ಕ್ರಾಂತಿಯ ಜೊತೆ ಅಧ್ಯಾತ್ಮವನ್ನೂ ತೂಗಿದ್ದ ಗದ್ದರ್ ಈಗ ಚುನಾವಣಾ ಹುರಿಯಾಳು!

ಗದ್ದರ್ ಸ್ಪರ್ಧಿಸುತ್ತಿದ್ದಂತೆ ‘ಬದಲಾವಣೆ ಆಗಿಬಿಡುತ್ತದೆ’, ‘ದೇಶದಲ್ಲಿ ಹೊಸ ಕ್ರಾಂತಿ ಮೊಳೆಯುತ್ತದೆ’ ಎಂದುಕೊಳ್ಳುವುದು ಮೂರ್ಖತನ. ಆದರೆ, ಅವರ ಸ್ಪರ್ಧೆ ಒಂದಷ್ಟು ಎಚ್ಚರ ಮೂಡಿಸುತ್ತದೆ. ಆಳುವವರ ತಪ್ಪು ತಿದ್ದಲು ಸಹಕಾರಿಯಾಗುತ್ತದೆ. ಗೆಲುವು ಸಾಧಿಸಿದರೆ ಚಾರಿತ್ರಿಕ ಪಾಠವೇ ಆಗಿಬಿಡುತ್ತದೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಶುಕ್ರವಾರ ಭೇಟಿ ಮಾಡಿದ ತೆಲುಗಿನ ಕ್ರಾಂತಿಕಾರಿ ಕವಿ ಗದ್ದರ್, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಫ್ಯಾಸಿಸ್ಟ್ ಮತ್ತು ನವ ಪಾಳೆಗಾರಿಕೆ ವಿರುದ್ಧ ಹೋರಾಟ ನಡೆಸುವ ಇಂಗಿತ ವ್ಯಕ್ತಪಡಿಸಿರುವ ಅವರು, “ಜಾತ್ಯತೀತ ಶಕ್ತಿಗಳು ಮತ್ತು ಮಾರ್ಕ್ಸ್‌ವಾದಿ ಶಕ್ತಿಗಳ ನಡುವೆ ಸೇತುವೆಯಂತೆ ಕೆಲಸ ಮಾಡುವೆ,” ಎಂದಿದ್ದಾರೆ. “ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳದೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ,” ಎಂದು ರಾಹುಲ್ ಜೊತೆಗಿನ ಮಾತುಕತೆ ವೇಳೆ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಸೋಲು-ಗೆಲುವು ನಂತರದ ಮಾತಾದರೂ ಗದ್ದರ್ ಅವರ ಸ್ಪರ್ಧೆಯನ್ನು ತೆಲಂಗಾಣ ಎದುರು ನೋಡುತ್ತಿತ್ತೇ? ಹೌದು ಎನ್ನುತ್ತವೆ ಇತ್ತೀಚಿನ ಬೆಳವಣಿಗೆಗಳು. ಆಳುವವರು ಹೊರಡಿಸುತ್ತಿರುವ ನೀತಿಗಳು, ಹೊಸ ಬಗೆಯ ಆರ್ಥಿಕತೆ, ಜಾಗತೀಕರಣ ಮುಂತಾದವು ತೆಲಂಗಾಣದಂತಹ ಹಿಂದುಳಿದ ರಾಜ್ಯಗಳ ಜನರಿಗೆ ವರವಾಗಿರುವುದಕ್ಕಿಂತ ಶಾಪವಾಗಿದ್ದೇ ಹೆಚ್ಚು. ನಿಜವಾದ ತೆಲಂಗಾಣ ಹೇಗಿದೆ ಎಂದು ಅರಿಯಲು ರಾಜಧಾನಿ ಹೈದರಾಬಾದ್ ಹೊರವಲಯಕ್ಕೆ ಹೋದರೆ ಸಾಕು. ಇನ್ನು, ಕುಗ್ರಾಮಗಳ ಪಾಡಂತೂ ಅರಣ್ಯರೋಧನವೇ ಸರಿ. ಬಿರುಬಿಸಿಲಿನಿಂದ ಹಿಡಿದು ಉಳಿಯಲು ಸೂರಿಲ್ಲ ಎನ್ನುವವರೆಗೆ ಅಲ್ಲಿ ಎಲ್ಲವೂ ಸವಾಲೇ. ಅತಿ ಬಡವರು ಮತ್ತು ಅತಿ ಶ್ರೀಮಂತರನ್ನು ಹೆಚ್ಚಾಗಿ ಕಾಣಬಹುದಾದ ರಾಜ್ಯವದು ಎನ್ನುವುದು ಅತಿಶಯೋಕ್ತಿಯೇನೂ ಅಲ್ಲ. ಅದನ್ನೆಲ್ಲ ಸರಿಪಡಿಸಿಕೊಳ್ಳಲೆಂದು ಅನೇಕರು ನಡೆಸಿದ ಹೋರಾಟ, ತ್ಯಾಗ, ಬಲಿದಾನಗಳ ಫಲವಾಗಿ ತೆಲಂಗಾಣ 2014ರಲ್ಲಿ ಪ್ರತ್ಯೇಕ ರಾಜ್ಯವಾಯಿತು. ತೆಲಂಗಾಣ ರಾಷ್ಟ್ರ ಸಮಿತಿಯ ನೇತಾರ ಕೆ ಚಂದ್ರಶೇಖರ್ ರಾವ್ ಹೊಸ ನಾಡಿನ ಮೊದಲ ಮುಖ್ಯಮಂತ್ರಿಯೂ ಆದರು. ಆದರೆ, ಅವರ ಮೊದಲ ಆಡಳಿತಾವಧಿ ಹಲವು ಪ್ರಶ್ನೆಗಳನ್ನು ಎತ್ತಿತು. ತರತಮಗಳು ಹಾಗೆಯೇ ಉಳಿದವು. ಒಂದು ರಾಜ್ಯ ಉದಯಿಸಿದ ಕೆಲವೇ ವರ್ಷಗಳಲ್ಲಿ ಅದರ ಸರ್ವಾಂಗೀಣ ಅಭಿವೃದ್ಧಿಗೆ ಆಶಿಸುವುದು ಅತಿರೇಕದ ಸಂಗತಿ ಅನಿಸಬಹುದು. ಆದರೆ, ಆಳುವವರು ಜನರ ಹಿತ ಕಾಯದೆ ಅದಕ್ಕೆ ವಿರುದ್ಧವಾಗಿ ನಿಂತರೆ ಏನಾಗುತ್ತದೆ ಎಂಬುದಕ್ಕೆ ಆ ರಾಜ್ಯ ಒಂದು ಉದಾಹರಣೆ. ಆ ಅರ್ಥದಲ್ಲಿಯೇ, “ತೆಲಂಗಾಣ ನವ ಪಾಳೆಗಾರಿಕೆಯ ತೆಕ್ಕೆಗೆ ಸಿಲುಕಿದೆ. ಹೀಗಾಗಿ, ಕೆಸಿಆರ್ ರೀತಿಯ ರಾಜಕಾರಣಿಗಳ ನವ ಪಾಳೆಗಾರಿಕೆಯನ್ನು ಬಯಲಿಗೆಳೆಯಲು ಅವರ ವಿರುದ್ಧ ಸ್ಪರ್ಧಿಸುತ್ತೇನೆ,” ಎಂದು ಗದ್ದರ್ ಹೇಳಿರುವುದು.

