ಲಿಂಗಾಯತ ಧರ್ಮ ಕುರಿತ ಸಚಿವ ಡಿಕೆಶಿ ಕ್ಷಮಾಪಣೆ ಹಿಂದಿನ ಒಳಗುಟ್ಟುಗಳೇನು?

“ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯದಲ್ಲಿ ಹಿಂದಿನ ತಮ್ಮ ಸರ್ಕಾರ ತಪ್ಪು ಮಾಡಿದೆ. ಅದಕ್ಕಾಗಿ ಕ್ಷಮೆ ಕೋರುವೆ,” ಎಂಬ ಸಚಿವ ಡಿಕೆಶಿ ಅವರ ಹೇಳಿಕೆ, ಕೇವಲ ಬಳ್ಳಾರಿ ಉಪ ಚುನಾವಣೆಯ ವಿಷಯದಲ್ಲಷ್ಟೇ ಅಲ್ಲದೆ, ಭವಿಷ್ಯದ ಕಾಂಗ್ರೆಸ್ ಚಹರೆಯನ್ನೂ ಬದಲಿಸಲಿದೆ ಎಂಬ ಬಗ್ಗೆ ಸುಳಿವು ಸಿಕ್ಕಿವೆ

ಉಪ ಚುನಾವಣೆ ಆಯಾ ಕ್ಷೇತ್ರಗಳಿಗೆ ಮಾತ್ರವಲ್ಲದೆ, ಇಡೀ ರಾಜ್ಯದ ರಾಜಕೀಯದ ದಿಕ್ಕು-ದೆಸೆಯನ್ನೂ ಬದಲಾಯಿಸುವ ಸೂಚನೆಯನ್ನು ಈಗಾಗಲೇ ನೀಡತೊಡಗಿದೆ. ಅದರಲ್ಲೂ ಮುಖ್ಯವಾಗಿ, ಬಳ್ಳಾರಿ, ಶಿವಮೊಗ್ಗ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ವಿವಿಧ ಕಾರಣಗಳಿಗಾಗಿ ಆಯಾ ಕ್ಷೇತ್ರಗಳ ದಶಕಗಳ ರಾಜಕೀಯದ ಹರಿವಿನ ದಿಕ್ಕಿನ ಜೊತೆಗೆ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಆಂತರಿಕ ಮತ್ತು ಆ ಮೂಲಕ ರಾಜ್ಯ ರಾಜಕಾರಣದ ದೆಸೆಯನ್ನೂ ಬದಲಾಯಿಸುವ ಲಕ್ಷಣಗಳು ಎದ್ದುಕಾಣುತ್ತಿವೆ.

ಬಿಜೆಪಿಯ ಪಾಲಿಗೆ ಈ ಮೂರು ಕ್ಷೇತ್ರಗಳ ಚುನಾವಣೆ ಮುಂದಿನ ೨೦೧೯ರ ಲೋಕಸಭಾ ಚುನಾವಣೆಗೆ ತನ್ನ ವರ್ಚಸ್ಸು ವೃದ್ಧಿಯ ಸರ್ಕಸ್ಸು. ಪಕ್ಷದೊಳಗಿನ ನಾಯಕರ ನಡುವಿನ ಆಂತರಿಕ ಭಿನ್ನಮತ, ಗುಂಪುಗಾರಿಕೆ, ಕುಗ್ಗುತ್ತಿರುವ ಪ್ರಧಾನಿ ಮೋದಿ ವರ್ಚಸ್ಸು, ಹಗರಣಗಳ ಕಳಂಕ, ಹಣದುಬ್ಬರ ಮತ್ತು ಬೆಲೆ ಏರಿಕೆ ತಡೆಯಲಾಗದ ಆಡಳಿತಾತ್ಮಕ ವೈಫಲ್ಯಗಳ ನಡುವೆ ಸಂಕಷ್ಟಕ್ಕೆ ಸಿಲುಕಿರುವ ಪಕ್ಷದ ವಿಶ್ವಾಸಾರ್ಹತೆಯನ್ನು ಮತದಾರರಲ್ಲಿ ಮರುಸ್ಥಾಪಿಸುವ ಅವಕಾಶ ಕೂಡ.

