‘ನಾನೂ ಹಿಂದೂ,’ ಎನ್ನುವ ಸಿದ್ದರಾಮಯ್ಯ ಸ್ವಮರುಕದ ಆಚೆಗೆ ಹೊರಬರುತ್ತಿಲ್ಲವೇಕೆ?| ಭಾಗ - ೨

ಸಿದ್ದರಾಮಯ್ಯನವರು ಚುನಾವಣಾ ಕಣದಲ್ಲಿ ಇಟ್ಟ ತಪ್ಪು ಹೆಜ್ಜೆ ಎಂದರೆ, ‘ನೀವು ಹಿಂದೂ ವಿರೋಧಿ’ ಎನ್ನುವ ಎದುರಾಳಿಗಳ ಆಪಾದನೆಗೆ, ‘ನಾನು ಸಹ ಹಿಂದೂ,’ ಎಂದು ಉತ್ತರ ನೀಡತೊಡಗಿದ್ದು. ಇದೇ ತಪ್ಪನ್ನು ಇಂದು ಕಾಂಗ್ರೆಸ್‌ ದೇಶದುದ್ದಗಲಕ್ಕೂ ಮಾಡುತ್ತಿದೆ; ತಕ್ಷಣದ ಪ್ರತಿಕ್ರಿಯೆಗಳನ್ನೇ ರಣತಂತ್ರವಾಗಿಸಲು ಹೊರಟಿದೆ

ಸಿದ್ದರಾಮಯ್ಯನವರು ಚುನಾವಣಾ ಕಣದಲ್ಲಿ ಇಟ್ಟ ತಪ್ಪು ಹೆಜ್ಜೆ ಎಂದರೆ, ‘ನೀವು ಹಿಂದೂ ವಿರೋಧಿ’, ಎನ್ನುವ ಬಿಜೆಪಿ ಹಾಗೂ ಸಂಘ ಪರಿವಾರದ ಆಪಾದನೆಗೆ, ‘ನಾನು ಸಹ ಹಿಂದೂ,’ ಎಂದು ಉತ್ತರ ನೀಡತೊಡಗಿದ್ದು. ಈ ಬಗೆಯ ಉತ್ತರ ಪ್ರಶ್ನೋತ್ತರಗಳ ವೇದಿಕೆಗೆ ಮಾತ್ರವೇ ಸರಿ ಹೊಂದಬಹುದೇನೋ, ಆದರೆ, ಚುನಾವಣಾ ತಂತ್ರಗಾರಿಕೆಗೆ ಅಲ್ಲ. ಇಲ್ಲಿ ಗಮನಿಸಬೇಕಾದ್ದು, ‘ನೀವು ಹಿಂದೂ ವಿರೋಧಿ’, ಎನ್ನುವುದು ಕೇವಲ ಒಂದು ಆಪಾದನೆಯಲ್ಲ, ಅದೊಂದು ಚುನಾವಣಾ ತಂತ್ರ. ಹಿಂದುತ್ವದ ಹೆಸರಿನಲ್ಲಿ ಎಲ್ಲ ಜಾತಿಗಳ ಮತಗಳನ್ನೂ ಕ್ರೋಢೀಕರಿಸುವ ತಂತ್ರ. ಅದೇ ವೇಳೆ, ಆ ಎಲ್ಲ ಹಿಂದೂಗಳಿಗೂ ಸಿದ್ದರಾಮಯ್ಯನವರು ಸಮಾನ ವಿರೋಧಿ ಎಂದು ಗುರುತಿಸುವ ಪ್ರಯತ್ನ. ಅದರೆ, ಈ ಚುನಾವಣಾ ತಂತ್ರಕ್ಕೆ, ‘ನಾನು ಸಹ ಹಿಂದೂ’ ಎನ್ನುವುದು ಒಂದು ಕೀರಲು ದನಿಯ ಉತ್ತರವಾಗಬಲ್ಲದೇ ಹೊರತು, ಪ್ರತಿತಂತ್ರವಾಗಲಾರದು ಎನ್ನುವುದು. ಈ ವಿಚಾರದ ಬಗ್ಗೆ, ಸಿದ್ದರಾಮಯ್ಯನವರಾಗಲಿ, ಕಾಂಗ್ರೆಸ್‌ ಆಗಲಿ ಈವರೆಗೂ ಗಂಭೀರವಾಗಿಲ್ಲ. ಹಾಗಾಗಿಯೇ ಕಾಂಗ್ರೆಸ್‌ ಈಗಲೂ ‘ಶಿವಭಕ್ತ’ ರಾಹುಲ್‌ ಎನ್ನುವಂತಹ ತಂತ್ರವನ್ನು ಅನುಸರಿಸಲು ಮುಂದಾಗಿದೆ!

