ಸಚಿವರ ಉಪಾಹಾರ ಕೂಟ ಪಕ್ಷದ ಕಾರ್ಯತಂತ್ರದ ಭಾಗವೋ? ಶಕ್ತಿ ಪ್ರದರ್ಶನದ ವೇದಿಕೆಯೋ?

ಡಿಸಿಎಂ ಪರಮೇಶ್ವರ್ ಕಳೆದ ತಿಂಗಳು, ಸಚಿವ ಡಿಕೆಶಿ ಇತ್ತೀಚೆಗೆ ಕಾಂಗ್ರೆಸ್‌ ಸಚಿವರಿಗೆ ಉಪಾಹಾರ ಕೂಟ ಆಯೋಜಿಸಿದ್ದರು. ಮುಂದಿನ ತಿಂಗಳು ಸಚಿವ ಆರ್‌ ವಿ ದೇಶಪಾಂಡೆ ಮನೆಯಲ್ಲಿ ಸಚಿವರು ಒಗ್ಗೂಡಲಿದ್ದಾರೆ ಎನ್ನಲಾಗಿದೆ. ಇಂಥ ಉಪಾಹಾರ ಕೂಟಗಳು ಶಕ್ತಿ ಪ್ರದರ್ಶನದ ವೇದಿಕೆಗಳಾಗುತ್ತವೆಯೇ?

ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ತಮ್ಮ ಪಕ್ಷದ ಸಚಿವರಿಗೆ ಗುರುವಾರ ಉಪಾಹಾರ ಕೂಟ ಆಯೋಜಿಸಿದ್ದನ್ನು ಶಕ್ತಿ ಪ್ರದರ್ಶನದ ಚಟುವಟಿಕೆ ಎಂಬ ರೀತಿಯಲ್ಲಿ ಮಾಧ್ಯಮಗಳು ವ್ಯಾಖ್ಯಾನಿಸಿವೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೆಪ್ಟೆಂಬರ್‌ನಲ್ಲಿ ಯುರೋಪ್ ಪ್ರವಾಸದಲ್ಲಿದ್ದಾಗ, ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಕಾಂಗ್ರೆಸ್‌ ಸಚಿವರಿಗೆ ಉಪಾಹಾರ ಕೂಟ ಆಯೋಜಿಸಿದ್ದನ್ನೂ ಸ್ವಪಕ್ಷದ ಮೇಲಿನ ಹಿಡಿತ ಬಿಗಿಗೊಳಿಸುವ ತಂತ್ರವೆಂದೇ ಬಿಂಬಿಸಲಾಗಿತ್ತು. ಇದಕ್ಕೂ ಮುನ್ನ, ಸಿದ್ದರಾಮಯ್ಯ ಅವರೂ ತಮ್ಮ ಪಕ್ಷದ ಶಾಸಕರಿಗೆ ಭೋಜನ ಕೂಟ ಆಯೋಜಿಸಿದ್ದರು. ಉಪಾಹಾರ ಕೂಟದ ಮೂಲಕ ಶಕ್ತಿ ಪ್ರದರ್ಶನ, ಸ್ವಹಿತ ರಕ್ಷಣೆ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ನಿರಾಕರಿಸಿರುವ ಡಿ ಕೆ ಶಿವಕುಮಾರ್‌, “ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಸಚಿವರಿಗೆ ಉಪಾಹಾರ ಕೂಟ ಆಯೋಜಿಸಲಾಗಿದೆ. ಮುಂದಿನ ಬಾರಿ ಕಂದಾಯ ಸಚಿವ ಆರ್‌ ವಿ ದೇಶಪಾಂಡೆ ಮನೆಯಲ್ಲಿ ಜೊತೆಯಾಗಲಿದ್ದೇವೆ,” ಎನ್ನುವ ಮೂಲಕ, ಇದು ಪಕ್ಷದ ಕಾರ್ಯತಂತ್ರ ಎನ್ನುವ ಸಂದೇಶವನ್ನು ಸೂಕ್ಷ್ಮವಾಗಿ ದಾಟಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್‌ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಕಾಂಗ್ರೆಸ್‌‌ ಶಾಸಕರ ಕ್ಷೇತ್ರಕ್ಕೆ ಅನುದಾನ ಹಂಚಿಕೆ, ಕೆಲಸ-ಕಾರ್ಯ ಹಾಗೂ ಅಧಿಕಾರಿಗಳ ವರ್ಗಾವಣೆ ಮಾಡುವಾಗ ತಮ್ಮನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ. ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಜೆಡಿಎಸ್‌ ಪರಾಜಿತರ ಮಾತುಗಳಿಗೆ ಮಣೆ ಹಾಕುವ ಮೂಲಕ ಚುನಾಯಿತರಾದ ಕಾಂಗ್ರೆಸ್‌ ಶಾಸಕರನ್ನು ಕಡೆಗಣಿಸುತ್ತಿದ್ದಾರೆ ಎಂದೂ ಬೇಸರ ವ್ಯಕ್ತಪಡಿಸಿದ್ದರು. ಈ ಸಮಸ್ಯೆಗಳನ್ನು ಪರಮೇಶ್ವರ್‌ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ಸಚಿವರುಗಳ ಗಮನಕ್ಕೆ ತಂದರೂ ಸ್ವಪಕ್ಷೀಯರ ಮಾತುಗಳಿಗೆ ಕಿಮ್ಮತ್ತು ನೀಡುತ್ತಿಲ್ಲ. ಸಂಪುಟದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಉಪಮುಖ್ಯಮಂತ್ರಿಯಾದ ಪರಮೇಶ್ವರ್‌ ಸ್ವಪಕ್ಷದ ಶಾಸಕರ ಹಿತಾಸಕ್ತಿ ಕಾಯಲು ವಿಫಲರಾಗಿದ್ದಾರೆ ಎಂದು ಕೆಲವು ಶಾಸಕರು ಗಂಭೀರ ಆರೋಪ ಮಾಡಿದ್ದರು.

