ಯಡಿಯೂರಪ್ಪಗೆ ಮತ್ತೊಮ್ಮೆ ಮಗ್ಗಲ ಮುಳ್ಳಾಗಲಿದ್ದಾರೆಯೇ ಸಂತೋಷ್‌?

ಅಧಿಕಾರ ವಿಷಯದಲ್ಲಿ ಬಿಜೆಪಿಗೆ ಹಿನ್ನಡೆ ಆಗಿರುವುದನ್ನು ಆಧರಿಸಿ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಅವರು ಬಿಎಸ್‌ವೈ ವಿರುದ್ಧ ಕಿಡಿಕಾರಿದ್ದಾರೆ. ಸಂತೋಷ್‌ ವ್ಯಕ್ತಪಡಿಸಿರುವ ಅಭಿಪ್ರಾಯ ಬಿಎಸ್‌ವೈಗೆ ಮುಂದಿನ ದಿನಗಳಲ್ಲಿ ದುಬಾರಿ ಆಗಲಿದೆ ಎನ್ನಲಾಗಿದೆ

ಸಾಲು-ಸಾಲು ಸೋಲು ಹಾಗೂ ಹಿನ್ನಡೆಗಳಿಂದ ಕಂಗಾಲಾಗಿರುವ ಬಿಜೆಪಿಯಲ್ಲಿ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಎದುರಾಗಿದ್ದ ಭಿನ್ನಮತ, ಬಂಡಾಯ ಮತ್ತೊಮ್ಮೆ ಹೊಗೆಯಾಡಲಾರಂಭಿಸಿದೆ. ಲೋಕಸಭಾ ಚುನಾವಣೆಯ ವೇಳೆಗೆ ಈ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದರೆ ಅಚ್ಚರಿ ಇಲ್ಲ ಎನ್ನುವ ಮಾತುಗಳು ಪಕ್ಷದ ವಲಯದಿಂದ ಕೇಳಿಬಂದಿವೆ. ಈ ಚರ್ಚೆಗೆ ಗ್ರಾಸ ಒದಗಿಸಿರುವುದು ಬಿಜೆಪಿ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಫೇಸ್‌ಬುಕ್‌ನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಹಾಗೂ ವಿಧಾನ ಪರಿಷತ್‌ ಸದಸ್ಯ ಲೆಹರ್‌ ಸಿಂಗ್ ಸಿರೋಯಾ ಅವರು ಈಚೆಗೆ ಬರೆದ ಪತ್ರ. ಬಿಬಿಎಂಪಿ ಮೇಯರ್‌ ಮತ್ತು ಉಪಮೇಯರ್ ಚುನಾವಣೆಯಲ್ಲಿನ ಹಿನ್ನಡೆಯನ್ನು ಮುಂದು ಮಾಡಿ ಬಿ ಎಲ್‌ ಸಂತೋಷ್‌ ಅವರು, “ತಂಡಸ್ಫೂರ್ತಿ ಇಲ್ಲದವರು ಹಾಗೂ ಗೆಲುವಿನ ಕೀರ್ತಿಯನ್ನು ಹಂಚಿಕೊಳ್ಳಲು ಸಿದ್ಧರಿಲ್ಲದವರು ಎಂದಿಗೂ ಗೆಲುವು ಸಾಧಿಸಲಾರರು,” ಎಂಬ ಚಾಣಕ್ಯನ ಉಕ್ತಿಯನ್ನು ಉಲ್ಲೇಖಿಸಿ ಬಿಜೆಪಿ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಚುನಾವಣೆ ಹಾಗೂ ಅದರ ನೇತೃತ್ವ ವಹಿಸಿದ್ದ ಪದ್ಮನಾಭ ನಗರ ಶಾಸಕ ಆರ್‌ ಅಶೋಕ್‌ ಅವರು ಇಲ್ಲಿ ಕೇವಲ ನೆಪವಾಗಿದ್ದು, ಸಂತೋಷ್‌ ಅವರ ಗುರಿ ಯಡಿಯೂರಪ್ಪ ಎಂದು ವ್ಯಾಖ್ಯಾನಿಸಲಾಗಿದೆ.

