ಪ್ರಧಾನಿ ಅಭ್ಯರ್ಥಿ ಕುರಿತ ಚಂದ್ರಬಾಬು ನಾಯ್ಡು ಹೇಳಿಕೆಯ ಮರ್ಮವೇನು?

ಮಾಯಾವತಿ ಅವರು ಕಾಂಗ್ರೆಸ್ ಕುರಿತು ಅಸಮಾಧಾನ ಹೊರಹಾಕುತ್ತಲೇ, ಪ್ರಧಾನಿ ಅಭ್ಯರ್ಥಿಯಾಗಿ ಯಾರ ಹೆಸರನ್ನೂ ಬಿಂಬಿಸುವ ಅಗತ್ಯವಿಲ್ಲ ಎಂದು ನಾಯ್ದು ಪರೋಕ್ಷ ಬಾಣ ಬಿಟ್ಟಿದ್ದಾರೆ. ಆ ಬಾಣ ಕೇವಲ ಮಾಯಾವತಿ ಅವರೆಡೆಗೆ ಗುರಿಯಾಗಿದೆಯೇ ಎಂಬುದನ್ನು ಕಾದುನೋಡಬೇಕಿದೆ

ಮಧ್ಯಪ್ರದೇಶ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಬಿಎಸ್‌ಪಿ ನಾಯಕಿ ಮಾಯಾವತಿ ಬಿಜೆಪಿಯೇತರ ಮೈತ್ರಿಕೂಟದ ಸಾಧ್ಯತೆಗೆ ಮಂಕು ಕವಿಸಿದ ಬೆನ್ನಲ್ಲೇ, ಮತ್ತೊಂದು ಪ್ರಭಾವಿ ಪ್ರಾದೇಶಿಕ ಪಕ್ಷವಾದ ಟಿಡಿಪಿಯ ನಾಯಕ ಚಂದ್ರಬಾಬು ನಾಯ್ದು “ಪ್ರಧಾನಿ ಅಭ್ಯರ್ಥಿ ಘೋಷಣೆಯ ಅಗತ್ಯವಿಲ್ಲದೆಯೂ ಪರ್ಯಾಯ ರಂಗ ತನ್ನಷ್ಟಕ್ಕೆ ತಾನು ರೂಪುಗೊಳ್ಳಲಿದೆ,” ಎನ್ನುವ ಮೂಲಕ ಹೊಸ ಭರವಸೆ ಚಿಗುರಿಸಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಸ್ಥಾನ ಹಂಚಿಕೆಯ ವಿಷಯದಲ್ಲಿ ಮುನಿಸಿಕೊಂಡಿರುವ ಮಾಯಾವತಿ ಅವರು, ಸಣ್ಣಪುಟ್ಟ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ವಿರುದ್ಧ ಹೋರಾಡುವ ಬುದ್ದಿ ಇನ್ನೂ ಕಾಂಗ್ರೆಸ್ಸಿಗೆ ಬಂದಿಲ್ಲ. ಈಗಲೂ ಅದು ಸಣ್ಣಪುಟ್ಟ ಪಕ್ಷಗಳನ್ನು ಮೈತ್ರಿ ಹೆಸರಲ್ಲಿ ಮುಗಿಸುವ ಯೋಚನೆಯಲ್ಲಿದೆ. ಹಾಗಾಗಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಚತ್ತೀಸಗಢ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷದೊಂದಿಗೆ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು.

೨೦೧೯ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ದಿಗ್ವಿಜಯಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪರ್ಯಾಯ ಮಹಾಮೈತ್ರಿಯನ್ನು ಬಲಪಡಿಸಲು ಮತ್ತು ಆ ಮೂಲಕ ಮೈತ್ರಿಕೂಟದ ಶಕ್ತಿಯನ್ನು ಬಿಜೆಪಿಗೆ ತೋರಿಸಲು ಈ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ ಒಂದು ಅವಕಾಶ ಎಂದೇ ಪರಿಗಣಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಆ ರಾಜ್ಯಗಳಲ್ಲಿ ಪ್ರಭಾವ ಹೊಂದಿರುವ ಬಿಎಸ್‌ಪಿ, ಎಸ್ಪಿ ಸೇರಿದಂತೆ ಎನ್ ಡಿ ಎ ಮೈತ್ರಿಕೂಟದಿಂದ ಹೊರಗಿರುವ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ಇರುವ ವಿವಿಧ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವ ಬಗ್ಗೆ ರಾಜಕೀಯ ವಲಯದಲ್ಲಿ ಸಹಜ ಕುತೂಹಲವಿತ್ತು. ಆದರೆ, ಮಾಯಾವತಿ ಅವರ ಇತ್ತೀಚಿನ ಈ ಹೇಳಿಕೆ ಕೇವಲ ಈ ವಿಧಾನಸಭಾ ಚುನಾವಣೆಯ ವಿಷಯದಲ್ಲಿ ಮಾತ್ರವಲ್ಲದೆ, ರಾಷ್ಟ್ರೀಯ ಮಟ್ಟದಲ್ಲಿ ಪರ್ಯಾಯ ಮಹಾಮೈತ್ರಿಯ ಸಾಧ್ಯತೆಯ ಬಗ್ಗೆಯೂ ಸಂಶಯಗಳಿಗೆ ಎಡೆಮಾಡಿದೆ.

