ಮಧ್ಯಪ್ರದೇಶ ವಿಧಾನಸಭಾ ಕಣ|ಕಾಂಗ್ರೆಸ್ ಶಾಲಿನ ಕೇಸರಿ ವೃದ್ಧಿಸಿದ ಮಾಯಾವತಿ ನಿರ್ಧಾರ

ಹಿಂದುತ್ವದ ಕುರಿತ ಗೊಂದಲಗಳ ನಡುವೆ, ಇದೀಗ ಮಾಯಾವತಿ ಮೈತ್ರಿಯಿಂದ ದೂರ ಉಳಿಯುವ ಕಟು ನಿರ್ಧಾರದ ಮೂಲಕ ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ ನೀಡಿದ್ದಾರೆ. ಈ ಆಘಾತ ಪಕ್ಷವನ್ನುಎಷ್ಟು ದಿಕ್ಕೆಗೆಡಿಸಿದೆ ಎಂಬುದರ ಮೇಲೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನ ಶಾಲುಗಳ ಕೇಸರಿ ಬಣ್ಣದ ಪ್ರಮಾಣ ನಿರ್ಧಾರವಾಗಲಿದೆ

ಸಮೀಪಿಸುತ್ತಿರುವ ಲೋಕಸಭಾ ಚುನಾವಣೆಯ ರಂಗುತಾಲೀಮು ಎಂದೇ ಭಾವಿಸಲಾಗಿರುವ ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸಗಢ ರಾಜ್ಯಗಳ ವಿಧಾನಸಭಾ ಚುನಾವಣೆ ಕಾವು ಏರತೊಡಗಿದೆ. ಪ್ರಮುಖವಾಗಿ ಮಧ್ಯಪ್ರದೇಶದಲ್ಲಿ ಈಗಾಗಲೇ ಪ್ರಮುಖ ಪಕ್ಷಗಳ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ೨೦೧೯ರ ಮಹಾ ಚುನಾವಣೆಗೆ ತನ್ನ ಭವಿಷ್ಯ ಭದ್ರಪಡಿಸಿಕೊಳ್ಳಲು ಈ ಮೂರು ರಾಜ್ಯಗಳ ಚುನಾವಣಾ ಫಲಿತಾಂಶವೇ ಮೆಟ್ಟಿಲು ಎಂಬುದನ್ನು ಅರಿತಿರುವ ಕಾಂಗ್ರೆಸ್ಸಂತೂ ಮತದಾರರ ಮನಗೆಲ್ಲಲು ಸಾಧ್ಯವಿರುವ ಎಲ್ಲಾ ತಂತ್ರಗಾರಿಕೆಗಳ ಮೊರೆಹೋಗಿದೆ.

