ತಮ್ಮ ರಾಜ್ಯದ ಜನರ ಮೇಲಿನ ದಾಳಿ ಬಗ್ಗೆ ಬಿಹಾರ ರಾಜಕಾರಣಿಗಳೇಕೆ ಮಾತನಾಡುತ್ತಿಲ್ಲ?

ಗುಜರಾತಿನಲ್ಲಿ ಬಿಹಾರ, ಉ.ಪ್ರದೇಶ ಕೂಲಿಕಾರ್ಮಿಕರ ಮೇಲೆ ವ್ಯಾಪಕ ಹಿಂಸಾಚಾರ ನಡೆದಿದೆ, ಬಹುತೇಕರು ಸ್ವರಾಜ್ಯಕ್ಕೆ ಮರಳಿದ್ದೂ ಆಗಿದೆ. ಇಷ್ಟಾದರೂ ಈ ದಾಳಿಗಳ ಬಗ್ಗೆ ಬಿಹಾರದ ರಾಜಕಾರಣಿಗಳು ತುಟಿ ಬಿಚ್ಚುತ್ತಿಲ್ಲವೇಕೆ? ಈ ಕುರಿತು ‘ಸ್ಕ್ರಾಲ್‌’ ಪ್ರಕಟಿಸಿರುವ ವರದಿಯ ಭಾವಾನುವಾದವಿದು

ಗುಜರಾತಿನ ಸ್ಥಳೀಯರು ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಬಿಹಾರದ ಕಾರ್ಮಿಕರ ಮೇಲೆ ನಡೆಸಿದ ದಾಳಿಯಿಂದ 50 ಸಾವಿರಕ್ಕೂ ಹೆಚ್ಚು ಮಂದಿ ಗುಜರಾತ್ ತೊರೆದಿದ್ದಾರೆ. ಈ ವಲಸಿಗರ ಪೈಕಿ ಬಿಹಾರದ ಮಹಮ್ಮದ್ ಇಸ್ರಾಫಿಲ್ ಸಹ ಒಬ್ಬರು. ಗುಜರಾತಿನ ಸಬರ್‌ಕಾಂತ್‌ ಜಿಲ್ಲೆಯಲ್ಲಿ ಸೆಪ್ಟೆಂಬರ್ ೨೮ರಂದು ಹೆಣ್ಣುಮಗುವಿನ ಮೇಲೆ ಬಿಹಾರ‌ ಮೂಲದ ಕಾರ್ಮಿಕ ಅತ್ಯಾಚಾರ ಎಸಗಿದ್ದಾನೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಗುಜರಾತಿಗರು ವಲಸಿಗರ ಮೇಲೆ ದಾಳಿ ಆರಂಭಿಸಿದ್ದರು. ಬಿಹಾರದ ಸಹರ್ಷಾ ಮೂಲದವರಾದ ಇಸ್ರಾಫಿಲ್ ಅಹ್ಮದಾಬಾದ್ ಸಮೀಪದಲ್ಲಿ ಮೆಟ್ರೊ ರೈಲು ಪ್ರಾಜೆಕ್ಟ್‌ನಲ್ಲಿ ದುಡಿಯುತ್ತಿದ್ದರು. ಇಸ್ರಾಫಿಲ್ ಅವರಿಗೆ ದಾಳಿಯ ಬಿಸಿ ತಟ್ಟದೇ ಇದ್ದರೂ ವಾಟ್ಸ್ಆ್ಯಪ್ ಸಂದೇಶಗಳ ಮೂಲಕ ವಡೋದರದಲ್ಲಿ ದಾಳಿ ನಡೆದಿದೆ ಎಂಬ ಭೀತಿ ಹುಟ್ಟುಹಾಕಲಾಗಿದ್ದರಿಂದ ಜೀವಭಯದಿಂದ ಇಸ್ರಾಫಿಲ್‌ ಹಾಗೂ‌‌ ಸಂಗಡಿಗರು ಗುಜರಾತಿನಿಂದ ಬಿಹಾರಕ್ಕೆ ಮರಳಿದ್ದಾರೆ. "ತುಂಬಾ ಭಯವಾಗುತ್ತಿತ್ತು. ಪರಿಸ್ಥಿತಿ ತಿಳಿಗೊಂಡ ನಂತರ ವಾಪಸ್ ಹೋದರೆ ಆಯಿತು ಎಂದು ಮರಳಿದ್ದೇವೆ. ಬುಧವಾರ ಪಟ್ನಾ ಮರಳಿದ್ದು,‌ ಸಮಾಧಾನವಾಗಿದೆ," ಎಂದು ಅವರು ನಿಟ್ಟುಸಿರು ಬಿಟ್ಟಿದ್ದಾರೆ.

