‘ನಾನೂ ಹಿಂದೂ’ ಎನ್ನುವ ಸಿದ್ದರಾಮಯ್ಯ ಸ್ವಮರುಕದಿಂದ ಆಚೆ ಬರುತ್ತಿಲ್ಲವೇಕೆ? | ಭಾಗ ೧

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ‘ನಾನು ಸಹ ಹಿಂದೂ’ ಎನ್ನುತ್ತಿದ್ದಾರೆ. ಅತ್ತ ರಾಹುಲ್ ಗಾಂಧಿ ‘ಶಿವಭಕ್ತ’ನಾಗಲು ಹೊರಟಿದ್ದಾರೆ. ನನ್ನನ್ನು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಿ ವಿರೋಧಿಗಳು ಸೋಲಿಸಿದರು ಎಂದು ಸಿದ್ದರಾಮಯ್ಯ ಸಾರ್ವಜನಿಕವಾಗಿ ಅಲವತ್ತುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್‌ಗೆ ಏನಾಗಿದೆ? ಸೋಲಿನ ನೈಜ ಕಾರಣಗಳೆಡೆಗೆ ಅದು ಏಕೆ ನೋಡುತ್ತಿಲ್ಲ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ವಿಧಾನಸಭಾ ಚುನಾವಣೆಯಲ್ಲಿನ ಕಾಂಗ್ರೆಸ್‌ ಸೋಲಿಗೆ ಬಿಜೆಪಿಯವರು ತಮ್ಮನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದ್ದೇ ಕಾರಣ ಎನ್ನುವ ಅರ್ಥ ಬರುವ ರೀತಿಯಲ್ಲಿ ಇತ್ತೀಚೆಗೆ ಮಾತನಾಡಿದ್ದರು. ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅವರು, “ಕರಾವಳಿ ಭಾಗದಲ್ಲಿ ಬಿಜೆಪಿಯವರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರು. ನಿಮ್ಮ ಮಕ್ಕಳು ಸುರಕ್ಷಿತವಾಗಿ ಮನೆಗೆ ಬರಬೇಕಾ? ದನಕರುಗಳು ಸುರಕ್ಷಿತವಾಗಿ ಕೊಟ್ಟಿಗೆಗೆ ಬರಬೇಕಾ? ಸುರಕ್ಷಿತವಾಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬೇಕಾ? ಬಿಜೆಪಿಗೆ ಮತ ಹಾಕಿರಿ ಎಂದು ಕೂಗೆಬ್ಬಿಸಿದರು”, ಎಂದು ಸಿದ್ದರಾಮಯ್ಯನವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣವನ್ನು ನೀಡುವ ರೀತಿಯಲ್ಲಿ ವಿವರಿಸಿದ್ದರು.

ಇದೇ ಉಸಿರಿನಲ್ಲಿಯೇ, “ನಾನು ಹಿಂದೂ ವಿರೋಧಿ ಅಲ್ಲ. ದೇವರ ವಿರೋಧಿಯೂ ಅಲ್ಲ. ಆದರೂ, ನನಗೆ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟಿರುವುದು ಏಕೆ?” ಎಂದು ಅವರು ಪ್ರಶ್ನಿಸಿದ್ದರು. ಸಿದ್ದರಾಮಯ್ಯನವರ ಟ್ವಿಟರ್‌ ಖಾತೆಯಲ್ಲಿಯೂ ಇದೇ ಅರ್ಥದ ಟ್ವೀಟ್‌ಗಳನ್ನು ಮಾಡಲಾಯಿತು. “ನನ್ನ ದೇವರ ವಿರೋಧಿ ಅಂತಾರೆ. ಶ್ರೀಕೃಷ್ಣ, ಕಿತ್ತೂರು ಚೆನ್ನಮ್ಮ, ಭಗೀರಥ, ನಾರಾಯಣಗುರು, ಟಿಪ್ಪು, ವಿಶ್ವಕರ್ಮ, ದೇವರದಾಸಿಮಯ್ಯ ಸೇರಿ ಹಲ ಮಹನೀಯರ ಜಯಂತಿ ಆಚರಣೆ ಆರಂಭಿಸಿದ್ದು ನಾನು. ಇದರ ನಂತರವೂ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ವಿಧಾನಸಭೆ ಚುನಾವಣೆಗೆ ಮುನ್ನ ಅಪಪ್ರಚಾರ ಮಾಡಿದರು,” ಎಂದು ಅವರ ಟ್ವಿಟರ್‌ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

ಈ ಹಿಂದೆ ಚುನಾವಣೆಯ ವೇಳೆಯೂ ಅವರು ಇದೇ ಅರ್ಥ ಬರುವಂತೆ ಹಲವು ಬಾರಿ ಮಾತನಾಡಿದ್ದರು. ಬಿಜೆಪಿಯವರಿಗಿಂತ ನಾನು ಉತ್ತಮ ಹಿಂದೂ. ನನಗೆ ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇದೆ. ಜಾತಿ-ಧರ್ಮದ ಹೆಸರಿನಲ್ಲಿ ನಾನು ರಾಜಕಾರಣ ಮಾಡುವುದಿಲ್ಲ ಎನ್ನುವ ಅರ್ಥದಲ್ಲಿ ಅವರು ಚುನಾವಣೆ ವೇಳೆ ಹಲವು ಬಾರಿ ಮಾತನಾಡಿದ್ದರು. ಇದೆಲ್ಲವನ್ನೂ ಗಮನಿಸಿದರೆ, ಸಿದ್ದರಾಮಯ್ಯನವರು ತಮ್ಮ ಚುನಾವಣಾ ಸೋಲಿನ ಆತ್ಮವಿಮರ್ಶೆಯನ್ನು ‘ಹಿಂದುತ್ವ’ದ ಸುತ್ತವೇ ಕೇಂದ್ರೀಕರಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯುಂಟಾಗಲು ತಮ್ಮ ನೇತೃತ್ವದ ಸರ್ಕಾರವನ್ನು ‘ಹಿಂದೂ ವಿರೋಧಿ’ ಎಂದು ಬಿಜೆಪಿ ಬಿಂಬಿಸಿದ್ದು ಕಾರಣ ಎನ್ನುವುದನ್ನು ಅವರು ಅಚಲವಾಗಿ ನಂಬಿರುವಂತೆ ತೋರುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅವರು ತಾವೂ ಸಹ ಹಿಂದೂ ಎಂದು ಹೇಳುವುದು, ಸಿದ್ದರಾಮೇಶ್ವರ ನನ್ನ ಮನೆಯ ದೇವರು ಎನ್ನುವುದು, ಜಯಂತಿಗಳನ್ನು ಮಾಡಿದ್ದನ್ನು ಉದಾಹರಿಸುವುದು ನಡೆದಿದೆ. ರಾಷ್ಟ್ರ ರಾಜಕಾರಣದಲ್ಲಿಯೂ ಸಹ ಕಾಂಗ್ರೆಸ್‌ ಇಂದು ಹೆಚ್ಚು ಕಡಿಮೆ ಇದೇ ನೀತಿಯನ್ನು ಅನುಸರಿಸುತ್ತಿದೆ. ರಾಹುಲ್‌ ಗಾಂಧಿಯವರನ್ನು ‘ಶಿವಭಕ್ತ’ ಎಂದು ಬಿಂಬಿಸುವಲ್ಲಿ, ಅವರ ಚುನಾವಣಾ ರ್ಯಾಲಿಯಗಳ ವೇಳೆ ಸಾಕಷ್ಟು ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಂತೆ ಮಾಡುವಲ್ಲಿ ಕಾಂಗ್ರೆಸ್‌ ಸಫಲವಾಗಿದೆ. ಇದು ಮಾಧ್ಯಮಗಳಲ್ಲಿ ‘ಮೃದು ಹಿಂದುತ್ವ’ ಎಂದೂ ವ್ಯಾಖ್ಯಾನವಾಗುತ್ತಿದೆ.

ಕಾಂಗ್ರೆಸ್‌ಗಾಗಲೀ, ಸಿದ್ದರಾಮಯ್ಯನವರಿಗಾಗಲೀ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲುಂಟಾದ ಹಿನ್ನಡೆಗೆ ಕಾರಣಗಳೇನು ಎನ್ನುವುದನ್ನು ಗಂಭೀರವಾಗಿ ಚಿಂತಿಸಲು, ಚರ್ಚಿಸಲು ಈವರೆಗೆ ಸಾಧ್ಯವಾಗಿಲ್ಲ. ರಾಜ್ಯ ಕಾಂಗ್ರೆಸ್‌ನೊಳಗಿನ ಸಾಕಷ್ಟು ಮಂದಿ ನಾಯಕರಿಗೆ ಸಿದ್ದರಾಮಯ್ಯನವರ ಅಡಿಯಲ್ಲಿ ಕಾಂಗ್ರೆಸ್‌ ದಿಗ್ವಿಜಯ ಸಾಧಿಸುವುದಕ್ಕಿಂತ ಹೀಗೆ ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗಿರುವುದರಲ್ಲಿಯೇ ಖುಷಿಯಿದೆ ಎನ್ನುವುದು ಗುಟ್ಟಿನ ವಿಷಯವೇನೂ ಅಲ್ಲ. ಇದೇ ಕಾರಣಕ್ಕೆ ಇಂತಹ ನಾಯಕರಿಗೆ ಕಾಂಗ್ರೆಸ್‌ಗೆ ಉಂಟಾದ ಹಿನ್ನಡೆಯನ್ನು ಪ್ರಾಮಾಣಿಕವಾಗಿ ಚರ್ಚಿಸುವ, ವಿಶ್ಲೇಷಿಸುವ ಅಗತ್ಯ ಈವರೆಗೆ ಕಂಡು ಬಂದಿಲ್ಲ. ಇನ್ನು, ಸೋಲಿಗೆ ಪ್ರಾಮಾಣಿಕ ಕಾರಣಗಳನ್ನು ಹುಡುಕುವುದಕ್ಕಿಂತ ತಮಗೆ ಹೆಚ್ಚು ಸಮಾಧಾನ ನೀಡುವ, ಅನುಕೂಲಕರವೆನಿಸುವ ಕಾರಣಗಳನ್ನು ಸಿದ್ದರಾಮಯ್ಯನವರೂ ಸೇರಿದಂತೆ ಸಾಕಷ್ಟು ಕಾಂಗ್ರೆಸ್ ನಾಯಕರು ಹುಡುಕಿಕೊಂಡಿದ್ದಾರೆ. ಬಿಜೆಪಿಯವರು ತಮ್ಮನ್ನು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಯಿತು ಎಂದು ಸಿದ್ದರಾಮಯ್ಯನವರು ಹೇಳುವ ಮಾತುಗಳೂ ಸಹ ಇಂತಹದೇ ಚೌಕಟ್ಟಿಗೆ ಒಳಪಡುವಂಥದ್ದು. ಈ ವ್ಯಾಖ್ಯಾನವನ್ನು ಸಿದ್ದರಾಮಯ್ಯನವರು ತಮ್ಮ ನೇತೃತ್ವದಲ್ಲಿ ಪಕ್ಷದ ಸೋಲನ್ನು ಹೀಗೆ ವಿವರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ನೋಡಬಹುದೇ ಹೊರತು, ಇದೇ ನೈಜ ಕಾರಣ ಎಂದು ಒಪ್ಪಲಾಗದು. ಸೋಲಿನ ಹಲವು ಕಾರಣಗಳಲ್ಲಿ ಇದೂ ಒಂದಾಗಿರಬಹುದು ಅಷ್ಟೇ. ಹಾಗಾದರೆ, ಸಿದ್ದರಾಮಯ್ಯನವರು ಈ ಕಾರಣವನ್ನೇ ಏಕೆ ಪ್ರಮುಖವಾಗಿ ಬಿಂಬಿಸುತ್ತಿದ್ದಾರೆ? ಏಕೆಂದರೆ ಅದು ತಮ್ಮ ಇಮೇಜಿಗೆ ಹೊಂದುವಂಥದ್ದು ಹಾಗೂ ಆ ದಿಕ್ಕಿನಿಂದ ನೋಡಿದಾಗ ತಮ್ಮ ಸೋಲು ವೀರೋಚಿತವಾಗಿ ಕಾಣಿಸುತ್ತದೆ ಎಂದು ಅವರು ಭಾವಿಸಿರುವಂತಿದೆ. ತಾನು ಜಾತ್ಯತೀತವಾದಿಯಾದ ಕಾರಣಕ್ಕೆ, ತಮ್ಮ ಸರ್ಕಾರ ಹಿಂದುತ್ವವಾದಿಗಳ ವಿರುದ್ಧ ನಿಂತ ಕಾರಣಕ್ಕೆ ತಮಗೆ ಸೋಲುಂಟಾಯಿತು ಎನ್ನುವುದನ್ನು ಅಧಿಕೃತಗೊಳಿಸಲು ಪ್ರಯತ್ನಿಸುವ ಭಾಗವಾಗಿ ಅವರು ತಮ್ಮ ಸೋಲನ್ನು ಹೀಗೆ ಪದೇಪದೇ ವ್ಯಾಖ್ಯಾನಿಸಿಕೊಳ್ಳುವಂತೆ ತೋರುತ್ತದೆ. ಚುನಾವಣೆಯ ಕೇಂದ್ರ ತಾವೇ ಅಗಿದ್ದು, ತಮ್ಮ ವಿರುದ್ಧ ಎಲ್ಲ ಮೂಲಭೂತವಾದಿಗಳೂ ಒಗ್ಗೂಡಿ ಸಮರ ಸಾರಿದರು ಎನ್ನುವ ಅರ್ಥವನ್ನು ಅವರ ಈ ಮಾತುಗಳು ಹೊಮ್ಮಿಸುತ್ತವೆ. ತಾವು ಸದಾಕಾಲ ಧರಿಸಲು ಬಯಸುವ ಜಾತ್ಯತೀತ ಮೌಲ್ಯಗಳ ಚಾಂಪಿಯನ್‌ ಎನ್ನುವ, ಹಣೆಪಟ್ಟಿಯನ್ನು ತೊಡಲು ಈ ವ್ಯಾಖ್ಯಾನ ಅವರಿಗೆ ಸಹಕಾರಿಯಾಗುತ್ತದೆ. ವಿಪರ್ಯಾಸವೆಂದರೆ, ಚುನಾವಣಾ ಹಿನ್ನೆಡೆಗೆ ಅವರು ನೀಡುವ ಈ ಕಾರಣ ಪ್ರಬಲ ನಾಯಕನೊಬ್ಬನ ದೃಷ್ಟಿಕೋನದಿಂದ ಮೂಡಿದ ಸ್ವಮರುಕದ, ಸ್ವಕೇಂದ್ರಿತ ಕಾರಣವಾಗಿಯಷ್ಟೇ ಕಾಣಬಲ್ಲದೇ ಹೊರತು ಒಂದು ಪಕ್ಷವಾಗಿ ಕಾಂಗ್ರೆಸ್‌ನ ಹಿನ್ನೆಡೆಯನ್ನು ಸಂಪೂರ್ಣವಾಗಿ ವ್ಯಾಖ್ಯಾನಿಸಲಾರದು, ಅಷ್ಟೇ ಅಲ್ಲ, ಸೋಲಿನ ಕುರಿತಾದ ಆತ್ಮವಿಮರ್ಶೆಗೆ ಅಗತ್ಯವಾದ ಕಠಿಣ ಸವಾಲುಗಳನ್ನು ಕೇಳಿಕೊಳ್ಳಲು ಬೇಕಾದ ಮನೋಭೂಮಿಕೆಯನ್ನೂ ಇದು ರೂಪಿಸಲಾರದು.

