ಈ ಬಾರಿಯ ಚುನಾವಣೆಯಲ್ಲಿ ದೇಶದ ಫ್ಯಾಸಿಸಂ ಶಕ್ತಿಯನ್ನು ಮಣಿಸುವುದು ಹೇಗೆ?

ಸಮಕಾಲೀನ ಫ್ಯಾಸಿಸಂ ಎಂಬುದು ಕಾರ್ಪೊರೆಟ್ ಮತ್ತು ಕೋಮುವಾದಿ ಶಕ್ತಿಗಳ ಮಹಾಮೈತ್ರಿ. ಇದನ್ನು ಮಣಿಸುವ ಸವಾಲು ಈಗ ಎಡಪಕ್ಷಗಳ ಹೊಣೆಗಾರಿಕೆ ಎಂಬುದು ಜೆಎನ್‌ಯು ಪ್ರಾಧ್ಯಾಪಕ ಪ್ರಭಾತ್ ಪಟ್ನಾಯಕ್ ವಾದ. ‘ದಿ ವೈರ್’ನಲ್ಲಿ ಪ್ರಕಟವಾದ ಅವರ ಲೇಖನದ ಆಯ್ದಭಾಗ ಇಲ್ಲಿದೆ

ನಮ್ಮ ಸಮಕಾಲೀನ ಫ್ಯಾಸಿಸಂ ಅನ್ನು ಅರ್ಥ ಮಾಡಿಕೊಳ್ಳುವಲ್ಲಿ ಅಥವಾ ಕನಿಷ್ಠ ಅದನ್ನು ಗುರುತಿಸುವಲ್ಲಿ ಇರುವ ದೊಡ್ಡ ಅಡ್ಡಗಾಲೆಂದರೆ, ನಮ್ಮನ್ನು ಕಾಡುತ್ತಿರುವ ೧೯೩೦ರ ನೆನಪು. ಭಾರತದಲ್ಲಿ ಇಂದು ಫ್ಯಾಸಿಸ್ಟರು ಉದಾರವಾದಿ ಬೂರ್ಸ್ವಾ ಪ್ರಭುತ್ವದ ಚುಕ್ಕಾಣಿ ಹಿಡಿದಿದ್ದಾರೆ ಎಂಬ ಬಗ್ಗೆ ಯಾವುದೇ ಅನುಮಾನವೇ ಇಲ್ಲ. ಅವರು ಸೇರಿರುವ ಮತ್ತು ನಿಷ್ಠರಾಗಿರುವ ಆರ್‌ಎಸ್‌ಎಸ್ ಸಂಘಟನೆ, ಹಳೆಯ ಫ್ಯಾಸಿಸಂ ಬಗೆಗಿನ ತನ್ನ ಅಭಿಮಾನವನ್ನು ಗುಟ್ಟಾಗಿಯೇನೂ ಇಟ್ಟಿಲ್ಲ. ಆದರೆ, ನಾವಿನ್ನೂ ನಾಜಿಗಳ ಆಡಳಿತ ಸೃಷ್ಟಿಸಿದಂತಹ ಸಾಂಪ್ರದಾಯಿಕ ಫ್ಯಾಸಿಸಮ್ಮಿಗೆ ಈಡಾಗಿಲ್ಲ ಅಥವಾ ಅಂತಹ ಪರಿಸ್ಥಿತಿಯ ಕಡೆಗೆ ತೀರಾ ಧಾವಂತದ ಹೆಜ್ಜೆ ಹಾಕುತ್ತಲೂ ಇಲ್ಲ. ಹಾಗಾಗಿಯೇ, ಬಹಳಷ್ಟು ಮಂದಿಗೆ ನಾವು ಫ್ಯಾಸಿಸಂ ಅನ್ನು ಎದುರಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ಕಾಡತೊಡಗಿದೆ. ಹಾಗೆ ನೋಡಿದರೆ, ೧೯೩೦ರ ಮಸೂರದಲ್ಲಿ ನಾವು ಈಗಿನ ಘಟನೆಗಳನ್ನು ನೋಡಿದರೆ ಅಂತಹ ಫ್ಯಾಸಿಸಂ ಕಾಣಿಸಲಾರದು ಕೂಡ.

