ಗುಜರಾತಿನಲ್ಲಿ ಹಿಂದಿ ಭಾಷಿಕ ಕಾರ್ಮಿಕರ ಮೇಲೆ ನಡೆದ ದಾಳಿಗಳಿಗೆ ರಾಜಕೀಯ ಬಣ್ಣ

ಉತ್ತರ ಭಾರತದ ಹಿಂದಿ ಭಾಷಿಗರನ್ನು ಗುರಿಯಾಗಿಸಿ ಗುಜರಾತಿನಲ್ಲಿ ನಡೆಯುತ್ತಿರುವ ದಾಳಿ ಬಿಜೆಪಿ ಪ್ರೇರಿತ ಎಂದು ವಿರೋಧ ಪಕ್ಷಗಳು ಹೇಳಿವೆ. ವಲಸಿಗರ ಮೇಲಿನ ದಾಳಿಗೆ ಕಾಂಗ್ರೆಸ್‌ ಕಾರಣವೆಂದು ಬಿಜೆಪಿ ನಾಯಕರು ಆಪಾದಿಸುತ್ತಿರುವ ವಿಚಾರ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ 

ಹಿಂದಿ ಭಾಷೆ ಮಾತನಾಡುವ ಉತ್ತರ ಭಾರತದ ಕಾರ್ಮಿಕರನ್ನು ಗುರಿಯಾಗಿಸಿ ಗುಜರಾತ್‌ನಲ್ಲಿ ದಾಳಿ ನಡೆಸಲಾಗಿದ್ದು, ಈವರೆಗೂ ಬಿಹಾರ ಮತ್ತು ಉತ್ತರ ಪ್ರದೇಶಗಳಿಗೆ ಸೇರಿದ ಸುಮಾರು 20 ಸಾವಿರ ವಲಸಿಗರು ತಮ್ಮ ರಾಜ್ಯಗಳಿಗೆ ಮರಳಿದ ವಿಚಾರ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಉಂಟುಮಾಡಿದೆ. ಗುಜರಾತಿನಿಂದ ನಿರ್ಗಮಿಸಿರುವ ಉತ್ತರ ಭಾರತದ ಹಿಂದಿ ಭಾಷಿಗರು ತಮ್ಮ ರಾಜ್ಯಕ್ಕೆ ವಾಪಸ್ಸಾಗುವಂತೆ ಮುಖ್ಯಮಂತ್ರಿ ವಿಜಯ್‌ ರೂಪಾನಿ ಮನವಿ ಮಾಡಿದ್ದಾರೆ. ಉತ್ತರ ಭಾರತೀಯರನ್ನು ಗುರಿಯಾಗಿಸಿ ಗುಜರಾತಿನಲ್ಲಿ ನಡೆಯುತ್ತಿರುವ ಹಿಂಸಾಚಾರ ಬಿಜೆಪಿ-ಆರೆಸ್ಸೆಸ್‌ ಪ್ರೇರಿತವೆಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ವಲಸಿಗರ ಮೇಲಿನ ದಾಳಿಗೆ ಕಾಂಗ್ರೆಸ್‌ ಕಾರಣವೆಂದು ಗುಜರಾತಿನ ಬಿಜೆಪಿ ನಾಯಕರು ಆಪಾದಿಸಿದ್ದಾರೆ. ಈ ಮಧ್ಯೆ ದಾಳಿಗೊಳಗಾಗಿರುವ ಹಿಂದಿ ಭಾಷಿಕ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಲು ರೈಲು, ಬಸ್ಸುಗಳ ನಿಲ್ದಾಣಗಳಲ್ಲಿ ಕಿಕ್ಕಿರಿದಿರುವ ದೃಶ್ಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಸೆ.28 ರಂದು, ಗುಜರಾತಿನ ಸಬರ್ಕಾಂತ್‌ನಲ್ಲಿ 14 ತಿಂಗಳ ಬಾಲಕಿಯೊಬ್ಬಳ ಮೇಲೆ ಬಿಹಾರ ಮೂಲದ ಕಾರ್ಮಿಕನಿಂದ ಅತ್ಯಾಚಾರ ನಡೆದಿತ್ತು. ಆ ಹಿನ್ನೆಲೆಯಲ್ಲಿ ಉತ್ತರ ಭಾರತದ ವಲಸಿಗರನ್ನು ಗುರಿಯಾಗಿಸಿ ಗಾಂಧಿನಗರ, ಅಹ್ಮದಾಬಾದ್,‌ ಪಠಾಣ್‌, ಸಬರ್‌ಕಾಂತ್ ಮತ್ತು ಮೆಹಸನಾ ಜಿಲ್ಲೆಗಳಾದ್ಯಂತ ವ್ಯಾಪಕ ಹಿಂಸಾಚಾರ ಭೂಗಿಲೆದ್ದಿತು. ತಮ್ಮನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳ ಬಗ್ಗೆ ಆತಂಕಗೊಂಡಿದ್ದ ಬಿಹಾರ, ಉತ್ತರ ಪ್ರದೇಶ ಮೂಲದ ಸಾವಿರಾರು ಕಾರ್ಮಿಕರು ಗುಜರಾತ್‌ ಅನ್ನು ತೊರೆದಿದ್ದರು. ಗುಜರಾತ್‌ನಲ್ಲಿ ತಮಗೆ ಭದ್ರತೆ ಇಲ್ಲವೆಂಬ ಕಾರಣ 50 ಸಾವಿರ ಹಿಂದಿ ಭಾಷಿಗರು ರಾಜ್ಯದಿಂದ ನಿರ್ಗಮಿಸಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ವಲಸಿಗರ ಮೇಲೆ ದಾಳಿ ನಡೆಸಿದ ಅರೋಪದ ಮೇಲೆ ಇಲ್ಲಿವರೆಗೆ 431 ಮಂದಿಯನ್ನು ಬಂಧಿಸಲಾಗಿದ್ದು, ವಿಶೇಷ ಪೊಲೀಸು ಪಡೆಯ 17 ತುಕಡಿಗಳನ್ನು ಗಲಭೆ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಅತ್ಯಾಚಾರ ಘಟನೆ ನಂತರ ಭುಗಿಲೆದ್ದ ಹಿಂಸಾಚಾರಕ್ಕೆ ಗುಜರಾತ್‌ ಕ್ಷತ್ರಿಯ ಸಮುದಾಯದ ಮುಖ್ಯಸ್ಥ, ಕಾಂಗ್ರೆಸ್‌ ಶಾಸಕ ಅಲ್ಪೇಶ್‌ ಠಾಕೂರ್‌ ಅವರು ಪ್ರಚೋದನೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಉತ್ತರ ಗುಜರಾತಿನ ಜಿಲ್ಲೆಗಳಲ್ಲಿ ಹಿಂಸಾಚಾರ ಬುಗಿಲೆದ್ದಿವೆ ಎಂದು ಬಿಜೆಪಿ ಹೇಳಿತ್ತು. ಬಿಜೆಪಿಯ ಆರೋಪ ತಳ್ಳಿಹಾಕಿದ್ದ ಅಲ್ಪೇಶ್‌ ಠಾಕೂರ್, “ಗುಜರಾತ್‌ ಎಲ್ಲರಿಗೂ ಸೇರಿದೆ. ಹೊರಗಿನಿಂದ ಬಂದವರು ನಮ್ಮ ಸಹೋದರರು. ರಾಜ್ಯದಲ್ಲಿ ಶಾಂತಿ ಕಾಪಾಡಬೇಕಿದೆ,” ಎಂದಿದ್ದಾರೆ

ಗುಜರಾತ್‌ ಹಿಂಸಾಚಾರ ಖಂಡಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಲಸಿಗ ಕಾರ್ಮಿಕರನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ ಸಮರ್ಥಿನೀಯವಲ್ಲ ಎಂದಿದ್ದಾರೆ. “ಬಡತನಕ್ಕಿಂತ ದೊಡ್ಡ ಭಯ ಮತ್ತೊಂದಿಲ್ಲ. ಹೆಚ್ಚುತ್ತಿರುವ ನಿರುದ್ಯೋಗವೇ ಗುಜರಾತ್‌ ಹಿಂಸಾಚಾರಕ್ಕೆ ಮೂಲ ಕಾರಣ. ಮುಚ್ಚುತ್ತಿರುವ ಕಾರ್ಖಾನೆಗಳು ಗುಜರಾತ್‌ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿವೆ. ವಲಸಿಗರ ಮೇಲೆ ನಡೆಯುತ್ತಿರುವ ಹಿಂಸಾಚಾರವು ಅಲ್ಲಿನ ವ್ಯವಸ್ಥೆ ಮತ್ತು ಆರ್ಥಿಕತೆ ಹದಗಡುತ್ತಿರುವ ಸೂಚನೆ,” ಎಂದು ರಾಹುಲ್‌ ಗಾಂಧಿ‌ ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್‌ ಬೆಳವಣಿಗಳ ಬಗ್ಗೆ ಮೌನವಾಗಿರುವ ಪ್ರಧಾನಿ ಮೋದಿ ಅವರ ನಡೆಯನ್ನು ಖಂಡಿಸಿರುವ ಬಿಹಾರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು, “ಪ್ರೀತಿಯ ಮೋದಿಯವರೇ, 2014 ರಲ್ಲಿ ದೇಶಕ್ಕೆ ಮಾರಿದ ‘ಗುಜರಾತಿನ ಅದ್ಬುತ ಪ್ರಪಂಚ’ ಇದೇನಾ? ಗುಜರಾತ್‌ನಲ್ಲಿ‌ ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಜನರ ಮೇಲೆ ದಾಳಿಗಳಾಗುತ್ತಿವೆ. ಆರೆಸ್ಸೆಸ್‌-ಬಿಜೆಪಿ ಜಂಟಿಯಾಗಿ ಗುಜರಾತ್‌ ಅನ್ನು ದಲಿತರು, ವಲಸಿಗರು, ಬಡವರು, ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಬಿತ್ತುವ ಪ್ರಯೋಗ ಶಾಲೆಯನ್ನಾಗಿ ಪರಿವರ್ತಿಸಿರುವುದು ನಾಚಿಕೆಗೇಡು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ ಘಟನಾವಳಿಗಳ ಬಗ್ಗೆ ಆತಂಕ ವ್ಯಕ್ತಡಿಸಿರುವ ಬಿಹಾರ ಸಿಎಂ ನಿತೀಶ್‌ ಕುಮಾರ್ ಅವರು ವ್ಯಕ್ತಿಯೊಬ್ಬ ಮಾಡಿದ ತಪ್ಪಿಗೆ ಸಮುದಾಯವನ್ನೇ ಗುರಿಯಾಗಿಸುವುದು ತಪ್ಪು ಎಂದಿದ್ದಾರೆ. ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರಿಗೆ ಕರೆ ಮಾಡಿರುವ ನಿತೀಶ್‌ ಕುಮಾರ್‌ ಗುಜರಾತ್‌ನಲ್ಲಿ ಹಿಂದಿ ಭಾಷಿಗರನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

ಗುಜರಾತ್‌ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರದೀಪ್‌ ಸಿಂಗ್‌ ಜಡೇಜ ಅವರು, “ರಾಜ್ಯದಲ್ಲಿ ನಡೆಯುತ್ತಿರುವ ದಾಳಿಗಳ ಹಿಂದೆ ಯಾರ ಕೈವಾಡ ಇದೆ ಎಂದು ಪತ್ತೆ ಹಚ್ಚಲಾಗುತ್ತಿದೆ. ಗುಜರಾತ್‌ನಲ್ಲಿ 22 ವರ್ಷಗಳಿಂದ ಅಧಿಕಾರದಲ್ಲಿ ಇಲ್ಲದವರು ಈ ಕೃತ್ಯಗಳ ಹಿಂದೆ ಇದ್ದಿರಬಹುದು,” ಎಂದು ಕಾಂಗ್ರೆಸ್‌ ವಿರುದ್ಧ ಪರೋಕ್ಷ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಎರಡು ಪುಟಗಳ ಬಹಿರಂಗ ಪತ್ರ ಬರೆದಿರುವ ಜೆಡಿಯು ಮುಖಂಡ ನೀರಜ್‌ ಕುಮಾರ್‌ ಅವರು ಗುಜರಾತಿನಲ್ಲಿ ಬಿಹಾರಗಳ ವಿರುದ್ದ ನಡೆಯುತ್ತಿರುವ ಹಿಂಸಾಚಾರಕ್ಕೆ ಕಾಂಗ್ರೆಸ್‌ ಕಾರಣ ಎಂದಿದ್ದಾರೆ. “ನಿಮ್ಮ ಪಕ್ಷದ ಶಾಸಕ ಅಲ್ಪೇಶ್‌ ಠಾಕೂರ್‌ ಅವರನ್ನು ಬಿಹಾರದ ರಾಷ್ಟ್ರೀಯ ಕಾರ್ಯದರ್ಶಿಗಳಲ್ಲಿ ಒಬ್ಬರನ್ನಾಗಿ ನೀವು ನೇಮಿಸಿದ್ದೀರಿ. ಆದರೆ, ಅಲ್ಪೇಶ್‌ ನೇತೃತ್ವದ ಗುಜರಾತ್‌ ಕ್ಷತ್ರಿಯ ಠಾಕೂರ್‌ ಸೇನಾ ಬಿಹಾರಿ ವಲಸಿಗರನ್ನು ಹೊರಹಾಕುವ ಕಾರ್ಯದಲ್ಲಿ ನಿರತವಾಗಿದೆ,” ಎಂದು ರಾಹುಲ್‌ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಗುಜರಾತ್‌ ಕಾನೂನು-ಸುವ್ಯವಸ್ಥೆಯ ಬಗ್ಗೆ ಮಾತನಾಡಿರುವ ಸಿಎಂ ವಿಜಯ್‌ ರೂಪಾನಿ ಅವರು, “ವಲಸೆ ಹೋಗಿರುವ ಹಿಂದಿ ಭಾಷಿಗರು ತಮ್ಮ ರಾಜ್ಯಕ್ಕೆ ವಾಪಸ್ಸಾಗಬೇಕು. ವಲಸಿಗ ಕಾರ್ಮಿಕರು ನೆಲಸಿರುವ ಎಲ್ಲ ಸ್ಥಳಗಳಿಗೆ ಭದ್ರತೆ ಒದಗಿಸಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ 450 ಜನರನ್ನು ಬಂಧಿಸಲಾಗಿದೆ. ವಲಿಸಿಗ ಕಾರ್ಮಿಕರು ಭಯಪಡುವ ಅವಶ್ಯಕತೆ ಇಲ್ಲ,” ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ದೊಂಬಿ ಹತ್ಯೆ ಅರಾಜಕತೆ ಸೂಚಿಸುತ್ತದೆ ಎಂದು ಕೇಂದ್ರಕ್ಕೆ ಎಚ್ಚರಿಸಿದ ಸುಪ್ರೀಂ ಕೋರ್ಟ್