ಆದರೆ, ಮಧ್ಯಪ್ರದೇಶದಲ್ಲಿ ಗಣನೀಯ ಪ್ರಮಾಣದ ಪ್ರಭಾವ ಹೊಂದಿರುವ(ಶೇ.೬.೦ ಮತ ಪಾಲು) ಮಾಯಾವತಿ ಅವರ ಬಿಎಸ್ಪಿ ಇದೀಗ ದಿಢೀರ್ ಯೂ ಟರ್ನ್ ತೆಗೆದುಕೊಂಡಿದ್ದು, ಸ್ಥಾನ ಹಂಚಿಕೆ ವಿಷಯದಲ್ಲಿ ಹೊಂದಾಣಿಕೆಯಾಗದೆ, ಕಾಂಗ್ರೆಸ್ ಮೈತ್ರಿಯಿಂದ ಹೊರನಡೆದಿದೆ. ಅಲ್ಲದೆ, ಮಧ್ಯಪ್ರದೇಶವೂ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ಮಟ್ಟಿಗೆ ಕಾಂಗ್ರೆಸ್ಸಿನೊಂದಿಗೆ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಆ ಪಕ್ಷದ ನಾಯಕಿ ಮಾಯಾವತಿ ಖಂಡತುಂಡವಾಗಿ ಹೇಳಿಬಿಟ್ಟಿದ್ದಾರೆ. ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್‌ ನಾಥ್ ಅವರು, ಮಾಯಾವತಿಯವರ ನಡೆಯಿಂದ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ, ಪಕ್ಷ ಈ ಬಾರಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೆ, ಕಳೆದ ಚುಣಾವಣೆಯಲ್ಲಿ ಬಿಎಸ್ಪಿಯ ಶೇಕಡವಾರು ಮತ ಪ್ರಮಾಣ ತೀರಾ ನಿರ್ಣಾಯಕ ಪ್ರಮಾಣದಲ್ಲಿ ಇಲ್ಲದೇ ಇದ್ದರೂ, ಕಾಂಗ್ರೆಸ್ ಹೊರತಾಗಿ ಅದು ಕಣಕ್ಕಿಳಿದರೆ ಖಂಡಿತವಾಗಿಯೂ ಕಾಂಗ್ರೆಸ್ ಮತಬ್ಯಾಂಕಿಗೆ ಕನ್ನ ಹಾಕಲಿದೆ ಮತ್ತು ಆ ಮೂಲಕ, ತಾನು ಗೆಲ್ಲಲಾಗದೇ ಇದ್ದರೂ, ಸ್ಪರ್ಧಿಸಿದ ಕಡೆಯೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳ ಹಿನ್ನಡೆಗೂ ಮತ್ತು ಪರಿಣಾಮವಾಗಿ ಬಿಜೆಪಿಯ ಗೆಲುವಿಗೂ ಕಾರಣವಾಗಲಿದೆ ಎಂಬುದು ಮಧ್ಯಪ್ರದೇಶದ ರಾಜಕೀಯ ಬಲ್ಲವರ ವಾದ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ದಿಗಿಲುಗೊಂಡಿದೆ ಎನ್ನಲಾಗುತ್ತಿದೆ.

ಈ ನಡುವೆ, ಈ ಬಾರಿ ಮಧ್ಯಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯ ಅಸ್ತ್ರವನ್ನೇ ಬಳಸಿ ಅದನ್ನು ಮಣಿಸುವ ಪಣತೊಟ್ಟಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಗುಜರಾತ್ ಮತ್ತು ಕರ್ನಾಟಕ ಚುನಾವಣೆಗಳಲ್ಲಿ ಕೆಲಮಟ್ಟಿಗೆ ಬಳಸಿ, ಯಶ ಕಂಡ ಮೃದು ಹಿಂದುತ್ವದ ದಾಳವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಹಾಗಾಗಿ ಹದಿನೈದು ದಿನಗಳ ಹಿಂದೆ ಭೋಪಾಲ್‌ನಲ್ಲಿ ‘ಶಿವಭಕ್ತ ರಾಹುಲ್’ ಎಂಬ ಘೋಷಣೆಯೊಂದಿಗೆ ರಾಜ್ಯದ ತಮ್ಮ ಚುನಾವಣಾ ಪ್ರಾಚಾರಾಂದೋಲನಕ್ಕೆ ಚಾಲನೆ ನೀಡಿದ್ದ ಅವರು, ಈ ವಾರ ಹಿಂದೂ ಬಾಹುಳ್ಯದ ವಿಂದ್ಯಾ ಪ್ರಾಂತ್ಯದಲ್ಲಿ ‘ರಾಮಭಕ್ತ ಪಂಡಿತ್’ ರಾಹುಲ್ ಗಾಂಧಿಯಾಗಿ ಕಾಣಿಸಿಕೊಂಡಿದ್ದಾರೆ. ಮೂರು ಅವಧಿಯ ಬಿಜೆಪಿ ಅಧಿಕಾರದ ಹೊರತಾಗಿಯೂ ಕಾಂಗ್ರೆಸ್ ಸಾಕಷ್ಟು ಪ್ರಭಾವ ಉಳಿಸಿಕೊಂಡಿರುವ ಈ ಪ್ರಾಂತದ ಸತ್ನಾ ಮತ್ತು ರೇವಾ ಜಿಲ್ಲೆಗಳಲ್ಲಿ ರಾಹುಲ್ ಕಳೆದ ವಾರ ನಡೆಸಿದ ಸರಣಿ ಪ್ರಚಾರ ಸಭೆ, ರೋಡ್‌ಶೋಗಳ ಉದ್ದಕ್ಕೂ ‘ರಾಮಭಕ್ತ ಪಂಡಿತ್’ ವಿಶೇಷಣದೊಂದಿಗೆ ರಾಹುಲ್ ಕಟೌಟ್ ಮತ್ತು ಪೋಸ್ಟರುಗಳು ಕಾಣಿಸಿಕೊಂಡಿವೆ.