ಪ್ರಧಾನಿ ನರೇಂದ್ರ ಮೋದಿ ಹತ್ಯೆಯ ಸಂಚಿನಲ್ಲಿ ಭಾಗವಹಿಸಿದ ಆರೋಪದಡಿ ತೆಲುಗಿನ ಮತ್ತೊಬ್ಬ ಕ್ರಾಂತಿಕಾರಿ ಕವಿ ವರವರ ರಾವ್ ಸೇರಿದಂತೆ ಐವರು ಸಾಮಾಜಿಕ ಕಾರ್ಯಕರ್ತರನ್ನು ಕಳೆದ ಆಗಸ್ಟ್ 28ರಿಂದ ಗೃಹಬಂಧನದಲ್ಲಿ ಇರಿಸಲಾಗಿದೆ. ಯಾರದೇ ಹತ್ಯೆಗೆ ಸಂಚು ರೂಪಿಸಿದ್ದರೂ ಅದು ತಪ್ಪು. ಅದನ್ನು ಖಂಡಿಸುವುದರಲ್ಲಿ, ಅವರನ್ನು ಬಂಧಿಸುವಲ್ಲಿ ಎರಡು ಮಾತಿಲ್ಲ. ಆದರೆ, ಸಾಮಾಜಿಕ ಕಾರ್ಯಕರ್ತರು ಅಂತಹ ಕೆಲಸಕ್ಕೆ ನಿಜವಾಗಿಯೂ ಮುಂದಾಗಿದ್ದರೇ ಎಂಬ ಪ್ರಶ್ನೆಯೇ ದೇಶದ ಅನೇಕರಿಗೆ ಅರಗಿಸಿಕೊಳ್ಳುವ ಮಾತಾಗಿರಲಿಲ್ಲ. ಇನ್ನು, ವರವರ ರಾವ್ ಒಡನಾಡಿದ ತೆಲಂಗಾಣ ಈ ಘಟನೆಗೆ ತೀವ್ರವಾಗಿಯೇ ಸ್ಪಂದಿಸಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಹೊಸ ನಾಡು ಸೃಷ್ಟಿಸಿದ ಭ್ರಮನಿರಸನ, ಸಾಮಾಜಿಕ ಕಾರ್ಯಕರ್ತರ ಬಂಧನದಂತಹ ಸನ್ನಿವೇಶವೇ ಗದ್ದರ್ ರಾಜಕೀಯ ಪ್ರವೇಶಕ್ಕೆ ಮುನ್ನುಡಿ ಬರೆದಿರಲೂಬಹುದು.

ಹಾಗೆ ನೋಡಿದರೆ, ಕಳೆದ ವರ್ಷವೇ ಗದ್ದರ್ ರಾಜಕೀಯ ಪ್ರವೇಶದ ಮಾತುಗಳು ಕೇಳಿಬಂದಿದ್ದವು. ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದೊಂದಿಗೆ ಕೈಜೋಡಿಸಿ ಅವರು ರಾಜಕೀಯಕ್ಕೆ ಧುಮುಕಲಿದ್ದಾರೆ ಎನ್ನಲಾಗಿತ್ತು. ಬಿಜೆಪಿಯ ರಾಜ್ಯ ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಅಲ್ಲದೆ, ತೆಲಂಗಾಣ ರಾಜ್ಯದ ಉದಯಕ್ಕೆ ಶ್ರಮಿಸಿದ್ದ ಗದ್ದರ್, ತೆಲಂಗಾಣ ಜಂಟಿ ಕ್ರಿಯಾ ಸಮಿತಿಯ (ಕೆಸಿಆರ್ ಅವರಿಗೆ ಇನ್ನೊಂದು ಬಗೆಯಲ್ಲಿ ತಲೆನೋವಾಗಿರುವ) ಪ್ರೊ.ಕೋದಂಡರಾಮ್ ಅವರೊಂದಿಗೂ ರಾಜಕೀಯವಾಗಿ ಗುರುತಿಸಿಕೊಂಡಿದ್ದು ಸುದ್ದಿಯಾಗಿತ್ತು. ಈಗ ಅದೆಲ್ಲವೂ ಹರಳುಗಟ್ಟಿದಂತೆ ಅವರ ಸ್ಪರ್ಧೆಯ ಮಾತುಗಳು ಕೇಳಿಬರುತ್ತಿವೆ. ಇದರೊಂದಿಗೆ, 2019ರಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಮತ್ತೊಂದು ರಂಗು ಬರಲಿದೆ.

ಇದನ್ನೂ ಓದಿ : ತೆಲಂಗಾಣ ಸಿಎಂ ಕೆಸಿಆರ್‌ಗೆ ದುಬಾರಿಯಾದ ಚುನಾವಣಾ ಅತ್ಯುತ್ಸಾಹ, ಹಗುರ ಮಾತು!