ವಲಸಿಗರ ಮೇಲಿನ ದಾಳಿ ತಡೆಯಲು ಗುಜರಾತ್ ಸರ್ಕಾರ ವಿಫಲವಾಗಿರುವುದು ಒದೆಡೆಯಾದರೆ ಬಿಹಾರದ ಯಾವುದೇ ರಾಜಕೀಯ ಪಕ್ಷಗಳು ದಾಳಿಯ ಬಗ್ಗೆ ತುಟಿಬಿಚ್ಚದಿರುವುದು ಕುತೂಹಲ‌‌ ಮೂಡಿಸಿದೆ. "ಬಾಲಕಿಯ ಮೇಲೆ‌ ಅತ್ಯಾಚಾರ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆದರೆ, ಮುಗ್ಧ ಕಾರ್ಮಿಕರ ಮೇಲಿನ ದಾಳಿಯನ್ನು ಹೇಗೆ ಸಮರ್ಥಿಸುವುದು? ದುಡಿಮೆಗಾಗಿ ಮತ್ತೊಂದು ರಾಜ್ಯಕ್ಕೆ ತೆರಳಿದ ಜನರ ಭದ್ರತೆಯ ಬಗ್ಗೆ ಗಮನಹರಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲವೇ? ಕಾಂಗ್ರೆಸ್ ಶಾಸಕರೊಬ್ಬರು ಸ್ಥಳೀಯರು ವಲಸಿಗರ ಮೇಲೆ‌ ದಾಳಿ ಮಾಡುವುದಕ್ಕೆ ಪ್ರಚೋದನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇದುವರೆಗೂ ಅವರನ್ನು ಬಂಧಿಸಿಲ್ಲವೇಕೆ?" ಎಂದು ಇಸ್ರಾಫಿಲ್ ಪ್ರಶ್ನಿಸಿದ್ದಾರೆ.

ವಲಸಿಗರ ಮೇಲಿನ ದಾಳಿಗೆ ಪ್ರಚೋದನೆ ನೀಡಿದ ಆರೋಪಕ್ಕೆ ಗುರಿಯಾಗಿರುವುದು ಕಾಂಗ್ರೆಸ್ ಶಾಸಕ ಅಲ್ಫೇಶ್ ಠಾಕೂರ್. ಅಕ್ಟೋಬರ್ ೧ರ ಸಮಾವೇಶದಲ್ಲಿ ಉತ್ತರ ಭಾರತದ ವಲಸಿಗರ ಮೇಲಿನ ದಾಳಿಗೆ ಅಲ್ಫೇಶ್ ಪ್ರಚೋದನೆ ನೀಡಿದ್ದರು‌ ಎಂದು ಆರೋಪಿಸಲಾಗಿದೆ. ಆದರೆ, ವಲಸಿಗರ ಮೇಲಿನ ದಾಳಿಯನ್ನು ಬಿಹಾರದ ಯಾವುದೇ ರಾಜಕೀಯ ಪಕ್ಷ ಟೀಕಿಸಿಲ್ಲ ಎಂದು ಇಸ್ರಾಫಿಲ್ ಬೇಸರ ವ್ಯಕ್ತಪಡಿಸಿದ್ದು, ನಿತೀಶ್ ಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪರಸ್ಪರ ಕೆಸರೆರಚಾಟ ಹೊರತುಪಡಿಸಿ ಬಿಹಾರದ ಎಲ್ಲಾ ರಾಜಕಾರಣಿಗಳು ಮೌನವಾಗಿರುವುದೇಕೆ? "ಬಿಹಾರದಲ್ಲಿ ಸತತವಾಗಿ ಆಡಳಿತ ನಡೆಸುತ್ತಾ ಬಂದಿರುವ ರಾಜಕೀಯ ಪಕ್ಷಗಳು ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವುದು ರಾಜಕಾರಣಿಗಳ ಮೌನದ ಹಿಂದಿನ ಸತ್ಯ" ಎನ್ನುತ್ತಾರೆ ಎಎನ್ ಸಿನ್ಹಾ ಸಾಮಾಜಿಕ ಅಧ್ಯಯನ ಸಂಸ್ಥೆಯ‌ ಪ್ರಾಧ್ಯಾಪಕ ಡಿ ಎಂ ದಿವಾಕರ್. ಇದರ ಜೊತೆಗೆ ಜನರ ಮೇಲೆ ಆಗಾಗ್ಗೆ ಸಂಭವಿಸುವ ದಾಳಿ ತಡೆಯಲು ಯೋಜನೆ ರೂಪಿಸುವಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿವೆ. ಬಿಹಾರದ ಕಾರ್ಮಿಕರ ಮೇಲೆ ಹಿಂದೆ ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳದಲ್ಲಿ ಇದೇ ತೆರನಾದ ದಾಳಿಗಳು ನಡೆದ ಐತಿಹ್ಯಗಳಿವೆ. "ಹಿಂದಿನ ಎಲ್ಲಾ ಸರ್ಕಾರಗಳು ನಿರುದ್ಯೋಗ ಸಮಸ್ಯೆ ಪರಿಹರಿಸಲು ವಿಫಲವಾಗಿವೆ ಎಂಬುದನ್ನು ಸರ್ಕಾರದ ದತ್ತಾಂಶಗಳೇ‌ ಹೇಳುತ್ತವೆ. ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಜನರು ಉದ್ಯೋಗ ಅರಿಸಿ ವಲಸೆ ಹೋಗುವುದು ಅನಿವಾರ್ಯವಾಗಿದೆ" ಎಂದ ವಿವರಿಸುತ್ತಾರೆ ದಿವಾಕರ್. "ಎಲ್ಲಾ ಪಕ್ಷಗಳು ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಭಾವನಾತ್ಮಕ ವಿಚಾರವಾದ ನಿರುದ್ಯೋಗ ಸಮಸ್ಯೆಯನ್ನು ಎತ್ತುವುದು ಯಾರಿಗೂ ಇಷ್ಟವಿಲ್ಲ," ಎನ್ನುವುದು ದಿವಾಕರ್ ವಿವರಣೆ.

