ಯಡಿಯೂರಪ್ಪ-ಸಂತೋಷ್‌ ಸಂಘರ್ಷದಲ್ಲಿ ಮುರುಳೀಧರ್ ರಾವ್‌ ಬಲಿಪಶು?

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ನಿಷ್ಠ ಎಂದೇ ಬಿಂಬಿತರಾದ ರಾಜ್ಯ ಉಸ್ತುವಾರಿ ವಿ ಮುರುಳೀಧರ್‌ ರಾವ್‌ ಬದಲಾವಣೆ ಮಾತುಗಳು ಕೇಳಿಬಂದಿವೆ. ಲೋಕಸಭಾ ಚುನಾವಣೆ ನೀತಿ-ನಿರ್ಧಾರ ಸಂಪೂರ್ಣವಾಗಿ ಕೆಲವೇ ವ್ಯಕ್ತಿಗಳ ಕೈಯಲ್ಲಿರುವಾಗ ರಾವ್‌ ಬದಲಾವಣೆ ವಿಚಾರ ಅಪ್ರಸ್ತುತ ಎನ್ನಲಾಗುತ್ತಿದೆ

ವಿಧಾನಸಭಾ ಚುನಾವಣೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ಹಿಡಿಯುವಲ್ಲಿ ಮುಗ್ಗರಿಸಿರುವ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯಾಡುತ್ತಿರುವ ನಡುವೆಯೇ ರಾಜ್ಯ ಉಸ್ತುವಾರಿ ಪಿ ಮುರುಳೀಧರ್‌ ರಾವ್‌ ಬದಲಾವಣೆ ಮಾತುಗಳು ಕೇಳಿಬಂದಿವೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್‌) ಪ್ರಮುಖರು ತೆಗೆದುಕೊಳ್ಳುವುದರಿಂದ ರಾಜ್ಯ ಘಟಕದ ಅಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಅಥವಾ ಮುರುಳೀಧರ್‌ ರಾವ್‌ ಅವರ ಮಾತಿಗೆ ಪ್ರಾಶಸ್ತ್ಯ ತೀರ ಕಡಿಮೆ. ಇಂಥ ಸಂದರ್ಭದಲ್ಲಿ ಅವರ ಬದಲಾವಣೆಯ ವಿಚಾರವೇ ಅಪ್ರಸ್ತುತ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.

ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಮೂರು ದಿನಗಳ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತುಪಡಿಸಲು ವಿಫಲವಾದ ನಂತರ ಮುರುಳೀಧರ್‌ ರಾವ್ ಅವರು ರಾಜ್ಯದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು ತೀರ ಕಡಿಮೆ. ಸೆಪ್ಟೆಂಬರ್ ಆರಂಭದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತ್ರ ಮುರುಳೀಧರ್ ರಾವ್‌ ಭಾಗವಹಿಸಿದ್ದರು.

ರಾಜ್ಯದ ಚುಕ್ಕಾಣಿ ಹಿಡಿಯಲು ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರ ಜೊತೆ ಸೇರಿ ಆಪರೇಷನ್‌ ಕಮಲದ ಮೂಲಕ ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದ್ದರು ಎಂಬ ವಿಚಾರ ಭಾರಿ ಸದ್ದು ಮಾಡಿತ್ತು. ವಿಧಾನಸಭೆಯಿಂದ ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಮುಜುಗರ ಅನುಭವಿಸಿದ್ದ ಬಿಜೆಪಿ ನಾಯಕರು ಬಿಬಿಎಂಪಿ ಮೇಯರ್‌ ಮತ್ತು ಉಪಮೇಯರ್‌ ಆಯ್ಕೆ ಚುನಾವಣೆಯಲ್ಲಿಯೂ ಕಾರ್ಯತಂತ್ರ ರೂಪಿಸುವಲ್ಲಿ ಎಡವಿದ್ದು, ಭಾರಿ ಟೀಕೆಗೆ ಗುರಿಯಾಗಿದ್ದರು. ಇಷ್ಟಾದರೂ ಮುರುಳೀಧರ್ ರಾವ್ ಅವರು ರಾಜ್ಯದ ಬೆಳವಣಿಗೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಉಸ್ತುವಾರಿಯಾದವರು ಇಂಥ ಸಂದರ್ಭದಲ್ಲಿ ಪಕ್ಷಕ್ಕಾಗುತ್ತಿರುವ ಹಾನಿಯ ಮೇಲೆ ಮೇಲೆ ನಿಗಾ ಇಡಬೇಕು. ಇಲ್ಲಿನ ಬೆಳವಣಿಗೆಗಳನ್ನು ಕೇಂದ್ರ ನಾಯಕರ ಗಮನಕ್ಕೆ ತರಬೇಕು. ಆದರೆ, ಅಂಥ ಯಾವುದೇ ಕೆಲಸವನ್ನು ಮುರುಳೀಧರ್‌ ರಾವ್‌ ಮಾಡಲಿಲ್ಲ ಎಂಬ ಬೇಸರ ಯಡಿಯೂರಪ್ಪ ಅವರ ವಿರೋಧಿ ಬಣದಲ್ಲಿ ಇದೆ.

