ಶಬರಿಮಲೆ ತೀರ್ಪು; ವೋಟ್ ಬ್ಯಾಂಕ್ ಗಾಗಿ ಹೆಣಗುತ್ತಿರುವ ಕೇರಳದ ರಾಜಕಾರಣ

ಕೇರಳದಲ್ಲಿ ಧಾರ್ಮಿಕ ವಿಚಾರದಂತಹ ಸೂಕ್ಷ್ಮ ಸಂಗತಿಗಳು ಎದುರಾದಾಗ ಒಂದೋ ರಾಜಕೀಯ ಪಕ್ಷಗಳು ಸಮಾಜಕ್ಕೆ ಮನವರಿಕೆ ಮಾಡಿಕೊಡಲು ಹೆಣಗಬೇಕು. ಇಲ್ಲವೆ ತಾವೇ ಬದಲಾಗಿ ಬಿಡಬೇಕು. ಸದ್ಯ ಅಲ್ಲಿನ ಕೆಲ ಪಕ್ಷಗಳು ನಡೆಸುತ್ತಿರುವುದು ಬದಲಾಗಿ ಬಿಡುವ ಮತ ಗಳಿಕೆಯ ರಾಜಕಾರಣವನ್ನು

ಕೆಲವು ತೀರ್ಪುಗಳಿರುತ್ತವೆ. ಅವುಗಳು ತಮ್ಮ ಪರವಾಗಿ ಬಂದರೂ ವಿರುದ್ಧವಾಗಿ ಬಂದರೂ ಕೆಲವರಿಗೆ ಅದರಿಂದಾಗುವ ಲಾಭವೇ ಹೆಚ್ಚು. ಅದರಲ್ಲಿಯೂ ರಾಜಕೀಯ ಉದ್ದೇಶಗಳಿಗೆ ತೀರ್ಪನ್ನು ಬಳಸಿಕೊಳ್ಳುವವರಿಗೆ ಪ್ರಯೋಜನ ತುಸು ಹೆಚ್ಚು. ಅಂತಹ ಒಂದು ತೀರ್ಪು ಶಬರಿಮಲೆ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ್ದು. ಸೆಪ್ಟೆಂಬರ್ 28ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಲಿಂಗ ಸಮಾನತೆಯನ್ನು ಎತ್ತಿಹಿಡಿಯಿತು. ಅದು ಚಾರಿತ್ರಿಕ, ಮಹಿಳೆಯರ ಪರವಾದ ದೃಢ ಹೆಜ್ಜೆ ಎಂಬ ಮಾತುಗಳು ಕೇಳಿಬಂದವು. ಅದಾದ ಒಂದೆರಡು ದಿನಗಳಲ್ಲೇ ತೀರ್ಪಿಗೆ ಭಾರಿ ಅಪಸ್ವರ ವ್ಯಕ್ತವಾಯಿತು. ಕೆಲವರು ಧರ್ಮ ರಕ್ಷಣೆಯ ಹೆಸರಿನಲ್ಲಿ ತೀರ್ಪಿನ ವಿರುದ್ಧ ದನಿ ಎತ್ತತೊಡಗಿದರು. ಮಂಗಳೂರಿನಂತಹ ನಗರಗಳಲ್ಲೂ ಪ್ರತಿಭಟನಾ ಸೂಚಕ ಸಭೆಗಳು ನಡೆದವು. ಅಂತಹ ಪ್ರತಿಭಟನೆಗಳ ತೀವ್ರತೆ ದೊಡ್ಡಮಟ್ಟದಲ್ಲಿ ತಟ್ಟಿರುವುದು ಕೇರಳ ರಾಜ್ಯಕ್ಕೆ ಮತ್ತು ಅಲ್ಲಿನ ರಾಜಕಾರಣಕ್ಕೆ.