ಹಾಗಾದರೆ, ಸಿದ್ದರಾಮಯ್ಯನವರಾಗಲಿ, ಕಾಂಗ್ರೆಸ್‌ ಆಗಲಿ ಇಂತಹ ಸನ್ನಿವೇಶದಲ್ಲಿ ಏನು ಮಾಡಬೇಕಿತ್ತು? ಅಥವಾ ಮುಂದಿನ ದಿನಗಳಲ್ಲಿ ಏನು ಮಾಡಬೇಕು? ಇದು ರಾಜಕಾರಣದ ಪ್ರಶ್ನೆಯೇ ಹೊರತು, ಖಂಡಿತವಾಗಿಯೂ ಪತ್ರಿಕೋದ್ಯಮದ ಪ್ರಶ್ನೆ ಅಲ್ಲ. ಈ ಪ್ರಶ್ನೆಗೆ ಕಾಂಗ್ರೆಸ್‌ ಅಥವಾ ಸಿದ್ದರಾಮಯ್ಯನವರು ನೀಡಿರುವ ಉತ್ತರ ಜನರಿಗೆ ಸಮಂಜಸವಾಗಿ ತೋರಿಲ್ಲವೇನೋ ಎನ್ನುವ ಭಾವನೆ ಚುನಾವಣಾ ಫಲಿತಾಂಶದಿಂದ ಕಂಡುಬಂದಿದೆ ಎಂದಷ್ಟೇ ಈ ಹಂತದಲ್ಲಿ ನಾವು ವಿವರಿಸಬಹುದೇ ಹೊರತು, ರಾಜಕಾರಣದ ತಂತ್ರ-ಪ್ರತಿತಂತ್ರಗಳ ಹೀಗಿರಬೇಕು ಎಂದು ಪತ್ರಕರ್ತರು ವಿವರಿಸಲಾಗದು. ಆದರೆ, ಇದೇ ವೇಳೆ, ರಾಜಕಾರಣದೆಡೆಗಿನ ಆಸಕ್ತಿಯಿಂದ ಇಲ್ಲಿ ನಾವು ಕೆಲವೊಂದು ಅಂಶಗಳನ್ನು ಗಮನಿಸಬಹುದು. ಯಾವುದೇ ಸ್ಥಳೀಯ ಪಕ್ಷವಾಗಲಿ, ರಾಷ್ಟ್ರೀಯ ಪಕ್ಷವಾಗಲಿ ತನ್ನ ‘ಐಡೆಂಟಿಟಿ’ಯನ್ನು ಬಿಟ್ಟುಕೊಟ್ಟು ರಾಜಕಾರಣ ಮಾಡುವಂತಹ ಕೆಲಸಗಳಿಗೆ ಮುಂದಾದಾಗ ಅದರ ನಿಷ್ಠಾವಂತ ಮತದಾರರಲ್ಲಿ ಗೊಂದಲಗಳು ಸಹಜವಾಗಿಯೇ ಮೂಡತೊಡಗುತ್ತವೆ. ಒಂದೊಮ್ಮೆ ನಿಜಕ್ಕೂ ತನ್ನ ಮೂಲಚಹರೆಯನ್ನು ಬದಲಾಯಿಸಿಕೊಳ್ಳಬೇಕು ಎನ್ನುವ ಇಚ್ಛೆ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರಿಗೆ ಪ್ರಾಮಾಣಿಕವಾಗಿದ್ದರೆ ಆಗ ಮಾತ್ರ ಇಂತಹ ಪ್ರಯತ್ನಗಳಿಗೆ ಕೈ ಹಾಕಬಹುದೇ ಹೊರತು, ಉಳಿದಂತೆ ಇದು ಸಾಧುವಲ್ಲ.

