ಚಾಣಕ್ಯಪುರಿ | ಮೂರೂ ಪಕ್ಷಗಳಲ್ಲಿ ಬೆಂಗಳೂರು ಉತ್ತರಕ್ಕಾಗಿ ಭಾರಿ ಬೇಡಿಕೆ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹಲವು ರೀತಿಯ ಲೆಕ್ಕಾಚಾರ ಕೇಳಿಬರುತ್ತಿವೆ. ಅದರಲ್ಲೂ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್‌ನಿಂದ ಕೃಷ್ಣಬೈರೇಗೌಡ, ರಮ್ಯಾ; ಜೆಡಿಎಸ್‌ನಿಂದ ಪ್ರಜ್ವಲ್ ರೇವಣ್ಣ ಹೆಸರು ಪ್ರಸ್ತಾಪವಾಗಿವೆ. ಬಿಜೆಪಿಯಿಂದ ಸ್ವತಃ ಸದಾನಂದಗೌಡರೇ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಗಿದ್ದೇ ತಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಭಾರೀ ಬೇಡಿಕೆ ಬಂದಿದೆ. ಈ ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಮುಸ್ಲಿಂ ಮತಗಳು ಹೆಚ್ಚಾಗಿರುವುದರಿಂದ ಗೆಲುವು ಸುಲಭ ಎಂಬುದು ಬೇಡಿಕೆ ಹಿಂದಿನ‌ ಗುಟ್ಟು. ಒಂದು ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಈ ಕ್ಷೇತ್ರ ಪಡೆಯಲು ಪ್ರಯತ್ನಿಸುತ್ತಿದ್ದರೆ ಇನ್ನೊಂದೆಡೆ ಎರಡೂ‌ ಪಕ್ಷಗಳ ಒಳಗೆ ಹುರಿಯಾಳಾಗಲು ಪೈಪೋಟಿ ಆರಂಭವಾಗಿದೆ. ಜೆಡಿಎಸ್‌ನಲ್ಲಿ ಸ್ಥಳೀಯರ ಜೊತೆ ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ರೇಸಿನಲ್ಲಿದ್ದಾರೆ. ಕಾಂಗ್ರೆಸಿನಲ್ಲಿ ಮಂಡ್ಯದ ಮಾಜಿ ಸಂಸದೆ ರಮ್ಯಾ ಚಿತ್ತ ಈಗ 'ಉತ್ತರ'ದತ್ತ ಎನ್ನಲಾಗಿದೆ. ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗುವುದರಿಂದ ಬೇರೆ ಕ್ಷೇತ್ರ ಹುಡುಕಿಕೊಳ್ಳುವುದು ಅವರಿಗೆ ಅನಿವಾರ್ಯವೂ ಆಗಿದೆ. ಬೆಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳಲ್ಲಿ ಮಾತ್ರ ಅವಕಾಶಗಳಿದ್ದು, ಬೆಂಗಳೂರು ಉತ್ತರ ಸುರಕ್ಷಿತ ಕ್ಷೇತ್ರ ಎನಿಸಿದೆಯಂತೆ.

ಇನ್ನೊಂದೆಡೆ ಮಂತ್ರಿ ಸ್ಥಾನ‌ ಸಿಕ್ಕಿದ್ದರೂ, ಎರಡೆರಡು ಪ್ರಮುಖ ಖಾತೆಗಳು ದೊರೆತಿದ್ದರೂ ಕೃಷ್ಣಬೈರೇಗೌಡ ಅವರಿಗೆ ಈಗ ರಾಜ್ಯ ರಾಜಕಾರಣ ಬೇಡವಾಗಿದೆಯಂತೆ. ಲೋಕಸಭೆ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಆಲೋಚನೆಯಲ್ಲಿದ್ದಾರಂತೆ.‌ 'ಬ್ಯಾಟರಾಯನಪುರದಿಂದ ದೆಹಲಿಗೆ ಜಿಗಿದರೆ ತಾನು ಕೂಡ ರಾಹುಲ್ ಗಾಂಧಿ‌ ಜೊತೆ ಗುರುತಿಸಿಕೊಳ್ಳಬಹುದು, ಜ್ಯೋತಿರಾಧಿತ್ಯ ಸಿಂಧ್ಯ ಮತ್ತು ಸಚಿನ್ ಪೈಲೆಟ್ ರೀತಿ ಆಗಬಹುದು.‌ ಕೇಂದ್ರದಲ್ಲೇ ಮಂತ್ರಿ ಆಗಬಹುದು. ಮುಂದೊಂದು ದಿನ ಅಲ್ಲಿಂದಲೇ ಕೆಪಿಸಿಸಿ ಅಧ್ಯಕ್ಷನಾಗಿ ವಾಪಸ್ಸು ಬರಬಹುದು. ಮುಖ್ಯಮಂತ್ರಿ ಆಗುವ ಹಾದಿ ಕೂಡ ಸುಲಭವಾಗಲಿದೆ' ಎಂಬ ದೂರಾಲೋಚನೆಗಳಿವೆಯಂತೆ.