ಯಾವ ಪಕ್ಷ ನಿರೋದ್ಯೋಗದ ಬಗ್ಗೆ ಮಾತನಾಡುತ್ತದೋ ಅದು ಸಮಸ್ಯೆಗೆ ಪರಿಹಾರ ಒದಗಿಸಬೇಕಾಗುತ್ತದೆ. ಆಡಳಿತರೂಢ ಜೆಡಿಯು ಸಮಸ್ಯೆಯನ್ನು ಆದಷ್ಟು ಮುಚ್ಚಿಹಾಕಲು ಯತ್ನಿಸುತ್ತಿದೆ. ಸಮಸ್ಯೆ ವ್ಯಾಪಕವಾಗಿ ಜನರು ಉತ್ತರ ಬಯಸಿದರೆ‌ ಅದಕ್ಕೆ ಉತ್ತರ ಕೊಡುವ ಪರಿಸ್ಥಿತಿಯಲ್ಲಿ ಜೆಡಿಯು ಇಲ್ಲ. "ಹಲವು ಹೂಡಿಕೆದಾರರ ಸಮಾವೇಶ ನಡೆದಿದ್ದರೂ ಬಿಹಾರಕ್ಕೆ ಯಾವುದೇ ಹೊಸ ಉದ್ಯಮಗಳು ಬಂದಿಲ್ಲ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಗದದ ಮೇಲೆ ಮಾತ್ರವಿದೆ. ಆದ್ದರಿಂದ, ದಾಳಿಯ ಭೀತಿಯಿಂದ ತವರಿಗೆ ಬಂದಿರುವ ಜನರು ನಿಧಾನಕ್ಕೆ‌ ಮರಳಿ ತಮ್ಮ ಉದ್ಯೋಗಕ್ಕೆ‌ ತೆರಳುವವರೆಗೆ ಮೌನವಾಗಿರುವುದು ಅನಿವಾರ್ಯ. ಇದರಿಂದ ರಾಜಕೀಯ ಹಿನ್ನಡೆಯಿಂದ ಪಾರಾಗುವುದು ಆಡಳಿತ ಪಕ್ಷದ ತಂತ್ರ," ಎನ್ನುತ್ತಾರೆ ದಿವಾಕರ್.

