ಬಳ್ಳಾರಿ ಕಾಂಗ್ರೆಸ್‌ ಕಣಕ್ಕೆ ಉಗ್ರಪ್ಪ ಆಗಮನದ ಹಿಂದಿನ ಲೆಕ್ಕಾಚಾರಗಳೇನು?

ಬಣ ರಾಜಕೀಯದಿಂದ ನಲುಗಿರುವ ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್,‌ ಎಂಎಲ್‌ಸಿ ಉಗ್ರಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಮೂಲಕ ಅವರನ್ನು ಹರಕೆಯ ಕುರಿ ಆಗಿಸಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಆದರೆ, ಇದರ ಹಿಂದಿನ ಲೆಕ್ಕಾಚಾರವೇ ಬೇರೆ ಎನ್ನಲಾಗಿದೆ

ರಾಜ್ಯದಲ್ಲಿ ಎದುರಾಗಿರುವ ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಉಪಚುನಾವಣೆಗಳು ಪಕ್ಷಾತೀತವಾಗಿ ರಾಜಕಾರಣಿಗಳಿಗೆ ಪೀಕಲಾಟ ತಂದಿಟ್ಟಿರುವುದರ ನಡುವೆ ಅಚ್ಚರಿಯ ಬೆಳವಣಿಗೆಯೊಂದು ಘಟಿಸಿದೆ. ಅಕ್ರಮ ಗಣಿಗಾರಿಕೆಯಿಂದ ದೇಶದ ಗಮನ ಸೆಳೆದಿದ್ದ ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ವಿಧಾನ ಪರಿಷತ್‌ ಸದಸ್ಯ ವಿ ಎಸ್‌ ಉಗ್ರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಸಿದ್ದರಾಮಯ್ಯನವರ ಹಿಡಿತ ಬಳ್ಳಾರಿ ಕಣದಲ್ಲಿಯೂ ಮುಂದುವರಿಯಲಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಬಿಸಿಲ ನಾಡು ಬಳ್ಳಾರಿ ಲೋಕಸಭಾ ಕ್ಷೇತ್ರವು ಪರಿಶಿಷ್ಟ ಸಮುದಾಯಕ್ಕೆ ಮೀಸಲಾಗಿದೆ. ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಾದ ಉಗ್ರಪ್ಪ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಮುದಾಯದ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಶ್ರಮಿಸಿದ್ದಾರೆ. ಉತ್ತಮ ಸಂಸದೀಯ ಪಟುವಾದ ಉಗ್ರಪ್ಪ ತಮ್ಮದೇ ಸಮುದಾಯದ ನಾಯಕರಾದ ಬಿ ಶ್ರೀರಾಮುಲು ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ. ಬಳ್ಳಾರಿಗೆ ಸಂಬಂಧಿಸಿದಂತೆ ಅಕ್ರಮ ಗಣಿಗಾರಿಕೆಯ ವಿವಿಧ ಸಮಿತಿಗಳಲ್ಲಿ ಪ್ರಮುಖರಾಗಿ ಕೆಲಸ ಮಾಡಿ, ರೆಡ್ಡಿ ಸಹೋದರರ ವಿರುದ್ಧ ಕೆಂಡ ಕಾರಿದ್ದರೂ ಎಂದಿಗೂ ಶ್ರೀರಾಮುಲು ಅವರನ್ನು ಕೇಂದ್ರೀಕರಿಸಿ ಉಗ್ರಪ್ಪ ವಾಗ್ದಾಳಿ ನಡೆಸಿದವರಲ್ಲ. ಶ್ರೀರಾಮುಲು ಅವರೂ ಸಮುದಾಯದ ಹಿರಿಯ ನಾಯಕ ಉಗ್ರಪ್ಪ ಅವರ ಬಗ್ಗೆ ಅಷ್ಟೇ ಗೌರವ ಹೊಂದಿದ್ದಾರೆ. ಉಪಚುನಾವಣೆಯಲ್ಲಿ ಶ್ರೀರಾಮುಲು ಅವರ ಸಹೋದರಿ ಜಿ ಶಾಂತಾ ಸ್ಪರ್ಧೆ ಮಾಡುತ್ತಿರುವುದರಿಂದ ಉಗ್ರಪ್ಪ ಅವರನ್ನು ಕಣಕ್ಕಿಳಿಸುವ ಮೂಲಕ ಶ್ರೀರಾಮುಲು ಹಾಗೂ ಉಗ್ರಪ್ಪ ಅವರನ್ನು ಮುಖಾಮುಖಿ ಆಗಿಸುವ ಚಾಣಾಕ್ಷ ನಡೆಯನ್ನು ಕಾಂಗ್ರೆಸ್‌ ಇರಿಸಿದೆ. ಆದರೆ, ಉಗ್ರಪ್ಪ ಸ್ಪರ್ಧೆಗೆ ಕಾಂಗ್ರೆಸ್‌ ವಲಯದಲ್ಲಿ ಅಚ್ಚರಿ ವ್ಯಕ್ತವಾಗಿದೆ. ಹಿರಿಯ ನಾಯಕರಾದ ಉಗ್ರಪ್ಪ ಸುಶಿಕ್ಷಿತ ಮತ್ತು ಅನುಭವಿ ರಾಜಕಾರಣಿಯಾದರೂ ಪ್ರತಿಷ್ಠೆಯ ಕಣವಾದ ಬಳ್ಳಾರಿ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯಲ್ಲ; ಉಗ್ರಪ್ಪ ಹರಕೆಯ ಕುರಿ ಎಂಬ ಅಭಿಪ್ರಾಯ ಕಾಂಗ್ರೆಸ್‌ ವಲಯದಿಂದಲೇ ಕೇಳಿಬಂದಿದೆ.

ಕಳೆದ ವಿಧಾನಸಭಾ ಚುನಾವಣೆಯ ನಂತರ ರಾಜ್ಯ ರಾಜಕೀಯಕ್ಕೆ ಮರುಪ್ರವೇಶ ಪಡೆದಿರುವ ರೆಡ್ಡಿ ಸಹೋದರರಿಗೆ ಪ್ರಬಲ ಸ್ಪರ್ಧೆ ಒಡ್ಡಲು ಬಳ್ಳಾರಿ ಗ್ರಾಮೀಣ ಶಾಸಕ, ಕಾಂಗ್ರೆಸ್‌ನ ನಾಗೇಂದ್ರ ಅವರ ಸಹೋದರ ವೆಂಕಟೇಶ್‌ ಪ್ರಸಾದ್‌ ಅವರನ್ನು ಕಣಕ್ಕಿಳಿಸಲಾಗುತ್ತದೆ ಎನ್ನಲಾಗಿತ್ತು. ಆದರೆ, ವೆಂಕಟೇಶ್ ಪ್ರಸಾದ್‌ ಸ್ಪರ್ಧೆಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಕೆ ಶಿವಕುಮಾರ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ. ಮೊದಲಿಗೆ ಬಳ್ಳಾರಿಗೆ ಅಭ್ಯರ್ಥಿ ಆಯ್ಕೆ ವಿಚಾರವನ್ನು ಶಿವಕುಮಾರ್‌ಗೆ ವಹಿಸಲಾಗಿತ್ತು. ಆದರೆ, ಬಳ್ಳಾರಿ ಜಿಲ್ಲಾ ರಾಜಕಾರಣದಲ್ಲಿ ಶಿವಕುಮಾರ್‌ ಹಸ್ತಕ್ಷೇಪವನ್ನು ಸಹಿಸದ ಕಾಂಗ್ರೆಸ್‌ ಶಾಸಕರು, ಸಭೆಯಿಂದ ದೂರ ಉಳಿಯುವ ಮೂಲಕ ಪ್ರತಿಭಟನೆ ದಾಖಲಿಸಿದ್ದರು. ಮೇಲಿಂದ ಮೇಲೆ ಪಕ್ಷದಲ್ಲಿ ತಮ್ಮ ಪ್ರಭುತ್ವವನ್ನು ಸಾಬೀತುಪಡಿಸುತ್ತಲೇ ಬಂದಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು. ಇದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಶಿವಕುಮಾರ್‌ ಅವರು, ನಾಗೇಂದ್ರ ಸಹೋದರನಿಗೆ ಟಿಕೆಟ್‌ ನೀಡುವುದಕ್ಕೆ ತೀವ್ರ ವಿರೋಧ ದಾಖಲಿಸಿದ್ದರು ಎನ್ನಲಾಗಿದೆ. ಇದರಿಂದ ಭಾರಿ ಒತ್ತಡಕ್ಕೆ ಸಿಲುಕಿದ್ದ ಸಿದ್ದರಾಮಯ್ಯ, ಅಂತಿಮವಾಗಿ ಅಚ್ಚರಿಯ ಮತ್ತು ಯೋಜಿತ ತಂತ್ರವನ್ನು ಹೆಣೆದಿದ್ದಾರೆ. ತಮ್ಮ ಆಪ್ತಬಳಗದಲ್ಲಿ ಗುರುತಿಸಿಕೊಂಡಿರುವ ಉಗ್ರಪ್ಪ ಅವರನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ತಂತ್ರಗಾರಿಕೆ ಮೆರೆದಿದ್ದಾರೆ.

ಇದನ್ನೂ ಓದಿ : ಕುಟುಂಬ ರಾಜಕಾರಣ ಮುಂದುವರಿಕೆಗೆ ರಹದಾರಿ ಆಗಲಿದೆಯೇ ಉಪಚುನಾವಣೆ?

ಬೆಳಗಾವಿ ರಾಜಕಾರಣದ ಪ್ರಕರಣದಲ್ಲಿ ಶಿವಕುಮಾರ್ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎನ್ನುವ ಕಾರಣ ಮುಂದಿಟ್ಟು, ವಾಲ್ಮೀಕಿ ಸಮುದಾಯದ ಜಾರಕಿಹೊಳಿ ಸಹೋದರರು ಡಿಕೆಶಿ ವಿರುದ್ಧ ಸಮರ ಸಾರಿದ್ದರು. ಈ ಸಂದರ್ಭದಲ್ಲಿ ನಾಗೇಂದ್ರ ಸಹಿತ ಸಮುದಾಯದ ಬಹುತೇಕ ನಾಯಕರು ಜಾರಕಿಹೊಳಿ ಸಹೋದರರ ಬಣದಲ್ಲಿ ಗುರುತಿಸಿಕೊಂಡಿದ್ದರು. ಸ್ಥಳೀಯ ಶಾಸಕರೂ ಶಿವಕುಮಾರ್‌ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ಅವರು ಕರೆದಿದ್ದ ಸಭೆಯಿಂದ ದೂರು ಉಳಿದಿದ್ದರು ಎನ್ನಲಾಗಿದೆ. ಬಳ್ಳಾರಿ ರಾಜಕಾರಣದಲ್ಲಿ ಡಿಕೆಶಿ ಅವರ ಹಿಡಿತ ಹೆಚ್ಚುವುದನ್ನು ತಪ್ಪಿಸಲು ನಾಗೇಂದ್ರ ಸಹಿತ ಜಿಲ್ಲೆಯ ಬಹುತೇಕ ನಾಯಕರು ಮುಂದಾಗಿದ್ದಾರೆ. ಇದೀಗ, ಉಗ್ರಪ್ಪ ಅವರು ಸಿದ್ದರಾಮಯ್ಯನವರ ಆಯ್ಕೆಯಾಗಿರುವುದರಿಂದ ಜಾರಕಿಹೊಳಿ ಸಹೋದರರು, ನಾಗೇಂದ್ರ, ಸ್ಥಳೀಯ ಶಾಸಕರು ಹಾಗೂ ಡಿ ಕೆ ಶಿವಕುಮಾರ್‌ ಒಟ್ಟಾಗಿ ಕೆಲಸ ಮಾಡುವುದು ಅನಿವಾರ್ಯವಾಗಲಿದೆ.

