ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!

ಮೂವರು ಮಾಜಿ ಮುಖ್ಯಮಂತ್ರಿಗಳ ‘ಬಳುವಳಿ’ಯ ಹೆಚ್ಚುಗಾರಿಕೆಯ ಸಮರವಾಗಿ ಸದ್ಯಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಹೊರಹೊಮ್ಮಿದೆ. ಯಡಿಯೂರಪ್ಪ, ಬಂಗಾರಪ್ಪ ಹಾಗೂ ಜೆ ಎಚ್ ಪಟೇಲರ ಕುಟುಂಬದ ಕುಡಿಗಳ ಈ ಕದನದ ಅಂತಿಮ ಹಣಾಹಣಿ ಇದೀಗ ರಂಗೇರಿದೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನಕ್ಕೆ ಇನ್ನು ಹದಿನೈದು ದಿನ ಬಾಕಿ. ಜೆ ಎಚ್ ಪಟೇಲ್, ಬದರಿ ನಾರಾಯಣ ಅಯ್ಯಂಗಾರ್, ಎಸ್ ಬಂಗಾರಪ್ಪ ಅವರಂತಹ ಮುತ್ಸದ್ಧಿ ನಾಯಕರು ಪ್ರತಿನಿಧಿಸಿದ್ದ ಮತ್ತು ಆ ಕಾರಣಕ್ಕೆ ರಾಷ್ಟ್ರ ರಾಜಕಾರಣದ ಗಮನ ಸೆಳೆದಿದ್ದ ಪರಂಪರೆಯನ್ನು ಹೊಂದಿರುವ ಕ್ಷೇತ್ರವು ಈ ಬಾರಿ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಅವರ ರಾಜಿನಾಮೆ ಕಾರಣದಿಂದಾಗಿ ಅಕಾಲಿಕ ಚುನಾವಣೆಗೆ ಅಣಿಯಾಗಿದೆ. ಒಂದು ರೀತಿಯಲ್ಲಿ ಯಾರಿಗೂ ಬೇಡದ ಈ ಚುನಾವಣೆ, ಸ್ವತಃ ಹುರಿಯಾಳುಗಳ ಪಾಲಿಗೂ, ಒಲ್ಲದ ಮದುವೆಯಂತಾಗಿದೆ.

ಇಂತಹ ಒಲ್ಲದ ಮದುವೆಯ ಗಂಡುಗಳಾಗಿ ಕಣದಲ್ಲಿರುವವರು ಮೂವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಎಂಬುದು ವಿಶೇಷ. ಬಿಜೆಪಿಯಿಂದ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಅವರು ಒಂದು ಅವಧಿಗೆ ತಂದೆಗೆ ಕ್ಷೇತ್ರ ಬಿಟ್ಟುಕೊಟ್ಟ ಬಳಿಕ ಈಗ ಸ್ವತಃ ಕಣಕ್ಕಿಳಿದಿದ್ದಾರೆ. ಅವರ ಎದುರಾಳಿಗಳಾಗಿ ಮೂರು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿ, ಅದೇ ರಾಘವೇಂದ್ರ ಎದುರು ಸೋಲು ಕಂಡಿದ್ದ ಎಸ್ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಹಾಗೂ ಐದು ದಶಕದ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿ ಸಂಸತ್ತಿನಲ್ಲಿ ಕನ್ನಡ ಭಾಷಣ ಮೊಳಗಿಸಿ ದಾಖಲೆ ಬರೆದಿದ್ದ ಜೆ ಎಚ್ ಪಟೇಲರ ಪುತ್ರ ಮಹಿಮಾ ಪಟೇಲ್ ಜೆಡಿಯು ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಮೂವರೂ ಅಭ್ಯರ್ಥಿಗಳ ರಾಜಕೀಯ ಹಿನ್ನೆಲೆ, ಕ್ಷೇತ್ರದಲ್ಲಿ ಆ ಮೂವರ ತಂದೆಯವರು ಹೊಂದಿದ್ದ ವರ್ಚಸ್ಸು ಮತ್ತು ಅಪಾರ ಜನಬೆಂಬಲದ ಹಿನ್ನೆಲೆಯಲ್ಲಿಯೂ ಈ ಬಾರಿಯ ಉಪ ಚುನಾವಣೆ ಮತ್ತೊಮ್ಮೆ ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಒಂದು ದಶಕದಿಂದ ಜಿಲ್ಲೆಯ ರಾಜಕಾರಣದಲ್ಲಿ ಏಕಸ್ವಾಮ್ಯ ಸ್ಥಾಪಿಸಿರುವ ಯಡಿಯೂರಪ್ಪ ಕುಟುಂಬಕ್ಕೆ ಇದೀಗ ಈ ಉಪಚುನಾವಣೆ ಮತ್ತೊಂದು ನಿರ್ಣಾಯಕ ಘಟ್ಟ. ಯಡಿಯೂರಪ್ಪ ವರ್ಚಸ್ಸು ಮತ್ತು ಭವಿಷ್ಯದ ಅವಕಾಶ (ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೇರುವ ಬಯಕೆ) ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷದ ಮಟ್ಟದಲ್ಲಿ ಅವರ ಸ್ಥಾನವನ್ನು ಕೂಡ ಈ ಚುನಾವಣೆಯೇ ನಿರ್ಧರಿಸುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು. ಹಾಗೆಯೇ, ರಾಘವೇಂದ್ರ ಅವರಿಗೆ ಮುಂದಿನ ಮಹಾಚುನಾವಣೆಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ತಾಲೀಮು ಕೂಡ ಈ ಉಪ ಚುನಾವಣೆಯೇ.