ಜೊತೆಗೆ, ಸಂಪುಟ ಸಭೆಯಲ್ಲಿ ಕಾಂಗ್ರೆಸ್‌ನ ಹಿರಿಯರು ಸೇರಿದಂತೆ ಬಹುತೇಕ ಸಚಿವರು ಮಾತನಾಡುವುದಿಲ್ಲ ಎನ್ನುವ ಆರೋಪವಿದೆ. ಎಸ್ಸಿ, ಎಸ್‌ಟಿ ಸಮುದಾಯದ ನೌಕರರಿಗೆ ಬಡ್ತಿ ಮೀಸಲಾತಿ ಕಲ್ಪಿಸುವ ಕುರಿತಾಗಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರ ಕಾಯ್ದೆ ರೂಪಿಸಿತ್ತು. ನಾನಾ ತೊಡಕುಗಳಿಂದ ಅದು ಜಾರಿಯಾಗುತ್ತಿಲ್ಲ. ಈ ವಿಚಾರಗಳನ್ನು ಸಂಪುಟ ಸಭೆಯಲ್ಲಿ ಪ್ರಬಲವಾಗಿ ಸಮರ್ಥಿಸಿಕೊಳ್ಳುತ್ತಿಲ್ಲ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕಡಿತಗೊಳಿಸುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನಿರ್ಧಾರವನ್ನು ಸಾಕಷ್ಟು ಸಚಿವರು ವಿರೋಧಿಸಲಿಲ್ಲ. ಕೊನೆಗೆ ಸಿದ್ದರಾಮಯ್ಯ ಅವರೇ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಪ್ರತಿಭಟಿಸಬೇಕಾಯಿತು. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳು ಹಾಗೂ ಪಕ್ಷದ ಹಿತಾಸಕ್ತಿ, ನಂಬಿಕೆಗಳಿಗೆ ಚ್ಯುತಿಯಾಗುವ ನಿರ್ಣಯಗಳನ್ನು ಕೈಗೊಂಡಾಗಲೂ ಅವುಗಳನ್ನು ವಿರೋಧಿಸಿ ಪಕ್ಷದ ಸಿದ್ಧಾಂತ ಮತ್ತು ನಿಲುವುಗಳನ್ನು ಎತ್ತಿ ಹಿಡಿಯುತ್ತಿಲ್ಲ ಎನ್ನುವ ವಿಚಾರ ಚರ್ಚೆಗೆ ನಾಂದಿ ಹಾಡಿತ್ತು.

ಇದನ್ನೂ ಓದಿ : ಸಮ್ಮಿಶ್ರ ಸರ್ಕಾರ ಕೆಡವಲೆಂದೇ ಕೃತಕ ಬಿಕ್ಕಟ್ಟು ಸೃಷ್ಟಿಯಲ್ಲಿ ಮುಳುಗಿದ ಮಾಧ್ಯಮಗಳು