ಕೇರಳ ಬಹಳ ಹಿಂದಿನಿಂದಲೂ ವಿಚಿತ್ರ ಸನ್ನಿವೇಶವೊಂದನ್ನು ತನ್ನೊಳಗೆ ಕಟ್ಟಿಕೊಂಡು ಬಂದಿರುವ ರಾಜ್ಯ. ಅತಿ ಹೆಚ್ಚು ಸಾಕ್ಷರರನ್ನು ಹೊಂದಿರುವ ಆ ರಾಜ್ಯದಲ್ಲಿ ಅತಿ ಹೆಚ್ಚು ಕಂದಾಚಾರವಿದೆ. ಸಮಾನತೆಯ ಹಾಡನ್ನು ತುಸು ಜೋರಾಗಿಯೇ ಹಾಡುವ ಅಲ್ಲಿ ಪಾಳೆಗಾರಿಕೆ ಮನಸ್ಥಿತಿಯೂ ಸಾಕಷ್ಟಿದೆ. ವರ್ಗ ಭೇದವನ್ನು ಹೋಗಲಾಡಿಸಲು ಸಾಕಷ್ಟು ಹೋರಾಟಗಳು ನಡೆದಿದ್ದರೂ ಜಾತಿ ತಾರತಮ್ಯ ನಿಂತಿಲ್ಲ. ರಕ್ತಸಿಕ್ತ ರಾಜಕಾರಣವಂತೂ ಕೆಲ ದಶಕಗಳಿಂದೀಚೆಗೆ ಢಾಳಾಗಿಯೇ ಕಾಣುತ್ತಿದೆ. ಅಂತಹ ರಾಜ್ಯದಲ್ಲಿ ರಾಜಕೀಯ ಪಕ್ಷಗಳಿಗೆ ಒಂದು ಸವಾಲಿದೆ. ಧಾರ್ಮಿಕ ವಿಚಾರದಂತಹ ಸೂಕ್ಷ್ಮ ಸಂಗತಿಗಳು ಎದುರಾದಾಗ ಒಂದೋ ಅವು ಸಮಾಜಕ್ಕೆ ಮನವರಿಕೆ ಮಾಡಿಕೊಡಲು ಹೆಣಗಬೇಕು. ಇಲ್ಲವೇ ಸಮಾಜಕ್ಕೆ ತಕ್ಕಂತೆ ತಾವೇ ಟ್ರಿಮ್ ಆಗಿಬಿಡಬೇಕು. ಕೇರಳದಲ್ಲಿ ರಾಜಕೀಯ ಎಂಬುದು ಇವೆರಡರ ನಡುವೆ ಓಲಾಡುವ ವಸ್ತು.

ಶಬರಿಮಲೆ ತೀರ್ಪಿನ ನಂತರ ಅಲ್ಲಿ ಒಂದು ರೀತಿಯ ರಾಜಕೀಯ ಅನಪೇಕ್ಷಿತ ವಾತಾವರಣ ನಿರ್ಮಾಣವಾಗಿದೆ. ಧಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ತೀರ್ಪನ್ನು ನೋಡುತ್ತಿವೆ. ಸಂಘಪರಿವಾರ ನೇರವಾಗಿ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ ಡಿಎಫ್) ಮೈತ್ರಿಕೂಟದ ಮೇಲೆ ದಾಳಿ ನಡೆಸಿದೆ. ಅಲ್ಲದೆ ರಾಜ್ಯದೆಲ್ಲೆಡೆ ಪ್ರತಿಭಟನೆ ಮುಷ್ಕರಗಳನ್ನು ನಡೆಸುತ್ತಿದೆ. ಕೇರಳದಲ್ಲಿ ಹೇಗಾದರೂ ಅಧಿಕಾರ ಹಿಡಿಯಬೇಕೆಂದಿರುವ ಬಿಜೆಪಿ ಮತ್ತು ಸಂಘಪರಿವಾರಕ್ಕೆ ತೀರ್ಪಿನಿಂದಾಗಿ ಉತ್ತಮ ಆಯುಧವೇ ದೊರೆತಂತಾಗಿದೆ. ಸಂಘಪರಿವಾರದ ಪರವಾಗಿರುವ ಮಹಿಳೆಯರು ಇದಕ್ಕೆ ದನಿಗೂಡಿಸಿದ್ದಾರೆ. “ತೀರ್ಪಿನ ಮರುಪರಿಶೀಲನೆಗೆ ಸರ್ಕಾರವೇ ಮೇಲ್ಮನವಿ ಸಲ್ಲಿಸಬೇಕು,” “ಹಿಂದೂಗಳ ವಿರೋಧಿಯಾಗಿರುವ ರಾಜ್ಯ ಸರ್ಕಾರ ಅರ್ಜಿದಾರರಿಗೆ ಬೆಂಬಲಕ್ಕೆ ನಿಂತಿದೆ”, “ತೀರ್ಪು ಮರುಪರಿಶೀಲನೆ ಆಗುವವರೆಗೂ ಅದನ್ನು ಜಾರಿ ಮಾಡಬಾರದು”, “ನಾಸ್ತಿಕರು ಸಲ್ಲಿಸಿರುವ ಅರ್ಜಿ” ಇತ್ಯಾದಿ ಆರೋಪಗಳನ್ನು ಸಂಘಪರಿವಾರ ಮಾಡುತ್ತಿದೆ.