ಆಪರೇಷನ್‌ ಕಮಲದ ಮೂಲಕ ಕಾಂಗ್ರೆಸ್, ಜೆಡಿಎಸ್‌ ಶಾಸಕರನ್ನು ಸೆಳೆದು ಅಧಿಕಾರ ಹಿಡಿಯಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಹವಣಿಸುತ್ತಿದ್ದಾರೆ ಎಂಬುದನ್ನು ಮುಂದು ಮಾಡಿ ಬಿಜೆಪಿ ಹೈಕಮಾಂಡ್‌ಗೆ ಸಮೀಪರ್ತಿಯಾದ ಲೆಹರ್‌ ಸಿಂಗ್ ಈಚೆಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದರು. ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ ಎಂದು ಲೆಹರ್‌ ಸಿಂಗ್‌ ಅವರು ಪರೋಕ್ಷವಾಗಿ ಯಡಿಯೂರಪ್ಪ ಅವರ ವಿರುದ್ಧ ಕಿಡಿಕಾರಿದ್ದರು. ಕೇಂದ್ರ ನಾಯಕರ ಸೂಚನೆಯ ಮೇರೆಗೆ ಲೆಹರ್ ಸಿಂಗ್‌ ಪತ್ರ ಬರೆದಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಅನಂತಕುಮಾರ್‌ ಅನಾರೋಗ್ಯದಿಂದ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ತಮ್ಮ ಅಧಿಕಾರ ಲಾಲಸೆ ಪೂರೈಸಿಕೊಳ್ಳಲು ಯಡಿಯೂರಪ್ಪ ಬಳಸಿಕೊಳ್ಳಲು ಯತ್ನಿಸಿದ್ದರು ಎನ್ನಲಾಗಿದೆ. ಈಗ ಸಂತೋಷ್‌ ಅವರು ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ಚರ್ಚೆಗೆ ಈಡಾಗಿದೆ.

ಸಂತೋಷ್ ಅವರ ಹೇಳಿಕೆಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, “ಕೇಂದ್ರ ಸಚಿವರಾದ ಅನಂತಕುಮಾರ್‌ ಮತ್ತು ನಿರ್ಮಲಾ ಸೀತಾರಾಮನ್ ಅನುಪಸ್ಥಿತಿಯಿಂದ ಸಂಖ್ಯಾಬಲದ ಕೊರತೆಯಾಯಿತು,” ಎನ್ನುವ ಮೂಲಕ ಅಶೋಕ್‌ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ, ಸಂತೋಷ್‌ ಅವರ ಹೇಳಿಕೆಗೆ ಎದಿರೇಟು ನೀಡುವ ಪ್ರಯತ್ನ ಮಾಡಿದ್ದಾರೆ. ಇದು ಯಡಿಯೂರಪ್ಪ ಮತ್ತು ಸಂತೋಷ್‌ ನಡುವಿನ ಕಲಹ ಶುರುವಾಗಿರುವುದರ ಮುನ್ಸೂಚನೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.

ಅಂದಹಾಗೆ, ಸಂತೋಷ್‌ ಮತ್ತು ಯಡಿಯೂರಪ್ಪ ಅವರ ನಡುವಿನ ವಿರಸ ಇಂದು-ನಿನ್ನೆಯದೇನಲ್ಲ. ಜೆಡಿಎಸ್‌ನ ವಚನಭ್ರಷ್ಟತೆಯ ಲಾಭ ಪಡೆದು ೨೦೦೮ರಲ್ಲಿ ಅಧಿಕಾರ ಹಿಡಿದ ಯಡಿಯೂರಪ್ಪ ಅವರು, ಕೇಂದ್ರ ಸಚಿವ ಅನಂತಕುಮಾರ್‌ ಅವರಿಗೆ ಕಡಿವಾಣ ಹಾಕಲು ಸಂತೋಷ್‌ ಅವರಿಗೆ ಮಣೆ ಹಾಕಿದ್ದರು. ಇದನ್ನು ಸಮರ್ಥವಾಗಿ ಬಳಸಿಕೊಂಡ ಸಂತೋಷ್‌ ಅವರು, ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಬೆಳೆದು ನಿಂತಿದ್ದರು. ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿ ಆನಂತರ ಹೊರಬಂದು ಕೆಜೆಪಿ ಕಟ್ಟಿದ್ದ ಯಡಿಯೂರಪ್ಪ, ಸಂತೋಷ್‌ ಸೇರಿದಂತೆ ಬಿಜೆಪಿ ನಾಯಕರನ್ನು ವಾಚಾಮಗೋಚರವಾಗಿ ನಿಂದಿಸಿದ್ದರು. ಬದಲಾದ ರಾಜಕೀಯದಲ್ಲಿ ಮರಳಿ ಬಿಜೆಪಿ ಸೇರಿದ ಯಡಿಯೂರಪ್ಪ ವೇಗಕ್ಕೆ ಬ್ರೇಕ್‌ ಹಾಕಲು ಮುಂದಾಗಿದ್ದು ಇದೇ ಸಂತೋಷ್‌. ಅದಕ್ಕಾಗಿ ಸಂತೋಷ್‌, ಶಿವಮೊಗ್ಗ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ ಅವರನ್ನು ಬಳಕೆ ಮಾಡಿದ್ದರು ಎಂಬ ಆರೋಪವಿದೆ.

