ಬಿಎಸ್ಪಿ ನಾಯಕಿ ಮಾಯಾವತಿ ನಡೆ, ಮಹೇಶ್‌ ನುಡಿ ರವಾನಿಸುತ್ತಿರುವ ಸಂದೇಶಗಳೇನು?

ಬಿಎಸ್‌ಪಿ ನಾಯಕಿ ಮಾಯಾವತಿ ಅವರು ರಾಜಸ್ಥಾನ, ಛತ್ತೀಸಗಡ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆಗಿನ ಮೈತ್ರಿಯಿಂದ ಹಿಂದೆ ಸರಿದಿದ್ದಾರೆ. ಇತ್ತ ಬಿಎಸ್‌ಪಿ ರಾಜ್ಯ ಘಟಕದ ಮುಖ್ಯಸ್ಥ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌ ಮಹೇಶ್‌ ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಅಸಮಾಧಾನ ವ್ಯಕ್ತವಾಗಿದೆ. ಈ ನಡೆಗಳು ಸೂಚಿಸುವುದು ಏನನ್ನು?

“ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕೆಲವು ಕಡೆ ಪ್ರತ್ಯೇಕವಾಗಿ ಮತ್ತೆ ಕೆಲವು ಕಡೆ ಸ್ಥಳೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು,” ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳುತ್ತಿದ್ದಂತೆಯೇ ರಾಷ್ಟ್ರಮಟ್ಟದಲ್ಲಿ ವಿಭಿನ್ನ ರೀತಿಯ ಚರ್ಚೆಗಳು ಆರಂಭವಾಗಿದೆ. ಇತ್ತ ಕರ್ನಾಟಕದಲ್ಲಿ ಏಕೈಕ ಬಿಎಸ್‌ಪಿ ಶಾಸಕರಾಗಿ ಆಯ್ಕೆಯಾಗಿ, ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೂ ಆಗಿರುವ ಎನ್ ಮಹೇಶ್‌ ಅವರು “ಮಾಯಾವತಿ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ” ಹೇಳಿದ್ದಾರೆ. ಇದರ ಜೊತೆಗೆ ಈಚೆಗೆ ಮಹೇಶ್ ಆಡಿರುವ ಕೆಲವು ಮಾತುಗಳ ಬಗ್ಗೆ ಕಾಂಗ್ರೆಸ್‌ನಲ್ಲಿ ಅಪಸ್ವರ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ಚುನಾವಣಾ ಪೂರ್ವದಲ್ಲಿ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಬಿಎಸ್‌ಪಿಗೂ ಸರ್ಕಾರದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಚಿನ ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್ ವಿರುದ್ಧ ಮೈತ್ರಿಯ ಭಾಗವಾಗಿದ್ದುಕೊಂಡು ಎಚ್ಚರಿಕೆಯಿಂದ ಮಹೇಶ್‌ ಅವರು ಮಾತನಾಡಬೇಕಿದೆ. ಪದೇಪದೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮಹೇಶ್ ಅವರು ಕಾಂಗ್ರೆಸ್‌ ಅನ್ನು ಕುಟುಕುವ ಯತ್ನ ಮಾಡುವುದು ಸರಿಯಾದ ನಡೆ ಎನಿಸುವುದಿಲ್ಲ. ಅಷ್ಟಕ್ಕೂ, ಬಿಎಸ್ಪಿಯು ರಾಜ್ಯದಲ್ಲಿ ನಿರ್ಣಾಯಕ ಶಕ್ತಿಯಾಗಿ ರೂಪುಗೊಂಡಿಲ್ಲ. ರಾಜಕೀಯ ಸನ್ನಿವೇಶಗಳನ್ನು ಅರ್ಥೈಸಿಕೊಂಡು, ಇತಿಮಿತಿಯಲ್ಲಿ ಮಾತನಾಡುವುದನ್ನು ಮಹೇಶ್‌ ರೂಢಿಸಿಕೊಳ್ಳುವುದು ಸೂಕ್ತ ಎನ್ನುವ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿದೆ.

