ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?

ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಅವರ ಬಾದಾಮಿ ಸ್ಪರ್ಧೆಯು ಭಾರಿ ಚರ್ಚೆಗೆ ಒಳಗಾಗಿತ್ತು. ಇದೀಗ, ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಬೇರೆಯಾದರೂ ಶ್ರೀರಾಮುಲು-ಸಿದ್ದರಾಮಯ್ಯ ವಾಕ್ಸಮರ ಚುನಾವಣಾ ಕೇಂದ್ರಕ್ಕೆ ಬಂದಿದೆ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿ ಎಸ್‌ ಉಗ್ರಪ್ಪ ಪರವಾಗಿ ಮತಯಾಚನೆ ಆರಂಭಿಸುವುದರೊಂದಿಗೆ ಬಿಸಿಲನಾಡಿನ ರಣಕಣ ರಂಗೇರಿದೆ. ನಿರೀಕ್ಷೆಯಂತೆ ಉಗ್ರಪ್ಪ ಅವರ ಸಂಸದೀಯ ವ್ಯವಸ್ಥೆಯ ಅನುಭವವನ್ನು ಪ್ರಸ್ತಾಪಿಸಿ, ಬಿಜೆಪಿಯ ಅಭ್ಯರ್ಥಿ ಜೆ ಶಾಂತಾ ಮತ್ತು ಅವರ ಸಹೋದರರ ಬಿ ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಉಭಯ ನಾಯಕರ ವಾಕ್ಸಮರವು ಟ್ವಿಟರ್‌ನಲ್ಲೂ ಭಾರಿ ಸದ್ದು ಮಾಡಿದೆ. ಬಳ್ಳಾರಿ ರಾಜಕಾರಣದಲ್ಲಿ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಬಳಗದ ಸಾಧನೆಯ ಚಿಂತನ-ಮಂಥನವೂ ಆರಂಭವಾಗಿದೆ.

ಮೊಳಕಾಲ್ಮೂರು ಶಾಸಕರಾದ ಶ್ರೀರಾಮುಲು ಅವರ ಸಂಸದೀಯ ಹಿನ್ನೆಲೆ, ಬೌದ್ಧಿಕ ಮಟ್ಟವನ್ನು ಪ್ರಸ್ತಾಪಿಸಿ ಕಟುವಾಗಿ ದಾಳಿ ನಡೆಸಿರುವ ಸಿದ್ದರಾಮಯ್ಯ, ಶ್ರೀರಾಮುಲು ಅವರ ಕ್ರಿಮಿನಲ್‌ ಹಿನ್ನೆಲೆಯನ್ನು ಕೆದಕುವ ಮೂಲಕ ಪ್ರಚಾರದ ಕಾವು ಹೆಚ್ಚಿಸಿದ್ದಾರೆ. “ಶ್ರೀರಾಮುಲುಗೆ ೩೭೧ಜೆ ಎಂದರೆ ಏನು ಎಂಬುದೇ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ೩೨೬, ೩೦೭, ೩೨೩ ಮತ್ತು ೪೨೦ ಮಾತ್ರ. ಹಿಂದೆ ಯಡಿಯೂರಪ್ಪನವರ ಜೊತೆ ಸೇರಿ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಇಂಥವರನ್ನು ಅಧಿಕಾರದಿಂದ ದೂರವಿಡಿ,” ಎಂದು ಜನರಲ್ಲಿ ಮನವಿ ಮಾಡುವ ಮೂಲಕ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿ ಸೇರಿದಂತೆ ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳ ಸುಧಾರಣೆಗಾಗಿ ಸಂವಿಧಾನದಡಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ೩೭೧ ಜೆ ಜಾರಿಗೊಳಿಸಲಾಗಿದೆ. ಇದರ ಬಗ್ಗೆ ಶ್ರೀರಾಮುಲುಗೆ ಮಾಹಿತಿಯಿಲ್ಲ. ಆದರೆ, ಬಿಜೆಪಿ ಉಪಾಧ್ಯಕ್ಷ ಶ್ರೀರಾಮುಲುಗೆ ಭಾರತೀಯ ದಂಡಸಂಹಿತೆಯಲ್ಲಿ ಬರುವ ವಿವಿಧ ಸೆಕ್ಷನ್‌ಗಳು ಮಾತ್ರ ಗೊತ್ತಿದೆ ಎನ್ನುವ ಮೂಲಕ ಶ್ರೀರಾಮುಲು ಅವರನ್ನು ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.

೨೦೦೮-೨೦೧೩ರ ಬಿಜೆಪಿಯ ಅಧಿಕಾರಾವಧಿಯಲ್ಲಿ ಬಳ್ಳಾರಿಯಲ್ಲಾದ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿರುವ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರನ್ನು ಅಖಾಡಕ್ಕೆ ಎಳೆದು ತಂದಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರ ಜೋಡಿಯು ಬಳ್ಳಾರಿ ಹಾಗೂ ಸುತ್ತಲಿನ ರಾಜಕೀಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ಹದಗೆಡಿಸಿತ್ತು. ಅಕ್ರಮ ಗಣಿಗಾರಿಕೆ ಕುರಿತಾಗಿ ಅಂದಿನ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ನೀಡಿದ ವರದಿಯಲ್ಲಿ 'ಬಳ್ಳಾರಿ ರಿಪಬ್ಲಿಕ್‌' ಎಂದು ಉಲ್ಲೇಖಿಸಿದ್ದನ್ನು ನೆನೆಯಬಹುದಾಗಿದೆ.