ಆದರೆ, ರಾಜ್ಯ ಬಿಜೆಪಿಯಲ್ಲಿನ ಯಡಿಯೂರಪ್ಪ ವಿರೋಧಿ ಬಣದ ಮೇನ್‌ ಸ್ವಿಚ್‌ ಕೂಡ ಶಿವಮೊಗ್ಗದಲ್ಲೇ ಇದೆ ಎಂಬುದು ಗುಟ್ಟೇನೂ ಅಲ್ಲ. ಹಾಗಾಗಿ ಆ ಬಣ, ಎಲ್ಲ ರೀತಿಯಲ್ಲೂ ಯಡಿಯೂರಪ್ಪ ಮತ್ತು ಅವರ ಕುಟುಂಬದ ರಾಜಕೀಯ ಬಲ ವೃದ್ಧಿಯ ಈ ಚುನಾವಣೆಯಲ್ಲಿ ಎಷ್ಟು ನಿಷ್ಠೆ ಪ್ರದರ್ಶಿಸಲಿದೆ ಎಂಬುದು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿದೆ ಎಂಬುದು ಸುಳ್ಳಲ್ಲ.

ಇನ್ನು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣದಲ್ಲಿರುವುದು ಹಲವು ಕಾರಣಗಳಿಂದಾಗಿ ಚುನಾವಣೆಯತ್ತ ಕುತೂಹಲದಿಂದ ನೋಡುವಂತೆ ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ ಸೋಲು ಕಂಡಿದ್ದ ಸೊರಬದ ಮಾಜಿ ಶಾಸಕ ಮಧು, ಈ ಬಾರಿ ಕೊನೇ ಗಳಿಗೆಯಲ್ಲಿ ಪಕ್ಷದ ಒತ್ತಾಸೆಯ ಮೇಲೆ ಲೋಕಸಭಾ ಕಣಕ್ಕಿಳಿದಿದ್ದಾರೆ. ಆ ಮೂಲಕ ದಶಕದ ಹಿಂದಿನ (೨೦೦೯) ತಮ್ಮ ತಂದೆಯ ಸೋಲಿನ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ಅವರಿಗೆ ಒದಗಿಬಂದಿದೆ. ಹಿರಿಯ ನಾಯಕ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಬೇಳೂರು ಗೋಪಾಲಕೃಷ್ಣ ಮುಂತಾದ ಕಾಂಗ್ರೆಸ್ ಧುರೀಣರು ಸೇರಿದಂತೆ ಜಿಲ್ಲೆಯ ಎರಡೂ ಪಕ್ಷಗಳ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಆ ಒಗ್ಗಟ್ಟು ಮತ್ತು ಕ್ಷೇತ್ರದ ಬಹುಸಂಖ್ಯಾತರಾಗಿರುವ ಮಧು ಅವರ ಸಮುದಾಯದ (ಈಡಿಗ) ಒಮ್ಮತ ಎಷ್ಟರಮಟ್ಟಿಗೆ ಗಟ್ಟಿಯಾಗಲಿದೆ ಎಂಬುದರ ಮೇಲೆ ಈ ಕದನ ಮುಯ್ಯಿಗೆ ಮುಯ್ಯಿ ಆಗಲಿದೆಯೇ ಅಥವಾ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.

