ಶಿಕ್ಷಣ ಸಚಿವ ಮಹೇಶ್ ಹಠಾತ್‌‌ ರಾಜಿನಾಮೆಗೆ ಅಸಲಿ ಕಾರಣಗಳು ಏನಿರಬಹುದು?

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಹಾಗೂ ಬಿಎಸ್‌ಪಿಯ ಏಕೈಕ ಶಾಸಕ ಎನ್‌ ಮಹೇಶ್‌ ಗುರುವಾರ ತಮ್ಮ ಸ್ಥಾನಕ್ಕೆ ಹಠಾತ್‌ ರಾಜಿನಾಮೆ ಸಲ್ಲಿಸಿದ್ದಾರೆ. ರಾಜಿನಾಮೆಗೆ ಪಕ್ಷ ಸಂಘಟನೆ, ಲೋಕಸಭಾ ಚುನಾವಣೆ ಕಾರಣ ನೀಡಿದ್ದರೂ ಅಸಲಿ ಕಾರಣ ಬೇರೆ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ

ರಾಜ್ಯದಲ್ಲಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಏಕೈಕ ಶಾಸಕ ಹಾಗೂ ಸಮ್ಮಿಶ್ರ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌ ಮಹೇಶ್‌ ಅವರು ಗುರುವಾರ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಹಠಾತ್‌ ರಾಜಿನಾಮೆ ಸಲ್ಲಿಸಿದ್ದಾರೆ. “ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿಲ್ಲ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಸಮಯ ನೀಡಬೇಕಾಗಿದೆ,” ಎನ್ನುವ ಎರಡು ಕಾರಣಗಳನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್‌ ನೀಡಿದ್ದಾರೆ. ತಮ್ಮ ರಾಜಿನಾಮೆಗೆ ಮಹೇಶ್‌ ಅವರು ಸುದ್ದಿಗೋಷ್ಠಿಯಲ್ಲಿ ನೀಡಿರುವ ಕಾರಣಗಳು ಒಪ್ಪಿತ ಎನಿಸಿದರೂ, ಬಿಎಸ್‌ಪಿ ನಾಯಕನ ನಿರ್ಧಾರದ ಹಿಂದೆ ಬೇರೆಯದೇ ಲೆಕ್ಕಾಚಾರವಿದೆ ಎನ್ನಲಾಗಿದೆ. ಇನ್ನು, ಮಹೇಶ್ ಅವರ ನಿರ್ಧಾರದ ಬಗ್ಗೆ ಕ್ಷೇತ್ರ ಹಾಗೂ ಸಚಿವಾಲಯದ ಅಧಿಕಾರಿಗಳಲ್ಲಿ ಅಚ್ಚರಿ ವ್ಯಕ್ತವಾಗಿದೆ.

ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಹೇಶ್ ಅವರು ಸಮ್ಮಿಶ್ರ ಸರ್ಕಾರದಲ್ಲಿ ಮಹತ್ವದ ಸ್ಥಾನದಲ್ಲಿದ್ದರೂ ತಮ್ಮ ಖಾತೆಯನ್ನು ಸಮರ್ಥವಾಗಿ ನಿಭಾಯಿಸಲು ಅವಕಾಶ ಇರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ಹಸ್ತಕ್ಷೇಪ, ಕಾನೂನಿನ ನೆಲೆಯಲ್ಲಿ ಕೆಲಸ ನಿರ್ವಹಿಸುವುದಾಗಿ ಕೆಲವು ಅಧಿಕಾರಿಗಳು ಹಠಕ್ಕೆ ಬಿದ್ದಿರುವುದು ಅವರ ಮೇಲಿನ ಒತ್ತಡ ಹೆಚ್ಚಿಸಿತ್ತು ಎನ್ನಲಾಗಿದೆ. ಇದನ್ನು ಸಹಿಸಲಾಗದೆ ಅವರು ರಾಜಿನಾಮೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಬಿಎಸ್ಪಿ ಏಕೈಕ ಶಾಸಕರಾಗಿ ಆಯ್ಕೆಯಾಗಿರುವ ಮಹೇಶ್‌ ಅವರ ಮೇಲೆ ಪಕ್ಷಕ್ಕೆ ಸಂಪನ್ಮೂಲ ಒದಗಿಸುವ ಭಾರ ಹೇರಲಾಗಿತ್ತು ಎನ್ನಲಾಗುತ್ತಿದೆ. ಆದರೆ, ಪಕ್ಷದ ಪದಾಧಿಕಾರಿಗಳು ಹಾಗೂ ವರಿಷ್ಠರ ಒತ್ತಡಗಳನ್ನು ನಿಭಾಯಿಸಲು ಸಮ್ಮಿಶ್ರ ಸರ್ಕಾರದಲ್ಲಿ ಅವರಿಗೆ ಪೂರಕ ವಾತಾವರಣ ಇರಲಿಲ್ಲ. ಬಾಹ್ಯ ಮತ್ತು ಆಂತರಿಕ ಒತ್ತಡಗಳಿಂದ ವಿಮುಖರಾಗಲು ಮಹೇಶ್ ಅವರು ರಾಜಿನಾಮೆ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗುತ್ತಿದೆ.