ಮೂಲಭೂತವಾಗಿ ಸಾಂದರ್ಭಿಕ ವ್ಯತ್ಯಾಸದ ಕಾರಣದಿಂದ ೧೯೩೦ರ ಫ್ಯಾಸಿಸಂಗೂ, ಇವತ್ತಿನ ಫ್ಯಾಸಿಸಂಗೂ ಸಾಕಷ್ಟು ವ್ಯತ್ಯಾಸಗಳಿವೆ ಮತ್ತು ಇರಲೇಬೇಕು ಕೂಡ. ವಿವಿಧ ರಾಷ್ಟ್ರ ಮೂಲದ ವಾಣಿಜ್ಯ ರಾಜಧಾನಿಗಳ ನಡುವೆ ತೀವ್ರ ಪೈಪೋಟಿಯ ಹಿನ್ನೆಲೆಯಲ್ಲಿ ೧೯೩೦ರ ಫ್ಯಾಸಿಸಂ ಪ್ರವರ್ಧಮಾನಕ್ಕೆ ಬಂದಿತ್ತು. ಆದರೆ, ಇವತ್ತು ನಾವು ಜಾಗತೀಕರಣಗೊಂಡ ಅಥವಾ ಅಂತಾರಾಷ್ಟ್ರೀಯ ಹಣಕಾಸು ರಾಜಧಾನಿಯನ್ನು ಹೊಂದಿದ್ದು, ಅದರ ಯಜಮಾನಿಕೆಯಡಿ ಪೈಪೋಟಿ ಅಥವಾ ಪ್ರತಿಸ್ಪರ್ಧೆ ಎಂಬುದು ಅಸಾಧ್ಯ ಎಂಬ ಸ್ಥಿತಿ ಇದೆ.

ಅದು ಎರಡು ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಮೊದಲನೆಯದಾಗಿ, ಫ್ಯಾಸಿಸಂಗೆ ಆಸ್ಪದ ನೀಡುವ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಮೀರುವ ನಿಟ್ಟಿನಲ್ಲಿ ಯಾವುದೇ ರಾಷ್ಟ್ರಪ್ರಭುತ್ವಕ್ಕೆ ಇರುವ ಆಯ್ಕೆಗಳನ್ನು ಮಿತಿಗೊಳಿಸುತ್ತದೆ. ಆದರೆ, ೧೯೩೦ರಲ್ಲಿ ಜರ್ಮನಿ ಮತ್ತು ಜಪಾನಿನ ಫ್ಯಾಸಿಸ್ಟ್ ಅಡಳಿತಗಳು ಮಿಲಿಟರಿ ವೆಚ್ಚ ಸಾಲದ ಮೂಲಕ ತಮ್ಮ ದೇಶಗಳ ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದವು. ಆದರೆ, ಇಂದು ಬಹುತೇಕ ಹಣಕಾಸು ಹರಿವಿಗೆ ಬಹುತೇಕ ಯಾವುದೇ ಗಡಿ ನಿರ್ಬಂಧಗಳಿಲ್ಲ. ಹಾಗಾಗಿ, ಸರ್ಕಾರದ ವೆಚ್ಚದ ಹಣಕಾಸು ಸಾಲ ಎತ್ತುವಳಿ ದೇಶದ ಬಂಡವಾಳ ಹೊರಹರಿವಿಗೆ ರಹದಾರಿಯಾಗಲಿದೆ (ಆದರೆ, ಈ ವಿಷಯದಲ್ಲಿ, ಜಾಗತಿಕ ಮಟ್ಟದಲ್ಲಿ ಶ್ರೀಮಂತರು ಇಂದಿಗೂ ಡಾಲರನ್ನು ಚಿನ್ನವೆಂದೇ ಭಾವಿಸುತ್ತಿರುವುದರಿಂದ ಅಮೆರಿಕ ಒಂದು ಅಪವಾದ).

ಇನ್ನು, ಎರಡನೆಯ ಪರಿಣಾಮ; ಎರಡು ಬಲಾಢ್ಯ ರಾಷ್ಟ್ರಗಳ ನಡುವಿನ ಪೈಪೋಟಿ ಅಂತಿಮವಾಗಿ ಫ್ಯಾಸಿಸಂ ಪ್ರೇರಿತ ಯುದ್ಧದಲ್ಲಿ ಅಂತ್ಯ ಕಾಣಲಿದೆ ಮತ್ತು ಆ ಪ್ರಕ್ರಿಯೆಯಲ್ಲಿ ಸ್ವತಃ ಫ್ಯಾಸಿಸಂ ನಾಶವಾಗುತ್ತದೆ ಎಂಬುದು ಇಂದು ವಾಸ್ತವಿಕ ಅಲ್ಲ. ಏಕೆಂದರೆ, ಜಾಗತೀಕರಣಗೊಂಡಿರುವ ಹಣಕಾಸು ವ್ಯವಸ್ಥೆ ಜಗತ್ತಿನ ಪ್ರಮುಖ ಶಕ್ತಿಗಳ ನಡುವೆ ಇಂತಹ ತೀವ್ರ ವೈರತ್ವನ್ನು ನಿರೀಕ್ಷಿಸುವುದೇ ಇಲ್ಲ.