ಮಹಿಮಾ ಅವರ ಸ್ಪರ್ಧೆ ಶಿವಮೊಗ್ಗ ರಾಜಕಾರಣದ ಬಗ್ಗೆ ಅವರಿಗಿರುವ ಆಸಕ್ತಿಯ ಮಟ್ಟಿಗೆ ಗಮನಾರ್ಹ. ಆದರೆ, ಪಕ್ಷದ ಸಂಘಟನೆಯ ಬಲದ ವಿಷಯದಲ್ಲಾಗಲೀ, ವೈಯಕ್ತಿಕವಾಗಿ ಕ್ಷೇತ್ರದ ಉದ್ದಗಲಕ್ಕೆ ಜನಸಂಪರ್ಕದ ವಿಷಯದಲ್ಲಾಗಲೀ ಮಹಿಮಾ ಅವರಿಗೆ ಹೆಚ್ಚಿನ ಭರವಸೆಯ ವಾತಾವರಣ ಕಾಣಲಾರದು. ಆದರೆ, ತಂದೆಯವರ ವರ್ಚಸ್ಸಿನ ಬಲ ಮಹಿಮಾ ಅವರನ್ನೂ ಒಬ್ಬ ಗಮನಾರ್ಹ ಸ್ಪರ್ಧಿಯನ್ನಾಗಿಸಿದೆ ಎಂಬುದು ದಿಟ. ಆ ಹಿನ್ನೆಲೆಯಲ್ಲಿಯೇ ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರ ನಡುವಿನ ಕದನವಾಗಿ ಈ ಕಣ ಬದಲಾಗಿದೆ ಮತ್ತು ಆ ಕಾರಣಕ್ಕೆ ಇನ್ನಷ್ಟು ಕುತೂಹಲ ಹುಟ್ಟಿಸಿದೆ.

ರಾಜಕೀಯವಾಗಿ ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳು ಮತ್ತು ನೆರೆಯ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೬.೫೦ ಲಕ್ಷ ಮತದಾರರು ಈ ಬಾರಿ ಮತ ಚಲಾಯಿಸಲಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಭದ್ರಾವತಿ ಹೊರತುಪಡಿಸಿ ಉಳಿದಂತೆ ಶಿವಮೊಗ್ಗ ನಗರ (ಕೆ ಎಸ್ ಈಶ್ವರಪ್ಪ), ಶಿವಮೊಗ್ಗ ಗ್ರಾಮಾಂತರ (ಅಶೋಕ ನಾಯ್ಕ), ಸಾಗರ (ಹರತಾಳು ಹಾಲಪ್ಪ), ತೀರ್ಥಹಳ್ಳಿ (ಆರಗ ಜ್ಞಾನೇಂದ್ರ), ಸೊರಬ (ಕುಮಾರ್ ಬಂಗಾರಪ್ಪ), ಶಿಕಾರಿಪುರ (ಬಿ ಎಸ್ ಯಡಿಯೂರಪ್ಪ), ಬೈಂದೂರು (ಬಿ ಎಂ ಸುಕುಮಾರ ಶೆಟ್ಟಿ) ವಿಧಾನಸಭಾ ಕ್ಷೇತ್ರಗಳು ಬಿಜೆಪಿ ವಶದಲ್ಲಿವೆ. ಏಕೈಕ ಭದ್ರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ (ಬಿ ಕೆ ಸಂಗಮೇಶ್) ಅಧಿಕಾರದಲ್ಲಿದೆ. ಆ ದೃಷ್ಟಿಯಿಂದ ಬಿಜೆಪಿ ಕ್ಷೇತ್ರದಾದ್ಯಂತ ಹೆಚ್ಚು ಬಲ ಹೊಂದಿದೆ.

