ಹೊರರಾಜ್ಯ ಪ್ರವಾಸದಲ್ಲಿರುವ ಅಂದಾಜು ಸಮಿತಿ ಸದಸ್ಯ ಶಾಸಕರಿಗೆ ಚಂಡಮಾರುತ ಭೀತಿ!

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ೪ ತಿಂಗಳ ನಂತರ ವಿಧಾನಸಭೆ ಅಂದಾಜು ಸಮಿತಿ ಸದಸ್ಯರು ಇಂದು ಒಡಿಶಾ ಮತ್ತಿತರೆ ಹೊರರಾಜ್ಯ ಪ್ರವಾಸಕ್ಕೆ ತೆರಳಿದ್ದಾರೆ. ಆದರೆ ಈ ಸದಸ್ಯರು ಒಡಿಶಾದಲ್ಲಿ ಸಂಭವಿಸಲಿರುವ ಪ್ರಕೃತಿ ವಿಕೋಪಕ್ಕೆ ಸಿಲುಕಲಿದ್ದಾರೆ ಎಂಬ ಭೀತಿ ವಿಧಾನಸಭೆ ಸಚಿವಾಲಯಕ್ಕೆ ಎದುರಾಗಿದೆ.

ಸ್ಮಾರ್ಟ್‌ ಸಿಟಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲು ಹೊರ ರಾಜ್ಯದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿರುವ ವಿಧಾನಸಭೆಯ ಅಂದಾಜು ಸಮಿತಿಯ ಅಧ್ಯಕ್ಷ ಶಾಸಕ ಕೆ ಶ್ರೀನಿವಾಸಗೌಡ ಅವರ ನೇತೃತ್ವದ ತಂಡದ ಸದಸ್ಯರಿಗೆ ಚಂಡಮಾರುತ ಭೀತಿ ಎದುರಾಗಿದೆ. ಇದರಿಂದ ಕರ್ನಾಟಕ ವಿಧಾನಸಭೆ ಸಚಿವಾಲಯವು ಪ್ರವಾಸದಲ್ಲಿರುವ ಶಾಸಕರು ಮತ್ತು ಅಧಿಕಾರಿಗಳ ಸುರಕ್ಷತೆ ಬಗೆಗೆ ತೀವ್ರ ಆತಂಕಗೊಂಡಿದೆ.

ಇಂದು ಬೆಳಗ್ಗೆ(ಬುಧವಾರ) ಬೆಂಗಳೂರಿನ ಶಾಸಕರ ಭವನದಿಂದ ತೆರಳಿರುವ ಸದಸ್ಯರು ಮುಂಬೈನ ವಿಮಾನ ನಿಲ್ದಾಣ ತಲುಪುತ್ತಿದ್ದಂತೆ, ಒಡಿಶಾ ವಿಧಾನಸಭೆ ಸಚಿವಾಲಯವು ಚಂಡ ಮಾರುತ ಮುನ್ಸೂಚನೆ ಮಾಹಿತಿಯನ್ನು ಫ್ಯಾಕ್ಸ್‌ ಮೂಲಕ ಕರ್ನಾಟಕ ವಿಧಾನಸಭೆ ಸಚಿವಾಲಯಕ್ಕೆ ಕಳುಹಿಸಿದೆ ಎಂದು ತಿಳಿದು ಬಂದಿದೆ.

ಒಡಿಶಾ ವಿಧಾನಸಭೆ ಸಚಿವಾಲಯವು ಹವಾಮಾನ ಇಲಾಖೆ ನೀಡಿರುವ ವರದಿ ಆಧರಿಸಿ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಸಂದೇಶ ಕಳಿಸಿದೆ. ಒಡಿಶಾದಲ್ಲಿ ಗಂಟೆಗೆ ೧೫೦ರಿಂದ ೨೨೦ ಕಿ ಮೀ ವೇಗದಲ್ಲಿ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಇದೆ ಎಂಬ ಮಾಹಿತಿ ಫ್ಯಾಕ್ಸ್‌ ಸಂದೇಶದಲ್ಲಿ ಇದೆ ಎಂಬುದು ಗೊತ್ತಾಗಿದೆ.