ಇದನ್ನೂ ಓದಿ : ಫ್ಯಾಸಿಸಂ ವಿರುದ್ಧ ಹೇಗೆ ಹೋರಾಡಬೇಕು ಎಂಬ ಬಗ್ಗೆ ಮೆಡಲೀನ್ ಆಲ್‍ಬ್ರೈಟ್ ಚಿಂತನೆಗಳು

ಸಮಕಾಲೀನ ಫ್ಯಾಸಿಸಂನ ಅಪಾಯ

ಸಮಕಾಲೀನ ಫ್ಯಾಸಿಸಂ ಎಂಬುದು ಫ್ಯಾಸಿಸ್ಟ್ ಪ್ರಭುತ್ವವನ್ನು ಸ್ಥಾಪಿಸಲು ತೀರಾ ದೌಡಾಯಿಸುವ ವೇಗದಲ್ಲಿ ಚಲಿಸಲಾರದು (ಅದು ಅದರ ಸಾಮಾಜಿಕ ನೆಲೆಯನ್ನು ಇನ್ನಷ್ಟು ಕುಗ್ಗಿಸಲಿದೆ), ಇಲ್ಲವೇ ಯುದ್ಧದ ಮೂಲಕ ತಾನೇ ಹೈರಾಣಾಗಲು ಕೂಡ ಬಯಸದು. ಹಾಗಾಗಿ ಅದು, ಈಗ ಕ್ರಮೇಣವಾಗಿ ಆವರಿಸಿಕೊಳ್ಳುವ, ಒಂದು ರೀತಿಯ 'ಶಾಶ್ವತ ಫ್ಯಾಸಿಸಂ' ಆಗಿ ಬದಲಾಗಿದೆ. ಅದರ ಮೂಲಕ ಕಾಲಕಾಲಕ್ಕೆ ಫ್ಯಾಸಿಸ್ಟರು ಅಧಿಕಾರಕ್ಕೇರುವುದು ಮತ್ತು ಅದರಿಂದ ಹೊರಗಿರುವುದು ಒಂದು ಆವರ್ತಕ ಪ್ರಕ್ರಿಯೆಯಂತೆ ನಡೆಯುತ್ತಿದೆ. ಅಲ್ಲದೆ, ಇಡೀ ಸಮಾಜವನ್ನು ನಿಧಾನವಾಗಿ ಫ್ಯಾಸಿಸಂಮಯಗೊಳಿಸುವ ಪ್ರಕ್ರಿಯೆ ಕೂಡ ನಿಧಾನಗತಿಯಲ್ಲಿ ನಡೆಯುತ್ತಿರುತ್ತದೆ. ಅದು ಎಷ್ಟು ನಾಜೂಕಾಗಿ ನಡೆಯುತ್ತದೆ ಎಂದರೆ, ಅದರ ವಿರೋಧಿಗಳು ಕೂಡ (ಕಾಂಗ್ರೆಸ್ಸಿನ ಮೃದು ಹಿಂದುತ್ವದ ವರಸೆಯಂತೆ) ಅವರಿಗೇ ಅರಿವಿಲ್ಲದಂತೆ ತಾವು ವಿರೋಧಿಸುವ ಫ್ಯಾಸಿಸಂ ಅನ್ನೇ ಅನುಸರಿಸತೊಡಗುತ್ತಾರೆ. ಹಾಗಾಗಿ, ಅಂತಹ ಫ್ಯಾಸಿಸಂ ಅನ್ನು ಹುಟ್ಟುಹಾಕುವ ಸಂಕೀರ್ಣ ವ್ಯವಸ್ಥೆಯಿಂದ ಸಂಪೂರ್ಣ ಹೊರಬರಲಾರದೆ ಅದರಿಂದ ಪಾರಾಗುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ, ಫ್ಯಾಸಿಸಂ ಅನ್ನು ಸರಿಯಾಗಿ ಗುರುತಿಸುವ ಮತ್ತು ಅದನ್ನು ಬಗ್ಗುಬಡಿಯುವ ವಿನೂತನ ವಿಧಾನಗಳನ್ನು ಕಂಡುಕೊಳ್ಳುವುದು ಸದ್ಯದ ತುರ್ತು.

ಯಾತನಾ ಶಿಬಿರ ಸಹಿತವಾದ ೧೯೩೦ರ ಫ್ಯಾಸಿಸಂನ ಕಲ್ಪನೆಯಿಂದ ಹೊರಬಂದು, ಫ್ಯಾಸಿಸಂನ ಹೊಸ ಅವತಾರಗಳನ್ನು ಗ್ರಹಿಸುವುದು ಸಾಧ್ಯವಾದರೆ, ಸಮಕಾಲೀನ ಫ್ಯಾಸಿಸಂ ಅನ್ನು ಕಂಡುಕೊಳ್ಳುವುದು ಮತ್ತು ಅರ್ಥ ಮಾಡಿಕೊಳ್ಳುವುದು ಸುಲಭ. ಈಗ ಭಾರತದಲ್ಲಿ ಫ್ಯಾಸಿಸಂನ ಅಂತಹ ಹಲವು ಮಾದರಿಗಳು ಚಾಲ್ತಿಯಲ್ಲಿವೆ. ಜನರಿಗಿಂತ ‘ದೇಶ’ ಮುಖ್ಯ ಎನ್ನುವ ವರಸೆಯ ಅತಿ ಭಾವುಕ ಮತ್ತು ಭುಜಬಲದ ಮೇಲೆ ಹೆಚ್ಚು ನಂಬಿಕೆ ಇಡುವ ‘ರಾಷ್ಟೀಯವಾದ’ (ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಕಟ್ಟಿದ, ಜನಕೇಂದ್ರಿತ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಾಮ್ರಾಜ್ಯಶಾಹಿ ವಿರೋಧಿ ರಾಷ್ಟ್ರೀಯವಾದಕ್ಕೆ ಸಂಪೂರ್ಣ ತದ್ವಿರುದ್ಧವಾದದ್ದು). ಅಂತಹ ‘ದೇಶ’ದೊಂದಿಗೆ ಆಳುವ ಸರ್ಕಾರ ಮತ್ತು ‘ನಾಯಕ’ನನ್ನು ಸಮೀಕರಣಗೊಳಿಸುವುದು ಮತ್ತು ಸರ್ಕಾರ ಮತ್ತು ಆ ನಾಯಕನ ವಿರುದ್ಧದ ಟೀಕೆ, ಭಿನ್ನಾಭಿಪ್ರಾಯಗಳನ್ನು ದೇಶ ವಿರೋಧಿ, ದೇಶದ್ರೋಹ ಮತ್ತು ಭಯೋತ್ಪಾದನೆಗೆ ಸಮನಾದ ಕೃತ್ಯ ಎಂದು ಹಣೆಪಟ್ಟಿ ಹಚ್ಚುವುದು, ಗುಂಪುದಾಳಿ ಮತ್ತು ಸರ್ಕಾರಿ ದಬ್ಬಾಳಿಕೆ (ಯುಎಪಿಎ ಬಂಧನ ಮತ್ತು ಸಿಬಿಐ ಕೇಸುಗಳು) ಮೂಲಕ ತನಗೆ ಆಗದವರನ್ನು ಮತ್ತು ಒಗ್ಗದವರನ್ನು ಬಗ್ಗುಬಡಿಯುವುದು, ಟ್ರೋಲ್‌ ಪಡೆಗಳ ಮೂಲಕ ವಿರೋಧಿಗಳನ್ನು ಬೆದರಿಸುವುದು ಮತ್ತು ಬಗ್ಗುಬಡಿಯುವುದು, ಕಾರ್ಪೊರೆಟ್ ಮತ್ತು ಹಣಕಾಸು ಶಕ್ತಿಗಳೊಂದಿಗೆ ಕೈಜೋಡಿಸಿ ಆಡಳಿತ ವ್ಯವಸ್ಥೆಯನ್ನು ಉಳ್ಳವರ ಪರವಾಗಿಸುವುದು (ಸರ್ಕಾರ ಮತ್ತು ಕಾರ್ಪೊರೆಟ್ ಶಕ್ತಿಗಳ ಜಂಟಿ ವ್ಯವಸ್ಥೆಯೇ ಫ್ಯಾಸಿಸಂ ಎಂದು ಬೆನಿಟೊ ಮುಸಲೋನಿ ಹೇಳಿದ್ದನ್ನು ನೆನಪಿಸಿಕೊಳ್ಳಿ). ದುರ್ಬಲ ಅಲ್ಪಸಂಖ್ಯಾತರನ್ನು ‘ದೇಶದೊಳಗಿನ ಶತ್ರು’ವೆಂದು ಬಿಂಬಿಸುವುದು, ಚರಿತ್ರೆ ಮತ್ತು ಪುರಾಣ, ವಿಜ್ಞಾನ ಮತ್ತು ಮೌಢ್ಯ ಮತ್ತು ವಾಸ್ತವಾಂಶ ಮತ್ತು ಕಟ್ಟುಕತೆಗಳ ನಡುವಿನ ವ್ಯತ್ಯಾಸವನ್ನೇ ಅಳಿಸಿಹಾಕುವ ಕಥನಗಳನ್ನು ಸೃಷ್ಟಿಸುವುದು ಮತ್ತು ಅಂತಿಮವಾಗಿ, ಮುಖ್ಯವಾಗಿ ಎಲ್ಲ ಬಗೆಯ ಬೌದ್ಧಿಕ ಚಟುವಟಿಕೆಗಳು ಮರೆಯಾಗುವುದು ಪ್ರಮುಖವಾಗಿ ಈ ಹೊತ್ತಿನ ಫ್ಯಾಸಿಸಂನ ಎದ್ದುಕಾಣುವ ಗುಣಲಕ್ಷಣಗಳು.