ಮಹೇಶ್ ಅವರ ರಾಜಿನಾಮೆ ವಿಚಾರ ಹೊರಬೀಳುತ್ತಿದ್ದಂತೆ ಪ್ರಮುಖ ವಿಚಾರವೊಂದು ಚರ್ಚೆಗೆ ಬಂದಿದೆ. ತಮ್ಮ ರಾಜಿನಾಮೆಗೆ ಮಹೇಶ್ ಅವರು ಪಕ್ಷ ಸಂಘಟನೆ ಕಾರಣ ನೀಡಿರುವುದೂ ಈ ಚರ್ಚೆಗೆ ಮತ್ತಷ್ಟು ಗ್ರಾಸ ಒದಗಿಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೀಸಲು ಕ್ಷೇತ್ರವಾದ ಚಾಮರಾಜನಗರದಲ್ಲಿ ಜೆಡಿಎಸ್‌-ಬಿಎಸ್‌ಪಿ ಅಭ್ಯರ್ಥಿಯಾಗಿ ಎನ್‌ ಮಹೇಶ್‌ ಸ್ಪರ್ಧೆ ಮಾಡಲಿದ್ದಾರೆ; ಕಾಂಗ್ರೆಸ್-ಜೆಡಿಎಸ್‌ ನಡುವಿನ ಮೈತ್ರಿ ಮುರಿದುಬಿದ್ದು ಜೆಡಿಎಸ್‌-ಬಿಎಸ್‌ಪಿ ಮೈತ್ರಿ ಉಳಿದರೆ ಮಹೇಶ್‌ ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಹಾಲಿ ಕಾಂಗ್ರೆಸ್‌ ಸಂಸದರಾದ ಆರ್‌ ಧ್ರುವನಾರಾಯಣ್‌ ಅವರಿಗೆ ಪಕ್ಷದ ಹೊರಗೆ ಮತ್ತು ಒಳಗೆ ಸಾಕಷ್ಟು ವಿರೋಧಿಗಳು ಹುಟ್ಟಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಬಂಡೆದ್ದು ಬಿಜೆಪಿ ಸೇರಿರುವ ವಿ ಶ್ರೀನಿವಾಸ್‌ ಪ್ರಸಾದ್ ಅವರು ಧ್ರುವನಾರಾಯಣ್‌ ಸೋಲಿಗೆ ಹಾತೊರೆಯುತ್ತಿದ್ದಾರೆ. ಇದರ ಮಧ್ಯೆ, ಮಾಜಿ ಸಚಿವ ಎಚ್‌ ಸಿ ಮಹದೇವಪ್ಪ ಅವರಿಗೂ ಧ್ರುವನಾರಾಯಣ್‌ ಅವರ ಮೇಲೆ ಅಸಮಾಧಾನವಿದೆ. ಬಿಜೆಪಿಯಿಂದ ಶಿವರಾಮ್‌ ಅವರು ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಒಟ್ಟಾರೆ ಪರಿಸ್ಥಿತಿ ಲಾಭ ಪಡೆದು ಸಂಸದರಾಗಿ ಆಯ್ಕೆಯಾಗುವ ಲೆಕ್ಕಾಚಾರ ಮಹೇಶ್‌ ಅವರದ್ದು ಎಂದು ಹೇಳಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು ರಾಷ್ಟ್ರಮಟ್ಟದಲ್ಲಿ ದೊಡ್ಡ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿಂದ ಸಾಧ್ಯವಾದಷ್ಟು ಸ್ಥಾನ ಗೆಲ್ಲುವ ಆಸೆ ಅವರಿಗೂ ಇದೆ. ಈ ನೆಲೆಯಲ್ಲಿ ಮಹೇಶ್‌ ಅವರಿಂದ ರಾಜಿನಾಮೆ ಕೊಡಿಸುವ ಕೆಲಸವನ್ನು ಮಾಯಾವತಿ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಸೋತರೂ ಮಹೇಶ್‌ ಅವರ ಶಾಸಕ ಸ್ಥಾನಕ್ಕೆ ಚ್ಯುತಿ ಆಗುವುದಿಲ್ಲವಾದ್ದರಿಂದ ಪ್ರಯತ್ನ ಮಾಡುವ ನಿರ್ಧಾರ ಮಾಡಿರಬಹುದು ಎನ್ನಲಾಗುತ್ತಿದೆ.