ರಾಜ್ಯ ಕಾಂಗ್ರೆಸ್ ಯಂಗ್ ಬ್ರಿಗೇಡ್ ನಾಯಕ ಕೃಷ್ಣ ಬೈರೇ ಗೌಡ

ರಾಜ್ಯ ಕಾಂಗ್ರೆಸಿನಲ್ಲಿ ಸ್ವಲ್ಪ ಹಿಂದೆ ಮೂಲ ಮತ್ತು ವಲಸಿಗ ಎಂಬ ಫ್ಯಾಕ್ಟರ್‌ಗಳಿದ್ದವು. ಈಗ ಹಿರಿಯರು ಮತ್ತು ಕಿರಿಯರು ಎಂಬುದಾಗಿ ಬದಲಾಗಿವೆ. ಆ ಪೈಕಿ ಹಿರಿಯರದು 'ಎತ್ತು ಏರಿಗೆ ಎಳೆದರೆ ಎಮ್ಮೆ ನೀರಿಗೆ ಎಳೀತು' ಎನ್ನುವಂತೆ. ಕಿರಿಯರು ಭಿನ್ನರು.‌ 'ಭಿನ್ನ'ರು ಎಂದರೆ ಬಂಡೆದ್ದಿದ್ದಾರೆ ಎಂದರ್ಥವಲ್ಲ. ಅವರು ಅವರದೇ ಒಂದು ತಂಡ ಮಾಡಿಕೊಂಡು ಒಬ್ಬರಿಗೊಬ್ಬರು ನೆರವಾಗುತ್ತಾ ಭವಿಷ್ಯ ಅರಸುತ್ತಿದ್ದಾರೆ. ಆ ತಂಡದ ನಾಯಕ ಕೃಷ್ಣಬೈರೇಗೌಡ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಉಪನಾಯಕ ಎನ್ನಬಹುದು.‌‌ ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀನಿವಾಸ್ ಮಾನೆ ಮತ್ತು ಹಾಲಿ ಸದಸ್ಯ ರಿಜ್ವಾನ್ ಅರ್ಷದ್ ಜೊತೆಗಾರರು. ಈ ಪೈಕಿ ದಿನೇಶ್ ಗುಂಡೂ ರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷಗಾದಿ ಕೊಡಿಸಲು ಕೃಷ್ಣ ಬೈರೇ ಗೌಡ ಬಹಳಷ್ಟು ಭಾರಿ ದೆಹಲಿ ದಂಡಯಾತ್ರೆ ಮಾಡಿದ್ದರು. ಜೋಡಿ ಎತ್ತುಗಳಂತೆ ಅವರೊಂದಿಗೆ ದಿನೇಶ್ ಕೂಡ ಕಾಣಿಸಿಕೊಂಡಿದ್ದರು. ಕಡೆ ಗಳಿಗೆಯಲ್ಲಿ ಸಿದ್ದರಾಮಯ್ಯ ಅವರ ಕೃಪೆಯೂ ದೊರೆತದ್ದರಿಂದ ಕೃಷ್ಣ ಬೈರೇ ಗೌಡ ಮತ್ತು ದಿನೇಶ್ ಗುಂಡೂ ರಾವ್ ಅವರ ದೆಹಲಿ ದಂಡಯಾತ್ರೆ ದಂಡವಾಗಲಿಲ್ಲ. ಈಗ ಸ್ವತಃ ಕೃಷ್ಣ ಬೈರೇ ಗೌಡರು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಗಾಳ ಹಾಕಿದ್ದಾರೆ. ಜೊತೆಗೆ ಮಿತ್ರರಾದ ಶ್ರೀನಿವಾಸ್ ಮಾನೆಗೆ ಹಾವೇರಿ ಕ್ಷೇತ್ರ ಮತ್ತು ರಿಜ್ವಾನ್ ಅರ್ಷದ್‌ಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೂರು ಕ್ಷೇತ್ರಗಳಲ್ಲೂ ಪೈಪೋಟಿ ಜೋರಾಗಿರುವುದರಿಂದ ಈಗಿನಿಂದಲೇ ಲಾಬಿ ಆರಂಭಿಸಿದ್ದಾರಂತೆ.

