ಮಹಾಮೈತ್ರಿ ಬೀಜಾಂಕುರ ಮಾಡಿದ ದೇವೇಗೌಡರಿಗೆ ಸಂಶಯ ಕಾಡುತ್ತಿರುವುದೇಕೆ?

ಬಿಜೆಪಿಯನ್ನು ಹೊರಗಿಟ್ಟು ಸಮ್ಮಿಶ್ರ ಸರ್ಕಾರ ರಚಿಸುವುದರೊಂದಿಗೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ಹುಟ್ಟುಹಾಕುವ ಕೆಲಸಕ್ಕೆ ಕೈಹಾಕಿದ್ದವರು ದೇವೇಗೌಡ. ಆದರೆ, ಇತ್ತೀಚಿನ ಬೆಳವಣಿಗಳನ್ನು ಸೂಕ್ಷ್ಮವಾಗಿ ಗ್ರಹಿಸಿರುವ ಅವರು, ಮಹಾಮೈತ್ರಿ ಸಾಫಲ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಒಳಗೊಂಡ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಮಣಿಸುವ ವಿಚಾರ ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವ್ಯಾಪಕ ಚರ್ಚೆಗೆ ಒಳಗಾಗಿತ್ತು. ಆದರೆ, ಆನಂತರ ಮಹಾಮೈತ್ರಿಯ ಮಾತುಗಳನ್ನಾಡಿದ ಪ್ರಾದೇಶಿಕ ನಾಯಕರ ನಡೆ-ನುಡಿಗಳು ಸಂಶಯಕ್ಕೆ ಎಡೆಮಾಡಿಕೊಟ್ಟಿವೆ. ಈಗ ಅದೇ ಅನುಮಾನವನ್ನು ಮಹಾಮೈತ್ರಿಯ ಬೀಜಾಂಕುರವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ವ್ಯಕ್ತಪಡಿಸಿದ್ದಾರೆ. “ಬಿಜೆಪಿ ಮತ್ತು ಶಿವಸೇನೆಯಂಥ ರಾಜಕೀಯ ಶಕ್ತಿಗಳನ್ನು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಿಂದ ಹೊರಗಿಡುವ ಉದ್ದೇಶದಿಂದ ರಾಷ್ಟ್ರೀಯ ಮಟ್ಟದಲ್ಲಿ ಮಹಾಮೈತ್ರಿ ರಚಿಸುವ ಸಂಬಂಧ ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದೆ. ಆದರೆ, ಅದು ರಾಷ್ಟ್ರಮಟ್ಟದಲ್ಲಿ ಜಾರಿಗೆ ಬರುವ ಬಗ್ಗೆ ಸಂಶಯವಿದೆ,” ಎಂದು ದೇವೇಗೌಡರು ಹೇಳಿರುವುದು ಮಹಾಮೈತ್ರಿ ಭವಿಷ್ಯ ಡೋಲಾಯಮಾನ ಎನ್ನುವ ಚರ್ಚೆ ಹುಟ್ಟುಹಾಕಿದೆ.

ಮಹಾತ್ಮ ಗಾಂಧೀಜಿ ಅವರ ೧೫೦ನೇ ಜನ್ಮಶತಮಾನೋತ್ಸವ ಹಾಗೂ ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ಅವರ ಜನ್ಮದಿನ ಅಂಗವಾಗಿ ಗುರುವಾರ ಆಯೋಜಿಸಲಾಗಿದ್ದ ‘ಇಂದಿನ ವ್ಯವಸ್ಥೆ-ಅವಸ್ಥೆ ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ದೇವೇಗೌಡರು ಸೂಚ್ಯವಾಗಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಾದ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌, ನ್ಯಾ.ಕುರಿಯನ್‌ ಜೊಸೆಫ್, ನ್ಯಾ.ಮದನ್ ಲೋಕುರ್ ಮತ್ತು ನಿವೃತ್ತ ನ್ಯಾಯಮೂರ್ತಿ ಜೆ ಚಲಮೇಶ್ವರ್ ಅವರು ಒಟ್ಟಾಗಿ ವರ್ಷದ ಆರಂಭದಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಡೆಯನ್ನು ಟೀಕಿಸಿದ್ದರು. ಭಾರತದ ನ್ಯಾಯಾಂಗ ಇತಿಹಾಸದಲ್ಲೇ ವಿಶಿಷ್ಟ ವಿದ್ಯಮಾನ ಎಂದೆನಿಸಿದ ಈ ಘಟನೆಯನ್ನು ಉಲ್ಲೇಖಿಸಿ, “ಇದಕ್ಕಾಗಿ ಮಹಾಮೈತ್ರಿ ರಚಿಸಬೇಕಾಗಿ ಬಂತು,” ಎಂದು ದೇವೇಗೌಡರು ಹೇಳಿದರು. ಕೇಂದ್ರ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಆರೋಪಗಳ ನಡುವೆಯೇ, ನ್ಯಾಯಾಂಗದ ಮೇಲೂ ಪರೋಕ್ಷವಾಗಿ ಪ್ರಭಾವ ಬೀರಲು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಯತ್ನಿಸಿತ್ತು ಎನ್ನುವ ಗಂಭೀರವಾಗಿ ಆಪಾದಗಳು ಕೇಳಿಬಂದಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ನಂತರ ಮಾಧ್ಯಮಗಳತ್ತ ಮಾತು ಹೊರಳಿಸಿದ ದೇವೇಗೌಡ, “ಮಾಧ್ಯಮಗಳು ಯಾವ ರೀತಿ ವರ್ತಿಸುತ್ತಿವೆ ಎಂಬುದನ್ನು ತಿಳಿಸಿ ಹೇಳುವ ಅಗತ್ಯವಿಲ್ಲ,” ಎನ್ನುವ ಮೂಲಕ ಬೇಸರ ವ್ಯಕ್ತಪಡಿಸಿದರು.