ಇದನ್ನೂ ಓದಿ : ಚಾಣಕ್ಯಪುರಿ | ದೇವೇಗೌಡರು ಮತ್ತು ಮಾಯಾವತಿ ಪಕ್ಷದ ನಡುವಿನ ಮೈತ್ರಿಯ ಗುಟ್ಟು

ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಮಣಿಸುವ ಏಕೈಕ ಉದ್ದೇಶದಿಂದ ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿವೆ. ಇದನ್ನು ರಾಷ್ಟ್ರವ್ಯಾಪಿ ವಿಸ್ತರಿಸುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸುವ ಸಂದೇಶವನ್ನು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ಪದಗ್ರಹಣ ಸಮಾರಂಭದಲ್ಲಿ ಮಾಯಾವತಿ ಅವರನ್ನು ಒಳಗೊಂಡಂತೆ ಬಿಜೆಪಿಯೇತರ ನಾಯಕರು ರವಾನಿಸಿದ್ದರು. ಈಗ ಸ್ಥಳೀಯ ನಾಯಕತ್ವದ ಪ್ರತಿಷ್ಠೆಯಿಂದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಬಿಎಸ್‌ಪಿ-ಕಾಂಗ್ರೆಸ್‌ ಮೈತ್ರಿ ಸಾಧ್ಯವಾಗಿಲ್ಲ. ಆದರೆ, ಈಗಲೇ ಎಲ್ಲವೂ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಇದು ಸರಿಯಾಗಬಹುದು ಎಂಬ ಆಶಾವಾದವನ್ನು ಕಾಂಗ್ರೆಸ್‌ ನಾಯಕರು ವ್ಯಕ್ತಪಡಿಸಿದ್ದಾರೆ.

“ಬಿಎಸ್‌ಪಿಯ ನಡೆಯನ್ನು ರಾಷ್ಟ್ರ ರಾಜಕಾರಣದಲ್ಲಿ ಪ್ರತಿಯೊಂದು ಪಕ್ಷವೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಡೆಸುವ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ನೋಡಬೇಕು. ಅದನ್ನು ಸದ್ಯದ ಮಟ್ಟಿಗೆ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರಕ್ಕೆ ಅನ್ವಯಿಸಿ ನೋಡುವ ಅಗತ್ಯವಿಲ್ಲ. ಸಚಿವರಾದ ಮಹೇಶ್‌ ಮತ್ತು ಪುಟ್ಟರಂಗಶೆಟ್ಟಿ ಅವರ ನಡುವಿನ ಮಾತಿನ ಸಂಘರ್ಷವನ್ನು ಸ್ಥಳೀಯ ರಾಜಕಾರಣದಲ್ಲಿ ಹಿಡಿತ ಸಾಧಿಸಲು ಹವಣಿಸುವ ಭಾಗವಾಗಿ ನೋಡಬೇಕೆ ಹೊರತು, ಕಾಂಗ್ರೆಸ್‌-ಬಿಎಸ್‌ಪಿ ನಡುವಿನ ಸಂಘರ್ಷವೆಂದು ಪರಿಗಣಿಸುವುದು ಸೂಕ್ತವಲ್ಲ. ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್‌ ಪರವಾಗಿ ನಿಲ್ಲುವ ಮೂಲಕ ಮಹೇಶ್‌ ಕಾಂಗ್ರೆಸ್‌ ಹಿತಾಸಕ್ತಿ ಕಾದಿದ್ದಾರೆ. ಈಗ ಮಹೇಶ್‌ ಆಡುತ್ತಿರುವ ಮಾತುಗಳ ಹಿಂದಿನ ಉದ್ದೇಶವೇ ಬೇರೆ” ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಮಹೇಶ್‌ ಅವರಿಗೆ ಸ್ವಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವೇ ಎದುರಾಳಿ. ಇಲ್ಲಿ ಬಿಜೆಪಿಗೆ ಹೆಚ್ಚಿನ ಬಲವಿಲ್ಲ. ಇಂಥ ಸಂದರ್ಭದಲ್ಲಿ ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಅವರು ವಿರೋಧ ಪಕ್ಷವನ್ನು ಟೀಕಿಸುವುದು ಅನಿವಾರ್ಯ. ಇವೆಲ್ಲಾ ಸ್ಥಳೀಯ ವಿಚಾರಗಳಾಗಿದ್ದು, ಹೆಚ್ಚಿನ ಮಹತ್ಬ ನೀಡಬೇಕಾದ ಅಗತ್ಯವಿಲ್ಲ ಎನ್ನಲಾಗಿದೆ. ಇನ್ನು ೨೦೧೭ರಲ್ಲಿ ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ವಿಶೇಷವಾಗಿ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಮಹೇಶ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿದ್ದರು. ಇಲ್ಲಿನ ಗೆಲುವು ಸಿದ್ದರಾಮಯ್ಯ ಅವರಿಗೆ ರಾಜಕೀಯ ಶಕ್ತಿ ಒದಗಿಸಿದ್ದವು ಎಂಬುದನ್ನು ಮರೆಯಬಾರದು ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ನೆನಪಿಸುತ್ತಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More