ಸದಾನಂದ ಗೌಡರಿಗೆ ರಾಜಕಾರಣ ಸಾಕಾಗಿತ್ತಂತೆ, ಆದರೀಗ ಬಿಡುವುದಿಲ್ಲವಂತೆ!

ಶಾಸಕ, ವಿಧಾನ ಪರಿಷತ್ ಸದಸ್ಯ, ಸಂಸದ, ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಮತ್ತು ಮುಖ್ಯಮಂತ್ರಿ ಎಲ್ಲವೂ ಆದೆ. ಚುನಾವಣಾ ರಾಜಕಾರಣಕ್ಕೆ ಬಂದು ೨೫ ವರ್ಷ ಕೂಡ ಆಯಿತು. ತಾನು ಅಧ್ಯಕ್ಷ ಆಗಿದ್ದಾಗಲೇ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂತು. ಇನ್ನೂ ಚುನಾವಣಾ ರಾಜಕಾರಣಕ್ಕೆ ಇತಿಶ್ರೀ ಹಾಡಿಬಿಡಬೇಕು. ಮುಂದಿನ ಭಾರಿ ಲೋಕಸಭಾ ಚುನಾವಣೆಗೆ ನಿಲ್ಲಬಾರದು ಎಂದುಕೊಂಡಿದ್ದರಂತೆ ಕೇಂದ್ರ ಸಚಿವ ಡಿ ವಿ ಸದಾನಂದಗೌಡ. ಆದರೆ ಇತ್ತೀಚೆಗಿನ ವಿದ್ಯಮಾನಗಳು ಅವರನ್ನು ಮತ್ತೊಮ್ಮೆ ಚುನಾವಣಾ ಅಖಾಡಕ್ಕೆ ಧುಮುಕುವಂತೆ ಮಾಡಿವೆಯಂತೆ.

ಇತ್ತೀಚೆಗಿನ ವಿದ್ಯಮಾನಗಳು ಎಂದರೆ ಅವರ ವಿರುದ್ಧ ಅವರದೇ ಪಕ್ಷದ ನಾಯಕರು ಅಪಪ್ರಚಾರ ಮಾಡುತ್ತಿದ್ದಾರಂತೆ. ಆ ಪೈಕಿ ಮೊದಲಿಗರು ಅನಂತಕುಮಾರ್. ನಂತರ ಆರ್ ಅಶೋಕ್. ಅದಾದ ಮೇಲೆ ಶೋಭಾ ಕರಂದ್ಲಾಜೆ. ಶೋಭಾ ಕರಂದ್ಲಾಜೆಗೆ ಯಡಿಯೂರಪ್ಪ ಅವರ ಕೃಪಾಶೀರ್ವಾದ. “ಕೇಂದ್ರದಲ್ಲಿ ಮಂತ್ರಿಯಾಗಿದ್ದರೂ ಸದಾನಂದಗೌಡರಿಗೆ ಕಿಮ್ಮತ್ತಿಲ್ಲ” ಅಂತಾ ಅನಂತಕುಮಾರ್ ಹೀಗೆಳೆಯುತ್ತಿದ್ದಾರಂತೆ. “ಬಿಜೆಪಿಗೆ ನಾನೇ ಒಕ್ಕಲಿಗ ನಾಯಕ, ಸದಾನಂದಗೌಡರ ಪ್ರಭಾವ ಜಾತಿಯಲ್ಲೂ ಇಲ್ಲ, ಪಕ್ಷದಲ್ಲೂ ಇಲ್ಲ” ಅಂತಾ ಅಶೋಕ್ ಪುಕಾರು ಎಬ್ಬಿಸುತ್ತಿದ್ದಾರಂತೆ. ದಕ್ಷಿಣ ಕನ್ನಡ, ಬೆಂಗಳೂರು ಮತ್ತು ಒಕ್ಕಲಿಗರ ಪೈಕಿ ಸದಾನಂದಗೌಡರ ನಾಯಕತ್ವ ಹಿಗ್ಗುವುದನ್ನು ಸಹಿಸದ ಶೋಭಾ ಕರಂದ್ಲಾಜೆ ಕೂಡ ಕತ್ತಿ ಝಳಪಿಸುತ್ತಿದ್ದಾರಂತೆ. ಶೋಭಾ ಕರಂದ್ಲಾಜೆ ಅವರ ವೃಥಾ ಆರೋಪಗಳಿಗೆ ಯಡಿಯೂರಪ್ಪ ಕೂಡ ದನಿಗೂಡಿಸುತ್ತಿದ್ದಾರಂತೆ. ಇದರ ಪರಿಣಾಮವಾಗಿಯೇ ಎಲ್ಲರೂ ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿದ್ದಾರಂತೆ. “ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರು ಮುಂದಿನ ಭಾರಿ ಸ್ಪರ್ಧೆ ಮಾಡುವುದಿಲ್ಲ. ಅವರಿಗೆ ಟಿಕೆಟ್ ಸಿಗುವುದಿಲ್ಲ.‌ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಸದಾನಂದಗೌಡರ ಪರ ಒಲವಿಲ್ಲ. ಅದಕ್ಕಾಗಿ ಅವರು ತಮ್ಮ ಹಳೆಯ ಕ್ಷೇತ್ರವಾದ ಉಡುಪಿ-ಚಿಕ್ಕಮಗಳೂರು ಕಡೆ ಮುಖ ಮಾಡಿದ್ದಾರೆ,” ಎಂದು ವ್ಯಾಪಕವಾಗಿ ಪ್ರಚಾರ ನಡೆಸುತ್ತಿದ್ದಾರಂತೆ.