ಚುನಾವಣೆಯ ವೇಳೆ, ಬಿಜೆಪಿಯ ಮತೀಯ ಧ್ರುವೀಕರಣಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ಲಿಂಗಾಯತ ಧರ್ಮದ ಅಸ್ತ್ರವನ್ನು ಪ್ರಯೋಗಿಸಿತು. ಆ ಮೂಲಕ ಚುನಾವಣಾ ಕಣದಲ್ಲಿ ಸಣ್ಣ ಯಶಸ್ಸನ್ನೂ ಸಾಧಿಸಿತು. ಅದರಲ್ಲಿಯೂ ಪ್ರಮುಖವಾಗಿ, ಹೈದರಾಬಾದ್‌ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಧರ್ಮದ ವಿಚಾರ ದೊಡ್ಡ ಮಟ್ಟದಲ್ಲಿ ಅಲ್ಲದೆ ಹೋದರೂ, ಸಾಧಾರಣ ಮುನ್ನಡೆಯನ್ನು ನೀಡಿತ್ತು. ಲಿಂಗಾಯತ ಧರ್ಮದ ಅಸ್ತ್ರ ಪಕ್ಷದ ಹಿನ್ನಡೆಗೆ ಕಾರಣವಾಯಿತು ಎಂದು ಪಕ್ಷದೊಳಗಿಂದಲೇ ಕೇಳಿ ಬಂದ ಆರೋಪಗಳಿಗೆ ಪ್ರತಿಯಾಗಿ ಲಿಂಗಾಯತ ಮಹಾಸಭಾ ಕೂಡ ದೊಡ್ಡ ಜಾಹಿರಾತನ್ನು ನೀಡಿ, ಅಂಕಿ-ಅಂಶಗಳ ಮೂಲಕ ಹೇಗೆ ಲಿಂಗಾಯತ ಧರ್ಮದ ವಿಚಾರ ಕಾಂಗ್ರೆಸ್‌ಗೆ ಚುನಾವಣಾ ಹಿನ್ನಡೆಯನ್ನುಂಟು ಮಾಡಲಿಲ್ಲ, ಬದಲಿಗೆ ಕಾಂಗ್ರೆಸ್‌ಗೆ ಉಂಟಾಗಬಹುದಾಗಿದ್ದ ತೀವ್ರ ಮುಖಭಂಗವನ್ನು ತಡೆಯುವಲ್ಲಿ ಸಹಕಾರಿಯಾಯಿತು ಎಂದು ತಿಳಿಸಿತ್ತು. ಹಾಗಾಗಿ, ಲಿಂಗಾಯತ ಧರ್ಮದ ವಿಚಾರದಲ್ಲಿ ತಾವು ತೆಗೆದುಕೊಂಡ ನಿರ್ಧಾರ ನಿರೀಕ್ಷಿತ ಫಲ ನೀಡಲಿಲ್ಲ ಎನ್ನುವ ಅಂಶವನ್ನು ಬದಿಗೆ ಸರಿಸುವ ಸಲುವಾಗಿ ಸಿದ್ದರಾಮಯ್ಯನವರು ‘ಹಿಂದೂ ವಿರೋಧಿ’ ವಿಚಾರವನ್ನು ಮುಂದೆ ಮಾಡುತ್ತಾರೆ ಎನ್ನುವುದು ಸೂಕ್ತ ಉತ್ತರವಾಗಲಾರದು. ಅವರು ತಮ್ಮನ್ನು ನಿಷ್ಠುರವಾಗಿ ಅತ್ಮವಿಮರ್ಶೆಗೆ ಒಡ್ಡಿಕೊಳ್ಳದಂತೆ ಮಾಡುತ್ತಿರುವ ವಿಚಾರ ಬೇರೇನೋ ಇದೆ. ಬಹುಶಃ ಅದು ‘ಅಹಿಂದ’ ಎನ್ನುವ ಮಾಯಾಜಿಂಕೆಯನ್ನು ನಂಬಿದ್ದಕ್ಕೆ ತಾವು ಬೆಲೆ ತೆರಬೇಕಾಗಿ ಬಂದ ಕಹಿನೆನಪು ಇರಬಹುದು.

