ಉಪ ಚುನಾವಣೆಯಲ್ಲಿ ತಂತ್ರ-ಪ್ರತಿತಂತ್ರ, ಹಣ-ಉನ್ಮಾದದಲ್ಲಿ ಗೆಲ್ಲುವವರಾರು?

ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಗಡುವು ಮಂಗಳವಾರ ಮುಗಿದಿದೆ. ಹಲವು ಕಡೆ ಪ್ರಚಾರ ಭರಾಟೆ ಜೋರಾಗಿದ್ದು, ಬಂಡಾಯ ಶಮನಗೊಳಿಸುವ ಕೆಲಸವನ್ನೂ ನಾಯಕರು ಮುಂದುವರಿಸಿದ್ದಾರೆ. ಪ್ರತಿಸ್ಪರ್ಧಿಗಳಿಗೆ ಮುಖಭಂಗ ಉಂಟು ಮಾಡಲು ಮುಖಂಡರು ಹವಣಿಸುತ್ತಿದ್ದಾರೆ. ಉಪಚುನಾವಣೆಯು ಮೇಲ್ನೋಟಕ್ಕೆ ಮೈತ್ರಿಕೂಟ ಮತ್ತು ಬಿಜೆಪಿ ಸ್ಪರ್ಧೆಯಂತೆ ಕಂಡರೂ ವಸ್ತುಸ್ಥಿತಿ ಬೇರೆಯೇ ಇದೆ

ಉಪಚುನಾವಣೆ ಎಂಬ ಅನಿವಾರ್ಯ ಸವಾಲಿಗೆ ಮುಖಾಮುಖಿಯಾಗಿರುವ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಸ್ವಪಕ್ಷೀಯರ ಬಂಡಾಯ, ಪ್ರತಿಷ್ಠೆ, ಒಳಬೇಗುದಿಯ ನಡುವೆ ಕೊನೆಯ ದಿನವಾದ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆನಂದ ನ್ಯಾಮಗೌಡ, ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಿ ಎಸ್‌ ಉಗ್ರಪ್ಪ, ಬಿಜೆಪಿಯಿಂದ ಜಿ ಶಾಂತಾ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಸ್‌ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಮಂಡ್ಯ ಲೋಕಸಭಾ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲದೊಂದಿಗೆ ಜೆಡಿಎಸ್‌ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುಖಂಡರು ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಳ್ಳದೆ ಅಂತರ ಕಾಯ್ದುಕೊಳ್ಳುವ ಮೂಲಕ ಮೈತ್ರಿಯ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ. ಇದು ಚುನಾವಣೆಯ ಮೇಲೆ ಪ್ರಭಾವ ಬೀರುವುದು ನಿಶ್ಚಿತ ಎನ್ನಲಾಗುತ್ತಿದೆ. ಮಂಡ್ಯದಲ್ಲಿ ನಿವೃತ್ತ ಅಧಿಕಾರಿ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಯು ಸ್ಥಳೀಯ ನಾಯಕತ್ವವನ್ನು ಕೆಣಕಿದೆ. ರಾಮನಗರದಲ್ಲಿ ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ ಸದಸ್ಯರಾಗಿರುವ ಹಿರಿಯ ನಾಯಕ ಸಿ ಎಂ ಲಿಂಗಪ್ಪ ಅವರ ಪುತ್ರ ಚಂದ್ರಶೇಖರ್‌ ಅವರನ್ನು ಕರೆತಂದು ಬಿಜೆಪಿ ಟಿಕೆಟ್‌ ನೀಡಿರುವುದರಿಂದ ಪಕ್ಷದ ಕಾರ್ಯಕರ್ತರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಮೂರು ಪಕ್ಷಗಳೂ ಮೂರು ದಿಕ್ಕಿಗೆ ಮುಖ ಮಾಡಿವೆ. ಸ್ಥಳೀಯ ಮಟ್ಟದಲ್ಲಿನ ರಾಜಕೀಯವು ಯಾರಲ್ಲೆರಿಗೆ ಮರ್ಮಾಘಾತ ನೀಡಲಿದೆ ಎಂಬುದು ಕುತೂಹಲ ಮೂಡಿಸಿದ್ದು, ನಾಯಕರುಗಳು ಎಚ್ಚರಿಕೆಯಿಂದ ವ್ಯವಹರಿಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರ ಜೊತೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್‌ ನಾಯಕರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್‌ ತೆರಳಿ ನಾಮಪತ್ರ ಸಲ್ಲಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಬಹುಕಾಲದ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾಗಿ ಕದನ ಕಣ ಪ್ರವೇಶಿಸಿರುವುದು ಉಭಯ ಪಕ್ಷಗಳ ಮುಖಂಡರಲ್ಲಿ ಮಿಶ್ರ ಪ್ರತಿಕ್ರಿಯೆ ಹೊರಹೊಮ್ಮಿಸಿದೆ. ಹಿಂದುಳಿದ ವರ್ಗಗಳಲ್ಲಿ ಬಹುಸಂಖ್ಯಾತರಾದ ಈಡಿಗರು, ಅಲ್ಪಸಂಖ್ಯಾತರು ಹಾಗೂ ಒಕ್ಕಲಿಗ ಸಮುದಾದಯ ಮೇಲಿನ ಮತಗಳ ಮೇಲೆ ಕಣ್ಣಿಟ್ಟಿರುವ ಮೈತ್ರಿಕೂಟವು ನಿಜಕ್ಕೂ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಲಿದೆಯೇ ಎಂಬುದಕ್ಕೆ ಉತ್ತರಿಸುವುದು ಕಷ್ಟಸಾಧ್ಯವೇ ಸರಿ.