ಮಹಾಮೈತ್ರಿಯ ಬಗ್ಗೆ ದೇವೇಗೌಡರು ಸಂಶಯ ವ್ಯಕ್ತಪಡಿಸಲು ಸಕಾರಣಗಳಿವೆ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್‌ಗಢ ಮತ್ತು ತೆಲಗಾಂಣ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷವಾದ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷವು (ಬಿಎಸ್‌ಪಿ) ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳದೆ ಪ್ರತ್ಯೇಕವಾಗಿ ಚುನಾವಣೆ ಎದುರಿಸುವುದಾಗಿ ಘೋಷಿಸಿದೆ. ಇದೇ ಅಭಿಪ್ರಾಯವನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಹೇಳಿದ್ದರು. ಈಚೆಗೆ ದೆಹಲಿಯಲ್ಲಿ ನಡೆದ ಸಿಪಿಎಂ ಸಭೆಯಲ್ಲಿ ಪ್ರತ್ಯೇಕವಾಗಿ ಚುನಾವಣೆ ಎದುರಿಸುವ ನಿರ್ಣಯ ಮಾಡಲಾಗಿದೆ. ವಿಶಿಷ್ಟವೆಂದರೆ, ಈ ಪಕ್ಷಗಳ ಮುಖಂಡರೆಲ್ಲರೂ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದರು. ಆ ಮೂಲಕ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಟ್ಟಾಗಿ ನಿಲ್ಲಲಿವೆ ಎನ್ನುವ ಸಂದೇಶ ನೀಡಿದ್ದರು. ಆದರೆ, ಈಚೆಗಿನ ಎಲ್ಲ ಬೆಳವಣಿಗಳು ವಿರುದ್ಧವಾಗಿ ಸಂಭವಿಸುತ್ತಿರುವುದರಿಂದ ದೇವೇಗೌಡರು ಮಹಾಮೈತ್ರಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಜೊತೆಗೆ ರಾಜ್ಯದಲ್ಲಿ, ವಿಶೇಷವಾಗಿ ಹಳೆಯ ಮೈಸೂರು ಭಾಗದಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿಗೆ‌ ಸ್ಥಳೀಯ ಕಾಂಗ್ರೆಸ್‌ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು ಸವಾಲಾಗಿ ಪರಿಣಮಿಸಿರುವುದು ದೇವೇಗೌಡರನ್ನು ಕಂಗೆಡಿಸಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ೨೦೧೯ರ ಚುನಾವಣೆಗೆ ಬಿಜೆಪಿ ವಿರೋಧಿ ಚುನಾವಣಾಪೂರ್ವ ಮಹಾಮೈತ್ರಿ ಅಸಂಭವ?

ಇದಕ್ಕೂ ಮುನ್ನ, ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತಾ ರಚಿಸಿರುವ ‘ವರ್ತಮಾನ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ 'ದಿ ಸ್ಟೇಟ್‌' ಸಂಪಾದಕೀಯ ನಿರ್ದೇಶಕ ಸುಗತ ಶ್ರೀನಿವಾಸರಾಜು, “ಮಹಾತ್ಮ ಗಾಂಧಿ ಮತ್ತು ಜಯಪ್ರಕಾಶ್‌ ನಾರಾಯಣ್‌ ಅವರು ನೈತಿಕವಾಗಿ ಅಧಿಕಾರ ಬಳಸಿದರೇ ಹೊರತು ನಿಜವಾದ ಅಧಿಕಾರ ಹಿಡಿಯಲಿಲ್ಲ. ವ್ಯವಸ್ಥೆ ಮತ್ತು ಅವಸ್ಥೆಯನ್ನು ಉತ್ಕೃಷ್ಟವಾಗಿ ಪ್ರೀತಿಸುತ್ತಿದ್ದ ಮಹಾನ್‌ ನಾಯಕರು ಗಾಂಧಿ ಮತ್ತು ಜಯಪ್ರಕಾಶ್‌ ನಾರಾಯಣ್‌,” ಎಂದು ವಿಶ್ಲೇಷಿಸಿದರು.

