ಗೆಳತಿ, ಸುಂದರಿಯರಾಚೆಗಿನ ಮಹಿಳಾ ರಾಜಕಾರಣ ಸಾಧ್ಯವಾಗುವುದು ಯಾವಾಗ?

ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಅವರು ಇತ್ತೀಚೆಗೆ ಆಡಿರುವ ಮಾತೊಂದು ರಾಜಕೀಯದಲ್ಲಿ ಲಿಂಗ ಸಮಾನತೆ ಇನ್ನೂ ಮರೀಚಿಕೆ ಎಂಬ ಚರ್ಚೆಗೆ ವೇದಿಕೆಯೊದಗಿಸಿದೆ. ಅಂದುಕೊಂಡಂತೆ ಶೇ 33ರಷ್ಟು ಮೀಸಲಾತಿ ಮಹಿಳೆಯರಿಗೆ ದೊರೆತಿದ್ದರೆ ಇಂತಹ ಬೇಸರದ ಮಾತುಗಳು ಹುಟ್ಟುತ್ತಿರಲಿಲ್ಲ ಎಂಬುದು ವಾದ

“ರಾಜಕೀಯದಲ್ಲಿ ಮಹಿಳೆಯರು ಯಶಸ್ಸು ಕಾಣಲು ಗಾಡ್ ಫಾದರ್ ಇರಬೇಕು, ಹಣ ಇರಬೇಕು ಇಲ್ಲವೇ ಗರ್ಲ್ ಫ್ರೆಂಡ್ ಆಗಬೇಕು. ಇದು ನಮ್ಮ ಈಗಿನ ರಾಜಕೀಯ ವ್ಯವಸ್ಥೆ,” ಎಂದು ಇತ್ತೀಚೆಗೆ ತುಮಕೂರಿನಲ್ಲಿ ಮಾತನಾಡುತ್ತಾ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗೆ ಹೇಳುತ್ತಿರುವವರಲ್ಲಿ ಅವರು ಮೊದಲ ರಾಜಕಾರಣಿಯೇನೂ ಅಲ್ಲ. ವಿಧಾನಸಭೆ ಚುನಾವಣೆಗೂ ಮುನ್ನ ಮತ್ತೊಬ್ಬ ಮಾಜಿ ಸಚಿವೆ ರಾಣಿ ಸತೀಶ್ ಕೂಡ “ಸೌಂದರ್ಯ ಇರುವವರಿಗಷ್ಟೇ ಟಿಕೆಟ್ ನೀಡಬಾರದು,” ಎಂದು ಹೇಳಿದ್ದರು. ಈ ಇಬ್ಬರು ಮಹಿಳಾ ರಾಜಕಾರಣಿಗಳು ವ್ಯಕ್ತಪಡಿಸಿರುವ ಬೇಸರ ಸದ್ಯದ ರಾಜ್ಯ ರಾಜಕಾರಣಕ್ಕೆ ಹಿಡಿದ ಕನ್ನಡಿ.

ಲೀಲಾದೇವಿ ಅವರು ಆಡಿರುವ ಮಾತು ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಕುರಿತ ಚರ್ಚೆಗೆ ಮತ್ತೊಮ್ಮೆ ನಾಂದಿ ಹಾಡಿದೆ. ಅವರು ಯಾವುದೇ ಪಕ್ಷವನ್ನು ಉದ್ದೇಶಿಸಿ ಈ ಮಾತನ್ನು ಹೇಳಿಲ್ಲ ಎಂಬುದು ಗಮನಾರ್ಹ. ಆದರೆ ಎಲ್ಲ ರಾಜಕೀಯ ಪಕ್ಷಗಳೂ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯ ಎದ್ದು ಕಾಣುತ್ತಿದೆ. ಮಹಿಳಾ ಮೀಸಲಾತಿ ಮಸೂದೆ ಅಥವಾ ಸಂವಿಧಾನದ 108ನೇ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆ ಸಮ್ಮತಿ ಸೂಚಿಸಿದ್ದರೆ ಅದು ಜಾರಿಯಾಗಿ 8 ವರ್ಷಗಳೇ ಕಳೆದಿರುತ್ತಿದ್ದವು. ಸಂಸತ್ತಿನ ಕೆಳಮನೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ದೊರೆತಿರುತ್ತಿತ್ತು, 2010ರಲ್ಲಿ ರಾಜ್ಯಸಭೆಯ ಸಮ್ಮತಿ ಪಡೆದ ಮಸೂದೆ ಲೋಕಸಭೆಯ ಒಪ್ಪಿಗೆ ಪಡೆಯುವಲ್ಲಿ ವಿಫಲವಾಯಿತು. ಅದರ ಅಡ್ಡಪರಿಣಾಮಗಳು ಆಗಾಗ ರಾಜಕೀಯದಲ್ಲಿ ಕಾಣಿಸುತ್ತಲೇ ಇವೆ.