ಪ್ರವಾಸದಲ್ಲಿರುವ ತಂಡಕ್ಕೆ ಈ ಮಾಹಿತಿಯನ್ನು ತಲುಪಿಸಲು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಮತ್ತು ಸಮಿತಿಯ ಕೆಲ ಅಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಿಸಲು ಮಧ್ಯಾಹ್ನದಿಂದ ಯತ್ನಿಸಿದರೂ ಸಂಪರ್ಕ ಸಾಧ್ಯವಾಗಿರಲಿಲ್ಲ. ಸಂಜೆ ಹೊತ್ತಿಗೆ ಮಾಹಿತಿಯನ್ನು ಸಮಿತಿಯ ಅಧಿಕಾರಿಯೊಬ್ಬರಿಗೆ ಒದಗಿಸಿದೆ. ಪ್ರವಾಸ ಮುಂದುವರೆಸುವುದು ಅಥವಾ ಮೊಟಕುಗೊಳಿಸುವ ಬಗ್ಗೆ ಸಮಿತಿಯೇ ತೀರ್ಮಾನ ಕೈಗೊಳ್ಳಬೇಕು ಎಂದು ಸಚಿವಾಲಯದ ಮೂಲಗಳು ‘ದಿ ಸ್ಟೇಟ್‌’ಗೆ ತಿಳಿಸಿವೆ.

ಇದನ್ನೂ ಓದಿ : ಹತ್ತು ದಿನಗಳ ಅಧಿವೇಶನ; ತಾತ್ಕಾಲಿಕ ಶೌಚಾಲಯ ವ್ಯವಸ್ಥೆಗೆ ೧ ಕೋಟಿ ರೂ. ವೆಚ್ಚ!

ಈ ನಡುವೆಯೇ ಮಧ್ಯ ಪ್ರದೇಶ ವಿಧಾನಸಭೆ ಸಚಿವಾಲಯವು ಕೂಡ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಇರುವ ಕಾರಣ, ಶಿಷ್ಟಾಚಾರ ಪಾಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಇದನ್ನು ಲೆಕ್ಕಿಸದೆಯೇ ಅಂದಾಜು ಸಮಿತಿ ಸದಸ್ಯರು ವಾಸ್ತವ್ಯ ಮತ್ತಿತರ ಸೌಕರ್ಯಗಳನ್ನು ಸ್ವಂತವಾಗಿ ಒದಗಿಸಿಕೊಳ್ಳಲಿದೆ ಎಂದು ಅಲ್ಲಿನ ವಿಧಾನಸಭೆ ಸಚಿವಾಲಯಕ್ಕೆ ತಿಳಿಸಿದೆ ಎಂಬ ವಿಚಾರವನ್ನು ಕರ್ನಾಟಕ ವಿಧಾನಸಭೆ ಸಚಿವಾಲಯದ ಮೂಲಗಳು ‘ದಿ ಸ್ಟೇಟ್‌’ಗೆ ತಿಳಿಸಿವೆ.

ಅಂದಾಜು ಸಮಿತಿಯ ೧೮ ಸದಸ್ಯರ ಪೈಕಿ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸಗೌಡ, ಸತೀಶ್‌ ಎಲ್ ಜಾರಕಿಹೊಳಿ, ಕೌಜಲಗಿ ಮಹಾಂತೇಶ್‌ ಶಿವಾನಂದ್‌, ಪ್ರತಾಪಗೌಡ ಪಾಟೀಲ್‌, ಕೆ. ರಘುಪತಿ ಭಟ್‌, ಅಭಯ್ ಪಾಟೀಲ್‌, ಡಾ. ಶಿವರಾಜ್‌ ಪಾಟೀಲ್‌, ಶ್ರೀಮಂತ ಬಾಳಸಾಹೇಬ್‌ ಪಾಟೀಲ್‌ ಅವರು ಅಧ್ಯಯನ ಪ್ರವಾಸದಲ್ಲಿದ್ದಾರೆ. ಮಧ್ಯ ಪ್ರದೇಶದ ಭೋಪಾಲ್‌, ಒಡಿಶಾ ಮತ್ತು ನವದೆಹಲಿಗೆ ಈ ತಂಡ ಭೇಟಿ ನೀಡಲಿದೆ.