ತೀರ್ಪನ್ನು ಕೂಲಂಕಷವಾಗಿ ಗಮನಿಸದೇ ವೃಥಾ ದಾಳಿ ನಡೆಸಲಾಗುತ್ತಿದೆ ಎಂಬುದು ಸಿಪಿಎಂ ನೇತೃತ್ವದ ಮಿತ್ರಪಕ್ಷಗಳ ವಾದ. ಎಲ್ ಡಿಎಫ್ ಗೆ ಇದೊಂದು ರೀತಿ ಅಗ್ನಿ ಪರೀಕ್ಷೆಯೂ ಹೌದು. ಸರ್ಕಾರ ಆಸ್ತಿಕರ ಪರವಾಗಿ ಇದೆ ಎನ್ನುತ್ತಿರುವ ಪಕ್ಷ ಮತ್ತೊಂದೆಡೆ ಪ್ರತಿಭಟನೆಯನ್ನು ಹೇಗಾದರೂ ಎದುರಿಸಲು ಸಜ್ಜಾಗಿದೆ. ಹೀಗಾಗಿ ‘ವಿಷದೀಕರಣಂ’ ಎಂಬ ಹೆಸರಿನ ಸ್ಪಷ್ಟೀಕರಣ ಸಭೆಗಳನ್ನು ನಡೆಸುತ್ತಿದೆ. ಇದೊಂದು ರೀತಿ ಪ್ರತಿಭಟನೆಯನ್ನು ವಿರೋಧಿಸುವ ಸಭೆ. ಕಣ್ಣೂರು ಲೋಕಸಭಾ ಕ್ಷೇತ್ರದ ಸಿಪಿಎಂ ಸಂಸದೆ ಪಿ ಕೆ ಶ್ರೀಮತಿ ಟೀಚರ್ ಅವರು ಪತ್ತನಂತಿಟ್ಟದಲ್ಲಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ “ಮಹಿಳೆಯರು ತೀರ್ಪಿನ ವಿರುದ್ಧ ಪ್ರತಿಭಟಿಸುವುದು ಒಂದು ರೀತಿ ಆತ್ಮಹತ್ಯೆ ಮಾಡಿಕೊಂಡಂತೆ” ಎಂದಿದ್ದಾರೆ.

ಇತ್ತ ರಾಜ್ಯದ ಕಾಂಗ್ರೆಸ್ ಪಕ್ಷದ್ದು ಎಲ್ಲಿಯೂ ಸಲ್ಲದ ಸ್ಥಿತಿ. ಕಾಂಗ್ರೆಸ್ ನ ರಾಷ್ಟ್ರಮಟ್ಟದ ನಾಯಕರು ತೀರ್ಪನ್ನು ಸ್ವಾಗತಿಸಿದ್ದರೂ ಕೇರಳ ಕಾಂಗ್ರೆಸ್ ಅದನ್ನು ವಿರೋಧಿಸಿದೆ. ಕೇರಳದಲ್ಲಿ ಕಾಂಗ್ರೆಸ್ ಗೆ ಸಿಪಿಎಂ ರಾಜಕೀಯ ಎದುರಾಳಿ. ಇನ್ನೂ ಕಣ್ಣುಬಿಡದ ಬಿಜೆಪಿಗಿಂತಲೂ ಸಿಪಿಎಂ ಅನ್ನು ಎದುರಿಸುವುದು ಅದಕ್ಕೆ ಮುಖ್ಯ. ಮುಂದೆ ಅಧಿಕಾರ ಹಿಡಿಯುವ ನಿಟ್ಟಿನಲ್ಲೂ ಈ ವಿರೋಧ ಅನಿವಾರ್ಯ ಎಂದು ಅದು ಭಾವಿಸಿದಂತಿದೆ. ಆದರೆ ಆ ನಿಲವು ಕಾಂಗ್ರೆಸ್ ಗೆ ಲಾಭ ಮಾಡಿಕೊಡುವುದಕ್ಕಿಂತಲೂ ಹೆಚ್ಚಾಗಿ ಬಿಜೆಪಿ ಆರೆಸ್ಸೆಸ್ ಗೆ ಅನುಕೂಲ ಮಾಡಿಕೊಡಲಿದೆ ಎಂಬುದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಕಿವಿಮಾತು. ಇದು ದೇಶದ ಜಾತ್ಯತೀತ ಮೌಲ್ಯಗಳಿಗೆ ಪೆಟ್ಟು ನೀಡಲಿದೆ ಮತ್ತು ಅದು ಸಂವಿಧಾನದತ್ತವಾದ ಸಮಾನತೆಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯ ಪ್ರಶ್ನೆ ಬಂದಾಗಲೆಲ್ಲಾ ಸಕಾರಾತ್ಮಕವಾಗಿ ಸ್ಪಂದಿಸುವ ಯೆಚೂರಿ ಅವರು ಕೇರಳ ಕಾಂಗ್ರೆಸ್ ಕುರಿತು ಹೇಳಿರುವ ಮಾತು ಗಮನಾರ್ಹ. ಆದರೆ ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವನ್ನು ಕಾಂಗ್ರೆಸ್ ಹೊಂದುವುದು ಅನುಮಾನ ಎಂಬುದಕ್ಕೆ ಕೇರಳದ ಈ ಘಟನೆ ಮತ್ತೊಂದು ನಿದರ್ಶನವಷ್ಟೇ. ರಾಜ್ಯದಲ್ಲಿ ಮೃದು ಹಿಂದುತ್ವದ ಪರ ಇರುವುದನ್ನು ಸಾಬೀತುಪಡಿಸಿಕೊಳ್ಳಲು ಅದು ಹೊರಟಂತಿದೆ.