ಕಳೆದ ವರ್ಷ ಕಪ್ಪು ಕಂಬಳಿ, ಬಿಳಿ ಪಂಚೆ, ಕೆಂಪು ವಲ್ಲಿಯೊಂದಿಗೆ ಸದಾ ಕಂಗೊಳಿಸುತ್ತಿದ್ದ ಅವರು ಕಾರ್ಯಕ್ರಮವೊಂದರಲ್ಲಿ ಸೂಟು-ಬೂಟು, ಟೈ ತೊಟ್ಟು ಜನರ ಹುಬ್ಬೇರುವಂತೆ ಮಾಡಿದ್ದರು. ದೇಗುಲ ಪ್ರವೇಶಿಸಿ ಅವರು ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಅದೇ ಹೊತ್ತಿನಲ್ಲಿ. “ಪ್ರಗತಿಪರ ವಿಚಾರಧಾರೆಯ ಗದ್ದರ್ ಎಲ್ಲಿ? ದೇಗುಲಗಳೆಲ್ಲಿ?” ಎಂಬ ಪ್ರಶ್ನೆಗಳೆದ್ದವು. ಕೆಲವರು ಅದನ್ನು ಬಲವಾಗಿ ವಿರೋಧಿಸಿದರು. “ಗದ್ದರ್ ಅವರಿಂದ ಹೋರಾಟಗಳಿಗೆ ತಿಲಾಂಜಲಿ,” ಎಂಬ ಅಪವಾದಗಳು ಕೇಳಿಬಂದವು. “ವಯಸ್ಸಾದಂತೆ ಸಂಪ್ರದಾಯಕ್ಕೆ ಶರಣಾಗುವುದು ಸಹಜ,” ಎಂಬಂತಹ ಮೂದಲಿಕೆಗೂ ತುತ್ತಾದರು. ಆದರೆ, ಗದ್ದರ್ ಮಾತ್ರ ತಮ್ಮ ಸ್ಪಷ್ಟ ಚಿಂತನೆಗಳೊಂದಿಗೆ ಇನ್ನಷ್ಟು ಹುರಿಗೊಂಡಿದ್ದರು. ಆಗ ಅವರು ಹೇಳಿದ್ದು: “ಜನರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿದಾಗ ಮಾತ್ರ ಮಾರ್ಕ್ಸ್ ವಾದ ಧಾರ್ಮಿಕ ನಂಬಿಕೆಗಳನ್ನು ಬದಲಿಸಬಲ್ಲದು.” ಗದ್ದರ್ ಆಶುಕವಿ. ಅವರ ಚಿಂತನೆಗಳೂ ಆಶುಗುಣವನ್ನೇ ಹೊಂದಿವೆ. ದೇಗುಲ ಪ್ರವೇಶಿಸಿದ ಮಾತ್ರಕ್ಕೆ ಅವರು ತಮ್ಮ ಚಿಂತನೆಗಳ ಶಸ್ತ್ರ ತ್ಯಜಿಸಿದ್ದಾರೆ ಎಂದಲ್ಲ. ಮೂಲಭೂತವಾದಿ ಮನಸ್ಸುಗಳೊಂದಿಗೆ ಒಡನಾಡಿದ ಮಾತ್ರಕ್ಕೆ ಅವರ ಪ್ರಶ್ನಿಸುವ ಗುಣ ಕುಂದಿದೆ ಎಂದರ್ಥವಲ್ಲ. ಸೂಟು-ಬೂಟು ತೊಟ್ಟರೂ ಅವರೊಳಗಿನ ಅರೆಬೆತ್ತಲೆ ಫಕೀರ ಸದಾ ಜಾಗೃತನಾಗಿರುತ್ತಾನೆ.