ಇದನ್ನೂ ಓದಿ : ಬಿಎಸ್ಪಿ ನಾಯಕಿ ಮಾಯಾವತಿ ನಡೆ, ಮಹೇಶ್‌ ನುಡಿ ರವಾನಿಸುತ್ತಿರುವ ಸಂದೇಶಗಳೇನು?

ಆದರೆ, ಈ ನಡುವೆ, ಮಾಯಾವತಿ ಅವರ ಹೇಳಿಕೆ ಹೊರಬಿದ್ದ ಮಾರನೇ ದಿನವೇ ಆಂಧ್ರಪ್ರದೇಶದಲ್ಲಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು, “ಬಿಜೆಪಿ ಮತ್ತು ಮೋದಿಯವರ ಆಡಳಿತದ ವಿರುದ್ಧ ದೇಶದ ಜನ ರೊಚ್ಚಿಗೆದ್ದಿದ್ದಾರೆ. ಹಾಗಾಗಿ, ಬಿಜೆಪಿಯೇತರ ಮೈತ್ರಿ ಸರ್ಕಾರವನ್ನು ಜನತೆ ಸಹಜವಾಗಿಯೇ ಚುನಾಯಿಸುತ್ತಾರೆ,” ಎಂದಿದ್ದಾರೆ. ಅಲ್ಲದೆ, “ಪ್ರಧಾನಿ ಅಭ್ಯರ್ಥಿ ಘೋಷಣೆಯ ಅಗತ್ಯವಿಲ್ಲ. ಪ್ರಧಾನಿ ಅಭ್ಯರ್ಥಿಯನ್ನು ಬಿಂಬಿಸದೆಯೂ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಿದರ್ಶನಗಳು ಇವೆ. ಹಾಗಾಗಿ, ಒಂದು ವೇಳೆ ಚುನಾವಣೆಗೆ ಮುನ್ನ ಮೈತ್ರಿಪಕ್ಷಗಳ ನಡುವೆ ಒಮ್ಮತದ ಆಯ್ಕೆಯಾದರೆ ಉತ್ತಮ. ಇಲ್ಲದೇ ಹೋದಲ್ಲಿ, ಆ ವಿಷಯ ಚುನಾವಣಾ ಗೆಲುವಿಗೆ ತೊಡಕಾಗದು. ಮೋದಿ ಅವರ ಸುಳ್ಳು ಮತ್ತು ದುರಾಡಳಿತದಿಂದ ರೋಸಿ ಹೋಗಿರುವ ಜನತೆ ಎನ್‌ಡಿಎ ವಿರುದ್ಧದ ಮೈತ್ರಿಗೆ ಕಣ್ಣುಮುಚ್ಚಿಕೊಂಡು ಮತ ಹಾಕುವ ಸ್ಥಿತಿ ಇದೆ,” ಎಂದಿದ್ದಾರೆ.