ಬಿಜೆಪಿ ಹಿಂದುತ್ವದ ರಾಜಕಾರಣ ಮಾಡಿ ಮುನ್ನೆಲೆಗೆ ಬಂದಿತು, ಬಿಎಸ್‌ಪಿ, ಶಿವಸೇನೆ, ದ್ರಾವಿಡ ಪಕ್ಷಗಳು ಐಡೆಂಟಿಟಿ ರಾಜಕಾರಣಕ್ಕೆ ಒತ್ತು ನೀಡಿದವು; ಕಮ್ಯುನಿಸ್ಟ್‌ ಪಕ್ಷಗಳು ಸಿದ್ಧಾಂತಕ್ಕೆ ಆತುಕೊಂಡವು, ಇನ್ನು ಇತ್ತೀಚೆಗೆ ಹುಟ್ಟಿದ ಕೇಜ್ರಿವಾಲ್‌ ಅವರ ಆಪ್‌ ಪಕ್ಷ ಭ್ರಷ್ಟಾಚಾರ ನಿರ್ಮೂಲನೆಯ ‘ಐಡಿಯಾ ಪಾಲಿಟಿಕ್ಸ್‌’ ಸುತ್ತ ತನ್ನನ್ನು ಕಟ್ಟಿಕೊಂಡಿತು. ಆದರೆ, ಕಾಂಗ್ರೆಸ್ ಪ್ರಸ್ತುತ ತನ್ನನ್ನು‌ ಯಾವುದರ ಸುತ್ತ ಕಟ್ಟಿಕೊಳ್ಳುತ್ತಿದೆ? ‘ನಾನು ಸಹ ಹಿಂದೂ’ ಎನ್ನುವ ಎಡಬಿಡಂಗಿ ರಾಜಕಾರಣದ ಸುತ್ತಲೇ? ಕಾಂಗ್ರೆಸ್‌ಗೆ ಹಾಗೂ ಅದರ ನಾಯಕರಿಗೆ ಬಹುತ್ವದ ಭಾರತೀಯತೆ, ಸೆಕ್ಯುಲರ್ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವುದು ಅಷ್ಟೊಂದು ದುಬಾರಿ ಎನಿಸತೊಡಗಿದೆಯೇ?

ಬಿಜೆಪಿ ಹಿಂದುತ್ವದ ರಾಜಕಾರಣ ಮಾಡಿ ಮುನ್ನೆಲೆಗೆ ಬಂದಿತು, ಬಿಎಸ್‌ಪಿ, ಶಿವಸೇನೆ, ದ್ರಾವಿಡ ಪಕ್ಷಗಳು ಐಡೆಂಟಿಟಿ ರಾಜಕಾರಣಕ್ಕೆ ಒತ್ತು ನೀಡಿದವು; ಕಮ್ಯುನಿಸ್ಟ್‌ ಪಕ್ಷಗಳು ಸಿದ್ಧಾಂತಕ್ಕೆ ಆತುಕೊಂಡವು, ಇನ್ನು ಇತ್ತೀಚೆಗೆ ಹುಟ್ಟಿದ ಕೇಜ್ರಿವಾಲ್‌ ಅವರ ಆಪ್‌ ಪಕ್ಷ ಭ್ರಷ್ಟಾಚಾರ ನಿರ್ಮೂಲನೆಯ ‘ಐಡಿಯಾ ಪಾಲಿಟಿಕ್ಸ್‌’ ಸುತ್ತ ತನ್ನನ್ನು ಕಟ್ಟಿಕೊಂಡಿತು. ಆದರೆ, ಕಾಂಗ್ರೆಸ್ ಪ್ರಸ್ತುತ ತನ್ನನ್ನು‌ ಯಾವುದರ ಸುತ್ತ ಕಟ್ಟಿಕೊಳ್ಳುತ್ತಿದೆ? ‘ನಾನು ಸಹ ಹಿಂದೂ’ ಎನ್ನುವ ಎಡಬಿಡಂಗಿ ರಾಜಕಾರಣದ ಸುತ್ತಲೇ? ಕಾಂಗ್ರೆಸ್‌ಗೆ ಹಾಗೂ ಅದರ ನಾಯಕರಿಗೆ ಬಹುತ್ವದ ಭಾರತೀಯತೆ, ಸೆಕ್ಯುಲರ್ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವುದು ಅಷ್ಟೊಂದು ದುಬಾರಿ ಎನಿಸತೊಡಗಿದೆಯೇ? ದೇಶವನ್ನು ಪ್ರಸಕ್ತ ಕಾಡುತ್ತಿರುವ ಸಮಸ್ಯೆಗಳ ವಿರುದ್ಧವಾಗಿ, ಜನಜೀವನವನ್ನು ದುರ್ಭರವಾಗಿಸುತ್ತಿರುವ ಸಂಗತಿಗಳ ವಿರುದ್ಧವಾಗಿ ಕಾಂಗ್ರೆಸ್‌ ನಾಯಕರಿಗೆ ಹೋರಾಟ ಮಾಡುವುದು ತ್ರಾಸದಾಯಕ ಎನಿಸಿದೆಯೇ? ಅಥವಾ ಅದೆಲ್ಲವನ್ನೂ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಯವರೂ ಸೇರಿದಂತೆ ಕೆಲವೇ ಕೆಲ ನಾಯಕರಿಗೆ ಒಪ್ಪಿಸಿ ಸುಮ್ಮನೆ ಕುಳಿತಿದ್ದಾರೆಯೇ? ‘ಐಡೆಂಟಿಟಿ’ ರಾಜಕಾರಣ ಮತ್ತು ಜನರ ಮನಸ್ಸನ್ನು ಹಿಡಿದಿಡಬಲ್ಲ ‘ಐಡಿಯಾ’ ರಾಜಕಾರಣ ಇವೆರೆರಡರಲ್ಲಿ ಯಾವುದಾದರೂ ಒಂದನ್ನು ಅಥವಾ ಸಾಧ್ಯವಾದರೆ ಎರಡನ್ನೂ ಹದವಾಗಿ ಮಾಡಲು ಕಾಂಗ್ರೆಸ್‌ ನಾಯಕರಿಗೆ ಏಕೆ ಸಾಧ್ಯವಾಗುತ್ತಿಲ್ಲ? ಈ ಪ್ರಶ್ನೆಯನ್ನು ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯನವರಂಥ ನಾಯಕರು ಕೇಳಿಕೊಳ್ಳಬೇಕಿದೆ. ಸಿದ್ದರಾಮಯ್ಯನವರು ಬಿಜೆಪಿಯ ವಿರುದ್ಧ, ಲಿಂಗಾಯತ ಧರ್ಮ ಅಸ್ತ್ರ, ಕನ್ನಡದ ಅಸ್ಮಿತೆ ಮುಂತಾದ ವಿಚಾರಗಳನ್ನಿರಿಸಿಕೊಂಡು ಕೆಲ ಮಟ್ಟಿಗೆ ಐಡೆಂಟಿಟಿ ರಾಜಕಾರಣವನ್ನು ಮಾಡುವ ಪ್ರಯತ್ನವನ್ನೇನೋ ಮಾಡಿದರು. ಆದರೆ, ಅದು ಕಾಂಗ್ರೆಸ್‌ನ ರಾಜಕಾರಣದೊಟ್ಟಿಗೆ ಮಿಳಿತವಾಗಲಿಲ್ಲ. ಬಹುಮುಖ್ಯವಾಗಿ ಅವರಿಗೆ ತಮ್ಮ ಸರ್ಕಾರದ ಯೋಜನೆಗಳ ದೊಡ್ಡ ಮಟ್ಟದ ಫಲಾನುಭವಿಗಳನ್ನೇ ಹಿಡಿದಿಟ್ಟುಕೊಳ್ಳಲು ಆಗಲಿಲ್ಲ. ಕಾಂಗ್ರೆಸ್‌ನ ಪಾರಂಪರಿಕ ಮತಗಳು ಚದುರುವುದನ್ನು, ಅಹಿಂದ ಮತ ಬುಟ್ಟಿ ಖಾಲಿಯಾಗುತ್ತಿರುವುದನ್ನೂ ಗುರುತಿಸಲಾಗಲಿಲ್ಲ.

