ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?

ಉಪಚುನಾವಣೆ ರೂಪದಲ್ಲಿ ಕಾಂಗ್ರೆಸ್‌-ಜೆಡಿಎಸ್‌ಗೆ ಮೊದಲ ಅಗ್ನಿಪರೀಕ್ಷೆ ಎದುರಾಗಿದೆ. ಮೈತ್ರಿಯಿಂದ ಸ್ಥಳೀಯ ಮಟ್ಟದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು, ನಾಯಕರ ನಡುವಿನ ಸಂಬಂಧ ತೀವ್ರ ಹದಗಟ್ಟಿದೆ. ಈ ಸಮಸ್ಯೆ ಗೆಲ್ಲುವುದು, ರಾಷ್ಟ್ರಮಟ್ಟದಲ್ಲಿ ಮೈತ್ರಿ ಶಕ್ತಿ ಪ್ರದರ್ಶನ ಅನಿವಾರ್ಯ

ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಯನ್ನು ದೂರವಿಟ್ಟು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟವು ಆನಂತರ ನಡೆದ ಪರಿಷತ್‌ ಚುನಾವಣೆಯಲ್ಲಿಯೂ ಬಿಜೆಪಿಗೆ ಹಿನ್ನಡೆ ಉಂಟು ಮಾಡಿದೆ. ಈಗ ಲೋಕಸಭೆಯ ಮೂರು ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಮಲ ಪಾಳೆಯವನ್ನು ಹಣಿಯಲು ಉಭಯ ಪಕ್ಷಗಳ ನಾಯಕರು ಹಲವು ತಂತ್ರಗಳನ್ನು ಹೂಡಿದಿದ್ದಾರೆ. ಇದರ ಭಾಗವಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌ ಡಿ ದೇವೇಗೌಡ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ಬಿಜೆಪಿ ನಾಯಕರ ಹೃದಯ ಬಡಿತ ಹೆಚ್ಚಿಸಿದ್ದಾರೆ. ಇದರ ಜೊತೆಗೆ, ಹಳೆಯ ಮೈಸೂರು ಭಾಗದಲ್ಲಿ ಹಾವು-ಮುಂಗುಸಿಯಂತೆ ಆಡುತ್ತಿರುವ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರನ್ನು ಸಮಾಧಾನಪಡಿಸುವ ಯತ್ನವನ್ನೂ ನಡೆಸಿದ್ದಾರೆ.

ಮಂಡ್ಯ, ಶಿವಮೊಗ್ಗ ಲೋಕಸಭೆ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌, ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‌-ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುವ ಕಡೆ ಅಗತ್ಯ ನೋಡಿಕೊಂಡು ಪ್ರಚಾರ ಮಾಡುವುದಾಗಿ ಉಭಯ ಪಕ್ಷಗಳ ವರಿಷ್ಠರು ಘೋಷಿಸಿದ್ದಾರೆ. “ಅಗತ್ಯಬಿದ್ದರೆ ಜಂಟಿಯಾಗಿ, ಇಲ್ಲವೇ ಪ್ರತ್ಯೇಕವಾಗಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳಲಾಗುವುದು,” ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ. ಹಳೆಯ ಮೈಸೂರು ಭಾಗದ ಮಂಡ್ಯ, ರಾಮನಗರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರು ಹಾಗೂ ನಾಯಕರ ನಡುವಿನ ಸಂಬಂಧ ಸರಿಪಡಿಸಲಾರದಷ್ಟು ಹದಗೆಟ್ಟಿದೆ. ಇದು ಕಾಂಗ್ರೆಸ್‌-ಜೆಡಿಎಸ್‌ ನಾಯಕರ ನಿದ್ದೆಗಡೆಸಿದೆ. ಸ್ಥಳೀಯ ನಾಯಕರ ನಡುವಿನ ಸಂಬಂಧ ಸುಧಾರಿಸುವಂತೆ ಮಾಡಲು ದಿಗ್ಗಜ ನಾಯಕರಾದ ದೇವೇಗೌಡ ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ಅಗತ್ಯವಾಗಿತ್ತು. ಇದರಿಂದ ಸ್ಥಳೀಯ ನಾಯಕರಲ್ಲಿ ಒಮ್ಮತ ಮೂಡಿಸಲು ಅನುಕೂಲವಾಗಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಜೆಡಿಎಸ್‌ ನಾಯಕರ ವಿರುದ್ಧ ಮೊನಚು ಮಾತಿನ ಮೂಲಕ ದಾಳಿ ನಡೆಸಿದ್ದರು. ಪತ್ರಕರ್ತರು ಈ ವಿಚಾರಗಳನ್ನು ನೆನಪಿಸಿದ್ದನ್ನು ನಗುತ್ತಲೇ ಸ್ವೀಕರಿಸಿದ ದೇವೇಗೌಡರು, “ದೇಶದ ಹಿತಾಸಕ್ತಿಗೆ ಮಾರಕವಾದ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ನಾನು ಪ್ರಧಾನಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ನಮಗೆ ಯಾವುದೇ ಆಸೆಗಳು ಇಲ್ಲ. ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಯುವ ದೃಷ್ಟಿಯಿಂದ ನಮ್ಮೆಲ್ಲ ವೈಮನಸ್ಸುಗಳನ್ನು ಬಿಟ್ಟು ಒಂದಾಗಿದ್ದೇವೆ. ನಮ್ಮ ನಡುವೆ ಹಿಂದೆ ನಡೆದ ಅದೆಷ್ಟೇ ಕಹಿ ನೆನಪುಗಳನ್ನು ನೀವು (ಮಾಧ್ಯಮದವರು) ನೆನಪಿಸಿದರೂ ನಮ್ಮನ್ನು ಬೇರ್ಪಡಿಸಲಾಗದು,” ಎಂದಿದ್ದಾರೆ.