“ನಾವು ಮಹಾತ್ಮರು, ಸ್ವಾಮೀಜಿಗಳು, ಜಗದ್ಗುರುಗಳನ್ನು ಹುಡುಕುತ್ತ ಹೊರಟಿದ್ದೇವೆ. ಆದರೆ, ಅದು ಇಂದಿನ ಅಗತ್ಯವಲ್ಲ. ಗಾಂಧೀಜಿ ಅವರಂಥ ಮಹಾನ್‌ ನಾಯಕರನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ ಬಿಹಾರದ ಕೃಷಿಕ ರಾಜ್‌ಕುಮಾರ್‌ ಶುಕ್ಲಾ ಅಂಥವರನ್ನು ಹುಡುಕಬೇಕಿದೆ. ಬ್ರಿಟಿಷರು ಭೂಮಿಯನ್ನು ರೈತರಿಗೆ ಭೋಗ್ಯಕ್ಕೆ ನೀಡಿ ಹೆಚ್ಚಿನ ಪಾಲನ್ನು ಸಂಗ್ರಹಿಸುತ್ತಿದ್ದರು. ಇದರ ವಿರುದ್ಧದ ಹೋರಾಟಕ್ಕಾಗಿ ರಾಜ್‌ಕುಮಾರ್‌ ಶುಕ್ಲಾ ಅವರು ಗಾಂಧೀಜಿ ಅವರನ್ನು ಬಿಹಾರದ ಚಂಪಾರಣ್ಯಕ್ಕೆ ಆಹ್ವಾನಿಸುತ್ತಾರೆ. ಬಹುದಿನಗಳ ನಂತರ ರೈತ ಶುಕ್ಲಾ ಮನವಿಗೆ ಓಗೊಟ್ಟು ಚಂಪಾರಣ್ಯಕ್ಕೆ ತೆರಳುವ ಗಾಂಧಿ ಮೇಲೆ ಬ್ರಿಟಿಷರು ರಾಜದ್ರೋಹದ ಪ್ರಕರಣ ದಾಖಲಿಸುತ್ತಾರೆ. ಅಲ್ಲಿಂದಾಚೆಗೆ ಗಾಂಧಿ ನಡೆಗಳು ವಿಶಿಷ್ಟ ತಿರುವು ಪಡೆದು ಅಂತಿಮವಾಗಿ ಸ್ವಾತಂತ್ರ್ಯ ಪಡೆಯುವುದರೊಂದಿಗೆ ಅಂತ್ಯ ಕಾಣುತ್ತದೆ. ಗಾಂಧೀಜಿ ಮಹಾತ್ಮರಾಗಿ ರೂಪುಗೊಳ್ಳಲು ಚಂಪಾರಣ್ಯ ಘಟನೆಯ ಕೊಡುಗೆ ದೊಡ್ಡದು,” ಎಂದು ನೆನಪಿಸಿದರು.

ಭಾರತದ ಇತಿಹಾಸದಲ್ಲಿ ಗಾಂಧೀಜಿ ಮತ್ತು ಜಯಪ್ರಕಾಶ್‌ ನಾರಾಯಣ್ ಅವರ ವ್ಯಕ್ತಿತ್ವ ಮತ್ತು ಹೋರಾಟಗಳನ್ನು ವಿಭಿನ್ನ ಕೋನಗಳಿಂದ ವಿಶ್ಲೇಷಿಸಿದ ಅವರು, “೧೯೭೫-೭೭ರ ಅವಧಿಯಲ್ಲಿ ಕಾಂಗ್ರೆಸ್‌ ವಿರುದ್ಧದ ಹೋರಾಟ ರೂಪಿಸಿದ ಜಯಪ್ರಕಾಶ್‌ ನಾರಾಯಣ್ ಅವರು ಸಂಘಪರಿವಾರಕ್ಕೆ ಮಾನ್ಯತೆ ಒದಗಿಸಿಕೊಟ್ಟುಬಿಟ್ಟರು. ಇದೊಂದು ಕಪ್ಪುಚುಕ್ಕೆ. ಇಂದು ಅದೇ ಸಂಘಪರಿವಾರದ ವಿರುದ್ಧ ಹೋರಾಟ ನಡೆಸಬೇಕಾದ ಸಂದರ್ಭ ನಿರ್ಮಾಣವಾಗಿರುವುದು ವಿಪರ್ಯಾಸ,” ಎಂದು ವಿಶ್ಲೇಷಿಸಿದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More