ಸಿದ್ದರಾಮಯ್ಯ ನೇತೃತ್ವದಲ್ಲಿ ಈಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಸಚಿವರ ಎದುರಿಗೆ ಕಾಂಗ್ರೆಸ್‌ನ ಹಲವು ಶಾಸಕರು ಸಮ್ಮಿಶ್ರ ಸರ್ಕಾರ ಹಾಗೂ ಸಚಿವರ ವರ್ತನೆಯನ್ನು ಕಟುವಾಗಿ ಟೀಕಿಸಿದ್ದರು. “ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕಾಂಗ್ರೆಸ್‌ ಶಾಸಕರಿದ್ದರೂ ಜೆಡಿಎಸ್‌ ನಾಯಕರ ಪ್ರಭಾವ ಹೆಚ್ಚಾಗಿದೆ. ಈ ವಿಚಾರಗಳನ್ನು ನಮ್ಮ ಸಚಿವರ ಮುಂದೆ ಹೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲ,” ಎಂದು ಶಾಸಕರಾದ ಎಸ್‌ ಟಿ ಸೋಮಶೇಖರ್‌, ಬೈರತಿ ಬಸವರಾಜ್‌ ಹಾಗೂ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು, ಶೀಘ್ರದಲ್ಲೇ ಸಂಪುಟ ವಿಸ್ತರಣೆ ಆಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಸಂಬಂಧಪಟ್ಟ ಸಚಿವರು ಶಾಸಕರ ಕ್ಷೇತ್ರಗಳಲ್ಲಿನ ಕೆಲಸ-ಕಾರ್ಯಗಳನ್ನು ಮುತುವರ್ಜಿ ವಹಿಸಿ ಮಾಡಿಕೊಡುವುದು, ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಎದುರಾಗಬಹುದಾದ ಸಂಭಾವ್ಯ ಭಿನ್ನಮತ ತಣಿಸುವ ಕುರಿತು ಆಗಾಗ್ಗೆ ಚರ್ಚಿಸುವಂತೆ ಕಾಂಗ್ರೆಸ್‌ ನಾಯಕರು ಸೂಚನೆ ನೀಡಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಸಂಪುಟದ ಸದಸ್ಯರಲ್ಲ; ಹಾಗಾಗಿ, ಇಂಥ ಸನ್ನಿವೇಶದಲ್ಲಿ ಸಚಿವರ ಸಭೆಯಲ್ಲಿ ಭಾಗವಹಿಸುವುದು ಬೇರೆಯದೇ ಚರ್ಚೆಗೆ ನಾಂದಿ ಹಾಡುತ್ತದೆ ಎನ್ನುವ ಕಾರಣಕ್ಕಾಗಿ ಅವರು ಉಪಾಹಾರ ಕೂಟದಿಂದ ದೂರ ಉಳಿದ್ದಾರೆ ಎಂದು ತಿಳಿದುಬಂದಿದೆ.

“ಮಾಧ್ಯಮಗಳು ಬಿಂಬಿಸುತ್ತಿರುವಂತೆ, ಉಪಾಹಾರ ಕೂಟ ಆಯೋಜಿಸಿದ್ದ ಡಿ ಕೆ ಶಿವಕುಮಾರ್‌ ಶಕ್ತಿ ಪ್ರದರ್ಶನ ಮಾಡಿಲ್ಲ. ಡಿಕೆಶಿ ಮೇಲಿನ ಪ್ರಕರಣಗಳಿಂದ ಸಮಸ್ಯೆಯಾದರೆ ಉಳಿದ ಸಚಿವರುಗಳ ಬೆಂಬಲ ಪಡೆಯುವುದಕ್ಕಾಗಿ ಉಪಾಹಾರ ಕೂಟ ಆಯೋಜಿಸಿದ್ದಾರೆ ಎಂಬುದು ಅತಾರ್ಕಿಕ. ಒಂದೊಮ್ಮೆ ಡಿಕೆಶಿ ವಿರುದ್ಧ ತನಿಖಾ ಸಂಸ್ಥೆಗಳು ಕ್ರಮ ಕೈಗೊಂಡರೆ ಸಚಿವರು ವಕಾಲತ್ತು ವಹಿಸಲಾಗುತ್ತದೆಯೇ? ಹೈಕಮಾಂಡ್‌ ತಾನೇ ಏನು ಮಾಡಲು ಸಾಧ್ಯ? ರಾಜಕೀಯ ಸೂಕ್ಷ್ಮಗಳು ಹಾಗೂ ಅರಿವಿನ ಸಮಸ್ಯೆ ಇರುವವರು ಮಾತ್ರ ಮನಸೋಇಚ್ಛೆ ಮಾತನಾಡಲು ಸಾಧ್ಯ,” ಎಂದು ಮಾಜಿ ಶಾಸಕ ಚಲುವರಾಯ ಸ್ವಾಮಿ ‘ದಿ ಸ್ಟೇಟ್‌’ಗೆ ಪ್ರತಿಕ್ರಿಯಿಸಿದ್ದಾರೆ.

ಉಪಾಹಾರ ಕೂಟಕ್ಕೆ ವಿಭಿನ್ನ ಲೇಪಗಳನ್ನು ಹಾಕುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ವಿ ಎಸ್‌ ಉಗ್ರಪ್ಪ, “ಎಲ್ಲವನ್ನೂ ಭಿನ್ನಮತ ಮತ್ತು ಶಕ್ತಿ ಪ್ರದರ್ಶನದ ದೃಷ್ಟಿಯಲ್ಲೇ ನೋಡಿದರೆ ಬೇರೆ ಏನೂ ಕಾಣುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮದೇ ಕಾರ್ಯಸೂಚಿ ಹೊಂದಿರುತ್ತವೆ. ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಚರ್ಚೆ, ಭೇಟಿ ಅತ್ಯಗತ್ಯ. ಇದನ್ನು ವಿಶ್ಲೇಷಿಸುವವರು ನೋಟದಲ್ಲಿ ಪ್ರೌಢತೆ ಬೆಳೆಸಿಕೊಳ್ಳುವುದು ಅಗತ್ಯ,” ಎಂದಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More