ಇದನ್ನೂ ಓದಿ : ‘ನಾನೂ ಹಿಂದೂ,’ ಎನ್ನುವ ಸಿದ್ದರಾಮಯ್ಯ ಸ್ವಮರುಕದ ಆಚೆಗೆ ಹೊರಬರುತ್ತಿಲ್ಲವೇಕೆ?| ಭಾಗ - ೨

ಕರ್ನಾಟಕದ ಸಮಕಾಲೀನ ರಾಜಕಾರಣದಲ್ಲಿ ಅಹಿಂದ ವರ್ಗಗಳ ಏಕಮಾತ್ರ ನೇತಾರ ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯನವರನ್ನು ಪರಿಗಣಿಸಲಾಗಿತ್ತು. ಸಿದ್ದರಾಮಯ್ಯನವರನ್ನು ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತ ಸಮುದಾಯದವರ ಏಕಮಾತ್ರ ಆಯ್ಕೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿತ್ತು. ಅದೇ ರೀತಿ, ಕಾಂಗ್ರೆಸ್‌ ಸಹ ಈ ಸಮುದಾಯಗಳ ಮೆಚ್ಚಿನ ಪಕ್ಷವಾಗಿದ್ದು, ಈ ಎರಡು ಪ್ರಬಲ ಕಾರಣಗಳಿಂದ ಅಹಿಂದ ವರ್ಗಗಳ ಮತಬುಟ್ಟಿಯಿಂದ ಮತಗಳು ಚದುರಲಾರವು ಎನ್ನುವ ನಂಬಿಕೆ ಕಾಂಗ್ರೆಸ್‌ ವಲಯದಲ್ಲಿತ್ತು. ಆದರೆ, ಇದು ಎಷ್ಟು ಮಾತ್ರ ಸತ್ಯ? ಮೊದಲಿಗೆ, ಅಹಿಂದ ವರ್ಗ ಎನ್ನುವುದು ಒಂದು ಜಾತಿಯಾಗಲಿ, ಸಾಂಸ್ಕೃತಿಕ ಒಕ್ಕೂಟವಾಗಲಿ ಅಲ್ಲ. ವೈರುಧ್ಯಮಯ ಸಾಮಾಜಿಕ ಇತಿಹಾಸವನ್ನು ಹೊಂದಿರುವ ಪ್ರಬಲ ಜಾತಿಗಳ ಹೊರತಾದ ಶೂದ್ರ ಜಾತಿಗಳ ರಾಜಕೀಯ ವರ್ಗೀಕರಣ ಇದು. ಅಹಿಂದ ಎನ್ನುವುದು ರಾಜಕೀಯ ಪರಿಕಲ್ಪನೆಯೇ ಹೊರತು, ಸಾಂಸ್ಕೃತಿಕ ಪರಿಕಲ್ಪನೆಯಲ್ಲ ಎನ್ನುವ ಬಗ್ಗೆ ಕಾಂಗ್ರೆಸ್‌ ಆಗಲೀ, ಸ್ವತಃ ಸಿದ್ದರಾಮಯ್ಯನವರಾಗ ಎಂದಿಗೂ ಗಂಭೀರವಾಗಲೇ ಇಲ್ಲ. ಹಿಂದುಳಿದ ವರ್ಗಗಳಲ್ಲಿಯೇ ಪರಸ್ಪರರೆಡೆಗೆ ಜಾತೀಯ ಅಸಹನೆ, ಸ್ಪರ್ಧೆಗಳು ಇರುವುದು ಸಾಮಾಜಿಕವಾಗಿ ಗ್ರಾಮೀಣ ಭಾಗಗಳಲ್ಲಿ ವ್ಯಾಪಕವಾಗಿ ಕಂಡಬರುತ್ತವೆ.