ಇದನ್ನೂ ಓದಿ : ದೇವೇಗೌಡ-ಸಿದ್ದರಾಮಯ್ಯ ಕುಸ್ತಿ ಅಖಾಡದಲ್ಲಿ ರಾಹುಲ್ ಪಟ್ಟು ಹೇಗಿರಬಹುದು?

“ಬಿಜೆಪಿಯ ಕೋಮುವಾದ, ಹಿಂದುತ್ವದ ರಾಜಕಾರಣದಾಚೆಗೆ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ಅನಿವಾರ್ಯ,” ಎಂದು ೧೩ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಹೇಳಿದ್ದಾರೆ. ಇದು ನಿಜವಾದರೂ ಕಾಂಗ್ರೆಸ್‌-ಜೆಡಿಎಸ್‌ ಒಂದಾದರೆ ಜಾತ್ಯತೀತ ಮತಗಳು ವಿಭಜನೆಯಾಗುವುದು ತಪ್ಪುತ್ತದೆ. ಹೀಗಾದಲ್ಲಿ ಬಿಜೆಪಿಯನ್ನು ಮಣಿಸುವುದು ಸುಲಭವಾಗಲಿದೆ ಎಂಬುದು ಉಭಯ ನಾಯಕರ ನಂಬಿಕೆಯಾಗಿದೆ.

೨೦೦೫ರಲ್ಲಿ ಜೆಡಿಎಸ್‌ ತೊರೆದಿದ್ದ ಸಿದ್ದರಾಮಯ್ಯ ಅವರು ಆನಂತರ ದೇವೇಗೌಡರ ಜೊತೆಗೆ ಒಟ್ಟಾಗಿ ಕಾಣಿಸಿಕೊಂಡಿದ್ದು ವಿರಳ. ದಶಕಗಳ ಕಾಲ ಜನತಾ ಪರಿವಾರದಲ್ಲಿ ಒಗ್ಗೂಡಿ ಕೆಲಸ ಮಾಡಿದ್ದ ದೇವೇಗೌಡ ಮತ್ತು ಸಿದ್ದರಾಮಯ್ಯ ಅವರು ದೂರವಾದ ನಂತರ ಇದೇ ಮೊದಲ ಬಾರಿಗೆ ಒಟ್ಟಾಗಿ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾವೇರಿ ನದಿ ನೀರು ವಿವಾದ ತಾರಕಕ್ಕೇರಿತ್ತು, ಈ ಸಂದರ್ಭದಲ್ಲಿ ವೈಮನಸ್ಸು ಬದಿಗೊತ್ತಿ ದೇವೇಗೌಡರನ್ನು ಸಿದ್ದರಾಮಯ್ಯ ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು. ಆನಂತರ, ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು ದೇವೇಗೌಡ ಹಾಗೂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು. ದೇಶದಲ್ಲಿ ಮಹಾಮೈತ್ರಿಯ ಮಾತುಗಳು ಕೇಳಿಬಂದಷ್ಟೇ ವೇಗದಲ್ಲಿ ತೆರೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಜನತಾ ಪರಿವಾರದ ಹಳೆಯ ಸ್ನೇಹಿತರಿಬ್ಬರು ಮೈತ್ರಿಯ ತೇರನ್ನು ಒಟ್ಟಾಗು ಎಳೆಯಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More