ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ

ಉಪಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳ ಪರವಾಗಿ ಉಭಯ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಕೂಡ ಅಷ್ಟೇ ಸಮರ್ಥವಾಗಿ ತಿರುಗೇಟು ನೀಡುವ ಯತ್ನ ನಡೆಸಿದೆ. ಈ ನಡುವೆ, ದೇವೇಗೌಡರ ಕೆಲವು ಮಾತುಗಳು ಚರ್ಚೆ ಹುಟ್ಟುಹಾಕಿವೆ

ಉಪಚುನಾವಣೆಯ ಕಣವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ವಿವಿಧ ಪಕ್ಷಗಳ ನಾಯಕರ ತರಹೇವಾರಿ ಹಾಗೂ ವೀರಾವೇಶದ ಹೇಳಿಕೆಗಳು ರಂಜನೆಯ ಸರಕಾಗಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿವೆ. ಜನರೂ ರಾಜಕಾರಣಿಗಳ ಮಾತುಗಳನ್ನು ರಂಜನೆ, ಮನರಂಜನೆಗಷ್ಟೆ ಸೀಮಿತಗೊಳಿಸಿಕೊಂಡಿದ್ದಾರೆ. ಆದರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಧು ಬಂಗಾರಪ್ಪ ಅವರ ಪರವಾಗಿ ಮತಯಾಚನೆ ಆರಂಭಿಸಿರುವ ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡರು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುತ್ತ ಆಡಿರುವ ಕೆಲವು ಮಾತುಗಳು ಚರ್ಚೆಗೆ ನಾಂದಿ ಹಾಡಿದೆ. “ಕರ್ನಾಟಕದ ಮೂಲಕ ದಕ್ಷಿಣ ಭಾರತದ ಬಾಗಿಲು ತೆರೆದಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಈ ಬಾಗಿಲನ್ನು ಮುಚ್ಚಲು ಶಿವಮೊಗ್ಗದ ಜನರು ಕಟಿಬದ್ಧರಾಗಬೇಕು,” ಎಂಬರ್ಥದ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ ಪರ-ವಿರೋಧ ವ್ಯಕ್ತವಾಗಿದೆ. .

ಕಳೆದ ಮೇನಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯ ಬಳಿಕ ಕಾಂಗ್ರೆಸ್-ಜೆಡಿಎಸ್‌ ಜೊತೆಗೂಡಿ ಬಿಜೆಪಿಯನ್ನು ಹೊರಗಿಟ್ಟು ಸರ್ಕಾರ ರಚಿಸಿವೆ. ಆನಂತರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸಿ ಮೇಲುಗೈ ಸಾಧಿಸಿವೆ. ಬಿಬಿಎಂಪಿ ಅಧಿಕಾರ ಹಿಡಿಯುವಲ್ಲಿಯೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಮೈತ್ರಿಕೂಟ ಯಶಸ್ವಿಯಾಗಿದೆ. ಈಗ ರಾಜ್ಯ ಕಾಂಗ್ರೆಸ್‌ ವರಿಷ್ಠ ನಾಯಕ ಹಾಗೂ ಒಂದು ಕಾಲದ ಆಪ್ತ ಸಿದ್ದರಾಮಯ್ಯನವರು ದೇವೇಗೌಡರ ಬೆನ್ನಿಗೆ ನಿಂತಿರುವುದು ಮಾಜಿ ಪ್ರಧಾನಿಯ ಉಮೇದು ಹೆಚ್ಚಿಸಿರುವಂತಿದೆ. ಸಿದ್ದರಾಮಯ್ಯನವರೊಂದಿಗಿನ ಮರುಸಖ್ಯದಿಂದ ಬಲ ಪಡೆದಂತೆ ಭಾಸವಾಗುತ್ತಿರುವ ದೇವೇಗೌಡರು, ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿಗೆ ತೆರೆದಿರುವ ಅವಕಾಶದ ಬಾಗಿಲನ್ನು ಮುಚ್ಚುವ ಮಾತುಗಳನ್ನು ಆಡುತ್ತಿದ್ದಾರೆ. ಸೈದ್ಧಾಂತಿಕ ವ್ಯತ್ಯಾಸಗಳ ಹೊರತಾಗಿಯೂ ಹಲವು ವಿಚಾರಗಳಲ್ಲಿ ಸಾಮ್ಯತೆ ಹೊಂದಿರುವ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಮತಗಳು ವಿಭಜನೆಗೊಂಡು ಬಿಜೆಪಿಗೆ ಲಾಭವಾಗುತ್ತಿತ್ತು. ಈಗ ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿರುವುದರಿಂದ ಬಿಜೆಪಿಗೆ ನಷ್ಟ ಎನ್ನುವುದು ದೇವೇಗೌಡರ ಮಾತಿನ ತಿರುಳು.

ದೇವೇಗೌಡರು ಹೇಳಿರುವಂತೆ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಬಾಗಿಲು ಬಂದ್ ಮಾಡಿಸುತ್ತೇವೆನ್ನುವುದು ಸುಲಭ ಸಾಧ್ಯವಲ್ಲ ಎನ್ನುವುದು ಆರು ದಶಕಕ್ಕೂ ಹೆಚ್ಚು ವರ್ಷಗಳ ರಾಜಕೀಯ ಅನುಭವಿಯಾದ ಮಾಜಿ ಪ್ರಧಾನಿಯವರಿಗೆ ತಿಳಿಯದ ವಿಚಾರವೇನಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ದೇವೇಗೌಡರ ಆವೇಶಭರಿತ ಹೇಳಿಕೆಗಳನ್ನು ಚುನಾವಣಾ ದೃಷ್ಟಿಯಿಂದ ನೋಡಬೇಕೇ ವಿನಾ ವಿಶ್ಲೇಷಣೆ ನಡೆಸುವ ಅಗತ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಬಿಜೆಪಿಯು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿಯಲು ಕಾರಣವಾದ ಅಂಶಗಳತ್ತ ಕಣ್ಣೊರಳಿಸಿದರೆ ದೇವೇಗೌಡರ ದ್ವಂದ್ವಗಳು ಅರ್ಥವಾಗುತ್ತವೆ. ಈ ಉರುಳು ದೇವೇಗೌಡರ ಕುಟುಂಬದ ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ.

ಇದನ್ನೂ ಓದಿ : ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?

೨೦೦೪ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚಿಸಿದ್ದವು. ಕಾಂಗ್ರೆಸ್‌ ಎನ್ ಧರ್ಮಸಿಂಗ್‌ ಮುಖ್ಯಮಂತ್ರಿ, ಜೆಡಿಎಸ್‌ನ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು. ಆದರೆ, ಜೆಡಿಎಸ್ ಒಳಗೆ ನಡೆದ ಆಂತರಿಕ ಕಲಹ ಹಾಗೂ ಕುಮಾರಸ್ವಾಮಿ ನೇತೃತ್ವದ ಬಣ ಸಿದ್ದರಾಮಯ್ಯ ಬಣದ ಮೇಲೆ ಮೇಲುಗೈ ಸಾಧಿಸಿದ ಪರಿಣಾಮ ಸಿದ್ದರಾಮಯ್ಯ ರಾಜಿನಾಮೆ ನೀಡಿ, ಜೆಡಿಎಸ್‌ ತೊರೆಯುವಂತಾಯಿತು. ಅಂತಿಮವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಉದ್ಭವಿಸಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನವಾಯಿತು. ಈ ಸಂದರ್ಭದಲ್ಲಿ ಬಿಜೆಪಿಯ ಜೊತೆ ಸೇರಿ ಜೆಡಿಎಸ್ ಅಧಿಕಾರ ಹಿಡಿಯಿತು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯೂ ಆದರು. ಮೈತ್ರಿಯ ಸೂತ್ರದಂತೆ ಜೆಡಿಎಸ್‌ ಹಾಗೂ ಬಿಜೆಪಿಯು ತಲಾ ೨೦ ತಿಂಗಳು ಮುಖ್ಯಮಂತ್ರಿಯಾಗುವ ಒಪ್ಪಂದವಾಗಿತ್ತು. ತಮ್ಮ ಅವಧಿ ಮುಗಿಯುತ್ತಿದ್ದಂತೆ ಕುಮಾರಸ್ವಾಮಿ ಅವರು ಬಿಜೆಪಿಯ ಬಿ ಎಸ್‌ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಲಿಲ್ಲ. ಇದರಿಂದ ಸರ್ಕಾರ ಉರುಳಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿತ್ತು. ವಚನಭ್ರಷ್ಟತೆ ವಿಚಾರವನ್ನು ಚುನಾವಣಾ ಅಸ್ತ್ರವನ್ನಾಗಿ ಪ್ರಯೋಗಿಸಿದ ಬಿಜೆಪಿಯು ೧೧೦ ಸ್ಥಾನಗಳನ್ನು ಗೆದ್ದು, ಪಕ್ಷೇತರರ ನೆರವಿನಿಂದ ಅಧಿಕಾರ ಹಿಡಿಯುವ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸುವ ಮೂಲಕ ಇತಿಹಾಸ ಸೃಷ್ಟಿಸಿತು.

ಈ ಎಲ್ಲ ಬೆಳವಣಿಗೆಗಳಿಗೂ ದೇವೇಗೌಡರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಕ್ಷಿ ಹಾಗೂ ಕಾರಣೀಭೂತರಾಗಿದ್ದಾರೆ. ಕೋಮುವಾದಿ ಪಕ್ಷದವಾದ ಬಿಜೆಪಿ ಜೊತೆಗೆ ಮೈತ್ರಿ ನಡೆಸುವ ವಿಚಾರ ತಮಗೆ ಸುತಾರಾಂ ಇಷ್ಟವಿರಲಿಲ್ಲ ಎಂದು ದೇವೇಗೌಡರು ಹಲವು ಬಾರಿ ಹೇಳಿದ್ದಾರೆ. ಆದರೆ, ಜೆಡಿಎಸ್‌-ಬಿಜೆಪಿ ಮೈತ್ರಿಗೂ ಮುನ್ನ ಕಾಂಗ್ರೆಸ್‌ನೊಂದಿಗಿನ ಸಖ್ಯ ಕಡಿದುಕೊಳ್ಳಲು ದೇವೇಗೌಡರು ಉರುಳಿಸಿದ ದಾಳಗಳು ರಾಜ್ಯ ರಾಜಕೀಯದ ದಿಕ್ಕು ದಿಸೆ ಬದಲಾಗಲು ಕಾರಣವಾದವು ಎಂಬುದನ್ನು ಸುಲಭವಾಗಿ ತಳ್ಳಿಹಾಕಲಾಗದು. ಈಗ, ಅದೇ ದೇವೇಗೌಡರು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಮಾತುಗಳನ್ನು ಆಡುತ್ತಿದ್ದಾರೆ, ಇತಿಹಾಸದೆಡೆಗೆ ವ್ಯಂಗ್ಯದ ನಗೆ ಬೀರಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?
Editor’s Pick More