ಸಿದ್ದರಾಮಯ್ಯನವರು ವೈಯಕ್ತಿಕವಾಗಿ ತಾವು ಕುರುಬ ಸಮುದಾಯಕ್ಕೆ ಮಾತ್ರವೇ ಸೀಮಿತವಾದ ನಾಯಕನಲ್ಲ ಎಂದು ಎಷ್ಟೇ ಬಿಂಬಿಸಿಕೊಳ್ಳಲು ಪ್ರಯತ್ನಿಸಿದರೂ ಅದರಲ್ಲಿ ಅವರು ಸಂಪೂರ್ಣ ಯಶಸ್ವಿಯಾದಂತೆ ತೋರಲಿಲ್ಲ. ಅವರು ಮುಖ್ಯಮಂತ್ರಿಯಾಗಿ ಗಟ್ಟಿ ನಾಯಕನಾಗಿ ಹೊರಹೊಮ್ಮಿದಂತೆಲ್ಲಾ ಕುರುಬ ಸಮುದಾಯದೊಳಗಿನ ಅವರೆಡೆಗಿನ ಅಭಿಮಾನ ಸಹಜವಾಗಿಯೇ ವ್ಯಾಪಕವಾಗತೊಡಗಿತು. ಸಿದ್ದರಾಮಯ್ಯನವರೆಡೆಗಿನ ಜಾತಿ ಅಭಿಮಾನ ಹೆಚ್ಚಾದಂತೆಲ್ಲಾ, ಇತರ ಸಮುದಾಯಗಳು ಇತರ ಪಕ್ಷಗಳೆಡೆಗಿನ ತಮ್ಮ ಆಯ್ಕೆಯನ್ನು ಹೆಚ್ಚು ಮುಕ್ತವಾಗಿರಿಸಿಕೊಳ್ಳ ತೊಡಗಿದವು. ಅಷ್ಟೇ ಅಲ್ಲ, ಒಳಮೀಸಲಾತಿ ವಿಚಾರದಲ್ಲಿ ದಲಿತ ಎಡಗೈ ಸಮುದಾಯ ಕಾಂಗ್ರೆಸ್‌ನಿಂದ ದೂರ ಸರಿಯುತ್ತಿದ್ದುದನ್ನು ತಡೆಯುವುದಾಗಲಿ, ಪರಿಶಿಷ್ಟ ಪಂಗಡದ ನಾಯಕ ಸಮುದಾಯ ಮಾತ್ರವೇ ಅಲ್ಲದೆ, ಹಿಂದುಳಿದ ವರ್ಗಗಳ ವಿವಿಧ ಸಮುದಾಯಗಳು ಸ್ಥಳೀಯ ರಾಜಕಾರಣದ ಜಾತಿ ಸಮೀಕರಣಕ್ಕೆ ಅನುಗುಣವಾಗಿ ತಮ್ಮ ನಿಷ್ಠೆಯನ್ನು ಕಾಂಗ್ರೆಸ್‌ನಿಂದ ಬದಲಿಸಿ ಬೇರೆ ಪಕ್ಷಗಳತ್ತ ವಾಲುತ್ತಿದ್ದುದನ್ನು ನಿಲ್ಲಿಸುವುದಾಗಲಿ ಸಾಧ್ಯವಾಗಲಿಲ್ಲ. ಅಹಿಂದ ವರ್ಗಗಳಿಂದ ಮತಗಳು ವ್ಯಾಪಕವಾಗಿ ಚದುರುವುದನ್ನು ತಡೆಯುವಲ್ಲಿ ಕಾಂಗ್ರೆಸ್‌ ಹಾಗೂ ವೈಯಕ್ತಿಕವಾಗಿ ಅಹಿಂದ ವರ್ಗಗಳ ನೇತಾರರಾಗಿ ಹೊರಹೊಮ್ಮಿದ್ದ ಸಿದ್ದರಾಮಯ್ಯನವರಿಗೆ ಹೇಳಿಕೊಳ್ಳುವಂತಹ ಯಶಸ್ಸೇನೂ ಲಭ್ಯವಾಗಲಿಲ್ಲ. ಸಿದ್ದರಾಮಯ್ಯನವರು ಅಹಿಂದ ವರ್ಗಗಳ ನೇತಾರರಾಗಿ ಇರಬಯಸಿದರೂ ಸಹ ಚುನಾವಣಾ ಕಣ ಅವರನ್ನು ಕೇವಲ ಕುರುಬ ಸಮುದಾಯದಿಂದ ಮೂಡಿದ ಓರ್ವ ಪ್ರಬಲ ನಾಯಕನಾಗಿ ಮಾತ್ರವೇ ನೋಡಿತೇ ಎನ್ನುವ ಪ್ರಶ್ನೆ ಇಂದು ಗಾಢವಾಗಿ ಕಾಣುತ್ತದೆ.

ಮುಂದುವರಿಯಲಿದೆ...

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More