ಆದರೆ, ಕ್ಷೇತ್ರದಲ್ಲಿ ಜಾತಿ ಮತ್ತು ಜನಾಂಗವಾರು ಪ್ರಾಬಲ್ಯದಲ್ಲಿ ಮುಸ್ಲಿಮರು ಮತ್ತು ಈಡಿಗ ಸಮುದಾಯ ಮುಂಚೂಣಿಯಲ್ಲಿವೆ. ಆ ನಂತರದ ಸ್ಥಾನ ಲಿಂಗಾಯತರದ್ದು. ಹಾಗಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್‌ ಮತಬ್ಯಾಂಕ್ ಪ್ರಬಲವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಮತ್ತು ಯಡಿಯೂರಪ್ಪ ಅವರ ಅಭಿವೃದ್ಧಿ ಹರಿಕಾರ ಎಂಬ ವರ್ಚಸ್ಸು ಅವರಿಗೆ ಸುಮಾರು ೩.೬೦ ಲಕ್ಷ ಮತಗಳ ಅಂತರದ ಭಾರಿ ಜಯ ತಂದುಕೊಟ್ಟಿತ್ತು. ಕಾಂಗ್ರೆಸ್ಸಿನಿಂದ ಮಂಜುನಾಥ ಭಂಡಾರಿ ಹಾಗೂ ಜೆಡಿಎಸ್‌ನಿಂದ ಗೀತಾ ಶಿವ ರಾಜಕುಮಾರ್ ಕಣಕ್ಕಿಳಿದಿದ್ದ ಆ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪ ಶೇ.೫೩.೬೩ ಮತ ಪಡೆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಕ್ರಮವಾಗಿ ಶೇ.೨೧.೪೯ ಹಾಗೂ ೨೧.೨೯ ಮತಗಳನ್ನು ಪಡೆದಿದ್ದರು.

ಆದರೆ, ಈ ಬಾರಿಯ ಕ್ಷೇತ್ರದ ಜ್ವಲಂತ ವಿಷಯಗಳು ಮತ್ತು ರಾಜಕೀಯ ಒಳಸುಳಿಗಳು ಹೊಸ ಗಾಳಿ ಬೀಸುವಂತೆ ಮಾಡಿದರೂ ಅಚ್ಚರಿ ಇಲ್ಲ. ಪ್ರಮುಖವಾಗಿ, ಬಿಜೆಪಿಯ ಆಂತರಿಕ ಬೇಗುದಿ ಮತ್ತು ಮುಖ್ಯವಾಗಿ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿಷಯದಲ್ಲಿ ಅಸಮಾಧಾನಗೊಂಡಿರುವ ಸಂಘಪರಿವಾರದ ನಡೆ ಅಂತಹ ಒಳಸುಳಿಯ ಪ್ರಮುಖ ಸೂಚನೆ.

ಹಾಗೇ, ಕ್ಷೇತ್ರದ ಬಹುಸಂಖ್ಯಾತ ಈಡಿಗ ಸಮುದಾಯದ ಬಗರ್‌ಹುಕುಂ ಸಾಗುವಳಿ ಸಕ್ರಮದ ವಿಷಯದಲ್ಲಿ ಹಿಂದಿನ ಸರ್ಕಾರದ ನಿರ್ಧಾರದ ವಿರುದ್ಧ ಹಾಲಿ ಬಿಜೆಪಿ ಶಾಸಕರು ತಿರುಗಿಬಿದ್ದಿದ್ದು, ಹಲವು ಹಕ್ಕುಪತ್ರಗಳನ್ನು ರದ್ದುಪಡಿಸಲಾಗಿದೆ. ಜೊತೆಗೆ ಜಿಲ್ಲೆಯ ಈಡಿಗ ಸೇರಿದಂತೆ ದುರ್ಬಲ ಸಮುದಾಯಗಳ ಜೀವನಾಶ್ರಯವಾಗಿದ್ದ ಸುಮಾರು ೨ ಲಕ್ಷ ಎಕರೆ ಕಂದಾಯ ಭೂಮಿಯನ್ನು ಏಕಾಏಕಿಯಾಗಿ ಅರಣ್ಯಭೂಮಿಯನ್ನಾಗಿ ದಾಖಲೆ ತಿದ್ದುಪಡಿ ಮಾಡಿದ ಇಂಡೀಕರಣ ಹಾಗೂ ಸರ್ಕಾರಿ ಭೂಮಿ ಒತ್ತುವರಿ ವಿರುದ್ಧದ ಅಮಾನುಷ ಕಾಯ್ದೆ ೧೯೨ ಎ ಜಾರಿಗೆ ಬಂದದ್ದು ಕೂಡ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಅವಧಿಯಲ್ಲೇ ಎಂಬ ವಿಷಯಗಳು ಈ ಬಾರಿ ಮತ್ತೆ ಚರ್ಚೆಗೆ ಬಂದಿವೆ.

ಇದನ್ನೂ ಓದಿ : ಉಪ ಚುನಾವಣೆಯಲ್ಲಿ ತಂತ್ರ-ಪ್ರತಿತಂತ್ರ, ಹಣ-ಉನ್ಮಾದದಲ್ಲಿ ಗೆಲ್ಲುವವರಾರು?