ಜೆಡಿಎಸ್‌ಗೆ ಅಧಿಕಾರದ ಕುರ್ಚಿಯನ್ನೂ, ತನ್ನ ವರ್ಚಸ್ಸನ್ನು ವೃದ್ಧಿಗೊಳಿಸಿಕೊಳ್ಳುವ ಮತ್ತು ಬಿಜೆಪಿಗೆ ನೇರ ಎದಿರೇಟು ಮತ್ತು ಮಿತ್ರಪಕ್ಷ ಕಾಂಗ್ರೆಸ್‌ಗೆ ಒಳಏಟು ನೀಡುವ ಮೂಲಕ ಆಡಳಿತಾತ್ಮಕವಾಗಿಯೂ ಮತ್ತು ರಾಜಕೀಯವಾಗಿಯೂ ಮೇಲುಗೈ ಸಾಧಿಸುವ ಒಂದು ಸುವರ್ಣಾವಕಾಶ.

ಆದರೆ, ಕಾಂಗ್ರೆಸ್ ಪಾಲಿಗೆ ಈ ಚುನಾವಣೆ, ಆ ಎರಡು ಪಕ್ಷಗಳಿಗಿಂತ ಹೆಚ್ಚು ಮಹತ್ವದ್ದು. ಈಗಾಗಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆದ ತನ್ನ ಪಾಲಿನ ಲೋಪಗಳನ್ನೂ, ಎಡವಟ್ಟುಗಳನ್ನೂ ಸರಿಪಡಿಸಿಕೊಳ್ಳುವುದರಿಂದ ಹಿಡಿದು, ಹಿಂದಿನ ಸಿದ್ದರಾಮಯ್ಯ ಸರ್ಕಾರದ ರಾಜಕೀಯ ಸೋಲು ಕಂಡ ನೀತಿ-ನಿಲುವುಗಳ ಹೊರೆಯನ್ನು ಕಳಚಿಕೊಳ್ಳುವ ಅವಕಾಶವಾಗಿಯೂ ಈ ಚುನಾವಣೆ ಎದುರಿಗಿದೆ. ಹಾಗೇ, ಬಿಜೆಪಿಗೆ ತಿರುಗೇಟು ನೀಡುವ ಮೂಲಕ, ಮುಂದಿನ ಮಹಾ ಚುನಾವಣೆಗೆ ತನ್ನ ಆತ್ಮವಿಶ್ವಾಸ ಕಟ್ಟಿಕೊಳ್ಳುವ ಮತ್ತು ಅದೇ ಹೊತ್ತಿಗೆ ಮಿತ್ರಪಕ್ಷ ಜೆಡಿಎಸ್‌ನೊಂದಿಗಿನ ಮೈತ್ರಿಯಲ್ಲಿ ತನ್ನತನ ಕಾಯ್ದುಕೊಳ್ಳುವ ಎರಡಲಗಿನ ಸವಾಲು ಕೂಡ ಕಾಂಗ್ರೆಸ್ ಮುಂದಿದೆ.

ಪಕ್ಷದ ಮುಂದಿನ ಈ ಸವಾಲುಗಳನ್ನು ಅರ್ಥ ಮಾಡಿಕೊಂಡಂತೆ, ಹಿರಿಯ ನಾಯಕ ಹಾಗೂ ಸಚಿವ ಡಿ ಕೆ ಶಿವಕುಮಾರ್ ಅವರು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ, “ಪ್ರತ್ಯೇಕ ಲಿಂಗಾಯಿತ ಧರ್ಮದ ವಿಷಯದಲ್ಲಿ ತಮ್ಮ ಹಿಂದಿನ ಸರ್ಕಾರ ತಪ್ಪು ಮಾಡಿದೆ. ಧರ್ಮದ ವಿಷಯದಲ್ಲಿ ತಲೆಹಾಕಬಾರದಿತ್ತು. ಆ ತಪ್ಪಿಗಾಗಿ ಪಕ್ಷದ ಪರವಾಗಿ ಕ್ಷಮೆ ಕೋರುವೆ,” ಎಂದು ಸಾರ್ವಜನಿಕವಾಗಿ ಎರಡೂ ಕೈಜೋಡಿಸಿ ಕ್ಷಮೆ ಯಾಚಿಸಿದ್ದಾರೆ. ಪ್ರತ್ಯೇಕ ಲಿಂಗಾಯಿತ ಧರ್ಮದ ಪರವಾದ ಹಿಂದಿನ ಕಾಂಗ್ರೆಸ್ ಸರ್ಕಾರದ ನಿಲುವಿನ ವಿರುದ್ಧ ಕೆಂಡಕಾರುತ್ತಿರುವ ರಂಭಾಪುರಿ ಸ್ವಾಮೀಜಿ ಅವರ ದಸರಾ ದರ್ಬಾರ್ ಸಭೆಯಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಈ ಕ್ಷಮಾಪಣೆ ಹಲವು ಅರ್ಥಗಳನ್ನು ಒಳಗೊಂಡಿದ್ದು, ಬೇರೆ-ಬೇರೆ ಮಟ್ಟದಲ್ಲಿ ಬೇರೆ-ಬೇರೆ ಪರಿಣಾಮವನ್ನೂ, ಪ್ರತಿಕ್ರಿಯೆಗಳನ್ನೂ ಈಗಾಗಲೇ ಹುಟ್ಟುಹಾಕಿದೆ.