ಅಷ್ಟಕ್ಕೂ, ಚುನಾವಣಾ ರಾಜಕಾರಣಕ್ಕೆ ಒಗ್ಗದ ಉಗ್ರಪ್ಪ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಾಯಕರು, ವಿಶೇಷವಾಗಿ ಸಿದ್ದರಾಮಯ್ಯ ಅವರು ಆಸ್ಥೆ ವಹಿಸಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಚಿವರಾಗುವ ಇರಾದೆ ವ್ಯಕ್ತಪಡಿಸುತ್ತಿರುವ ಉಗ್ರಪ್ಪ ಅವರು, ಜಯಮಾಲಾ ಅವರನ್ನು ಸಂಪುಟಕ್ಕೆ ಸೇರಿಸುವ ತೀರ್ಮಾನವಾಗುತ್ತಲೇ ವರಿಷ್ಠರ ವಿರುದ್ಧ ತಿರುಗಿಬಿದ್ದಿದ್ದರು. ವಿಧಾನ ಪರಿಷತ್‌ನಲ್ಲಿ ಜಯಮಾಲಾ ಸಭಾ ನಾಯಕಿಯಾಗಿದ್ದಾರೆ. “ಸರ್ಕಾರಕ್ಕೆ ಮುಜುಗರದ ಸನ್ನಿವೇಶ ನಿರ್ಮಾಣವಾದರೆ ಅವರ ಸಮರ್ಥನೆಗೆ ನಿಲ್ಲಲಾಗದು. ಹಿರಿಯ ನಾಯಕರನ್ನು ಬಿಟ್ಟು ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡುವ ಅಗತ್ಯವೇನಿತ್ತು?” ಎಂದು ಉಗ್ರಪ್ಪ ಬಹಿರಂಗವಾಗಿ ಪ್ರಶ್ನಿಸಿದ್ದರು. ಇದು ನೇರವಾಗಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ನಡೆಸಿದ ದಾಳಿಯಾಗಿತ್ತು ಎನ್ನುವುದು ಗುಟ್ಟೇನಲ್ಲ. ಇದರಿಂದ ಪ್ರಜ್ಞಾಪೂರ್ವಕ ತೀರ್ಮಾನ ಕೈಗೊಂಡಿರುವ ಕಾಂಗ್ರೆಸ್‌ ನಾಯಕರು ಉಗ್ರಪ್ಪ ಅವರನ್ನು ಲೋಕಸಭೆಗೆ ಕಳುಹಿಸುವ ಯತ್ನ ಮಾಡಿದ್ದಾರೆ. ಒಂದೊಮ್ಮೆ ಸೋತರೆ, ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಚಿವ ಸ್ಥಾನಕ್ಕೆ ಹಕ್ಕು ಮಂಡಿಸುವುದರಿಂದ ಉಗ್ರಪ್ಪ ಹಿಂದೆ ಸರಿಯಬೇಕಾಗುತ್ತದೆ. ಗೆದ್ದರೆ ಸಚಿವ ಸ್ಥಾನ ನೀಡುವ ಪರಿಸ್ಥಿತಿಯೇ ನಿರ್ಮಾಣವಾಗದು. ಎಲ್ಲಕ್ಕೂ ಮಿಗಿಲಾಗಿ, ಗೊಂದಲದ ಗೂಡಾಗಿರುವ ಬಳ್ಳಾರಿಗೆ ಕಾಂಗ್ರೆಸ್ನಿಂದ ಉಗ್ರಪ್ಪ ಸಮರ್ಥ ಆಯ್ಕೆಯಾಗಿದ್ದಾರೆ; ಜಿಲ್ಲಾ ರಾಜಕಾರಣದ ಘನತೆ ಎತ್ತರಿಸುವಲ್ಲಿಯೂ ಉಗ್ರಪ್ಪ ಸ್ಪರ್ಧೆ ಪ್ರಮುಖ ಪಾತ್ರವಾಗಬಲ್ಲದು ಎಂದು ಹೇಳಲಾಗುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More