"ಗುಜರಾತ್ ಕಾಂಗ್ರೆಸ್ ಶಾಸಕ ಅಲ್ಫೇಶ್ ಠಾಕೂರ್ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದಿಂದಾಗಿ ಬಿಹಾರದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಒಳಗಾಗಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಎದುರಿಸಬೇಕಾಗಿರುವುದರಿಂದ ಭಾವನಾತ್ಮಕ ವಿಚಾರ ಪ್ರಸ್ತಾಪಿಸಿ ಕೈಸುಟ್ಟುಕೊಳ್ಳುವುದು ಆರ್‌ಜೆಡಿಗೆ ಬೇಕಿಲ್ಲ. ಮತ್ತೊಂದೆಡೆ‌ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ನೋಟು ರದ್ದತಿ‌ ಮತ್ತು ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್ಟಿ) ಬಿಜೆಪಿ ಮತ್ತು ಮಿತ್ರಪಕ್ಷವಾದ ಜೆಡಿಯು ಸಾರ್ವಜನಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ. ಈ ಎರಡೂ ಯೋಜನೆಗಳು ಭಾರತದ ಅರ್ಥ ವ್ಯವಸ್ಥೆಗೆ ಭಾರಿ ಹೊಡೆತ ನೀಡಿದ್ದು, ನಿರುದ್ಯೋಗ ವ್ಯಾಪಕವಾಗಿದೆ," ಎನ್ನುತ್ತಾರೆ ದಿವಾಕರ್.

ಇವೆಲ್ಲದರಾಚೆಗೆ ಗುಜರಾತಿನಲ್ಲಿ ವಲಸಿಗರ ಮೇಲಿನ ದಾಳಿಯು ನರೇಂದ್ರ ಮೋದಿ‌ ಸರ್ಕಾರದ ವಿಫಲ ನೀತಿಗಳ ಫಲವಾಗಿದೆ. "ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಗುಜರಾತಿನ ಸಾಮಾಜಿಕ‌ ಸೂಚಿಗಳು ನಿಕೃಷ್ಟವಾಗಿವೆ. ಇದರಿಂದ ಹಿನ್ನಡೆ ಸಹಜವಾಗಿದೆ," ಎನ್ನುವುದು ದಿವಾಕರ್ ವಿವರಣೆ. ತಮ್ಮ ಮೇಲಿನ ದಾಳಿಗಳಿಗೆ ಬಿಹಾರದ ಜನತೆ ಒಗ್ಗಿಕೊಂಡಿದ್ದು, ಇದು ಅವರಿಗೆ ಸಮಸ್ಯೆಯಾಗಿಲ್ಲ. ಇದು ಬಿಹಾರದ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿದೆ. ಪರಿಸ್ಥಿತಿ‌ ತಿಳಿಗೊಂಡ ನಂತರ ತಮ್ಮ ಕರ್ತವ್ಯಕ್ಕೆ‌ ಜನರು ಹಾಜರಾಗುತ್ತಾರೆ. ಎಂದಿನಂತೆ ರಾಜಕಾರಣಿಗಳು ನಿರುದ್ಯೋಗ ಹೊರತುಪಡಿಸಿ ಬೇರೆ ವಿಚಾರಗಳ ಬಗ್ಗೆ ಮಾತನಾಡಲಾರಂಭಿಸುತ್ತಾರೆ.

