ಮಂಡ್ಯ, ರಾಮನಗರದಲ್ಲಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ಫಲಾಫಲಗಳೇನು?

ಹಳೇ ಮೈಸೂರು ಭಾಗದ ಚುನಾವಣಾ ಕಣದಲ್ಲಿ ನೇರ ಹಣಾಹಣಿ ಇರುವುದು ಕಾಂಗ್ರೆಸ್‌ -ಜೆಡಿಎಸ್‌ ನಡುವೆ. ಈಗ ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿಕೂಟ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಧರಿಸಿದೆ. ಇದು  ಸ್ಥಳೀಯ ಕಾಂಗ್ರೆಸ್‌ ನಾಯಕರಿಗೆ ಆತಂಕ ಹುಟ್ಟಿಸಿವೆ

ಐದು ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಬೇಡದ ಅತಿಥಿಯನ್ನು ಸತ್ಕರಿಸುವ ಒತ್ತಡಕ್ಕೆ ಸಿಲುಕಿರುವ ಕಾಂಗ್ರೆಸ್, ಜೆಡಿಎಸ್‌ ಮತ್ತು ಬಿಜೆಪಿ ನಾಯಕರಿಗೆ ಆಂತರಿಕ ಭಿನ್ನಮತ, ಅಸಮಾಧಾನಗಳನ್ನು ಹತ್ತಿಕ್ಕಬೇಕಾದ ಸಮಸ್ಯೆ ಎದುರಾಗಿದೆ. ಅದರಲ್ಲೂ ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ವಿಚಾರ ಅಧಿಕೃತಗೊಳ್ಳುತ್ತಿದ್ದಂತೆ ಕಾಂಗ್ರೆಸ್‌ನ ಕೆಲವು ನಾಯಕರು ಹಾಗೂ ಸ್ಥಳೀಯ ಮುಖಂಡರ ಎದೆಗೆ ಬೆಂಕಿ ಬಿದ್ದಂತಾಗಿದೆ. ಸಮ್ಮಿಶ್ರ ಸರ್ಕಾರ ಅಸ್ವಿತ್ವಕ್ಕೆ ಬಂದ ಐದು ತಿಂಗಳ ಹಿಂದೆಯೇ ಮೈತ್ರಿ ವಿಚಾರವು ಬಹುತೇಕ ಖಚಿತವಾಗಿದ್ದರೂ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ವಿಚಾರ ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾದ ಸುದ್ದಿಯಾಗಿಬಿಟ್ಟಿದೆ. ಎದುರಾಳಿ ಬೆಂಬಲಕ್ಕೆ ನಿಲ್ಲುವ ನಿರ್ಧಾರವು ಮಂಡ್ಯ ಮತ್ತು ರಾಮನಗರದಲ್ಲಿ ಜೆಡಿಎಸ್‌ ಕೈ ಮೇಲಾಗುವಂತೆ ಮಾಡಿದೆ. ಇದರಿಂದ ಸಹಜವಾಗಿ ಜೆಡಿಎಸ್ ಕಾರ್ಯಕರ್ತರು ಮತ್ತು ನಾಯಕರ ಸಂಭ್ರಮ ಹೆಚ್ಚಾಗಿದ್ದು, ಕಾಂಗ್ರೆಸ್ಸಿಗರ ಸ್ವಾಭಿಮಾನವನ್ನು ಕೆಣಕಲಾರಂಭಿಸಿದೆ.

ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ನಿರ್ಧಾರ “ಆತ್ಮಹತ್ಯೆ”ಯಲ್ಲದೆ ಬೇರೇನೂ ಅಲ್ಲ ಎಂದು ಜಿಲ್ಲಾ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್‌ನ ಪ್ರಮುಖ‌ ನಾಯಕರು ಬಹಿರಂಗವಾಗಿ ಹೇಳುತ್ತಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ರಾಜಕಾರಣದ ದೃಷ್ಟಿಯಿಂದ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರವು ದೂರದೃಷ್ಟಿಯಿಂದ ಕಾಂಗ್ರೆಸ್‌ಗೆ ನಷ್ಟವೇ ಹೊರತು ಲಾಭದ ಬಾಬತ್ತಲ್ಲ. “ತನ್ನ ಅಸ್ತಿತ್ವ ಕುಂದಿಸಿಕೊಂಡು ಎದುರಾಳಿ ಪಕ್ಷಗಳ ಬಲ ವೃದ್ಧಿಸಿಕೊಳ್ಳುವುದಕ್ಕೆ ಅನುಕೂಲ ಮಾಡಿಕೊಡುವುದು ರಾಷ್ಟ್ರೀಯ ಹಿತಾಸಕ್ತಿ ಹೇಗಾಗುತ್ತದೆ? ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವ ಜವಾಬ್ದಾರಿ ಕಾಂಗ್ರೆಸ್‌ಗೆ ಮಾತ್ರವಿದೆಯೇ” ಎಂಬ ಗಂಭೀರ ಪ್ರಶ್ನೆಗಳನ್ನು ಕಾರ್ಯಕರ್ತರು ಕೇಳಲಾರಂಭಿಸಿದ್ದಾರೆ.