ಆದರೆ, ಪಕ್ಷದ ವಲಯದಲ್ಲಿ ಬೇರೆಯದೇ ಅಭಿಪ್ರಾಯ ವ್ಯಕ್ತವಾಗಿದೆ. “ಮಹೇಶ್‌ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ಹಾಗೂ ಚಾಮರಾಜನಗರ ಜಿಲ್ಲೆ ಉಸ್ತುವಾರಿ ನೀಡಿದ್ದರೆ ಅವರು ರಾಜಿನಾಮೆ ನೀಡುತ್ತಿರಲಿಲ್ಲ. ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಕೆಲಸ ಮಾಡಲು ಅವರು ಉತ್ಸುಕರಾಗಿದ್ದರು. ಆದರೆ, ರಾಜಕೀಯ ಹಿನ್ನಡೆಗಳನ್ನು ಅಳೆದು-ತೂಗಿ ಕೆಲವರು ಅವರಿಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮತ್ತು ಸಮಾಜ ಕಲ್ಯಾಣ ಸಚಿವಾಲಯ ತಪ್ಪಿಸಿದರು,” ಎಂಬ ಅಸಮಾಧಾನ ಬಿಎಸ್‌ಪಿ ವಲಯದಲ್ಲಿದೆ.

ಇದಕ್ಕೂ ಮುನ್ನ, ಹಿಂದುಳಿದ ವರ್ಗಗಳ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗ ಶೆಟ್ಟಿ ಹಾಗೂ ಮಹೇಶ್‌ ನಡುವೆ ಈಚೆಗೆ ಪಕ್ಷದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಸಮರ ನಡೆದಿತ್ತು. ಆನಂತರ ಮಧ್ಯಪ್ರದೇಶ, ಚತ್ತೀಸ್‌ಗಢ, ರಾಜಸ್ಥಾನದಲ್ಲಿ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದೂ ಮಹೇಶ್‌ ಅವರ ರಾಜಿನಾಮೆಗೆ ಪ್ರೇರೇಪಣೆ ನೀಡಿರಬಹುದು ಎನ್ನಲಾಗುತ್ತಿದೆ. ಒಟ್ಟಾರೆ ಇದೊಂದು ಯೋಜಿತ ತಂತ್ರ ಎನ್ನುವ ಮಾತುಗಳು ಕೇಳಿಬಂದಿವೆ. ಈ ಮಧ್ಯೆ, ಮಹೇಶ್ ರಾಜಿನಾಮೆಯಿಂದ ಪುಳಕಗೊಂಡಿರುವ ಬಿಜೆಪಿಯು ಸರ್ಕಾರ ರಚಿಸುವ ತನ್ನ ಕನಸಿಗೆ ಮತ್ತೆ ನೀರೆಯಲು ಇರುವ ಅವಕಾಶಗಳತ್ತ ಮುಖ ಮಾಡಿದೆ. ಸಚಿವ ಸಂಪುಟ ವಿಸ್ತರಣೆ ವಿಳಂಬದ ಲಾಭ ಹಾಗೂ ಮಹೇಶ್‌ ರಾಜಿನಾಮೆ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸತೊಡಗಿದೆ. ಮಹೇಶ್‌ ರಾಜಿನಾಮೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ, “ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರದ ಪತನಕ್ಕೆ ದಿನಗಣನೆ ಆರಂಭವಾಗಿದೆ,” ಎಂದಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More