ಆದಿತ್ಯನಾಥ್‌ರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ ಆ್ಯಪಲ್ ಉದ್ಯೋಗಿ ಹತ್ಯೆ

ಆ್ಯಪಲ್ ಉದ್ಯೋಗಿ ವಿವೇಕ್‌ ತಿವಾರಿ ಹತ್ಯೆ ವಿಚಾರವಾಗಿ ತಮ್ಮದೇ ಪಕ್ಷದ ಮುಖಂಡರ ಆಕ್ರೋಶಕ್ಕೆ ಒಳಗಾಗಿರುವ ಯೋಗಿ ಆದಿತ್ಯನಾಥ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಪ್ರದೇಶ ಗೃಹ ಇಲಾಖೆ ನಡೆಯನ್ನು ಬೆಂಬಲಿಸುವಂತೆ ನಡೆದುಕೊಂಡಿದ್ದ ಆದಿತ್ಯನಾಥ್‌‌ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ 

ಉತ್ತರ ಪ್ರದೇಶದ ಲಖನೌನಲ್ಲಿ ಪೊಲೀಸರ ಗುಂಡೇಟಿನಿಂದ ಬಲಿಯಾದ ಆ್ಯಪಲ್ ಕಂಪನಿ ಉದ್ಯೋಗಿ ವಿವೇಕ್‌ ತಿವಾರಿ ಹತ್ಯೆ ವಿಚಾರವೀಗ ಜಾತಿ ತಿರುವು ಪಡೆದುಕೊಂಡಿದ್ದು, ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ವಿವೇಕ್‌ ತಿವಾರಿ ಹತ್ಯೆ ಖಂಡಿಸಿರುವ ಉತ್ತರ ಪ್ರದೇಶ ಬಿಜೆಪಿಯ ಬ್ರಾಹ್ಮಣ ಸಮುದಾಯದ ನಾಯಕರು, ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾದ ಪೊಲೀಸರ ಮೇಲೆ ಶೀಘ್ರ ಕ್ರಮ ಕೈಗೊಳ್ಳುವಂತೆ ಯೋಗಿ ಆದಿತ್ಯನಾಥರಿಗೆ ಒತ್ತಾಯಿಸಿದ್ದಾರೆ. ಯೋಗಿ ಆದಿತ್ಯನಾಥ್‌ ಅವರು ಬ್ರಾಹ್ಮಣ ಸಮುದಾಯವನ್ನು ಕಡೆಗಣಿಸುತ್ತಿದ್ದು, ಕೇವಲ ಠಾಕೂರ್‌ ಸಮುದಾಯಕ್ಕೆ ಒತ್ತು ನೀಡುತ್ತಿದ್ದಾರೆಂದು ಮೇಲ್ಜಾತಿಗೆ ಸೇರಿದ ಬಿಜೆಪಿ ಶಾಸಕರು ಆರೋಪಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್‌ ಯೋಗಿ ಆದಿತ್ಯನಾಥ್‌ ಅವರು ವಿವೇಕ್‌ ತಿವಾರಿ ಹತ್ಯೆಯ ತನಿಖೆ, ಸಂತಸ್ತ್ರರ ಕುಟುಂಬಕ್ಕೆ ಶೀಘ್ರ ಪರಿಹಾರ ಮತ್ತು ಪೊಲೀಸರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿದೆ ಎಂದು ತಿಳಿದುಬಂದಿದೆ.

ಅ.01 (ಸೋಮವಾರ) ರಂದು ರಾತ್ರಿ ವಿವೇಕ್‌ ತಿವಾರಿ ಅವರು ಕಾರಿನಲ್ಲಿ ತಮ್ಮ ಸಹದ್ಯೋಗಿ ಸನಾ ಖಾನ್‌ ಅವರೊಂದಿಗೆ ತೆರಳುತ್ತಿದ್ದಾಗ ಇಬ್ಬರು ಪೊಲೀಸರು ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಆ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದ ಸನಾ ಖಾನ್‌ ಪೊಲೀಸರ ಗುಂಡೇಟಿನಿಂದಲೇ ವಿವೇಕ್‌ ತಿವಾರಿ ಹತ್ಯೆಯಾಗಿದ್ದಾರೆ ಎಂದು ಆರೋಪಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿಯೂ ವಿವೇಕ್‌ ತಿವಾರಿ ಅವರದ್ದು ಸಹಜ ಸಾವಲ್ಲವೆಂದು ದೃಢಪಟ್ಟಿತ್ತು.