ದಶಕಗಳಿಂದಲೂ ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಹಣಾಹಣಿ ಇದೆ. ಈಗ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ ಹುರಿಯಾಳು ಕಣಕ್ಕಿಳಿಯುವುದರಿಂದ ತಲೆತಲಾಂತರಗಳಿಂದ ಜಿದ್ದಾಜಿದ್ದಿ ನಡೆಸಿಕೊಂಡು ಬಂದ ಕಾಂಗ್ರೆಸ್‌ ಕಾರ್ಯಕರ್ತರನ್ನು ಜೆಡಿಎಸ್‌ ಅಭ್ಯರ್ಥಿಗೆ ಮತ ಹಾಕುವಂತೆ ಮಾಡುವುದು ಕಷ್ಟವಾಗಲಿದೆ ಎನ್ನುವುದು ಕಾಂಗ್ರೆಸ್‌ ವಿವರಣೆ. ನಾಯಕರ ನಡೆಗೆ ಬೇಸರಗೊಂಡಿರುವ ಕಾಂಗ್ರೆಸ್‌ ಕಾರ್ಯಕರ್ತರು ಮುಜುಗರ ತರುವ ಪ್ರಶ್ನೆಗಳನ್ನು ವರಿಷ್ಠರಿಗೆ ಎಸೆಯಲಾರಂಭಿಸಿದ್ದಾರೆ. ಕಾಂಗ್ರೆಸ್‌ ವರಿಷ್ಠರು ಪಕ್ಷದೊಳಿಗಿನ ಅಸಮಾಧಾನ ಸರಿಪಡಿಸಲು ಎಷ್ಟೇ ಪ್ರಯತ್ನಿಸಿದರೂ ಅದು ಗುಪ್ತಗಾಮಿನಿಯಂತೆ ಪ್ರವಹಿಸಬಹುದು. ಹಲವು ನಾಯಕರು ತಟಸ್ಥವಾಗಿ ಉಳಿಯುವ ನಿರ್ಧಾರಕ್ಕೆ ಬರಬಹುದು ಅಥವಾ ಗುಪ್ತವಾಗಿ ವಿರೋಧ ಪಕ್ಷವಾದ ಬಿಜೆಪಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಬಹುದು. ಇದರಿಂದ ಬಿಜೆಪಿಯ ನೆಲೆ ವೃದ್ಧಿಯಾಗಬಹುದು. ಒಟ್ಟಾರೆ ಮತದಾನದ ಪ್ರಮಾಣ ಕುಸಿಯಬಹುದು ಎಂದು ಹೇಳಲಾಗುತ್ತಿದೆ. ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆದ್ದರೂ ಬಿಜೆಪಿ ಬಲ ಹೆಚ್ಚುವ ಸಾಧ್ಯತೆ ಇದೆ. ಕಾಂಗ್ರೆಸ್‌ನಲ್ಲಿನ ನಾಯಕರು ಹಾಗೂ ಕಾರ್ಯಕರ್ತರು ಜೆಡಿಎಸ್‌ನೊಂದಿಗಿನ ಸುದೀರ್ಘ ರಾಜಕೀಯ ವೈಮನಸ್ಯದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಆಯ್ಕೆಯಾಗಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಜೆಡಿಎಸ್‌-ಕಾಂಗ್ರೆಸ್‌ನದ್ದು ಅನುಕೂಲಸಿಂಧು ರಾಜಕಾರಣ ಎಂದು ಶಾಶ್ವತವಾಗಿ ಬಿಜೆಪಿ ಜೊತೆ ಗುರುತಿಸಿಕೊಳ್ಳಬಹುದು ಎನ್ನುವ ಆತಂಕ ಕಾಂಗ್ರೆಸ್‌ ವಲಯದಲ್ಲಿದೆ.

ಇದನ್ನೂ ಓದಿ : ಕುಟುಂಬ ರಾಜಕಾರಣ ಮುಂದುವರಿಕೆಗೆ ರಹದಾರಿ ಆಗಲಿದೆಯೇ ಉಪಚುನಾವಣೆ?