ಬಳ್ಳಾರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಕೆ ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು ರೋಡ್ ಶೋ‌ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದೆಲ್ಲದರ ಮಧ್ಯೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಅವರು ಮಂಗಳವಾರ ಮಂಡ್ಯ ಮತ್ತು ಜಮಖಂಡಿಗೆ ಖುದ್ದು ಭೇಟಿ ನೀಡಿ ಪಕ್ಷದಲ್ಲಿನ ಬಂಡಾಯ ಶಮನಗೊಳಿಸುವ ಪ್ರಯತ್ನ ಮಾಡಿದ್ದಾರೆ. ಜಮಖಂಡಿಯಲ್ಲಿ ಶ್ರೀಕಾಂತ ಕುಲಕರ್ಣಿ ಸ್ಪರ್ಧೆಗೆ ಬೀಳಗಿ ಶಾಸಕ ಮುರುಗೇಶ್‌ ನಿರಾಣಿ ಬಣ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಬಳ್ಳಾರಿ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಜಿಲ್ಲೆಯ ಒಂಭತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಿಗೆ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಿಸಿದೆ. ಜಿಲ್ಲೆಯ ಜಾತಿವಾರು ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಸಮುದಾಯದ ಸಚಿವರಿಗೆ ಹೊಣೆ ನೀಡಲಾಗಿದ್ದು, ಶಾಸಕರು ಸೇರಿದಂತೆ ಒಟ್ಟು ೩೦ಕ್ಕೂ ಹೆಚ್ಚು ನಾಯಕರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸುವ ಮೂಲಕ ಬಿಜೆಪಿಗೆ ಶಾಕ್‌ ನೀಡಲು ಮುಂದಾಗಿದೆ. ಬಿಜೆಪಿಯ ಶ್ರೀರಾಮುಲು ಅವರು ಡಿ ಕೆ ಶಿವಕುಮಾರ್‌ ಪರಸ್ಪರ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿರುವುದರಿಂದ ಕದನ ಕಣ ರಂಗೇರಿದೆ.

ಇದನ್ನೂ ಓದಿ : ಬಳ್ಳಾರಿ ಕಾಂಗ್ರೆಸ್‌ ಕಣಕ್ಕೆ ಉಗ್ರಪ್ಪ ಆಗಮನದ ಹಿಂದಿನ ಲೆಕ್ಕಾಚಾರಗಳೇನು?