ಭಾರತದ ಮಟ್ಟಿಗೆ ಫ್ಯಾಸಿಸಂ ಹುಟ್ಟುಹಾಕುವ ಈ ಪ್ರತಿಗಾಮಿ ಆಂದೋಲನ, ಅಂತಿಮವಾಗಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಘಾಸಿಗೊಳಿಸಲಿದ್ದು, ಪರಿಣಾಮವಾಗಿ ಜಾತಿ ವ್ಯವಸ್ಥೆ ಮತ್ತು ಜಾತಿ ದಬ್ಬಾಳಿಕೆಗಳಿಗೆ ಮುಕ್ತ ಕುಮ್ಮಕ್ಕು ನೀಡಲಿದೆ. ವಸಾಹತುಶಾಹಿ ವಿರೋಧಿ ಹೋರಾಟ ಮತ್ತು ೧೯-೨೦ನೇ ಶತಮಾನದ ಸಾಮಾಜಿಕ ಸಬಲೀಕರಣ ಕಾರ್ಯಕ್ರಮಗಳ ಮೂಲಕ ಕೆಲಮಟ್ಟಿಗೆ ಹತೋಟಿಗೆ ಬಂದಿದ್ದ ಜಾತಿ ದಬ್ಬಾಳಿಕೆ ಮತ್ತು ಕರಾಳ ವರಸೆಗಳು ಫ್ಯಾಸಿಸಂ ಪ್ರತಿಫಲವಾಗಿ ಮತ್ತೆ ತಲೆ ಎತ್ತಲಿವೆ ಮತ್ತು ಅಂತಹ ಬದಲಾವಣೆ, ಖಂಡಿತವಾಗಿಯೂ ನಮ್ಮನ್ನು ಶತಮಾನಗಳಷ್ಟು ಹಿಂದಕ್ಕೆ ತಳ್ಳಲಿದೆ.

ಫ್ಯಾಸಿಸಂ ಪೊರೆಯುವ ಮೈತ್ರಿ

ಮತ ವಿಭಜನೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಪಕ್ಷಗಳ ಯಾವುದೇ ರೂಪದ ಮೈತ್ರಿ ಅನಿವಾರ್ಯ. ಆದರೆ, ಅಂತಹ ಮೈತ್ರಿ ಸದ್ಯಕ್ಕೆ ಆಕ್ರಮಿಸಿಕೊಂಡಿರುವ ಅಧಿಕಾರದ ಕುರ್ಚಿಯಿಂದ ಫ್ಯಾಸಿಸ್ಟ್ ಶಕ್ತಿಗಳನ್ನು ಕೆಳಗಿಳಿಸಬಹುದು. ಆದರೆ, ಫ್ಯಾಸಿಸಂ ಅನ್ನು ತಯಾರು ಮಾಡುವ ಸಂಕೀರ್ಣ ವ್ಯವಸ್ಥೆಯನ್ನು ಬದಲಾಯಿಸುವುದು ಅಂತಹ ಪ್ರಯತ್ನಗಳಿಂದ ಸಾಧ್ಯವಿಲ್ಲ. ಆ ಸಂಕೀರ್ಣ ವ್ಯವಸ್ಥೆ ನವ ಉದಾರವಾದದ ಅಂತಿಮ ಸ್ವರೂಪ.

