ಕುಟುಂಬ ರಾಜಕಾರಣ ಮುಂದುವರಿಕೆಗೆ ರಹದಾರಿ ಆಗಲಿದೆಯೇ ಉಪಚುನಾವಣೆ?

ರಾಜ್ಯದ 3 ಲೋಕಸಭಾ ಹಾಗೂ 2 ವಿಧಾನಸಭಾ ಕ್ಷೇತ್ರಗಳಿಗೆ ನ.೩ರಂದು ಉಪಚುನಾವಣೆ ನಡೆಯಲಿದೆ. ಕುಟುಂಬ ಸದಸ್ಯರಿಂದ ತೆರವಾದ ಸ್ಥಾನಗಳಿಗೆ ಪತ್ನಿ, ಪುತ್ರ, ಸಂಬಂಧಿಗಳನ್ನು ಕಣಕ್ಕಿಳಿಸುವ ಪ್ರಕ್ರಿಯೆ ಜೋರಾಗಿದ್ದು, ಕುಟುಂಬ ರಾಜಕಾರಣದ ಹಿಡಿತ ಉಳಿಸಿಕೊಳ್ಳುವ ಕಸರತ್ತಾಗಿ ತೋರಿದೆ

ಏಳು ತಿಂಗಳ ಅಲ್ಪ ಕಾಲಾವಧಿ ಹೊಂದಿರುವ ಮಂಡ್ಯ (ಜೆಡಿಎಸ್‌ನ ಸಿ ಎಸ್‌ ಪುಟ್ಟರಾಜು), ಶಿವಮೊಗ್ಗ (ಬಿ ಎಸ್‌ ಯಡಿಯೂರಪ್ಪ) ಮತ್ತು ಬಳ್ಳಾರಿ (ಬಿ ಶ್ರೀರಾಮಲು) ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿರುವುದರಿಂದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ನಾಯಕರು ಕಸಿವಿಸಿಗೊಂಡಿದ್ದಾರೆ. ೨೦೧೯ರ ಹೈವೋಲ್ಟೇಜ್ ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸುವಲ್ಲಿ ಮಗ್ನರಾಗಿರುವ ನಾಯಕರುಗಳು ಚುನಾವಣಾ ಆಯೋಗದ ಅನಿರೀಕ್ಷಿತ ನಿರ್ಧಾರದಿಂದ ಒತ್ತಡಕ್ಕೆ ಸಿಲುಕಿದ್ದಾರೆ. ೧೬ನೇ ಲೋಕಸಭೆಯ ಅವಧಿ ಬಹುತೇಕ ಏಪ್ರಿಲ್‌ನಲ್ಲಿ ಪೂರ್ಣಗೊಳ್ಳಲಿದೆ. ಇಂಥ ಸಂದರ್ಭದಲ್ಲಿ ಉಪಚುನಾವಣೆಗೆ ಅಪಾರ ಪ್ರಮಾಣದ ಶ್ರಮ, ಹಣ ಹಾಗೂ ಸಮಯ ವೆಚ್ಚ ಮಾಡಬೇಕಿರುವುದು ಕಾಂಗ್ರೆಸ್, ಜೆಡಿಎಸ್‌ ಮತ್ತು ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆ. ಇದರ ನಡುವೆ, ಉಪಚುನಾವಣೆಯಲ್ಲಿ ಕುಟುಂಬ ರಾಜಕಾರಣದ ಹಿಡಿತವನ್ನು ಉಳಿಸಿಕೊಳ್ಳಬೇಕಿರುವುದರಿಂದ ಪ್ರಮುಖ ನಾಯಕರಿಗೆ ಬೇಡದ ಅತಿಥಿಯೇ ಆದರೂ ಸತ್ಕಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲವಿದ್ದರಿಂದ ಚುನಾವಣೆ ಪ್ರಕ್ರಿಯೆ ನಡೆಸಲು ಕಷ್ಟವಾಗುತ್ತದೆ ಎಂಬ ಕಾರಣದಿಂದ ಇದುವರೆಗೆ ಆಯೋಗವು ಚುನಾವಣೆ ಘೋಷಣೆ ಮಾಡಿರಲಿಲ್ಲ ಎನ್ನಲಾಗಿದೆ. ಉಪಚುನಾವಣೆಯಲ್ಲಿ ಆಯ್ಕೆಯಾಗುವ ಸಂಸದರಿಗೆ ಹೆಚ್ಚಿನ ಕಾಲಾವಕಾಶ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವುದು ನಷ್ಟದ ಬಾಬತ್ತು ಎಂಬ ವಾದ ಕೇಳಿಬಂದಿದ್ದು, ಪಕ್ಷಾತೀತವಾಗಿ ಹಲವು ನಾಯಕರು ಆಯೋಗದ ನಿರ್ಧಾರವನ್ನು ಟೀಕಿಸಿದ್ದಾರೆ. ಕೆಲವರು ಚುನಾವಣೆಯಿಂದ ಹಿಂದೆ ಸರಿಯುವಂತೆ ತಮ್ಮ ನಾಯಕರಿಗೆ ಸಲಹೆ ನೀಡಿದ್ದಾರೆ. ಯಾವುದೇ ಕ್ಷೇತ್ರ ತೆರವಾದಲ್ಲಿ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕು ಎಂಬ ನಿಯಮವಿದೆ. ಇತ್ತೀಚಿನ ದಿನಗಳಲ್ಲಿ ಅನುಮಾನಾಸ್ಪದ ನಡೆಗಳಿಂದ ಟೀಕೆಗೆ ಗುರಿಯಾಗಿರುವ ಚುನಾವಣಾ ಆಯೋಗವು, ಒಂದೊಮ್ಮೆ ನಿಯಮದಂತೆ ಆರು ತಿಂಗಳೊಳಗೆ ಚುನಾವಣೆ ನಡೆಸದಿದ್ದರೆ ರಾಜಕಾರಣಿಗಳಿಂದ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಅರಿತು ಕಾನೂನಿನಂತೆ ಕಾರ್ಯನಿರ್ವಹಿಸುತ್ತಿರುವ ಸಂದೇಶ ರವಾನಿಸುವ ಉದ್ದೇಶದಿಂದ ಉಪಚುನಾವಣೆ ದಿನಾಂಕ ಪ್ರಕಟಿಸುವ ಮೂಲಕ ಮಧ್ಯಮ ಮಾರ್ಗ ತುಳಿದಿದೆ. ಇತ್ತ, ಚುನಾವಣಾ ಮುಹೂರ್ತ ನಿಗದಿಯಾಗಿರುವುದರಿಂದ ಪ್ರತಿಷ್ಠೆಯ ಕಣವನ್ನು ತೊರೆಯುವುದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದರಿತಿರುವ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಒಲ್ಲದ ಮನಸ್ಸಿನಿಂದಲೇ ತಯಾರಿ ಆರಂಭಿಸಿದ್ದಾರೆ.

ಇದರ ಮಧ್ಯೆ, ಉಪಚುನಾವಣೆ ಪ್ರಕಟವಾಗುತ್ತಿದ್ದಂತೆ ಹಲವು ರೀತಿಯ ಲೆಕ್ಕಾಚಾರಗಳು ಆರಂಭವಾಗಿವೆ. ಸ್ಥಳೀಯ ರಾಜಕಾರಣದ ಮೇಲೆ ಹಿಡಿತ ಸಾಧಿಸುವುದು, ಪಕ್ಷದಲ್ಲಿ ಪ್ರಭಾವ ವೃದ್ಧಿಸಿಕೊಳ್ಳುವುದು, ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್‌ ಖಾತ್ರಿಪಡಿಸಿಕೊಳ್ಳುವುದು‌ ಹಾಗೂ ಕುಟುಂಬದ ಹಿತಾಸಕ್ತಿಗಳನ್ನು ಕಾಯುವ ದೃಷ್ಟಿಯಿಂದ ಉಪಚುನಾವಣೆ ಎದುರಿಸುವುದು ಮೂರೂ ಪಕ್ಷಗಳ ಪ್ರಮುಖ ನಾಯಕರಿಗೆ ಅನಿವಾರ್ಯವಾಗಿದೆ. ಇದೆಲ್ಲಕ್ಕೂ ಮಿಗಿಲಾಗಿ, ೨೦೧೯ರ ಲೋಕಸಭಾ ಚುನಾವಣೆಗೂ ಮುನ್ನ ಉಪಚುನಾವಣೆಯ ಫಲಿತಾಂಶವು ಸಾಕಷ್ಟು ಪ್ರಭಾವ ಉಂಟು ಮಾಡಬಲ್ಲದು. ಈ ದೃಷ್ಟಿಯಿಂದ ಉಪಚುನಾವಣೆಗಳನ್ನು ಗೆಲ್ಲುವುದು ಪಕ್ಷಾತೀತವಾಗಿ ಎಲ್ಲಾ ನಾಯಕರುಗಳಿಗೆ ಪ್ರತಿಷ್ಠೆಯಾಗಿದೆ.