ಇದನ್ನೂ ಓದಿ : ಬಿಜೆಪಿ ಹೈಕಮಾಂಡ್‌ ನಿಕಟವರ್ತಿ ಲೆಹರ್‌ ಸಿಂಗ್‌ರಿಂದ ಬಿಎಸ್‌ವೈಗೆ ಬುದ್ಧಿವಾದ

ಒಂದು ಕಾಲದಲ್ಲಿ ಆಪ್ತ ಗೆಳೆಯರಾಗಿದ್ದ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಕಲಹವು ಹಾದಿ ರಂಪ-ಬೀದಿ ರಂಪವಾಗಿ ಬಿಜೆಪಿ ಸಾಕಷ್ಟು ಮುಜುಗರ ಅನುಭವಿಸಿದ್ದು, ರಾಜಕೀಯ ನಷ್ಟವನ್ನೂ ಅನುಭವಿಸಿದೆ. ರಾಯಣ್ಣ ಬ್ರಿಗೇಡ್‌ ಎಂಬ ಸಂಘಟನೆಯ ಮೂಲಕ ತೀರಾ ಇತ್ತೀಚಿನವರೆಗೂ ಈಶ್ವರಪ್ಪ ಅವರು ಯಡಿಯೂರಪ್ಪ ವಿರುದ್ಧ ಸಮರ ಸಾರಿದ್ದರು. ಇದಕ್ಕೆಲ್ಲವೂ ಈಶ್ವರಪ್ಪ ಅವರಿಗೆ ಪರೋಕ್ಷವಾಗಿ ಸಂತೋಷ್‌ ಬೆಂಬಲ ನೀಡಿದ್ದರು ಎನ್ನುವ ಆರೋಪಗಳಿವೆ. ಈಗ ಮತ್ತೆ ಸಂತೋಷ್‌ ಅವರು ಯಡಿಯೂರಪ್ಪ ಅವರ ವಿಫಲ ಕಾರ್ಯತಂತ್ರಗಳನ್ನು ಮುಂದುಮಾಡಿ ಪಕ್ಷವನ್ನು ಹಿಡಿತಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಹಿಂದಿಗಿಂತಲೂ ಈಗ ಕೇಂದ್ರ ನಾಯಕರಿಗೆ ಸಂತೋಷ್‌ ಸಮೀಪವಾಗಿದ್ದು, ಅವರ ಮಾತುಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ ಎನ್ನಲಾಗುತ್ತಿದೆ.

ಯಡಿಯೂರಪ್ಪ ಮತ್ತು ಸಂತೋಷ್‌ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡರೊಬ್ಬರು, “ಬಿಎಸ್‌ವೈ-ಸಂತೋಷ್‌ ನಡುವಿನ ಕಲಹ ಹೊಸದೇನಲ್ಲ. ಈಚೆಗೆ ಬಿಜೆಪಿ ಅನುಭವಿಸಿದ ಹಿನ್ನಡೆಗಳಿಂದ ಬೇಸರಗೊಂಡು ಸಂತೋಷ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ರಾಜ್ಯದ ಚುಕ್ಕಾಣಿ ಹಿಡಿಯುವ ವಿಚಾರದಲ್ಲಿ ಸಿದ್ದರಾಮಯ್ಯ ಹೆಣೆದ ಬಲೆಗೆ ಯಡಿಯೂರಪ್ಪ ಬಿದ್ದರು. ಬಿಬಿಎಂಪಿ ಅಧಿಕಾರ ಪಡೆಯುವ ವಿಚಾರದಲ್ಲಿ ಅಶೋಕ್‌ ಅವರು ರಾಮಲಿಂಗಾ ರೆಡ್ಡಿ ಅವರ ಮಾತಿಗೆ ಮರುಳಾಗಿ ಪಕ್ಷಕ್ಕೆ ಸೋಲುಂಟು ಮಾಡಿದರು. ಯಡಿಯೂರಪ್ಪ-ಅಶೋಕ್‌ ಅವರ ಸ್ವಾರ್ಥ ರಾಜಕಾರಣದಿಂದ ಪಕ್ಷ ಮುಜುಗರ ಅನುಭವಿಸುವಂತಾಗಿದೆ. ಈಗ ಶತ್ರುವಿನ ಶತ್ರು ಮಿತ್ರ ಎನ್ನುವ ಮಾತಿನಂತೆ ಅಶೋಕ್‌ ಮೂಲಕ ಸಂತೋಷ್‌ ವಿರುದ್ಧ ಯಡಿಯೂರಪ್ಪ ತಿರುಗಿ ಬೀಳುವ ಯತ್ನ ಮಾಡಿದ್ದಾರೆ,” ಎಂದಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More