ಪ್ರಜೆಗಳಿಗಿಂತ ದೇಶವೇ ಮುಖ್ಯ ಎನ್ನುವ ವರಸೆಯ ವೈಭವೀಕೃತ ರಾಷ್ಟ್ರೀಯವಾದ, ‘ದೇಶ’ಕ್ಕಾಗಿ ಮತ್ತು ಅದರ ಹಿತಕ್ಕಾಗಿ (ಜಿಡಿಪಿ ಮತ್ತು ಶೀಘ್ರ ಬಂಡವಾಳ ಸಂಚಯನಕ್ಕಾಗಿ) ಕಾರ್ಪೊರೆಟ್ ಹಣಕಾಸು ವ್ಯವಸ್ಥೆಗೆ ಪೂರಕವಾಗಿ ಜನಸಾಮಾನ್ಯರು ಎಲ್ಲ ತ್ಯಾಗಕ್ಕೂ ಸಜ್ಜಾಗಬೇಕು ಮತ್ತು ಅದೇ ದೇಶಭಕ್ತಿ ಎಂಬುದನ್ನು ವ್ಯವಸ್ಥಿತವಾಗಿ ನಂಬಿಸಲಾಗುತ್ತದೆ. ಆ ಮೂಲಕ ಕಾರ್ಪೊರೆಟ್ ಮತ್ತು ಅಧಿಕಾರಸ್ಥರ ಅಪವಿತ್ರ ಮೈತ್ರಿಯನ್ನು ಜನರ ಕಣ್ಣಲ್ಲಿ ದೇಶೋದ್ಧಾರದ ಮಹಾ ಸಾಹಸವನ್ನಾಗಿ ಬಿಂಬಿಸಲಾಗುತ್ತದೆ. ಇದು ಈಗಾಗಲೇ ಭಾರತದಲ್ಲಿ ಸಂಭವಿಸತೊಡಗಿದೆ. ಆದರೆ, ಈ ನವ ಉದಾರೀಕರಣ ಸಾಕಷ್ಟು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಹೊತ್ತಿನಲ್ಲಿ, ಅದು ತನ್ನ ಪ್ರಭಾವ ಕಾಯ್ದುಕೊಳ್ಳಲು ಹಿಂದುತ್ವ ಶಕ್ತಿಗಳ ಬಲ ಬಳಸಿಕೊಂಡು, ತನ್ನ ಯಜಮಾನಿಕೆ ಮುಂದುವರಿಸುತ್ತಿದೆ. ಹಾಗಾಗಿ ಕೋಮುವಾದಿ- ಕಾರ್ಪೋರೆಟ್ ಮೈತ್ರಿ ಸದ್ಯಕ್ಕೆ ಜಾರಿಯಲ್ಲಿದ್ದು, ಕಾರ್ಮಿಕ ಮತ್ತು ದುರ್ಬಲ ವರ್ಗದ ಜನರ ಆರ್ಥಿಕ ಮುಗ್ಗಟ್ಟು ದಿನದಿಂದ ದಿನಕ್ಕೆ ವಿಪರೀತಕ್ಕೆ ಹೋಗುತ್ತಲೇ ಇದೆ.

ಈ ಅಪವಿತ್ರ ಮೈತ್ರಿಯನ್ನು ಬದಲಾಯಿಸಬೇಕಾದರೆ, ೨೦೧೯ರ ಹೊತ್ತಿಗೆ ಹಿಂದುತ್ವ ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವುದು ಅನಿವಾರ್ಯ. ಆದರೆ, ಅವರನ್ನು ಅಧಿಕಾರದಿಂದ ದೂರವಿಡುವುದು ಮಾತ್ರವೇ ಅಜೆಂಡಾವಾದರೆ, ಮುಂದಿನ ಅವಧಿಗೆ ಮತ್ತೆ ಅವರು ಅಧಿಕಾರ ಹಿಡಿಯುವುದರಲ್ಲಿ ಅನುಮಾನವಿಲ್ಲ. ಹಾಗಾಗಿ, ಪ್ರತಿಪಕ್ಷಗಳ ಒಗ್ಗಟ್ಟು ಕನಿಷ್ಠ ಕಾರ್ಯಕ್ರಮದಲ್ಲಿ ಕೆಲವು ಮೂಲಭೂತ ಅಂಶಗಳನ್ನು ಸೇರಿಸಿಕೊಳ್ಳುವುದು ಅನಿವಾರ್ಯ. ಯುಎಪಿಎ (ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ, ವರ್ಷಗಟ್ಟಲೆ ಜೈಲುಪಾಲು ಮಾಡಿದ ಕರಾಳ ಕಾಯ್ದೆ), ದೇಶದ್ರೋಹ ಕಾಯ್ದೆ ನಿಷೇಧ, ಗುಂಪು ಹಲ್ಲೆ ವಿರುದ್ಧ ಕಠಿಣ ಕಾನೂನು, ಮಾಧ್ಯಮಗಳ ಕನಿಷ್ಠ ನೈತಿಕತೆ ಕಾಯಲು ಮಾನದಂಡ, ಸಿಬಿಐಯನ್ನು ಸರ್ಕಾರಗಳ ಅಸ್ತ್ರವಾಗಿ ಬಳಕೆಯಾಗದಂತೆ ತಡೆಯಲು ಕ್ರಮ, ವಿಶ್ವವಿದ್ಯಾಲಯ ಮತ್ತು ಇತರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ಹಿಂದುತ್ವವಾದಿ ಫ್ಯಾಸಿಸ್ಟ್ ಶಕ್ತಿಗಳಿಂದ ಪಾರುಮಾಡುವುದು ಸೇರಿದಂತೆ ಹಲವು ಕ್ರಮಗಳು ಈ ಕನಿಷ್ಠ ಕಾರ್ಯಕ್ರಮದ ಆದ್ಯತೆಯಾಗಬೇಕಿದೆ.