ಇನ್ನು, ಬಳ್ಳಾರಿ ರಾಜಕೀಯ ಅಖಾಡದಲ್ಲಿ ಉಗ್ರಪ್ಪ ಮತ್ತು ಶಾಂತಾ ಅವರ ಮೂಲಸ್ಥಾನಗಳ ವಿಚಾರವನ್ನೂ ಪ್ರಸ್ತಾಪಿಸಿರುವ ಸಿದ್ದರಾಮಯ್ಯ, “ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ ನನ್ನ ವಿರುದ್ಧ ಶ್ರೀರಾಮುಲು ಸ್ಪರ್ಧಿಸಿದ್ದರು. ಆಗ ಅಲ್ಲಿಯೇ ಜನಿಸಿದವರಾಗಿದ್ದರೇ?” ಎನ್ನುವ ಮೂಲಕ ಬಿಜೆಪಿಗೆ ತಿರುಗುಬಾಣ ಬಿಟ್ಟಿದ್ದಾರೆ. ಲೋಕಸಭೆಯಲ್ಲಿ ಸಂಸದರಾಗಿ ಶ್ರೀರಾಮುಲು ಅವರ ಸಾಧನೆಗಳು ಶೂನ್ಯ ಎಂದಿರುವ ಸಿದ್ದರಾಮಯ್ಯ, ಶ್ರೀರಾಮುಲು ಅವರ ಕನ್ನಡ ಜ್ಞಾನದ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, “ವಿಧಾನಸಭೆ ಹಾಗು ಲೋಕಸಭೆಯಲ್ಲಿ ನಾನು ಮಾತನಾಡುವಾಗ ನೀವು ನಿದ್ದೆಯಲ್ಲಿದ್ದಿರಿ ಅನಿಸುತ್ತಿದೆ. ಸಂಸದರ ನಿಧಿಯ ಸಮರ್ಪಕ ಬಳಕೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದೇನೆ. 16ನೇ ಲೋಕಸಭೆಯ 20 ಚರ್ಚೆಯಲ್ಲಿ ಭಾಗವಹಿಸಿ, 572 ಪ್ರಶ್ನೆ ಕೇಳಿದ್ದೇನೆ. ನಿಮ್ಮ ರಾಹುಲ್ ಗಾಂಧಿ ಕೇವಲ 12 ಚರ್ಚೆಯಲ್ಲಿ ಭಾಗವಹಿಸಿದ್ದು, ಒಂದು ಪ್ರಶ್ನೆಯನ್ನೂ ಕೇಳಿಲ್ಲ,” ಎನ್ನುವ ಮೂಲಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಹಾಗೆ ನೋಡಿದರೆ, ಸಿದ್ದರಾಮಯ್ಯನವರು ರಾಜಕೀಯ ಬದುಕಿನಲ್ಲಿ ಔನ್ನತ್ಯ ಸಾಧಿಸಿದ್ದು ಬಳ್ಳಾರಿ ಹೋರಾಟದ ಬಳಿಕವೇ ಎಂಬುದು ಗಮನಾರ್ಹ. ರೆಡ್ಡಿ ಸಹೋದರರ ಹಿಡಿತದಲ್ಲಿದ್ದ ಬಳ್ಳಾರಿಯ ರಾಜಕೀಯ ಮತ್ತು ಆಡಳಿತದ ಚಿತ್ರಣವನ್ನು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ವರದಿಯಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದರು. ಜಿಲ್ಲೆಯನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ರೆಡ್ಡಿ ಸಹೋದರರು ಜಿಲ್ಲೆಯಲ್ಲಿ ನಡೆಸಿದ ದಾಂಧಲೆ ಹಾಗೂ ಜನತಂತ್ರ ವ್ಯವಸ್ಥೆಯನ್ನು ಕಾಲಕಸವಾಗಿದ್ದನ್ನು ಸಂತೋಷ ಹೆಗ್ಡೆ ಅವರು ತಮ್ಮ ವರದಿಯಲ್ಲಿ ಸಾಕ್ಷ್ಯ ಸಮೇತ ರಾಜ್ಯದ ಮುಂದಿಟ್ಟಿದ್ದರು. ಯಡಿಯೂರಪ್ಪ ಅವರು ಅಕ್ರಮವಾಗಿ ಗಣಿಗಾರಿಕೆ ಮುಂದುವರಿಸಲು ಲಂಚ ಪಡೆದ ಆರೋಪದಲ್ಲಿ ಅಂತಿಮವಾಗಿ ಜೈಲು ಪಾಲಾಗಬೇಕಾಯಿತು. ಆನಂತರದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣದ ತನಿಖೆ ಕೈಗೆತ್ತುಕೊಂಡು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿ ಜೈಲಿಗಟ್ಟುವುದರೊಂದಿಗೆ ಬಳ್ಳಾರಿಯು ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿತ್ತು. ಇದರಿಂದ ಕೇಂದ್ರ ಬಿಜೆಪಿ ನಾಯಕರು ಭಾರಿ ಇರುಸುಮುರುಸಿಗೆ ಸಿಲುಕಿದ್ದರು. ಇದೇ ಕಾರಣಕ್ಕಾಗಿ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಯು ಪಕ್ಷದಿಂದ ಉಚ್ಛಾಟಿಸಿದೆ.