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸ್ಪರ್ಧೆಯಿಂದ ದೇಶದ ಗಮನಸೆಳೆದಿದ್ದ ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಮುಖಭಂಗ ಉಂಟು ಮಾಡುವುದು ಕಾಂಗ್ರೆಸ್‌ ನಾಯಕರ ತಂತ್ರವಾಗಿದೆ. ಮತ್ತೊಂದಡೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ತಿಪ್ಪೇಸ್ವಾಮಿಗೆ ಟಿಕೆಟ್‌ ತಪ್ಪಿಸಿ ಶ್ರೀರಾಮಯಲು ಸ್ಪರ್ಧಿಸಿದ್ದರು. ಪಕ್ಷೇತರವಾಗಿ ನಿಂತು ಪರಾಭವಗೊಂಡಿದ್ದ ತಿಪ್ಪೇಸ್ವಾಮಿ ಅವರು ಬಳ್ಳಾರಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀರಾಮುಲು ವಿರುದ್ಧ ತೊಡೆ ತಟ್ಟಿದ್ದಾರೆ.

ಕಾಂಗ್ರೆಸ್ ಉತ್ತಮ ಸಂಸದೀಯ ಪಟು ಎಂದು ಗುರುತಿಸಿಕೊಂಡಿರುವ ಉಗ್ರಪ್ಪ ಅವರನ್ನು ಶ್ರೀರಾಮುಲು ಸಹೋದರಿ ಜಿ ಶಾಂತಾ ಅವರ ವಿರುದ್ಧ ಕಣಕ್ಕಿಳಿಸುವ ಮೂಲಕ ಅಭ್ಯರ್ಥಿಗಳ ಬಲಾಬಲಗಳನ್ನು ಜನರಿಗೆ ತಿಳಿಸುವ ಕೆಲಸಕ್ಕೆ ಕಾಂಗ್ರೆಸ್‌ ಮುಂದಾಗಿದೆ. ಬಿಜೆಪಿಯು ಸ್ಥಳೀಯರು ಮತ್ತು ಪರ ಸ್ಥಳದವರು ಎಂಬ ಅಸ್ತ್ರ ಪ್ರಯೋಗಿಸುವ ಮೂಲಕ ಚುನಾವಣೆಯನ್ನು ತನ್ನ ಪರವಾಗಿ ತಿರುಗಿಸುವ ತಂತ್ರ ರೂಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಉಗ್ರಪ್ಪ “ಕಳೆದ ವಿಧಾನಸಭೆ ಶ್ರೀರಾಮುಲು ಮೊಳಕಾಲ್ಮೂರು ಮತ್ತಿ ಬಾದಾಮಿಯಲ್ಲಿ ಸ್ಪರ್ಧಿಸಿದ್ದರು. ಮೊಳಕಾಲ್ಮೂರು ಹಾಗೂ ಶ್ರೀರಾಮುಲುವಿಗೆ ಏನು ಸಂಬಂಧ? ಶ್ರೀರಾಮುಲು ಸಂಬಂಧಿ ಸಣ್ಣ ಫಕೀರಪ್ಪ ರಾಯಚೂರಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಹಿಂದಿನ ಚುನಾವಣೆಯಲ್ಲಿ ಬಳ್ಳಾರಿಯಿಂದ ಕಣಕ್ಕಿಳಿದಿದ್ದರು. ನನ್ನ ಸ್ಥಳೀಯತೆಯನ್ನು ಪ್ರಶ್ನಿಸಿಸುವ ಬಿಜೆಪಿಯವರು ಇದನ್ನೆಲ್ಲಾ ಮರೆಯಬಾರದು,” ಎಂದಿದ್ದಾರೆ. ಆದರೆ, ಉನ್ಮಾದ, ಅಭಿಮಾನ, ಹಣವೇ ಗೆಲುವು-ಸೋಲುಗಳನ್ನು ನಿರ್ಧರಿಸುವ ಸಂದರ್ಭದಲ್ಲಿ ತಂತ್ರ-ಪ್ರತಿತಂತ್ರಗಳ ಬಗೆಗಿನ ಚರ್ಚೆ ಅಪ್ರಸ್ತುತ ಎನ್ನುವ ತರ್ಕವಿದೆ. ಅದು ಏನೇ ಆದರೂ ನವೆಂಬರ್‌ ೬ರ ಫಲಿತಾಂಶದ ದಿನದವರೆಗೆ ಕಾಯುವುದು ಅನಿವಾರ್ಯವಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More