ಚುನಾವಣೆಗೂ ಮುನ್ನ ಈಗಿನ ಸಚಿವೆ ಜಯಮಾಲಾ “ಸುಂದರಿಯರಿಗೆ ಟಿಕೆಟ್ ನೀಡಿ, ಡಿ ಕೆ ಶಿವಕುಮಾರ್ ಅವರನ್ನು ಗೆಲ್ಲಿಸಿಕೊಂಡು ಬರುತ್ತಾರೆ ಎಂದಿದ್ದರು, ನಂತರ ಸಚಿವ ಸ್ಥಾನ ಸಿಗದ ಕಾರಣಕ್ಕೆ ಜಯಮಾಲಾ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ನಡೆದ ವಾಕ್ಸಮರ ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿತು. ಜಯಮಾಲಾ ಅವರ ‘ಸುಂದರಿಯರಿಗೆ ಟಿಕೆಟ್ ನೀಡಿ’ ಹೇಳಿಕೆಯೇ ರಾಣಿಸತೀಶ್ ಅಸಮಾಧಾನ ವ್ಯಕ್ತಪಡಿಸಲು ಇಂಬು ನೀಡಿತ್ತು.

“ಎಂಟು ಜನರಿಗೆ ಟಿಕೆಟ್ ಕೊಡಿಸಿದ್ದ ನನಗೇ ಈಗ ಕ್ಷೇತ್ರ ಹುಡುಕಿಕೊಂಡು ಬನ್ನಿ ಟಿಕೆಟ್ ಕೊಡುತ್ತೇವೆ ಎಂದಿದ್ದಾರೆ. ಮಗಳಿಗೆ ಗಂಡು ಹುಡುಕುವ ರೀತಿ ಕ್ಷೇತ್ರ ಹುಡುಕಬೇಕೆ ?” ಎಂಬುದು ಲೀಲಾದೇವಿ ಅವರ ಪ್ರಶ್ನೆ. ಲೀಲಾದೇವಿ ಅವರಂತಹ ರಾಜಕಾರಣಿಗಳು ವಿಧಾನಸಭೆ ಪ್ರವೇಶಿಸಲು 40 ವರ್ಷ ಹಿಡಿದಿದೆ. ರಾಣಿ ಸತೀಶ್ ಕೂಡ ಹಿರಿಯ ರಾಜಕಾರಣಿ. ಈ ಇಬ್ಬರೂ ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯದಿಂದ ಬಂದವರು ಎನ್ನುವುದನ್ನು ಮರೆಯುವಂತಿಲ್ಲ. ಅಂತಹವರ ಸ್ಥಿತಿಯೇ ಹೀಗಿರುವಾಗ ತಳಸಮುದಾಯಗಳ ಮಹಿಳಾ ರಾಜಕಾರಣಿಗಳ ಕತೆಯೇನು ಎಂಬುದು ಚಿಂತೆಗೀಡು ಮಾಡುವ ವಿಚಾರ.. ಮಹಿಳಾ ರಾಜಕಾರಣದ ವಿಚಾರದಲ್ಲಿ ಸಾಮರ್ಥ್ಯ ಮತ್ತು ಸೌಂದರ್ಯ ಪರಸ್ಪರ ಜಟಾಪಟಿಗೆ ಇಳಿಯುವ ಸಂಗತಿಗಳು. ರಾಣಿ ಸತೀಶ್ ಮಾತನಾಡುವಾಗಲೂ ಸೌಂದರ್ಯಕ್ಕೆ ಮಾತ್ರ ಒತ್ತು ನೀಡದೆ ಸಾಮರ್ಥ್ಯ ಇರುವವರನ್ನು ಗಮನಿಸಬೇಕು ಎಂದಿದ್ದರು. ಅಂದಹಾಗೆ ಈ ಇಬ್ಬರೂ ರಾಜಕಾರಣಿಗಳಿಗೂ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎನ್ನುವುದು ರಾಜಕೀಯದಲ್ಲಿ ‘ಕಾಲ’ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಉದಾಹರಣೆ. ಯಾರನ್ನೇ ಆಗಲಿ ದೈಹಿಕವಾದ ಗುಣಾವಗುಣಗಳ ಮೇಲೆ ಪುರಸ್ಕರಿಸುವುದು ಅಥವಾ ತಿರಸ್ಕರಿಸುವುದು ಪ್ರಶ್ನಾರ್ಹ ಸಂಗತಿ. ಆದರೆ ಅದು ನಡೆಯುತ್ತಿರುವುದು ವಾಸ್ತವ ಎನ್ನುವುದಕ್ಕೆ ಲೀಲಾದೇವಿ ಅವರು ಆಡಿರುವ ಮಾತುಗಳೇ ಸಾಕ್ಷಿ.