ವಿವೇಕ್‌ ತಿವಾರಿ ಹತ್ಯೆ ಖಂಡಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, “ಉತ್ತರ ಪ್ರದೇಶ ಪೊಲೀಸರಿಂದ ಹತ್ಯೆಯಾದ ವಿವೇಕ್‌ ತಿವಾರಿ ಹಿಂದೂ ಆಗಿದ್ದರಲ್ಲವೇ? ಯುಪಿ ಪೊಲೀಸರಿಂದ ಅವರ ಹತ್ಯೆ ಏಕೆ ಆಯಿತು? ಬಿಜೆಪಿ ನಾಯಕರು ದೇಶಾದ್ಯಂತ ಹಿಂದೂ ಹುಡುಗಿಯರ ಅತ್ಯಾಚಾರ ಮಾಡುತ್ತಿದ್ದಾರೆ. ಆ ಮೂಲಕ ಬಿಜೆಪಿಯು ಹಿಂದೂಗಳ ಹಿತರಕ್ಷಣೆಯಲ್ಲಿ ತೊಡಗಿಲ್ಲವೆಂಬುದು ಗೊತ್ತಾಗುತ್ತದೆ. ಅವರು ಅಧಿಕಾರಕ್ಕೊಸ್ಕರ ಹಿಂದೂಗಳನ್ನು ಕೊಲ್ಲಲು ಹೇಸುವುದಿಲ್ಲ,” ಎಂದು ಟ್ವೀಟ್‌ ಮೂಲಕ ಪ್ರತಿಕ್ರಿಸಿದ್ದರು.

ಯೋಗಿ ಆದಿತ್ಯನಾಥ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಯುಪಿ ಮಾಜಿ ಸಿಎಂ ಮಾಯಾವತಿ, “ಬಿಜೆಪಿಯು ಅಧಿಕಾರಕ್ಕೆ ಬಂದ ನಂತರ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಜಾಗವೇ ಇಲ್ಲದಂತಾಗಿದೆ. ಪೊಲೀಸರ ವೇಷದಲ್ಲಿರುವ ಗೂಂಡಾಗಳು ಉತ್ತರ ಪ್ರದೇಶವನ್ನು ಆಳುತ್ತಿದ್ದಾರೆ. ಅವರಿಂದ ಸಮಾಜದ ಎಲ್ಲ ಸಮುದಾಯದ ಜನರು ಸಮಸ್ಯೆ ಎದುರಿಸುವಂತಾಗಿದೆ. ಅದಕ್ಕೆ ವಿವೇಕ್‌ ತಿವಾರಿ ಹತ್ಯೆ ದೊಡ್ಡ ಉದಾಹರಣೆ. ತಿವಾರಿ ಹತ್ಯೆಯಲ್ಲಿ ಭಾಗಿಯಾಗಿರುವ ಪೊಲೀಸರು ಮತ್ತು ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು,” ಎಂದು ಒತ್ತಾಯಿಸಿದ್ದರು. ಇದೇ ವೇಳೆ ಬ್ರಾಹ್ಮಣ ಸಮುದಾಯದ ಬಿಎಸ್‌ಪಿ ನಾಯಕ ಸತೀಶ್‌ ಚಂದ್ರ ಮಿಶ್ರಾ ಅವರು ವಿವೇಕ್‌ ತಿವಾರಿ ಮನೆಗೆ ಭೇಟಿ ನೀಡಿ, ಅವರ ಪತ್ನಿಗೆ ನ್ಯಾಯ ಕೊಡಿಸುವ ಭರವಸೆ ನೀಡಬೇಕೆಂದು ಮಾಯಾವತಿ ಸೂಚಿಸಿದ್ದಾರೆ.

ವಿವೇಕ್‌ ತಿವಾರಿ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿರುವ ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್‌ ಯಾದವ್‌, “ವಿವೇಕ್‌ ತಿವಾರಿ ಹತ್ಯೆಗೆ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರವೇ ಹೊಣೆ ಎಂದು ತಮ್ಮ ಪಕ್ಷ ನಂಬಿದೆ. ಮೃತರ ಕುಟುಂಬಕ್ಕೆ ಐದು ಕೋಟಿ ರೂ. ಪರಿಹಾರ ನೀಡಬೇಕು. ಈ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎನ್ನಲಾಗುತ್ತಿರುವ ನಕಲಿ ಎನ್‌ಕೌಂಟರ್‌ಗಳ ತನಿಖೆ ನಡೆಯಬೇಕು,” ಎಂದು ಯೋಗಿ ಆದಿತ್ಯನಾಥ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಉತ್ತರ ಪ್ರದೇಶದ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಬಿಜೆಪಿ ನಾಯಕರೇ ಯೋಗಿ ಆದಿತ್ಯನಾಥ್‌ ವಿರುದ್ಧ ಮಾತನಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. “ಪೊಲೀಸ್‌ ಇಲಾಖೆಯಲ್ಲಿ ಅಪರಾಧ ಮನೋಭಾವ ಹೊಂದಿರುವವರು ಕಾರ್ಯನಿರ್ವಹಿಸುತ್ತಿರುವುದು ವಿವೇಕ್‌ ತಿವಾರಿ ಘಟನೆಯಿಂದ ದೃಢಪಟ್ಟಿದೆ. ಇದು ಸರ್ಕಾರಕ್ಕೆ ಹಿನ್ನಡೆ ಉಂಟು ಮಾಡಲಿದೆ,” ಎಂದು ಉತ್ತರ ಪ್ರದೇಶ ಬಿಜೆಪಿ ಮುಖಂಡ ಕಲ್‌ರಾಜ್‌ ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರಾದ ಬ್ರಿಜೇಶ್‌ ಪಾಠಕ್‌, ಶಾಸಕರಾದ ರಜನಿ ತಿವಾರಿ ಮಿಶ್ರಾ ಅವರು ಯೋಗಿ ಆದಿತ್ಯನಾಥ್‌ ಅವರಿಗೆ ಪತ್ರ ಬರೆದು ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಯೋಗಿ ಅಧಿಕಾರದ ಈವರೆಗಿನ ಅನ್ಯಾಯದ ಕಂತೆಗಳನ್ನು ಬಿಚ್ಚಿಟ್ಟ ಉನ್ನಾವೋ ಪ್ರಕರಣ