ಇದನ್ನೂ ಓದಿ : ಬಳ್ಳಾರಿ ಕಾಂಗ್ರೆಸ್‌ ಕಣಕ್ಕೆ ಉಗ್ರಪ್ಪ ಆಗಮನದ ಹಿಂದಿನ ಲೆಕ್ಕಾಚಾರಗಳೇನು?

ಬಳ್ಳಾರಿ ಇತಿಹಾಸದಲ್ಲಿ ಕರಾಳ ಅಧ್ಯಾಯಗಳನ್ನು ಹೊಂದಿರುವ ರೆಡ್ಡಿ ಸಹೋದರರು ಮತ್ತು ಅವರ ಆಪ್ತ ಶ್ರೀರಾಮುಲು ಅವರ ಬಗ್ಗೆ ಈಗ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಈಗ ಸಿದ್ದರಾಮಯ್ಯ ನೇರವಾಗಿ ಬಿಜೆಪಿ ನಾಯಕರ ವಿರುದ್ಧ ದಾಳಿ ನಡೆಸುವ ಮೂಲಕ ಅಖಾಡದ ರಂಗೇರಿಸಿದ್ದಾರೆ. ಇದೆಲ್ಲದರ ಮಧ್ಯೆ, ಬಳ್ಳಾರಿಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ತೊಡೆತಟ್ಟಿತ್ತು. ಅಧಿಕಾರಕ್ಕೆ ಬಂದರೆ ರೆಡ್ಡಿ ಸಹೋದರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಪ್ರತಿಪಾದಿಸುತ್ತಲೇ ಬಂದಿದ್ದ ಸಿದ್ದರಾಮಯ್ಯ, ಮುಖ್ಯಮಂತ್ರಿ ಆಗುತ್ತಿದ್ದಂತೆ ಮಾತು ಮರೆತಿದ್ದರು. ಈ ಬಗ್ಗೆ ಹಲವು ಬಾರಿ ನ್ಯಾ.ಸಂತೋಷ ಹೆಗ್ಡೆ ಅವರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದೂ ಇದೆ.

ಇನ್ನು, ಉಪಚುನಾವಣೆಯ ಆರಂಭದಲ್ಲಿ ಬಳ್ಳಾರಿ ಉಸ್ತುವಾರಿ ಸಚಿವ ಡಿ ಕೆ ಶಿವಕುಮಾರ್‌ ವಿರುದ್ಧ ಶ್ರೀರಾಮುಲು ವಾಗ್ದಾಳಿ ನಡೆಸಿದ್ದರು. ಚುನಾವಣೆಯು ಶಿವಕುಮಾರ್‌ ಮತ್ತು ಶ್ರೀರಾಮುಲು ನಡುವಿನ ಹೋರಾಟ ಎಂಬಂತೆ ಬಿಂಬಿಸಲಾಗಿತ್ತು. ಆದರೆ, ಸಿದ್ದರಾಮಯ್ಯ ಅವರ ಸೋಮವಾರದ ಪ್ರಚಾರ ಭಾಷಣದಲ್ಲಿನ ಶ್ರೀರಾಮುಲು ಹಾಗೂ ಬಿಜೆಪಿಯ ವಿರುದ್ಧದ ವಾಗ್ದಾಳಿಯು ಕದನಕಣದ ದಿಕ್ಕು-ದಿಸೆಯನ್ನೇ ಬದಲಿಸುವ ಸಾಧ್ಯತೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಮತ್ತು ಬಾದಾಮಿ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಮುಖಭಂಗ ಉಂಟುಮಾಡಲು ನಿರ್ಧರಿಸಿದ ಬಿಜೆಪಿ, ಮೊಳಕಾಲ್ಮೂರು ಕ್ಷೇತ್ರದೊಂದಿಗೆ ಬಾದಾಮಿಯಲ್ಲೂ ಶ್ರೀರಾಮುಲು ಅವರನ್ನು ಕಣಕ್ಕಳಿಸಿ ಹೋರಾಟಕ್ಕೆ ರಂಗು ತಂಬಿತ್ತು. ಈಗ ಉಭಯ ನಾಯಕರ ಕಾದಾಟವು ಬಳ್ಳಾರಿಗೂ ವಿಸ್ತರಿಸಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More