ಈ ಸಮಸ್ಯೆ ಕೇವಲ ಕರ್ನಾಟಕದಲ್ಲಿ ಮಾತ್ರವೇ ಅಲ್ಲ, ದೇಶದೆಲ್ಲೆಡೆ ಕಾಂಗ್ರೆಸ್‌ಗೆ ಎದುರಾಗಿದೆ. ಅದರ ಪಾರಂಪರಿಕ ಮತದಾರರು, ಅದನ್ನು ತೊರೆದು ವಿವಿಧ ಐಡೆಂಟಿಟಿ ರಾಜಕಾರಣದ ಪಕ್ಷಗಳತ್ತ ಸಾಗುತ್ತಿದ್ದಾರೆ. ಇತ್ತ ಬಿಜೆಪಿ ತನ್ನ ಪಾರಂಪರಿಕ ಮತದಾರರನ್ನೂ ಉಳಿಸಿಕೊಂಡು, ವಿಕಾಸ, ರಾಷ್ಟ್ರೀಯತೆ, ಗೋರಕ್ಷಣೆ, ಕಪ್ಪುಹಣ ನಿರ್ಮೂಲನೆ ಮುಂತಾಗಿ ವಿವಿಧ ವಿಷಯಗಳನ್ನಿರಿಸಿಕೊಂಡು ಜನರ ಮುಂದೆ ಬರುತ್ತಿದೆ. ಕೆಲ ವಿಷಯಗಳನ್ನು ಬಿಜೆಪಿ ನೇರವಾಗಿ ಪ್ರಸ್ತಾಪಿಸಿದರೆ, ಹಲವು ವಿಚಾರಗಳನ್ನು ಸಂಘ ಪರಿವಾರ ತನ್ನದೇ ಶೈಲಿಯಲ್ಲಿ ಮುಂದೆ ಮಾಡುತ್ತದೆ. ಪರಿವಾರ ಹಾಗೂ ಪಕ್ಷ ಇವೆರಡನ್ನೂ ಒಂದೇ ಎಂದು ಜನತೆ ಭಾವಿಸುವುದರಿಂದ ಬಿಜೆಪಿಗೆ ಕೆಲವೊಮ್ಮೆ ಆಡಳಿತಾತ್ಮಕವಾಗಿ ಸಮಸ್ಯೆ ಉಂಟಾದರೂ ಚುನಾವಣಾ ರಾಜಕಾರಣದಲ್ಲಿ ಲಾಭವೇ ಆಗುತ್ತದೆ.

