ರಾಹುಲ್‌ ಗಾಂಧಿ ಅಪ್ತವಲಯದಿಂದ ದೂರವಾದರೆ ಮಾಜಿ ಸಂಸದೆ ರಮ್ಯಾ?

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಾಮಾಜಿಕ ಜಾಲತಾಣಗಳನ್ನು, ವಿಶೇಷವಾಗಿ ಟ್ವಿಟರ್‌ ಖಾತೆಯನ್ನು ರಮ್ಯಾ ನಿರ್ವಹಿಸುತ್ತಾರೆ ಎಂದೇ ಬಿಂಬಿತವಾಗಿತ್ತು. ಆದರೆ ರಮ್ಯಾ ಸೃಷ್ಟಿಸಿಕೊಂಡ ವಿವಾದಗಳು ರಾಹುಲ್‌ ಅವರ ಸಾಮಾಜಿಕ ಜಾಲತಾಣಗಳ ಹೊಣೆಯಿಂದ ದೂರ ಮಾಡಿವೆ ಎನ್ನುತ್ತದೆ ‘ ದಿ ಪ್ರಿಂಟ್‌’ ವರದಿ

ಕಾಂಗ್ರೆಸ್‌ನ ಸೋಷಿಯಲ್‌ ಮೀಡಿಯಾ ಹೊಣೆ ಹೊತ್ತಿರುವ ರಮ್ಯಾ ತಮ್ಮ ಟ್ವಿಟರ್‌ ಖಾತೆಯ ಕಿರುಪರಿಚಯ ಬದಲಿಸಿ, ಮೂರು ದಿನ ಮೌನವಹಿಸಿದ್ದು ಮಾಧ್ಯಮಗಳ ಊಹೆಗೆ, ಸುದ್ದಿಗೆ ಆಹಾರವಾಗಿದೆ. ಯಾವುದೋ ಬಗ್‌ನಿಂದಾಗಿ ಆದ ಅವಾಂತರವೆಂದು ಸ್ಪಷ್ಟನೆ ನೀಡಿ, ಪುನಃ ತಮ್ಮ ಟ್ವಿಟರ್‌ ಖಾತೆಯಲ್ಲಿ, " ನಟಿ, ಮಾಜಿ ಸಂಸದೆ, ಪ್ರಸ್ತುತ ಕಾಂಗ್ರೆಸ್‌ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್‌ ಕಮ್ಯುನಿಕೇಷನ್‌ ಹೊಣೆಗಾರಿಕೆ'' ಎಂದು ಬರೆದುಕೊಂಡಿದ್ದಾರೆ. ಆದರೆ ಅವರ ಜವಾಬ್ದಾರಿ ಏನಾಗಿತ್ತು ಎಂಬ ಚರ್ಚೆಗೆ ಹೊಸ ಆಯಾಮ ದೊರೆತಂದಿದೆ.

ರಾಹುಲ್‌ ಗಾಂಧಿ ಅವರ ಟ್ವಿಟರ್‌ ಖಾತೆಯನ್ನು ರಮ್ಯಾ ಅವರೇ ನಿರ್ವಹಿಸುತ್ತಿರುವುದು ಎಂದೇ ಇದುವರೆಗೂ ಬಿಂಬಿಸಲಾಗಿತ್ತು. ಆದರೆ ರಮ್ಯಾ ಕಾಂಗ್ರೆಸ್‌ ನಾಯಕರ ಟ್ವಿಟರ್‌ ಖಾತೆಯ ಗುರುವೂ ಅಲ್ಲ ಮತ್ತು ಅವರ ಟ್ವೀಟ್‌ಗಳಿಗೆ ನಿತ್ಯ ಸಲಹೆಗಳನ್ನು ನೀಡುವ ಆಪ್ತ ಗುಂಪಿನಲ್ಲೂ ಅವರಿಲ್ಲ. ಕಳೆದ ವರ್ಷದಿಂದಲೇ ರಾಹುಲ್‌ ಅವರ ಸಾಮಾಜಿಕ ಜಾಲತಾಣಗಳ ನಿರ್ವಹಣೆಯಲ್ಲಿ ರಮ್ಯಾ ಪ್ರಭಾವ ಕಡಿಮೆಯಾಗುತ್ತಾ ಬಂದಿದೆ ಎಂದು ' ದಿ ಪ್ರಿಂಟ್‌' ವರದಿ ಹೇಳುತ್ತದೆ.

ರಮ್ಯಾ ಅವರು ಕಳೆದ ಕೆಲವು ತಿಂಗಳುಗಳಿಂದಲೂ ರಾಹುಲ್‌ ಗಾಂಧಿ ಟ್ವಿಟರ್‌ ಖಾತೆಯ ಬಗ್ಗೆ ರಮ್ಯಾ ಮಾತುಗಳನ್ನಾಡಿಲ್ಲ. ಅವರು ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನೋಡಿಕೊಳ್ಳುತ್ತಿದ್ದಾರಷ್ಟೆ.

ಮಾರ್ಚ್‌ ತಿಂಗಳಲ್ಲಿ ನಡೆದ ಎಐಸಿಸಿ‌ ಸಭೆಯಲ್ಲಿ‌ ಹಿರಿಯ ನಾಯಕಿ ಮಾರ್ಗರೆಟ್‌ ಆಳ್ವಾ ಪುತ್ರ ನಿಖಿಲ್‌ ಆಳ್ವಾ ಅವರನ್ನು ರಾಹುಲ್‌ ಗಾಂಧಿ ಅವರ ಟ್ವಿಟರ್‌ ಖಾತೆಯ ಕಾರ್ಯಚಟುವಟಿಕೆ ನಿಭಾಯಿಸಲು ನೇಮಿಸಲಾಯಿತು. ನಿಖಿಲ್‌ ಆಳ್ವಾ ಅವರು ರಾಹುಲ್‌ ಗಾಂಧಿ ಟ್ವಿಟರ್‌ ಖಾತೆಯ ನಿರ್ವಹಣೆಗೆ ಸಲಹೆಗಾರರಾಗಿ ಬಂದ ಕೆಲ ದಿನಗಳಲ್ಲಿಯೇ ರಮ್ಯಾ ಅವರು ವಾಟ್ಸಪ್‌ ಗುಂಪೊಂದನ್ನು ಸೃಷ್ಟಿಸಿ ರಾದ್ದಾಂತ ಮಾಡಿಕೊಂಡಿದ್ದರು. ‌