ಯಾರ ತಂಟೆಗೆ ಹೋಗದಿದ್ದರೂ ತನ್ನ ವಿರುದ್ಧ ಹೀಗೆ ವ್ಯಾಪಕವಾಗಿ ಅಪಪ್ರಚಾರ ಮಾಡುತ್ತಿರುವುದರಿಂದ ಸದಾನಂದಗೌಡರು ತಮ್ಮ ನಿಲುವು ಬದಲಿಸಿದ್ದಾರಂತೆ. ಮತ್ತೆ ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿದ್ದಾರಂತೆ. ಬೆಂಗಳೂರು ಉತ್ತರದಲ್ಲೇ ನಿಲ್ಲುತ್ತಾರಂತೆ. ಅದಕ್ಕೆ ತಯಾರಿಯನ್ನೂ ನಡೆಸಿದ್ದಾರಂತೆ.

‘ಸೂಪರ್ ಸಿಎಂ ಅಲ್ಲ, ನಾನು ಸೈಕಲ್ ಸಿಎಂ’ ಎನ್ನುತ್ತಾರೆ ರೇವಣ್ಣ

ಲೋಕಪಯೋಗಿ ಸಚಿವ ಎಚ್‌ ಡಿ ರೇವಣ್ಣ ಅವರನ್ನು ದೆಹಲಿ ಪತ್ರಕರ್ತರೊಬ್ಬರು 'ಸೂಪರ್ ಸಿಎಂ' ಅಂತ ಕಿಚಾಯಿಸುವ ಪ್ರಯತ್ನ ಮಾಡಿದರು. ಆದರೆ, ದೆಹಲಿ ಬಿಸಿಯಲ್ಲೂ ಕಿಚ್ಚು ಹತ್ತಿಕೊಳ್ಳಲೇ ಇಲ್ಲ. ರೇವಣ್ಣ ಕೂಲಾಗಿಯೇ ಉತ್ತರಿಸಿದರು: “ಬನ್ನಿ ಬ್ರದರ್... ನಾನ್ಯಾವ ಸೂಪರ್ ಸಿಎಂ? ನಾನು ಸೈಕಲ್ ಸಿಎಂ. ನೋಡಿ ಇಲ್ಲಿ ನನ್ನ ಡಿಪಾರ್ಟ್ಮೆಂಟ್ ಕೆಲಸಕ್ಕಾಗಿ ಸೈಕಲ್ ಹೊಡಿತಿದೀನಿ,” ಅಂತ ಸ್ಮೈಲ್ ಮಾಡಿದರು. ಪತ್ರಕರ್ತರು ಸೈಲೆಂಟ್ ಆದರು.