ಗದ್ದರ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಂತೆ ‘ಬದಲಾವಣೆಯಾಗಿ ಬಿಡುತ್ತದೆ’, ‘ತೆಲಂಗಾಣವಷ್ಟೇ ಅಲ್ಲ ಇಡೀ ದೇಶದಲ್ಲಿ ಹೊಸ ಕ್ರಾಂತಿ ಮೊಳೆಯುತ್ತದೆ’ ಎಂದುಕೊಳ್ಳುವುದು ಮೂರ್ಖತನ. ಆದರೆ, ಅವರ ಸ್ಪರ್ಧೆ ಒಂದಷ್ಟು ಎಚ್ಚರಗಳನ್ನು ಮೂಡಿಸುತ್ತದೆ. ಆಳುವವರ ತಪ್ಪುಗಳನ್ನು ತಿದ್ದಲು ಸಹಕಾರಿಯಾಗುತ್ತದೆ. ಒಂದೊಮ್ಮೆ ಗೆಲುವು ಸಾಧಿಸಿದರೆ ಚಾರಿತ್ರಿಕ ಪಾಠವಾಗುತ್ತದೆ. ಕನ್ನಡದ ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗರಂತಹ ಸಾಹಿತಿಗಳು ಚುನಾವಣೆಗೆ ಸ್ಪರ್ಧಿಸಿದ್ದರು, ಜಯ ಗಳಿಸಲಿಲ್ಲ. ಆದರೆ, ಆ ಸ್ಪರ್ಧೆಯೇ ಅನೇಕ ಸಂದೇಶಗಳನ್ನು ರವಾನಿಸಿತ್ತು. ಗದ್ದರ್ ಸ್ಪರ್ಧೆ ಇದಕ್ಕಿಂತಲೂ ಒಂದು ಕೈ ಮಿಗಿಲಾದುದು. ಏಕೆಂದರೆ, ಅವರ ಕಾವ್ಯ ಹುಟ್ಟಿದ್ದೇ ಬೀದಿಗಳಲ್ಲಿ. ಅವರು ಪದ ಕಟ್ಟಿದ್ದೇ ಜನರ ಮಧ್ಯೆ. ಹಾಗಾಗಿ, ಆ ಸ್ಪರ್ಧೆ ವಿಭಿನ್ನವೂ ವಿಶಿಷ್ಟವೂ ಆಗಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಖ್ಯವಾಗಿ ಗಮನಿಸಬೇಕಿರುವುದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಅವರ ನಿಲುವನ್ನು. ಆ ನಿಲುವೇ ಅವರು ಪಕ್ಷಗಳಿಗಿಂತಲೂ ಜನರಿಗೆ ಹತ್ತಿರವಿದ್ದಾರೆ ಎಂಬುದನ್ನು ಸೂಚಿಸುವಂತಿದೆ. ಪಕ್ಷದೊಟ್ಟಿಗೆ ಗುರುತಿಸಿಕೊಂಡರೆ ಅದು ತಥಾಕಥಿತ ರಾಜಕಾರಣ ಆಗಿಬಿಡುತ್ತದೆ. ಅಂತಹ ರಾಜಕಾರಣದ ಆಚೆಗೆ ತಾನಿರುವುದನ್ನು ಶುಕ್ರವಾರ ರಾಹುಲ್ ಗಾಂಧಿ ಅವರೊಂದಿಗೆ ಆಡಿರುವ ಮಾತುಗಳು ಸೂಚಿಸುತ್ತವೆ.

ಕೆಸಿಆರ್ ಅವರ ವಿರುದ್ಧ ಚಿಗುರಿರುವ ರಾಜಕೀಯ ಶಕ್ತಿಗಳು ತೀರಾ ಸಣ್ಣವು. ಆದರೆ, ಶಕ್ತಿಯುತವಾದವು. ಈ ಶಕ್ತಿಗಳೆಲ್ಲ ಮುಪ್ಪುರಿಗೊಂಡರೆ, ಅದನ್ನು ಮತದಾರರೂ ಸ್ವಾಗತಿಸಿದರೆ, ಕೆಸಿಆರ್ ಅವರ ರಾಷ್ಟ್ರ ರಾಜಕಾರಣದ ಕನಸಿರಲಿ, ರಾಜ್ಯ ರಾಜಕಾರಣದ ಕನಸಿನ ಬಗ್ಗೆಯೇ ಸಾಕಷ್ಟು ಯೋಚನೆ ಮಾಡಬೇಕಾದೀತು. ಆದರೆ, ಅದು ಅಷ್ಟು ಸುಲಭವವಲ್ಲ ಎಂಬುದು ವಾಸ್ತವ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More