ನಾಯ್ದು ಅವರ ಈ ಹೇಳಿಕೆ, ಏಕಕಾಲಕ್ಕೆ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರ ಹೊಂದಿದಂತಿದೆ. ಏಕೆಂದರೆ, ಕಾಂಗ್ರೆಸ್‌ ನೇತೃತ್ವದ ಮಹಾಮೈತ್ರಿಯ ಚರ್ಚೆಗಳು ಆರಂಭವಾದಂದಿನಿಂದಲೂ; ಕಳೆದ ಎರಡು ವರ್ಷದಿಂದ, ಪ್ರಮುಖವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಬಿಎಸ್ಪಿ ನಾಯಕಿ ಮಾಯಾವತಿ ಅವರ ಹೆಸರುಗಳು ಪ್ರಧಾನಿ ಅಭ್ಯರ್ಥಿತನಕ್ಕೆ ಕೇಳಿಬರುತ್ತಿದ್ದವು. ಆದರೆ, ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಈಗಲೇ ಯಾರನ್ನೂ ಬಿಂಬಿಸುವುದಿಲ್ಲ. ಆ ವಿಷಯವನ್ನು ಮಹಾಮೈತ್ರಿಯ ತೀರ್ಮಾನಕ್ಕೆ ಬಿಡುತ್ತೇವೆ ಎಂದು ಸ್ವತಃ ರಾಹುಲ್ ಗಾಂಧಿ ಹೇಳುವ ಮೂಲಕ, ತಾವು ವೈಯಕ್ತಿಕವಾಗಿ ಆ ವಿಷಯದಲ್ಲಿ ಹೆಚ್ಚು ಆಸಕ್ತರಾಗಿಲ್ಲ ಎಂಬ ಸಂದೇಶ ನೀಡಿದ್ದರು. ಆ ಬಳಿಕ ಮಾಯಾವತಿ ಮತ್ತು ಮಮತಾ ಬ್ಯಾನರ್ಜಿ ನಡುವೆ ಮಹಾಮೈತ್ರಿಯ ಪ್ರಧಾನಿ ಅಭ್ಯರ್ಥಿ ಉಮೇದುವಾರಿಕೆ ಪೈಪೋಟಿ ಏರ್ಪಟ್ಟಿತ್ತು. ಇಬ್ಬರೂ ತಮ್ಮದೇ ರೀತಿಯಲ್ಲಿ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರಭಾವ ಬಿಂಬಿಸಿಕೊಳ್ಳುವ ತಯಾರಿಯನ್ನೂ ಆರಂಭಿಸಿದ್ದರು.

ಆದರೆ, ಇದೀಗ ಮಾಯಾವತಿ ಅವರು ಕಾಂಗ್ರೆಸ್ ಕುರಿತು ಅಸಮಾಧಾನ ಹೊರಹಾಕುತ್ತಲೇ ನಾಯ್ದು ಅವರ ಹೇಳಿಕೆ ಹೊರಬಿದ್ದಿದೆ. ಆ ಮೂಲಕ ಪ್ರಧಾನಿ ಅಭ್ಯರ್ಥಿ ಉಮೇದುವಾರಿಕೆ ಮಾಯಾವತಿ ಸೇರಿದಂತೆ ಯಾರ ಹೆಸರನ್ನೂ ಬಿಂಬಿಸುವ ಅಗತ್ಯವಿಲ್ಲ ಎಂದು ನಾಯ್ದು ಪರೋಕ್ಷ ಬಾಣ ಬಿಟ್ಟಿದ್ದಾರೆ. ಆ ಬಾಣ ಕೇವಲ ಮಾಯಾವತಿ ಅವರನ್ನು ಮಾತ್ರವಲ್ಲ; ಮಮತಾ ಸೇರಿದಂತೆ ಉಳಿದ ಆಕಾಂಕ್ಷಿಗಳನ್ನೂ ಬದಿಗೆ ತಳ್ಳುವ ಚಾಣಾಕ್ಷ ನಡೆಯೇ ಎಂಬುದನ್ನು ಕಾದುನೋಡಬೇಕಿದೆ. ಈಗಾಗಲೇ ಕರ್ನಾಟಕ ಸಿಎಂ ಕುಮಾರಸ್ವಾಮಿ ಅವರೊಂದಿಗೂ ಒಂದು ಸುತ್ತಿನ ಮಾತುಕತೆ ನಡೆಸಿರುವ ನಾಯ್ದು, ದೇವೇಗೌಡರೊಂದಿಗೂ ಉತ್ತಮ ಒಡನಾಟ ಹೊಂದಿದ್ದಾರೆ. ಆ ಮೂಲಕ ಎನ್‌ಡಿಎ ಮೈತ್ರಿಯಿಂದ ಹೊರಗಿರುವ ದಕ್ಷಿಣ ಭಾರತೀಯ ಪ್ರಾದೇಶಿಕ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ನಡೆಸಿದ್ದಾರೆ.

ಆದಾಗ್ಯೂ, ತಾವು ಪ್ರಧಾನಿ ಹುದ್ದೆ ಆಕಾಂಕ್ಷಿಗಳೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ನಾಯ್ದು, “ನಾನು ಯಾವ ಕಾರಣಕ್ಕೂ ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ. ನಾನು ಆಂಧ್ರಪ್ರದೇಶಕ್ಕೆ ಮಾತ್ರ ಸೀಮಿತವಾಗಿ ಇರುವವನು” ಎನ್ನುವ ಮೂಲಕ ತಮ್ಮ ಆಸಕ್ತಿ ಆ ವಿಷಯದಲ್ಲಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಪರಿಸ್ಥಿತಿಯೇ ಅಗತ್ಯವಾದಲ್ಲಿ ಪ್ರಧಾನಿ ಅಭ್ಯರ್ಥಿಯನ್ನು ಆಯ್ದುಕೊಳ್ಳಲಿದೆ ಎಂಬ ಮಾತನ್ನೂ ಸೇರಿಸಿದ್ದಾರೆ. ಆ ಮೂಲಕ ರಾಜಕೀಯ ಪರಿಸ್ಥಿತಿ, ೧೯೯೬ರರಂತೆ ಮತ್ತೊಮ್ಮೆ ಗೊಂದಲದ ಗೂಡಾದಲ್ಲಿ, ತಾವೂ ಒಂದು ಕೈ ನೋಡುವ ಸೂಚನೆಯನ್ನೂ ನೀಡಿದ್ದಾರೆ.