ಅಲ್ಲದೆ, ಬಿಜೆಪಿಯ ಹಿಂದುತ್ವ ಮತ್ತು ಶ್ರೀರಾಮನ ಹೆಸರಿನ ರಾಜಕಾರಣಕ್ಕೆ ತಿರುಗೇಟು ನೀಡುವ ಉದ್ದೇಶದಿಂದ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ರೂಪಿಸಿರುವ ‘ರಾಮ ಪಥ ವನ ಗಮನ ಯಾತ್ರೆ’ ಕೂಡ ಇದೇ ಪ್ರಾಂತ್ಯದಲ್ಲಿ ಹಾದುಹೋಗಲಿದೆ. ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ವನವಾಸಕ್ಕೆ ಹೋಗುವಾಗ ಸಾಗಿದ ಮಾರ್ಗ ಎಂಬ ಪ್ರತೀತಿ ಇರುವ ವಿಂದ್ಯಾ ಪ್ರಾಂತದ ೮೨೦ ಕಿ.ಮೀ ಉದ್ದದ ಮಾರ್ಗದಲ್ಲಿ ಯಾತ್ರೆ ನಡೆಸುವ ಮೂಲಕ ಹಿಂದೂ ಮತಗಳನ್ನು ಸೆಳೆಯುವುದು ಕಾಂಗ್ರೆಸ್ ತಂತ್ರಗಾರಿಕೆ. ಆ ತಂತ್ರಗಾರಿಕೆಯ ಭಾಗವಾಗಿ ಈಗಾಗಲೇ ಪ್ರದೇಶ ಕಾಂಗ್ರೆಸ್ ಘಟಕ ಎಲ್ಲಾ ಸಿದ್ದತೆ ಮತ್ತು ಯೋಜನೆ ಪೂರ್ಣಗೊಳಿಸಿದ್ದು, ಪೂರ್ವನಿಗದಿಯಂತೆ ಸೆ.೨೩ರಂದೇ ಯಾತ್ರೆ ಆರಂಭವಾಗಬೇಕಿತ್ತು. ಆದರೆ, ಕೊನೇ ಕ್ಷಣದಲ್ಲಿ ಯಾತ್ರೆಯನ್ನು ಮುಂದೂಡಲಾಗಿದೆ.

ಯಾತ್ರೆಯುದ್ದಕ್ಕೂ ೩೦ಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಧರ್ಮಗುರುಗಳ ಆಶೀರ್ವಾದ ಪಡೆಯುವುದು ಈ ರಾಮ ಪಥ ವನ ಗಮನ ಯಾತ್ರೆಯ ಕಾರ್ಯಸೂಚಿಯ ಪ್ರಮುಖ ಭಾಗ. ಅಲ್ಲದೆ, ಈ ಯಾತ್ರೆ, ಮಧ್ಯಪ್ರದೇಶದ ಮಟ್ಟಿಗೆ ಅಷ್ಟೇ ಅಲ್ಲದೆ, ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲಿಯೂ ಕಾಂಗ್ರೆಸ್ಸಿಗೆ ಅಂಟಿರುವ ಧರ್ಮವಿರೋಧಿ ಎಂಬ ಹಣೆಪಟ್ಟಿಯನ್ನು ದೂರಮಾಡಲಿದೆ. ಆ ಮೂಲಕ ಜನರ ಕಣ್ಣಲ್ಲಿ ಕಾಂಗ್ರೆಸ್ ಪಕ್ಷದ ಚಹರೆಯನ್ನೇ ಬದಲಾಯಿಸಲಿದೆ ಎಂಬ ವಿಶ್ವಾಸ ಈ ಯಾತ್ರೆಯ ರೂಪುರೇಷೆ ಹೊಣೆಹೊತ್ತಿರುವ ಕಾಂಗ್ರೆಸ್ ನಾಯಕ ಪಂಡಿತ್ ಹರಿಶಂಕರ್ ಶುಕ್ಲಾ ವಾದ.