“ಲೋಕಸಭಾ ಚುನಾವಣೆಗೆ ಏಳು ತಿಂಗಳಿರುವಾಗ ಯಡಿಯೂರಪ್ಪ ಮತ್ತು ಅವರ ಬಳಗದ ರಾಜಕೀಯ ಸ್ವಾರ್ಥಕ್ಕಾಗಿ ಪಕ್ಷಕ್ಕೆ ಹಾನಿಯಾಗುತ್ತಿದೆ. ಇದನ್ನು ಹಲವು ಭಾರಿ ಮುರುಳೀಧರ್‌ ರಾವ್‌ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾದ ಬಿ ಎಲ್‌ ಸಂತೋಷ್‌ ಅವರ ಮೂಲಕ ಕೇಂದ್ರ ನಾಯಕರ ಗಮನಸೆಳೆಯಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಸಂತೋಷ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು “ದಿ ಸ್ಟೇಟ್‌”ಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಯಡಿಯೂರಪ್ಪಗೆ ಮತ್ತೊಮ್ಮೆ ಮಗ್ಗಲ ಮುಳ್ಳಾಗಲಿದ್ದಾರೆಯೇ ಸಂತೋಷ್‌?

ತೆಲಂಗಾಣದವರಾದ ಮುರುಳೀಧರ್‌ ರಾವ್‌ ಅವರು ತಮ್ಮ ರಾಜ್ಯದಲ್ಲಿ ಅವಧಿಪೂರ್ಣ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ಅಲ್ಲಿನ ಚಟುವಟಿಕೆಗಳಲ್ಲಿ ವ್ಯಸ್ತರಾಗಿದ್ದಾರೆ ಎನ್ನಲಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗೆ ನಿಷ್ಠರಾಗಿದ್ದ ಆರೋಪಕ್ಕೆ ಗುರಿಯಾಗಿದ್ದ ಮುರುಳೀಧರ್‌ ರಾವ್ ಅವರು ಬಿಜೆಪಿ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯಡಿಯೂರಪ್ಪ ಅವರೇ ತಮ್ಮ ಹೈಕಮಾಂಡ್‌ ಎನ್ನುವ ರೀತಿಯಲ್ಲಿ ಮುರುಳೀಧರ್‌ ರಾವ್‌ ನಡೆದುಕೊಂಡಿದ್ದರು ಎಂಬ ಬಲವಾದ ಆರೋಪ ಮುರುಳೀಧರ್‌ ರಾವ್‌ ಅವರ ಮೇಲಿದೆ. ಇದು ಕೇಂದ್ರ ನಾಯಕರಿಗೆ ಮುಟ್ಟುವ ರೀತಿಯಲ್ಲಿ ಬಿ ಎಲ್‌ ಸಂತೋಷ್‌ ನೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆನಂತರ ಮುರುಳೀಧರ್‌ ರಾವ್‌ ಅವರು ಕೇಂದ್ರ ನಾಯಕರ ಅವಜ್ಞೆಗೆ ಗುರಿಯಾಗಿದ್ದಾರೆ ಎನ್ನಲಾಗುತ್ತಿದೆ.

ವಿಧಾನಸಭಾ ಚುನಾವಣೆಗೂ ಮುನ್ನ ಯಡಿಯೂರಪ್ಪ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ ನಡುವೆ ಪಕ್ಷದ ಮೇಲಿನ ಹಿಡಿತಕ್ಕಾಗಿ ಕಿತ್ತಾಟ ನಡೆದಿತ್ತು. ಸಂತೋಷ್‌ ಅವರು ಈಶ್ವರಪ್ಪ ಪರ ನಿಲ್ಲುವ ಮೂಲಕ ಬಿಎಸ್‌ವೈ ಅವರನ್ನು ಬಹುವಾಗಿ ಕಾಡಿದ್ದರು. ಆದರೆ, ಮುರುಳೀಧರ್‌ ರಾವ್‌ ಅವರು ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಮತ್ತೊಂದು ಬಣದ ಕೆಂಗಣ್ಣಿಗೆ ಗುರಿಯಾಗಿದ್ದರು. ರಾಜಕೀಯ ಹಿನ್ನಡೆಯನ್ನು ಅಂತರಂಗದಲ್ಲಿಟ್ಟುಕೊಂಡಿದ್ದ ಸಂತೋಷ್‌ ಅವರು ಆರೋಪಗಳ ಪಟ್ಟಿಯನ್ನು ಕೇಂದ್ರ ನಾಯಕರ ಮುಂದೆ ಸಮರ್ಥವಾಗಿ ಮಂಡಿಸುವ ಮೂಲಕ ಮುಯ್ಯಿ ತೀರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಮೊದಲ ಬಲಿ ಮುರುಳೀಧರ್ ರಾವ್ ಆಗಿರಬಹುದು. ಎಷ್ಟಾದರೂ ರಾಜಕೀಯವೇ ಕಾಯುವ ಆಟವಲ್ಲವೇ ಎಂದು ಬಿಜೆಪಿ ನಾಯಕರೊಬ್ಬರು ಮಾರ್ಮಿಕವಾಗಿ ನುಡಿದಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More