ಇನ್ನೊಂದು ಪ್ರಸಂಗ ಹೀಗಿದೆ: ಆನೆ ಕಾರಿಡಾರ್ ಬಗ್ಗೆ ಪ್ರಶ್ನೆ ಎದುರಾದಾಗ, “ಅಯ್ಯೋ ಬಿಡಿ ಸಾರ್, ಆನೆ‌ ಓಡಾಡದೆ ಇರೋ ಜಾಗದಲ್ಲಿ ಆನೆ‌ ಕಾರಿಡಾರ್ ಕಟ್ತಾವ್ರೆ. ಅದನ್ನು ತಕೊಂಡ್ ಏನ್ ಮಾಡೋದು?” ಅಂತ ರೇವಣ್ಣ ತೀವ್ರ ಬೇಸರ, ನಿರಾಸಕ್ತಿ, ಅಸಮಾಧಾನಗಳೆಲ್ಲವನ್ನೂ ಒಟ್ಟೊಟ್ಟಿಗೆ ವ್ಯಕ್ತಪಡಿಸಿಬಿಟ್ಟರು. ಆಗ ಪತ್ರಕರ್ತರ ಪೈಕಿ ಒಬ್ಬರು, “ಸಾರ್ ಅದು ಕಟ್ಟೋದಲ್ಲ, ಆನೆ‌ ಓಡಾಡೋ ಜಾಗಕ್ಕೆ ಆನೆ ಕಾರಿಡಾರ್ ಅಂತಾರೆ,” ಎಂದರು. ರೇವಣ್ಣ, “ಏನೋ ಒಂದು,” ಎಂದು ಮುಂದೆ ನಡೆದರು. ರೇವಣ್ಣ ಬಗ್ಗೆ ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಕೂಡ ತಮಾಷೆ ಮಾಡಿಕೊಳ್ಳುತ್ತಾರೆ. “ಈ ಮನುಷ್ಯ ತಮ್ಮ ಡಿಪಾರ್ಟ್ಮೆಂಟ್ ಕೆಲಸಕ್ಕೆ ಮುಖ್ಯಮಂತ್ರಿಯನ್ನೂ ದೆಹಲಿಗೆ ಕರ್ಕೊಂಡು ಬರ್ತಾರೆ. ಅಗತ್ಯಬಿದ್ದರೆ ಅಪ್ಪನನ್ನೂ (ದೇವೇಗೌಡ) ಕರ್ಕೊಂಡು ಬರ್ತಾರೆ,” ಎಂದು ಲೇವಡಿ ಮಾಡುತ್ತಾರೆ.

ಇದನ್ನೂ ಓದಿ : ಚಾಣಕ್ಯಪುರಿ | ಸೋಲಿನ ಆತ್ಮಾವಲೋಕನ ಮರೆತು ಅಲ್ಪತೃಪ್ತರಾದ ರಾಜ್ಯ ಕಾಂಗ್ರೆಸಿಗರು

ನನ್ನ ಹೆಸರು ಮೊದಲೇ ಇದೆ, ಮೊದಲೇ‌ ಹೊರಹೋಗುವ ಸಾಧ್ಯತೆಯೂ ಇದೆ!

ಇತ್ತೀಚೆಗೆ ರಾಜ್ಯ ವಿಧಾನ ಪರಿಷತ್ತಿಗೆ ಯಾರನ್ನು ನಾಮ‌ನಿರ್ದೇಶನ ಮಾಡಬೇಕೆಂದು ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಂಡಿದ್ದರು. ಹಲವರ ಹೆಸರುಗಳು ಮುಂಚೂಣಿಗೆ ಬಂದಿದ್ದವು. ಆ ಪೈಕಿ ಸಾಹಿತಿ ಬರಗೂರು ರಾಮಚಂದ್ರಪ್ಪ ಹೆಸರು ಕೂಡ ಇತ್ತು. ಪತ್ರಕರ್ತರೊಬ್ಬರು ಬರಗೂರು ರಾಮಚಂದ್ರಪ್ಪ ಅವರಿಗೆ ಫೋನ್ ಮಾಡಿ, “ಸಾರ್, ನಿಮ್ಮ‌ ಹೆಸರು ಇದೆಯಂತೆ, ನಿಜಾನಾ ಸಾರ್?” ಎಂದು ಕೇಳಿದರಂತೆ. ಅದಕ್ಕೆ ಬರಗೂರು ರಾಮಚಂದ್ರಪ್ಪ, “ಹೌದು ನನ್ನ‌ ಹೆಸರು ಮೊದಲೇ ಇದೆ, ಮೊದಲೇ ಹೊರಗೆ ಹೋಗುವ ಸಾಧ್ಯತೆಯೂ ಇದೆ,” ಎಂದು ತಮಾಷೆ ಮಾಡಿದರಂತೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More