ಅಲ್ಲದೆ, ಯಾತ್ರೆಯಲ್ಲಿ ಜೈ ಶ್ರೀರಾಮ್ ಘೋಷಣೆ ಮೊಳಗಿಸುವ ಯೋಜನೆಯೂ ಯಾತ್ರಾ ಪ್ರಸ್ತಾವನೆಯ ಭಾಗವಾಗಿದೆ. ಕೇವಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರಷ್ಟೇ ಅಲ್ಲದೆ, ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೂ ರಾಮಮಂತ್ರ ಘೋಷಣೆ ಮಾಡಬೇಕು. ಜೈ ಶ್ರೀರಾಮ್ ಎನ್ನುವ ಮೂಲಕ ಬಿಜೆಪಿ ಬೆಂಬಿಸುವ ಕಟ್ಟಾ ಹಿಂದೂ ಮತದಾರರ ಮನಸ್ಸನ್ನೂ ಗೆಲ್ಲಬಹುದು ಎಂಬುದು ಸ್ಥಳೀಯ ನಾಯಕರ ಲೆಕ್ಕಾಚಾರ. ಜೈ ಶ್ರೀರಾಮ್ ಎಂಬ ಘೋಷಣೆ ಮುಸ್ಲಿಂ ಮತಗಳನ್ನು ಚೆದುರಿಸಬಹುದು ಎಂಬ ಆತಂಕದಲ್ಲಿರುವ ಕೆಲವರು, ಅದರ ಬದಲಾಗಿ ‘ಜೈ ಸಿಯಾ ರಾಮ್’(ಜೈ ಸೀತಾ ರಾಮ್) ಎಂದು ಘೋಷಣೆ ಕೂಗುವುದು ಜಾಣ ನಡೆ ಎಂಬ ಸುರಕ್ಷಿತ ಹಾದಿಯನ್ನೂ ಹೊಸೆದಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್-ಜೆಡಿಎಸ್‌ ಮೈತ್ರಿಕೂಟ ಮೇಲುಗೈ, ಮುಂಬೈ, ಹೈ-ಕದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ

ಆದರೆ, ಪಕ್ಷದ ರಾಜ್ಯಾಧ್ಯಕ್ಷ ಕಮಲ್ ನಾಥ್ ಅವರು ಶುಕ್ಲಾ ಅವರ ಈ ಪ್ರಸ್ತಾವನ್ನು ಸಂಪೂರ್ಣ ಮುಕ್ತಮನಸ್ಸಿನಿಂದ ಒಪ್ಪಿಕೊಂಡಿಲ್ಲ. ಜಾತ್ಯತೀತ ರಾಜಕಾರಣದಲ್ಲಿ ನಂಬಿಕೆ ಇಟ್ಟಿರುವ ಅವರು, “ರಾಜಕಾರಣ ಮತ್ತು ಧರ್ಮವನ್ನು ಬೆಸೆಯಬಾರದು. ಅಂತಹ ತಂತ್ರಗಳ ಅಗತ್ಯವಿಲ್ಲದೆಯೂ ಈ ಬಾರಿ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಯಾತ್ರೆಯನ್ನು ಹಿಂದುತ್ವ ರಾಜಕಾರಣದ ತಂತ್ರಗಾರಿಕೆಯ ಬದಲಾಗಿ, ಪ್ರವಾಸೋದ್ಯಮ ಅಭಿವೃದ್ದಿ ಮತ್ತು ರಾಮ ಪಥ ನಿರ್ಮಾಣದ ಬಿಜೆಪಿ ಸರ್ಕಾರದ ಹಿಂದಿನ ಭರವಸೆಯ ವೈಫಲ್ಯವನ್ನು ಬಿಂಬಿಸುವ ಶುದ್ಧ ರಾಜಕೀಯ ತಂತ್ರಗಾರಿಕೆಯಾಗಿ ಅದನ್ನು ಬಿಂಬಿಸುವ ಯತ್ನವನ್ನು ಕಮಲ್ ನಾಥ್ ಮಾಡಿದ್ದಾರೆ.