ಸಮಾನ ನಾಗರಿಕ ಹಕ್ಕು

ದುರ್ಬಲ ವರ್ಗ ಮತ್ತು ಕಾರ್ಮಿಕ ಸಮುದಾಯದ ಆರ್ಥಿಕ ಬಿಕ್ಕಟ್ಟು ದೂರ ಮಾಡುವ ಮತ್ತು ಸಮಾನ ಆರ್ಥಿಕ ಹಕ್ಕಿನ ಖಾತ್ರಿ ಮೂಲಕ ಸಮಾನ ನಾಗರಿಕ ಹಕ್ಕು ಪರಿಕಲ್ಪನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲೂ ಕೆಲವು ನಿರ್ದಿಷ್ಟ ಕಾರ್ಯಕ್ರಮಗಳನ್ನು ಆ ಕನಿಷ್ಠ ಕಾರ್ಯಕ್ರಮಗಳಲ್ಲಿ ಸೇರಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಾನು ಪ್ರಮುಖ ಐದು ಅಂಶಗಳನ್ನು ಪಟ್ಟಿ ಮಾಡುವೆ. ಅವುಗಳೆಂದರೆ; ಆಹಾರದ ಹಕ್ಕು, ಉದ್ಯೋಗದ ಹಕ್ಕು, ಉಚಿತ ಮತ್ತು ಸಾರ್ವಜನಿಕ ಅನುದಾನದ ಸಮಾನ ಆರೋಗ್ಯಸೇವೆಯ ಹಕ್ಕು, ಉಚಿತ ಮತ್ತು ಸಾರ್ವಜನಿಕ ಸಮಾನ ಶಿಕ್ಷಣದ ಹಕ್ಕು ಮತ್ತು ವೃದ್ಧಾಪ್ಯ ವೇತನ ಹಾಗೂ ವೈಕಲ್ಯ ಪರಿಹಾರ ಪಡೆಯುವ ಹಕ್ಕು. ಈ ಸೌಲಭ್ಯಗಳನ್ನು ಖಾತ್ರಿಪಡಿಸಲು ಜಿಡಿಪಿಯ ಶೇ.೧೦ಕ್ಕಿಂತ ಹೆಚ್ಚೇನೂ ಭರಿಸಬೇಕಿಲ್ಲ. ದೇಶದ ಅತಿ ಶ್ರೀಮಂತ ಶೇ.೧ರಷ್ಟು ಕುಟುಂಬಗಳ ಮೇಲೆ ಶೇ.೪ರಷ್ಟು ಸಂಪತ್ತು ತೆರಿಗೆ (ಅಂತಹ ತೆರಿಗೆ ದೇಶದಲ್ಲಿ ಈವರೆಗೆ ಇಲ್ಲವೇ ಇಲ್ಲ!) ಹಾಕಿದರೂ ಅದಕ್ಕೆ ಅಗತ್ಯ ಅನುದಾನ ಕ್ರೋಡೀಕರಿಸಬಹುದು.

ಬೇರೆ ಬೇರೆ ವರ್ಗ, ಸಮುದಾಯಗಳಿಗೆ ಸಾಕಷ್ಟು ಯೋಜನೆ, ಸೌಲಭ್ಯಗಳಿರಬಹುದು. ಆದರೆ, ಜಾತಿ, ಜನಾಂಗ, ಲಿಂಗ ಮತ್ತಿತರ ಎಲ್ಲ ಭಿನ್ನತೆಗಳನ್ನೂ ಮೀರಿ ಎಲ್ಲರಿಗೂ ಸಮಾನ ಆರ್ಥಿಕ ಹಕ್ಕುಗಳನ್ನು ನೀಡುವ ಮೂಲಕ ತರುವ ಸಮಾನ ಪೌರತ್ವ ನಿಜವಾಗಿಯೂ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಲ್ಲದು.