ಪ್ರವಾಸದ ಕಾರ್ಯಕ್ರಮ ಪಟ್ಟಿ ಪ್ರಕಾರ ಇಂದು ಸಂಜೆ ೬.೪೦ಕ್ಕೆ ಮುಂಬೈನಿಂದ ವಿಮಾನದಲ್ಲಿ ಪ್ರಯಾಣ ಬೆಳೆಸುವ ತಂಡ, ರಾತ್ರಿ ೮.೧೦ಕ್ಕೆ ಭೋಪಾಲ್‌ನಲ್ಲಿ ತಂಗಲಿದೆ. ನಾಳೆ ಅಂದರೆ ಗುರುವಾರ ಬೆಳಗ್ಗೆ ೧೦ಕ್ಕೆ ಮಧ್ಯಪ್ರದೇಶ ವಿಧಾನಸಭೆಯಯ ಸ್ಪೀಕರ್‌ ಅವರೊಂದಿಗೆ ಸಭೆ ನಡೆಸಲಿದ್ದು, ಮಧ್ಯಾಹ್ನ ೩.೦೦ರಿಂದ ಸಂಜೆ ೬ರವರೆಗೆ ಭೋಪಾಲ್‌ ನಲ್ಲಿನ ಸ್ಮಾರ್ಟ್‌ ರಸ್ತೆಗಳು, ಬೈಸಿಕಲ್‌ ಟ್ರಾಕ್ಸ್‌ ಗಳನ್ನು ವೀಕ್ಷಿಸಲಿದೆ. ಶುಕ್ರವಾರ ಬೆಳಗ್ಗೆ ೮.೦೦ಕ್ಕೆ ಭೋಪಾಲ್‌ ನಿಂದ ಹೊರಡುವ ಸಮಿತಿ ಸದಸ್ಯರು ೯.೨೫ಕ್ಕೆ ದೆಹಲಿಗೆ ಬಂದಿಳಿಯಲಿದ್ದಾರೆ. ಅಲ್ಲಿಂದ ೧೧.೦೫ಕ್ಕೆ ವಿಮಾನದ ಮೂಲಕ ಭುವನೇಶ್ವರ್‌ ಗೆ ಮಧ್ಯಾಹ್ನ ೧.೧೦ಕ್ಕೆ ತಲುಪಲಿದ್ದಾರೆ. ಮಧ್ಯಾಹ್ನ ೩.೦೦ಕ್ಕೆ ಭುವನೇಶ್ವರದಲ್ಲಿರುವ ಕಮಾಂಡ್‌ ಅಂಡ್‌ ಕಂಟ್ರೋಲ್‌ ಸ್ಮಾರ್ಟ್ ಜನಪಥ್‌ ಸಾರ್ವಜನಿಕ ಸೇವೆ ಕೇಂದ್ರವನ್ನು ವೀಕ್ಷಿಸಿ ಅಲ್ಲಿಯೇ ತಂಗಲಿದ್ದಾರೆ.

ಶನಿವಾರ ಬೆಳಗ್ಗೆ ೮.೦೦ಕ್ಕೆ ಭುವನೇಶ್ವರದಿಂದ ರಸ್ತೆ ಮೂಲಕ(೬೬ ಕಿ ಮೀ) ಪ್ರಯಾಣ ಬೆಳೆಸುವ ಸಮಿತಿ ಸದಸ್ಯರು, ಕೋನಾರ್ಕ್ ಗೆ ಮಧ್ಯಾಹ್ನ ೧.೩೦ಕ್ಕೆ ತೆರಳಲಿದ್ದಾರೆ. ಕೊನಾರ್ಕ್ ನಿಂದ ಭುವನೇಶ್ವರ್‌ ಗೆ ಮಧ್ಯಾಹ್ನ ೩.೦೦ಕ್ಕೆ ಹಿಂದಿರುಗಲಿದ್ದಾರೆ. ೩.೩೦ಕ್ಕೆ ಒಡಿಶಾ ವಿಧಾನಸಭೆ ಸಚಿವಾಲಯದ ಸಭಾಂಗಣದಲ್ಲಿ ಸ್ಪೀಕರ್‌ ಅವರೊಂದಿಗೆ ಸಭೆ ನಡೆಸಲಿದ್ದಾರೆ. ರಾತ್ರಿ ೮.೨೫ಕ್ಕೆ ಭುವನೇಶ್ವರದಿಂದ ಹೊರಡುವ ಸಮಿತಿ ಸದಸ್ಯರು, ದೆಹಲಿಗೆ ಬಂದಿಳಿಯಲಿದ್ದಾರೆ. ಭಾನುವಾರ ಮಧ್ಯಾಹ್ನ ಅಕ್ಷರಧಾಮ ಅಥವಾ ಇದಕ್ಕೆ ಪರ್ಯಾಯವಾಗಿರುವ ಮತ್ತೊಂದು ಸ್ಥಳಕ್ಕೆ ತೆರಳಲಿದ್ದಾರೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ೪ ತಿಂಗಳ ನಂತರ ವಿಧಾನಸಭೆಯ ಅಂದಾಜು ಸಮಿತಿಯ ಸದಸ್ಯರು ಈ ವರ್ಷದಲ್ಲಿ ಮೊದಲ ಹೊರ ರಾಜ್ಯ ಪ್ರವಾಸ ಇದಾಗಿದೆ. ನವೆಂಬರ್‌ ನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಪೂರ್ಣಗೊಂಡ ಬಳಿಕ ಹೊರ ರಾಜ್ಯ ಪ್ರವಾಸ ಕೈಗೊಳ್ಳಬಹುದಿತ್ತು. ಆದರೆ ಅವಸರದಲ್ಲಿ ಈ ಪ್ರವಾಸ ಕೈಗೊಂಡಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More