ಈ ಎಲ್ಲ ಲೆಕ್ಕಾಚಾರಗಳ ನಡುವೆ ಮಂಡ್ಯ, ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿನ ವಸ್ತುಸ್ಥಿತಿ ವಿಭಿನ್ನವಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮುಂದುವರಿಸಲು ನಿರ್ಧರಿಸಿರುವುದರಿಂದ ಮೈತ್ರಿ ಅಭ್ಯರ್ಥಿಗಳ ಪಾಲಿಗೆ ಸಾಕಷ್ಟು ಹಣ ಮತ್ತು ಸಮಯ ಉಳಿಯಲಿದೆ. ಅದರೆ, ಬಿಜೆಪಿ ಸ್ಥಿತಿ ಭಿನ್ನವಾಗಿದೆ. ಮೂರು ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿಯೇ ಗೆದ್ದಿದ್ದರಿಂದ ಸಹಜವಾಗಿ ಅಲ್ಲಿ ಜೆಡಿಎಸ್‌ ಅಭ್ಯರ್ಥಿ ಅಖಾಡಕ್ಕಿಳಿಯುವ ಸಾಧ್ಯತೆ ಇದೆ. ಆದರೆ, ಮಂಡ್ಯದಲ್ಲಿ ಜೆಡಿಎಸ್‌ಗೆ ಸ್ಪರ್ಧೆ ಇರುವುದು ಕಾಂಗ್ರೆಸ್‌ನಿಂದಲೇ ಹೊರತು ಬಿಜೆಪಿಯಿಂದಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್‌ನ ಪುಟ್ಟರಾಜು ಶೇ.೪೩.೯೫, ಕಾಂಗ್ರೆಸ್‌ನ ರಮ್ಯಾ ಶೇ.೪೩.೪೯, ಬಿಜೆಪಿ ಅಭ್ಯರ್ಥಿ ಬಿ ಶಿವಲಿಂಗಯ್ಯ ಶೇ.೭.೨೯ ಮತ ಪಡೆದಿದ್ದರು. ಶೇ.೦.೪೬ ಮತಗಳ ಅಂತರದಿಂದ ರಮ್ಯಾ ಪರಾಭವಗೊಂಡಿದ್ದರು. ಈಗ ಕಾಂಗ್ರೆಸ್‌ ಕಾರ್ಯಕರ್ತರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪುತ್ತಿಲ್ಲ ಎನ್ನಲಾಗಿದೆ. ಇದನ್ನು ಕಾಂಗ್ರೆಸ್‌ ನಾಯಕರು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಉಳಿದಂತೆ ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಾರುಪತ್ಯ ಸಾಧಿಸಿದೆ. ಶಿವಮೊಗ್ಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ ಅಜಗಜಾಂತರವಿತ್ತು. ಬಳ್ಳಾರಿಯಲ್ಲಿ ಕಾಂಗ್ರೆಸ್‌ಗಿಂತ ಶೇ.೧೦ಕ್ಕೂ ಹೆಚ್ಚು ಮತ ಪಡೆಯುವ ಮೂಲಕ ಶ್ರೀರಾಮುಲು ಗೆದ್ದುಬೀಗಿದ್ದರು. ಈ ಎರಡೂ ಕ್ಷೇತ್ರಗಳನ್ನು ಬಿಜೆಪಿಯಿಂದ ಕಸಿಯಲು ಕಾಂಗ್ರೆಸ್‌-ಜೆಡಿಎಸ್‌ ಭಾರಿ ಪ್ರಯಾಸಪಡಬೇಕಿದೆ. ಉಪಚುನಾವಣೆಯ ಫಲಿತಾಂಶವು ಲೋಕಸಭೆ ಚುನಾವಣೆಗೆ ದಿಕ್ಸೂಚಿಯಲ್ಲದಿದ್ದರೂ ಮೈತ್ರಿ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಉಪಚುನಾವಣೆಗಳನ್ನು ಎದುರಿಸುತ್ತಿವೆ. ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂಬ ಸಂದೇಶ ರವಾನಿಸುವ ದೃಷ್ಟಿಯಿಂದ ಇಲ್ಲಿನ ಗೆಲುವು ದೋಸ್ತಿ ಸರ್ಕಾರಕ್ಕೆ ಅನಿವಾರ್ಯವಾಗಿದೆ. ವಿಧಾನಸಭಾ ಚುನಾವಣೆಯ ನಂತರ ಸಾಕಷ್ಟು ಹಿನ್ನಡೆಗಳನ್ನು ಅನುಭವಿಸಿರುವ ಬಿಜೆಪಿಯು ರಾಷ್ಟ್ರಮಟ್ಟದಲ್ಲಿ ನಡೆದ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಿರುವುದು ಕಡಿಮೆ. ೨೦೧೪ರ ನಂತರ ದೇಶದ ವಿವಿಧೆಡೆ ನಡೆದ ಲೋಕಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಕೇವಲ ೫ ಸ್ಥಾನಗಳನ್ನು ಮಾತ್ರ ಗೆದ್ದಿದೆ. ದುರ್ಬಲ ಆರ್ಥಿಕ ನೀತಿಗಳಿಂದ ಈಚೆಗೆ ಕಳೆಗುಂದಿರುವ ಕೇಂದ್ರ ಸರ್ಕಾರವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ೨೦೧೪ರಲ್ಲಿ ಮೋದಿ ಅಲೆಯ ಮೇಲೆ ಭಾರಿ ಅಂತರದ ಗೆಲುವು ದಾಖಲಿಸಿದ್ದ ಬಹುತೇಕ ಬಿಜೆಪಿ ಅಭ್ಯರ್ಥಿಗಳಿಗೆ ಇನ್ನು ಮುಂದೆ ಮೋದಿಯವರ ಹೆಸರು ಗೆಲುವಿನ ದಡ ಸೇರಿಸುವ ಸಾಧ್ಯತೆ ಕ್ಷೀಣ ಎಂಬ ಅರಿವಿದೆ. ಸ್ಥಳೀಯ ರಾಜಕೀಯ, ಕುಟುಂಬದ ಹಿನ್ನೆಲೆ ಹಾಗೂ ಹಣ ಗೆಲುವು-ಸೋಲುಗಳನ್ನು ನಿರ್ಧರಿಸಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಇನ್ನು, ಎರಡು ವಿಧಾನಸಭಾ ಕ್ಷೇತ್ರ ಸೇರಿದಂತೆ ಐದು ಉಪಚುನಾವಣೆಗೆ ವಿವಿಧ ಪಕ್ಷಗಳ ನಾಯಕರು ತಮ್ಮ ಕುಟುಂಬದವರನ್ನೇ ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ. ಟಿಕೆಟ್‌ಗಾಗಿ ಆಕಾಂಕ್ಷಿಗಳ ನಡುವಿನ ಕಲಹ ಕುತೂಹಲ ಮೂಡಿಸಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ನಾಯಕ ಹಾಗೂ ಸಣ್ಣ ನೀರಾವರಿ ಸಚಿವ ಪುಟ್ಟರಾಜು ಅವರಿಂದ ತೆರವಾದ ಸ್ಥಾನಕ್ಕೆ ಭಾರತೀಯ ಕಂದಾಯ ಸೇವೆ (ಐಆರ್‌ಎಸ್‌) ತರಬೇತಿ ಪಡೆದು ರಾಜಕೀಯದತ್ತ ಮುಖಮಾಡಿರುವ ಲಕ್ಷ್ಮಿ ಅಶ್ವಿನ್‌ ಕುಮಾರ್‌, ಹಿರಿಯ ನಾಯಕರಾದ ಎಲ್‌ ಆರ್ ಶಿವರಾಮೇಗೌಡ, ಜಿ ಬಿ ಶಿವಕುಮಾರ್‌, ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಪುತ್ರ ನಿಖಿಲ್, ಲೋಕೋಪಯೋಗಿ ಸಚಿವ ಎಚ್‌ ಡಿ ರೇವಣ್ಣ ಪುತ್ರ ಎಚ್‌ ಆರ್‌ ಪ್ರಜ್ವಲ್‌ ಹೆಸರುಗಳು ಮುಂಚೂಣಿಯಲ್ಲಿವೆ. ಜೆಡಿಎಸ್‌ ವರಿಷ್ಠರು ಕುಟುಂಬದ ಸದಸ್ಯರಿಗೆ ಮಣೆ ಹಾಕುವರೇ ಅಥವಾ ಪಕ್ಷದ ಇತರ ನಾಯಕರಿಗೆ ಅವಕಾಶ ಕಲ್ಪಿಸುವರೇ ಎಂಬುದು ಗುಟ್ಟಾಗಿಯೇ ಉಳಿದಿದೆ. ಬಿಜೆಪಿ ಸಮರ್ಥ ಸ್ಪರ್ಧಿಯನ್ನು ಕಣಕ್ಕಿಳಿಸುವ ಮೂಲಕ ಪ್ರಬಲ ಪೈಪೋಟಿ ನೀಡಲು ತವಕಿಸುತ್ತಿದೆ. ಇದಕ್ಕಾಗಿ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರಿ ನಾಗಮಂಗಲದಲ್ಲಿ ಪರಾಭವಗೊಂಡಿರುವ ಚಲುವರಾಯ ಸ್ವಾಮಿ ಅವರನ್ನು ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದೆ ಎನ್ನಲಾಗಿದೆ. ಆದರೆ, ಇದನ್ನು ನಿರಾಕರಿಸಿರುವ ಚಲುವರಾಯ ಸ್ವಾಮಿ, “ಯಾವುದೇ ಕಾರಣಕ್ಕೂ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಜೆಪಿ ಸೇರುವುದು ದೂರದ ಮಾತು,” ಎಂದಿದ್ದಾರೆ. ಇದರ ಜೊತೆಗೆ, “ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾರ್ಯಕರ್ತರು ಒಪ್ಪುತ್ತಿಲ್ಲ. ಇದನ್ನು ಪಕ್ಷದ ವರಿಷ್ಠರಿಗೆ ತಿಳಿಸಲಾಗಿದೆ. ಯಾವ ರೀತಿಯ ತೀರ್ಮಾನ ಹೊರಬೀಳಲಿದೆ ಎಂಬುದುನ್ನು ಕಾಯ್ದುನೋಡಬೇಕಿದೆ,” ಎಂದು ‘ದಿ ಸ್ಟೇಟ್‌’ಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಲೋಕಸಭಾ ಉಪಚುನಾವಣೆ; ಬಿಜೆಪಿ ಜೊತೆಗೆ ಕಾಂಗ್ರೆಸ್‌-ಜೆಡಿಎಸ್‌ಗೂ ಅಗ್ನಿಪರೀಕ್ಷೆ

ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಬಿ ಎಸ್‌ ಯಡಿಯೂರಪ್ಪ ಅವರ ಹಿರಿಯ ಪುತ್ರ ಬಿ ವೈ ರಾಘವೇಂದ್ರ ಕಣಕ್ಕಿಳಿಯಲಿದ್ದಾರೆ. ಆದರೆ, ಈಚೆಗೆ ಅಭ್ಯರ್ಥಿ ಸಂಬಂಧ ಪ್ರತಿಕ್ರಿಯಿಸಿದ್ದ ಬಿಜೆಪಿಯ ಮುಖಂಡ ಕೆ ಎಸ್‌ ಈಶ್ವರಪ್ಪ ಅವರು, “ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಹಲವು ಆಕಾಂಕ್ಷಿಗಳಿದ್ದಾರೆ,” ಎಂದಿದ್ದರು. ಇದನ್ನು ಅರಿತು, ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಎಸ್‌ವೈ ಪುತ್ರನ ಹೆಸರು ಘೋಷಿಸುವ ಮೂಲಕ ಈಶ್ವರಪ್ಪಗೆ ಟಾಂಗ್‌ ನೀಡಿದ್ದಾರೆ. ಇದಕ್ಕೂ ಮುನ್ನ, ಸಂಭಾವ್ಯ ಅಭ್ಯರ್ಥಿಯಾದ ಆಯನೂರು ಮಂಜುನಾಥ್‌ ಅವರನ್ನು ವಿಧಾನ ಪರಿಷತ್‌ಗೆ ಆರಿಸಿಕೊಳ್ಳುವ ಮೂಲಕ ಪುತ್ರನ ಹಾದಿಯನ್ನು ಯಡಿಯೂರಪ್ಪ ಸುಗಮಗೊಳಿಸಿಕೊಂಡಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ಕಳೆದ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ನಂತರ ಮೂರನೇ ಸ್ಥಾನ ಪಡೆದಿದ್ದ ಜೆಡಿಎಸ್, ಕ್ಷೇತ್ರವನ್ನು ತನಗೆ ಬಿಟ್ಟುಕೊಂಡುವಂತೆ ಆಗ್ರಹಿಸಬಹುದು ಎನ್ನಲಾಗುತ್ತಿದೆ. ಈಡಿಗ ಸಮುದಾಯದ ಮತಗಳು ನಿರ್ಣಾಯಕ ಪಾತ್ರವಹಿಸುವ ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿಕೂಟದಿಂದ ಮಾಜಿ ಶಾಸಕರಾದ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ, ಬೇಳೂರು ಗೋಪಾಲಕೃಷ್ಣ, ಮಂಜುನಾಥ ಭಂಡಾರಿ, ಜೆಡಿಎಸ್‌ನ ಮಧು ಬಂಗಾರಪ್ಪ, ಗೀತಾ ಶಿವರಾಜ್‌ ಕುಮಾರ್ ಅವರ ಹೆಸರುಗಳು ಪ್ರಸ್ತಾಪವಾಗಿವೆ. ನಾಯಕ ಸಮುದಾಯದ ಪ್ರಭಾವವಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಶ್ರೀರಾಮುಲು ಅವರ ಸಂಬಂಧಿಗಳಾದ ಸುರೇಶ್ ಬಾಬು, ಸಣ್ಣ ಫಕೀರಪ್ಪ, ಜೆ ಶಾಂತಾ ಹೆಸರು ಪ್ರಸ್ತಾಪವಾಗಿವೆ. ಕಾಂಗ್ರೆಸ್‌ನಿಂದ ಶಾಸಕ ಬಿ ನಾಗೇಂದ್ರ ಸಹೋದರ ಪ್ರಸಾದ್‌ ಹೆಸರು ಚಾಲ್ತಿಯಲ್ಲಿದೆ. ಜೆಡಿಎಸ್‌ಗೆ ನೆಲೆಯೇ ಇಲ್ಲದಿರುವುದರಿಂದ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.