ಕಳೆದ ವರ್ಷ ಯೋಗಿ ಆದಿತ್ಯನಾಥ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಉತ್ತರ ಪ್ರದೇಶವನ್ನು ಅಪರಾಧಮುಕ್ತ ಮಾಡುತ್ತೇನೆಂದು ಪಣತೊಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೆ ಉತ್ತರ ಪ್ರದೇಶದಲ್ಲಿ ಸಾಕಷ್ಟು ಎನ್‌ಕೌಂಟರ್‌ಗಳು ನಡೆದು ಅದರಲ್ಲಿ ಅನೇಕ ಅಮಾಯಕರು ಬಲಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಉತ್ತರ ಪ್ರದೇಶ ಪೊಲೀಸರಿಂದ ನಡೆದಿದ್ದ ಅಮಾಯಕರ ಹತ್ಯೆಗಳ ಬಗ್ಗೆ ವಿವರ ನೀಡುವಂತೆ ಮಾನವ ಹಕ್ಕುಗಳ ಆಯೋಗ ಆದಿತ್ಯನಾಥ್ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತ್ತು. ಈಗ ಪೊಲೀಸರಿಂದ ಹತ್ಯೆಯಾದ ವಿವೇಕ್‌ ತಿವಾರಿ ಪ್ರತಿಷ್ಠಿತ ಕಂಪನಿಯ ಉದ್ಯೋಗಿಯಾಗಿದ್ದು, ಮೇಲ್ಜಾತಿಗೆ ಸೇರಿದವರಾಗಿದ್ದಾರೆ. ಈ ಹಿಂದೆಯೂ ಉತ್ತರ ಪ್ರದೇಶದಲ್ಲಿ ನಕಲಿ ಎನ್‌ಕೌಂಟರ್‌ ನಡೆದಿದ್ದವು. ಆ ವಿಚಾರದ ಬಗ್ಗೆ ಯಾವುದೇ ರಾಜಕೀಯ ನಾಯಕರು ಮಾತನಾಡದಿರುವುದು ವಿಪರ್ಯಾಸವೆಂದೇ ಹೇಳಬಹುದು.

ವಿರೋಧ ಪಕ್ಷಗಳ ನಾಯಕರಲ್ಲದೇ, ತಮ್ಮದೇ ಪಕ್ಷದ ಮುಖಂಡರ ಆಕ್ರೋಶಕ್ಕೆ ಒಳಗಾಗಿರುವ ಯೋಗಿ ಆದಿತ್ಯನಾಥ್‌ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಪ್ರದೇಶದ ಗೃಹ ಇಲಾಖೆಯ ನಡೆಯನ್ನು ಬೆಂಬಲಿಸುವಂತೆ ನಡೆದುಕೊಂಡಿದ್ದ ಆದಿತ್ಯನಾಥ್‌‌ ಅವರೀಗ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಗುಂಡುಹಾರಿಸಲೆಂದೇ ತಹತಹಿಸುವ ರೀತಿಯಲ್ಲಿ ವರ್ತಿಸುತ್ತಿರುವ ಉತ್ತರ ಪ್ರದೇಶದ ಪೊಲೀಸರನ್ನು ಇದಾಗಲೇ ‘ಟ್ರಿಗರ್‌ ಹ್ಯಾಪಿ’ ಎಂದು ಸಾರ್ವಜನಿಕ ವಲಯದಲ್ಲಿ ಕರೆಯಲಾಗುತ್ತಿದ್ದು ಜನರಿಗೆ ಅವರ ಬಗೆಗಿನ ವಿಶ್ವಾಸ ಕುಂದುತ್ತಿದೆ. ಹಿಂದೂಗಳ ಅದರಲ್ಲೂ ಮೇಲ್ಜಾತಿಯವರ ಆಕ್ರೋಶಕ್ಕೆ ಗುರಿಯಾಗಿರುವ ವಿವೇಕ್‌ ತಿವಾರಿ ಹತ್ಯೆ ವಿಚಾರವನ್ನು ಆದಿತ್ಯನಾಥ್‌ ಅವರು ಮುಂದಿನ ದಿನಗಳಲ್ಲಿ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More