ಜೊತೆಗೆ, ಶರಾವತಿ ಹಿನ್ನೀರಿನ ತುಮರಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣವನ್ನು ಕೇವಲ ಚುನಾವಣೆ ಗಿಮಿಕ್ ಮಾಡಲಾಗಿದೆಯೇ ವಿನಾ ಕಾಮಗಾರಿಗೆ ಈವರೆಗೆ ಅನುಮೋದನೆಯೇ ಸಿಕ್ಕಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಆ ಭಾಗದಲ್ಲಿ ಈ ವಿಷಯ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಭದ್ರಾವತಿಯ ಎಂಪಿಎಂ ಮತ್ತು ವಿಐಎಸ್ಎಲ್ ಕಂಪನಿಗಳ ಪುನರುಜ್ಜೀವನದ ವಿಷಯದಲ್ಲಿ ಸಂಸದರಾಗಿ ಯಡಿಯೂರಪ್ಪ ಗಂಭೀರ ಪ್ರಯತ್ನ ಮಾಡಿಲ್ಲ ಎಂಬ ಅಸಮಾಧಾನ ಕಾರ್ಮಿಕ ವರ್ಗದಲ್ಲಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಅಡಿಕೆ ಮತ್ತು ಮೆಕ್ಕೆಜೋಳ ಬೆಲೆ ಕುಸಿತದ ಸಂದರ್ಭದಲ್ಲಿ ಕೂಡ ಒಬ್ಬ ಸಂಸದರಾಗಿ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರೈತರ ಸಂಕಷ್ಟ ದೂರ ಮಾಡುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಲಿಲ್ಲ ಎಂಬ ಅಸಮಾಧಾನ ಕೂಡ ದೊಡ್ಡ ಮಟ್ಟದಲ್ಲಿದೆ.

ಇಂತಹ ಅಸಮಾಧಾನಗಳು ಮತ್ತು ಹತಾಶೆಗಳ ನಡುವೆ ಇದೀಗ ಯಡಿಯೂರಪ್ಪ ಮತ್ತೊಮ್ಮೆ ತಮ್ಮ ಪುತ್ರ ರಾಘವೇಂದ್ರ ಅವರನ್ನು ಲೋಕಸಭಾ ಚುನಾವಣಾ ಕಣಕ್ಕಿಳಿಸಿದ್ದಾರೆ. ಈ ನಡುವೆ, “ಬಂಗಾರಪ್ಪ ಜಿಲ್ಲೆಯ ಎಲ್ಲ ಜಾತಿ-ಜನಾಂಗದ ಬಡವರು ಮತ್ತು ರೈತಾಪಿ ಜನರಿಗೆ ಅಧಿಕಾರದಲ್ಲಿದ್ದಾಗ ನೀಡಿದ ನೆರವು, ಸೌಲಭ್ಯಗಳ ಋಣ ತೀರಿಸುವ ಅವಕಾಶ ಇದು,” ಎಂಬ ಘೋಷಣೆಯೊಂದಿಗೇ ಮಧು ಬಂಗಾರಪ್ಪ ಅವರು ರಾಘವೇಂದ್ರ ವಿರುದ್ಧ ತೊಡೆ ತಟ್ಟಿದ್ದಾರೆ. ಮಹಿಮಾ ಪಟೇಲ್ ಕೂಡ ತಮ್ಮ ಸ್ವಂತ ವರ್ಚಸ್ಸಿಗಿಂತ ತಂದೆ ಜೆ ಎಚ್ ಪಟೇಲರ ವರ್ಚಸ್ಸನ್ನೇ ನೆಚ್ಚಿ ಕಣಕ್ಕಿಳಿದಿದ್ದಾರೆ. ಹಾಗಾಗಿ, ಸದ್ಯಕ್ಕಿದು, ರಾಜ್ಯ ರಾಜಕಾರಣದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಮೂವರು ಮಾಜಿ ಮುಖ್ಯಮಂತ್ರಿಗಳ ಬಳುವಳಿಯ ಹೆಚ್ಚುಗಾರಿಕೆಯ ಸಮರ. ಮತದಾರ ಆ ಬಳುವಳಿಯನ್ನೇ ಅಳೆದು ತೂಗಿ ಮತಯಂತ್ರದ ಗುಂಡಿ ಒತ್ತುತ್ತಾನೆಯೇ ಅಥವಾ ಇನ್ನಿತರ ‘ಬಲ’ಗಳಿಗೆ ಒಲಿಯುವನೇ ಎಂಬುದನ್ನು ಕಾದುನೋಡಬೇಕಿದೆ!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More