ಧರ್ಮದ ವಿಷಯದಲ್ಲಿ ರಾಜಕೀಯ ಸಲ್ಲದು ಎಂಬ ಅವರ ಹೇಳಿಕೆ, ತಮ್ಮ ಉಸ್ತುವಾರಿಯ ಬಳ್ಳಾರಿ ಲೋಕಸಭಾ ಕ್ಷೇತ್ರದ ನಿರ್ಣಾಯಕ ವೀರಶೈವ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ರಾಜಕೀಯ ಲೆಕ್ಕಾಚಾರದ ನಡೆಯಂತೆಯೇ, ತಮ್ಮ ರಾಜಕೀಯ ಪ್ರತಿಸ್ಪರ್ಧಿ ಸಿದ್ದರಾಮಯ್ಯ ಅವರ ನೀತಿಗಳ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸುವ ಮೂಲಕ ಅವರನ್ನು ರಾಜಕೀಯವಾಗಿ ಬದಿಗೊತ್ತುವ ತಂತ್ರಗಾರಿಕೆಯಂತೆಯೂ ಕಾಣುತ್ತಿದೆ. ಮೈತ್ರಿ ಸರ್ಕಾರದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆ ಕಾಂಗ್ರೆಸ್‌ ಪಾಲಿಗೆ ಒಲಿದಲ್ಲಿ, ಸಹಜವಾಗಿ ಪ್ರಬಲ ಆಕಾಂಕ್ಷಿಯಾಗಿರುವ ಡಿ ಕೆ ಶಿವಕುಮಾರ್ ಅವರು, ತಮ್ಮ ಆ ದಾರಿಗೆ ಅಡ್ಡಗಾಲಾಗಿರುವ ಸಿದ್ದರಾಮಯ್ಯ ಅವರನ್ನು ಬದಿಗೆ ಸರಿಸುವ ಮತ್ತು ಅದೇ ಹೊತ್ತಿಗೆ ವೀರಶೈವ ಸಮುದಾಯದ ಪ್ರಭಾವಿ ಮಠಾಧೀಶರ ಬಲ ಪಡೆಯುವ ತಂತ್ರವಾಗಿಯೂ ಈ ಹೇಳಿಕೆಯನ್ನು ಪ್ರಯೋಗಿಸಿದ್ದಾರೆ ಎಂಬ ವಿಶ್ಲೇಷಣೆಗಳು ಈಗಾಗಲೇ ಕೇಳಿಬರತೊಡಗಿವೆ.

ಅದೇ ಹೊತ್ತಿಗೆ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ನಾಯಕತ್ವ ವಹಿಸಿದ್ದ, ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಎಂ ಬಿ ಪಾಟೀಲ್, ವಿನಯ್ ಕುಲಕರ್ಣಿ ಸೇರಿದಂತೆ ಹಲವು ನಾಯಕರು ಡಿ ಕೆ ಶಿವಕುಮಾರ್ ಅವರ ಈ ಹೇಳಿಕೆಯ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ಎಂ ಬಿ ಪಾಟೀಲರಂತೂ, “ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ಬೆಂಬಲ ನೀಡಿದ್ದೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವೆನ್ನುವುದಾದರೆ, ಲಿಂಗಾಯಿತ ಪ್ರಾಬಲ್ಯವಿಲ್ಲದ, ತಮ್ಮದೇ ಒಕ್ಕಲಿಗ ಸಮುದಾಯದ ಪ್ರಾಬಲ್ಯದ ಹಳೆಯ ಮೈಸೂರು ಭಾಗದಲ್ಲಿ ಅವರು (ಡಿ ಕೆ ಶಿವಕುಮಾರ್) ಎಷ್ಟು ಸ್ಥಾನಗಳನ್ನು ಪಕ್ಷಕ್ಕೆ ತಂದುಕೊಟ್ಟಿದ್ದಾರೆ?” ಎಂಬ ಖಾರವಾದ ಪ್ರಶ್ನೆಯನ್ನೂ ಎತ್ತಿದ್ದಾರೆ.

ಇದನ್ನೂ ಓದಿ : ಡಿ ಕೆ ಶಿವಕುಮಾರ್ ಪರ ನಿಂತ ಒಕ್ಕಲಿಗರ ಸಂಘ ಹೊಮ್ಮಿಸಿದ ಕೇಡಿನ ಸಂದೇಶವೇನು?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಪ್ತರೂ ಆದ ಪಾಟೀಲ್ ಮತ್ತು ಕುಲಕರ್ಣಿ ಅವರ ಈ ಪ್ರತಿಕ್ರಿಯೆಗಳು ಇನ್ನಷ್ಟು ಮಾರ್ದನಿಗೊಳ್ಳುವ ಸಾಧ್ಯತೆಗಳೂ ಇವೆ. ಪಕ್ಷದ ಪರವಾಗಿ ಶಿವಕುಮಾರ್ ಅವರು ಕ್ಷಮೆ ಕೋರುವ ಮೂಲಕ, ಅದು ಪಕ್ಷದ ನಿಲವು ಎಂದೂ ಪರೋಕ್ಷವಾಗಿ ಹೇಳಿದ್ದಾರೆ. ಆದರೆ, ಲಿಂಗಾಯಿತ ಧರ್ಮ ಹೋರಾಟದ ನೇತೃತ್ವ ವಹಿಸಿದ್ದ ಮತ್ತು ಹಿಂದಿನ ಸರ್ಕಾರದ ನಿಲುವು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕರೇ ಶಿವಕುಮಾರ್ ಅವರಿಗೆ ಪಕ್ಷದ ಪರವಾಗಿ ಕ್ಷಮಾಪಣೆ ಕೇಳುವ ಹಕ್ಕು ನೀಡಿದವರಾರು ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಹಾಗಾಗಿ, ಈ ಕ್ಷಮಾಪಣೆಯ ಹೇಳಿಕೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಒಳಗೆ ಮತ್ತು ಪ್ರತ್ಯೇಕ ಲಿಂಗಾಯತ ಹೋರಾಟದ ನಾಯಕರಿಂದಲೂ ಹಲವು ಹೇಳಿಕೆ ಮತ್ತು ಪ್ರತಿಹೇಳಿಕೆಯ ಕಂಪನಗಳನ್ನು ಸೃಷ್ಟಿಸುವುದಂತೂ ದಿಟ.

ಆದರೆ, ಈ ಹೇಳಿಕೆಯ ಬಗ್ಗೆ ಸ್ವತಃ ಸಿದ್ದರಾಮಯ್ಯ ಯಾವ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದರ ಮೇಲೆ ಈ ವಿವಾದದ ತೀವ್ರತೆ ನಿಂತಿದೆ. ಸದ್ಯಕ್ಕಂತೂ ಇದು ಬಳ್ಳಾರಿ ಚುನಾವಣೆಯ ಮತದಾರರ ಬೆರಳಿನ ದಿಕ್ಕು-ದೆಸೆಯ ಜೊತೆಗೆ, ಕಾಂಗ್ರೆಸ್ ಮತ್ತು ಪ್ರತ್ಯೇಕ ಲಿಂಗಾಯುತ ಧರ್ಮ ಹೋರಾಟದ ನಡುವಿನ ನಂಟಿನ ಭವಿಷ್ಯವನ್ನೂ ನಿರ್ಧರಿಸುವಂತೆ ತೋರುತ್ತಿದೆ. ಹಾಗೇ, ಮುಂದಿನ ಮಹಾ ಚುನಾವಣೆಗೆ ಮುನ್ನ ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯದಲ್ಲಿ ಕಾಂಗ್ರೆಸ್ ತೆಗೆದುಕೊಳ್ಳಲೇಬೇಕಿರುವ ಅನಿವಾರ್ಯ ನಿಲುವನ್ನೂ ಈ ಹೇಳಿಕೆಯ ವಿವಾದವೇ ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ.

ಈ ಎಲ್ಲ ಕಾರಣಗಳಿಂದಾಗಿ, ಡಿ ಕೆ ಶಿವಕುಮಾರ್ ಅವರ ಈ ಹೇಳಿಕೆ, ಸದ್ಯದ ಉಪ ಚುನಾವಣೆಯಷ್ಟೇ ಅಲ್ಲದೆ, ಕಾಂಗ್ರೆಸ್ಸಿನ ಭವಿಷ್ಯದ ದಿನಗಳ ರಾಜಕೀಯ ನಡೆಯನ್ನು ಕೂಡ ನಿಖರಗೊಳಿಸಲಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More