ಇದನ್ನೂ ಓದಿ : ‘ನಾನೂ ಹಿಂದೂ’ ಎನ್ನುವ ಸಿದ್ದರಾಮಯ್ಯ ಸ್ವಮರುಕದಿಂದ ಆಚೆ ಬರುತ್ತಿಲ್ಲವೇಕೆ? | ಭಾಗ ೧

ಇನ್ನು ಸಿದ್ದರಾಮಯ್ಯನವರ ವಿಷಯಕ್ಕೆ ಮರಳುವುದಾದರೆ, ಅವರು ಇಂದಿಗೂ ಸಾರ್ವಜನಿಕ ಸಮಾರಂಭಗಳಲ್ಲಿ ತಮ್ಮ ಸರ್ಕಾರ ನೀಡಿದ ಉತ್ತಮ ಆಡಳಿತದ ಹೊರತಾಗಿಯೂ ಅನುಭವಿಸಬೇಕಾಗಿ ಬಂದ ಸೋಲಿನ ಬಗ್ಗೆಯೇ ಮಾತನಾಡುತ್ತಿದ್ದಾರೆ. ಇದು ಸ್ವಮರುಕವಾಗಬಲ್ಲದೇ ಹೊರತು, ಹೋರಾಟದ ಕೆಚ್ಚನ್ನು ತೋರಿಸುವುದಿಲ್ಲ. ಸ್ವತಃ ಓರ್ವ ಯಶಸ್ವಿ ಅರ್ಥ ಸಚಿವರಾಗಿ ಹದಿಮೂರು ಬಾರಿ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯನವರಿಗೆ ಈವರೆಗೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಸವಾಲು ಹಾಕುವಂತಹ ಎಷ್ಟು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ, ಎಷ್ಟು ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ? ಜನಪರವಾಗಿ ಮಾತನಾಡ ಬೇಕಾದ ಜವಾಬ್ದಾರಿಯಿಂದ ಅವರು ನುಣುಚಿಕೊಳ್ಳುತ್ತಿರುವುದೇಕೆ? ತಮ್ಮ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನವನ್ನು ತರಲು ತೋರುವ ಉತ್ಸಾಹವನ್ನು, ಅಹಿಂದ ವರ್ಗಗಳನ್ನು ಸಂಘಟಿಸುವಲ್ಲಿ, ಈ ವರ್ಗಗಳು ಇಂದು ಎದುರಿಸುತ್ತಿರುವ ಅತಂಕಗಳನ್ನು ಸಮರ್ಥವಾಗಿ ವ್ಯಕ್ತಪಡಿಸುವಲ್ಲಿ ಏಕೆ ತೋರುತ್ತಿಲ್ಲ? ಸಿದ್ದರಾಮಯ್ಯನವರು ರಾಜಕಾರಣವನ್ನು ಗಮನಿಸಿದವರಿಗೆ ಅವರು ಅಧಿಕಾರದಿಂದ ದೂರವಾದಾಗಲೆಲ್ಲಾ, ಸಂಘಟನೆ ಹಾಗೂ ಹೋರಾಟಗಳಿಂದಲೂ ವಿಮುಖವಾಗುವುದು, ಆಸಕ್ತಿ ಕಳೆದುಕೊಳ್ಳುವುದು ಕಾಣುತ್ತದೆ. ಇದೇ ಕಾರಣಕ್ಕೆ, ಯಾವುದೇ ವಿಷಯ ಅವರನ್ನು ವೈಯಕ್ತಿಕವಾಗಿ ಕೆರಳಿಸದೆ ಹೋದರೆ, ರಾಜಕೀಯ ಲಾಭದ ಭಾಗವಾಗಿ ಕಾಣದೆ ಹೋದರೆ ಅವರು ಆ ಬಗ್ಗೆ ಗಮನಹರಿಸುವುದಿಲ್ಲ ಎನ್ನುವ ಆರೋಪವೂ ಅವರ ಮೇಲಿದೆ. ಲೋಕಸಭಾ ಚುನಾವಣೆ ಹತ್ತಿರವಾದಂತೆಲ್ಲಾ, ರಾಜ್ಯದಲ್ಲಿ ಸಿದ್ದರಾಮಯ್ಯನವರು ಸದ್ದು ಮಾಡಬೇಕು ಎಂದು ಕಾಂಗ್ರೆಸ್ ವರಿಷ್ಠರು ಬಯಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯನವರಾದರೋ ಸಿಡಿಯಲು ಬಯಸದ ಗೋಡೆಯ ಮೇಲೆ ಅಲಂಕಾರಕ್ಕೆ ನೇತುಹಾಕಿರುವ ತುಪಾಕಿಯಾಗಿರಲಷ್ಟೇ ಇಚ್ಛಿಸುತ್ತಿದ್ದಾರೆ. ಅಲ್ಲದೆ, ‘ನಾನು ಸಹ ಹಿಂದೂ’ ಎಂದು ಹೇಳುತ್ತಾ ತಮಗೆ ಒಗ್ಗದ ಅನುಕಂಪವೊಂದನ್ನು ಸೃಷ್ಟಿಸಿಕೊಳ್ಳಲು ಮುಂದಾಗಿದ್ದಾರೆ.

(ಮುಗಿಯಿತು)

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More