ರಾಜಕಾರಣಿಗಳ ಕೆಸರೆರಚಾಟ

ವಲಸಿಗರ ಮೇಲಿನ ದಾಳಿಯನ್ನು ಇಟ್ಟುಕೊಂಡು ಬಿಜೆಪಿ, ಆರ್‌ಜೆಡಿ, ಜೆಡಿಯು ಮತ್ತು ಕಾಂಗ್ರೆಸ್‌ ಕೆಸರೆರಚಾಟ ಆರಂಭಿಸಿವೆ. “ಗುಜರಾತಿನಲ್ಲಿ ಬಿಹಾರದ ಕಾರ್ಮಿಕರ ಮೇಲಿನ ದಾಳಿಯ ಕುರಿತಂತೆ ನಿರಂತರವಾಗಿ ಪ್ರತಿಭಟನೆ‌ ನಡೆಸುತ್ತಿದ್ದೇವೆ. ಆದರೆ, ಮಾಧ್ಯಮಗಳು ಅಗತ್ಯ ಪ್ರಚಾರ ನೀಡುತ್ತಿಲ್ಲ,” ಎಂದು ಆರ್‌ಜೆಡಿ ಸಂಸದ ಮನೋಜ್ ಝಾ ಪ್ರತಿಕ್ರಿಯಿಸಿದ್ದಾರೆ. “ಅಲ್ಫೇಶ್ ವಿರುದ್ಧ ದಾಖಲೆಗಳಿದ್ದರೆ ಗುಜರಾತ್ ಸರ್ಕಾರವೇಕೆ‌ ಕ್ರಮಕೈಗೊಂಡಿಲ್ಲ? ಮೋದಿ‌ ಅಧಿಕಾರಕ್ಕೆ‌ ಬಂದ‌ ನಂತರ ಜನರನ್ನು ಎತ್ತಿ ಕಟ್ಟುವ ರಾಜಕಾರಣ ಜಾರಿಗೆ ಬಂದಿದೆ. ಜವಾಬ್ದಾರಿಯುತ ಪಕ್ಷವಾಗಿ ನಾವು ಹಾಗೆ ನಡೆದುಕೊಳ್ಳಲಾಗದು. ಜನರ ಮೇಲಿನ ದಾಳಿಯನ್ನು ಗುಜರಾತ್ ವರ್ಸಸ್ ಬಿಹಾರ ದಾಳಿಯಾಗಿ ನೋಡಲಾಗದು. ಆದರೆ, ಹೀಗೆ ಮಾಡಲಿ ಎಂಬ ಆಸೆಯನ್ನು ಬಿಜೆಪಿಗೆ ಎದುರು ನೋಡುತ್ತಿದೆ. ಹೀಗಾದರೆ ತನ್ನ ರಾಜಕೀಯ ಬೇಳೆಬೇಯಿಸಿಕೊಳ್ಳಲು ಅದಕ್ಕೆ ಅನುಕೂಲವಾಗುತ್ತದೆ,” ಎಂದು ಝಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯನ್ನು ಖಂಡಿಸಿರುವ ಜೆಡಿಯು ನಾಯಕ ಕೆ ಸಿ ತ್ಯಾಗಿ, "ಸಮಸ್ಯೆಗೆ ಗುಜರಾತ್ ಬಿಜೆಪಿ ಸರ್ಕಾರ ಹಾಗೂ ಕಾಂಗ್ರೆಸ್ ಕಾರಣ. ಬಿಹಾರ ಕಾಂಗ್ರೆಸ್ ಘಟಕದ‌ ಉಪ ಉಸ್ತುವಾರಿಯಾದ ಅಲ್ಫೇಶ್ ಠಾಕೂರ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಪಕ್ಷದ ಉನ್ನತ ಸ್ಥಾನದಲ್ಲಿ ಅಲ್ಫೇಶ್ ಅಂಥವರನ್ನು ಇಟ್ಟು ಕಾಂಗ್ರೆಸ್ ಯಾವ ರೀತಿಯ ರಾಜಕಾರಣ ಮಾಡುತ್ತಿದೆ," ಎಂದು ಪ್ರಶ್ನಿಸಿದ್ದಾರೆ.

ವಲಸಿಗರಿಗೆ ಭದ್ರತೆ ಒದಗಿಸಲು ಗುಜರಾತ್ ಸರ್ಕಾರ ವಿಫಲವಾಗಿದೆ. ಛತ್ ಪೂಜೆ‌ ಮಾಡಲು ಬಿಹಾರಿಗರು ತವರಿಗೆ ತೆರಳಿದ್ದಾರೆ ಎಂಬ ಗುಜರಾತ್ ಪೊಲೀಸ್ ಮುಖ್ಯಸ್ಥರ ಹೇಳಿಕೆಯನ್ನು ತ್ಯಾಗಿ ಕಟುವಾಗಿ ಟೀಕಿಸಿದ್ದಾರೆ. "ದೇಹದ ತುಂಬಾ ಗಾಯ ಮಾಡಿಕೊಂಡು ಜನರು ಛತ್ ಪೂಜಾ ಮಾಡಲು ಹೋಗುತ್ತಾರೆಯೇ? ಪ್ರಾಂತೀಯತೆ ದೇಶಕ್ಕೆ‌ ಮಾರಕ. ಇದು ಗುಜರಾತ್ ಸರ್ಕಾರದ ತಪ್ಪು ಮಾದರಿಯಾಗಿದ್ದು, ಅಲ್ಲಿನ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು," ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಗುಜರಾತಿನಲ್ಲಿ ಪ್ರಾಣಭಯ ಎದುರಿಸುತ್ತಿರುವ ಉ.ಪ್ರದೇಶ, ಬಿಹಾರ ಮೂಲದ ಕಾರ್ಮಿಕರು