ಅಂದರೆ, ಕಳೆದುಕೊಂಡಿರುವ ಅಧಿಕಾರ ಹಿಡಿಯಲು ಹಿಂದೂ ಬಾಹುಳ್ಯದ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಸದ್ಯಕ್ಕೆ ಹಿಂದುತ್ವ ಜಪ ಹೊರತುಪಡಿಸಿ ಬೇರೆ ದಾರಿ ಕಾಣುತ್ತಿಲ್ಲ. ಆದರೆ, ಹಿಂದುತ್ವದ ಕೇಸರಿ ಶಾಲನ್ನು ಎಲ್ಲರಿಗೂ ಕಾಣುವಂತೆ ತೊಟ್ಟುಕೊಳ್ಳುವುದು ಅದರ ಸಾಂಪ್ರದಾಯಿಕ ಮತಬ್ಯಾಂಕ್‌ ಆಗಿರುವ ಮುಸ್ಲಿಂ ಮತ್ತು ಕ್ರೈಸ್ತರನ್ನು ದೂರ ಮಾಡಿಬಿಡಬಹುದು ಎಂಬ ಅಳುಕು. ಹಾಗಾಗಿ, ಅಕ್ಕನ ಮೇಲೆಯೂ ಪ್ರೀತಿ, ಅಕ್ಕಿಯ ಮೇಲೆಯೂ ಆಸೆ ಎಂಬ ಡೋಲಾಯಮಾನ ಸ್ಥಿತಿ ಕಾಂಗ್ರೆಸ್ಸಿನದ್ದು.

ಇಂತಹ ಗೊಂದಲಗಳ ನಡುವೆ, ಇದೀಗ ಮಾಯಾವತಿ ಮೈತ್ರಿಯಿಂದ ದೂರ ಉಳಿಯುವ ಕಟು ನಿರ್ಧಾರದ ಮೂಲಕ ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ ನೀಡಿದ್ದಾರೆ. ಈ ಆಘಾತ ಪಕ್ಷವನ್ನು ಎಷ್ಟು ದಿಕ್ಕೆಗೆಡಿಸಿದೆ ಎಂಬುದರ ಮೇಲೆ ಮುಂದಿನ ದಿನಗಳಲ್ಲಿ ಮಧ್ಯಪ್ರದೇಶದ ಚುನಾವಣಾ ಕಣದಲ್ಲಿ ಕಾಂಗ್ರೆಸ್ಸಿನ ಶಾಲುಗಳ ಕೇಸರಿ ಬಣ್ಣದ ಪ್ರಮಾಣ ನಿರ್ಧಾರವಾಗಲಿದೆ. ಸದ್ಯದ ಸ್ಥಿತಿಯಲ್ಲಂತೂ ಆ ಶಾಲು ಇನ್ನಷ್ಟು ಕೇಸರೀಮಯವಾಗುವ ಸಾಧ್ಯತೆಗಳೇ ಹೆಚ್ಚಿವೆ. ಇದೇ ಕೇಸರಿಯ ಒಲವು ಉಳಿದ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಆ ಬಳಿಕದ ಲೋಕಸಭಾ ಚುನಾವಣೆಯಲ್ಲೂ ರಂಗೇರಿವುದೇ ಎಂಬುದನ್ನು ಮಧ್ಯಪ್ರದೇಶದ ಚುನಾವಣೆಯೇ ನಿರ್ಧರಿಸಲಿದೆ ಕೂಡ!

ಲಿಂಗಾಯತ ಧರ್ಮ ಕುರಿತ ಸಚಿವ ಡಿಕೆಶಿ ಕ್ಷಮಾಪಣೆ ಹಿಂದಿನ ಒಳಗುಟ್ಟುಗಳೇನು?
ಉಪ ಚುನಾವಣೆಯಲ್ಲಿ ತಂತ್ರ-ಪ್ರತಿತಂತ್ರ, ಹಣ-ಉನ್ಮಾದದಲ್ಲಿ ಗೆಲ್ಲುವವರಾರು?
ಬಳ್ಳಾರಿ ಕಾಂಗ್ರೆಸ್‌ ಕಣಕ್ಕೆ ಉಗ್ರಪ್ಪ ಆಗಮನದ ಹಿಂದಿನ ಲೆಕ್ಕಾಚಾರಗಳೇನು?
Editor’s Pick More