‌ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದ ರಕ್ಷಣಾ ಸಚಿವೆ ಈಗ ತಮ್ಮ ಮಾತಿನ ವರಸೆ ಬದಲಿಸಿದ್ದಾರೆ. ಎಚ್‌ಎಎಲ್‌ಗೆ ತಮ್ಮ ಸರ್ಕಾರ ಯುಪಿಎಗಿಂತ ಹೆಚ್ಚು ಸಹಾಯ ಮಾಡಿದೆ ಎಂದು ಹೇಳುತ್ತಿದ್ದಾರೆ. ರಕ್ಷಣಾ ಸಚಿವೆ ದೇಶವನ್ನು ಪ್ರತಿನಿಧಿಸುತ್ತಿದ್ದಾರೆಯೇ ಹೊರತು ನಿರ್ದಿಷ್ಟ ಪಕ್ಷವನ್ನಲ್ಲ. ಕಾಂಗ್ರೆಸ್‌ ನಾಯಕರ ಆರೋಪಗಳಿಗೆ ಪ್ರತ್ಯಾರೋಪ ಮಾಡುವ ಸಂದರ್ಭದಲ್ಲಿ ಎಚ್‌ಎಎಲ್‌ ಸಂಸ್ಥೆಯನ್ನು ಎಳೆದುತಂದಿರುವುದು ದುರಂತವೇ ಸರಿಯೆಂಬ ಅಭಿಪ್ರಾಯಗಳು ಸಹ ವ್ಯಕ್ತವಾಗಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More