ಬಿಜೆಪಿಯು ವಲಸಿಗರ ಮೇಲಿನ ದಾಳಿಗೆ ಕಾಂಗ್ರೆಸ್ ಕಾರಣ‌ ಎಂದಿದೆ. “ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚನೆಯಂತೆ ಅಲ್ಫೇಶ್ ಠಾಕೂರ್ ನಡೆದುಕೊಂಡಿದ್ದಾರೆ. ಗುಜರಾತಿನಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶದ ಕಾರ್ಮಿಕರ ಮೇಲೆ ದಾಳಿಗೆ ಕಾಂಗ್ರೆಸ್ ಕುಮ್ಮಕ್ಕಿದೆ. ರಾಜಕೀಯ ಲಾಭಕ್ಕಾಗಿ ದೇಶಕ್ಕೆ ಬೆಂಕಿ ಇಡುವ ಪಿತೂರಿಯನ್ನು ಕಾಂಗ್ರೆಸ್ ಆರಂಭಿಸಿದೆ,” ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.

ಅಲ್ಫೇಶ್ ಮೇಲಿನ ಆರೋಪವನ್ನು ತಳ್ಳಿಹಾಕಿರುವ ಕಾಂಗ್ರೆಸ್, “ಅಲ್ಫೇಶ್ ವರ್ಚಸ್ಸಿಗೆ ಮಸಿ ಬಳಿಯುವ ಕೆಲಸವನ್ನು ಬಿಜೆಪಿ ಮಾಡಿದೆ. ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಬಡವರ ಮೇಲೆ ದಾಳಿ ನಡೆಸಲಾಗಿದೆ. ಇದಕ್ಕಾಗಿ ಹೊಸ ವಿವಾದ ಸೃಷ್ಟಿಸಲಾಗಿದೆ,” ಎಂದು ಕಾಂಗ್ರೆಸ್ ದೂರಿದೆ. "ಒಬ್ಬ ವ್ಯಕ್ತಿ ಹಲವು ಜನರನ್ನು ರಾಜ್ಯ ತೊರೆಯುವಂತೆ ಮಾಡುತ್ತಾರೆ ಮತ್ತು ರಾಜ್ಯ ಸರ್ಕಾರ ಏನು ಮಾಡಲಾರದ ಸ್ಥಿತಿಯಲ್ಲಿದೆ ಎಂದು ಹೇಳಲು ಹೊರಟಿದೆಯೇ?" ಎಂದು ಕಾಂಗ್ರೆಸ್ ನಾಯಕ‌ ಕಿಶೋರ್ ಕುಮಾರ್ ಝಾ ಪ್ರಶ್ನಿಸಿದ್ದಾರೆ. "ಬಿಜೆಪಿ ಅಧಿಕಾರದಲ್ಲಿರುವ ಕಡೆಗಳಲ್ಲೆಲ್ಲಾ ಹೀಗೇಕೆ ಆಗುತ್ತಿದೆ. ಒಂದು ಸಮುದಾಯದ ಮೇಲೆ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವುದು ಬಿಜೆಪಿಯ ವಂಶವಾಹಿಯಲ್ಲಿದೆ. ಇದಕ್ಕೆ ೨೦೧೯ರ ಲೋಕಸಭಾ ಚುನಾವಣೆಯಲ್ಲಿ‌ ಜನರು ತಕ್ಕ ಪಾಠ ಕಲಿಸಲಿದ್ದಾರೆ,” ಎಂದು ಗುಡುಗಿದ್ದಾರೆ.

ಬಿಹಾರದಲ್ಲಿ ಕಾಂಗ್ರೆಸ್ ಉಸ್ತುವಾರಿಯನ್ನು ಗುಜರಾತಿನ ನಾಯಕರಾದ ಶಕ್ತಿ ಸಿನ್ಹಾ ಗೋಯೆಲ್‌ ಹಾಗೂ ಅಲ್ಫೇಶ್ ಠಾಕೂರ್ ಒತ್ತುಕೊಂಡಿದ್ದಾರೆ. ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪಕ್ಕೆ ಗುರಿಯಾಗಿರುವ ಅಲ್ಫೇಶ್ ಅವರು ಕಾಂಗ್ರೆಸ್ಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಎಲ್ಲಾ‌ ಪಕ್ಷಗಳ ನಾಯಕರು ಪರಸ್ಪರ ಟೀಕೆಯಲ್ಲಿ ತೊಡಗಿದ್ದಾರೆ. ಪ್ರತಿವರ್ಷ ಸಾಕಷ್ಟು ಜನರು ಕೆಲಸ ಹುಡುಕಿ ವಲಸೆ ಹೋಗುತ್ತಿರುವುದೇಕೆ ಎಂಬುದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More