ಶಬರಿಮಲೆ ವಿಚಾರದಲ್ಲಿ ಮೂರೂ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿ ವೋಟ್ ಬ್ಯಾಂಕ್ ಗಾಗಿ ನಡೆಸುತ್ತಿರುವ ರಾಜಕಾರಣ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಸಂಘಪರಿವಾರ ಒಂದು ದಿಕ್ಕಿನಲ್ಲಿ ನಿಂತು ರಾಜಕಾರಣ ಮಾಡಿದರೆ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ನಿಲ್ಲುವ ಅನಿವಾರ್ಯತೆ ಎಲ್ ಡಿಎಫ್ ಮೈತ್ರಿಕೂಟದ್ದು. ಈ ಎರಡರಲ್ಲಿ ಯಾವ ದಿಕ್ಕಿನತ್ತ ಮುನ್ನಡೆದರೆ ತನಗೆ ಹೆಚ್ಚು ಲಾಭ ಎಂಬ ಲೆಕ್ಕಾಚಾರ ರಾಜ್ಯ ಕಾಂಗ್ರೆಸ್ ಪಕ್ಷದ್ದು. ಇದರ ನಡುವೆ ಕಳೆದು ಹೋಗಿರುವುದು ಸಮಾಜ ಸುಧಾರಣೆ, ಲಿಂಗ ಸಮಾನತೆ, ಮಹಿಳಾ ಹಕ್ಕು ಎಂಬ ಆದರ್ಶ.

ಇದನ್ನೂ ಓದಿ : ಶಬರಿಮಲೆ ಅಯ್ಯಪ್ಪಸ್ವಾಮಿಯ ಐತಿಹ್ಯ ಕಥನ ಮತ್ತು ಲೈಂಗಿಕ ಬಯಕೆ

ಇದರ ಆಚೆಗೆ ಅಲ್ಲಿನ ಸಮುದಾಯಗಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಶಬರಿಮಲೆ ಆಡಳಿತದ ಜವಾಬ್ದಾರಿ ಹೊತ್ತ ತಿರುವಾಂಕೂರು ದೇವಸ್ವಂ ಮಂಡಳಿ ತೀರ್ಪನ್ನು ಪ್ರಶ್ನಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿತ್ತು. ನಾಯರ್ ಸರ್ವೀಸ್ ಸೊಸೈಟಿ, ರಾಷ್ಟ್ರೀಯ ಅಯ್ಯಪ್ಪ ಭಕ್ತ ಮಂಡಳಿ ತೀರ್ಪನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದರೆ ಹಿಂದೂ ಈಳವ ಸಮುದಾಯದ ಪ್ರಬಲ ಸಂಘಟನೆ ಶ್ರೀ ನಾರಾಯಣ ಧರ್ಮ ಪರಿಪಾಲನಾ ಸಂಘ ಪ್ರತಿಭಟನೆಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದೆ. ಸಂಘಪರಿವಾರ ನೇತೃತ್ವದಲ್ಲಿ ನಡೆಯುತ್ತಿರುವ ವಿರೋಧ ಕೇವಲ ಮೇಲ್ಜಾತಿಗಳ ಪ್ರತಿಭಟನೆ ಎಂದು ಸಮುದಾಯದ ಮುಖಂಡ ವೇಳಪ್ಪಳಿ ನಟೇಶನ್ ತಿಳಿಸಿದ್ದಾರೆ. ಸಣ್ಣ ಸಣ್ಣ ಸಮುದಾಯಗಳಿಗೆ ಇರುವ ಸ್ಪಷ್ಟತೆಯೂ ಕೇರಳದ ಕೆಲವು ಪ್ರಮುಖ ರಾಜಕೀಯ ಪಕ್ಷಗಳಿಗೆ ಇಲ್ಲದೇ ಇರುವುದು ವಿಪರ್ಯಾಸವೇ ಸರಿ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More