ಎಚ್‌ ಡಿ ಕುಮಾರಸ್ವಾಮಿ ಅವರ ರಾಜಿನಾಮೆಯಿಂದ ತರವಾದ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅವರ ಪತ್ನಿ ಅನಿತಾ ಸ್ಪರ್ಧೆಯನ್ನು ಅಧಿಕೃತವಾಗಿ ಘೋಷಿಸುವುದಷ್ಟೇ ಬಾಕಿ ಇದೆ. ಈಗಾಗಲೇ ಅನಿತಾ ಅವರು ಪ್ರಚಾರ ಆರಂಭಿಸಿದ್ದಾರೆ. ರಾಮನಗರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸ್ಪರ್ಧೆ ಇದ್ದು, ಬಿಜೆಪಿ ಸ್ಪರ್ಧೆ ನೆಪಮಾತ್ರ ಎನ್ನವಂತಿದೆ. ಆದರೆ, ಮೈತ್ರಿಕೂಟವು ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಿದರೆ ಸ್ಪರ್ಧಾಕಣ ಏಕಮುಖವಾಗಿರಲಿದೆ. ಕಾಂಗ್ರೆಸ್‌ ಶಾಸಕ ಸಿದ್ದು ನ್ಯಾಮಗೌಡ ನಿಧನದಿಂದ ತೆರವಾದ ಜಮಖಂಡಿ ಕ್ಷೇತ್ರದಲ್ಲಿ ಅವರ ಪುತ್ರ ಆನಂದ್‌ ಸ್ಪರ್ಧೆ ಖಚಿತವಾಗಿದೆ. ಜಮಖಂಡಿಯಲ್ಲಿ ಜೆಡಿಎಸ್‌ಗೆ ಅಸ್ತಿತ್ವ ಇಲ್ಲದಿರುವುದರಿಂದ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಏರ್ಪಡಲಿದೆ ಎನ್ನಲಾಗುತ್ತಿದೆ. 'ಬ್ಯಾರೇಜ್‌ ಸಿದ್ದು' ಎಂದು ಹೆಸರಾದ ನ್ಯಾಮಗೌಡರಿಗೆ ಕ್ಷೇತ್ರದಲ್ಲಿ ವಿಶೇಷವಾದ ಹೆಸರಿದ್ದು, ಅನುಕಂಪದ ಅಲೆ ಆನಂದ್ ಗೆಲುವಿಗೆ ಪೂರಕವಾಗಬಹುದು ಎಂದು ಕಾಂಗ್ರೆಸ್‌ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆನಂದ್ ಅವರ ವಿರುದ್ಧ ಶ್ರೀಕಾಂತ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಬೀಳಗಿ ಶಾಸಕರಾಗಿರುವ ಮುರುಗೇಶ್‌ ನಿರಾಣಿ ಅವರು ಸಹೋದರ ಸಂಗಮೇಶ್‌ ನಿರಾಣಿ ಅವರನ್ನು ಜಮಖಂಡಿಯಿಂದ ಕಣಕ್ಕಿಳಿಸಲು ನಿರ್ಧರಿಸಿದ್ದರು. ಆದರೆ, ಇದಕ್ಕೆ ಬಿಜೆಪಿ ವರಿಷ್ಠರು ಅಪಸ್ವರ ತೆಗೆದಿರುವುದರಿಂದ ಸ್ವಪಕ್ಷದ ಅಭ್ಯರ್ಥಿಗೆ ಹಿನ್ನಡೆ ಉಂಟು ಮಾಡಲು ನಿರಾಣಿ ಸಹೋದರರು ಪ್ರಯತ್ನಿಸಿದರೆ ಅಚ್ಚರಿಪಡಬೇಕಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.

ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟಿರುವ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟವು ಉಪಚುನಾವಣೆಗಳಲ್ಲಿ ಕಮಲ ಪಾಳೆಯಕ್ಕೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಉಭಯ ಪಕ್ಷಗಳು ಒಂದಾಗುವುದರಿಂದ ಎಲ್ಲ ಮತಗಳು ಕಾಂಗ್ರೆಸ್‌ ಅಥವಾ ಜೆಡಿಎಸ್‌ಗೆ ವರ್ಗಾವಣೆಯಾಗುತ್ತವೆ ಎನ್ನಲಾಗದು. ಮೈತ್ರಿಕೂಟದಲ್ಲಿನ ಭಿನ್ನಮತವು ಬಿಜೆಪಿ ವರದಾನ ಆಗಲೂಬಹುದು ಎಂಬ ಆಸೆಯನ್ನೂ ಬಿಜೆಪಿ ಹೊಂದಿದೆ. ಅಕ್ಟೋಬರ್ ೬ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ನವೆಂಬರ್ ೩ರಂದು ಉಪಚುನಾವಣೆ ನಡೆಯಲಿದೆ. ನವೆಂಬರ್ ೬ರಂದು ಫಲಿತಾಂಶ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ಚುರುಕು ಪಡೆಯಲಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More