ಇದೇ ವೇಳೆ ಗುಜರಾತ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿಯವರು ಮೌನ ಮುರಿಯದಿರುವುದರ ಬಗ್ಗೆ ರಾಜಕೀಯ ಹಾಗೂ ಸಾರ್ವಜನಿಕ ವಲಯಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೇಶದ ಸಮಗ್ರತೆಯ ಬಗ್ಗೆ ಮಾತನಾಡುವ ಮೋದಿಯವರು ತಮ್ಮದೇ ಗುಜರಾತ್‌ನಲ್ಲಿ ಭುಗಿಲೆದ್ದಿರುವ ಸಾಮೂಹಿಕ ಹಿಂಸಾಚಾರದ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆ ಕೇಳಿಬಂದಿದೆ. ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶಗಳಿಂದ ವಲಸೆ ಹೋಗಿರುವ ಕಾರ್ಮಿಕರು ಗುಜರಾತ್‌ನ ಕೈಗಾರಿಕೋದ್ಯಮಗಳಲ್ಲಿ ಕೆಳ ದರ್ಜೆಯ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಗುಜರಾತ್‌ನಲ್ಲಿ ಉದ್ಬವಿಸಿರುವ ಬಿಕ್ಕಟ್ಟು ಗುಜರಾತ್‌ನ ಆರ್ಥಿಕತೆಗೂ ಹಾನಿ ಮಾಡಲಿದ್ದು, ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಗುಜರಾತ್‌ ಫೆಡರೇಷನ್‌ ಆಫ್‌ ಕಾಮರ್ಸ್‌ ಮುಖ್ಯಮಂತ್ರಿಯವರಿಗೆ ಆಗ್ರಹಿಸಿದೆ.

ಬಾಂಗ್ಲಾದೇಶೀಯರ ವಿರುದ್ಧ ಬಿಜೆಪಿ ನಾಯಕ ಅಮಿತ್‌ ಶಾ ಅವರು ಆಡಿದ ದ್ವೇಷದ ಮಾತು, ಅಸ್ಸಾಂನಲ್ಲಿ ತಳಮಳ ಉಂಟುಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬಾಂಗ್ಲಾ ದೇಶೀಯರನ್ನು ಹೊರಹಾಕುವ ಅವರ ಮಾತಿನ ಪ್ರತಿಧ್ವನಿ ಈಗ ರಾಜ್ಯ ರಾಜ್ಯಗಳ ಜನರ ನಡುವೆಯೇ ಧ್ವೇಷ ಬಿತ್ತಿದೆ. ಈ ಹಿಂದೆ ಬಿಹಾರ ಮತ್ತು ಉತ್ತರ ಪ್ರದೇಶ ಕಾರ್ಮಿಕರ ವಿರುದ್ಧ ಮಹಾರಾಷ್ಟ್ರದಲ್ಲಿ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಶಾನ್ಯ ಭಾರತೀಯರನ್ನು ಗುರಿಯಾಗಿಸಿ ಬೆಂಗಳೂರಿನಲ್ಲಿ ಈ ಹಿಂದೆ ದಾಳಿಗಳು ನಡೆದಿದ್ದವು. ಇಂತಹ ಕರಾಳ ಇತಿಹಾಸದಿಂದ ರಾಜಕಾರಣಿಗಳು ಪಾಠ ಕಲಿತಂತೆ ಕಾಣುತ್ತಿಲ್ಲ. ಈಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವ ವಲಸಿಗರ ಮೇಲಿನ ದಾಳಿ ವಿಚಾರ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More