ಅದೇ ಹೊತ್ತಿಗೆ ಮೋದಿ ಅವರ ಆಡಳಿತದ ವಿರುದ್ದವೂ ವಾಗ್ದಾಳಿ ನಡೆಸಿರುವ ಅವರು, “೪೦ ವರ್ಷಗಳ ರಾಜಕೀಯ ಜೀವನದಲ್ಲಿ ಎಂದೂ ಇಷ್ಟೊಂದು ಕೆಟ್ಟ ಆಡಳಿತವನ್ನು ಕಂಡಿರಲಿಲ್ಲ,” ಎಂದಿದ್ದಾರೆ. ನೋಟು ರದ್ದತಿಯ ಯಡವಟ್ಟು, ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ರಫೇಲ್ ಹಗರಣ, ರೈತರ ಸಂಕಷ್ಟ ಸೇರಿದಂತೆ ಕೇಂದ್ರದ ಸಾಲು ಸಾಲು ವೈಫಲ್ಯಗಳನ್ನೂ ಪಟ್ಟಿಮಾಡಿದ್ದಾರೆ.

ಕಳೆದ ಒಂದೂವರೆ ದಶಕದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದ ಚಂದ್ರಬಾಬು ನಾಯ್ದು ಅವರ ಟಿಡಿಪಿ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಘೋಷಣೆಯ ವಿಷಯದಲ್ಲಿ ಮೋದಿ ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ ಎಂಬ ಕಾರಣದಿಂದ ಇತ್ತೀಚೆಗೆ ಮೈತ್ರಿ ತೊರೆದು ಸರ್ಕಾರದಿಂದ ಹೊರಬಂದಿತ್ತು. ಈ ನಡುವೆ, ನಾಯ್ಡು ಬಿಜೆಪಿ ಸಖ್ಯ ತೊರೆಯುತ್ತಿದ್ದಂತೆ ಅವರ ರಾಜಕೀಯ ವಿರೋಧಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವಧಿಗೆ ಮುನ್ನವೇ ವಿಧಾನಸಭೆ ವಿಸರ್ಜಿಸಿ, ಚುನಾವಣೆಗೆ ಸಜ್ಜಾಗಿದ್ದಾರೆ. ಅಲ್ಲದೆ, ಮೋದಿಯವರನ್ನು ಭೇಟಿ ಮಾಡಿ, ಬಿಜೆಪಿಯೊಂದಿಗೆ ಸಖ್ಯ ಸಾಧಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾಯ್ದು ಅವರ, “ಬಿಜೆಪಿ ಆಡಳಿತದಿಂದ ನಲುಗಿರುವ ದೇಶದ ಜನಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಮಹಾಮೈತ್ರಿ ಸಹಜವಾಗಿ ಮೂಡಿಬರಲಿದೆ. ಅಗತ್ಯವಿದ್ದಲ್ಲಿ ತಾವು ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಅದನ್ನು ಅಪಾಯದಿಂದ ಪಾರು ಮಾಡಲು ಕೈಲಾದ ಪ್ರಯತ್ನ ಮಾಡುವೆ. ಮಹಾಮೈತ್ರಿಗೆ ಪೂರಕವಾಗಿ ವಿವಿಧ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಮಾತನಾಡಿ ಸಹಮತ ಮೂಡಿಸಲು ಎಲ್ಲಾ ಪ್ರಯತ್ನ ಮಾಡುವೆ” ಎಂಬ ಮಾತುಗಳು ಹಲವು ಅರ್ಥಗಳನ್ನು ಹೊಮ್ಮಿಸುತ್ತಿವೆ. ಬರಲಿರುವ ದಿನಗಳಲ್ಲಿ ಖಂಡಿತವಾಗಿಯೂ ಈ ಮಾತುಗಳು ಹೊರಡಿಸಬಹುದಾದ ಕಂಪನಗಳು ಇನ್ನಷ್ಟು ಸ್ಪಷ್ಟವಾಗಲಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More