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಸಿ ಎಂ ಲಿಂಗಪ್ಪ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಒಲವು ಹೊಂದಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನು ವರಿಷ್ಠರ ಗಮನಕ್ಕೂ ತಂದಿದ್ದಾರೆ. ಆದರೆ, ರಾಷ್ಟ್ರೀಯ ನಾಯಕರ ಅಣತಿಯಂತೆ ನಡೆಯಬೇಕಾದ ಒತ್ತಡಕ್ಕೆ ಸಿಲುಕಿರುವ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಿ ಕೆ ಶಿವಕುಮಾರ್‌ ಅವರು ಲಿಂಗಪ್ಪ ಅವರಿಗೆ ಅಡ್ಡಗಾಲಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಸಂಸದ ಹಾಗೂ ಡಿಕೆಶಿ ಸಹೋದರ ಡಿ ಕೆ ಸುರೇಶ್‌ ಅವರಿಗೂ ಹೊಂದಾಣಿಕೆ ಇಷ್ಟವಿಲ್ಲ ಎನ್ನಲಾಗಿದೆ. ಆದರೆ, ಸಮಕಾಲೀನ ಬೆಳವಣಿಗೆಗಳು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಈ ಮಧ್ಯೆ, ಲಿಂಗಪ್ಪ ಅವರ ಪುತ್ರ ಚಂದ್ರಶೇಖರ್‌ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆದರೆ, ಚಂದ್ರಶೇಖರ್‌ ಪಕ್ಷಾಂತರ ಹೆಚ್ಚಿನ ಹಾನಿ ಮಾಡುವುದಿಲ್ಲ ಎನ್ನಲಾಗುತ್ತಿದೆ. ಇನ್ನು ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿರುವ ಹಾಗೂ ಶಿವಕುಮಾರ್‌ ಅವರ ವ್ಯಾವಹಾರಿಕ ಪಾಲುದಾರರಾದ ಇಕ್ಬಾಲ್ ಹುಸೇನ್ ಅವರೂ‌ ಬಂಡಾಯವಾಗಿ ಸ್ಪರ್ಧಿಸಲು ಒಲವು ಹೊಂದಿದ್ದಾರೆ. ಆದರೆ, ಡಿ ಕೆ ಶಿವಕುಮಾರ್‌ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ತಿಳಿದುಬಂದಿದೆ.

ಮಂಡ್ಯ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರ ಹಾಗೂ ಮೈಸೂರು ಜಿಲ್ಲೆಯ ಕೆ ಆರ್‌ ನಗರ ವಿಧಾನಸಭಾ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿರುವ ಜೆಡಿಎಸ್‌ ಇಡೀ ಲೋಕಸಭಾ ಕ್ಷೇತ್ರವನ್ನು ಕೈವಶಮಾಡಿಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲಿನ ಅಂತರ ಭಾರಿ ದೊಡ್ಡಮಟ್ಟದಲ್ಲಿದೆ. ಆರು ತಿಂಗಳ ಸೀಮಿತ ಅವಧಿ ಹೊಂದಿರುವ ಚುನಾವಣೆ ಎದುರಿಸಲು ಕಾಂಗ್ರೆಸ್‌ ನಾಯಕರಲ್ಲಿ ಒಲವಿಲ್ಲ. ಆದರೆ, ೨೦೧೯ರ ಲೋಕಸಭಾ ಚುನಾವಣೆಯಲ್ಲೂ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಇರುವುದು ಕಾಂಗ್ರೆಸ್‌ ನಾಯಕರನ್ನು ಚಿಂತೆಗೀಡು ಮಾಡಿದೆ. “ದೇಶದ ಹಿತದೃಷ್ಟಿಯಿಂದ ಕೇಂದ್ರ ಕಾಂಗ್ರೆಸ್‌ ನಾಯಕರು ಕೈಗೊಂಡ ನಿರ್ಧಾರದಿಂದಾಗಿ ಮೂರು ನಾಲ್ಕು-ಜಿಲ್ಲೆಗಳಲ್ಲಿ ಅನಿವಾರ್ಯವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಇದರಿಂದ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ ಎಂಬುದು ವಾಸ್ತವ. ಜಿಲ್ಲೆಯ ಸಮಸ್ಯೆಯನ್ನು ವರಿಷ್ಠರ ಗಮನಕ್ಕೆ ತರಲಾಗಿದೆ. ನಮಗೆ ಸ್ವಾಭಿಮಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುವುದಿಲ್ಲ ಎಂಬುದನ್ನು ತಿಳಿಸಿ ಹೇಳಲಾಗಿದೆ” ಎಂದು ನಾಗಮಂಗಲ ಮಾಜಿ ಶಾಸಕ ಎನ್ ಚೆಲುವರಾಯಸ್ವಾಮಿ “ದಿ ಸ್ಟೇಟ್‌”ಗೆ ತಿಳಿಸಿದ್ದಾರೆ. ಚೆಲುವರಾಯಸ್ವಾಮಿ ಅವರ ಚರ್ಚೆಯನ್ನು ವಿಸ್ತರಿಸಿರುವ ಮತ್ತೊಬ್ಬ ಕಾಂಗ್ರೆಸ್‌ ನಾಯಕರು “ಮಂಡ್ಯದಲ್ಲಿ ಜೆಡಿಎಸ್‌ ಕಾರ್ಯಕರ್ತರ ಉಪಟಳ ವಿಪರೀತವಾಗಿದೆ. ಲೋಕಸಭಾ ಚುನಾವಣೆವರೆಗೆ ಅನಿವಾರ್ಯವಾಗಿ ಜೊತೆಯಾಗಿ ನಡೆಯಬೇಕಿದೆ. ಆನಂತರ ಎಲ್ಲವೂ ಸರಿಯಾಗಲಿದೆ” ಎಂದಿದ್ದು, ಮೈತ್ರಿ ಸರ್ಕಾರವೇ ಅಸ್ತಿತ್ವದಲ್ಲಿರುವುದಿಲ್ಲ ಎಂಬರ್ಥದ ಸಂದೇಶ ರವಾನಿಸಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More