ಇದನ್ನೂ ಓದಿ : ಕನ್ನಡ ಚಿತ್ರರಂಗದ ಚೆಂದದ ನಟಿ ‘ಗಿರಿಕನ್ಯೆ’ ಜಯಮಾಲಾ ಈಗ ಸಚಿವೆ

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ರಾಜಕೀಯ ಪ್ರಾಬಲ್ಯ ಎಂಬುದು ತಮಾಷೆಯ ವಿಚಾರವಾಗಿದೆ. ಈ ವಿಚಾರವನ್ನೂ ಲೀಲಾದೇವಿ ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 110 ಮಹಿಳಾ ಪ್ರತಿನಿಧಿಗಳಿದ್ದರೂ ಗಂಡಂದಿರೇ ಅಧಿಕಾರ ನಡೆಸುತ್ತಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಇತ್ತೀಚೆಗೆ ಮಂಗಳೂರಿನ ಉಳ್ಳಾಲ ನಗರಸಭೆಗೆ ಚುನಾವಣೆ ನಡೆದಾಗ ರಾಜಕೀಯ ಪಕ್ಷವೊಂದು ತಾನು ಮುದ್ರಿಸಿದ್ದ ಕರಪತ್ರದಲ್ಲಿ ಮಹಿಳಾ ಅಭ್ಯರ್ಥಿಗಳ ಬದಲಿಗೆ ಅವರ ಗಂಡಂದಿರ ಭಾವಚಿತ್ರಗಳನ್ನು ಪ್ರಕಟಿಸಿದ್ದು ವಿವಾದ ಸೃಷ್ಟಿಸಿತ್ತು.

ಶೇ 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತಂದರೆ ಎಲ್ಲವೂ ಸದ್ಯಕ್ಕೆ ಸುಧಾರಣೆಯಾಗುತ್ತದೆ ಎಂದರ್ಥವಲ್ಲ. ಅಲ್ಲಿಯೂ ಗಂಡಂದಿರ ‘ಆಳ್ವಿಕೆ’ ಮುಂದುವರಿಯಬಹುದು. ಆದರೆ ಅದು ಸುಧಾರಣೆಗೆ ಮುನ್ನುಡಿಯೊಂದನ್ನು ಬರೆಯುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ದೀರ್ಘಕಾಲದಲ್ಲಿ ಮಸೂದೆ ಬೀರುವ ಪರಿಣಾಮ ಮಹತ್ವದ್ದು.ವಿವಿಧ ರಾಜಕೀಯ ಪಕ್ಷಗಳು ಲೋಕಸಭೆಯಂತಹ ಉನ್ನತ ಸದನದಲ್ಲಿ ಇನ್ನಾದರೂ ಮಹಿಳಾ ರಾಜಕೀಯ ಪ್ರಾತಿನಿಧ್ಯದತ್ತ ದಿಟ್ಟ ನಿಲುವುಗಳನ್ನು ವ್ಯಕ್ತಪಡಿಸಬೇಕು. ಆ ಮೂಲಕ ಲಿಂಗ ಅಸಮಾನತೆಯನ್ನು ರಾಜಕಾರಣದಿಂದ ಕಿತ್ತೊಗೆಯಲು ಶ್ರಮಿಸಬೇಕಿದೆ. ಇಲ್ಲದಿದ್ದರೆ ಮಾಗಿದ ಮಹಿಳಾ ರಾಜಕಾರಣ ಎಂಬುದು ಕೇವಲ ತಮಾಷೆಯ, ಜಟಾಪಟಿಯ ಸಂಗತಿಯಾಗಿ ಮಾತ್ರ ಉಳಿದು, ಲೀಲಾದೇವಿಯಂಥವರು ಎತ್ತಿದ್ದ ಪ್ರಶ್ನೆಗಳು ಅಪಹಾಸ್ಯದ ವಿಚಾರಗಳಾಗಿ ಕಾಣತೊಡಗುತ್ತದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More