ನೂತನ ವಾಟ್ಸಪ್‌ ಗ್ರೂಪ್‌ ಸೃಷ್ಟಿಸಿದ ರಮ್ಯಾ ಅವರು ರಾಹುಲ್‌ ಗಾಂಧಿ ಅವರ ಟ್ವಿಟರ್‌ ಖಾತೆಯ ನಿರ್ವಹಣೆಗೆ ಸಲಹೆ-ಸೂಚನೆ ನೀಡುವಂತೆ ವಾಟ್ಸಾಪ್‌ ಗುಂಪಿನ ಸದಸ್ಯರಿಗೆ ಸ್ವಾಗತ ಸಂದೇಶ ರವಾನಿಸಿದರು. ರಮ್ಯಾ ಅವರು ಸೃಷ್ಟಿಸಿದ್ದ ವಾಟ್ಸಾಪ್‌ ಗ್ರೂಪ್‌ನಲ್ಲಿ ರಾಹುಲ್‌ ಗಾಂಧಿ, ಪಕ್ಷದ ಮಾಧ್ಯಮ ವಕ್ತಾರ ರಣದೀಪ್‌ ಸುರ್ಜೇವಾಲ, ನಿಖಿಲ್‌ ಆಳ್ವಾರನ್ನು ಸೇರಿಸಲಾಗಿತ್ತು. ರಮ್ಯಾ ಅವರು ಸೃಷ್ಟಿಸಿದ್ದ ವಾಟ್ಸಾಪ್‌ ಗ್ರೂಪ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಿಖಿಲ್‌ ಆಳ್ವಾ ಅವರು ಸಲಹೆ-ಸೂಚನೆ ಹಂಚಿಕೊಳ್ಳಲು ವಾಟ್ಸಾಪ್‌ ನಂಬಲರ್ಹ ಮಾಧ್ಯಮವಲ್ಲ. ಸಲಹೆಗಳ ಬಗ್ಗೆ ಚರ್ಚಿಸಲು ಪೋನ್‌ ಮೂಲಕ ನೇರವಾಗಿ ಮಾತನಾಡಬಹುದು ಎಂದು ಹೇಳಿ ಗ್ರೂಪ್‌ ಅನ್ನು ತೊರೆದಿದ್ದರು. ಆ ನಂತರ ರಾಹುಲ್‌ ಗಾಂಧಿ ಮತ್ತು ಸುರ್ಜೇವಾಲ್ ಸಹ ಗ್ರೂಪ್‌ನಿಂದ ಹೊರನಡೆದಿದ್ದರು. ವಿಚಿತ್ರವೆಂದರೆ, ರಾಹುಲ್‌ ಗಾಂಧಿ ಅವರಿಗೆ ಮಾಹಿತಿ ನೀಡದೇ ರಮ್ಯಾ ಅವರು ಗುಂಪನ್ನು ಸೃಷ್ಟಿಸಿ ಕಾಂಗ್ರೆಸ್‌ ಅಧ್ಯಕ್ಷರನ್ನು ವಾಟ್ಸಪ್‌ ಗ್ರೂಪ್‌ಗೆ ಸೇರಿಸಿದ್ದರು. ಇದು ಸುರ್ಜೇವಾಲ್‌ ಮತ್ತು ನಿಖಿಲ್‌ ಆಳ್ವಾರ ಕಣ್ಣು ಕೆಂಪಗಾಗುವಂತೆ ಮಾಡಿತ್ತು ಎಂದು ‘ದಿ ಪ್ರಿಂಟ್‌’ ವರದಿ ಮಾಡಿದೆ

ರಮ್ಯಾ ಅವರು ಕಳೆದ ವರ್ಷವೂ ಸಹ ವಾಟ್ಸಾಪ್‌ ಇಂತಹುದೇ‌ ರಾದ್ಧಾಂತ ಮಾಡಿಕೊಂಡಿದ್ದರು ಎಂಬ ಮಾಹಿತಿ ಪಕ್ಷದ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ರಮ್ಯಾ ಅವರು ಕಳೆದ ವರ್ಷ ಸೃಷ್ಟಿಸಿದ್ದ ವಾಟ್ಸಾಪ್‌ ಗ್ರೂಪ್‌ ಒಂದರಲ್ಲಿ ಸುರ್ಜೇವಾಲ ಅವರೊಂದಿಗೆ ಜಟಾಪಟಿ ನಡೆಸಿದ್ದರು. ಪಕ್ಷಕ್ಕೆ ಸಂಬಂಧಿಸಿದ್ದ ಮಾಹಿತಿಯೊಂದು ತಮಗೆ ತಿಳಿಯುವ ಮೊದಲೇ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರ ಬಗ್ಗೆ ರಮ್ಯಾ ಅವರು ಆಕ್ರೋಶಗೊಂಡು ಸುರ್ಜೇವಾಲ್‌ ಜೊತೆ ವಾಗ್ದಾಳಿ ಮಾಡಿದ್ದರು. ಆ ವಿಚಾರವನ್ನು ತಣ್ಣಗಾಗಿಸಲು ಸ್ವತಃ ರಾಹುಲ್ ಗಾಂಧಿ ಅವರೇ ಮುಂದೆಬಂದಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ

ಎಐಸಿಸಿ ಸಾಮಾಜಿಕ ಮಾಧ್ಯಮಗಳ ನೇತೃತ್ವ ವಹಿಸಿಕೊಂಡ ಆರಂಭದಲ್ಲಿ ಪ್ರಶಂಸೆಗೆ ಒಳಗಾಗಿದ್ದ ರಮ್ಯಾ ಅವರು ತದನಂತರ ವಿವಾದಿತ ಪೋಸ್ಟ್‌ಗಳ ಮೂಲಕ ಸುದ್ಧಿಯಾದರು. ಇತ್ತೀಚೆಗೆ ರಮ್ಯಾ ಅವರು ಪ್ರಧಾನಿ ಮೋದಿಯವರನ್ನು ‘ಕಳ್ಳ’ನೆಂದು ಕರೆದು ಪೋಸ್ಟ್‌ ಮಾಡಿದ್ದು ಕಾಂಗ್ರೆಸ್‌ ನಾಯಕರಿಗೆ ಮುಜುಗರ ತಂದಿತ್ತು. ರಾಹುಲ್‌ ಗಾಂಧಿ ಅವರು ಜರ್ಮನಿಯಲ್ಲಿ ವಿವಿಧ ಭಂಗಿಯಲ್ಲಿ ನಿಂತಿದ್ದ ಚಿತ್ರಗಳನ್ನು ಕಾಂಗ್ರೆಸ್ನ ಅಧಿಕೃತ‌ ಸಾಮಾಜಿಕ ಮಾಧ್ಯಮದಲ್ಲಿ ಹಾಕಿ ಅವರ ಟ್ವಿಟರ್‌ ಖಾತೆಯ ಗಾಂಭಿರ್ಯ ಮುಕ್ಕಾಗುವಂತೆ ಮಾಡಿದ್ದರು. ರಮ್ಯಾ ಹುಟ್ಟುಹಾಕಿದ್ದ ಈ ವಿವಾದಗಳು ಕಾಂಗ್ರೆಸ್‌ ಪಕ್ಷದ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದವು. ಆ ಮೂಲಕ ರಮ್ಯಾ ಅವರು ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ವಲಯದಿಂದ ದೂರವಾಗುವಾಗುವ ಸನ್ನಿವೇಶಗಳು ಎದುರಾದವು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಆರಂಭದಲ್ಲಿ ಸಾಮಾಜಿಕ ಮಾಧ್ಯಮಗಳ ಬಗ್ಗೆ ಅಷ್ಟೇನೂ ಒಲವು ಹೊಂದಿರದಿದ್ದ ರಾಹುಲ್‌ ಗಾಂಧಿ ಅವರು ಸ್ವತಃ ತಾವೇ ಟ್ವಿಟರ್‌ ಖಾತೆಯನ್ನು ನಿಭಾಯಿಸಲು ಪ್ರಾರಂಭಿಸಿದ ನಂತರ ಅವರ ಹಿಂಬಾಲಕರ‌ ಸಂಖ್ಯೆಯೂ ಹೆಚ್ಚಾಗಿದ್ದನ್ನು ಇಲ್ಲಿ ಗಮನಿಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ಕುಗ್ಗಿದ ಜನಪ್ರಿಯತೆಯೇ ರಾಹುಲ್‌ ಹಿಂಬಾಲಕರ ಸಂಖ್ಯೆ ಹೆಚ್ಚಾಗಲು ಕಾರಣವೆಂದು ಕಾಂಗ್ರೆಸ್‌ ನಾಯಕರು ಹೇಳುತ್ತಾರೆ ಎಂದು ಎಂಬುದನ್ನು ‘ದಿ ಪ್ರಿಂಟ್‌’ ವರದಿ ಮಾಡಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More