ಆದರೆ, ಈ ಎಲ್ಲದಕ್ಕಿಂತ ದೊಡ್ಡ ಸವಾಲೆಂದರೆ, ಫ್ಯಾಸಿಸಂ ಅನ್ನು ಮಣಿಸಲು, ಸೀಟು ಹಂಚಿಕೆಗಿಂತ ಅತ್ಯಂತ ಸಂಕೀರ್ಣವಾದ ಪ್ರತಿಪಕ್ಷಗಳ ಒಗ್ಗಟ್ಟು ಸಾಧಿಸುವುದು. ಒಗ್ಗಟ್ಟು ಸಾಧಿಸುವ ಈ ಸಾಹಸವನ್ನು ಸದ್ಯದ ಪರಿಸ್ಥಿತಿಯಲ್ಲಿ ಎಡಪಕ್ಷಗಳು ಮಾತ್ರ ಸಾಧಿಸಬಲ್ಲವು ಎಂಬುದು ನನ್ನ ಗ್ರಹಿಕೆ. ಏಕೆಂದರೆ, ಫ್ಯಾಸಿಸಂ ಅನ್ನು ಕಟುವಾಗಿ ವಿರೋಧಿಸುವ ದೇಶದ ಏಕೈಕ ರಾಜಕೀಯ ಶಕ್ತಿ ಎಡಪಕ್ಷಗಳೇ ಎಂಬುದು ಮೊದಲ ಕಾರಣ. ಎರಡನೆಯದು, ನವ ಉದಾರವಾದ ಮತ್ತು ಫ್ಯಾಸಿಸಂ ಅಥವಾ ಫ್ಯಾಸಿಸಂ ಬೆಳವಣಿಗೆಯ ಹಿಂದಿನ ರಾಜಕೀಯ ಅರ್ಥಶಾಸ್ತ್ರವನ್ನು ಎಡಪಕ್ಷಗಳು ಮಾತ್ರ ಸರಿಯಾಗಿ ಗ್ರಹಿಸಿವೆ ಮತ್ತು ಆ ಕಾರಣಕ್ಕೆ ಅವು ಸೀಟು ಹಂಚಿಕೆಯನ್ನು ಮೀರಿದ ರಾಜಕೀಯ ಪರ್ಯಾಯದ ಬಗ್ಗೆ ಮಾತನಾಡುತ್ತಿವೆ. ಮೂರನೆಯದಾಗಿ, ಎಡಪಕ್ಷಗಳಿಗೆ ತಾತ್ವಿಕವಾಗಿ ಯಾವಾಗಲೂ ಪಕ್ಷದ ಹಿತಕ್ಕಿಂತ ಜನಹಿತವೇ ಮುಖ್ಯ.

ಚಾರಿತ್ರಿಕವಾಗಿಯೂ ಫ್ಯಾಸಿಸಂಗೆ ಅಂತ್ಯ ಹಾಡಿದ್ದು ಕಮ್ಯುನಿಸಂ. ಆ ದೃಷ್ಟಿಯಿಂದ ಕಮ್ಯುನಿಸಂನ ಚಾರಿತ್ರಿಕ ಕೊಡುಗೆ ಮಹತ್ವದ್ದು. ತನ್ನ ಆ ಐತಿಹಾಸಿಕ ಹೊಣೆಗಾರಿಕೆಗೆ ಮತ್ತೊಮ್ಮೆ ಈಗ ಹೆಗಲು ಕೊಟ್ಟು ಕಮ್ಯುನಿಸಂ ಸಮಕಾಲೀನ ಫ್ಯಾಸಿಸಂ ಅನ್ನು ಮಣಿಸಲು, ಇಡೀ ಪ್ರತಿಪಕ್ಷ ಪಾಳೆಯವನ್ನು ಒಗ್ಗೂಡಿಸಬೇಕಿದೆ. ಆದರೆ, ಈ ಮೊದಲು ಅದು ಅಂತಹ ಹೊಣೆಗಾರಿಕೆ ನಿಭಾಯಿಸುವಲ್ಲಿ ತೋರಿದ ಉದಾಸೀನಕ್ಕೆ ತಕ್ಕ ಬೆಲೆ ತೆತ್ತಿದೆ. ಆ ಎಚ್ಚರಿಕೆಯಿಂದ ಈಗ ಸಕಾಲಕ್ಕೆ ತನ್ನ ಜವಾಬ್ದಾರಿಯನ್ನು ಅದು ನಿಭಾಯಿಸಬೇಕಿದೆ. ಈಗಲೂ ಮತ್ತದೇ ನಿಧಾನಗತಿಯ ನಡೆ ಅನುಸರಿಸಿದರೆ, ಅದು ಎಡಪಕ್ಷಗಳ ಐತಿಹಾಸಿಕ ಪ್ರಮಾದವಷ್ಟೇ ಅಲ್ಲ; ದೇಶದ ಪಾಲಿಗೂ ಒಂದು ಅವಕಾಶ ಕಳೆದುಹೋಗಲಿದೆ. ಆ ಹಿನ್ನೆಲೆಯಲ್ಲಿ, ಅಂತಹ ತಪ್ಪನ್ನು ಎಡಪಕ್ಷಗಳು ಮಾಡಲಾರವು ಎಂಬ ಭರವಸೆ ನನ್ನದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More